ಡಾ. ವಿಜಯಲಕ್ಷ್ಮಿ ದೇಶಮಾನೆ

vijಸಂಸ್ಕೃತದ ಶ್ಲೋಕವೊಂದರಲ್ಲಿ ವೈದ್ಯೋ ನಾರಾಯಣೋ ಹರಿಃ ಎನ್ನುವ ಸಾಲು ಬರುತ್ತದೆ. ಅದಕ್ಕೆ ಹಲವರು ರೋಗದಿಂದ ಬಳಲುತ್ತಿದ್ದವರನ್ನು ವೈದ್ಯರುಗಳು ತಮ್ಮ ಬುದ್ಧಿ ಶಕ್ತಿಯನ್ನು ಬಳಸಿ ರಕ್ಷಿಸುವ ಕಾರಣ ಅವರನ್ನು ಸಾಕ್ಷಾತ್ ನಾರಾಯಣನ ಅಪರಾವತಾರ ಎಂದು ಅರ್ಧೈಸುತ್ತಾರೆ. ಆದರೆ ವಾಸ್ತವವಾಗಿ ಇಂದಿನ ಕಾಲದಲ್ಲಿ ಅಂತಹ ವೈದ್ಯರು ಸಿಗುವುದು ಬಹಳ ಕಷ್ಟ ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ. ಅದರಲ್ಲೂ ಸರ್ಕಾರೀ ವೈದ್ಯರೆಂದರೆ, ಅವರ ಮೇಲೆ ಜನರ ನಂಬಿಕೆಗಳು ಅಷ್ಟಕ್ಕಷ್ಟೇ. ಆದರೆ ಅಪರೂಪಕ್ಕೆ ಜನ ಸೇವೆಯೇ ಜನಾರ್ಧನ ಸೇವೆ ಎಂದು ರೋಗಿಗಳ ಸೇವೆಗಾಗಿಯೇ ತಮ್ಮ ಸಂಪೂರ್ಣವಾಗಿ ಮುಡಿಪಾಗಿಟ್ಟು ಸರ್ಕಾರಿ ಸೇವೆಯಿಂದ ನಿವೃತ್ತರಾದರೂ, ಸಮಾಜಸೇವೆಯಲ್ಲೇ ನಿರತರಾಗಿರುವ ಅಪರೂಪ ಮತ್ತು ಅನುರೂಪದ ವೈದ್ಯಲೋಕದ ದೈತ್ಯ ಮತ್ತು ಮಾನವೀಯ ಪ್ರತಿಮೆಯಾಗಿರುವ ಹಿರಿಯ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರ ಸಂಪೂರ್ಣ ಮಾಹಿತಿಯನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.

vij_appa_ammaವಿಜಯಲಕ್ಷ್ಮೀ ಅವರು ಮೂಲತಃ ಗುಲ್ಬರ್ಗಾದ ಕೊಳೆಗೇರಿಯಲ್ಲಿ ಹಳೆಯ ಚಪ್ಪಲಿಯನ್ನು ಹೊಲಿಯುವ ಕಾರ್ಯವನ್ನು ಮಾಡುತ್ತಿದ್ದ ಅತ್ಯಂತ ಹಿಂದುಳಿದ ಜಾತಿಗೆ ಸೇರಿದ್ದ ಶ್ರೀ ಬಾಬುರಾವ್ ದೇಶಮಾನೆ ಮತ್ತು ಯಜಮಾನರ ಆದಾಯದಿಂದ ಕುಟುಂಬ ನಡೆಸಲು ಸಾಧ್ಯವಾಗುತ್ತಿರಲಿಲ್ಲವಾದ ಕಾರಣ, ರಸ್ತೆ ಬದಿಯಲ್ಲಿ ಬಿಸಿಲು ಮಳೆ ಎಂಬುದನ್ನು ಲೆಖ್ಕಿಸದೇ ತರಕಾರಿಯನ್ನು ಮಾರುತ್ತಿದ್ದ ಶ್ರೀಮತಿ ರತ್ನಮ್ಮ ಅವರ ಎಂಟು ಮಕ್ಕಳಲ್ಲಿ ಹಿರಿಯ ಮಗಳಾಗಿ ಜನಿಸುತ್ತಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ, ಔಪಚಾರಿಕವಾಗಿ ಯಾವುದೇ ಶಿಕ್ಷಣವನ್ನು ಪಡೆಯದಿದ್ದರೂ, ಬಾಬೂರಾವ್ ಅವರು ತಮ್ಮ ಜಾತಿ ಮತ್ತು ವೃತ್ತಿಪರತೆಯ ತಡೆಗೋಡೆಗಳನ್ನು ಮುರಿದು ತಮ್ಮ ಮಕ್ಕಳು ಸಮಾಜದಲ್ಲಿ ಉತ್ತಮವಾಗಿ ಬದುಕಬೇಕೆಂಬ ಆಸೆಯಿಂದಾಗಿ, ಮಕ್ಕಳೆಲ್ಲರಿಗೂ ಶಿಕ್ಷಣ ಕೊಡಿಸಬೇಕು ಎನ್ನುವುದು ಸ್ವಾತ್ರಂತ್ರ್ಯ ಹೋರಾಟಗಾರರಾಗಿದ್ದ ಬಾಬೂರಾವ್ ಅವರ ಆಸೆಯಾಗಿತ್ತು. ಅದರಲ್ಲೂ ತಮ್ಮ ಹಿರಿಯ ಮಗಳನ್ನು ನಾನು ಸರ್ಜನ್ ಮಾಡಿಸಬೇಕೆಂಬ ಆಸೆ ಹಾಗಾಗಿ ಅಂದಿನ ಕಾಲದಲ್ಲಿ ಕೇವಲ ಗಂಡು ಮಕ್ಕಳು ಮಾತ್ರ ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಬಾಬೂರಾವ್ ತಮ್ಮ ಏಳು ಹೆಣ್ಣ ಮಕ್ಕಳು ಮತ್ತು ಒಬ್ಬನೇ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿ ಓದಲು ಅನುವು ಮಾಡಿಕೊಟ್ಟರು.ವಿಜಯಲಕ್ಷ್ಮಿ ಅವರು ತಮ್ಮ ಶಾಲೆ ಮುಗಿಸಿದ ಕೂಡಲೇ, ನೇರವಾಗಿ ತಮ್ಮ ತಾಯಿಯವರ ಅಂಗಡಿಗೆ ಹೋಗಿ ಅಲ್ಲಿ ಅಮ್ಮನ ಕೊತೆ ತರಕಾರಿ ಮಾರಲು ಸಹಾಯ ಮಾಡುತ್ತಿದ್ದದ್ದಲ್ಲದೇ, ಅಲ್ಲೇ ಬಿಡುವು ಮಾಡಿಕೊಂಡು ಅಂಗಡಿಯಲ್ಲೇ ಓದುತ್ತಿದ್ದರು. ಅವರಮ್ಮಾ ತುಂಬಾ ಧೈರ್ಯವಂತೆ ಮತ್ತು ಗಟ್ಟಿಗಿತ್ತಿಯೂ ಕೂಡ ಆಗಿದ್ದ ಕಾರಣ, ಆಕೆ ದುಡಿದ ಹಣವನ್ನೆಲ್ಲಾ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಮೀಸಲಿಟ್ಟಿದ್ದರು.

vij5ಮಕ್ಕಳೂ ಸಹಾ ತಮ್ಮ ತಂದೆತಾಯಿಯರ ಆಸೆಗೆ ತಣ್ಣೀರು ಎರಚದೇ, ತಮಗೆ ಸಿಗುತ್ತಿದ್ದ ಸಕಲ ಸರ್ಕಾರೀ ಅನುಕೂಲಗಳನ್ನು ಸೂಕ್ತವಾಗಿ ಬಳಸಿಕೊಂಡು ಕಷ್ಟಪಟ್ಟು ಓದ ತೊಡತಿದರು. ಅದರಲ್ಲೂ ವಿಜಯಲಕ್ಷ್ಮಿ ಅವರು ಎಂಬಿಬಿಎಸ್ಗೆ ಪ್ರವೇಶ ಪಡೆಯುವ ವೇಳೆಯಲ್ಲಿ ಗುಲ್ಬರ್ಗದಲ್ಲಿ ತೀವ್ರವಾದ ಬರಗಾಲವಿದ್ದ ಕಾರಣ, ಆಕೆಯ ಕಾಲೇಜು ಪ್ರವೇಶಕ್ಕೆ ಹಣ ಹೊಂಚಲು ಆಗದೇ ಹೋದ ಸಂಧರ್ಭದಲ್ಲಿ, ಆಕೆಯ ತಾಯಿಯವರು ತಮ್ಮ ತಾಯಿಯವರ ಮಂಗಳಸೂತ್ರವನ್ನೇ ಮಾರಿ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಿದರು. ಅಷ್ಟೆಲ್ಲಾ ಕಷ್ಟ ಪಟ್ಟು ಹಣವನ್ನು ಹೊಂಚಿಕೊಂಡು ಎಂಬಿಬಿಎಸ್ ಸಂದರ್ಶನಕ್ಕಾಗಿ ಬೆಂಗಳೂರಿಗೆ ತಂದೆ ಮಗಳು ಬಂದಿದ್ದಂತಹ ಅ ಸಮಯದಲ್ಲಿ ಇದ್ದಕ್ಕಿದ್ದಂತೆಯೇ ಸಂದರ್ಶನವನ್ನು ಮುಂದೂಡಿದಾಗ, ಹೊರಗೆ ಸುರಿಯುತ್ತಿದ್ದ ಮಳೆಯಲ್ಲಿ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ಹೋದಾಗ, ಅವರ ತಂದೆ ಅಲ್ಲಿಯೇ ಹೊಸಾ ಕಟ್ಟದ ನಿರ್ಮಾಣ ಮಾಡುತ್ತಿದ್ದ ಕೂಲೀ ಕಾರ್ಮಿಕರ ಬಳಿ ತಮ್ಮ ಆಳಲನ್ನು ತೋಡಿಕೊಂಡು ಅವವರ ಪುಟ್ಟ ಮನೆಯಲ್ಲೇ ವಿಜಯಲಕ್ಷ್ಮಿಯವರನ್ನು ಮಲಗಿಸಿ ಅವರ ತಂದೆಯವರು ಚಳಿ ಮಳೆ ಮತ್ತು ಗಾಳಿಯನ್ನೂ ಲೆಖ್ಖಿಸದೇ, ಇಡೀ ರಾತ್ರಿ ನಿದ್ರಿಸದೇ ಮನೆಯ ಹೊರಗೇ ಕಾದಿದ್ದದ್ದು ವಿಜಯಲಕ್ಷ್ಮಿ ಆವರ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲವಂತೆ.

vij21980ರಲ್ಲಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯಕೀಯ ಪದವಿ ಮುಗಿಸಿ, 1985ರಲ್ಲಿ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾಗಿ ಸೇರಿಕೊಂಡರು. ಆದೇ ಸಮಯದಲ್ಲಿ ತಮ್ಮ ಜೀವನದ ಬೆನ್ನೆಲುಬಾಗಿದ್ದ ಅವರ ತಾಯಿಯವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಿಧನರಾದಾಗಲೇ ಡಾ. ವಿಜಯಲಕ್ಷ್ಮೀ ಆವರಿಗೆ ಕ್ಯಾನ್ಸರ್ ಎಂದರೇನು? ಎಂಬುದರ ಕುತೂಹಲ ಮೂಡಿ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಅಧ್ಯಯನಕ್ಕಾಗಿ, 1989ರಲ್ಲಿ ಮುಂಬಯಿನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ತರಬೇತಿ ನಂತರ ಅವರು 1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಎಫ್ಎಐಎಸ್ ಫೆಲೋಶಿಪ್ಗೆ ಪಾತ್ರರಾದರು. ನಂತರ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಸೇರಿಕೊಂಡು ಮುಂದಿನ ದಿನಗಳಲ್ಲಿ ಅದೇ ವಿಭಾಗದ ಮುಖ್ಯಸ್ಥಯಾಗಿ ಅಂತಿಮವಾಗಿ ಅದೇ ಸಂಸ್ಥೆಯ ನಿರ್ದೇಶಕಿಯೂ ಆಗಿ ನಿವೃತ್ತರಾದರು. ತಮ್ಮ ವೃತ್ತಿ ಜೀವನದಲ್ಲಿ ಸ್ತನ ಕ್ಯಾನ್ಸರ್ ಕುರಿತು ಅನೇಕ ಜಾಗೃತಿ ಅಭಿಯಾನಗಳನ್ನು ನಡೆಸಿದ್ದಲ್ಲದೇ, ಕ್ಯಾನ್ಸರ್ ಕುರಿತಾಗಿ ಸಂಶೋಧನಾತ್ಮಕ ಲೇಖನ-ಪುಸ್ತಕಗಳನ್ನು ಪ್ರಕಟಿಸಿದರು. ತಮ್ಮ ಸೋದರನಾದ ಅಜಯ್ ಆವರನ್ನು ಹೆಸರಾಂತ ವಕೀಲರನ್ನಾಗಿ ಮಾಡಿಸಿದ್ದಲ್ಲದೇ ತಮ್ಮ ಉಳಿದ ಏಳು ಜನ ಸೋದರಿಯರ ವಿದ್ಯಾಭ್ಯಾಸಗಳಿಗಾಗಿಯೇ ಅವಿವಾಹಿತರಾಗಿ ಕುಟುಂಬದ ಸಂಪೂರ್ಣ ಜವಾಬ್ಧಾರಿಯನ್ನು ಹೊತ್ತುಕೊಂಡು ಅವರೆಲ್ಲರಿಗೂ ಉತ್ತಮವಾದ ಬದಕನ್ನು ವಿಜಯಲಕ್ಷ್ಮಿ ಅವರು ಕಟ್ಟಿಕೊಟ್ಟಿದ್ದು ನಿಜಕ್ಕೂ ಅಭಿನಂದನಾರ್ಹವೇ ಸರಿ.

vij6ಕಿದ್ವಾಯಿ ಸಂಸ್ಥೆಯಲ್ಲಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಿಜಯಲಕ್ಷ್ಮಿ ಅವರು ಬೆಳಗ್ಗೆ 6 ಗಂಟೆಗೆಲ್ಲಾ ಕಿದ್ವಾಯಿ ಆಸ್ಪತ್ರೆಗೆ ಬರುತ್ತಿದ್ದರು. ಅಷ್ಟು ದೊಡ್ಡ ಹುದ್ದೆಯಲ್ಲಿದ್ದರೂ, ಒಂದು ಚೂರು ಹಮ್ಮು ಬಿಮ್ಮು ಇಲ್ಲದೇ ಸಾಧಾರಣ ಸೀರೆಯನ್ನು ಉಟ್ಟುಕೊಳ್ಳುತ್ತಿದ್ದದ್ದಲ್ಲದೇ, ಕೈಯಲ್ಲಿ ವಾಚ್ ಸಹಾ ಕಟ್ಟುತ್ತಿರಲಿಲ್ಲ. ಅಲ್ಲಿನ ಜನರ ಚಟುವಟಿಕೆಗಳನ್ನು ನೋಡಿಯೇ ಇಷ್ಟು ಗಂಟೆಯಾಗಿರಬಹುದು ಎಂದು ತಿಳಿಯುತ್ತಿದ್ದರಂತೆ. ಪುರುಷರ ವಿಭಾಗವೆಂದೇ ಖ್ಯಾತಿ ಪಡೆದಿದ್ದ ಸರ್ಜಿಕಲ್ ಆಂಕಾಲಜಿ ತುಂಬಾ ಕಷ್ಟದ ಕೆಲಸ ಎನಿಸಿದರೂ, ಬಹಳ ಜಾಗರೂಕತೆಯಿಂದಲೇ ಕೆಲಸವನ್ನು ನಿರ್ವಹಿಸಿದರು.

ಅವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಯಾವ ರೋಗಿ ಬಂದರೂ ಅವರೆಲ್ಲರಿಗೂ ಬೆಡ್ ಸಿಗುವವರೆಗೂ ಅವರೊಂದಿಗೆ ಇರುತ್ತಿದ್ದದ್ದನ್ನು ನೋಡುತ್ತಿದ್ದವರಿಗೆ ಅವರ ಮತ್ತು ಅವರ ವ್ಯಕ್ತಿತ್ವದ ಮೇಲೆ ಅಪಾರವಾದ ಗೌರವನ್ನು ಮೂಡಿಸುತ್ತಿತ್ತು. ಅನೇಕ ಬಾರಿ ಸರ್ಜರಿ ಮಾಡುವ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಊಟವನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲವಾಅರೂ ಅವರೆಂದೂ ತಮ್ಮ ವೃತ್ತಿಯಿಂದ ವಿಮುಖರಾದ ಉದಾಹರಣೆಯೇ ಇಲ್ಲ. ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಕಾಲವನ್ನು ಸ್ತನಕ್ಯಾನ್ಸರ್ಗೆ ಚಿಕಿತ್ಸೆ ಕೊಡುವಲ್ಲಿಯೇ ತಮ್ಮ ಸೇವೆಯನ್ನು ಮುಡಿಪಾಗಿಟ್ಟರು.

ಎಲ್ಲರ ಕಷ್ಟಗಳನ್ನು ನಿವಾರಿಸಲೆಂದೇ ಸಾಮಾನ್ಯ ಗೊಲ್ಲರ ಮೆನೆಯಲ್ಲಿ ಹುಟ್ಟಿ ಬೆಳಿದ ಭಗವಾನ್ ಶ್ರೀ ಕೃಷ್ಣನನ್ನು ಬಹಳವಾಗಿ ನಂಬುವ ಡಾ. ವಿಜಯಜಲಕ್ಷ್ಮಿ ಅವರು ಶ್ರೀ ಕೃಷನೇ ಗೀತೆಯಲ್ಲಿ ಹೇಳಿದಂತೆ ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷು ಕದಾಚನ ಅರ್ಥಾತ್ ನಿನ್ನ ಕೆಲಸವನ್ನು ನೀನು ಸರಿಯಾಗಿ ಮಾಡಿ ಅದರ ಫಲಾಫಲಗಳನ್ನು ಭಗವಂತನ ಮೇಲೆ ಬಿಡು ಎಂಬುದನ್ನೇ ಆದರ್ಶವಾಗಿ ಇಟ್ಟುಕೊಂಡು ಭಗವಾನ್ ಶೀ ಕೃಷ್ನನನ್ನು ಭಕ್ತಿಯಿಂದ ಆರಾಧಿಸುತ್ತಾ ತಮ್ಮ ಜವಾಬ್ಧಾರಿಯನ್ನು ನಿಷ್ಠೆಯಿಂದ ಮಾಡುತ್ತಿದ್ದದ್ದು ಬಹಳ ವಿಶೇಷವಾಗಿದೆ. ಸ್ವಾಮೀ ವಿವೇಕಾನಂದರನ್ನು ಅದರ್ಶವಾಗಿ ಇಟ್ಟುಕೊಂಡಿರುವ ಡಾ. ವಿಜಯಲಕ್ಷ್ಮಿಯವರು ಇತ್ತೀಚೆಗೆ ವರ್ಷದಲ್ಲಿ ಒಂದೂ ದಿನವೂ ರಜೆಯನ್ನು ತೆಗೆದುಕೊಳ್ಳದೇ, ಪ್ರತೀ ದಿನ 18ಗಳ ಕಾಲ ದೇಶಕ್ಕಾಗಿ ದುಡಿಯುವ ಪ್ರಧಾನಿ ನರೇಂದ್ರ ಮೋದಿಯವರನ್ನೂ ಸಹಾ ಇಷ್ಟ ಪಡುತ್ತಾರೆ.

ಸರಕಾರಿ ಆಸ್ಪತ್ರೆಗಳಲ್ಲಿ ನುರಿತ ಹಾಗೂ ಅನುಭವಿ ವೈದ್ಯರು ಇರುವುದರಿಂದ ಜನ ಸಾಮನ್ಯರೆಲ್ಲರೂ ಸರ್ಕಾರೀ ಆಸ್ಪತ್ರೆಗಳ ಸೌಲಭ್ಯವನ್ನು ಪಡೆಯುವ ಮೂಲಕ ಆರೋಗ್ಯವಾಗಿ ಇರುವುದರ ಜೊತೆಗೆ ಹಣವನ್ನೂ ಉಳಿಸಬಹುದು ಎಂಬುದನ್ನು ಸದಾ ಕಾಲಾವೂ ಎಲ್ಲಾ ಕಡೆಯಲ್ಲೂ ಹೇಳುವ ವಿಜಯಲಕ್ಷ್ಮಿಯವರು ಅವರ ಮಾತಿಗೆ ತಕ್ಕಂತೆ ಕೆಲ ವರ್ಷಗಳ ಹಿಂದೆ ಅವರಿಗೇ ಹೃದಯಾಘಾತವಾದಾಗ ತಮಗೆ ಪರಿಚಯವಿದ್ದ ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯದೇ ಸರ್ಕಾರೀ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಎಲ್ಲರಿಗೂ ಮಾದರಿಯಾಗಿರುವುದು ಅಭಿನಂದನಾರ್ಹವಾಗಿದೆ.

ವೈದ್ಯಕೀಯ ಸೇವೆಯಲ್ಲಿ ಅಪರಿಮಿತವಾದ ಸಾಧನೆ ಮಾಡಿರುವುದನ್ನು ಮೆಚ್ಚಿ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದು ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.

  • ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,
  • ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
  • ಅಂತಾರಾಷ್ಟ್ರೀಯ ವಲಯದ ರಾಷ್ಟ್ರೀಯರತ್ನ,
  • ಕೆಂಪೇಗೌಡ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

vij3ಕಿದ್ವಾಯಿ ಸಂಸ್ಥೆಯಿಂದ ವಯೋಸಹಜವಾಗಿಯೇ ನಿವೃತ್ತರಾದ ಖಾಸಗೀ ಆಸ್ಪತ್ರೆಗಳಿಗೆ ಸೇರಿಕೊಳ್ಳದೇ ಅಥವಾ ಮನೆಯಲ್ಲೇ ಸುಮ್ಮನಿರದೇ, ಸಮಾಜ ಸೇವೆ ಮಾಡುವ ಉದ್ದೇಶದಿಂದ ವಿಶ್ವಹಿಂದೂ ಪರಿಷತ್ತಿನ ಸದಸ್ಯೆಯಾಗಿರುವುದಲ್ಲದೇ, ಸದ್ಯಕ್ಕೆ ವಿಎಚ್‌ಪಿಯ ಒಂಬತ್ತು ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ವಿಜಯಲಕ್ಷ್ಮಿ ದೇಶಮಾನೆ ಕೂಡ ಒಬ್ಬರಾಗಿದ್ದಾರೆ. 2017 ರಲ್ಲಿ VHPಯ ಕರ್ನಾಟಕ ಪ್ರದೇಶದ ಅಧ್ಯಕ್ಷರಾಗುವ ಮೂಲಕ, ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಡಿಸೆಂಬರ್ 20220 ರಲ್ಲಿ, ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನ ಸಮಿತಿಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕರ್ನಾಟಕ ಅಧ್ಯಾಯದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

voj4ನಿವೃತ್ತಿಯ ನಂತರವೂ ತನ್ನ ಕೆಲಸ ಅರ್ಧ ಮಾತ್ರ ಮುಗಿದಿದ್ದು ಇನ್ನೂ ಹತ್ತಾರು ಸಾಮಾಜಿಕ ಸೇವಾ ಚಟುವಟಿಕೆಗಳು, ಜಾಗೃತಿ ಶಿಬಿರಗಳು, ಸಂಶೋಧನಾ ಕಾರ್ಯಗಳು ಮತ್ತು ಹಳ್ಳಿಗಳಲ್ಲಿ ಶಿಕ್ಷಣ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೇ, ಇದೇ ಚಟುವಟಿಕೆಗಳಿಗಾಗಿಯೇ ತಿಂಗಳ 15 ದಿನಗಳನ್ನು ಮೀಸಲಿಟ್ಟಿದ್ದಾರೆ. ಉಳಿದದ 15 ದಿನಗಳಲ್ಲಿ ಮನೆಯಲ್ಲೇ ಅಗತ್ಯ ಇರುವವರಿಗೆ ಚಿಕಿತ್ಸೆ ಮತ್ತು ಸಮಾಲೋಚನೆಯನ್ನು ಉಚಿತವಾಗಿ ನೀಡುತ್ತಿರುವುದು ಅತ್ಯಂತ ಗಮನಾರ್ಹವಾಗಿದೆ.

ಕಿತ್ತು ತಿನ್ನುವ ಬಡತನ, ಅಪಮಾನ, ಸಾಮಾಜಿಕ ಅಸಡ್ಡೆಯ ನಡುವೆಯೂ ತಳ ಸಮುದಾಯದ ಹೆಣ್ಣುಮಗಳೊಬ್ಬಳು ಈ ದೇಶದ ಗಣ್ಯ ಮಾನ್ಯಳಾಗಿ ಅರಳಿ ನಿಂತಿದ್ದಲ್ಲದೇ, ಜನ ಸೇವೆಯೇ ಜನಾರ್ದನ ಸೇವೆ, ನೊಂದವರ ಕಂಬನಿ ಒರೆಸುವುದೇ ದೈವಾರಾಧನೆ ಎಂಬುದಕ್ಕೆ ನಿಜರೂಪವಾಗಿ, ಸೇವೆ ಎಂಬ ಪದದ ಅನ್ವರ್ಥವಾಗಿ ಸಮಾಜಕ್ಕಾಗಿಯೇ ಪ್ರಾಮಾಣಿಕತೆ, ದಕ್ಷತೆ ಮತ್ತು ಕಠಿಣ ಪರಿಶ್ರಮದ ಮೂಲಕ ತಮ್ಮ ಬದುಕನ್ನೇ ಮೀಸಲಾಗಿಟ್ಟಿರುವ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ, ರೋಗಿಗಳ ಪಾಲಿನ ಸಾಕ್ಷಾತ್ ಧನ್ವಂತರಿಯಾಗಿರುವ ಡಾ. ವಿಜಯಲಕ್ಷ್ಮಿ ದೇಶಮಾನೆಯವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಎಂದರೆ ತಪ್ಪಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s