ನಡೆದಾಡುವ ವಿಶ್ವಕೋಶ ಶ್ರೀ ಸಂಪಟೂರು ವಿಶ್ವನಾಥ್

SV2

ಇಂದು ನಮಗೆ ಯಾವುದಾದರೂ ವಿಷಯದ ಬಗ್ಗೆ ತಿಳಿಯಬೇಕೆಂದರೆ ಥಟ್ ಎಂತ ಮೊಬೈಲ್ ಇಲ್ಲವೇ ಕಂಪ್ಯೂಟರ್ನಲ್ಲಿ ಗೂಗಲ್ ತೆರೆದು ನಮಗೆ ಬೇಕಾದ ವಿಷಯವನ್ನು ಅಲ್ಲಿ ನಮೂದಿಸಿದ ಕ್ಷಣದಲ್ಲೇ ಹತ್ತಾರು ಉತ್ತರಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಆದೇ 80-90ರ ದಶಕದಲ್ಲಿ ಇಂಟರ್ನೆಟ್ ಇಲ್ಲದೇ ಹೋದ ಸಮಯದಲ್ಲಿ ಸಮೀಪದ ಗ್ರಂಥಾಲಯಕ್ಕೆ ಹೋಗಿ ಹತ್ತಾರು ಗಂಟೆಗಳ ಕಾಲ ಅಲ್ಲಿರುವ ಪುಸ್ತಕಗಳಲ್ಲಿ ನಮಗೆ ಬೇಕಾದ ವಿಷಯಗಳು ಸಿಗುತ್ತದೆಯೇ ಎಂದು ಹುಡುಕುವಂತಹ ಸಮಯದಲ್ಲೇ ನಡೆದಾಡುವ ಗೂಗಲ್ ನಂತೆ ನಾಡು ನುಡಿ ವಿಜ್ಞಾನ, ಗಣಿತ, ಜನಪದ ಹೀಗೆ ಯಾವುದೇ ವಿಷಯದ ಕುರಿತಾದರೂ ಗಂಟೆ ಗಟ್ಟಲೆ ಮಾತನಾಡಬಲ್ಲಂತ, ದೇವರು ಮೇಲೆ ಹೂವು ತಪ್ಪಿದರೂ, ಅಂದಿನ ಕಾಲದ ಪತ್ರಿಕೆಗಳು, ವಾರ ಪತ್ರಿಕೆಗಳು ಇಲ್ಲವೇ ಮಾಸಪತ್ರಿಕೆಗಳಲ್ಲಿ ಅವರ ಯಾವುದಾದರೂ ಒಂದು ಲೇಖನ ಅಥವಾ ಉಪಯುಕ್ತ ಮಾಹಿತಿ ತಪ್ಪಿಸದೇ ನಿರಂತರವಾಗಿ ಬಿಡುವಿಲ್ಲದಂತೆ ಬರೆವ, ಬಿಡುವಿಲ್ಲದ ಬರಹಗಾರಾಗಿದ್ದ ನಮ್ಮಂತಹ ಸಾವಿರಾರು ಜನರಿಗೆ ಕೌತುಕವನ್ನು ಹುಟ್ಟು ಹಾಕುತ್ತಿದ್ದ ಶ್ರೀ ಸಂಪಟೂರು ವಿಶ್ವನಾಧ್ ಅವರೇ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾ ನಾಯಕರು.

ಬೆಂಗಳೂರಿನ ಮಲ್ಲೇಶ್ವರದ 15ನೇ ಕ್ರಾಸಿನ ಆಸುಪಾಸಿನವರಾಗಿದ್ದ ಎಸ್‌. ಹನುಮಂತರಾವ್‌ ಮತ್ತು ನಾಗಮ್ಮ ದಂಪತಿಗಳಿಗೆ ಫೆಬ್ರವರಿ 28, 1938ರ ಶಿವರಾತ್ರಿಯ ದಿನದಂದು ಜನಿಸಿದ ಮಗುವಿಗೆ ಶಿವನ ಹೆಸರೇ ಆದ ವಿಶ್ವನಾಥ ಎಂದು ನಾಮಕರಣ ಮಾಡುತ್ತಾರೆ. ಬಾಲ್ಯದಿಂದಲೂ ಅತ್ಯಂತ ಚುರುಕಿನ ಹುಡುಗರಾಗಿದ್ದ ವಿಶ್ವನಾಥ್ ತಮ್ಮ ಮನೆಯ ಹತ್ತಿರವೇ ಇದ್ದ ಮಲ್ಲೇಶ್ವರದ ಸರಕಾರಿ ಪ್ರೌಢಶಾಲೆ ಮತ್ತು ಹೈಸ್ಕೂಲ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿಯನ್ನು ಮುಗಿಸಿ ಅಂದಿನ ದಿನಗಳಲ್ಲಿ GAS college ಎಂದೇ ಪ್ರಸಿದ್ಧಿಯಾಗಿದ್ದ ಸರಕಾರಿ ಕಲೆ ಮತ್ತು ವಿಜ್ಞಾನ ಕಾಲೇಜಿನಿಂದ ಇಂಟರ್ ಮೀಡಿಯೆಟ್‌ ಮುಗಿಸಿ ಅಲ್ಲಿಯೇ ಹತ್ತಿರದ ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್ಸಿ ನಂತರ ಸಸ್ಯಶಾಸ್ತ್ರ MScದಲ್ಲಿ ಪದವಿಯನ್ನು ಮುಗಿಸುತ್ತಾರೆ. ಆನಂತರ ಮತ್ತೆ ತಮ್ಮ ಮನೆಯ ಸಮೀಪವೇ ಇದ್ದ ಎಂ.ಇ.ಎಸ್‌. ಕಾಲೇಜಿನಿಂದ ಬಿ.ಎಡ್‌ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಡಿಪ್ಲೊಮ ಪಡೆದ ನಂತರ ಮಲ್ಲೇಶ್ವರದ ಕುಮಾರಪಾರ್ಕ್ ಬಳಿ ಇದ್ದ ಪ್ರತಿಷ್ಠಿತ ಗಾಂಧೀನಗರ ಪ್ರೌಢಶಾಲೆಯಲ್ಲಿ 1960 ಅಧ್ಯಾಪಕರಾಗಿ ಸೇರಿಕೊಳ್ಳುತ್ತಾರೆ.

ಅಂದಿನ ಕಾಲದಲ್ಲಿ ಶಾಲೆಗಳಲ್ಲಿ ಅಧ್ಯಾಪಕರನ್ನು ಅವರ ಇನಿಷಿಯಲ್ಸ್ ನಿಂದ ಕರೆಯುವುದು ರೂಢಿಯಲ್ಲಿದ್ದ ಕಾರಣ, ಸಂಪಟೂರು ವಿಶ್ವನಾಥರು ಎಸ್.ವಿ. ಎಂದೇ ಅವರ ವಿದ್ಯಾರ್ಥಿಗಳಿಗೆ ಚಿರಪರಿಚಿತರಾಗಿದ್ದಾರೆ. ಉಳಿದೆಲ್ಲಾ ಪಾಠಕ್ಕಿಂತ ಎಸ್.ವಿ ಅವರ ಪಾಥ ಎಂದರೆ ವಿದ್ಯಾರ್ಥಿಗಳಿಗೆ ಒಂದು ರೀತಿಯ ರಸಕವಳ ಎಂದರು ತಪ್ಪಾಗದು. ಸಾಧಾರಣವಾಗಿ ಬಹುತೇಕ ಶಿಕ್ಷಕರು ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಪಥ್ಯಗಳನ್ನು ಮುಗಿಸುವಷ್ಟರಲ್ಲೇ ಸಾಕು ಸಾಕಾಗಿ ಹೋಗುತ್ತದೆ ಎಂದು ಗೊಣಗುತ್ತಿದ್ದರೆ, ಎಸ್.ವಿ ಅವರ ತರಗತಿಗಳಲ್ಲಿ ಪಠ್ಯ ಪುಸ್ತಕಗಳಲ್ಲಿದ್ದ ಪಾಠವನ್ನಷ್ಟೇ ಬೋಧಿಸದೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಜ್ಞಾನವನ್ನು ಬೋಧಿಸಿದ್ದೇ ಹೆಚ್ಚು. ಅವರು ಹೇಳುತ್ತಿದ್ದ ನೀತಿ ಕಥೆಗಳು, ಪೌರಾಣಿಕ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳು, ಒಂದು ಪದವನ್ನು ತೆಗೆದುಕೊಂಡು ವಿವಿಧ ವಾಕ್ಯಗಳಲ್ಲಿ ಆ ಪದ ಬಳಕೆಯಿಂದ ಬರಬಹುದಾದ ಅರ್ಥ ಹೀಗೆ ಉಫ್ ಒಂದೇ ಎರಡೇ, ಹೇಳುತ್ತಾ ಹೋದರೆ ಪುಟಗಟ್ಟಲೇ ಬರೆಯಬಹುದು.

sv4

ಇನ್ನು ಶಾಲೆಯಲ್ಲಿ ಪ್ರಬಂಧ ಸ್ಪರ್ಥೆ, ಆಶುಭಾಷಣ ಸ್ಪರ್ಥೆ, ಕ್ವಿಜ್, ಇಲ್ಲವೇ ಶಾಲಾವಾರ್ಷಿಕೋತ್ಸವ ಎಂದರೆ ಅಲ್ಲಿ ಎಸ್.ವಿ.ಯವರದ್ದೇ ಸಾರಥ್ಯ, ಸಮಯಕ್ಕೆ ತಕ್ಕಂತೆ ನಾಟಕಗಳನ್ನು ಹುಡುಕಿಯೋ ಇಲ್ಲವೇ ಯಾವುದೂ ಸಿಗದೇ ಹೋದರೆ ತಾವೇ ನಾಟಕಗಳನ್ನು ಬರೆದು ನಿರ್ದೇಶಿಸಿ ಅವುಗಳನ್ನು ಮಕ್ಕಳಿಂದ ಆಡಿಸಿ ಅದರಲ್ಲೇ ಸಂತೋಷ ಪಡುತ್ತಿದ್ದಂತಹ ನಿಶ್ಕಲ್ಮಶ ಭಾವುಕ ಜೀವಿ ಎಸ್,ವಿ.ಯವರು ಎಂದರೂ ಅತಿಶಯವಲ್ಲ. ರಸಪ್ರಶ್ನೆ ಅರ್ಥಾತ್ ಕ್ವಿಜ್ ಎನ್ನುವುದು ಶಾಲಾ-ಕಾಲೇಜಿನಲ್ಲಿ, ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಜ್ಞಾನ ಪ್ರಸಾರಕ್ಕಾಗಿ ಮಾತ್ರವಲ್ಲದೆ ಮನರಂಜನೆಗಾಗಿಯೂ ಬಳಕೆಯಾಗುತ್ತಾ ಬಂದಿದೆ. ಅಂತಹ ಸ್ಪರ್ಧೆಯಲ್ಲಿ ಪ್ರಪಂಚದ ಮೂಲೆ ಮೂಲೆಯಲ್ಲಿರುವ ವಿಷಯಗಳ ಕುರಿತಾಗಿ ಕೇಳುವ ಪ್ರಶ್ನೆಗಳಿಗೆ ಥಟ್ ಎಂದು ಉತ್ತರಿಸುತ್ತಿದ್ದ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಕುರಿತಾಗಿ ಕೇಳುತ್ತಿದ್ದ ಪ್ರಶ್ನೆಗೆಳಿಗೆ ಕಣ್ ಕಣ್ ಬಿಡುತ್ತಿದ್ದದ್ದನ್ನು ಗಮನಿಸಿದ ವಿಶ್ವನಾಥರು, ಕ್ವಿಜ್ ಕರ್ನಾಟಕ ಎಂಬ ಪುಸ್ತಕವನ್ನೇ ಬರೆದು ಕನ್ನಡ ನಾಡು-ನುಡಿ ಕುರಿತಾದ ಎಲ್ಲಾ ಮಾಹಿತಿಗಳನ್ನು ಅದರಲ್ಲಿ ಅಳವಡಿಸಿ ಕೇಳಿದ ಪ್ರಶ್ನೆಗೆಳಿಗೆಲ್ಲಾ ಸುಲಭವಾಗಿ ಉತ್ತರಿಸುವಂತೆ ಮಾಡುವುದರಲ್ಲಿ ಸಫಲರಾದರು.

ಶಿಕ್ಷಣ, ಕ್ರೀಡೆ, ಇತಿಹಾಸ, ಹಬ್ಬಗಳು, ನೀತಿ ಕಥೆಗಳು, ಜನಪದ ಕಥೆಗಳು, ಕನ್ನಡ ಭಾಷೆಯ ಕುರಿತಾದ ಲೇಖನ, ಸುಭಾಷಿತಗಳು, ಗಾದೆಗಳು, ಆರೋಗ್ಯ, ವ್ಯಕ್ತಿ ವಿಕಸನ, ಜೀವನದಲ್ಲಿನ ಸಫಲತೆ, ಪ್ರವಾಸ, ಸೌಂದರ್ಯದ ಗುಟ್ಟು ಹೀಗೆ ಯಾವುದೇ ವಿಷಯವಾಗಿರಲಿ ಅವೆಲ್ಲದರಲ್ಲೂ ಅಧಿಕೃತವಾದ ಮಾಹಿತಿ ಮತ್ತು ಸರಳ ವಿಶ್ಲೇಷಣೆಗಳ ಮೂಲಕ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಬರೆಯುವುದರಲ್ಲಿ ವಿಶ್ವನಾಥರಿಗೆ ವಿಶ್ವನಾಥರೇ ಸಾಟಿ. ತಮ್ಮ ಶಿಕ್ಷಕವೃತ್ತಿಯ ನಡುವೆಯೂ ಬಹುತೇಕ ಪ್ರತಿದಿನವೂ ಒಂದಲ್ಲಾ ಒಂದು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವ ಮೂಲಕ ಸಂಪಟೂರು ವಿಶ್ವನಾಥ್ ಆವರು ಅಂದಿನ ಕಾಲದಲ್ಲಿ ಕನ್ನಡಿಗರ ಮನೆ ಮನೆಯಲ್ಲೂ ಚಿರಪರಿಚಿತರಾಗಿದ್ದರು. ಇಂಟರ್ನೆಟ್ ಇಲ್ಲದ ಅಂದಿನ ಸಮಯದಲ್ಲೇ ಪ್ರಪಂಚದ ಮೂಲೆಯಲ್ಲಿ ನಡೆದಿರುತ್ತಿದ್ದ ಸಣ್ಣ ಸಣ್ಣ ಘಟೆನೆಗಳು ಅಥವಾ ಸಂಶೋಧನೆಗಳು ಇಲ್ಲವೇ ಅದಾವುದೋ ದೂರ ದೇಶದ ಕವಿಯ ಲೇಖನಗಳು ಇಲ್ಲವೇ ವಿಜ್ಞಾನಿಯ ಆವಿಷ್ಕಾರಗಳನ್ನು ತಿಳಿದು ಅಂತಹ ಲಕ್ಷಾಂತರ ಜನರನ್ನು ಕನ್ನಡಿಗರಿಗೆ ಪರಿಚಯಿಸಿದ ಕೀರ್ತಿ ಮತ್ತು ಯಶಸ್ಸು ವಿಶ್ವನಾಥರಿಗೆ ಸಲ್ಲುತ್ತದೆ. ಬಿಡುವು ಸಿಕ್ಕಾಗಲೆಲ್ಲಾ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಆರಂಭದಲ್ಲೇ ಇದ್ದ ಬ್ರಿಟಿಷ್ ಗ್ರಂಥಾಲಯ, ಕಬ್ಬನ್ ಪಾರ್ಕಿನ ಕೇಂದ್ರ ಗ್ರಂಥಾಲಯಗಳಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದದ್ದಲ್ಲದೇ, ಸಾವಿರಾರು ಪುಸ್ತಕಗಳನ್ನು ಖರೀದಿಸಿ ತಮ್ಮ ಮನೆಯನ್ನೇ ಗ್ರಂಥಾಲಯವನ್ನಾಗಿಸಿ‌ ಕೊಂಡಿದ್ದಾರೆ

ಮಾತೃಭಾಷೆಯಲ್ಲಿಯೇ ಮಕ್ಕಳು ಶಿಕ್ಷಣವನ್ನು ಕಲಿತಲ್ಲಿ ಅವು ಅತ್ಯಂತ ಪರಿಣಾಮಕಾರಿಯಾಗಿ ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂಬುದನ್ನು ಬಲವಾಗಿ ನಂಬಿರುವ ವಿಶ್ವನಾಥರು, ಹಾಗಾಗಿ ಕನ್ನಡ ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ಅಭಿಮಾನ ಮತ್ತು ಪ್ರಭುತ್ವ ಹೊಂದಿರಬೇಕು ಎಂದು ವಿದ್ಯಾರ್ಥಿಗಳಿಗೆ ಸದಾಕಾಲವೂ ಹೇಳುವುದಲ್ಲದೇ, ಕೇವಲ ಪಾಠವನ್ನು ಉರು ಹೊಡೆದು ಹೆಚ್ಚಿನ ಅಂಕ ಗಳಿಸುವುದಕ್ಕಿಂತಲೂ, ಓದಿದ ವಿಚಾರವನ್ನು ಮನನ ಮಾಡಿಕೊಂಡು ಪುಸ್ತಕದಲ್ಲಿರುವ ವಿಷಯವನ್ನು ಮಸ್ತಕದಲ್ಲಿ ಭದ್ರವಾಗಿ ಇಟ್ಟು ಕೊಳ್ಳಬೇಕು ಎಂಬ ಕಿವಿಮಾತನ್ನು ತಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತಲೇ ಇರುತ್ತಾರೆ. ಗುರು-ಶಿಷ್ಯರ ಸಂಬಂಧ ದೇಶ, ಭಾಷೆ, ಜಾತಿ, ಮತವನ್ನು ಮೀರಿದ್ದು, ಹೇಗೆ ಒಳ್ಳೆಯ ಗುರುಗಳು ಸಿಗಬೇಕಾದರೆ ಶಿಷ್ಯಂದಿರು ಪುಣ್ಯ ಮಾಡಿರಬೇಕೋ ಹಾಗೆಯೇ ಒಳ್ಳೆಯ ಶಿಷ್ಯಂದಿರನ್ನು ಪಡೆಯಲು ಗುರುಗಳೂ ಸಹಾ ಪುಣ್ಯ ಮಾಡಿರಬೇಕು ಎಂದು ಹೇಳುವುದಲ್ಲದೇ, ಗುರ-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾಗಿದ್ದು, ಅವರಿಬ್ಬರ ನಡುವೆ ಭಯದ ವಾತಾವರಣಕ್ಕಿಂತಲೂ ಒಂದು ಆತ್ಮೀಯ ಸಂಬಂಧ ಬೆಸೆದಾಗಲೇ ಕಲಿಕೆ ಪರಿಣಾಮಕಾರಿಯಾಗಿದ್ದು, ಸಂತಸದಾಯಕವಾಗುತ್ತದೆ ಎಂಬುದನ್ನು ತಮ್ಮ ಜೀವಮಾನವಿಡೀ ಅಕ್ಷರಶಃ ಪಾಲಿಸಿಕೊಂಡು ಬಂದಿದ್ದಾರೆ.

gandhi_nagar_school

1960 ರಲ್ಲಿ ಗಾಂಧಿನಗರ ಪ್ರೌಢಶಾಲೆಯಲ್ಲಿ ಬೋಧಕರಾಗಿ ಸೇರಿ, ಹಂತ ಹಂತವಾಗಿ ಭಡ್ತಿಯನ್ನು ಪಡೆದು ಅದೇ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 1996ರಲ್ಲಿ ನಿವೃತ್ತಿಯನ್ನು ಪಡೆದರೂ ತಮ್ಮ ಪ್ರವೃತ್ತಿಯನ್ನು ಇಂದಿಗೂ ಮುಂದುವರೆಸುತ್ತಲೇ ಬಂದಿದ್ದಾರೆ. ಇಂದಿಗೂ ಸಹಾ ವಿದ್ಯಾರ್ಥಿಗಳಿಗೆ ಉದ್ಯೋಗ, ಸೂಕ್ತವಾದ ಶಿಕ್ಷಣದ ಕುರಿತಾಗಿ ಮಾರ್ಗದರ್ಶನ ಮಾಡುವುದಲ್ಲದೇ, ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯಕರ್ತರಾಗಿ, ಜನಸಂಖ್ಯಾ ಶಿಕ್ಷಣದ ಸಂಪನ್ಮೂಲ ವ್ಯಕ್ತಿಯಾಗಿ, ಕರ್ನಾಟಕ ಸಂಗೀತ ನಾಟಕ ಅಕಾಡಮಿಗಾಗಿ ನಾಟ್ಯಶಾಸ್ತ್ರದ ಪಠ್ಯ ಹಾಗೂ ನಟನೆಯ ಶಿಕ್ಷಕರಾಗಿ – ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಬೆಂಗಳೂರು ಮತ್ತು ಅಣ್ಣಾಮಲೈ ವಿಶ್ವವಿದ್ಯಾಲಯಗಳಲ್ಲಿ ಬಿ.ಎಡ್‌, ಪದವಿಗಳ ಪಠ್ಯೇತರ ಚಟುವಟಿಕೆಗಳ ಪರೀಕ್ಷಕರಾಗಿ, ವಿಜ್ಞಾನ ಸಂಸ್ಥೆ, ಸೆಕೆಂಡರಿ ಎಜುಕೇಷನ್‌ ಬೋರ್ಡ್‌ನ ಪಠ್ಯ ಪುಸ್ತಕ ಸಮಿತಿ ಮತ್ತು ಡಿ.ಎಸ್‌.ಸಿ.ಆರ್.ಟಿ.ಇ. ಕಾರ್ಯಕ್ರಮಗಳ ಸಂಪನ್ಮೂಲ ವ್ಯಕ್ತಿಯಾಗಿಯೂ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ತಮ್ಮ ಶಾಲೆಯಲ್ಲಿ ಕಲಿಯುತ್ತಿದ್ದ ಆರ್ಥಿಕವಾಗಿ ದುರ್ಬಲರಾಗಿದ್ದ ಅನೇಕ ವಿದ್ಯಾರ್ಥಿಗಳಿಗೆ ತಮ್ಮ ಕೈಯಿಂದಲೇ ಫೀ ಕಟ್ಟಿ ಅವರಿಗೆ ಶಿಕ್ಷಣವನ್ನು ಮುಂದುವರೆಸಲು ಪ್ರೋತ್ಸಾಹಿಸುತ್ತಿದ್ದದ್ದು ಅವರಿಗೆ ಅಪಾರವಾದ ಸಂತಸವನ್ನು ನೀಡುತ್ತಿತ್ತು. ಹೀಗೆ ಅವರಿಂದ ಉಪಕೃತರಾದ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರಲ್ಲದೇ, ವಿಧಾನಸಭೆಯ ಸಭಾಧಕ್ಷರಾಗಿದ್ದ ಶ್ರೀ ರಮೇಶ್ ಕುಮಾರ್, ಸಚಿವರಾಗಿದ್ದ ಸೋಮಶೇಖರ್ ಮುಂತಾದ ಹಿರಿಯ ರಾಜಕಾರಣಿಗಲ್ಲದೇ ದೇಶ ವಿದೇಶಗಳಲ್ಲಿ ಅತ್ಯುನ್ನತವಾದ ಹುದ್ದೆಯಲ್ಲಿ ಇರುವವರು ಗಾಂಧಿನಗರ ಶಾಲೆಯಲ್ಲಿ ಶ್ರೀ ಸಂಪಟೂರು ವಿಶ್ವನಾಥರ ಶಿಷ್ಯಂದಿರೇ. ಇಂದಿಗೂ ಸಹಾ ಅವರಲ್ಲಿ ಬಹುತೇಕರು ವಿಶ್ವನಾಥರ ಸಂಪರ್ಕದಲ್ಲಿದ್ದು ಅವರನ್ನು ಬಹಳವಾಗಿ ಗೌರವಿಸುತ್ತಾರೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ ಎಂದರೆ ಅಪ್ಯಾಯಮಾನ ಎನಿಸುತ್ತದೆ.

ಧರ್ಮ ಪತ್ನಿ ರಾಜಲಕ್ಷ್ಮಿ, ಮತ್ತು ಎಂಭತ್ತರ ದಶಕದಲ್ಲಿ  ಬಿಡುಗಡೆಯಾಗಿದ್ದ ಅರಿವು ಸಿನಿಮಾದಲ್ಲಿ ನಟಿಸಿದ್ದ ಮತ್ತು ಈಗ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉತ್ತನ ಉದ್ದೆಯನ್ನಲ್ಲಂಕರಿಸಿರುವ ಏಕೈಕ ಮಗ ಶಿವರಾಮ್ ಅವರೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿರುವ ವಿಶ್ವನಾಥರು ಅಂದಿನ ಕಾಲದಲ್ಲಿ ಕನ್ನಡ ಮತ್ತು ಇಂಗ್ಲೀಷ್ ಸಿನಿಮಾದ ವಿಮರ್ಶೆಗಳನ್ನು ಮಾಡುತ್ತಿದ್ದದ್ದು ವಿಶೇಷ. ಶುಕ್ರವಾರ ಸಿನಿಮಾ ಬಿಡುಗಡೆ ಆದ ದಿನದಂದೇ ಸಿನಿಮಾ ನೋಡಿ ವಸ್ತು ನಿಷ್ಠವಾಗಿ ಭಾನುವಾರ ಪುರವಾಣಿಯಲ್ಲಿ ಪ್ರಕಟವಾಗುತ್ತಿದ್ದ ಅವರ ವಿಮರ್ಶೆ ಓದಿ ಸಿನಿಮಾಕ್ಕೆ ಹೋಗುತ್ತಿದ್ದ ಜನರು ಅನೇಕ.  ಈಗಾಗಲೇ ತಿಳಿಸಿರುವಂತೆ ನಿರಂತರವಾಗಿ ಒಂದಲ್ಲಾ ಒಂದು ವಿಷಯದ ಬಗ್ಗೆ ಬರೆಯುವುದನ್ನು ರೂಢಿಸಿಕೊಂಡು ಸಾವಿರಾರು ಎನ್ನುವುದಕ್ಕಿಂತಲು ಲೆಖ್ಖವೇ ಇಡಲು ಸಾಧ್ಯವಾಗದಷ್ಟು ಲೇಖನಗಳನ್ನು ಬರೆದಿದ್ದಾರೆ. ಇಂದಿನ ಕಂಪ್ಯೂಟರ್ ಕಾಲದಲ್ಲಿ ಬರೆಯುವುದು ಸುಲಭ ಎನಿಸಿದರೂ ಅಂದು ಸ್ವಹಸ್ತಾಕ್ಷರದಲ್ಲಿ, ಚಿತ್ತಿಲ್ಲದೇ, ಮುತ್ತಿಂನಂಥಾ ಮುದ್ದಾದ ಅಕ್ಷರಗಳಲ್ಲಿ ಬರೆಯುತ್ತಿದ್ದ ಅವರ ಲೇಖನಗಳನ್ನು ನೋಡುವುದಕ್ಕೇ ಮಜಾ ಕೊಡುತ್ತಿತ್ತು. ಆಡು ಮುಟ್ಟದ ಸೊಪ್ಪಿಲ್ಲ, ಸಂಪಟೂರು ವಿಶ್ವನಾಥರು ಬರೆಯದ ವಿಷಯಗಳೇ ಇಲ್ಲ ಎನ್ನುವಂತೆ ಪ್ರಪಂಚದ ಯಾವುದೇ ಆಗು ಹೋಗುಗಳಾಗಲೀ ಅದರ ಕುರಿತಂತೆ ಥಟ್ ಎಂದು ಲೇಖನಗಳನ್ನು ಬರೆದು ಪ್ರಕಟಿಸುವ ಮೂಲಕ ಒಂದು ರೀತಿಯ ನಡೆದಾಡುವ ವಿಶ್ವಕೋಶವೇ ಆಗಿದ್ದಾರೆ ಎಂದರೂ ಅತಿಶಯವಾಗದು.

SV_Novels

ವೃತ್ತಿಯಲ್ಲಿ ಶಿಕ್ಷರಾಗಿದ್ದ ಕಾರಣ, ಮಕ್ಕಳ ಬಗ್ಗೆ ಅವರಿಗೆ ಹೆಚ್ಚಿನ ಒಲವಿದ್ದ ಕಾರಣದಿಂದ ಮಕ್ಕಳ ಸಾಹಿತ್ಯದಲ್ಲಿ ವಿಶೇಷವಾದ ಮತ್ತು ಅಷ್ಟೇ ವೈವಿಧ್ಯಮಯವಾದ ಕೃಷಿಯನ್ನು ಮಾಡಿದ್ದಾರೆ. ಮಕ್ಕಳ ಕಥಾ ಕೋಶ, ಜನಪ್ರಿಯ ಪುಟಾಣಿಗಳ ಚತುರೋಕ್ತಿಗಳು, ಧೀರ ಬಾಲಕ ಮತ್ತು ಇತರ ಕಥೆಗಳು, ಆನೆಕಥೆ ಮುಂತಾದವುಗಳಲ್ಲದೇ, ಸಮಕಾಲೀನ ಸುಭಾಷಿತಗಳು, ಸನಾತನ ಸುಭಾಷಿತಗಳು, ಭಾರತದ ಸುಭಾಷಿತಗಳು, ಮಕ್ಕಳ ಮೌಲಿಕ ಸುಭಾಷಿತಗಳು ಎಂದು ವಿವಿಧ ಸುಭಾಷಿತಗಳ ಕುರಿತಾಗಿಯೇ ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು ವಿಜ್ಞಾನ ರಸ ಪ್ರಶ್ನೆಗಳು, ಜೈವಿಕ ತಂತ್ರಜ್ಞಾನ, ಸರಳ ವಿಜ್ಞಾನ ಪ್ರಯೋಗಗಳು, ಕಿರಿಯರ ವಿಜ್ಞಾನ ಕೋಶ, ವೈಜ್ಞಾನಿಕ ರಸ ಪ್ರಶ್ನೆ, ಪದಕೋಶ, ಭಾರತದ ಪ್ರತಿಭಾನ್ವಿತರು, 365 ಶ್ರೇಷ್ಠ ವಿಜ್ಞಾನಿಗಳು, ಪ್ರಮುಖ ಜೀವ ವಿಜ್ಞಾನಿಗಳು ಎಂದು ವೈಜ್ಞಾನಿಕ ವಿಚಾರಗಳನ್ನು ಒಳಗೊಂಡ ಹತ್ತಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ.

SV_Novels2

ಸಂಪಟೂರು ವಿಶ್ವನಾಥರು ರಚಿಸಿರುವ ಮಕ್ಕಳ ಕಥಾಲೋಕ, ಹಬ್ಬಗಳು ಮತ್ತು ದಿನಾಚರಣೆಗಳು, ಕಾಡಿನ ರಾಜ ಮತ್ತು ಇತರ ಕಥೆಗಳು, ಮೂವರು ಮೂರ್ಖರು ಮತ್ತು ಮಕ್ಕಳ ಇತರ ಕಥೆಗಳು, ತೋಟದಳ್ಳಿ ತಾತನ ಪಟ ಮತ್ತು ಮಕ್ಕಳ ಇತರ ಕಥೆಗಳು, ನಾಳಿನ ನಾಗರೀಕರಿಗೆ ನೂರೆಂತು ಸಲಹೆ, ನೀವೆಷ್ಟು ಜನರು, ಸೋಲಿಲ್ಲದ ಸರದಾರರು, ಸಮಯಕ್ಕೊಂದು ಸಾರಸೋಕ್ತಿ ಸ್ವಾರಸ್ಯ, ಮಕ್ಕಳನ್ನು ಬೆಳೆಸುವುದು ಹೇಗೆ? ಸರಳ ಕನ್ನಡ ಶಾಲಾ ಪ್ರಬಂಧಗಳು, ಹಾಸ್ಯ ಚಟಾಕಿ, ಕ್ಷಣಕೊಂಡು ಕಥೆ, ನೆಮ್ಮದಿಯ 222 ನಲ್ನುಡಿಗಳು ಮುಂತಾದ ಪುಸ್ತಕಗಳು ಇಂದಿಗೂ ಸಹಾ Amazon Flipkart, Miso ಮುಂತಾದ online ಗಳಲ್ಲಿ ಬಿಸಿ ಬಿಸಿ ದೋಸೆಯಂತೆ ಖರ್ಚಾಗುತ್ತಿದೆ ಎಂದರೆ ಅವರ ಬರವಣಿಗೆಯ ಮೌಲ್ಯದ ಅರಿವಾಗುತ್ತದೆ.

sv3

ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸೇವೆಯನ್ನು ಸಲ್ಲಿಸಿರುವ ಸಂಪಟೂರು ವಿಶ್ವನಾಥರ ಸಾಥನೆಯನ್ನು ಗುರುತಿಸಿ ಅನೇಕ ಸಂಘಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದು, ಅವುಗಳಲ್ಲಿ ಪ್ರಮುಖವಾದವು ಹೀಗಿವೆ.

  • ಗೊರೂರು ಸಾಹಿತ್ಯ ಪ್ರಶಸ್ತಿ,
  • ಎಂ.ಜಿ. ರಂಗನಾಥನ್‌ ಸ್ಮಾರಕ ಪ್ರಶಸ್ತಿ,
  • ಸ್ನೇಹ – ಸೇತು ಬರಹಗಾರರ ಪ್ರಶಸ್ತಿ,
  • ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ,
  • ಹಾಸ್ಯ ಬ್ರಹ್ಮ ಟ್ರಸ್ಟ್‌ ಗೌರವ,
  • ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ,
  • ಕರ್ನಾಟಕ ವಿಭೂಷಣ ಪ್ರಶಸ್ತಿ
  • ಕಾವ್ಯ ಸಿಂಚನ ಬರಹಗಾರರ ಬಹುಮಾನ,
  • ಕೆಂಪೇಗೌಡ ಪ್ರಶಸ್ತಿ, ಮುಂತಾದ ಪ್ರಶಸ್ತಿ
  • 1982 & 1995 ರಲ್ಲಿ ಬೆಂಗಳೂರು ನಗರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಬೆಂಗಳೂರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರೂ, ಅಂತಹ ಶ್ರೇಷ್ಠ ಸಾಧಕರಿಗೆ ಸಲ್ಲಬೇಕಾದ ನಿಜವಾದ ಸರ್ಕಾರೀ ಗೌರವಗಳು ಲಭಿಸಿಲ್ಲದೇ ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

sv5

ತಮ್ಮ ಜ್ಞಾನ ಮತ್ತು ವಿದ್ವತ್ತಿಗೆ ಸಲ್ಲಬೇಕಾದ ಗೌರವಗಳು ಸಲ್ಲಲಿಲ್ಲ ಎಂದು ಕಿಂಚಿತ್ತೂ ಬೇಸರಗೊಳ್ಳದೇ, ಜಿ.ಎಸ್. ಶಿವರುದ್ರಪ್ಪನವರ ಎದೆ ತುಂಬಿ ಹಾಡುವೆನು ಪದ್ಯದಲ್ಲಿ ಬರುವ, ಯಾರು ಕೇಳಲಿ ಎಂದು ನಾಡು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ಎನಗೆ ಎನ್ನುವ ಸಾಲಿನಂತೆ ಯಾರು ತಮ್ಮನ್ನು ಗುರುತಿಸಲೀ ಬಿಡಲಿ ತಮ್ಮ ಜ್ಞಾನ ಸಂಪತ್ತಿನ ವೃದ್ಧಿಗಾಗಿ ಮತ್ತು ಆತ್ಮತೃಪ್ತಿಗಾಗಿ ಅಗಣಿತೆವಾಗಿ ನಿರಂತವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನಮ್ಮ ನಿಮ್ಮೆಲ್ಲರ ಹೆಮ್ಮೆಯ ಸಂಪಟೂರು ವಿಶ್ವನಾಥರು ಎಲ್ಲರ ಪ್ರೀತಿಯ ಎಸ್.ವಿ. ನಿಜಕ್ಕೂ ನಮ್ಮ ಪ್ರೀತಿಯ ಕನ್ನಡದ ಕಲಿಗಳೇ ಸರಿ. ಭಗವಂತ ಅವರಿಗೆ ಹೆಚ್ಚಿನ ಆಯುರಾರೋಗ್ಯ ನೀಡಿ ಇನ್ನೂ ನೂರ್ಕಾಲ ಸಮಸ್ತ ಕನ್ನಡಿಗರಿಗೆ ಮಾರ್ಗದರ್ಶಕರಾಗಿರಲೀ ಎಂದೇ ನಮ್ಮೆಲ್ಲರ ಆಶಯವಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಆರಂಭದ ದಿನಗಳಲ್ಲಿ ಶ್ರೀ ಸಂಪಟೂರು ವಿಶ್ವನಾಥರ ಮನೆಯಲ್ಲಿಯೇ ಬಾಡಿಗೆಗೆ ಇದ್ದ ಮತ್ತು ವಿಶ್ವನಾಥರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದ ನನ್ನ ನೆಚ್ಚಿನ ಗುರುಗಳಾದ ಶ್ರೀ ಶ್ರೀಪಾದ ಹೆಗಡೆಯವರಿಗೆ (SMH) ಹೃತ್ಪೂರ್ವಕ ಧನ್ಯವಾದಗಳು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s