ವೇದ ಬ್ರಹ್ಮ ಡಾ.ಆರ್.ಎಲ್‌.ಕಶ್ಯಪ್

vedas

ನಮಗೆಲ್ಲರಿಗೂ ತಿಳಿದಿರುವಂತೆ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದಗಳಿದ್ದು ಇವುಗಳು ಅಪೌರುಷೀಯವಾಗಿದ್ದು, ಈ ವೇದಗಳೇ ನಮ್ಮ ಸನಾತನ ಧರ್ಮದ ಆಧಾರವಾಗಿದೆ. ಈ ರೀತಿಯ ವೇದಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದವರನ್ನು ವೇದಿ, ದ್ವಿವೇದಿ, ತ್ರಿವೇದಿ ಮತ್ತು ಚತುರ್ವೇದಿಗಳು ಎಂದು ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಹೀಗೆ ಒಂದಕ್ಕಿಂತಲೂ ಹೆಚ್ಚಿನ ವೇದಗಳನ್ನು ಕಲಿತವರು ಇರುತ್ತಿದ್ದು ಇಂದು ಕೇವಲ ಅವೆಲ್ಲವೂ ತಮ್ಮ ವಂಶದ ಉಪನಾಮಗಳಾಗಿ ಉಳಿದು ಹೋಗಿವೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಸಂಪೂರ್ಣ ವೇದದ ಅಧ್ಯಯನ ಮಾಡಿರುತ್ತಾರೆ. ಅಂತಹವರಲ್ಲಿ 123 ವರ್ಷಗಳ ಕಾಲ ಜೀವಿಸಿದ್ದು ಕಳೆದ ವರ್ಷ ಇದೇ ಸಮಯದಲ್ಲಿ ನಿಧರಾದ ಸುಧಾಕರ್ ಚತುವೇದಿಗಳು ಒಬ್ಬರಾದರೆ, ಮತ್ತೊಬ್ಬರು ಆರ್.ಎಲ್‌.ಕಶ್ಯಪ್ ಅವರು ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಇಂತಹ ಹೆಮ್ಮೆಯ ಕನ್ನಡಿಗರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಮೆಲುಕನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಹಾಕೋಣ ಬನ್ನಿ.

kash1

ವೇದ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ಮೇಲ್ನೋಟಕ್ಕೆ ಇವೆಲ್ಲವೂ ವಿಭಿನ್ನವಾದ ವಿಷಯಗಳು ಮತ್ತು ಕಷ್ಟದ ವಿಷಯಗಳು ಎನಿಸಿದರೂ, ವೇದಾಧ್ಯಯನ ಮಾಡಿದವರಿಗೆ ಇವೆಲ್ಲವೂ ಸುಲಭಸಾಧ್ಯ ಎಂದು ತೋರಿಸಿದವರೇ, ವೇದ ವಿದ್ವಾನ್ ಡಾ|| ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಎಲ್ಲರ ಪ್ರೀತಿಯ ಆರ್.ಎಲ್‌.ಕಶ್ಯಪ್. ಶ್ರೀಯುತ ಕಶ್ಯಪ್ ಅವರು 28 ಮಾರ್ಚ್ 1938ರಂದು ಮೈಸೂರಿನ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸುತ್ತಾರೆ. ಚಿಕ್ಕಂದಿನಿಂದಲೂ ಓದಿನಲ್ಲಿ ಅತ್ಯಂತ ಚುರುಕಾಗಿದ್ದ ಕಶ್ಯಪ್ ಅವರಿಗೆ ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಯರೇ ಮೊದಲು ಗುರು ಎನ್ನುವಂತೆ ಬಾಲ್ಯದಿಂದಲೇ, ಮನೆಯಲ್ಲೇ ಸಂಸ್ಕೃತ, ವೇದ ಮತ್ತು ಪುರಾಣಗಳ ಪಾಠ ಪ್ರವಚನಗಳು ಅವರ ಪೋಷಕರಿಂದಲೇ ಅಗುತ್ತದೆ. ತಮ್ಮ ಪಿಯೂಸಿ ವರೆಗಿನ ವಿದ್ಯಾಭ್ಯಾಸವನ್ನು ಮೈಸೂರಿನಲ್ಲೇ ಮುಗಿಸಿ, ಬಂಗಾರದ ಪದಕದೊಂದಿಗೆ ಬಿ.ಎಸ್ಸಿ ಪದವಿಯನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದರು (ಬೆಂಗಳೂರಿನ ನ್ಯಾಷನಲ್ ಕಾಲೇಜಿಗೆ ಮೊಟ್ಟಮೊದಲ ಬಂಗಾರದ ಪದಕವನ್ನು ತಂದು ಕೊಟ್ಟ ಕೀರ್ತಿ ಇವರದ್ದಾಗಿದೆ). ನಂತರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ (ಟಾಟಾ ಇನಿಸ್ಟಿಟ್ಯೂಟ್) ಎಂ.ಎಸ್.ಸಿ. ಮುಗಿಸಿದ ನಂತರ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾದ ಮ್ಯಾಸಚೂಸೆಟ್ಸ್‌ನ ಕೇಂಬ್ರಿಡ್ಜ್‌ನಲ್ಲಿರುವ ಖಾಸಗಿ ಐವಿ ಲೀಗ್ ಸಂಶೋಧನಾ ವಿಶ್ವವಿದ್ಯಾಲಯವಾಗಿರುವ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಆಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಂಪ್ಯೂಟರ್ ವಿಷಯದಲ್ಲಿ ಪಿ.ಎಚ್.ಡಿ.ಯನ್ನು ಪಡೆದು ಅಮೇರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಸುಮಾರು ಮೂರು ದಶಕಗಳ ಕಾಲ ಎಲೆಕ್ಟ್ರಿಕಲ್ ಹಾಗೂ ಕಂಪ್ಯೂಟರ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.

ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲೇ ಪ್ರಾಧ್ಯಾಪಕರಾಗಿದ್ದ ಯು-ಚಿ ಹೋ ಅವರೊಂದಿಗೆ ಸೇರಿಕೊಂಡು ಅಭಿವೃದ್ಧಿ ಪಡಿಸಿದ ಹೊ-ಕಶ್ಯಪ್ ಎಂಬ ನಿಯಮ ಜಗತ್ಪ್ರಸಿದ್ಧಿಯನ್ನು ಪಡೆದಿದೆ. 1982ರಲ್ಲಿ, ಅವರು ಮಂಡಿಸಿದ Kashyap information criterion (KIC) ಸಹಾ ಅವರಿಗೆ ಹೆಸರನ್ನು ತಂದು ಕೊಡುವ ಮೂಲಕ ಅವರು ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್, ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ಪ್ಯಾಟರ್ನ್ ರೆಕಗ್ನಿಷನ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ ಮತ್ತು ಟೆಲಿಕಮ್ಯುನಿಕೇಶನ್ ಇಂಜಿನಿಯರ್ಸ್‌ನ ಫೆಲೋ ಆಗಿ ನಿಯೋಜಿತರಾಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ 350ಕ್ಕೂ ಅಧಿಕ ಸಂಶೋಧನ ಪ್ರಬಂಧಗಳನ್ನು ಬರೆದಿದ್ದಲ್ಲದೇ, 50ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಶೋಧನ ಮಾರ್ಗದರ್ಶಿಗಳಾಗಿದ್ದರು. ಇವೆಲ್ಲವೂ ಅವರ ವೃತ್ತಿಪರ ಸಾಧನೆಗಳಾಗಿದ್ದು ಇವಿಷ್ಟೇ ಆಗಿದ್ದರೂ ಅವರು ಮೂರು ಮತ್ತೊಬ್ಬ ಎನಿಸಿಕೊಳ್ಳುತ್ತಿದ್ದರು.

ಆದರೆ ಬಾಲ್ಯದಿಂದಲೂ ಕಲಿತಿದ್ದ ವೇದಗಳ ಕುರಿತು ವೈದಿಕ ಅಧ್ಯಯನ ಕ್ಷೇತ್ರದಲ್ಲಿ ಹೆಚ್ಚಿನ ಆಸ್ಥೆಯನ್ನು ವಹಿಸಿ, ನಾಲ್ಕು ಪ್ರಮುಖ ವೇದಗಳಾದ ಋಗ್ವೇದ ಸಂಹಿತೆ, ಕೃಷ್ಣ ಯಜುರ್ವೇದ ಸಂಹಿತೆ, ಮತ್ತು ಸಾಮವೇದ, ಮತ್ತು ಅಥರ್ವವೇದದ ಸುಮಾರು 25000 ಶ್ಲೋಕಗಳನ್ನು ಸಂಸ್ಕೃತದಿಂದ ಇಂಗ್ಲೀಷಿಗೆ ಭಾಷಾಂತರಿಸಿದ್ದಲ್ಲದೇ ಐದನೇ ವೇದ ಎಂದೇ ಕರೆಯಲ್ಪಡುವ ಶುಕ್ಲ ಯಜುರ್ವೇದವ ಶ್ಲೋಕಗಳೂ ಸೇರಿದಂತೆ ಐದೂ ವೇದಗಳನ್ನು ಭಾಷಾಂತರಿಸಿದ ವಿಶ್ವದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.

vedas

ಇವರು ಭಾಷಾಂತರಿಸಿದ ಋಗ್ವೇದದ 12 ಸಂಪುಟಗಳು, ಯಜುರ್ವೇದದ 4 ಸಂಪುಟಗಳು, ಅಥರ್ವವೇದದ 6 ಸಂಪುಟಗಳು, ಸಾಮವೇದದ 2 ಸಂಪುಟಗಳು ಮತ್ತು ಶುಕ್ಲ ಯಜುರ್ ವೇದದ 2 ಸಂಪುಟಗಳು ವೇದಾಸಕ್ತರ ಪಾಲಿಗೆ ಅತ್ಯುತ್ತವಾದ ಮಾರ್ಗದರ್ಶಿ ಗ್ರಂಧವಾಗಿದೆ ಎಂದರೂ ತಪ್ಪಾಗದು. ಇವರ Why Read Rig Veda (ಋಗ್ವೇದವನ್ನು ಯಾಕೆ ಓದಬೇಕು?) ಎಂಬ ಪುಸ್ತಕವಂತೂ ಅಪಾರವಾದ ಖ್ಯಾತಿಯನ್ನು ಗಳಿಸಿದಲ್ಲದೇ, ಈ ಪುಸ್ತಕವು ಕನ್ನಡ, ಹಿಂದಿ, ಮರಾಠಿ ಮುಂತಾದ ಭಾಷೆಗಳಿಗೆ ಅನುವಾದಗೊಂಡು ಅದರ ಲಕ್ಷಾಂತರ ಬಿಸಿ ಬಿಸಿ ದೋಸೆಯಂತೆ ಮಾರಾಟವಾಗಿರುವುದು ಗಮನಾರ್ಹವಾಗಿದೆ. ಋಷಿಗಳು ತೋರಿದ ದಿವ್ಯಮಾರ್ಗದ ಮೂಲಕ ಜೀವನದಲ್ಲಿ ಹೇಗೆ ಸರ್ವತೋಮುಖ ಪ್ರಗತಿ ಸಾಧಿಸಬಹುದು ಎಂಬುದನ್ನು ಈ ಪುಸ್ತಕದಲ್ಲಿ ತಿಳಿಸಿರುವುದಲ್ಲದೇ, ಕಾಲಾಂತರದಲ್ಲಿ ವೇದ ಜ್ಞಾನಕ್ಕೆ ಸಂಬಂಧಿಸಿದಂತೆ ನುಸುಳಿದ ಜಿಜ್ಞಾಸೆಗಳು, ಆಭಾಸಗಳು ಮತ್ತು ಅವುಗಳಿಗೆ ಉತ್ತರಗಳನ್ನೂ ಸಹಾ ಈ ಪುಸ್ತಕದಲ್ಲಿ ಕಾಣಬಹುದಾಗಿದೆ.

ksh3

25000 ಶ್ಲೋಕಗಳನ್ನು ಹೊಂದಿರುವ ಇಡೀ ವೇದವನ್ನು ನೋಡಿಯೇ ಭಯಪಟ್ಟು ಅದನ್ನು ಓದಿ ಅರ್ಥಮಾಡಿಕೊಳ್ಳಲು ಹಿಂಜರಿಯುವವರಿಗೆ ವೇದಗಳನ್ನು ಸುಲಭವಾಗಿ ಅರ್ಥ ಮಾಡಿಸುವ ಸಲುವಾಗಿ ಕಶ್ಯಪ್ ಅವರು Semantics of Rig Veda (ಋಗ್ವೇದದ ಅರ್ಥಾನುಸಂಧಾನ), Hymns on Creation and Death (ಸೃಷ್ಟಿ ಹಾಗೂ ಮೃತ್ಯು ಸೂಕ್ತಗಳು), Agni – The Lord of Divine Will (ಸಂಕಲ್ಪದ ಅಧಿದೇವತೆ – ಅಗ್ನಿ), Veda, Upanishad and Tantra (ಆಧುನಿಕರಿಗಾಗಿ ವೇದ ಜ್ಞಾನ) ಮುಂತಾದ ಮಧ್ಯಮ ಗಾತ್ರದ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಸುಲಭವಾಗಿ ವೇದದ ಅಂತರಾರ್ಥ ತಿಳಿದುಕೊಳ್ಳಲು ಬಯಸುವವರ ಅಗತ್ಯಗಳನ್ನು ಪೂರೈಸುತ್ತದೆ. ಇತರೇ ಪುಸ್ತಕಗಳಂತೆ ಈ ಪುಸ್ತಕಗಳೂ ಸಹಾ ಈಗಾಗಲೇ ಕನ್ನಡ, ತಮಿಳು, ತೆಲುಗು, ಮರಾಠಿ, ಮಲೆಯಾಳಂ ಭಾಷೆಗಳಲ್ಲಿ ಭಾಷಾಂತರಗೊಂಡು ಪ್ರಕಟಗೊಂಡು ಅಪಾರ ಜನಮನ್ನಣೆಯನ್ನು ಗಳಿಸಿಕೊಂಡಿದೆ.

ವೇದಾಧ್ಯಯನಕ್ಕೇ ತಮ್ಮ ಇಡೀ ಬದುಕನ್ನು ಮೀಸಲಾಗಿಟ್ಟು ಆಜನ್ಮ ಬ್ರಹ್ಮಚಾರಿಗಳಾಗಿದ್ದ ಕಶ್ಯಪರು, ವೇದ ಜ್ಞಾನ ಸಂರಕ್ಷಣೆ, ಸಂಶೋಧನೆ ಮತ್ತು ಪ್ರಸಾರಕ್ಕಾಗಿ ಶ್ರೀ ಅರೋಬಿಂದೊ ಕಪಾಲಿಶಾಸ್ತ್ರಿ ವೇದಸಂಸ್ಕೃತಿ ಎಂಬ ಸಂಸ್ಥೆಯನ್ನು 1997ರಲ್ಲಿ ಸ್ಥಾಪಿಸಿ, ಅದರ ಮೂಲಕ ವೇದಾಧ್ಯಯನ ಮತ್ತು ಪ್ರಚಾರ ಮಾಡುವ ಇಂದಿನ ಪೀಳಿಗೆಯ ಉತ್ಸಾಹಿ ಯುವಕರುಗಳ ಒಂದು ಅದ್ಭುತವಾದ ತಂಡವನ್ನು ಕಟ್ಟಿದ್ದರು. ಅವರ ಮೂಲಕವೇ, ಸುಮಾರು ಎರಡು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ವೇದಾಸಕ್ತರ ಕೈಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಲ್ಲದೇ, ಇವೆಲ್ಲದಕ್ಕೂ ಕೋಟಿ ಕೋಟಿಗಟ್ಟಲೇ ತಮ್ಮ ಸ್ವಂತ ಹಣವನ್ನು ವಿನಿಯೋಗಿಸುವ ಮೂಲಕ ಕೆರೆಯ ನೀರನು ಕೆರೆಗೆ ಚೆಲ್ಲಿ, ವರವ ಪಡೆದವರಂತೆ ಕಾಣಿರೋ, ಹರಿಯ ಕರುಣದಲಾದ ಭಾಗ್ಯವ, · ಹರಿಸಮರ್ಪಣೆ ಮಾಡಿ ಬದಿಕಿರೋ ಎಂಬ ಪುರಂದರ ದಾಸರ ಪದದಂತೆ ಅಕ್ಷರಶಃ ಜೀವಿಸಿದ್ದರು.

kash2

ತಮ್ಮ ಇಳೀವಯಸ್ಸನ್ನೂ ಲೆಖ್ಖಿಸದೇ, ವೇದಾಸಕ್ತರಿಗೆ ವೇದವನ್ನು ನೇರವಾಗಿ ಕಲಿಸುವ ಸಲುವಾಗಿ ಸುಮಾರು ಎರಡು ದಶಕಗಳಿಂದಲೂ ಪ್ರತೀ ಮಂಗಳವಾರ ಬೆಳಿಗ್ಗೆ 10:30 ರಿಂದ 11:30ರವರೆಗೆ 1 ಗಂಟೆಗಳ ಕಾಲ ವೇದ ಹಾಗೂ ಅಧ್ಯಾತ್ಮ ವಿಷಯವಾಗಿ ಉಪನ್ಯಾಸ ತರಗತಿಗಳನ್ನು ಅವಿರತವಾಗಿ ನಡೆಸಿಕೊಂಡು ಬಂದಿದ್ದರು.

ಕಶ್ಯಪರು, ಕನಕಪುರ ರಸ್ತೆಯಲ್ಲಿನ ಎಡಮಡುವಿನಲ್ಲಿ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ಆರೋವೇದ ಎಂಬ trust ಸ್ಥಾಪಿಸಿದ್ದರು. ಅಲ್ಲಿ ಸಾವಯವ ಆಧಾರಿತವಾಗಿ ಕೃಷಿಗೆ ಮಹತ್ವ ನೀಡಿ, ಸಾವಿರಾರು ಔಷಧೀಯ ಗಿಡ ಮರಗಳನ್ನು ಬೆಳೆಸಿದ್ದಾರೆ. ಪಂಚವಟಿಯು ಇಲ್ಲಿನ ಆಕರ್ಷಕ ಸ್ಥಳವಾಗಿದ್ದು ಗಣಪತಿ, ಶಿವ, ಸುಬ್ರಹ್ಮಣ್ಯ ಮತ್ತು ಆಂಜನೇಯನ ಗುಡಿಗಳಿವೆ. ಇದೇ ಜಾಗದಲ್ಲೇ ದೇಸೀ ತಳಿಯ ಗೋಶಾಲೆಯನ್ನೂ ಸಹಾ ನಡೆಸುತ್ತಿದ್ದು, ಪ್ರತಿಯೊಬ್ಬರೂ ಅದನ್ನು ನೋಡಲೇ ಬೇಕಾದಂತಹ ಸ್ಥಳವಾಗಿದೆ. ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯುವುದರ ಜೊತೆಗೆ ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಆಹ್ಲಾದ ದೊರೆತು, ಮನಸ್ಸು ನಮಗೇ ಅರಿವಿಲ್ಲದಂತೆ ಆಧ್ಯಾತ್ಮದ  ಕಡೆಗೂ ಸೆಳೆಯುವಂತಹ ಸ್ಥಳ ಇದಾಗಿದೆ.

ಇವರ ಸಾಧನೆಗಳನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಘಸಂಸ್ಥೆಗಳು ನೂರಾರು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿದ್ದವು ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

  • 2003ರಲ್ಲಿ ವೇದ ಜ್ಞಾನ ಸಂರಕ್ಷಣೆ, ಸಂಶೋಧನೆ, ಪ್ರಸಾರ ಕಾರ್ಯಕ್ಕೆ ಇವರು ನೀಡಿದ ಕೊಡುಗೆ ಗುರುತಿಸಿ ಕೇಂದ್ರ ಸರ್ಕಾರವು ಶ್ರೀಯುತರಿಗೆ ವೇದಾಂಗ ವಿದ್ವಾನ್ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  • 2012ರಲ್ಲಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಿ ಸನ್ಮಾನಿಸಿದೆ
  • 2013ರ ಆಗಸ್ಟ್ ನಲ್ಲಿ ಬೆಂಗಳೂರಿನ ಭಾರತೀಯ ವಿದ್ಯಾಭವನ ಸಂಸ್ಥೆಯು ವೇದ ಬ್ರಹ್ಮ ಪುರಸ್ಕಾರ ನೀಡಿ ಸನ್ಮಾನಿಸಿದೆ
  • 2013ರ ಸೆಪ್ಟಂಬರ್ ನಲ್ಲಿ ಸ್ವದೇಶೀ ವಿಜ್ಞಾನ ಆಂದೋಲನದ ವಿಶ್ವೇಶ್ವರಯ್ಯ ವಿಜ್ಞಾನ ಪ್ರಶಸ್ತಿಗೂ ಭಾಜನರಾಗಿದ್ದರು
  • 2021ರಲ್ಲಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಅಡಿಯಲ್ಲಿ ಭಾರತದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯೂ ದೊರೆಕಿತ್ತಲ್ಲದೇ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಇವರು ನೀಡಿದ ಕೊಡುಗೆಗಾಗಿ ಹಲವು ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳೂ ಕಶ್ಯಪರಿಗೆ ಸಂದಿತ್ತು.

ksh4

ಜಾತಸ್ಯ ಮರಣಂ ಧೃವಂ ಎಂದರೆ, ಹುಟ್ಟಿದವರು ಸಾಯಲೇ ಬೇಕು ಎನ್ನುವ ಜಗದ ನಿಯಮದಂತೆ ವಯೋಸಹಜ ಅನಾರೋಗ್ಯದಿಂದಾಗಿ ತಮ್ಮ 85 ವಯಸ್ಸಿನಲ್ಲಿ ನವೆಂಬರ್ 11, 2022ರ ಬೆಳಗ್ಗೆ 11.30 ಕ್ಕೆ ತಮ್ಮ ಸ್ವಗೃಹದಲ್ಲಿ ದೈವಾದೀನರಾಗುವ ಮೂಲಕ, ಧಾರ್ಮಿಕ ಮತ್ತು ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿ ಹೋಗಿದ್ದಾರೆ ಎಂದರೂ ಅತಿಶಯೋಕ್ತಿಯಾಗದು.

ವೇದ ಮಾತೆಯ ನೈಜ ಸಾಕ್ಷಾತ್ಕಾರಕ್ಕೆ ನಿತಾಂತವಾಗಿ ಶ್ರಮಿಸುತ್ತಿದ್ದ, ನಿಷ್ಠುರ ಚಿಂತನೆ, ಸಮದರ್ಶಿತ್ವ ಮತ್ತು ಸತ್ಯಪಕ್ಷಪಾತದ ಗುಣಗಳನ್ನು ಹೊಂದಿದ್ದ, ವೇದ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ಈ ಎಲ್ಲಾ ಕ್ಷೇತ್ರಗಳಲ್ಲೂ ಅಪಾರವಾದ ಸಾಧನೆ ಮಾಡಿ, ವೇದಾಧ್ಯಯನಕ್ಕಾಗಿಯೇ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟು ಹಲವು ಪ್ರಥಮಗಳಿಗೆ ಕಾರಣೀಭೂತರಾಗಿದ್ದರೂ, ಎಲೆ ಮರೆಕಾಯಿಯಂತೆಯೇ ಮರೆಯಾಗಿ ಹೋದ ಶ್ರೀಯುತ ವೇದ ಬ್ರಹ್ಮ ಡಾ.ಆರ್.ಎಲ್‌.ಕಶ್ಯಪ್ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಕಶ್ಯಪರ ಕನಕಪುರದ ಆಶ್ರಮದ ಬಗ್ಗೆ ಮಾಹಿತಿ ನೀಡಿದ ಯಲಹಂಕದ ಜಗದೀಶ್ ಅವರಿಗೆ ಧನ್ಯವಾದಗಳು.

2 thoughts on “ವೇದ ಬ್ರಹ್ಮ ಡಾ.ಆರ್.ಎಲ್‌.ಕಶ್ಯಪ್

  1. ನಿಮ್ಮ ಬರಹ ಮನೋಜ್ಞವಾಗಿದೆ. ಇತ್ತೀಚೆಗಷ್ಟೇ ಅವರ ಸಂದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಿತ್ತು

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s