ಜಾಕ್ ಅನಿಲ್

jak5ಅರೇ ಇದೇನಿದ ಹೆಸರು? ಗಾಡಿ ಪಂಕ್ಚರ್ ಆದಾಗ ಟೈರ್ ಬದಲಿಸುವಾಗ ಬಳಸುವ ಜ್ಯಾಕ್ ಇವರ ಹೆಸರಿನ ಜೊತೆ ಏಕೆ ಬಂತು? ಎಂಬ ಯೋಚನೆ ಬರುವುದು ಸಹಜ. ಆದರೆ ಈ ಉಪಮೇಯವನ್ನು ತಮ್ಮ ಸಾಧನೆಯಿಂದ ಪಡೆದಿಕೊಂದಿದ್ದಾರೆ ಎಂದರೆ ಅಚ್ಚರಿ ಆಗಬಹುದು ಅಲ್ವೇ? ಕನ್ನಡ ಹಲಸಿನ ಹಣ್ಣಿಗೆ ಇಂಗ್ಲೀಷಿನಲ್ಲಿ Jack fruit ಎಂದು ಕರೆಯುತ್ತಾರೆ. ಹಾಗಾಗಿ ಇಂದಿನ ನಮ್ಮ ಕನ್ನಡದ ಕಲಿಗಳು ನಾಯಕರಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಹಲಸಿನ ಗಿಡಗಳ ಬಗ್ಗೆ ವಿಶೇಷವಾದ ಕೃಷಿ ನಡೆಸಿ, ದೇಶ ವಿದೇಶಗಲ್ಲಿ ಒಂದು ರೀತಿಯಲ್ಲಿ ಹಲಸಿನ ಹಣ್ಣು ಮತ್ತು ಗಿಡಗಳ ರಾಯಾಭಾರಿಗಳಾಗಿದ್ದಾರೆ ಎಂದರು ತಪ್ಪಾಗದ ಅನಿಲ್ ಅವರ ಬಗ್ಗೆ ತಿಳಿಯೋಣ ಬನ್ನಿ.

ಅನಿಲ್ ಮೂಲತಃ ಕರ್ನಾಟಕದ ಮತ್ತು ಕೇರಳದ ಗಡಿಭಾಗದವರು. ಬಾಲ್ಯದಲ್ಲೇ ತಮ್ಮ ತಂದೆಯವರನ್ನು ಕಳೆದುಕೊಂಡು ಅಮ್ಮನ ಆರೈಕೆಯಲ್ಲೇ ಬೆಳೆದವರು. ಕಡುಬಡತನದಿಂದಾಗಿ ಜೀವನ ನಡೆಸುವುದಕ್ಕಾಗಿ ತಾಯಿ ತಮ್ಮ ಊರಿನ ಬಳಿಯೇ ಇದ್ದ ರಬ್ಬರ್ ಗಿಡಗಳ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸುವ ಕಸಿಮಾಡುವ ಕಾಯಕದಲ್ಲಿ ತೊಡಗಿರುತ್ತಾರೆ. ಹಾಗೆ ಅಮ್ಮನ ಜೊತೆ ಬಿಡುವಿನ ಸಮಯದಲ್ಲಿ ಸರ್ಸರಿಗೆ ಹೋಗುತ್ತಿದ್ದ ಅನಿಲ್ ಗಿಡಗಳ ಪೋಷಣೆ ಪಾಲನಗಳ ಬಗ್ಗೆ ಕುತೂಹಲದಿಂದ ಹಲವಾರು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದದ್ದಲ್ಲದೇ ಶಿಕ್ಷಣವನ್ನೂ ಮುಂದುವರೆಸುತ್ತಿರುತ್ತಾರೆ. ಶಾಲೆಯಲ್ಲಿ ಓಹೋ ಎನಿಸದೇ ಅವರೇ ಹೇಳಿಕೊಂಡಂತೆ ಅಕ್ಕ ಪಕ್ಕದವರ ಹತ್ತಿರ ಕಾಪಿ ಹೊಡೆದು ಹಾಗೂ ಹೀಗೂ SSLC ಪಾಸು ಮಾಡಿ, PUCಗೆ ಸೇರಿಕೊಂಡು English ನಲ್ಲಿ 1 ಅಂಕ maths 3 ಅಂಕಗಳನ್ನು ಗಳಿಸಿದಾಗ, ಇನ್ನು ಓದಿದರೆ ಪ್ರಯೋಜನವಿಲ್ಲ ಎಂದು ನಿರ್ಧರಿಸಿ ರಬ್ಬರ್ ಕೃಷಿ ಸಂಬಂಧಿತ ಅದೂ ಇದೂ ಕೆಲಸವನ್ನು ಮಾಡಿಕೊಂಡು ಇರುತ್ತಾರೆ.

jak6ಇದೇ ಸಮಯದಲ್ಲಿ ಕರ್ನಾಟಕದ ಪುತ್ತೂರಿನ ಬಳಿಯ ಕಬಕ ಪ್ರದೇಶದಲ್ಲಿ ಅಂಟು ಇಲ್ಲದ ಹಲಸಿನ ಹಣ್ಣುಗಳು ಸಿಗುತ್ತದೆ ಎಂಬ ವಿಷಯವನ್ನು ತಿಳಿದು ಆ ಊರಿಗೆ ಬಂದು ಸುಮಾರು 10 ಗಿಡಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗುವಾಗ ಮಾರ್ಗದ ಮಧ್ಯದಲ್ಲೇ ಸುಮಾರು 9 ಗಿಡಗಳು ಮಾರಾಟವಾಗಿ ಕೇವಲ ಒಂದೇ ಗಿಡ ಆವರ ಮನೆ ಸೇರಿದಾಗ, ಹೇಗಾದರೂ ಮಾಡಿ ಈ ಗಿಡದ ತಳಿಯನ್ನು ಸಂರಕ್ಷಿಸಬೇಕು ಎಂದು ಯೋಚಿಸುತ್ತಿರುವಾಗ, ಚಿಕ್ಕಂದಿನಿಂದಲು ಅವರ ಅಮ್ಮನ ಜೊತೆ ನರ್ಸರಿಯಲ್ಲಿ ಮಾಡುತ್ತಿದ್ದ ಮೊಳಕೆಯೊಡಿಸುವುದು, ಕಸಿ ಮಾಡುವ ವಿಧಾನ ನೆನಪಿಗೆ ಬಂದು ಅಲ್ಲೇ ಸಿಗುತ್ತಿದ್ದ ಹಲಸಿನ ಗಿಡಕ್ಕೆ ಪುತ್ತೂರಿನಿಂದ ತಂದ ಹಲಸಿನ ಗಿಡದ ಕಸಿ ಮಾಡಿ ಅದು ಯಶಸ್ವಿಯಾದಾಗ ಎಲ್ಲರೂ ಅವರನ್ನು ಅಭಿನಂದಿಸಿದಾಗ ಅದರಿಂದ ಉತ್ಸಾಹ ಗೊಂಡು ಹೆಚ್ಚು ಹೆಚ್ಚಾಗಿ ಅದೇ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.

jack3ಇದೇ ಸಮಯದಲ್ಲೇ ಕೇರಳದಲ್ಲಿದ್ದು ಕೊಂಡು ತಮ್ಮೀ ಹಲಸಿನ ಕೃಷಿ ಸಾಧ್ಯವಿಲ್ಲ ಎಂಬುದನ್ನು ಅರಿತು ಸುಮಾರು 20 ವರ್ಷಗಳ ಹಿಂದೆ ರಾಜ್ಯ ಹೆದ್ದಾರಿ 101ರ ವಿಟ್ಲ ಮತ್ತು ಪುತ್ತೂರಿನ ರಸ್ತೆಯ ಕಬಕ ಜಂಕ್ಷನ್ ನಿಂದ 2 ಕಿಮೀ ದೂರದಲ್ಲಿರುವ ನಿನ್ನಿಕಲ್ಲು ಎಂಬ ಊರಿನಲ್ಲಿ ಅದೇ ನಿನ್ನಿಕಲ್ಲು ನರ್ಸರಿ ಎಂಬ ಹೆಸರಿನಲ್ಲಿ ನರ್ಸರಿಯೊಂದನ್ನು ಪ್ರಾರಂಭಿಸಿ, ಆರಂಭದಲ್ಲಿ ಅಂಟು ಇಲ್ಲದ ಹಲಸಿನ ಗಿಡಗಳ ಮೊಳಕೆ ಒಡೆಸುವುದು ಮತ್ತು ಕಸಿ ಮಾಡುವುದನ್ನು ಆರಂಭಿಸುತ್ತಾರೆ.

jak2ಸಾಮಾನ್ಯವಾಗಿ ಹಲಸಿನ ಮರ ಅತ್ಯಂತ ಎತ್ತರದವಾಗಿದ್ದು ಆದರ ಹಣ್ಣು ವರ್ಷ ಪೂರ್ತಿ ದೊರೆಯದೇ ಸಂಕ್ರಾಂತಿಯ ನಂತರ ಹೂವು ಅರಳಿ ಮುಂದಿನ ಮೂರ್ನಾಲ್ಕು ತಿಂಗಳಲ್ಲೇ ಹಲಸಿನ ಹಣ್ಣು ಹೇರಳವಾಗಿ ಬಿಟ್ಟು ಅದೆಷ್ಟೋ ಬಾರಿ ಎಲ್ಲಾ ಹಣ್ಣುಗಳನ್ನು ತಿನ್ನಲು ಸಹಾ ಆಗದೇ ಮರದಲ್ಲೇ ಕೊಳೆತು ಹೋಗುವುದನ್ನು ಗಮನಿಸಿ, ಗಿಡ್ಡವಾಗಿ ಬೆಳೆಯುವ, ಗಿಡ ಹಾಕಿದ ಒಂದೆರಡು ವರ್ಷಗಳಲ್ಲೇ, ವರ್ಷಪೂರ್ತಿ ಹಣ್ಣುಗಳನ್ನು ನೀಡುವ ರೀತಿಯ ಹಲಸಿನ ಗಿಡ ಎಲ್ಲಿಯಾದರೂ ಇರಬಹುದೇ ಎಂದು ವಿಚಾರ ಮಾಡುತ್ತಿರುವಾಗಲೇ ಅವರಿಗೆ ದೂರದ ವಿಯಟ್ನಾಂ. ಥೈಲ್ಯಾಂಡ್ ಮತ್ತು ಮಲೇಷಿಯಾ ದೇಶಗಳಲ್ಲಿನ ವಿವಿಧ ತಳಿಗಳು ವರ್ಷ ಪೂರ್ತಿ ಫಲ ನೀಡುವ ವಿಷಯವನ್ನು ತಿಳಿದು ಅಲ್ಲಿಂದ ಆ ಹಲಸಿನ ಗಿಡಗಳನ್ನು ತರಿಸಿಕೊಂಡು ವಿವಿಧ ರೀತಿಯಲ್ಲಿ ಅವುಗಳ ಕಸಿ ಮತ್ತು ಮೊಳಕೆಯೊಡೆಸುವ ಮೂಲಕ ಗಿಡ ನೆಟ್ಟ ಒಂದೆರಡು ವರ್ಷದಲ್ಲೇ ಕೇವಲ 12 ಅಡಿ ಎತ್ತರ ಬೆಳೆದು ವರ್ಷಪೂರ್ತಿ ಹಲಸಿನ ಹಣ್ಣುಗಳನ್ನು ಬಿಡುವಂತಹ ಗಿಡಗಳನ್ನು ಯಶಸ್ವಿಯಾಗಿ ಬೆಳೆಸಿ, ಅ ಸುಧಾರಿತೆ ಗಿಡಕ್ಕೆ ನಿನಿಥಾಯ್ ಹಲಸು ಎಂಬ ಹೆಸರನ್ನಿಟ್ಟ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಸದ್ಯಕ್ಕೆ ಅವರ ನರ್ಸರಿಯಲ್ಲಿ 40ಕ್ಕೂ ಹೆಚ್ಚಿನ ವಿವಿಧ ಜಾತಿಯ ಹಲಸಿನ ಹಣ್ಣಿನ ಗಿಡಗಳಿದ್ದು, ಇನ್ನೂ ಹೆಚ್ಚಿನ ವಿಧದ ತಳಿಗಳು ಬೇಕು ಎಂದಲ್ಲಿ, ಬರೊಬ್ಬರಿ 100 ವಿವಿಧ ರೀತಿಯ ತಳಿಗಳನ್ನು ಸಿದ್ದಪಡಿಸಿ ಕೊಡುವ ಸಾಮರ್ಥ್ಯವನ್ನು ಅನಿಲ್ ಹೊಂದಿದ್ದಾರೆ. ಇವೆಲ್ಲವುಗಳನ್ನು ಪ್ರತ್ಯಕ್ಷವಾಗಿ ನೋಡಲೆಂದೇ, ಇದುವರೆವಿಗೂ ದೇಶ ವಿದೇಶಗಳಿಂದ ಲಕ್ಷಾಂತರ ಕೃಷಿಕರು ಬಂದು ಅವರಿಂದ ಕಸಿ ಮಾಡುವ ವಿಧಾನಗಳನ್ನು ಕಲಿತುಕೊಂಡು ಹೋಗುವುದಲ್ಲದೇ ಅಲ್ಲಿಂದ ಅನೇಕ ತಳಿಯ ಸಸಿಗಳನ್ನು ತೆಗೆದುಕೊಂಡು ಹೋಗುವ ಮೂಲಕ ಗಣಿತದಲ್ಲಿ ಕೇವಲ -1 ಅಂಕ ಗಳಿಸಿದ್ದ ಅನಿಲ್ ಈಗ ಕೇವಲ ಹಲಸಿನ ಕೃಷಿಯಂದಾಗಿಯೇ ಕೋಟಿ ಕೋಟಿ ಸಂಪಾದನೆ ಮಾಡುವ ಹಂತಕ್ಕೆ ಬಂದು ತಲುಪಿರುವುದು ನಿಜಕ್ಕೂ ಅಭಿನಂದನಾರ್ಹವೇ ಸರಿ. ಅವರ ಹೆಸರು ಅನಿಲ್ ಎಂದಿದ್ದರೂ ಹಲಸಿನ ಹಣ್ಣಿನ ಕೃಷಿಯಲ್ಲಿ ಸಾಕಷ್ಟು ಸಂಶೋಧನೆಯನ್ನು ಮಾಡಿರುವ ಕಾರಣ ಜನರು ಅವರನ್ನು ಜಾಕ್ ಅನಿಲ್ ಎಂದೇ ಕರೆಯಲಾರಂಭಿಸಿದರು. ಆರಂಭದಲ್ಲಿ ಅವರಿಗೆ ಆ ರೀತಿ ಕರೆಸಿಕೊಳ್ಳಲು ಮುಜುಗರವಾಗುತ್ತಿದ್ದರೂ, ನಂತರದ ದಿನಗಳಲ್ಲಿ ಅದೇ ಹೆಸರು ಅವರಿಗೇ ಒಗ್ಗಿ ಹೋಗಿ, ಅವರೇ ತಮ್ಮನ್ನು ಜಾಕ್ ಅನಿಲ್ ಎಂದೇ ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ತಲುಪಿದ್ದಾರೆ. ಇನ್ನು ಕೇರಳದಿಂದ ಕರ್ನಾಟಕದ ಪುತ್ತೂರಿಗೆ ವಲಸೆ ಬಂದ ನಂತರ ಇಲ್ಲಿಯ ಕನ್ನಡತಿಯನ್ನೇ ಮದುವೆಯಾಗಿ ತಮ್ಮ ಮಕ್ಕಳನ್ನು ಸಹಾ ಕನ್ನಡ ಮಾಧ್ಯಮದಲ್ಲಿಯೇ ಓದಿಸುತ್ತಾ, ಅಚ್ಚ ಕನ್ನಡವನ್ನು ಸ್ವಚ್ಚವಾಗಿಯೇ ಮಾತನಾಡುತ್ತಾ, ಅಪ್ಪಟ ಕನ್ನಡಿಗರೇ ಆಗಿ ಹೋಗಿದ್ದಾರೆ.

jak3ಹಲಸಿನ ಗಿಡಗಳ ತಳಿಗಳಲ್ಲಿ ಬಹಳ ಪ್ರವೀಣರಾಗಿರುವ ಅನಿಲ್ ಅವರನ್ನು ದೇಶದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳೂ ಸಹಾ ಅವರನ್ನು ಕರೆಸಿಕೊಂಡು ಅಲ್ಲಿನ ವಿದ್ಯಾರ್ಥಿಗಳಿಗೆ ಅನಿಲ್ ಅವರ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ, ಕರ್ನಾಟಕ ಮತ್ತು ಆಂದ್ರ ಪ್ರದೇಶದ ಕೃಷಿ ವಿಶ್ವವಿದ್ಯಾಲಯಗಳು ಅನಿಲ್ ಅವರನ್ನು ತಮ್ಮಲ್ಲಿಗೆ ಕರೆಸಿಕೊಂಡು ತಮ್ಮ ವಿಶ್ವವಿದ್ಯಾಲಯ ಕ್ಯಾಂಪಸ್ ಗಳಲ್ಲಿ ಪ್ರತ್ಯೇಕವಾದ ಹಲಸಿನ ಗಾರ್ಡನ್ ಗಳನ್ನು ನಿರ್ಮಿಸಿವೆಯಲ್ಲದೇ ಅವರ ವಿದ್ಯಾರ್ಥಿಗಳನ್ನು ತಂಡೋಪ ತಂಡವಾಗಿ ಅನಿಲ್ ಅವರ ನರ್ಸರಿಗೆ ಕಳುಹಿಸಿಕೊಟ್ಟು ಪ್ರಾಯೋಗಿಕವಾಗಿ ಅವರು ಮಾಡುವ ಕಸಿ ಮತ್ತು ಮೊಳಕೆಯನ್ನು ಕಲಿತುಕೊಂಡು ಹೋಗುತ್ತಿರುವುದು ಗಮನಾರ್ಹವಾಗಿದೆ.

krushi_melaಇನ್ನು ದಕ್ಷಿಣ ಭಾರತದ ಯಾವುದೇ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ಕೃಷಿ ಮೇಳಗಳು ನಡೆದಾಗಲೆಲ್ಲಾ ಆ ಮೇಳದಲ್ಲಿ ಜಾಕ್ ಅನಿಲ್ ಇದ್ದೇ ಇರುವುದಲ್ಲದೇ, ಅವರೇ ಪ್ರಮುಖ ಆಕರ್ಷಣಿಯ ಕೇಂದ್ರವಾಗಿರುತ್ತಾರೆ. ಇದೇ ತಿಂಗಳ ಆರಂಭದಲ್ಲಿ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ಮೇಳದಲ್ಲಿ ಅನಿಲ್ ಅವರೂ ಸಹಾ ಭಾಗವಹಿಸಿದ್ದು ಆಯೋಜಕರೂ ಸಹಾ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟ ಕಾರಣ, ಅನಿಲ್ ಆವರ ಸ್ಟಾಲ್ ಮುಂದೆ ಜನಜಂಗುಳಿಯೇ ಇದ್ದದ್ದನ್ನು ವಯಕ್ತಿವಾಗಿಯೇ ನೋಡಿದ್ದೇನ. ಹಲಸಿನ ಹಣ್ಣನ್ನು ತನ್ನ ರಾಜ್ಯದ ಹಣ್ಣು ಎಂದು ಘೋಷಿಸಿಕೊಂಡಿರುವ ಕೇರಳ ರಾಜ್ಯದಲ್ಲಿ ಅನಿಲ್ ಅವರ ತನ್ನ ರಾಜ್ಯದ ಹಲಸಿನ ಹಣ್ಣಿನ ರಾಯಭಾರಿಗಳಲ್ಲಿ ಒಬ್ಬ ಎಂದು ನೇಮಕ ಮಾಡಿಕೊಂಡಿರುವುದಲ್ಲದೇ, ಅಲ್ಲಿನ ಕೃಷಿ ಮೇಳದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಮಲಯಾಳಂ ಪತ್ರಿಕೆಗಳು ತಮ್ಮ ಪ್ರಾದೇಶಿಕ ಆವೃತ್ತಿಗಳಲ್ಲಿ ಅನಿಲ್ ಅವರ ಬಗ್ಗೆಯೇ ಪೂರ್ಣ ಪುಟದ ಸಪ್ಲಿಮೆಂಟ್ ಪ್ರಕಟಿಸುತ್ತವೆ. ಮೂಲತಃ ಕೇರಳಿಗರೇ ಆದರು, ಅನಿಲ್ ತಮ್ಮ ಕರ್ಮ ಭೂಮಿ ಕರ್ನಾಟಕದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾರೆ.

jack2ಅನಿಲ್ ಅವರು ಹೇಳುವ ಪ್ರಕಾರ ಹಲಸಿನ ಕೃಷಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲದಿರುವ ಕಾರಣ ಅದು ಬಯಲು ಸೀಮೆಯಲ್ಲಿ ಬೆಳೆಯಲು ಉತ್ತಮವಾಗಿದೆ. ಅನಿಲ್ ಅವರ ಹಲಸಿನ ಗಿಡವನ್ನು ನಗರ ಪ್ರದೇಶಗಳಲ್ಲಿ ಟೆರೇಸ್ ಗಾರ್ಡನ್ ಸಹ ಲಭ್ಯವಿದೆ ಇನ್ನು ಅವರು ಅಭಿವೃದ್ಧಿಪಡಿಸಿರುವ ಗಿಡಗಳು ಹತ್ತು ಅಡಿಗಳ ಅಂತರದಲ್ಲಿ ಒಂದು ಎಕರೆ ಜಮೀನಿನಲ್ಲಿ ಸುಮಾರು 400 ಮರಗಳು ನೆಟ್ಟು ಆರಂಭದ 2 ವರ್ಷಗಳ ನೀರು ಉಣಿಸಿದಲ್ಲಿ ನಂತರ ಆ ಮರಗಳೇ ತಮ್ಮ ಅರಸಿಕೊಳ್ಳುತ್ತವೆ. ಇನ್ನೂ ಕುತೂಹಲಕಾರಿಯಾದ ಅಂಶವೆಂದರೆ, ಹಲಸಿನ ಗಿಡಕ್ಕೆ ತುಂಬಾ ನೀರು ಕೊಟ್ಟಲ್ಲಿ, ಹಲಸಿನ ಹಣ್ಣಿನ ಸಿಹಿ ಕಡಿಮೆಯಾಗುತ್ತದೆಯಂತೆ, ಹಾಗಾಗಿ ಹಲಸಿನ ಮರಗಳ ರೆಂಬೆಗಳನ್ನು ಕತ್ತರಿಸಿ ಬುಡ ಮತ್ತು ಕಾಂಡಕ್ಕೆ ಆದಷ್ಟು ಹೆಚ್ಚಿನ ರೀತಿಯಲ್ಲಿ ಬಿಸಿಲು ಬೀಳುವಂತೆ ಮಾಡುವ ಮೂಲಕ ಅಧಿಕ ಇಳುವರಿ ಮತ್ತು ಗಿಡಗಳಿಗೆ ಶಿಲೀಂದ್ರ ಇಲ್ಲವೇ ರೋಗಗಳನ್ನು ಬಾರದಂತೆ ತಡೆಯುತ್ತದೆ ಎನ್ನುವ ಸಲಹೆಯನ್ನು ನೀಡಲು ಅನಿಲ್ ಮರೆಯುವುದಿಲ್ಲ.ಅನಿಲ್ ಅವರ ನರ್ಸರಿಯಲ್ಲಿ ಅವರ ನಿನಿಥಾಯ್ ಹಲಸಿನ ಗಿಡಗಳಲ್ಲದೇ, ಸುಧಾರಿತ ತೆಂಗು, ಅಡಿಗೆ ಗಿಡಗಳು, ಮಾವಿನ ಗಿಡಗಳು, ಬೆಣ್ಣೇ ಹಣ್ಣುಗಳಲ್ಲದೇ, ವಿವಿಧ ರೀತಿಯ ಹಣ್ಣುಗಳಲ್ಲದೇ ವಿವಿಧ ರೀತಿಯ ತೋಟಗಾರಿಕಾ ಸಸ್ಯಗಳು ಲಭ್ಯವಿದೆ.

ಅನಿಲ್ ಅವರ ಈ ಸಾಧನೆಯನ್ನು ಗುರುತಿಸಿ ಅನೇಕ ವಿಶ್ವವಿದ್ಯಾನಿಲಯಗಳು, ರಾಜ್ಯ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಅನಿಲ್ ಅವರನ್ನು ಕರೆದು ಸನ್ಮಾನ ಸಲ್ಲಿಸಿವೆ. ಕೇವಲ ವಿವಿಧ ರೀತಿಯ ಕಸಿ ಮಾಡಿದ್ದರಿಂದಲೇ ತಾವು ಹಲಸಿನ ಕೃಷಿಯಲ್ಲಿ ಈ ಪರಿಯಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಮೊದಲು ನಮಗೆ ನಮ್ಮ ಉತ್ಪನ್ನದ ಬಗ್ಗೆ ಅಭಿಮಾನ ಇಟ್ಟುಕೊಂಡು ಅದನ್ನು ಬ್ರಾಂಡ್ ಮಾಡುವುದನ್ನು ಕಲಿತುಕೊಳ್ಳ ಬೇಕು. ನಂತರ ಮಾರುಕಟ್ಟೆಯಲ್ಲಿ ಅದನ್ನು ಉತ್ತಮ ರೀತಿಯಲ್ಲಿ ಪ್ರಚಾರ ಪಡಿಸಿದಲ್ಲಿ ಮಾತ್ರವೇ ಉದ್ದಾರವಾಗಬಹುದು ಎಂಬ ಕಿವಿ ಮಾತನ್ನು ಅನಿಲ್ ಹೇಳುತ್ತಾರೆ. ಇಂದು ಅನೇಕರು ಅನಿಲ್ ಅವರ ಹಲಸಿನ ಗಿಡಗಳನ್ನು ಸಾವಿರಾರು ಸಂಖ್ಯೆಯಲ್ಲಿ ಖರೀಧಿಸಿ ತಮ್ಮ ಮನೆಯ ಶುಭ ಸಮಾರಂಭಗಳಲ್ಲಿ ಹಂಚುವ ಮೂಲಕ ಹಲಸಿನ ಗಿಡಕ್ಕೂ ಮತ್ತು ಅನಿಲ್ ಅವರ ಕೀರ್ತಿಯನ್ನು ಪ್ರಚುರ ಪಡಿಸುತ್ತಿದ್ದಾರೆ.

jack4ಹಲಸಿನ ಗಿಡಗಳ ಮಟ್ಟಿಗೆ ವಿಶ್ವವಿದ್ಯಾಲಯವೇ ಆಗಿರುವ, ಒಂದು ನಿಮಿಷವೂ ಸುಮ್ಮನೆ ಕೂರದೇ ಒಂದಲ್ಲಾ ಒಂದು ಕೆಲಸದಲ್ಲಿ ಮಗ್ನರಾಗಿರುವ, ಮೂಲತಃ ಕೇರಳಿಗರಾದರೂ, ಕಳೆದ 20-30 ವರ್ಷಗಳಿಂದ ಕರ್ನಾಟಕವನ್ನೇ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಅಪ್ಪಟ ಕನ್ನಡಿಗರಾಗಿರುವ ಅನಿಲ್ ನಿಶ್ಚಯವಾಗಿಯೂ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ ಅಲ್ವೇ?

ಏನಂತೀರಿ?
ನಿಮ್ಮವನೇ ಉಮಾಸುತ

ಹಲಸಿನ ಗಿಡಗಳ ರಾಯಾಭಾರಿ ಜಾಕ್ ಅನಿಲ್ ಅವರನ್ನು ಈ ಮೊಬೈಲ್ ಸಂಖ್ಯೆ 9448778497 ಯ ಮೂಲಕ ಸಂಪರ್ಕಿಸಬಹುದಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s