ಕರ್ನಾಟಕದ ಎಡಗೈ ಸ್ಪಿನ್ನರ್ ರಘುರಾಂ ಭಟ್

ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಕರ್ನಾಟಕ ಆಟಗಾರರದ್ದೇ ಪ್ರಾಭಲ್ಯ. ಅದರಲ್ಲೂ ಸ್ಪಿನ್ ವಿಭಾಗದಲ್ಲಿ ಎರಪ್ಪಲ್ಲಿ ಪ್ರಸನ್ನ ಮತ್ತು ಚಂದ್ರಶೇಖರ್ ಅಕ್ಷರಶಃ ದೇಶ ವಿದೇಶದ ಎಲ್ಲಾ ದಾಂಡಿಗರಿಗೂ ಸಿಂಹ ಸ್ವಪ್ನರಾಗಿದ್ದರು. ಸಮಾನ ವಯಸ್ಕರಾಗಿದ್ದ ಅವರಿಬ್ಬರು ಉತ್ತರ ಭಾರತದ ಕಾಣದ ಕೈಗಳ ಅವಕೃಪೆಯಿಂದಾಗಿ ದೇಶಕ್ಕಾಗಿ ಆಡಲು ಹೆಚ್ಚಿನ ಮಟ್ಟಿಗೆ ಅವಕಾಶ ಸಿಗದೇ ಹೋದಾಗ ಏಕಾ ಏಕಿ ನಿವೃತ್ತರಾದಾಗ, ಕರ್ನಾಟಕದ ಸ್ಪಿನ್ ಧಾಳಿಯ ನೊಗವನ್ನು ಹೊರುವವರು ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡಿದವರೇ ಬಿ ವಿಜಯಕೃಷ್ಣ ಮತ್ತು ಎ ರಘುರಾಮ್ ಭಟ್ ಎಂದರೂ ತಪ್ಪಾಗದು. ಸುಮಾರು 13 ವರ್ಷಗಳ ಕಾಲ ಕರ್ನಾಟಕದ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದ ಅದ್ವಾಯಿ ರಘುರಾಮ್ ಭಟ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯಕರು

raghu2ಮೂಲತಃ ದಕ್ಷಿಣ ಕನ್ನಡದ ಪುತ್ತೂರಿನವರಾದ ರಘುರಾಮ್ ಭಟ್ ಹುಟ್ಟಿದ್ದು, ಏಪ್ರಿಲ್ 16, 1958ರಲ್ಲಿ. ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಭಟ್ ಸ್ಥಳೀಯ ಶಾಲಾ ಮತ್ತು ಕಿರಿಯ ಮಟ್ಟದ ಕ್ರೀಡಾಕೂಟಗಳಲ್ಲಿ ತಮ್ಮ ಎಡಗೈ ಸ್ಪಿನ್ ಮೂಲಕ ಪ್ರಾಬಲ್ಯ ತೋರಿದ ಕಾರಣ, ಕ್ರಿಕೆಟ್ಟಿನಲ್ಲಿ ಹೆಚ್ಚಿನ ತರಭೇತಿಗಾಗಿ ಅವರ ಪೋಷಕರು ಭಟ್ಟರ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಅವರ ವಿದ್ಯಾಭ್ಯಾಸದ ಜೊತೆಗೆ ಕ್ರಿಕೆಟ್ ತರಭೇತಿಯನ್ನೂ ಮುಂದುವರೆಸಿದರು. ಆದೇ ಸಮಯದಲ್ಲೇ ಅಂತರಕಾಲೇಜು ಮಟ್ಟದ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ, 1979-80 ಋತುವಿನಲ್ಲಿ ಕರ್ನಾಟಕದ ಪರ ತನ್ನ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ವಿರುದ್ಧ M. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕದ ಪರ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಪಡೆಯುವ ಮೂಲಕ ಉತ್ತಮ ಆರಂಭವನ್ನು ಪಡೆಯದೇ ಹೋದರೂ, ನಂತರದ ದಿನಗಳಲ್ಲಿ ತಮ್ಮ ವೃತ್ತಿಜೀವನದಲ್ಲಿ ಹಂತ ಹಂತವಾಗಿ ಉತ್ತಮವಾದ ಪ್ರದರ್ಶನಗಳನ್ನು ನೀಡುತ್ತಾ, ತಮ್ಮ 6ನೇ ಪಂದ್ಯದಲ್ಲೇ ದಾವಣಗೆರೆಯಲ್ಲಿ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ 9 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು.

1981-82ರ ಪಂಜಾಬ್ ವಿರುದ್ಧದ ಕ್ವಾರ್ಟರ್‌ಫೈನಲ್‌ನಲ್ಲಿ ಮತ್ತೆ 9 ವಿಕೆಟ್‌ಗಳನ್ನು ಕಬಳಿಸಿ ಕರ್ನಾಟಕ ಸೆಮಿಫೈನಲ್ ತಲುಪಲು ಸಹಕರಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬಾರದೇ ಕರ್ನಾಟಕದ ಪ್ರಮುಖ ಸ್ಪಿನ್ನರ್ ಆಗಿ ಹೋದದ್ದು ಈಗ ಇತಿಹಾಸ. ಮುಂಬೈ ವಿರುದ್ದದ ರಣಜಿ ಸೆಮಿಫೈನಲ್ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದು ಮುಂಬೈ ತಂಡದ ಕಡೆ ಅದಾಗಲೇ ಭಾರತದ ತಂಡದಲ್ಲಿ ಹೆಸರುಮಾಡಿದ್ದ ದಿಗ್ಗಜರುಗಳಾದ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್‌ಸರ್ಕರ್, ಅಶೋಕ್ ಮಂಕಡ್, ಸಂದೀಪ್ ಪಾಟೀಲ್, ರವಿ ಶಾಸ್ತ್ರಿ ಮತ್ತು ಬಲ್ವಿಂದರ್ ಸಂಧು ಸೇರಿದಂತೆ ಅಂದಿನ ಭಾರತೀಯ ತಂಡದ ಅರ್ಧಕ್ಕೂ ಹೆಚ್ಚಿನ ಆಟಗಾರಿದ್ದರು. ಸುನಿಲ್ ಗವಾಸ್ಕರ್ ನಾಯಕತ್ವದ ಬಾಂಬೆ ಟಾಸ್ ಗೆದ್ದು ಗವಾಸ್ಕರ್ ಮತ್ತು ಗುಲಾಮ್ ಪಾರ್ಕರ್ 62 ರನ್ ಜೊತೆಯಾಟದಲ್ಲಿ ಉತ್ತಮ ಆರಂಭ ನೀಡಿ ಕರ್ನಾಟಕಕ್ಕೆ ತೊಂದರೆ ಆಗಬಹುದಾದ ಮುನ್ಸೂಚನೆ ನೀಡುತ್ತಿದ್ದ ಸಮಯದಲ್ಲೇ, 41 ರನ್ ಗಳಿಸಿದ್ದ ಗವಾಸ್ಕರ್ ಅವರನ್ನು ರಘುರಾಂ ಭಟ್ ಔಟ್ ಮಾಡಿದ ನಂತರ ಶೀಘ್ರದಲ್ಲೇ ವೆಂಗ್ಸರ್ಕರ್ ಅವರನ್ನೂ ಅಲ್ಪಮೊತ್ತಕ್ಕೇ ಔಟ್ ಮಾಡುವ ಮೂಲಕ ಕರ್ನಾಟಕಕ್ಕೆ ಮೇಲುಗೈ ಸಾಧಿಸಲು ನೆರವಾದರು. ನಂತರ ಗುಲಾಮ್ ಪಾರ್ಕರ್ ಮತ್ತು ಸಂದೀಪ್ ಪಾಟೀಲ್ 101 ರನ್ ಜೊತೆಯಾಟವಾಡಿ ಮತ್ತೆ ತಲೇ ನೋವಾಗುತ್ತಿದ್ದಂತೆ, ಗುಲಾಮ್ ಪಾರ್ಕರ್ ಅವರನ್ನು ಲೆಗ್ ಬಿಫೋರ್ ವಿಕೆಟ್ ಮೂಲಕ ಔಟ್ ಮಾಡಿಸಿದರೆ, ನಂತರ ಬಂದ ದಿಗ್ಗಜ ಅಶೋಕ್ ಮಂಕಡ್ ಹೆಚ್ಚಿನ ಮೊತ್ತ ಗಳಿಸದೇ ರಘುರಾಂ ಬೌಲಿಂಗ್ನಲ್ಲಿ ಸ್ಲಿಪ್‌ನಲ್ಲಿದ್ದ ಗುಂಡಪ್ಪ ವಿಶ್ವನಾಥ್ ಅವರ ಮೂಲಕ ಔಟ್ ಮಾಡಿ ಮುಂದಿನ ಚಂಡಿನಲ್ಲೇ ಸುರು ನಾಯಕ್ ಅವರನ್ನೂ ಔಟ್ ಮಾಡುವ ಮೂಲಕ ರಘುರಾಮ್ ಭಟ್ ಮೊತ್ತ ಮೊದಲ ಹ್ಯಾಟ್ರಿಕ್ ಗಳಿಸಿದರು. ಬಾಂಬೆ ಮೊದಲ ಇನ್ನಿಂಗ್ಸ್ ಕೇವಲ 271ಕ್ಕೆ ಸಮಾಪ್ತಿ ಆಗುವುದಕ್ಕೆ ರಘುರಾಮ್ ಭಟ್ ಅವರ 123/8 ವಿಕೆಟ್‌ಗಳ ಕಾಣಿಕೆ ಇತ್ತು.

raghu4ಕರ್ನಾಟಕದ ಪರ ಸುಧಾಕರ್ ರಾವ್ ಶತಕ ಮತ್ತು ಬ್ರಿಜೇಶ್ ಪಟೇಲ್ 78 ರನ್ ಗಳ ನೆರವಿನಿಂದ 470 ಗಳಿಸಿ 200ರನ್ನುಗಳ ಮುನ್ನಡೆ ಗಳಿಸಿದ ನಂತರ ಎರಡನೇ ಇನ್ನಿಂಗ್ಸ್ ನಲ್ಲಿಯೂ ರಘುರಾಂ ಭಟ್ ಅವರ ದಾಳಿಗೆ ಕುಸಿದ ಬಾಂಬೇ ತಂಡ 160/6 ವಿಕೆಟ್‌ಗಳಾಗಿದ್ದಾಗ, ಸಾಮಾನ್ಯವಾಗಿ ಆರಂಭಿಕ ಆಟಗಾರನಾಗಿ ಬರುತ್ತಿದ್ದ ಸುನಿಲ್ ಗವಾಸ್ಕರ್ ಆ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ರಘುರಾಮ್ ಭಟ್ ಅವರ ಎಡಗೈ ಸ್ಪಿನ್‌ ಬೋಲಿಂಗ್ ಧಾಳಿಯನ್ನು ಎದುರಿಸಲಾಗದೇ ಆರಂಭದಲ್ಲಿ ಬ್ಯಾಟಿಂಗ್ ಬದಲು ಪ್ಯಾಡಿಂಗ್ ಆಡಿದ ನಂತರ ಭಟ್ ವಿರುದ್ಧ ಎಡಗೈ ಬ್ಯಾಟಿಂಗ್ ಮತ್ತು ವಿಜಯಕೃಷ್ಣ ವಿರುದ್ಧ ಬಲಗೈ ಬ್ಯಾಟಿಂಗ್ ಮಾಡುತ್ತಾ ಸುಮಾರು 60 ನಿಮಿಷಗಳ ಕಾಲ ಕ್ರೀಸಿನಲ್ಲಿ ಉಳಿದು ಬಾಂಬೆ ಇನ್ನಿಂಗ್ಸ್ ಸೋಲದಂತೆ ನೋಡಿಕೊಂಡರೂ ಅಂತಿಮವಾಗಿ ಬಾಂಬೆ 9 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿದಾಗ, ಕರ್ನಾಟಕ ದೊಡ್ಡ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಫೈನಲ್‌ಗೆ ಪ್ರವೇಶಿಸಿತ್ತು. ಆ ಪಂದ್ಯದಲ್ಲಿ ರಘುರಾಮ್ ಭಟ್ ಒಟ್ಟು 13 ವಿಕೆಟ್‌ ಗಳಿಸುವ ಮೂಲಕ ಬಾಂಬೆ ತಂಡಕ್ಕೆ ಸಿಂಹಸ್ವಪ್ನವಾಗಿದ್ದರು. ದುರಾದೃಷ್ಟವಷಾತ್ ದೆಹಲಿಯ ವಿರುದ್ಧದ ಆ ಋತುವಿನ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 705 ರನ್ ಗಳಿಸಿಯೂ ಸಹಾ ಸೋಲ ಬೇಕಾಯಿತು.

ಮುಂದಿನ ವಷದ ರಣಜಿ ಋತುವಿನಲ್ಲಿ ರಘುರಾಂ ಭಟ್ ಅವರ ಭರ್ಜರಿಯಾದ ಪ್ರದರ್ಶನ, ಕರ್ನಾಟಕ ತಂಡವು 3 ನೇ ಬಾರಿಗೆ ರಣಜಿ ಟ್ರೋಫಿಯನ್ನು ಗೆಲ್ಲಲು ಸಹಕಾರಿಯಾಯಿತು. ಅದೇ ವರ್ಷದ ಇರಾನಿ ಟ್ರೋಫಿಯಲ್ಲೂ ಸಹಾ 7 ವಿಕೆಟ್‌ ಪಡೆಯುವ ಮೂಲಕ ರಾಷ್ಟ್ರೀಯ ತಂಡ ಆಯ್ಕೆದಾರ ಗಮನವನ್ನು ಸೆಳೆದು ಪಾಕಿಸ್ತಾನದ ವಿರುದ್ಧದ ಸರಣಿಗೆ ರಘುರಾಂ ಭಟ್ ಭಾರತ ತಂಡಕ್ಕೆ ಆಯ್ಕೆ ಆದರು.

ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ದಿಲೀಪ್ ದೋಷಿಯ ಬದಲಾಗಿ ಪಾಕಿಸ್ತಾನದ ವಿರುದ್ಧ 165ನೇ ಟೆಸ್ಟ್ ಆಟಗಾರನಾಗಿ ಚೊಚ್ಚಲ ಟೆಸ್ಟ್ ಆಡಿದ ಭಟ್, ಜಾವೇದ್ ಮಿಯಾಂದಾದ್ ಅವರನ್ನು ಔಟ್ ಮಾಡುವ ಮೂಲಕ ಚೊಚ್ಚಲ ಟೆಸ್ಟ್ ವಿಕೆಟ್ ಗಳಿಸಿ, ನಂತರ ಮುದಸ್ಸರ್ ನಜರ್ ಅವರ ವಿಕೆಟ್ ಸಹಾ ಪಡೆದ ನಂತರ ಪಂದ್ಯ ಡ್ರಾ ನಲ್ಲಿ ಮುಕ್ತಾಯವಾಗಿತ್ತು. ರಘುರಾಂ ಅವರ ಎರಡನೇ ಟೆಸ್ಟ್ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧವಾಗಿದ್ದು ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಕ್ಲೈವ್ ಲಾಯ್ಡ್ ಮತ್ತು ಗಸ್ ಲೋಗಿ ಅವರ ವಿಕೆಟ್ ಪಡೆದರು. ದುರಾದೃಷ್ಟವಷಾತ್ ಭಾರತವು ಆ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋತಿದ್ದಲ್ಲದೇ, ಅದೇ ಪಂದ್ಯವೇ ರಘುರಾಂ ಭಟ್ ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂತ್ಯವೂ ಆಗಿದ್ದು ಬೇಸರದ ಸಂಗತಿಯಾಗಿತ್ತು.

raghu6ಅಂದಿನ ಆಯ್ಕೆದಾರರು ರಘುರಾಂ ಭಟ್ ಅವರ ಸಮಕಾಲೀನ ಸ್ಪಿನ್ನರುಗಳಾದ ರವಿಶಾಸ್ತ್ರಿ ಮತ್ತು ಮಣಿಂದರ್ ಸಿಂಗ್‌ಗೆ ಆವರುಗಳಿಗೆ ನೀಡಿದ ಅವಕಾಶಗಳನ್ನು ರಘುರಾಮ್ ಭಟ್ ಅವರುಗಳಿಗೆ ನೀಡಿದ್ದಲ್ಲಿ ಖಂಡಿತವಾಗಿ ಭಟ್ ಬಂಗಾಲದ ಎಡಗೈ ಸ್ಪಿನ್ನರ್ ದಿಲೀಪ್ ದೋಷಿ ಅವರ ಉತ್ತರಾಧಿಕಾರಿ ಆಗುತ್ತಿದ್ದದ್ದರಲ್ಲಿ ಸಂದೇಹವೇ ಇಲ್ಲ. ಆನಂತರ ಕರ್ನಾಟಕದ ಪರ ಅನೇಕ ಪಂದ್ಯಗಳನ್ನು ಗೆಲ್ಲಿಸುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸಿದ ರಘುರಾಂ ಭಟ್ ಗೂಗ್ಲೀ ಬೌಲರ್ ಚಂದ್ರಶೇಖರ್ ಅವರ ಸ್ಥಾನವನ್ನು ಯಶಸ್ವಿಯಾಗಿ ತುಂಬಿದರಾದರೂ ನಂತರ ಬಂದ ಮತ್ತೊಬ್ಬ ಗೂಗ್ಲೀ ಬೋಲರ್ ಅನಿಲ್ ಕುಂಬ್ಳೆಯ ಮುಂದೆ ಆವರ ಆಟ ಸಾಗಲಿಲ್ಲ.

RB_statsಕರ್ನಾಟಕ ಮತ್ತು ಭಾರತದ ಪರ ಅವರ ಸುದೀರ್ಘವಾದ 13 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ ಭಟ್ 373 ಪ್ರಥಮ ದರ್ಜೆಯ ವಿಕೆಟ್‌ಗಳನ್ನು ಗಳಿಸಿದರೆ, ಎರಡು ಟೆಸ್ಟುಗಳಿಂದ ಒಟ್ಟು 4 ವಿಕೆಟ್ ಗಳನ್ನಷ್ಟೇ ಪಡೆಯಲು ಸಾಧ್ಯವಾಗಿತ್ತು. ಇನ್ನು ಅವರ ಬ್ಯಾಟಿಂಗ್ ಸಹಾ ಅಂತಹ ಹೇಳಿಕೊಳ್ಳುವ ಹಾಗೆ ಇರದೇ ಹೋದದ್ದೂ ಅವರ ಋಣಾತ್ಮಕ ಅಂಶವಾಗಿತ್ತು. ವಿಕೆಟ್ ಕೀಪರ್ ಕಿರ್ಮಾನಿಯವರ ಜೊತೆ ಸುದೀರ್ಘವಾಗಿ ಆಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರ ಹೊರತಾಗಿ ಅವರ ಬ್ಯಾಟಿಂಗ್ ಹೇಳಿಕೊಳ್ಳುವ ಹಾಗೇನೂ ಇರಲಿಲ್ಲ. 1992-93ರ ಮಧ್ಯಪ್ರದೇಶ ವಿರುದ್ಧದ ಪ್ರಿ-ಕ್ವಾರ್ಟರ್ ಫೈನಲ್ ನಂತರ ಎಲ್ಲಾ ರೀತಿಯ ಕ್ರಿಕೆಟ್ ಆಟದಿಂದ ನಿವೃತ್ತರಾದರು. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಭಟ್ ಅವರು ಅಂಪೈರ್, ನಿರ್ವಾಹಕರು ಮತ್ತು ತರಬೇತುದಾರರಾಗಿ, ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 2011ರಲ್ಲಿ, ಅವರು ಗೋವಾ ಕ್ರಿಕೆಟ್ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

raghu3ಪ್ರಸ್ತುತ ಕೆಪಿಎಲ್, ಐಪಿಎಲ್, ಕರ್ನಾಟಕ ಮತ್ತು ಭಾರತ ತಂಡದ ಅನೇಕ ಉದಯೋನ್ಮುಖ ಸ್ಪಿನ್ನರ್ ಗಳು ರಘುರಾಂ ಭಟ್ ಅವರ ಕ್ರಿಕೆಟ್ ಕೋಚಿಂಗ್ ಕಬ್ಲಿನಲ್ಲಿ ಭಟ್ ಅವರ ಸ್ಪಿನ್ ಗರಡಿಯಲ್ಲಿ ಪಳಗಿ, ತಮ್ಮ ತಂಡಗಳ ಗೆಲುವಿಗೆ ಕಾರಣೀಭೂತರಾಗುತ್ತಿರುವುದಲ್ಲದೇ, ರಘುರಾಂ ಭಟ್ ಅವರ ಕೀರ್ತಿಯನ್ನೂ ಪರೋಕ್ಷವಾಗಿ ಎಲ್ಲಡೆಯಲ್ಲೂ ಪಸರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.

ಪ್ರಸ್ತುತ 2022ರಲ್ಲಿ ತಮ್ಮ 64ನೇ ವಯಸ್ಸಿನಲ್ಲಿ ಅವಿರೋಧವಾಗಿ ಕೆಎಸ್‌ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದೇ ಸಮಯದಲ್ಲೇ ಆವರ ಸಹವರ್ತಿ ಆಟಗಾರಾಗಿದ್ದ ಮತ್ತು ಕೆಎಸ್‌ಸಿಎ ಮಾಜಿ ಅಧ್ಯಕ್ಷ ರಾಗಿದ್ದ ಕರ್ನಾಟಕ ಕಂಡ ಶ್ರೇಷ್ಠ ಆಲ್ರೌಂಡರ್ ರೋಜರ್‌ ಬಿನ್ನಿಯವರು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.

raghu5ಹೀಗೆ ಕರ್ನಾಟಕದ ಕ್ರಿಕೆಟ್ ಎಡಗೈ ಸ್ಪಿನ್ನರ್ ಆಗಿ, ತಂಡದ ಅವಿಭಾಜ್ಯ ಅಂಗವಾಗಿ ಕರ್ನಾಟಕ ಅನೇಕ ಪಂದ್ಯಗಳನ್ನು ಗೆಲ್ಲುವುದರಲ್ಲಿ ಮುಖ್ಯಪಾತ್ರವನ್ನು ವಹಿಸಿದ್ದ ಎ ರಘುರಾಂ ಭಟ್ ಆವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎನ್ನಲು ಹೆಮ್ಮೆ ಆಗುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s