ಆರೇ ಯಾರಿದು? ನೋಡೋದಿಕ್ಕೆ ಜೀ ಟೀವಿಯಲ್ಲಿ ಬರುವ ಸತ್ಯಾ ಧಾರವಾಹಿಯ ನಾಯಕಿ ಗೌತಮಿ ಜಾಧವ್ ಅವರ ತರಹಾ ಕಾಣ್ತಾ ಇದ್ದಾರಲ್ಲಾ! ಅಂತ ಯೋಚನೆ ಮಾಡ್ತಿದ್ರೇ, ಒಂದು ರೀತಿಯಲ್ಲಿ ಸತ್ಯಾ ಧಾರವಾಹಿಯ ನಾಯಕಿ ಸತ್ಯಾಳ ರೀತಿಯಲ್ಲೇ ಜೀನ್ಸ್ ಪ್ಯಾಂಟ್ ಶರ್ಟ್ ಹಾಕಿಕೊಂಡು ಒಂದು ರೀತಿಯ ಗಂಡು ಹುಡುಗರ ರೀತಿಯಲ್ಲಿರುವ ಮಾತೃಹೃದಯದ ಅಪ್ಪಟ ಕನ್ನಡತಿ. ವೇಷ ನೋಡಿ ಗಂಡು ಬೀರಿಯ ಹೆಣ್ಣು ಎಂದು ಯೋಚಿಸಿದರೆ, ಆಕೆಯ ಕಾರ್ಯನೋಡಿದರೆ, ಗಂಡಸರೂ ನಾಚಿಕೆ ಪಟ್ಟುಕೊಳ್ಳುವಂತಾಗುತ್ತದೆ ಎಂದರೆ ಅತಿಶಯವಲ್ಲ. ಹೌದು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಮ್ಮ ನಿಶ್ಕಲ್ಮಶ ಕನ್ನಡ ಪ್ರೇಮ ಮತ್ತು ನಿಸ್ವಾರ್ಥ ಸಮಾಜ ಸೇವೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹೆಸರುವಾಗಿಯಾಗಿರುವ ಕುಮಾರಿ ಅನು ಅರ್ಥಾತ್ ಎಲ್ಲರ ಪ್ರೀತಿಯ ಅಕ್ಕ ಅನುಳನ್ನು ಪರಿಚಯ ಮಾಡಿಕೊಳ್ಳೋಣ.
ಮೂಲತಃ ರಾಯಚೂರಿನ ಸಿಂದನೂರಿನ ಚಿಕ್ಕ ಬೇರಗಿ ಗ್ರಾಮದ ಭೂತಾಯಿಯನ್ನೇ ನಂಬಿಕೊಡಿರುವ ರೈತರ ನಾಲ್ಕು ಜನ ಹೆಣ್ಣು ಮಕ್ಕಳಲ್ಲಿ ಮೂರನೆಯವರಾಗಿ ಅನು ಅವರ ಜನನವಾಗುತ್ತದೆ. ಬಾಲ್ಯದಿಂದಲೂ ಒಂದು ರೀತಿಯಾಗಿ ಧೈರ್ಯವಂತೆ ಹುಡುಗಿ. ಚಿಕ್ಕಂದಿನಿಂದಲೂ ಆಕೆ ಆಟ ಪಾಠವೆಲ್ಲವೂ ಹುಡುಗಿಯರಿಗಿಂತಲೂ ಹುಡುಗರೊಂದಿಗೆ ಹೆಚ್ಚು. ಹಾಗಾಗಿ ಅನೇಕ ಬಾರಿ ನೆರೆಹೊರೆಯವರು ಅವರ ತಂದೆ ತಾಯಿಯರಿಗೆ ಇದೇನು ನಿಮ್ಮ ಮಗಳು ಒಳ್ಳೇ ಗಂಡು ಬೀರಿಯಂತೆ ಆಡ್ತಾಳೆ. ಸ್ವಲ್ಪ ಜಾಗ್ರತೆ ಎಂದು ಎಚ್ಚರ ವಹಿಸಿ ಎಂದು ಸಲಹೆ ನೀಡಿದ್ದೂ ಉಂಟು. ಅರೇ ಮಗಳು ಇನ್ನೂ ಚಿಕ್ಕವಳು. ನಮ್ಮ ತವರು ಮನೆಯಲ್ಲಿ ಇರುವಾಗ ಏನು ಬೇಕಾದರೂ ಮಾಡಿಕೊಳ್ಲಲಿ ಬಿಡಿ ಹೇಗೂ 18ವರ್ಷ ಆದ ಕೂಡಲೇ ಮದುವೆ ಮಾಡಿ ನಮ್ಮ ಜವಾಬ್ಧಾರಿ ಮುಗಿಸಿಕೊಂಡರೆ, ಅತ್ತೆಯ ಮನೆಗೆ ಹೋದ ನಂತರ ಆಕೆಗೂ ಜವಾಬ್ಧಾರಿ ಬರುತ್ತದೆ ಎಂದು ಮಗಳ ಕುರಿತಾಗಿ ಚಾಡಿ ಹೇಳುವವರಿಗೆ ಅನು ಪೋಷಕರ ಜವಾಬು ಆಗಿರುತ್ತಿತ್ತು.
ಆದರೆ ಅನು ತಮ್ಮ ಪೋಷಕರ ಭಾವನೆಗಳಿಗೆ ತದ್ವಿರುದ್ದ. ತಮ್ಮ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿ ಕಳುಹಿಸುವುದು ಅಕೆಗೆ ಸುತರಾಂ ಇಷ್ಟವಿಲ್ಲ. ಹಾಗಾಗಿ ಆಕೆ ಇತರೇ ಹೆಣ್ಣು ಮಕ್ಕಳಿಗಿಂತಲೂ ವಿಭಿನ್ನವಾಗಿರ ಬೇಕೆಂದು ಆಲೋಚಿಸಿ, ಆಕೆ ಸಮಾಜಮುಖಿಯಾಗಿ ಸಮಾಜಸೇವೆ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ. ಆ ಕಾರಣದಿಂದಾಗಿಯೇ ರೋಗರುಜಿನಗಳು ಹೆಚ್ಚಾಗಿ ಸಾಂಕ್ರಾಮಿಕ ಖಾಯಿಲೆಗಳು ಹೆಚ್ಚಾಗುತ್ತದೆ. ಹಾಗಾಗಿಯೇ ಮೊದಲು ತಮ್ಮ ಊರಿನಿಂದಲೇ ನಮ್ಮ ನೆಚ್ಚಿನ ಪ್ರಧಾನಿಗಳ ಆಶಯವಾದ ಸ್ವಚ್ಛ ಭಾರತ ಅಭಿಯಾನದಡಿ ಹಳ್ಳಿಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಕೇವಲ ತಮ್ಮ ಹಳ್ಳಿಯಲ್ಲದೇ, ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿ ಊರಿನವರ ಜೊತೆಗೆ ಸೇರಿಕೊಂಡು ಹಳ್ಳಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಆರಂಭದಲ್ಲಿ ಈ ಹುಡುಗಿ ಏನು ಮಾಡ್ತಾಳೇ? ಎಂದು ಮೂಗು ಮುರಿದವರೇ, ಆಕೆ ಮತ್ತು ಆಕೆಯ ತಂಡವರು ಹಳ್ಳಿ ಹಳ್ಳಿಗಳಲ್ಲಿ ಮಾಡುತ್ತಿದ್ದ ಸ್ವಚ್ಚತೆಯನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತಾದಾಗ, ಜನರಿಗೂ ಆಕೆಯ ಮೇಲೆ ನಂಬಿಕೆ ಬಂದು ಆಕೆಗಿಂತಲೂ ವಯಸ್ಸಿನಲ್ಲಿ ಕಿರಿಯರಲ್ಲದೇ ದೊಡ್ಡವರು ಸಹಾ ಅಕೆಯನ್ನು ಕೇವಲ ಅನು ಎಂದು ಹೆಸರಿಟ್ಟು ಕರೆಯದೇ, ಪ್ರೀತಿಯಿಂದ ಅಕ್ಕ ಅನು ಎಂದು ಕರೆಯಲು ಆರಂಭಿಸಿದ್ದು, ಪ್ರಾರಂಭದಲ್ಲಿ ಆಕೆಗೆ ಮುಜುಗರ ತಂದರೂ, ನಂತರದ ದಿನಗಳಲ್ಲಿ ಅದೇ ಹೆಸರು ಆಕೆಗೆ ಅಪ್ಯಾಯಮಾನ ಎನಿಸಿ ಅಕ್ಕರೆಯಿಂದ ಅದೇ ಹೆಸರನ್ನೇ ಅಪ್ಪಿಕೊಂಡರು. ಗೌರವ ಎನ್ನುವುದನ್ನು ಕೇಳಿ ಪಡೆಯುವುದಕ್ಕಿಂತ, ಅದನ್ನು ಗಳಿಸಿ ಪಡೆದಾಗ ಅದಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುತ್ತದೆ ಎನ್ನುವುದಕ್ಕೆ ಅಕ್ಕ ಅನು ಹೆಸರು ಜ್ವಲಂತ ಉದಾಹರಣೆ ಎಂದರೂ ತಪ್ಪಾಗದು.
ಕಾಡು ಇದ್ದರೆ ಮಾತ್ರಾ ನಾಡು ಎಂಬುದನ್ನು ಅರಿತ್ ಅನು ಸ್ವಚ್ಚತೆಯ ಜೊತೆಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಅಭಿಯಾನವನ್ನು ಆರಂಭಿಸಿ ತಮ್ಮನ್ನು ಇನ್ನೂ ಹೆಚ್ಚಿನ ಸಮಾಜಮುಖೀ ಕಾರ್ಯದಲ್ಲಿ ತೊಡಗಿಸಿಕೊಂಡಾಗ, ಅದನ್ನು ವಿರೋಧಿಸಿ ಅನೇಕರು ಆಕೆಯನ್ನೂ ಮತ್ತು ಅವರ ಪೋಷಕರನ್ನು ಬಹಳಷ್ಟು ಅವಮಾನ ಮಾದಿದಾಗ, ಅವರ ತಂದೆತಾಯಿಗಳಿಗೆ ಆ ಅಪಮಾನಗಳನ್ನು ಸಹಿಸದೇ, ಆವರು ಅನು ಇನ್ನು ಓದಿದ್ದು ಸಾಕು ಎಂದಾಗ, ಮತ್ತೆ ಸೆಟೆದು ನಿಂತ ಅನು, ಪದವಿಯನ್ನು ಗಳಿಸುವುದಕ್ಕಾಗಿ ತನ್ನೂರನ್ನು ಬಿಟ್ಟು ಮೋಹದ ಮಾಯಾನಗರಿ ಬೆಂಗಳೂರಿಗೆ ಬಂದು ಮಹಾರಾಣಿ ಕಾಲೇಜಿನ ಕಲಾ ವಿಭಾಗದಲ್ಲಿ ಪದವಿಗೆ ಸೇರಿಕೊಂಡು, ಪದವಿ ಮುಗಿಸಿದ ನಂತರ ಅಧಿಕಾರಯುತವಾಗಿ ಸಮಾಜಮುಖೀ ಸೇವೆ ಸಲ್ಲಿಸಲು ಅನುಕೂಲವಾಗುವ ಪೋಲೀಸ್ ಅಧಿಕಾರಿ ಅದರಲ್ಲೂ ಡಿವೈಎಸ್ಪಿ ಆಗಬೇಕೆಂಬ ಆಸೆಯನ್ನು ಹೊತ್ತಿದ್ದಾರೆ.
ಇನ್ನು ಬೆಂಗಳೂರಿಗೆ ಓದಲು ಬಂದಾಗ, ಹೊಸಾ ಊರು, ಹೊಸಾ ಜನತೆ ಆದರೂ, ಆಕೆಯ ಸಮಾಜಮುಖಿ ಸೇವೆಗಳಿಗೆ ಕೆಲವು ಮಾಧ್ಯಮಗಳು ಪ್ರಚಾರ ನೀಡಿದ್ದಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿಯೂ ಅದರ ಕುರಿತಾಗಿ ಪ್ರಚಾರ ಇದ್ದ ಕಾರಣ, ಹೊಸಾ ತಂಡವನ್ನು ಕಟ್ಟಿಕೊಂಡು ತನ್ನ ನೆಚ್ಚಿನ ಸಮಾಜಮುಖೀ ಸೇವೆಗಳಲ್ಲಿ ನಿರತರಾದರು. ಆದರೆ ಈ ಬಾರಿ ಆಕೆ ಆಯ್ಕೆ ಮಾಡಿಕೊಂಡಿದ್ದು ಕನ್ನಡ ಶಾಲೆಗಳ ಉದ್ಧಾರ. ಕನ್ನಡ ಭಾಷೆ ಉಳಿಯಬೇಕೆಂದರೆ ಕನ್ನಡ ನಾಡು ಉಳಿಯಬೇಕೆಂದರೆ ಕೇವಲ ಹೋರಾಟ ಮಾತ್ರ ಮಾಡುವುದರಿಂದ ಯಾವುದು ಸಾಧ್ಯವಾಗುವುದಿಲ್ಲ ಅದಕ್ಕೆ ಬೇಕಾದ ಕೆಲಸಗಳನ್ನು ಮಾಡಬೇಕು ಎನ್ನುವುದು ಅವರ ಅಭಿಪ್ರಾಯ. ಹಾಗಾಗಿ ಪಿಯುಸಿ ಓದುತ್ತಿರುವಾಗಲಿಂದಲೇ ಕನ್ನಡ ಶಾಲೆಗಳನ್ನು ಉಳಿಸಬೇಕು ತನ್ಮೂಲಕ ಕರ್ನಾಟಕ ಪೂರ್ತಿ ಕನ್ನಡಮಯವಾಗಬೇಕು ಎಂಬ ಆಸೆಯಿಂದ ಅಭಿಯಾನವನ್ನು ಆರಂಭಿಸಿದಾಗ ಮೊದಲು ಆಕೆಗೆ ಹೆಚ್ಚಿನ ಬೆಂಬಲ ಸಿಕ್ಕಿರಲಿಲ್ಲ.
ನಂತರ ದಿನಗಳಲ್ಲಿ ಕನ್ನಡ ಬೆಳೆಯಬೇಕು ಎಂದರೆ ಮೊದಲು ಕನ್ನಡ ಉಳಿಯ ಬೇಕು. ಹಾಗೆ ಕನ್ನಡ ಉಳಿಯಬೇಕು ಎಂದರೆ ಅತ್ಯಗತ್ಯವಾಗಿ ಮುಚ್ಚುತ್ತಿರುವ ಕನ್ನಡ ಶಾಲೆಗಳು ಉಳಿಸಲೇ ಬೇಕು ಎಂಬ ಫಣ ತೊಟ್ಟರು. ಮೊದಲು ಕನ್ನಡ ಶಾಲೆಗಳಿಗೆ ಮಕ್ಕಳು ಬಾರದೇ, ಖಾಸಗಿ ಶಾಲೆಗಳಿಗೇ ಏಕೆ ಸೇರಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಖಾಸಗಿ ಶಾಲೆಯಲ್ಲಿ ಇರುವಷ್ಟು ಸೌಲಭ್ಯಗಳು ಕನ್ನಡ ಶಾಲೆಗಳಲ್ಲಿ ಇರುವುದಿಲ್ಲವಾದ್ದರಿಂದ ಕನ್ನಡ ಶಾಲೆಗಳಿಗೆ ಮಕ್ಕಳು ಬರಲು ಇಷ್ಟ ಪಡುತ್ತಿಲ್ಲ ಎಂಬುದನ್ನು ಅರಿತ ಅನು, ತಮ್ಮ ತಂಡದವರೊಡನೆ ಶಾಲೆಯ ವಾತಾವರಣವನ್ನು ಶುಚಿ ಗೊಳಿಸಿದ್ದಲ್ಲದೇ, ಅದಕ್ಕೆ ಆಕರ್ಷಕವಾದ ಬಣ್ಣ ಬಣ್ಣಗಳನ್ನು ಬಳಿಯುವ ಮೂಲಕ ಶಾಲೆಯತ್ತ ಮಕ್ಕಳು ಚಿತ್ತ ಹರಿಸುವಷ್ಟರಲ್ಲಿ ಸಫಲರಾದರು. ಮಕ್ಕಳಿಗೆ ಕಲಿಯಲು ಸುಲಭವಾಗುವಂತೆ ಕನ್ನಡ ವರ್ಣಮಾಲೆಗಳು, ವರ್ಣರಂಜಿತ ಚಿತ್ರಗಳು ಮತ್ತು ನಕ್ಷೆಗಳನ್ನು ಬಿಡಿಸುವ ಮೂಲಕ ಇವೆಲ್ಲವೂ ಸರ್ಕಾರೀ ಶಾಲೆಗಳೇ ಎನ್ನುವಂತೆ ಮಾಡಿರುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ. ಇದುವರೆಗೂ, ಅಕ್ಕ ಅನು ಅವರ ತಂಡ ಸುಮಾರು 50+ ಶಾಲೆಗಳಿಗೆ ಹೊಸರೂಪವನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ.
ನಾಡಿನ ಎಲ್ಲ ಕಡೆಗಳಲ್ಲಿಯೂ ಕನ್ನಡ ಬೆಳಗಬೇಕು. ಎಲ್ಲರಿಗೂ ಉತ್ತಮವಾದ ಶಿಕ್ಷಣ ದೊರೆಯುವ ಮೂಲಕ ಹಿಂದುಳಿದ ಪ್ರದೇಶಗಳಲ್ಲಿ ಇರುವವರಿಗೆ ಉದ್ಯೋಗ ಸಿಗಬೇಕು ಎಂಬ ಆಸೆಯಿಂದ ಯಾವುದೇ ರಾಜಕೀಯ ಪಕ್ಷ ಮತ್ತು ಸಿದ್ಧಾಂತಗಳಿಗೆ ಸಿಕ್ಕಿ ಹಾಕಿಕೊಳ್ಳದೇ, ಹೆಚ್ಚಿನ ಪ್ರಚಾರವನ್ನೂ ಬಯಸದ ಮಾಡುತ್ತಿದ್ದ ಆಕೆಯ ನಿಸ್ವಾರ್ಥ ಸಮಾಜ ಸೇವೆ ಸದ್ದಿಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಂತೆಯೇ ಆಕೆಯ ಕೈ ಬಲಪಡಿಸಲು ಮತ್ತಷ್ಟು ಜನರು ಸೇರಿಕೊಂಡಾಗ ಇದುವರೆವಿಗೂ, 50+ ಶಾಲೆಗಳಿಗೆ ಬಣ್ಣ ಹಚ್ಚಿರುವುದಲ್ಲದೇ, 10ಕ್ಕೂ ಹೆಚ್ಚು ದೇವಾಲಯಗಳು ಮತ್ತು ಅದರ ಸುತ್ತಮುತ್ತಲಿನ ಕಲ್ಯಾಣಿಗಳನನ್ನು ಪುನರ್ಚೆತನ ಗೊಳಿಸಿರುವುದಲ್ಲದೇ ಸುಮಾರು 6 ಬಾವಿಗಳನ್ನೂ ಶುದ್ಧಗೊಳಿಸಿದ್ದಾರೆ. ಆಕೆಯ ಕೆಲಸ ಕಾರ್ಯಗಳು ಕೇವಲ ಬೆಂಗಳೂರಿನ ಸುತ್ತಮುತ್ತವಲ್ಲದೇ, ಬೀದರ್, ಹುಬ್ಬಳ್ಳಿ, ಯಾದಗಿರಿ, ಕಲಬುರ್ಗಿ, ರಾಯಚೂರು, ಕೊಡಗು ಜಿಲ್ಲೆಗಳಲ್ಲಿ ಸ್ವಚ್ಛತಾ ಅಭಿಯಾನ ಮಾಡುತ್ತಿರುವುದಲ್ಲದೇ, ಇತ್ತೀಚೆಗೆ ನಾಗರಹೊಳೆಯಲ್ಲಿನ ಗಿರಿಜನರ ಆಶ್ರಮ ಶಾಲೆಗಳಿಗೆ ಕಾಯಕಲ್ಪ ಮಾಡುವ ಮೂಲಕ ಯುವ ಪೀಳಿಗೆಗೆ ಒಳ್ಳೆ ಮಾದರಿಯಾಗಿದ್ದಾರೆ ಎನ್ನುವುದು ಸಂತಸದ ವಿಷಯವಾಗಿದೆ.
ಹಳ್ಳಿ ಹಳ್ಳಿಗಳಿಗೆ ಹೋಗಿ ಅಲ್ಲಿಯ ಶಾಲೆಗಳ ಜೊತೆಗೆ ಪಾಳು ಬಿದ್ದ ಕೆರೆ, ಬಾವಿ, ಚರಂಡಿಗಳನ್ನು ಶುದ್ದಿ ಮಾಡುತ್ತಾ ಹಳ್ಳಿಗರಲ್ಲಿ ಸ್ವಚ್ಛತೆಯ ಬಗ್ಗೆ ಮಹತ್ವವನ್ನು ಹೇಳುವ ಸಂದರ್ಭದಲ್ಲಿ ಅನೇಕ ಹಳ್ಳಿಗರು ಅವರಿಗೆ ಸ್ಪಂದಿಸಿ, ಅವರರೊಂದಿಗೆ ಕೈ ಜೋಡಿಸಿದಾಗ ಕೆಲಸವೂ ಬೇಗ ಮುಗಿಯುತ್ತದೆ. ಆದರೆ ಅನೇಕ ಕಡೆಯಲ್ಲಿ ಶಾಲೆಗಳಿಗೆ ಅನು ಅವರ ತಂಡದವರು ಬಣ್ಣ ಹಚ್ಚುವಾಗ, ಚರಂಡಿಯಲ್ಲಿ ಭಾವಿಯಲ್ಲಿ ಇಳಿದು ಊರನ್ನು ಸ್ವಚ್ಛಗೊಳಿಸುವಾಗ, ತಮಗೆ ಸಂಬಧವೇ ಇಲ್ಲವೇನೋ ಎನ್ನುವಂತೆ ಕೈ ಕಟ್ಟಿಕೊಂಡು ನಿಂತು ನೋಡುವಾಗ ಆರಂಭದಲ್ಲಿ ತುಸು ಬೇಸರ ತರಿಸಿದರೂ, ಇತ್ತೀಚಿನ ದಿನಗಳಲ್ಲಿ ಅವೆಲ್ಲವೂ ಸಹಜ ಎನ್ನುವಂತೆ ತಮ್ಮ ಕೆಲಸವನ್ನು ಆದಷ್ಟೂ ಶೀಘ್ರವಾಗಿ ಮುಗಿದಾಗ ಮನಸ್ಸಿಗಾಗುವ ಸಂತಸ ಅವರ್ಣನೀಯ ಎಂದು ಕಣ್ಣು ಮಿಟಿಕಿಸಿ ಅನು ಹೇಳುವಾಗ ಅಕೆಯ ಮುಗ್ಧತೆಯ ಅರಿವಾಗುತ್ತದೆ.
ಸಮಾಜಸೇವೆಯನ್ನು ನಾನೇ ಮಾಡಬೇಕು ಎಂದಿಲ್ಲಾ. ಯಾರು ಬೇಕಾದರೂ ಮಾಡಬಹುದು ಆದರೆ ಸಮಾಜ ಸೇಬೆ ಮಾಡುವ ಮನಸ್ಸಿರಬೇಕಷ್ಟೆ ಎಂದು ಹೇಳುವುದಲ್ಲದೇ, ನಮ್ಮೀ ಕೆಲಸಗಳಿಗೆ ಕೇವಲ ನನ್ನನ್ನಷ್ಟೇ ಹೊಗಳಿ ಬೆಳೆಸಬೇಡಿ, ಇದು ಇಡೀ ತಂಡದ ಪರಿಶ್ರಮವಾಗಿದ್ದು ನಾನು ಕೇವಲ ನಪಮಾತ್ರ. ಹಾಗಾಗಿ ಮುಂದೊಂದು ದಿವಸ ಆಕೆಯನ್ನು ಬೆಳಸುತ್ತಲೇ, ನಾವು ಹಿಂದೆ ಉಳೆದುಬಿಟ್ಟೆವು ಎನ್ನುವ ಭಾವನೆ ಅವರಲ್ಲಿ ಮೂಡಬಾರದು ಹಾಗಾಗಿ ಅವರಿಗೂ ಇದರ ಶ್ರೇಯ ಸಮಾನವಾಗಿ ಸಲ್ಲುತ್ತದೆ ಎಂದು ನಿಶ್ಕಲ್ಮಶವಾಗಿ ಅಕ್ಕ ಅನು ತನ್ನ ಮನದಾಳದ ಮಾತನ್ನು ಬಿಚ್ಚಿಡುತ್ತಾರೆ. ಇನ್ನು ತನ್ನಂತೆ ಊರು ಬಿಟ್ಟು ಬಂದ ಹೆಣ್ಣುಮಕ್ಕಳಿಗೆ, ಹಳ್ಳಿಯಿಂದ ನಗರಕ್ಕೆ ಬಂದು ದಯವಿಟ್ಟು ಅಡ್ಡದಾರಿ ಹಿಡಿದು ಅಪ್ಪ ಅಮ್ಮನ ಮಾನ ಮರ್ಯಾದೆಯನ್ನು ಮಾತ್ರಾ ಹರಾಜು ಹಾಕಬೇಡಿ ಎಂಬ ಕಿವಿಮಾತು ನಿಜಕ್ಕೂ ಅದ್ಭುತವೇ ಸರಿ.
ಹೆಣ್ಣು ಮಕ್ಕಳೆಂದರೆ ತಲೆ ತಗ್ಗಿಸಿಕೊಂಡು ಹೇಳಿದ ಕೆಲಸ ಮಾಡಿಕೊಂಡು ಹೋಗಬೇಕು ಎನ್ನುವ ಈ ಪುರುಷ ಪ್ರಧಾನದ ಸಮಾಜದಲ್ಲಿ. ಮದುವೆ ಆಗುವ ವಯಸ್ಸಿನ ಹುಡುಗಿ ಪ್ಯಾಂಟ್ ಶರ್ಟ್ ಹಾಕಿಕೊಂಡು ಬೈಕ್ ಓಡಿಸ್ಕೊಂಡು ಹುಡುಗರ ತಂಡವನ್ನು ಕಟ್ಟಿಕೊಂಡು ಸಮಾಜ ಸೇವೆಗೆ ಇಳಿದಾಗ, ಗಂಡುಬೀರಿಯಂತೆ ಊರೂರು ಅಲೀತಾಳೆ ಎಂಬ ಜನರ ಚುಚ್ಚು ಮಾತುಗಳಿಂದಾಗ, ಇದೇ ವಿಷಯದ ಕುರಿತಾಗಿ ಮನೆಯಲ್ಲಿ ಪೋಷಕರೊಂದಿಗೆ ಅಗ್ಗಾಗ್ಗೆ ಜಗಳವಾಗಿ ತಿಂಗಳಾನು ಗಟ್ಟಲೇ ಮಾತು ಬಿಟ್ಟಿರುವ ಸಂದರ್ಭಗಳೂ ಉಂಟು.
ಹೆಣ್ಣು ಸಮಾಜಕ್ಕೆ ಕಣ್ಣು ಎನ್ನುವಂತೆ, ಹೆಣ್ಣು ತಲೆತಗ್ಗಿಸಿ ಮೂರು ಗಂಟು ಹಾಕಿಸಿಕೊಂಡರೆ ಒಂದು ಮನೆಗೆ ಮಾದರಿಯಾಗಬಲ್ಲಳು, ಅದೇ ಹೆಣ್ಣು ತಲೆಯೆತ್ತಿ ನಿಂತರೆ ಇಡೀ ಸಮಾಜಕ್ಕೆ ಉತ್ತಮ ಮಾದರಿಯಾಗಬಲ್ಲಳು ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿರುವ ಎಲ್ಲರ ಪ್ರೀತಿಯ ಕೆಚ್ಚೆದೆಯ ಕನ್ನಡತಿ ಅಕ್ಕ ಅನುಳ ಕನಸು ನನಸಾಗಿ ಆಕೆ ಡಿವೈಎಸ್ಪಿ ಆಗಿ ಅಧಿಕಾರಯುತವಾಗಿ ಇನ್ನೂ ಹೆಚ್ಚಿನ ಸಮಾಜಮುಖೀ ಸೇವೆಯನ್ನು ಮಾಡಿವಂತಾಗಲಿ ಎನ್ನುವುದು ಎಲ್ಲರ ಆಶಯವಾಗಿದೆ. ಸಮಾಜ ಸೇವೆಯ ಜೊತೆ ಜೊತೆಯಲ್ಲೇ ನಿಸ್ವಾರ್ಥವಾಗಿ ಕನ್ನಡ ಸೇವೆಯನ್ನು ಮಾಡುತ್ತಿರುವ ಅಕ್ಕ ಅನು ನಿಜಕ್ಕೂ ನಮ್ಮೆ ಹೆಮ್ಮೆಯ ಕನ್ನಡದ ಕಲಿಗಳು ಎನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಕನ್ನಡ ತಾಯಿ ಭುವನೇಶ್ವರಿಯ ಅನುಗ್ರಹ ಆಕೆಯ ಮೇಲೆ ಸದಾಕಾಲ ಇರಲಿ ಎಂದು ಹಾರೈಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ