ನಮ್ಮ ದೇಶದಲ್ಲಿ ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗ ಬೇಕೆಂದರೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಎಂಬು ಮೂರು ಆಧಾರಸ್ಥಂಭಗಳಾಗಿದ್ದರೆ, ಮಾಧ್ಯಮ ಅಥವಾ ಪತ್ರಿಕೋಧ್ಯಮ ಎನ್ನುವುದು ನಾಲ್ಕನೇ ಆಧಾರ ಸ್ಥಂಭವಾಗಿದ್ದು ಆ ಮೂರು ಅಧಾರ ಸ್ಥಂಭಗಳು ಎಚ್ಚರ ತಪ್ಪದಂತೆ ನೋಡಿಕೊಳ್ಳುವ ಜವಾಬ್ಧಾರಿಯನ್ನು ಹೊಂದಿದೆ ಎಂದರೂ ತಪ್ಪಾಗದು. ಹಾಗಾಗಿಯೇ ಪತ್ರಕರ್ತರು ಸದಾ ಕಾಲವೂ ಎರಡು ಅಲುಗಿನ ಕತ್ತಿಯ ಮೇಲೆ ಎಚ್ಚರಿಕೆಯಿಂದ ನಡೆಯ ಬೇಕಾಗಿದ್ದು, ಸದಾಕಾಲವೂ ಸರ್ಕಾರದ ವಿರುದ್ಧ ಸಮರ್ಥವಾಗಿ ಎದುರಿಸುವಂತಹ ವಿರೋಧ ಪಕ್ಷದ ಕಾವಲು ನಾಯಿಗಳಂತೆ ನಡೆಯಬೇಕು ಎನ್ನಲಾಗುತ್ತಿದ್ದರೂ, ಇಂದಿನ ದಿನಗಳಲ್ಲಿ ಬಹುತೇಕ ಪತ್ರಕರ್ತರು ಒಂದಲ್ಲಾ ಒಂದು ಪಕ್ಷ ಅಥವಾ ಸಿದ್ಧಾಂತಗಳನ್ನು ಒಪ್ಪಿ ಅಪ್ಪಿಕೊಂಡ ಕಾರಣ, ಒಂದು ರೀತಿಯಲ್ಲಿ ಸಮಾಜಕ್ಕೆ ತಪ್ಪು ಸಂದೇಶಗಳನ್ನು ತಲುಪಿಸುತ್ತಿರುವ ಮಧ್ಯದಲ್ಲೇ ದೂರದ ಸಾಗರದಲ್ಲಿ ಕುಳಿತು ಕೊಂಡು ಕಳೆದ 15 ವರ್ಷಗಳಿಂದಲೂ ಸಂಪದ ಸಾಲು ಎಂಬ ಮಾಸಪತ್ರಿಕೆಯ ಮೂಲಕ ಧನಾತ್ಮಕ ಪತ್ರಿಕೋದ್ಯಮವನ್ನು (Positive journalism) ನಡೆಸಿಕೊಂಡು ಹೋಗುತ್ತಿರುವ ಶ್ರೀ ವೆಂಕಟೇಶ್ ಸಂಪ ಆವರ ಯಶೋಗಾಥೆಯೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಸಾರವಾಗಿದೆ.
ಶಿವಮೂಗ್ಗ ಜಿಲ್ಲೆಯ ಸಾಗರದ ವಿಶ್ವವಿಖ್ಯಾತ ಜೋಗದ ಜಲಪಾತ ಬಳಿಯ ಸುಮಾರು 15 ರಿಂದ 20 ಕುಟುಂಬ ಇರುವ ಸಂಪ ಎಂಬ ಪುಟ್ಟ ಗ್ರಾಮದ ಸಂಪ್ರದಾಯಸ್ಥ ಕೃಷಿಕ ಹಿನ್ನಲೆಯ ಶ್ರೀಧರ್ ಭಟ್ ಮತ್ತು ಸುಭದ್ರಾ ದಂಪತಿಗಳಿಗೆ 20-04-1986ರಲ್ಲಿ ವೆಂಕಟೇಶ್ ಅವರು ಜನಿಸುತ್ತಾರೆ. ಕೇವಲ 1/2 ಎಕರೆ ಕೃಷಿ ಜಮೀನು ಹೊಂದಿದ್ದಂತಹ ಬಡ ಕುಟುಂಬದ ವೆಂಕಟೇಶರಿಗೆ 3 ಅಕ್ಕಂದಿರು ಮತ್ತು ಒಬ್ಬ ಅಣ್ಣನಿದ್ದು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಊರಿನ ಹತ್ತಿರದ ನಂದೋಡಿನಲ್ಲಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಣ್ಣನೊಂದಿಗೆ ಜೋಗದಲ್ಲೇ ಸಣ್ಣದಾದ ಬಾಡಿಗೆ ರೂಮೊಂದನ್ನು ಮಾಡಿಕೊಂಡು ಅಲ್ಲಿಯ ಕೆಇಬಿ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಂದುವರೆಸುತ್ತಾರೆ. ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದ ಕಾರಣ, ಹೈಸ್ಕೂಲ್ ನಲ್ಲಿ ಓದುವಾಗಲೇ ಶಾಲೆಗೆ ಬಿಡುವು ಸಿಕ್ಕಾಗಲೆಲ್ಲಾ ಊರಿನಲ್ಲೇ ಕೃಷಿ ಚಟುವಟಿಕೆ ಮತ್ತು ದೂರದ ಸಾಗರಕ್ಕೆ ಹೋಗಿ ಮದುವೆ ಮುಂಜಿ ನಾಮಕರಣ ಮುಂತಾದ ಶುಭಸಮಾರಂಭಗಳಲ್ಲಿ ಅಡುಗೆ ಬಡಿಸುವ ಕೆಲಸಕ್ಕೆ ಹೋಗಿ ಬಂದ ಹಣವನ್ನೆಲ್ಲಾ ಜೋಪಾನವಾಗಿ ಕೂಡಿಡುತ್ತಾ ಅಂದಿನ ಕಾಲಕ್ಕೇ ಸುಮಾರು 1,85,000/- ರೂಪಾಯಿಗಳನ್ನು ಕೂಡಿಡುತ್ತಾರೆ ಎಂದರೆ ಅವರು ಪಟ್ಟ ಕಷ್ಟ ಎಷ್ಟಿತ್ತು ಎಂಬುದರ ಅರಿವಾಗುತ್ತದೆ.
PUC ಮುಗಿಸಿ ಪದವಿಗಾಗಿ ತಂದೆಯವರ ಅಭಿಪ್ರಾಯದಂತೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ BBMಗೆ ಸೇರಿಕೊಂಡು ತಾತಯ್ಯ ಅನಾಥಾಲಯ ಎಂಬ ಉಚಿತ ಹಾಸ್ಟೆಲ್ಲಿನಲ್ಲಿ ಉಳಿದುಕೊಳ್ಳುತ್ತಾರೆ. ಶಾಲೆ ಮತ್ತು ಕಾಲೇಜು ಸಮಯದಲ್ಲಿ ಕಾಲೇಜು ಮ್ಯಾಗಜೈನ್ ಗಳಲ್ಲಿ ಬರೆಯುತ್ತಿದ್ದನ್ನೇ ಮುಂದುವರೆಸಿ, ಮೈಸೂರಿನ ಪ್ರಜಾವಾಣಿ ಕಛೇರಿಯನ್ನು ಎಡತಾಕಿ ವಾರಾಂತ್ಯದ ಮೆಟ್ರೋ ವಿಭಾಗದಲ್ಲಿ ಬರುತ್ತಿದ್ದ ಕ್ಯಾಂಪಸ್ ಕ್ಯಾಂಪಸ್ ಕಾಲಮ್ಮಿನಲ್ಲಿ ಸಣ್ಣ ಪುಟ್ಟ ಲೇಖನಗಳನ್ನು ಬರೆಯಲು ಆರಂಭಿಸುತ್ತಾರೆ. ಇನ್ನು ಜೀವನದ ನಿರ್ವಹಣೆಗಾಗಿ ಬೆಳ್ಳಂಬೆಳಗ್ಗೆ ಚಳಿ, ಬಿಸಿಲು ಗಾಳಿಯನ್ನೂ ಲೆಖ್ಖಿಸದೇ ಅದೇ ಪ್ರಜಾವಾಣಿ ಪತ್ರಿಕೆಯನ್ನು ಮೈಸೂರಿನ ಅಗ್ರಹಾರದಲ್ಲಿ ಹಂಚುತ್ತಿದ್ದ ಸಮಯದಲ್ಲೇ ಅರೇ, ಬೇರೇ ಯಾವುದೋ ಪತ್ರಿಕೆಗಳಿಗೆ ಬರೆಯುವ ಬದಲು ತಮ್ಮದೇ ಆದ ಪತ್ರಿಕೆಯೊಂದನ್ನು ಹೊರತರಬಾರದೇಕೇ? ಎಂಬ ಯೋಚನೆ ಬಂದಾಗ ಅವರ ವಯಸ್ಸು ಕೇವಲ 19.
ಮನಸ್ಸಿನಲ್ಲಿ ಮೂಡಿದ್ದೇ ತಡಾ ಎ4 ಸೈಜಿನ 2 ಬಿಳಿ ಹಾಳೆಗಳನ್ನು ತೆಗೆದುಕೊಂಡು ತಾವು ಮತ್ತು ತಮ್ಮ ಸಹಪಾಠಿಗಳನ್ನು ಸೇರಿಸಿಕೊಂಡು ಮುರ್ನಾಲ್ಕು ಲೇಖಗಳನ್ನು ಬರೆದು ಅದಕ್ಕೆ ಸಂಪದ ಸಾಲು ಪತ್ರಿಕೆ ಎಂದು ಬರೆಯುವ ಮೂಲಕ ಅವರ ಕನಸು ಹಸ್ತಾಕ್ಷರದ ಪತ್ರಿಕೆಯ ಮೂಲಕ ನನಸಾಗುತ್ತದೆ. ಮುಂದಿನ ದಿನಗಳಲ್ಲಿ ಹಾಗೆಯೇ ಹಸ್ತಾಕ್ಷರದ ಪತ್ರಿಕೆಯನ್ನು ಮುಂದುವರೆಸಿ ಅದನ್ನು ಜೆರಾಕ್ಸ್ ಮಾಡಿಸಿ ಕಾಲೇಜು ನೋಟೀಸ್ ಬೋರ್ಡಿನ ಮೇಲೆ ಅಂಟಿಸುತ್ತಿದ್ದಲ್ಲದೇ, ಅವರ ಸಹಪಾಠಿಗಳಿಗೆ ಹಂಚುವ ಮೂಲಕ ಅವರ ಪತ್ರಿಕೆಯ ಪ್ರಸಾರ ಆರಂಭವಾಗುತ್ಯದೆ. ನಂತರ ದಿನಗಳಲ್ಲಿ ಕೆಲವು ಹಿರಿಯರ ಸಲಹೆಯಂತೆ ದೆಹಲಿಯಿಂದ ಸಂಪದಸಾಲು ಪತ್ರಿಕೆ ಎಂಬ ಹೆಸರು ರಿಜಿಸ್ಟರ್ ಆದ ಮೇಲಂತೂ ಸ್ವರ್ಗಕ್ಕೆ ಮೂರೇ ಗೇಣು. ಹೀಗೆ 19 ವರ್ಷದಲ್ಲೇ ಅಧಿಕೃತವಾಗಿ ಅತ್ಯಂತ ಚಿಕ್ಕವಯಸ್ಸಿನ ಮಾಸ ಪತ್ರಿಕೆಯ ಸಂಪಾದಕ ಎಂಬ ಕೀರ್ತಿಗೆ ಪಾತ್ರದಾದರು.
ಪತ್ರಿಕೆ ಆರಂಭಿಸಿದ ದಿನಗಳಿಂದಲೂ ಅವರು ಯಾವುದೇ ಸಿದ್ಧಾಂತಗಳಿಗೆ ಕಟ್ಟು ಬಿದ್ದು ಯಾರ ಪರ/ವಿರೋಧವಾಗಿ ಬರೆಯಬಾರದೆಂದು ನಿರ್ಧರಿಸಿದ್ದದ್ದನ್ನು ಇಂದಿಗೂ ಮುಂದುವರೆಸಿಕೊಂಡು ಬರುತ್ತಿರುವುದು ನಿಜಕ್ಕೂ ಅಭಿನಂದನಾರ್ಹವೇ ಸರಿ. ಪತ್ರಿಕೆಯಿಂದ ಯಾವುದೇ ಹಣ ಹುಟ್ಟದೇ ಕೈಯಿಂದಲೇ ಖರ್ಚಾಗುತ್ತಿದ್ದ ಕಾರಣ ಮತ್ತೆ ಕಾಲೇಜಿನ ಮಧ್ಯೆ ಊಟದ ಸಮಯದಲ್ಲಿ ಸಮಯದಲ್ಲಿ ಸಭೆ ಸಮಾರಂಭಗಳಲ್ಲಿ ಊಟ ಬಡಿಸಿದರೆ, ಸಂಜೆ ಸಯ್ಯಾಜಿರಾವ್ ರಸ್ತೆಯಲ್ಲಿದ್ದ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವರ ಪರಿಚಯ ಮಾಡಿಕೊಂಡು ಅವರ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದಲ್ಲದೇ ಸ್ವಕಾರ್ಯ ಮತ್ತು ಸ್ವಾಮಿ ಕಾರ್ಯ ಎನ್ನುವಂತೆ ಅಲ್ಲೇ ತಮ್ಮ ಪುಸ್ತಕದ ದಾಹವನ್ನು ತೀರಿಸಿಕೊಳ್ಳುತ್ತಲೇ ತಮ್ಮ ಜ್ಞಾನಾರ್ಜನೆ ಮಾಡಿಕೊಳ್ಳುತ್ತಿದ್ದದ್ದಲ್ಲದೇ, ಅಪರೂಪಕ್ಕೊಮ್ಮೆ ರೇಡಿಯೋ ಕಾರ್ಯಕ್ರಮದಲ್ಲಿ ಬರುತ್ತಿದ್ದ ಅಲ್ಪ ಸ್ವಲ್ಪ ಹಣವೂ ಸಾಲದೇ ಹೋದಾಗ LIC agent ಆಗಿ ಪರಿಚಯವಿದ್ದವರನ್ನು ಕಾಡೀ ಬೇಡಿ Policy ಮಾಡಿಸುತ್ತಾ ಅದರ ಮೂಲಕವೂ ನಾಲ್ಕು ಕಾಸು ಸಂಪಾದನೆ ಮಾಡುತ್ತಲೇ ತಮ್ಮ ಪದವಿಯನ್ನು ಪೂರೈಸಿದರು.
ಪದವಿ ಪಡೆದ ಬಹುತೇಕರು ಬೆಂಗಳೂರಿಗೆ ಬಂದು ಕೆಲಸವನ್ನು ಹುಡುಕುವಂತೆ ವೆಂಕಟೇಶರೂ ಸಹಾ ಮಹಾ ಮಾಯಾ ನಗರಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವ ಸಲುವಾಗಿ ಪತ್ರಿಕೋದ್ಯಮ ಮತ್ತು ಅಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ ದೃಶ್ಯ ಮಾಧ್ಯಮಗಳಲ್ಲಿ ಕೆಲಸಕ್ಕೆ ಪ್ರಯತ್ನಿಸುವ ಸಲುವಾಗಿ ಸ್ನೇಹಿತರ ಮನೆಯಲ್ಲೇ ತಂಗಿದ್ದು ಬಹುತೇಕ ಎಲ್ಲಾ ಪತ್ರಿಕಾ ಕಛೇರಿಗಳಿಗೂ ಎಡತಾಕಿ ತಾವು ಬರೆದ ಲೇಖನಗಳು, ಕತೆ ಕವನಗಳನ್ನು ತೋರಿಸಿದ್ದನ್ನು ಕಾಟಾಚಾರಕ್ಕೆ ಕಣ್ಣಾಡಿಸಿ, ಬಿಬಿಎಂ ಓದಿ ಮೀಡಿಯಾಕ್ಕೆ ಯಾಕೆ ಬರ್ತೀರಿ? ಎಂಬ ಕೊಂಕು ಮಾತು ಕೇಳೀ ಕೇಳಿ ಸಾಕಾಗಿ ಹತಾಶರಾದರೂ, ಛಲ ಬಿಡದ ತ್ರಿವಿಕ್ರಮದಂತೆ ಹುಡುಕಾಟ ನಡೆಸಿ ಕಡೆಗೂ ವಿಕ್ರಾಂತ ಕರ್ನಾಟಕ ವಾರ ಪತ್ರಿಕೆಯಲ್ಲಿ ವರದಿಗಾರಷ್ಟೇ ಅಲ್ಲದೇ ಕಛೇರಿಯ ಕೆಲಸವನ್ನು ಮಾಡುತ್ತಾ ಕೆಲವು ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೂ ಸಂಪದ ಸಾಲು ಪತ್ರಿಕೆ ನಿರಂತವಾಗಿ ನಡೆಸುತ್ತಲೇ ಹೋದರು. ಮಲೆನಾಡಿನ ಪ್ರಶಾಂತ ವಾತಾವರಣ, ಸಾಂಸ್ಕೃತಿಕ ನಗರಿ ಮೈಸೂರಿಗೆ ಒಗ್ಗಿ ಹೋಗಿದ್ದ ಆ ಹುಡುಗನಿಗೆ ಬೆಂಗಳೂರಿನ ಗಿಜಿ ಗಿಜಿ ವಾತಾವರಣ ಸರಿಹೋಗದೇ, ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ಎಂದು ತಮ್ಮೂರು ಸಾಗರಕ್ಕೆ ಹಿಂದಿರುಗಿ, ಪತ್ರಿಕೆಯತ್ತವೇ ಹೆಚ್ಚಿನ ಗಮನ ಹರಿಸಲು ಮುಂದಾಗುತ್ತಾರೆ.
ಸಾಗರಕ್ಕೆ ಬಂದು ತಾವು ಕಾಲೇಜು ದಿನಗಳಿಂದಲೂ ಉಳಿಸಿದ್ದ ಹಣದಿಂದ ನಿವೇಶವನ್ನು ಕೊಂಡು ಬಹು ವರ್ಷಗಳ ಆಸೆಯಂತೆ ಅಲ್ಲಿಯೇ ಸಂಪದ ಸಾಲು ಪತ್ರಿಕೆಯ ಕಛೇರಿಯನ್ನು ಆರಂಭಿಸಿ ಅದುವರೆವಿಗೂ ನಾಲ್ಕು ಪುಟಗಳ ಕಪ್ಪು ಬಿಳುಪುಗಳಲ್ಲಿ ಹೊರತರುತ್ತಿದ್ದ ಪತ್ರಿಕೆಯನ್ನು ಬಣ್ಣದ ಪತ್ರಿಕೆಯನ್ನಾಗಿಸಿ ಮಲೆನಾಡಿನವರೇ ಆದ ಕನ್ನಡಿಗರು ಬಹಳ ಪ್ರೀತಿಸುವ ಲೇಖಕರಾದ ನಾ ಡಿಸೋಜ ಅವರಿಂದ ಮತ್ತೊಮ್ಮೆ ಬಿಡುಗಡೆಗೊಳಿಸಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಇವನೇನು ಪತ್ರಿಕೆ ಮಾಡ್ತಾನೆ? ಸುಮ್ಮನೆ ತೆವಲಿಗಾಗಿ ಎರಡ್ಮೂರು ಸಂಚಿಕೆ ತಂದು ನಿಲ್ಲಿಸುತ್ತಾನೆ ಎಂದು ಹಿಯ್ಯಾಳಿಸುವವರೇ ಮೂಗಿನ ಮೇಲೆ ಕೈ ಇಟ್ಟು ಆಶ್ಚರ್ಯ ಪಡುವಂತೆ ಪತ್ರಿಕೆಯನ್ನು ಬೆಳೆಸುತ್ತಲೇ ಹೋಗಿ 4 ಪುಟದಿಂದ 8, 8ರಿಂದ 16, 16 ರಿಂದ 20, 24 ಈಗ 32 ಪುಟದ ಪತ್ರಿಕೆಯನ್ನು ಮಾಡಿದ್ದಲ್ಲದೇ, ಪತ್ರಿಕೆಯ ಪ್ರಸಾರದ ಕಡೆಗೆ ಹೆಚ್ಚಿನ ಆಸ್ಥೆ ವರಿಸಿ, ಆರಂಭದಲ್ಲಿ ನೂರು ಪ್ರತಿಗಳು, ನಂತರ ಸಾವಿರ, ಆದಾದ ಕೆಲವೇ ದಿನಗಳಲ್ಲಿ ಹತ್ತು ಸಾವಿರವನ್ನು ದಾಟಿ ಐವತ್ತು ಸಾವಿರ ಮುಟ್ಟುವತ್ತ ಲಕ್ಷವನ್ನು ಹರಿಸುತ್ತಲೇ ಪತ್ರಿಕೆಗೆ 15 ವರ್ಷಗಳು ಕಳದದ್ದೇ ಗೊತ್ತಾಗಲಿಲ್ಲ.
ರವಿಚಂದ್ರನ್ ಕಥೆ, ಚಿತ್ರಕಥೆ, ನಿರ್ಮಾಣ, ನಿರ್ದೇಶನ ಸಂಗೀತ ಸಾಹಿತ್ಯ, ನಟನೆ ಎಲ್ಲವನ್ನೂ ಮಾಡುವಂತೆ ವೆಂಕಟೇಶರು ಸಹಾ ಆರಂಭದಲ್ಲಿ ಬಹುತೇಕ ಲೇಖನಗಳನ್ನು ತಾವೇ ಬರೆಯುತ್ತಿದ್ದರೂ ನಂತರ ದಿನಕಳೆದಂತೆ ಪಳಗಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರಂತೆ ಕೇವಲ ಸ್ಥಳೀಯ ಮತ್ತು ಕರ್ನಾಟಕವಲ್ಲದೇ ವಿದೇಶಗಳಲ್ಲಿದ್ದ ಲೇಖಕರನ್ನು ಸಂಪರ್ಕಿಸಿ ಅವರಿಂದ ಲೇಖನಗಳನ್ನು ಬರೆಸುತ್ತಾ ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸತೊಡಗಿದರು. ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ಪತ್ರಿಕೆ ಆರಂಭದಲ್ಲಿ ಅಂದುಕೊಂಡಂತೆ ಯಾವುದೇ ಸಿದ್ಧಾಂತಕ್ಕೆ ಕಟ್ಟು ಬೀಳದೇ, ಯಾವುದೇ ಕ್ರೈಂ ವಿಷಯವಾಗಲೀ ಇಲ್ಲವೇ ಯಾರನ್ನೋ ಶರಂಪರ ಹೊಗಳಿ ಅಟ್ಟಕ್ಕೇರಿಸುವ ಲೇಖನಗಳನ್ನೋ ಇಲ್ಲವೇ ಯಾರನ್ನೋ ಹೆದರಿಸಿ ಬೆದರಿಸಿ ಹಣ ಮಾಡುವಂತಹದಕ್ಕೆ ಕೈ ಹಾಕದೇ, ಜಾತಿ, ಮತ, ಧರ್ಮದ ಮುಲಾಜಿಗೆ ಒಳಗಾಗದೇ, ಇದುವರೆವಿಗೂ ಸುಮಾರು 800ಕ್ಕೂ ಹೆಚ್ಚು ಉದಯೋನ್ಮುಖ ಲೇಖಕರುಗಳಿಗೆ ತಮ್ಮ ಪ್ತತ್ರಿಕೆಯಲ್ಲಿ ಬರೆಯಲು ಅವಕಾಶ ಮಾಡಿಕೊಡುವ ಮೂಲಕ ಲೇಖಕರನ್ನೂ ಬೆಳಸುತ್ತಾ, ಧನಾತ್ಮಕವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬಂದಿರುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ.
ಇವಿಷ್ಟರ ಮಧ್ಯೆ ಹೆಸರಿಗೆ ಅನ್ವರ್ಥವಾಗಿಯೇ ಇರುವ ಸೌಮ್ಯರನ್ನು ವರಿಸಿ, ಕೀರ್ತಿಗೊಬ್ಬ ಸ್ಕಂದ. ಆರತಿಗೊಬ್ಬಳು ಸ್ವರ ಎಂಬ ಮುದ್ದಾದ ಮಕ್ಕಳ ತಂದೆಯಾಗಿರುವ ವೆಂಕಟೇಶ್ ಅವರ ತುಡಿತ ಅಷ್ಟಕ್ಕೇ ನಿಲ್ಲದೇ ಮತ್ತೆ ತಮ್ಮೆಲ್ಲಾ ಉಳಿತಾಯದ ಹಣವನ್ನು ಒಗ್ಗೂಡಿಸಿ ಪಿತ್ರಾರ್ಜಿತವಾಗಿದ್ದ ಅರ್ಧ ಎಕರೆಗೆ ಮತ್ತಷ್ಟು ಕೃಷಿ ಭೂಮಿಯನ್ನು ಖರೀದಿಸಿ ಅಲ್ಲೂ ಸಹಾ ತಮ್ಮ ಕಠಿಣ ಪರಿಶ್ರಮದಿಂದ ಕೇವಲ ಒಂದು ಎಕರೆ ಭೂಮಿಯಲ್ಲಿ 28 ಕ್ವಿಂಟಾಲ್ ಭತ್ತ ಬೆಳೆಯುವ ಮೂಲಕ ಅನೇಕ ಪ್ರಥಮಗಳಿಗೆ ಕಾರಭೀಭೂತರಾಗುತ್ತಾರೆ. ಹೆಚ್ಚಿನ ಇಳುವರಿ ಆಸೆಗಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಹಾಳುಮಾಡುವುದಲ್ಲದೇ ವಿಷಯುಕ್ತ ಬೆಳೆಯನ್ನು ಬೆಳೆಯುವ ಬದಲು ಆಧುನಿಕ ರೀತಿಯಲ್ಲಿ ಸಾವಯವ ಕೃಷಿಯ ಕಡೆ ಹೆಚ್ಚಿನ ಒತ್ತು ಕೊಟ್ಟು ಸುಭಾಷ್ ಪಾಳೇಕರ್ ಅವರ ರೀತಿಯಲ್ಲಿ ಸಣ್ಣ, ಮಧ್ಯಮ ಮತ್ತು ದೀರ್ಘಾವಧಿ ಬೆಳೆಯನ್ನು ಬೆಳೆಯುತ್ತಾ ಉತ್ತಮ ಕೃಷಿಕ ಎಂಬ ಕೀರ್ತಿಯನ್ನೂ ಪಡೆದಿರುವುದು ಅವರ ಶ್ರಮಕ್ಕೆ ಸಾಕ್ಷಿಯಾಗಿದೆ.
ಇವರ ಸಾಧನೆಗಳನ್ನು ಗಮನಿಸಿ ಸರ್ಕಾರ ಮತ್ತು ಅನೇಕ ಸಂಘ ಸಂಸ್ಥೆಗಳು ಗೌರವಿಸಿದ್ದು ಅದರಲ್ಲಿ ಪ್ರಮುಖವಾದವು ಹೀಗಿವೆ.
- 2019 ರಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ನೀಡುವ ಅವಂತಿಕಾ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ
- 2019 ರಲ್ಲಿ ಮಾಧ್ಯಮ ಕ್ಷೇತ್ರದ ವಿಶಿಷ್ಟ ಸೇವೆಗಾಗಿ ರಾಜ್ಯ ಮಟ್ಟದ ಬೆಂಗಳೂರು ರತ್ನ ಸಂಸ್ಥೆ ನೀಡುವ ಮಾಧ್ಯಮ ರತ್ನ ಪ್ರಶಸ್ತಿ
- ಹಲವಾರು ಕಥೆ ಮತ್ತು ಕವನಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳಲ್ಲೇ ಸಾಹಿತ್ಯ ಮತ್ತು ಕೃಷಿಯಲ್ಲಿ ಆವರು ಮಾಡಿದ ಸಾಧನೆಗಳನ್ನು ಪ್ರಜಾವಾಣಿ,ವಿಜಯಕರ್ನಾಟಕ ಹೊಸದಿಂಗಂತ, ಸಂಯುಕ್ತ ಕರ್ನಾಟಕ ಪತ್ರಿಕೆಗಳು ಲೇಖನಗಳನ್ನು ಬರೆಯುವ ಮೂಲಕ ಮುಕ್ತಕಂಠದಿಂದ ಹೊಗಳಿವೆ
- ದೂರದರ್ಶನದ ಚಂದನ ವಾಹಿನಿಯಲ್ಲಿ ಸಾಧಕರ ಪರಿಚಯ ಕಾಯಕ್ರಮ ನಮಸ್ಕಾರ ನಮ್ಮ ಕರ್ನಾಟಕ ದಲ್ಲಿ ವೆಂಕಟೇಶ್ ಅವರ ಸಂದರ್ಶನ ಮಾಡಿದ್ದರೆ, ಧಾರವಾಡ ಆಕಾಶವಾಣಿಯಲ್ಲೂ ಅವರ ಸಂದರ್ಶನ ಪ್ರಸಾರವಾಗಿದೆ
ಕೃಷಿ ಮತ್ತು ಧನಾತ್ಮಕ ಪತ್ರಿಕೋದ್ಯಮದ ಮೂಲಕ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರೂ, ಇಷ್ಟೆಲ್ಲಾ ಅವಕಾಶಗಳನ್ನು ಕೊಟ್ಟ ಸಮಾಜಕ್ಕೆ ಏನಾದರೂ ಕೊಡಲೇ ಬೇಕೆಂಬ ಆಸೆಯಿಂದಾಗಿ. Sampada foundation for public awareness ಎಂಬುದನ್ನು ಆರಂಭಿಸಿ ಅದರ ಮೂಲಕ ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಗಳನ್ನು ನಡೆಸುತ್ತಾ ಬಂದಿರುವುದಲ್ಲದೇ, ಮುಂದೆ ವಯಸ್ಸಾದ ನಿರ್ಗತಿಕರಿಗೆ ಮತ್ತು ವಿಕಲಾಂಗಚೇತನರಿಗೆ ಆಶ್ರಯ ನೀಡಬಲ್ಲಂತಹ ಅನಾಥಾಶ್ರಮವನ್ನು ಕಟ್ಟುವ ಆಸೆಯನ್ನು ಹೊಂದಿದ್ದಾರೆ. ತಾವು ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಆದ ಅವಮಾನಗಳು ಇಂದಿನ ಯುವಕರುಗಳಿಗೆ ಆಗದಿರಲೆಂದು, earn & learn ರೀತಿಯಲ್ಲಿ ಅರೆಕಾಲಿಕ ಉದ್ಯೋಗವನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ, ಆರಂಭದಲ್ಲಿ ತಾವು ಬೆಳೆದ ಬೆಳೆಗೆ ಸೂಕ್ತವಾದ ಮಾರುಕಟ್ಟೆ ಸಿಗದೇ ಬೆಳೆದ ಫಲಕ್ಕೆ ತಕ್ಕ ಬೆಲೆ ಸಿಗದೇ ಹೋದದ್ದು ಇಂದಿನ ಬೆಳೆಗಾರರಿಗೆ ಆಗದೇ ಇರಲಿ ಎಂದು ಸ್ಥಳೀಯ ಕೃಷಿಕರಿಗೆ ಆಧುನಿಕ ರೀತಿಯ ಶಿಕ್ಷಣ ಮತ್ತು ಸಾವಯವ ಕೃಷಿಯ ಉಪಯೋಗ ತಿಳಿಸುತ್ತಾ, ಸಾಂಪ್ರದಾಯಿಕ ಕೃಷಿಗೆ ಆಧುನಿಕತೆಯ ಮೆರಗು ತರುತ್ತಾ, ಮಳೆ ನೀರು ಕೊಯ್ಲು, ಕೊಳವೇ ಭಾವಿಗಳಿಗೆ ನೀರು ಇಂಗಿಸುವ ಅಭಿಯಾನ ಮುಂತಾದವುಗಳನ್ನು ನಡೆಸುತ್ತಿರುವುದಲ್ಲದೇ, ರೈತರ ಬೆಳೆಗಳಿಗೆ ಸೂಕ್ತವಾದ ಮೌಲ್ಯವನ್ನು ದೊರಕಿಸಿಕೊಡುವತ್ತ ಹರಿಸಿದ್ದಾರೆ ಚಿತ್ತ.
ದೈವದತ್ತವಾಗಿ ಸುಂದರವಾದ ಶರೀರ ಮತ್ತು ಶಾರೀರವನ್ನು ಹೊಂದಿರುವ ವೆಂಕಟೇಶ್, ಆಡು ಮುಟ್ಟದ ಸೊಪ್ಪಿಲ್ಲ ವೆಂಕಟೇಶ್ ಕೈ ಆಡಿಸದ ಕ್ಷೇತ್ರವೇ ಇಲ್ಲ ಎನ್ನುವಂತೆ ಸಿನಿಮಾ ಮತ್ತು ಖಾಸಗೀ ಛಾನೆಲ್ಲುಗಳ ಧಾರವಾಹಿಗಳಲ್ಲೂ ಅಭಿನಯಿಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ತಾವು ಓದಿದ್ದ ಸಂಕಲ್ಪ ಎಂಬ ಕಾದಂಬರಿಯ ನಿರಕ್ಷರಕುಕ್ಷಿ ಕಥಾನಾಯಕ ತನ್ನ ಸ್ವಂತ ಪರಿಶ್ರಮದಿಂದ ಹೆಸರಾಂತ ಕೈಗಾರಿಕೋದ್ಯಮಿಯಾಗಿ ಬೆಳೆದ ಪರಿಯಲ್ಲದೇ, ಸ್ವಾಮೀ ವಿವೇಕಾನಂದರು ಹಸಿವು ಮತ್ತು ಬಡತನ/ಅವಮಾನಗಳು ಜೀವನದ ಪಾಠ ಕಲಿಸುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿ, ಅನುಮಾನ ಅವಮಾನ ಎಲ್ಲವನ್ನೂ ಸಮಾನ ಚಿತ್ತದಿಂದ ಮಟ್ಟಿನಿಂತು ಇಂದು ಸನ್ಮಾನ ಪಡೆಯುವ ರೀತಿಯಲ್ಲಿ ಬೆಳೆದಿರುವ ಪತ್ರಿಕೆಗೂ ಸೈ, ಕೃಷಿಗೂ ಜೈ ಎಂದು ಎರಡರಲ್ಲೂ ವಿಶಿಷ್ಟವಾದ ಸಾಧನೆಗಳನ್ನು ಮಾಡಿರುವ ಎಂ.ಬಿ.ಎ ಪದವೀಧರ, ಸಂಪದ ಸಾಲು ಪತ್ರಿಕೆಯ ಸಂಪಾದಕರಾದ ಶ್ರೀ ವೆಂಕಟೇಶ ಸಂಪ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳೇ ಸರಿ. ಸಮರ್ಥ ಮತ್ತು ಸ್ವಾಭಿಮಾನಿಯಾಗಿ ಧನಾತ್ಮಕವಾಗಿ ಪತ್ರಿಕೆಯನ್ನು ನಡೆಸುತ್ತಿರುವ ಸಂಪ ಅವರ ಸಂಪದ ಸಾಲು ಪತ್ರಿಕೆಗೆ ಚಂದಾದಾರರಾಗುವ ಮೂಲಕ ಒಂದು ಸುಂದರ ಪತ್ರಿಕೆಯನ್ನು ಉಳಿಸಿ ಬೆಳಸುವ ಜವಾಬ್ಧಾರಿ ವಿಶಾಲ ಹೃದಯದ ಕನ್ನಡಿಗರ ಮೇಲಿದೆ ಅಲ್ವೇ?
ಏನಂತೀರಿ?
ನಿಮ್ಮವನೇ ಉಮಾಸುತ
ವೆಂಕಟೇಶ ಸಂಪ ಅವರನ್ನು 9448219347 9740923747 ಮತ್ತು sampadasaalu@gmail.com, Web: sampadasaalu.blogspot.com ಮೂಲಕವೂ ಸಂಪರ್ಕಿಸಬಹುದಾಗಿದೆ
ವಿವಿಧ ಮಾಧ್ಯಮಗಳಲ್ಲಿ ವೆಂಕಟೇಶ್ ಅವರ ಸಾಧನೆಗಳು ಮತ್ತು ಸಂದರ್ಶನಗಳನ್ನು ಈ ಕೊಂಡಿಗಳ ಮೂಲಕ ನೋಡಬಹುದಾಗಿದೆ
https://m.facebook.com/story.php?story_fbid=10222649804739443&id=1402623747&sfnsn=wiwspwa
ತಾವು ಸಾಧಾರಣ ವೆಂಕಟೇಶ್ ಅಲ್ಲ ನಿಮ್ಮ ಸಾಧನೆ ಗಾಡಿ ಸಾವಿರ ವಂದನೆಗಳು
LikeLiked by 1 person