ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ

ನಮ್ಮ ಸನಾತನ ಧರ್ಮದಲ್ಲಿ ಮೊದಲು ಮಾತೃದೇವೋಭವ ಪಿತೃದೇವೋಭವ ಎಂದು ಜನ್ಮ ನೀಡಿದ ತಂದೆ ತಾಯಿಯರಿಗೆ ಗೌರವ ನೀಡಿದ ನಂತರದ ಸ್ಥಾನವನ್ನು ನಮಗೆ ವಿದ್ಯಾಬುದ್ದಿಯನ್ನು ಕಲಿಸಿಕೊಡುವ ಗುರುಗಳಿಗೆ ಆಚಾರ್ಯದೇವೋಭವ ಎಂದು ಸಮರ್ಪಿಸುತ್ತೇವೆ. ದುರಾದೃಷ್ಟವಶಾತ್ ಇಂದು ಹಾಗೆ ವಿದ್ಯೆಯನ್ನು ಕಲಿಸಿಕೊಡುವ ಗುರುಗಳಿಗೆ ಬೆಲೆಯೇ ಇಲ್ಲದೇ ಹೋಗಿದೆ. ಹಿಂದೆ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣಾ ಮುಕುತಿ ಎಂದು ಗುರುವೇನಮಃ ಎಂದು ಹೇಳುತ್ತಿದ್ದ ಕಾಲವಿದ್ದರೆ, ಈಗ ಗುರು ಏನು ಮಹಾ? ಎಂದು ಗುರುಗಳನ್ನೇ ಹಿಯ್ಯಾಳಿಸುವ ಕಾಲವಿದೆ. ಇಂತಹ ಕಾಲದಲ್ಲಿ ಸುಮಾರು 3 ದಶಕಗಳಿಗೂ ಅಧಿಕ ಅಧ್ಯಾಪಕ ವೃತ್ತಿಯನ್ನು ಮಾಡಿ ನಿವೃತ್ತರಾದರೂ, ಶಿಕ್ಷಣ ಕ್ಷೇತ್ರದಲ್ಲೇ ಇಂದಿಗೂ ಮುಂದುವರೆದು ಈ ದೇಶ ಕಂಡ ಅತ್ಯುತ್ತಮ ಶಿಕ್ಷಣ ತಜ್ಞ, ಶ್ರೇಷ್ಠ ಬರಹಗಾರ, ಪ್ರಚಂಡ ವಾಗ್ಮಿ, ಅದ್ಭುತವಾದ ವ್ಯಕ್ತಿ ವಿಕಸನಗೊಳಿಸುವಂತಹ ವ್ಯಕ್ತಿ ಎನಿಸಿಕೊಂಡು ಪ್ರಪಂಚಾದ್ಯಂತ ಮನ್ನಣೆಯನ್ನು ಗಳಿಸಿರುವಂತಹ ಡಾ. ಗುರುರಾಜ ಕರ್ಜಗಿಯವರು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯ ಕಥಾನಾಯರು.

ಸಂಪ್ರದಾಯಸ್ಥ ಕುಟಂಬದ ಶ್ರೀ ವಸಂತರಾವ್ ಕರ್ಜಗಿ ಮತ್ತು ಶ್ರೀಮತಿ ಲಕ್ಷ್ಮೀ ಕರ್ಜಗಿ ದಂಪತಿಗಳಿಗೆ ಬಿಳಗಿಯಲ್ಲಿ ಮೇ 24, 1952ರಲ್ಲಿ ಜನಿಸುತ್ತಾರೆ. ಶ್ರೀ ವಸಂತರಾವ್ ಪರಮ ನಿಷ್ಟಾವಂತ ಸರ್ಕಾರಿ ನೌಕರರಾಗಿದ್ದ ಕಾರಣ ಮೇಲಿಂದ ಮೇಲೆ ವರ್ಗಾವಣೆ ಆಗುತ್ತಿದ್ದ ಕಾರಣ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗದಿರಲೆಂದು, ಅವರ ಅಜ್ಜ ಮತ್ತು ಅಜ್ಜಿಯರ ಸುಪರ್ದಿಗೆ ಗುರುರಾಜರು ಮತ್ತು ಅವರ ಅಕ್ಕನನ್ನು ಬಿಟ್ಟಿರುತ್ತಾರೆ. ಬಾಲಕ ಗುರುರಾಜರ ಜೀವನದ ಮೇಲೆ ಅಜ್ಜನ ಪ್ರಭಾವ ಬಹಳ ಹೆಚ್ಚಾಗಿತ್ತು, ಚಿಕ್ಕ ವಯಸ್ಸಿನಲ್ಲೇ ತೊಡೆಯ ಮೇಲೆ ಕುಳ್ಳರಿಸಿಕೊಂಡು ಅನೇಕ ಪೌರಾಣಿಕ, ಐತಿಹಾಸಿಕ ಮತ್ತು ವೀರಪುರುಷರ ಕಥೆಗಳನ್ನು ಹೇಳುತ್ತಿದ್ದಲ್ಲದೇ, ಬಸವಣ್ಣ, ಅಲ್ಲಮ ಮತ್ತು ಅಕ್ಕ ಮಹಾದೇವಿಯವರ ವಚನಗಳನ್ನು ಅದರ ಅರ್ಥ ಸಹಿತ ಕಲಿಸುತ್ತಿದ್ದಲ್ಲದೇ ತಮ್ಮ ಸಂಪ್ರದಾಯದ ಅರಿವಾಗಲಿ ಮತ್ತು ತಮ್ಮ ಮೊಮ್ಮಗನ ಜ್ಞಾನ ಹೆಚ್ಚಾಗಲಿ ಎಂದು ಗುರುಗಳ ಬಳಿ ವೇದ ಮತ್ತು ಉಪನಿಷತ್ತುಗಳನ್ನು ಕಲಿಸಿದ ಕಾರಣ ಚಿಕ್ಕಂದಿನಿಂದಲೇ ಬಾಲಕ ಗುರುರಾಜರಿಗೆ ಉತ್ತಮವಾದ ಅಡಿಪಾಯ ದೊರಕಿದ ಕಾರಣ ಅತ್ಯಂತ ಚುರುಕಿನ ವಿದ್ಯಾರ್ಥಿಯಾಗಿದ್ದರು.

ಇನ್ನು ಗುರುರಾಜ ಅಕ್ಕನೂ ಸಹಾ ಅಷ್ಟೇ ಬುದ್ದಿವಂತೆಯಾಗಿದ್ದು ಆಕೆಯೂ ಸಹಾ ತಮ್ಮ ಬಾಲ್ಯದಿಂದ ಸ್ನಾತಕೋತ್ತರ ಪದವಿ ಗಳಿಸುವ ವರೆಗೂ ಪ್ರಥಮ ರ್ಯಾಂಕ್ ಪಡೆಯುತ್ತಿದ್ದದ್ದಲ್ಲದೇ, ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದಂತಹವರು. ಹೀಗಾಗಿ ಅಕ್ಕ ಮತ್ತು ತಮ್ಮ ಇಬ್ಬರು ಸರಸ್ವತೀ ಪುತ್ರರು ಎಂದರೂ ತಪ್ಪಾಗದು. ಧಾರವಾಡದ ಕೆ.ಇ. ಬೋರ್ಡ್ ಹೈಸ್ಕೂಲಿನಲ್ಲಿ SSLC ಓದುತ್ತಿದ್ದಾಗ , ಅಂತಿಮ ಪರೀಕ್ಷೆಯ ಫಲಿತಾಂಶ ಅವರ ಜೀವನವನ್ನು ಬದಲಿಸಿತಲ್ಲದೇ ಅವರಿಗೆ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಎಂತಹ ಮಹತ್ವದ್ದಾಗಿರುತ್ತದೆ ಎಂಬುದರ ಅರಿವಾಗಿದ್ದಲ್ಲದೇ ತಾವೂ ಸಹಾ ಶಿಕ್ಷರಾಗಲೇ ಬೇಕೆಂಬ ಧೃಢ ನಿರ್ಧಾರವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿತು. ಆ ಆದ್ಭುತ ರೋಚಕ ಮತ್ತು ಪ್ರೇರಣಾತ್ಮಕ ಪ್ರಸಂಗವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಿಳಿಯುವುದು ಅತ್ಯಾವಶ್ಯಕವಾಗಿದೆ.

ಗುರುರಾಜರು SSLC ಪರೀಕ್ಷೆ ಬರೆದು ತಮ್ಮ ಅಕ್ಕನೊಡನೆ ಬೇಸಿಗೆ ರಜೆಯನ್ನು ಕಳೆಯಲು ಅವರ ಅಪ್ಪಾ ಅಮ್ಮ ಇದ್ದ ಕೋಲಾರಕ್ಕೆ ಹೋಗಿರುತ್ತಾರೆ. ಬಹಳ ತಿಂಗಳುಗಳ ಬಳಿಕ ಮಕ್ಕಳು ಊರಿಗೆ ಬಂದಿದ್ದ ಕಾರಣ ಸಂತಸಗೊಂಡ ಅವರ ತಂದೆಯವರು ಮಕ್ಕಳನ್ನು ಒಂದು ವಾರದ ಮಟ್ಟಿಗೆ ವಿವಿಧ ಪುಣ್ಯಕ್ಷೇತ್ರಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಪುನಃ ಕೋಲಾರಕ್ಕೆ ಹಿಂದಿರುಗಿದ ನಂತರ ಮನೆಯಲ್ಲಿ ಬಿದ್ದಿದ್ದ ಒಂದು ವಾರದ ಹಳೆಯ ವೃತ್ತ ಪತ್ರಿಕೆಗಳ ಕಡೆ ಕಣ್ಣಾಡಿಸುತ್ತಿದ್ದಾಗ ಅವರಿಗೆ SSLC ಪರೀಕ್ಷಾ ಫಲಿತಾಂಶ ಮೂರ್ನಾಲ್ಕು ದಿನಗಳ ಹಿಂದೆಯೇ ಬಂದಿರುವ ಸುದ್ದಿ ತಿಳಿದು ಮಗನ ರಿಜಿಸ್ಟ್ಟ್ರೇಶನ್ ನಂಬರ್ ಪಡೆದು ಕೊಂಡು ಪತ್ರಿಕೆಯಲ್ಲಿ (ಆಗೆಲ್ಲಾ SSLC ಫಲಿತಾಂಶ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲೇ ಪ್ರಕಟವಾಗುತ್ತಿತ್ತು) ಆರಂಭದಲ್ಲಿ ರ್ಯಾಂಕ್ ಪಟ್ಟಿಯಲ್ಲಿ ಮಗನ ನಂಬರ್ ಕಾಣದೇ ಹೋದಾಗ, ಬೇಸರದಿಂದಲೇ 1st class, 2nd class ಕಡೆಗೆ 3rd classನಲ್ಲೂ ಇರದೇ ಮಗ SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದದ್ದು ನೋಡಿ ಇಡೀ ಮನೆಯವರೆಲ್ಲಾ ದುಃಖಿತರಾಗಿಯೂ ಆಶ್ಚರ್ಯಗೊಂಡು ಕೂಡಲೇ ಅಪ್ಪಾ ಮಗ ಧಾರವಾಡಕ್ಕೆ ಬರುವಷ್ಟರಲ್ಲಿ ಫಲಿತಾಂಶ ಬಂದು ವಾರ ಕಳೆದಿರುತ್ತದೆ

ಶಾಲೆಗೆ ಬಂದು ನೇರವಾಗಿ ಶಿಕ್ಷಕರ ಕೊಠಡಿಗೆ ಹೋದಾಗ ಅಲ್ಲಿದ್ದ ಗಣಿತದ ಮೇಷ್ಟ್ರು ಗುರುರಾಜರನ್ನು ಕರೆದು ಛೇ.. ಎಂತಹ ಕೆಲಸ ಮಾಡಿಬಿಟ್ಟೆ, ನಿನ್ನಿಂದ ಇಂತಹ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಎಲ್ಲಾ ವಿಷಯಗಳಲ್ಲೂ 90ಕ್ಕೂ ಅಧಿಕ ಅಂಕಗಳನ್ನು ಪಡೆದು ಗಣಿತದಲ್ಲಿ ಕೇವಲ 13 ಅಂಕಗಳನ್ನು ಗಳಿಸುವ ಮೂಲಕ ಫೇಲ್ ಆಗಿದ್ದೀಯಾ ಎಂದಾಗ ಗುರುರಾಜರಿಗೆ ಆಕಾಶವೇ ಕಳಚಿ ಬಿದ್ದಂತೆ ಆಗುತ್ತದೆ. ಗುರುರಾಜರನ್ನು ಹೊರಗೆ ಕಳುಹಿಸಿದ ಗುರುಗಳು ಗುರುರಾಜರ ತಂದೆಗೆ ಎಂತಹ ಬೇಜವಾಬ್ಧಾರಿ ತಂದೆ ನೀವು? ಮಗನ ಫಲಿತಾಂಶ ಬರುವ ಸಂದರ್ಭದಲ್ಲಿ ಪ್ರವಾಸಕ್ಕೆ ಹೋಗಿದ್ದೀರಿ. ನಾನೇ ಖುದ್ದಾಗಿ ನಿಮ್ಮ ಮನೆಗೆ ಸತತವಾಗಿ ಮೂರು ದಿನಗಳ ಕಾಲ ಬಂದು ಹೋಗಿದ್ದೇನೆ. ನನಗೆ ನಿಮ್ಮ ಮಗನ ಮೇಲೆ ಅಪಾರವಾದ ಭರವಸೆ. ಹಾಗಾಗಿ ನಾನೇ ಪಾಲಕರ ಸಹಿ ಮಾಡಿ 5 ರೂಪಾಯಿ ಕಟ್ಟಿ ಮರುಎಣಿಕೆಗೆ ಹಾಕಿದ್ದೇನೆ. ಖಂಡಿತವಾಗಿಯೂ ಫಲಿತಾಂಶ ಬದಲಾವಣೆ ಆಗುವ ನಂಬಿಕೆ ನನಗಿದ. ಉಳಿದದ್ದು ದೇವರ ಮೇಲೆ ಬಿಟ್ಟಿದ್ದು ಎಂದು ಸಮಾಧಾನ ಪಡಿಸಿ ಕಳುಹಿಸುತ್ತಾರೆ.

ಆದಾದ ಒಂದು 8-10 ದಿನಗಳ ನಂತರ ಮಟ ಮಟ ಮಧ್ಯಾಹ್ನದಲ್ಲಿ ಅದೇ ಗಣಿತದ ಗುರುಗಳು ಏದುಸಿರು ಬಿಡುತ್ತಾ ಗುರುರಾಜರ ಮನೆಗೆ ಬಂದು, ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡು ಸುಮಾರು 5 ನಿಮಿಷಗಳ ಆನಂದಭಾಷ್ಪಗಳನ್ನು ಸುರಿಸುತ್ತಿದ್ದರೆ, ಬಾಲಕ ಗುರುರಾಜರಿಗೆ ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದೇ ಕಣ್ಣು ಬಾಯಿ ಬಿಟ್ಟುಕೊಂಡು ಗುರುಗಳನ್ನೇ ದಿಟ್ಟಿಸಿ ನೋಡುತ್ತಿರುವಾಗ, ಕಣ್ಣೀರ ಧಾರೆಯನ್ನು ಒರೆಸಿಕೊಂಡ ಗುರುಗಳು ತಮ್ಮ ಕೋಟಿನ ಜೇಬಿನಿಂದ ಅಂಕ ಪಟ್ಟಿಯನ್ನು ತೋರಿಸಿದಾಗ, ಗಣಿತದಲ್ಲಿ 13ರ ಬದಲಾಗಿ 90ಕ್ಕೂ ಅಧಿಕ ಅಂಕ ಬಂದು ರಾಜ್ಯಕ್ಕೇ 8 ನೇ ರ್ಯಾಂಕ್ ನಲ್ಲಿ ಗುರುರಾಜರು SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ತನ್ನ ವಿದ್ಯಾರ್ಥಿಯ ಮೇಲೆ ಭರವಸೆ ಇಟ್ಟು, ಅವರೇ ಸ್ವಯಂ ಪ್ರೇರಣೆಯಿಂದ ತಮ್ಮ ಕೈಯ್ಯಾರೆ ಮರುಎಣಿಕೆಗೆ ದುಡ್ಡು ಕಟ್ಟಿ, ಫಲಿತಾಂಶವನ್ನು ಹೇಳುವ ಸಲುವಾಗಿ ಮನೆಯವರೆಗೂ ಬಂದಿದ್ದು ಗುರುರಾಜರಿಗೆ ವಿದ್ಯಾರ್ಥಿಗಳ ಬದುಕಿನಲ್ಲಿ ಗುರುಗಳ ಪಾತ್ರದ ಅರಿವಾಗಿ, ವಿದ್ಯಾರ್ಥಿ ಮತ್ತು ಶಿಕ್ಷಕರ ಪ್ರೀತಿ ಮತ್ತು ವಾತ್ಸಲ್ಯವನ್ನು ಈ ಪರಿಯಾಗಿ ಅನುಭವಿಸಿದ ನಂತರ ತಾವೂ ಸಹಾ ಅದೇ ರೀತಿಯ ಗುರುಗಳಾಗಬೇಕೆಂದು ಆ ಕೂಡಲೇ ಸಂಕಲ್ಪ ಮಾಡಿದ ನಂತರ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಕರ್ನಾಟಕ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ M.sc ಮುಗಿಸಿ ಅದೇ ವಿಷಯದಲ್ಲಿ PhD ಯನ್ನೂ ಸಹಾ ಕೇವಲ ಎರಡು ವರ್ಷಗಳಲ್ಲಿ ಮುಗಿಸುವ ಮೂಲಕ ಅತ್ಯಂತ ವೇಗವಾಗಿ ಪಿಎಚ್‌ಡಿ ಪೂರ್ಣಗೊಳಿಸಿದ ದಾಖಲೆಯನ್ನು ಹೊಂದಿದ್ದಾರೆ. ನಂತರ ವಿ.ವಿ.ಎಸ್.ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂದು ಸುಮಾರು 16 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ನಂತರ ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯ ಸ್ಥಾಪಕ ಪ್ರಾಂಶುಪಾಲರಾಗಿ ಹಾಗೂ ನಿರ್ದೇಶಕರಾಗಿ, ಈ ದೇಶ ಕಂಡ ಅದ್ಭುತವಾದ ಶಿಕ್ಷಣ ತಜ್ಞರಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸುತ್ತಾರೆ.

kar6

ಇವಿಷ್ಟರ ಮಧ್ಯದಲ್ಲಿ ತಮ್ಮ ಅನುಭವದ ಮೂಸೆಯಿಂದ ಸಾವಿರಾರು ಕತೆಗಳೂ, ಸಾವಿರಾರು ಲೇಖನಗಳನ್ನು ಬರೆದು ಜನಪ್ರಿಯರಾಗಿದ್ದಲ್ಲದೇ, ಪಠ್ಯ ಪುಸ್ತಕಗಳನ್ನೂ ಸಹಾ ಬರೆದಿದ್ದಾರೆ. ಸೃಜನ ಶೀಲತೆ , ಸಂವಹನಕಲೆ , ಮುಂತಾದದುಗಳಲಿ ಅಪಾರವಾದ ಆಸಕ್ತಿ ಹೊಂದಿರುವ ಡಾ ಕರ್ಜಗಿಯವರು ಧನಾತ್ಮಕ ಚಿಂತನೆಗಳು, ಕಾರ್ಯಕ್ಷಮತೆ ಹಾಗೂ ಮಾನವೀಯ ಮೌಲ್ಯಗಳ ಕುರಿತಾದ ಸಾವಿರಾರು ಉಪನ್ಯಾಸಗಳು ಮತ್ತು ಕಾರ್ಯಾಗಾರಗಳನ್ನು ಕರ್ನಾಟಕವಲ್ಲದೇ ದೇಶ ವಿದೇಶಗಳಲ್ಲಿಯೂ ನೀಡುವ ಮೂಲಕ ಅತ್ಯಂತ ಜನಪ್ರಿಯವಾಗಿದ್ದಾರೆ. ಅವರ ಪ್ರೇರಣಾತ್ಮಕವಾದ ಮಾತುಗಳ ಒಂದಲ್ಲಾ ಒಂದು ವೀಡಿಯೋ ಪ್ರತಿ ದಿನವೂ ಸಾಮಾಜಿಕ ಜಾಲತಾಣಗಳ ಮೂಲಕ ಲಕ್ಷಾಂತರ ಜನರನ್ನು ತಲುಪಿರುವ ಕಾರಣ ಡಾ. ಕರ್ಜಗಿಯವರ ಪರಿಚಯವಿರದ ಕನ್ನಡಿಗರೇ ಇಲ್ಲಾ ಎಂದರೂ ಅತಿಶಯವಾಗಲಾರದು.

ಸುಮಾರು ಎಪ್ಪತ್ತಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿರುವುದಲ್ಲದೇ ಅಂಕಣಕಾರರಾಗಿ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಬರೆದ ಕರುನಾಳು ಬಾ ಬೆಳಕೆ ಎಂಬ ಸರಣಿ ಅತ್ಯಂತ ಜನಪ್ರಿಯವಾಗಿದ್ದಲ್ಲದೇ, ಅದೇ ಶೀರ್ಷಿಕೆಯ ಅತ್ಯಂತ ಸ್ಪೂರ್ತಿದಾಯಕವಾದ 15 ಪುಸ್ತಕಗಳ ಸರಣಿಯಾಗಿ ಪ್ರಕಟವಾಗಿದೆ. ಒಟ್ಟಾರೆಯಾಗಿ, ಅವರು ಪ್ರಕಟಿಸಿರುವ 22 ಪುಸ್ತಕಗಳಲ್ಲಿ ಶಿಕ್ಷಣದ ಪ್ರತಿಯೊಂದು ಅಂಶಗಳ ಕುರಿತು ಲೇಖನಗಳ ಬೃಹತ್ ಸಂಕಲನವನ್ನು ಸಂಪಾದಿಸಿದ್ದಾರೆ ಮತ್ತು ಇದನ್ನು ಶಿಕ್ಷಣ ಶಿಲ್ಪ ಎಂಬ ಶೀರ್ಷಿಕೆಯ ಪುಸ್ತಕವಾಗಿ ಹೊರತಂದಿದ್ದಾರೆ. ಆಕಾಶವಾಣಿಯಲ್ಲಿ ದಿನನಿತ್ಯ ಬೆಳಗಿನ ಜಾವ ಪ್ರಸಾರವಾಗುತ್ತಿದ್ದ ಅವರ ಭಾಷಣಗಳ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ಪುಸ್ತಕಗಳನ್ನು ಓದುವವರ ಸಂಖ್ಯೆಗಿಂತ ಕೇಳುವವರ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿ‌ ಇತ್ತೀಚಿಗೆ ಕಿಶೋರ ಭಾರತ ಎಂಬ ಆಡಿಯೋ ಬುಕ್ ಸಹಾ ಹೊರತಂದಿದ್ದಾರೆ

kar1

ತಮ್ಮ ನಿವೃತ್ತಿಯ ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಸುಧಾರಣೆಗೆಂದು ಅವರೇ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಸುಮಾರು 90 ಶಾಲೆಗಳನ್ನು ನಿಭಾಯಿಸಿರುವುದಲ್ಲದೇ, 200,000 ಕ್ಕೂ ಹೆಚ್ಚಿನ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಅದರಲ್ಲೂ ಗ್ರಾಮೀಣ ಭಾರತದಲ್ಲಿ ಶಿಕ್ಷಕರನ್ನು ಸಬಲೀಕರಣಗೊಳಿಸುವುದು ಎಂಬ ಕಾರ್ಯಕ್ರಮದ ಮೂಲಕ ಸಂಪೂರ್ಣವಾಗಿ ಗ್ರಾಮೀಣ ಪ್ರದೇಶದ ಯುವ ಶಿಕ್ಷಕರಿಗೆ ಶಿಕ್ಷಕರಿಗಾಗಿ ಫಿನಿಶಿಂಗ್ ಸ್ಕೂಲ್ ಎಂಬ ಕಾರ್ಯಕ್ರಮದಲ್ಲಿ ತರಬೇತಿ ನೀಡುವ ಮೂಲಕ ಸುಮಾರು 2500 ಕ್ಕೂ ಅಧಿಕ ಶಿಕ್ಷಕರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಾರೆ. ಅವರ ಇಡೀ ಶಿಕ್ಷಣ ಪದ್ದತಿಯು ಭಾರತೀಯ ಸಂಸ್ಕೃತಿಗೆ ಒತ್ತು ನೀಡುವ ಮೂಲಕ ಸೃಜನಾತ್ಮಕ ಬೋಧನಯ ತಳಹದಿಯಲ್ಲಿರುವ ಕಾರಣ, ಅವರಲ್ಲಿ ಶಿಕ್ಷಣ ಪಡೆದ ಶಿಕ್ಷಕರಿಂದಾಗಿ ಗ್ರಾಮೀಣ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದೆ ಎನ್ನುವುದು ಗಮನಾರ್ಹವಾಗಿದೆ.

kar3

ಭಾರತದ ಪೌರಾಣಿಕದ ಜ್ಞಾನವನ್ನು ಇಂದಿನ ಯುವ ಪೀಳಿಗೆಗೆ ಕೊಂಡೊಯ್ಯುವಲ್ಲಿ ಅವರ ಕೊಡುಗೆ ಅನನ್ಯ ಮತ್ತು ಅನುಕರಣೀಯವಾಗಿದೆ. ಅವರು ಸಣ್ಣ ಸಣ್ಣ ಕಥೆಗಳು ಮತ್ತು ಪ್ರಸಂಗಗಳ ಮೂಲಕ ವ್ಯಾಸ, ರಾಮ, ಕೃಷ್ಣ, ಗೌತಮ ಬುದ್ಧ, ಮಹಾವೀರ, ಆದಿ ಶಂಕರ, ಮಧ್ವಾಚಾರ್ಯ, ಅಲ್ಲಮ ಪ್ರಭು, ಬಸವ, ಅಕ್ಕ ಮಹಾದೇವಿ, ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕ್, ಭಗವದ್ಗೀತೆ ಮತ್ತು ಈಶೋ ಉಪನಿಷತ್ತಿನ ಕುರಿತಾಗಿ ಮಾಡಿರುವ ವೀಡಿಯೋಗಳು ಅತ್ಯಂತ ಸರಳವಾಗಿದ್ದರು ಕೇಳುಗನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುವುದರಿಂದ, ಜೀವನದಲ್ಲಿ ಜಿಗುಪ್ಸೆಗೊಂಡ ಅನೇಕರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದವರು, ಅವರ ಆಶಾವಾದಿ ವೀಡಿಯೋಗಳನ್ನು ಕೇಳಿ ಪ್ರಭಾವಿತರಾಗಿ, ತಮ್ಮ ನಿರ್ಧಾರವನ್ನು ಬದಲಿಸಿ ನೆಮ್ಮದಿಯ ಜೀವನವನ್ನು ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಡಾ.ಕರ್ಜಗಿಯವರಿಗೆ ಶಿಕ್ಷಣ ಕ್ಷೇತ್ರದಲ್ಲಿರುವಷ್ಟೇ ಪ್ರೀತಿ ಸಾಹಿತ್ಯದ ಮೇಲೂ ಇದ್ದು, ಸಾಹಿತ್ಯದ ದಿಗ್ಗಜರಾದ ಡಾ.ಡಿ. ವಿ.ಗುಂಡಪ್ಪ, ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ.ಡಿ.ಆರ್.ಬೇಂದ್ರೆ, ಡಾ.ವಿನಾಯಕ ಕೃಷ್ಣ ಗೋಕಾಕ್ ಸೇರಿದಂತೆ ಹಲವರು ಕುರಿತಾಗಿ ಅನೇಕ ಲೇಖನಗಳನ್ನು ಮತ್ತು ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ತಮ್ಮ ಮಾನವೀಯ ಮೌಲ್ಯಗಳು, ಸಂತೋಷದ ಕುಟುಂಬ ಮೌಲ್ಯಗಳು, ಭಾರತೀಯ ಸಂಸ್ಕೃತಿ, ದೇಶಭಕ್ತಿ ಮತ್ತು ಧನಾತ್ಮಕವಾಗಿರುವುದು ಹೇಗೆ ಎಂಬುದರ ಕುರಿತಾಗಿ ಮಾತಾನಾಡಿರುವ ವೀಡಿಯೋಗಳ ಮೂಲಕ ಇಲ್ಲಿಯವರೆಗೆ ಸುಮಾರು ಒಂದು ಮಿಲಿಯನ್ ಜನರನ್ನು ತಲುಪಿರುವುದು ನಿಜಕ್ಕೂ ಅದ್ಭುತ. ಗುರುರಾಜರು ಕಾವ್ಯವಾಚನದಲ್ಲೂ ಅತ್ಯಂತ ಆಸಕ್ತಿಯುಳ್ಳವರಾಗಿದ್ದು ಅವರ ಮನೆಯಲ್ಲಿ ಅವರ ತಂದೆಯ ಕಾಲದಿಂದಲೂ ಪ್ರತಿ ದಿನವೂ ಕುಮಾರವ್ಯಾಸ ಭಾರತದ ಓದು ಅನೇಕ ದಶಕಗಳಿಂದ ನಡೆಯುತ್ತಿದೆಯೆಂದು ಎಂದು ಬಲ್ಲವರಿಂದ ಕೇಳಿದ್ದೇನೆ.

kar2

ಡಾ. ಕರ್ಜಗಿಯವರ ಸಾಧನೆಗಳನ್ನು ಗುರುತಿಸಿ ದೇಶದ ನಾನಾ ಶಿಕ್ಷಣ ಸಂಸ್ಥೆಗಳು ಮತ್ತು ಖಾಸಗೀ ಟ್ರಸ್ಟುಗಳು ಅವರನ್ನು ತಮ್ಮ ಗುಂಪಿನ ಖಾಯಂ ಸದಸ್ಯರನ್ನಾಗಿಸಿ ಕೊಂಡು ಅವರ ಅನುಭವಗಳ ಲಾಭವನ್ನು ಪಡೆದುಕೊಳ್ಳುತ್ತಿವೆ. ಅದಲ್ಲೇ ಸರ್ಕಾರ ಮತ್ತು ಹಲವಾರು ಸಂಘ ಸಂಸ್ಥೆಗಳು ಅವರನ್ನು ಕರೆದು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದು ಅವುಗಳಲ್ಲಿ ಪ್ರಮುಖವಾದವು ಹೀಗಿವೆ.

  • 2013ರಲ್ಲಿ ದೂರದರ್ಶನದಿಂದ ಶಿಕ್ಷಣದಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ ಡಿಡಿ ಚಂದನ ಪ್ರಶಸ್ತಿ.
  • 2019ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ.
  • 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯಲ್ಲದೇ, ಅದೇ ವರ್ಷಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಸರ್ಕಾರದಿಂದ ಅತ್ಯುನ್ನತ ನಾಗರಿಕ ಪ್ರಶಸ್ತಿಗೂ ಭಾಜನರಾಗಿದ್ದಾರೆ.

gur7

ಇನ್ನೂ ವಯಕ್ತಿಕವಾಗಿ ತಮ್ಮ ಸೋದರಮಾವನ ಮಗಳಾದ ಶ್ರೀಮತಿ ಪರಿಮಳಾರನ್ನು ಮದುವೆಯಾಗಿ ಸರಿ ಸುಮಾರು 40+ ವರ್ಷಗಳ ದಾಂಪತ್ಯ ಜೀವನ ಕಳೆದಿದ್ದು, ಅವರ ಸುಂದರ ದಾಂಪತ್ಯದ ಕುರುಹಾಗಿ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ಇಂಜಿನೀಯರಿಂಗ್ ಮುಗಿಸಿ ಅಮೇರಿಕಾದಲ್ಲಿ ಎಂ.ಎಸ್. ಪದವಿ ಗಳಿಸಿ ಭಾರತದಲ್ಲೇ ಕೆಲಸ ಮಾಡುವ ಉದ್ದೇಶದಿಂದ ಇಲ್ಲಿಯೇ ಪ್ರತಿಷ್ಟಿತ ಕಂಪನಿಯೊಂದರಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದು ಅವರ ಮಡದಿ ತಮ್ಮ ಮಾವನವರಂತೆ ಶಿಕ್ಷಕಿಯಾಗಿದ್ದಾರೆ. ಅವರಿಬ್ಬರಿಗೂ ಒಬ್ಬಳು ಮಗಳಿದ್ದಾಳೆ. ಇನ್ನು ಕಿರಿಯ ಮಗ ಎಂಬಿಏ ಮಾಡಿ ಅಮೇರಿಕಾದ ಡಲ್ಲಾಸ್ ನಲ್ಲಿ ಪೆಪ್ಸಿ ಕಂಪನಿಯ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು ಅವರಿಗೊಬ್ಬ ಮಗನಿದ್ದಾನೆ. ತಮ್ಮೆಲ್ಲಾ ನಿರಂತರವಾದ ಚಟುವಟಿಕೆಗಳ ಮಧ್ಯೆಯೂ ಸಮಯ ಮಾಡಿಕೊಂಡು ತಮ್ಮ ಮುದ್ದಿನ ಮೊಮ್ಮಗಳು ಮತ್ತು ಮೊಮ್ಮಗನಿಗೆ ಭಾರತೀಯ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಗುರುರಾಜ್ ಕರ್ಜಗಿಯವರು ಹೇಳಿಕೊಡುವ ಮೂಲಕ ತಮ್ಮ ಅಜ್ಜನ ಕಾಯಕವನ್ನು ಮುಂದುವರಿಸುತ್ತಿರುವುದು ನಿಜಕ್ಕೂ ಪ್ರಶಂಶನೀಯವಾಗಿದೆ.

ದೇಶದ ಪ್ರಖ್ಯಾತ ಶಿಕ್ಷಣ ತಜ್ಞರಾಗಿ, ಅದ್ಭುತ ಲೇಖಕ, ವಾಗ್ಮಿಯಾಗಿ ಯುವಪೀಳಿಗೆಗೆ ಮಾದರಿಯಾಗಿರುವುದಲ್ಲದೇ, ಶಿಕ್ಷಕ ವೃತ್ತಿ ಎನ್ನುವುದು ಅತ್ಯಂತ ಪ್ರಭಾವೀ ಸ್ಥಾನವಾಗಿದ್ದು ಒಬ್ಬ ಉತ್ತಮ ಶಿಕ್ಷಕ ತನ್ನ ಧನಾತ್ಮಕ ಚಿಂತನೆಗಳ ಪಾಠ ಪ್ರವಚನಗಳಿಂದ ಸಾವಿರಾರು ಉತ್ತಮ ಪ್ರಜೆಗಳನ್ನು ರೂಪಿಸಬಲ್ಲ. ಹಾಗಾಗಿ ಅಂತಹ ಉತ್ತಮ ಶಿಕ್ಷಕರನ್ನು ರೂಪಿಸುವುದರಲ್ಲೀ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಶ್ರೀಯುತ ಡಾ. ಗುರುರಾಜ ಕರ್ಜಗಿಯವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s