ಭಾರತ ದರ್ಶನ ಶ್ರೀ ವಿದ್ಯಾನಂದ ಶಣೈ

ರಾಮಾಯಣದಲ್ಲಿ ರಾಮ ರಾವಣನನ್ನು ಸಂಹರಿಸಿ, ಸೀತಾ ಮಾತೆಯನ್ನು ಅಶೋಕವನದಿಂದ ಅಯೋಧ್ಯೆಗೆ ಕರೆದೊಯ್ಯಲು ತರದ ಸಂದರ್ಭದಲ್ಲಿ, ತಮ್ಮ ಲಕ್ಷಣ ಅಣ್ಣನ ಬಳಿ ಬಂದು ಅಣ್ಣಾ, ನಾವು ಅಯೊಧ್ಯೆ ಬಿಟ್ಟು 14 ವರ್ಷಗಳಾಗಿವೆ. ಈಗ ಅಯೋಧ್ಯೆ ಹೇಗಿದೆಯೋ ಏನೋ ನಮಗೆ ಗೊತ್ತಿಲ್ಲ. ಮರಳಿ ನಮ್ಮ ಊರಿಗೆ ಹೋದಾಗ ತಮ್ಮ ಭರತ ನಿಮಗೆ ಸಿಂಹಾಸನವನ್ನು ಕೊಡುತ್ತಾನೋ ಇಲ್ಲವೋ ಅದು ಸಹಾ ನಮಗೆ ಗೊತ್ತಿಲ್ಲ. ಹೇಗೂ ನಾವು ರಾವಣನನ್ನು ಕೊಂದು ಈ ಲಂಕಾನಗರಿಯನ್ನು ತಮ್ಮ ಕೈವಶ ಮಾಡಿಸಿಕೊಂಡಿದ್ದೇವೆ. ನಾವು ಇಲ್ಲಿಯೇ ರಾಜ್ಯಭಾರ ಮಾಡಿಕೊಂಡು ಸುಖಃವಾಗಿ ಇದ್ದು ಬಿಡೋಣ ಎಂದಾಗ, ಪ್ರಥಮ ಬಾರಿಗೆ ತಮ್ಮನ ಮೇಲೆ ಕೋಪದಿಂದ
ಅಪಿ ಸ್ವರ್ಣಮಯೀ ಲಂಕಾ ನಮೇ ಲಕ್ಷ್ಮಣ ರೋಚತೇ | ಜನಜೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ || ಎಂಬ ಮಾತನನ್ನು ಹೇಳುತ್ತಾನೆ.is kkf .
ಅಯ್ಯಾ ಲಕ್ಷ್ಮಣಾ, ಈ ಲಂಕಾನಗರ ಬಂಗಾರದಿಂದ ನಿರ್ಮಿತವಾಗಿದ್ದರೂ ಅದನ್ನು ಇಷ್ಟಪಡಬಾರದು. ನಮಗೇನಿದ್ದರೂ ನಮ್ಮ ಜನನೀ ಮತ್ತು ಜನ್ಮ ಭೂಮಿಯೇ ಶ್ರೇಷ್ಠ ಮತ್ತು ಅದು ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎಂದು ತಮ್ಮ ಮಾತೃಭೂಮಿಯ ಬಗ್ಗೆ ಲಕ್ಷ್ಮಣನಿಗೆ ತಿಳಿ ಹೇಳುತ್ತಾನೆ.

ಇಂತಹ ಶ್ರೇಷ್ಥವಾದ ಉದಾಹರಣೆ,, ಇಂದಿನ ಯುವಜನತೆಗೆ ನಮ್ಮ ದೇಶದ ಬಗ್ಗೆ ಅಭಿಮಾನವೇ ಇರದೇ, ಬ್ರೀಟೀಷರು ಕಲಿಸಿ ಕೊಟ್ಟು ಹೋದಂತೆ, ಭಾರತ ಎನ್ನುವುದು ಅತ್ಯಂತ ಬಡ ರಾಷ್ಟ್ರ. ಇದು ಹಾವಾಡಿಗರ ರಾಷ್ಟ್ರ. ಭಾರತೀಯರು ಶಕ್ತಿಹೀನರು ಎಂದೇ ನಂಬಿರುವಾಗ, ಸದ್ಯಕ್ಕೆ ಆಟಕ್ ನಿಂದ ಕಟಕ್ ವರೆಗೂ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಇರುವ ಈ ಭಾರತ ಮಾತೆ ಎಷ್ಟು ಸಿರಿವಂತಳು? ಅಕೆಯ ಒಡಳಲ್ಲ um ಎಂತೆಂತಹ ವೀರ ಪುತ್ರರು ಜನಿಸಿದ್ದಾರೆ. ಭಾರತವನ್ನು ರತ್ನಗರ್ಭವಸುಂಧರೆ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ಅತ್ಯಂತ ರೋಜಕವಾಗಿ ಮತ್ತು ಅಷ್ಟೇ ಪ್ರೇರಣಾದಾಯಕವಾಗಿ ಎಳೆ ಎಳೆಯಾಗಿ ಬಿಡಿಸಿ ಭಾರತದ ನೈಜ ಇತಿಹಾಸವನ್ನು ಭಾರತ ದರ್ಶನ ಎಂಬ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಯುವಕರಿಗೆ ದೇಶದ ಬಗ್ಗೆ ಸ್ವಾಭಿಮಾನ ಮೂಡುವಂತೆ ನಿಸ್ವಾರ್ಥವಾಗಿ ಮತ್ತು ಎಲೆಮರೆಕಾಯಿಯಂತೆ ಸೇವೆ ಮಾಡಿದವರೇ ಶ್ರೀ ವಿದ್ಯಾನಂದ ಶಣೈ.. ಶ್ರೀಯುತರ ಯಶೋಗಾಥೆಯೇ ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯ ಸಾರವಾಗಿದೆ.

ದೇಶಭಕ್ತ, ಅಪ್ರತಿಮ ಇತಿಹಾಸಕಾರ, ಅದ್ಭುತ ಲೇಖಕ ಮತ್ತು ಮಹಾನ್ ಉಪನ್ಯಾಸಕಾರರಾಗಿದ್ದ ಶ್ರಿ ಬಿ ವಿ ವಿದ್ಯಾನಂದ ಶೆಣೈ ಅವರು ಹುಟ್ಟಿದ್ದು 1951 ಶಂಕರಾಚಾರ್ಯದಿಂದ ಸ್ಥಾಪಿಸಲ್ಪಟ್ಟಿರುವ ಶಾರದೆಯ ನೆಲೆಯಾದ ಶೃಂಗೇರಿಯಲ್ಲಿ. ಶೃಂಗೇರಿಯಲ್ಲಿ ಬಾಳೇಹಣ್ಣಿನ ವ್ಯಾಪಾರಿಗಳಾಗಿದ್ದ ಶ್ರಿ ವೈಕುಂಠ ಶಣೈ ಮತ್ತು ಜಯಮ್ಮ ದಂಪತಿಗಳ 13 ಮಕ್ಕಳಲ್ಲಿ ಕಡೆಯವರು.15-16ನೇ ಶತಮಾನದಲ್ಲಿ ಪೋರ್ಚುಗಿಸರ ಧಾಳಿಗೆ ನಲುಗಿ ಗೋವಾದಿಂದ ಕರ್ನಾಟಕ ಮತ್ತು ಕೇರಳದ ಕರಾವಳಿ ಪ್ರದೇಶಕ್ಕೆ ತಮ್ಮ ತಮ್ಮ ಕುಲದೇವರುಗಳನ್ನು ಹೊತ್ತುಕೊಂಡ ವಲಸೆ ಬಂದ ಸಾರಸ್ವತರಲ್ಲಿ ಶಣೈ ಅವರ ಕುಟುಂಬವೂ ಒಂದಾಗಿತ್ತು ಮತ್ತು ಅವರ ಮಾತೃಭಾಷೆ ಕೊಂಕಣಿಯಾಗಿತ್ತು. ಆಟ ಪಾಠಗಳಲ್ಲಿ ಬಾಲ್ಯದಿಂದಲೂ ಅತ್ಯಂತ ಚುರುಕಾಗಿದ್ದ ವಿದ್ಯಾನಂದರು ಮೂರ್ತಿ ಚಿಕ್ಕದಾಗಿದ್ದರೂ ಕೀರ್ತಿ ದೊಡ್ಡದು. ಚಿಕ್ಕಂದಿನಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಿಂದಾಗಿ ನಾಡು ಮತ್ತು ನುಡಿಗಳ ಬಗ್ಗೆ ಅಪಾರವಾದ ಕಳಕಳಿ ಹೊಂದಿದ್ದವರು. ಅತ್ಯಂತ ಬಡತನದಲ್ಲೂ ವಿದ್ಯಾನಂದರ ಹಿರಿಯಣ್ಣ ಉಪೇಂದ್ರ ಶಣೈ ಕಷ್ಟ ಪಟ್ಟು ಓದಿ ವೈದ್ಯರಾಗಿ ಇನ್ನೇನು ಕುಟುಂಬದ ನಿರ್ವಣೆ ಮಾಡುತ್ತಾರೆ ಎಂದು ಭಾವಿಸಿರುವಾಗಲೇ, ಉಪೇಂದ್ರ ಶಣೈ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಹೋದ ಕಾರಣ, ಕುಟುಂಬದ ನಿರ್ವಹಣೆ ವಿದ್ಯಾನಂದರ ಮೇಲೇ ಬಿದ್ದ ಕಾರಣ, ತಮ್ಮ ಓದಿನ ಜೊತೆಗೇ ಮನೆ ಪಾಠವನ್ನು ಹೇಳಿಕೊಡುತ್ತಾ ಉತ್ತಮ ದರ್ಜೆಯಲ್ಲಿ ಬಿಕಾಂ ಮುಗಿಸಿ CA ಮಾಡಲು ಮುಂದಾಗುತ್ತಿದ್ದ ಸಮಯದಲ್ಲೇ 1975-77ರ ಸಮಯದಲ್ಲಿ ಅಂದಿನ ಪ್ರಧಾನ ಮಂತ್ರಿ ಶೀಮತಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುತ್ತಾರೆ.

ಬಿಸಿ ರಕ್ತದ ತರುಣರಾಗಿದ್ದ ವಿದ್ಯಾನಂದರು ತಮ್ಮದೇ ಆದ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡು ತುರ್ತುಪರಿಸ್ಥಿತಿಯ ವಿರುದ್ಧ ಜನಾಂದೋಲನ, ಹೋರಾಟ ಮತ್ತು ಸಭೆಗಳನ್ನು ನಡೆಸಿದ್ದಲ್ಲದೇ ಸರ್ಕಾರದ ನೀತಿಯನ್ನು ವಿರೋಧಿಸಿ ಲೇಖನಗಳನ್ನು ಬರೆದ ಫಲವಾಗಿ ಸುಮಾರು 18 ತಿಂಗಳುಗಳ ಕಾಲ ಸೆರೆಮನೆಯ ವಾಸ ಅನುಭವಿಸುತ್ತಾರೆ. ಇದೇ ಸಮಯದಲ್ಲಿಯೇ ಅವರ ಮನಃಪರಿವರ್ತನೆಯಾಗಿ ಅವರೂ ಸಹಾ ತಮ್ಮ ಹಿರಿಯಣ್ಣನಂತೆ ಸಂಘದ ಪೂರ್ಣಾವಧಿಯ ಕಾರ್ಯಕರ್ತರಾಗಿ ರಾಷ್ಟ್ರೋತ್ಥಾನದಲ್ಲಿ ತಮ್ಮ ಆರಂಭದ ದಿನಗಳನ್ನು ಕಳೆಯುತ್ತಾರೆ. ಸಂಘದ ಹಿರಿಯ ಪ್ರಚಾರಕರಾಗಿದ್ದ ಶ್ರೀ ನ. ಕೃಷ್ಣಪ್ಪನವರು ದೇಶದ ವಿಶೇಶತೆ ಸಂಸ್ಕೃತಿಯ ಮಹತ್ವ ಮತ್ತು ದೇಶದ ಶೇಷ್ಟತೆಯ ಕುರಿತಾಗಿ ಮಾಡುತ್ತಿದ್ದ ಬೌದ್ಧಿಕ್ ವಿದ್ಯಾನಂದರ ಮೇಲೆ ಬಹಳಷ್ಟು ಪ್ರಭಾವ ಬೀರಿದ ಪರಿಣಾಮ, ರಾಷ್ಟ್ರೋತ್ಥಾನದಲ್ಲಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದಾಗ, ಭಾರತದ ಇತಿಹಾಸದ ಬಗ್ಗೆ ಕಥೆ ಹೇಳುವಾಗ, ಭಾರತ ಭೂಪಟವನ್ನು ತೋರಿಸುತ್ತಾ, ಭಾರತ ದೇಶದ ಸಮಗ್ರ ಪರಿಚಯ ಮಾಡಿಕೊಡುತ್ತಿದ್ದದ್ದೇ ಮುಂದಿನ ದಿನಗಳಲ್ಲಿ ಪರಿಷ್ಕೃತಗೊಂಡು ಭಾರತ ದರ್ಶನ ಎಂಬ ಸಂಪೂರ್ಣ ಕಾರ್ಯಕ್ರಮವಾಗಿ ಪರಿವರ್ತನೆಗೊಂಡಿತು.

ಭಾರತ ದೇಶದ ಹಿರಿಮೆ ಮತ್ತು ಗರಿಮೆಯನ್ನು ಹೇಳುವ ವಿಷ್ಣುಪುರಾಣದಲ್ಲಿ ಬರುವ ಈ ಶ್ಲೋಕವೇ ಭಾರತ ದರ್ಶನದ ಪ್ರೇರಣಾದಾಯಿಯಾಗಿತ್ತು.

ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತು ಯೇ ಭಾರತ ಭೂಮಿಭಾಗೇ | ಸ್ವರ್ಗಾಪವರ್ಗಾಸ್ಪದಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್ ||
ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ | ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ||

shenoy3

ಭಾರತ ದರ್ಶನವನ್ನು ಆರಂಭಿಸುವ ಮುನ್ನಾ ಭಾರತದ ಇತಿಹಾಸ ಮತ್ತು ಪುರಾಣಗಳ ಬಗ್ಗೆ ಸಂಪೂಣ ಅಧ್ಯಯನ ನಡೆಸಿ ಭಾರತದ ಕಡಲ ತಡಿಯಿಂದ ಹೈಮಾಚಲದವರೆಗೆ, ಕಚ್ ಇಂದ ಕಾಮರೂಪದವರೆಗೆ ಭಾರತದ ಭವ್ಯಪರಂಪರೆ, ಪುರಾಣೇತಿಹಾಸಗಳಲ್ಲಿ ದಾಖಲಾದ ಪವಿತ್ರಸ್ಥಳಗಳು, ನದಿಸಮೂಹ, ಭರತ ಖಂಡವನ್ನು ಸುದೃಢ – ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯ ಮೈತಳೆದಂಥ ಮಹಾಪುರುಷರು, ಜ್ಞಾನ-ಶೌರ್ಯಗಳನ್ನು ಮೆರೆದ ವನಿತೆಯರು. ಇವೆಲ್ಲವನ್ನೂ ಅತ್ಯಂತ ಮನ್ಯೋಜ್ಞವಾಗಿ ಮತ್ತು ಪ್ರತಿಯೊಂದು ಪದ ಬಳಕೆಗೂ ಒತ್ತು ಕೊಟ್ಟು ಮಾಡುತ್ತಿದ್ದ ಪೂಜ್ಯ ವಿದ್ಯಾನಂದ ಶೆಣೈ ಅವರ ಪ್ರವಚನ ಕೇಳುವುದೆಂದರೆ ಕರ್ಣಾನಂದ. ಅದೊಂದು ರೀತಿ ಸಂಗೀತವನ್ನು ಅಂತರಾಳದಿಂದ ಅನುಭಾವಿಸುವಂತಹ ಅಪೂರ್ವ ಸಂಯೋಗ. ಅವರ ವಿದ್ವತ್ತು, ಸ್ಪಷ್ಟತೆ, ಇಂಪಾದ ಧ್ವನಿ, ಅಪೂರ್ವ ಸಾಹಿತ್ಯಕ ಮೌಲ್ಯ ಮತ್ತು ಅವೆಲ್ಲವನ್ನೂ ಮೀರಿಸುವಂತಹ ಅದಮ್ಯ ದೇಶಭಕ್ತಿ, ಕೇಳುಗನೊಂದಿಗೆ ಅಪೂರ್ವ ಅನುಭೂತಿ ಇವೆಲ್ಲಾ ಇನ್ನಿಲ್ಲದಂತೆ ನೆರೆದಿದ್ದವರ ಹೃನ್ಮನಗಳನ್ನು ಸೆಳೆಯ ತೊಡಗಿತು. ಇಂತಹ ಶೇಷ್ಠ ಭಾರತದಲ್ಲಿ ಜನಿಸಿದ ನಾವು ಎಷ್ಟು ಪುಣ್ಯವಂತರು ಎಂದು ಕೇಳಿದವರೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತಿತ್ತು ಎಂದರೂ ತಪ್ಪಾಗದು.

shenoy1

ಯಾರಿಗೆ ಅವರ ದೇಶದ ಇತಿಹಾಸ ಅರಿವು ಇರುವುದಿಲ್ಲವೋ, ಅಂತಹವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬುದನ್ನು ಬಲವಾಗಿ ನಂಬಿದ್ದ ವಿದ್ಯಾನಂದರು, ತಮ್ಮ ಭಾರತ ದರ್ಶನದಲ್ಲಿ, ಭಾರತದ ಮಾತೃಸ್ವರೂಪ, ಪಿತೃಸ್ವರೂಪ, ಗುರು ಸ್ವರೂಪಗಳ ಪರಿಚಯವಲ್ಲದೇ, ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು, ಪ್ರಮುಖ ತೀರ್ಥಗಳು, ಅಗಲಿದ ಕ್ಷೇತ್ರಗಳು, ಅಖಂಡ ಭಾರತದ ಆರಾಧನೆಯ ಜೊತೆಗೆ ನಂತರ ಬ್ರಿಟೀಷರು ಹೇಗೆ ಒಂದೋಂದೇ ರಾಜ್ಯಗಳನ್ನು ಮೋಸದಿಂದ ತಮ್ಮ ಕೈವಶಕ್ಕೆ ತೆಗೆದುಕೊಂಡರು ಎಂಬುದನ್ನು ರೋಚಕವಾಗಿ ವಿವರಿಸುತ್ತಾ, ಕೈಯ್ಯಲ್ಲಿ ಹಿಡಿದಿರುತ್ತಿದ್ದ ಕೋಲಿನಿಂದ ಎದುರಿಗಿದ್ದ ಭೂಪಟದಿಂದ ಕೈತಪ್ಪಿ ಹೋದ ಭೂಭಾಗವನ್ನು ಉದುರಿಸುತ್ತಿದ್ದರೆ, ಎದುರಿಗಿದ್ದವರ ಮೈ ಝಲ್ ಎನಿಸುತ್ತಿದ್ದಂತೂ ಸುಳ್ಳಲ್ಲ.

bharaDarshana

ಆರಂಭದಲ್ಲಿ ಕೇವಲ ಕನ್ನಡದಲ್ಲಿ ಮಾತ್ರವೇ ಮಾಡುತ್ತಿದ್ದ ಭಾರತ ದರ್ಶನ ಉಪನ್ಯಾಸ ಮಾಲಿಕೆಗಳು ನಂತರ ಕೊಂಕಣಿ ಮತ್ತು ಹಿಂದೀ ಭಾಷೆಗಳಲ್ಲಿಯೂ ಮಾಡತೊಡಗಿದಾಗ ವಿದ್ಯಾನಂದರ ಕೀರ್ತಿ ದೇಶಾದ್ಯಂತ ಹರಡಿದ ಕಾರಣ ದೇಶದ ನಾನಾ ಕಡೆಗಳಿಗೆ ಪ್ರವಾಸ ಮಾಡಿ ಆವರೆಲ್ಲರಿಗೂ ನಿಜವಾದ ಭಾರತ ದರ್ಶನವನ್ನು ಮಾಡಿಸತೊಡಗಿದರು. ಹೀಗೆ 1100ಕ್ಕೂ ಅಧಿಕ ಭಾರತ ದರ್ಶನವಲ್ಲದೇ, ದೇಶದ ಇತಿಹಾಸ ಕುರಿತಾದ ಅನೇಜ ಉಪನ್ಯಾಸಗಳನ್ನು ಮಾಡುತ್ತಿದ್ದಾಗಲೇ ಅವರ ಅರೋಗ್ಯದಲ್ಲಿ ಸಮಸ್ಯೆ ಕಾಣತೊಡಗಿತು. ಅಗ್ಗಾಗ್ಗೆ ವಿಪರೀತ ತಲೆ ನೋವಿನಿಂದ ಬಳಲುತ್ತಾ, ಕಾರ್ಯಕ್ರಮವನ್ನು ನೀಡಲು ತೊಂದರೆಯಾದಾಗ ಅವರು ಹೊರತಂದಿದ್ದದ್ದೇ ಭಾರತ ದರ್ಶನ ಧ್ವನಿ ಸುರುಳಿಗಳು, ಅಂದಿನ ಕಾಲಕ್ಕೆ ಬಿಸಿ ದೋಸೆಯಂತೆ ಒಂದು ಲಕ್ಷಕ್ಕೂ ಅಧಿಕ ಕ್ಯಾಸೆಟ್ ಗಳು ಮಾರಾಟವಾಗಿ ದಾಖಲೆ ನಿರ್ಮಿಸಿದ್ದಲ್ಲದೇ, ನಂತರ ಸಿಡಿ ಮತ್ತು ಈಗ YouTubeನಲ್ಲಿಯೂ ಲಭ್ಯವಿದ್ದು ಅದರ ಮೂಲಕ ಭಾರತ ದರ್ಶನ ಎಲ್ಲರ ಮನ ಮತ್ತು ಮನೆಗಳನ್ನೂ ತಲುಪಿ ಅವರ ಹೃದಯಗಳನ್ನು ಪುನೀತಗೊಳಿಸಿದರು ಎಂದರೂ ಅತಿಶಯವಲ್ಲ.

shenoy1

ವಿದ್ಯಾನಂದರ ಮನೋಲ್ಲಾಸಕರ ಉಪನ್ಯಾಸಕ್ಕೆ ಮಾರುಹೋದವರೇ ಇಲ್ಲ. ಕನ್ನಡದ ವರನಟ ರಾಜಕುಮಾರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿಕೊಂಡು ಹೋಗಿದ್ದ ಸಂದರ್ಭದಲ್ಲಿ ಕಾಡಿನ ಮಧ್ಯೆ ಕಾಲ ಕಳೆಯುವ ಸಲುವಾಗಿ ಕಳುಹಿಸಿಕೊಟ್ಟಿದ್ದ ಅನೇಕ ಧ್ವನಿಸುರಳಿಗಳಲ್ಲಿ ವಿದ್ಯಾನಂದರ ಭಾರತ ದರ್ಶನವೂ ಒಂದಾಗಿದ್ದು, ಅದನ್ನು ಕೇಳಿದ್ದ ಅಣ್ಣಾವರು ಪುಳಕಿತರಾಗಿ ಅದೇ ಧ್ವನಿಸುರಳಿಯನ್ನು ಹತ್ತಾರು ಬಾರಿ ಕೇಳಿ ರೋಮಾಂಚಿತರಾಗಿ ನಂತರ ವೀರಪ್ಪನ್ ಅವರಿಂದ ಬಿಡುಗಡೆ ಹೊಂದಿ ಮನೆಗೆ ಮರಳಿದ ನಂತರ ಸಂಘದವರನ್ನು ಸಂಪರ್ಕಿಸಿ ವಿದ್ಯಾನಂದರನ್ನು ತಮ್ಮ ಮನೆಗೆ ಕರಿಸಿಕೊಂಡು ಅವರ ವಿದ್ವತ್ತು ಮತ್ತು ಭಾರತದ ಇತಿಹಾಸದ ಬಗ್ಗೆ ಇದ್ದ ಅಪರಿಮಿತ ಜ್ಞಾನವನ್ನು ಮನಸಾರೆ ಕೊಂಡಾಡಿ, ನಿಮ್ಮ ಭಾಷೆ, ವರ್ಣನೆ, ಅಬ್ಬಬ್ಬಾ! ಎಂಥ ದೇಶ ನಮ್ಮದು! ಎಲ್ಲರೂ ಭಾರತ ದರ್ಶನವನ್ನು ಕೇಳಬೇಕು ಎಂದು ಹೇಳಿ, ತಮ್ಮ ಕೈಯ್ಯಾರೆ ವಿದ್ಯಾನಂದರನ್ನು ಸನ್ಮಾನಿಸಿ ಕಳುಹಿಸಿದ್ದರಂತೆ. ಸಾಹಸಿಂಹ ವಿಷ್ಣುವರ್ಧನ್ ಆವರೂ ಸಹಾ ಬಹಳ ಬೇಸರ ಅಥವಾ ದುಃಖಿತರಾಗಿದ್ದಾಗ ಮತ್ತೊಬ್ಬ ಹಿರಿಯ ನಟ ಶಿವರಾಂ ಅವರೊಡನೆ ವಿದ್ಯಾನಂದರ ಭಾರತ ದರ್ಶನ ಸಿಡಿಯನ್ನು ಸಂಪೂರ್ಣವಾಗಿ ಕೇಳಿ, ನವೋಲ್ಲಾಸವನ್ನು ಪಡೆಯುತ್ತಿದ್ದರಂತೆ. ಇನ್ನೂ ಪ್ರಖ್ಯಾತ ಹರಿಕಥಾ ವಿದ್ವಾಂಸರಾದ ಸಂತ ಭದ್ರಗಿರಿ ಅಚ್ಯುತದಾಸರಂತೂ ಭಾರತ ದರ್ಶನದ ಕುರಿತಾಗಿ ಇದೊಂದು ಚೇತೋಹಾರಿ ಕಥಾನಕ. ಒಂದು ಮಗು ತನ್ನ ತೊಡೆಯ ಮೇಲೆ ಕುಳಿತು ಅವಳನ್ನು ವರ್ಣಿಸಿದಂತೆ ಮೋಹಕವಾಗಿ ಸಾಗಿದೆ ಈ ಉಪನ್ಯಾಸದ ಪ್ರವಾಹ ಎಂದು ಹೇಳಿದ್ದರು. ಸೈದ್ಧಾಂತಿಕವಾಗಿ ಸಂಘವನ್ನು ವಿರೋಧಿಸುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು, ಸಂಘದೊವರಂದಿಗೆ ಮಾತಾಡುತ್ತಿದ್ದಾಗ, ನಾನು ನಿಮ್ಮ ಆರ್ಎಸ್ಎಸ್ ನ ಅಷ್ಟು ಒಪ್ಪೋದಿಲ್ಲ. ಆದರೆ ನಿಮ್ಮ ವಿದ್ಯಾನಂದ ಶೆಣೈ ಅವರ ಭಾರತ ದರ್ಶನ ಮಾತ್ರ ನನಗೆ ಬಿಡಲು ಸಾಧ್ಯ ಇಲ್ಲ, ಅದು ನನಗೆ ಬಹಳ ಇಷ್ಟ ಆಗುತ್ತದೆ. ಕಷ್ಟ ಪಟ್ರೂ ಇಷ್ಟ ಪಡದೇ ಇರಲು ಆಗೋದಿಲ್ಲ. ಹಾಗಿದೆ ಅವರ ಮಾತು. ಅದ್ಭುತ ಮಾತುಗಾರ! ಅಂತ ಹೇಳಿದ್ದರು ಎಂದರೆ, ವಿದ್ಯಾನಂದರ ಉಪನ್ಯಾಸದ ಶೈಲಿ ಹೇಗಿತ್ತೆಂಬುದು ಅರಿವಾಗುತ್ತದೆ.

ತಾವು ಪ್ರವಚನಕ್ಕೆ ಹೋಗುತ್ತಿದ್ದ ಸಮಯದಲ್ಲಿ ಭೇಟಿಯಾಗುತ್ತಿದ್ದ ಚುರುಕಾದ ಯುವಕರುಗಳನ್ನು ಗುರುತಿಸಿ ಅವರಲ್ಲಿಯೂ ದೇಶಭಕ್ತಿಯನ್ನು ಜಾಗೃತಗೊಳಿಸಿ ಅವರನ್ನೂ ಸಹಾ ದೇಶ ಮತ್ತು ಸಮಾಜ ಸೇವೆಗಳಲ್ಲಿ ತೊಡಗಿಸಿ ಕೊಳ್ಳುವಂತೆ ನೂರಾರು ಯುವಕರುಗಳನ್ನು ಪ್ರೇರೇಪಿಸಿ ಅವರಿಂದ ಅದ್ಭುತವಾದ ಕೆಲಸಗಳನ್ನು ಮಾಡಿಸಿದ್ದಾರೆ. ಅಗಷ್ಟೇ ಕಾಲೇಜು ಓದಿ ಮುಗಿಸಿ ರಾಮಕೃಷ್ಣಮಠಕ್ಕೆ ಎಡತಾಕುತ್ತಿದ್ದ ಚಕ್ರವರ್ತಿ ಸೂಲಿಬೆಲೆ ಅವರನ್ನು ಮಾತನಾಡಿಸಿ ಅವರನ್ನು ಪ್ರೇರೇಪಿಸಿ ಅವರಿಂದ ಸಾವರ್ಕರ್ ಅವರ ಪುಸ್ತಕವನ್ನು ಬರೆಸಿದ್ದವರೂ ವಿದ್ಯಾನಂದ ಶಣೈರವರೇ. ಶಣೈ ಅವರಿಂದ ಪ್ರೇರಿತಗೊಂಡ ಅನೇಕ ಯುವಕರುಗಳು ಇಂದು ಅವರಂತೆಯೇ ಭಾರತ ದರ್ಶನ ಕಾರ್ಯಕ್ರಮವನ್ನೂ ನೀಡುತ್ತಿರುವುದು ಸಂತಸದ ವಿಷಯವಾಗಿದೆ.

shenoy2

ಪದೇ ಪದೇ ತಲೆ ನೋವಿನಿಂದ ಬಳಲುತ್ತಿದ್ದ ವಿದ್ಯಾರಣ್ಯರನ್ನು ಅವರ ಅಣ್ಣ ಉಪೇಂದರು ಹೆಚ್ಚಿನ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ದಾಗ, ಮೆದುಳಿನಲ್ಲಿ ಗೆಡ್ಡೆಯು ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವುದು ಕಂಡು ಬಂದು ಎರಡು ಮೂರು ಬಾರಿ ಶಸ್ತ್ರಚಿಕಿತ್ಸೆ ನಡೆಸಿ ಆ ಗೆಡ್ಡೆಯನ್ನು ತೆಗೆಯಲು ಪ್ರಯತ್ನಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ, 26 ಏಪ್ರಿಲ್ 2007ರಂದು ತಮ್ಮ 56ವರ್ಷಗಳಲ್ಲಿ ವರ್ಷದಲ್ಲಿ ಭಾರತಮಾತೆಯ ಒಡಲೊಳಗೆ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಂಡದ್ದು ನಿಜಕ್ಕೂ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿತ್ತು. ಆಜೀವ ಬ್ರಹ್ಮಚಾರಿಯಾಗಿ ಸರಳ ಸಜ್ಜನ, ಅಪರಿಮಿತ ದೇಶಭಕ್ತ, ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಕರ್ತರಾಗಿ ಕಾರ್ಯನಿವಹಿಸಿ, ಭಾರತ ದರ್ಶನಕ್ಕೊಂದು ಅನ್ವರ್ಥ ನಾಮರೆನಿಸಿ ಭಾರತ ದರ್ಶನದ ಶೆಣೈ ಎಂದೇ ಲೋಕ ವಿಖ್ಯಾತರಾಗಿದ್ದ ಶ್ರೀ ವಿದ್ಯಾನಂದ ಶಣೈರವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s