ಕೆರೆಯ ನೀರನು ಕೆರೆಗೆ ಚಲ್ಲುವ ಸ್ಯಾಡಿಯೊ ಮಾನೆ

ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತವರೆಲ್ಲರಿಗೂ ಗೀತೆಗಳ ಮೊದಲನೇ ಹಾಡು ಶ್ರೀ ಪುರಂದರ ದಾಸರು ರಚಿಸಿರುವ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೊ… ಗೊತ್ತೇ ಇರುತ್ತದೆ.ಯಾವ ಸಮಾಜದಿಂದ ನಾವುಗಳು ಉಪಕೃತರಾಗಿರುತ್ತೇವೆಯೋ ಅದೇ ಸಮಾಜಕ್ಕೆ ನಾವುಗಳು ಹಿಂದೆ ಏನನ್ನಾದರು ಕೊಡಲೇ ಬೇಕು ಎನ್ನುವುದು ಈ ಹಾಡಿನ ಸಾರಾಂಶ ಅದೇ ರೀತಿಯಾಗಿ ಸಮಾಜಕ್ಕೆ ಹಿಂದುರಿಗಿಸಿ ಕೊಡುವಷ್ಟರ ಮಟ್ಟಿಗೆ ಬೆಳೆಯಲೀ ಎನ್ನುವುದೂ ಮತ್ತೊಂದು ಅಭಿಲಾಷೆ.

senegalಇಷ್ಟೆಲ್ಲಾ ಪೀಠಿಕೆಗಳು ಏಕಪ್ಪಾ ಅಂದ್ರೇ ಅಟ್ಲಾಂಟಿಕ್ ಮಹಾಸಾಗರದ ಕರಾವಳಿಯಲ್ಲಿರುವ ಪಶ್ಚಿಮ ಆಫ್ರಿಕಾದ ಒಂದು ದೇಶವಾಗಿರುವ ಸೆನೆಗಲ್ ಗಣರಾಜ್ಯ ಪ್ರಾಚೀನ ಸ್ಥಳೀಯ ಸಂಪ್ರದಾಯಗಳೊಂದಿಗೆ ಫ್ರೆಂಚ್ ಮತ್ತು ಉತ್ತರ ಆಫ್ರಿಕಾದ ಪ್ರಭಾವಗಳನ್ನು ಹೊಂದಿರುವಂತಹ ಮೀನು ಮತ್ತು ಅಕ್ಕಿ ಮತ್ತು ಅಕ್ಕಿನ ಸಂಮ್ಮಿಶ್ರಣದ ವಿಶಿಷ್ಟವಾದ ಥಿಯೆಬೌಡಿಯನ್ನೆ ಎನ್ನುವ ಭಕ್ಷ್ಯಕ್ಕೆ ಹೆಸರಾಗಿದೆ. ವಿಶ್ವದಲ್ಲೇ ಹೆಸರುವಾಸಿಯಾದ 7 UNESCO ಪ್ರವಾಸಿತಾಣಗಳು ಸೆನೆಗಲ್ನಲ್ಲಿದೆ. ದೇಶದಲ್ಲಿ 93% ಮುಸ್ಲಿಮರಿದ್ದು ಮುಸ್ಲಿಂ ರಾಷ್ಟ್ರವಾಗಿರುವ ಈ ದೇಶದ ಮೊದಲ ಅಧ್ಯಕ್ಷ ಕ್ಯಾಥೋಲಿಕ್ ಅಗಿದ್ದದ್ದು ವಿಶೇಷವಾಗಿತ್ತು. ಒಲಿಂಪಿಕ್ಸ್ ಕ್ರೀಡೆಗೆ ಆತಿಥ್ಯ ವಹಿಸುವ ಮೊದಲ ಆಫ್ರಿಕನ್ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವುದಲ್ಲದೇ, ಈ ದೇಶಕ್ಕೆ ಪ್ರತೀವರ್ಷವೂ 1 ಮಿಲಿಯನ್ಗಿಂತಲೂ ಅಧಿಕ ಪಶ್ಚಿಮ ಆಫ್ರಿಕನ್ನರು ಪ್ರವಾಸಿಗರನ್ನು ಆಕರ್ಷಿಸುವಂತಹ ತಾಣಗಳಿದ್ದು ಫುಟ್ ಬಾಲ್ ಆಟಕ್ಕೆ ಈ ದೇಶ ಜನಪ್ರಿಯವಾಗಿದ್ದರೂ, ಕುರಿಮರಿ (ಕುಸ್ತಿ) ಆಟವು ಸೆನೆಗಲ್ನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ.

sadio3ಇದೇ ಸೆನೆಗಲ್ 2022ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಳೆದ ಭಾನುವಾರ 3.12.2022 ರಂದು ಇಂಗ್ಲೆಂಡ್ ವಿರುದ್ಧ 3-0 ಸೋಲುವುದರೊಂದಿಗೆ ಬಹುತೇಕ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದಿದೆ. ಆದರೆ ನಾನಿಂದು ನಿಮ್ಮೊಂದಿಗೆ ಅದೇ ಸೆನೆಗಲ್ ತಂಡದ ಪ್ರಮುಖ ಆಟಗಾರನಾದ ಸ್ಯಾಡಿಯೊ ಮಾನೆಯ ವ್ಯಕ್ತಿತ್ವ ಮತ್ತು ಮಾನವೀಯತೆಗಳ ಬಗ್ಗೆ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇನೆ. ಏಪ್ರಿಲ್ 10 1992ರಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸ್ಯಾಡಿಯೋ ಬಾಲ್ಯದಿಂದಲೂ ಓದಿಗಿಂತಲೂ ಫುಟ್ಬಾಲ್ ಆಟದ ಬಗ್ಗೆಯೇ ಗೀಳು ಹಚ್ಚಿಸಿಕೊಂಡಿರುತ್ತಾರೆ. ಆದರೆ ಅತನ ತಂದೆ ಸ್ಥಳೀಯ ಮಸೀಸಿಯೊಂದರ ಇಮಾಮ್ ಆಗಿದ್ದ ಕಾರಣ, ಆತ ತನ್ನ ಮಗ ಪುಟ್ಬಾಲ್ ಆಟಗಾರನಾಗುವುದು ಇಷ್ಟ ಪಡುತ್ತಿರಲಿಲ್ಲವಾದ್ದರಿಂದ ಮಗ ಪುಟ್ಬಾಲ್ ಆಡುವುದನ್ನು ನಿಷೇಧಿಸಿದ್ದರು. ತಾನೊಂದು ಬಗೆದರೆ, ದೈವವೊಂದು ಬಗೆದೀತು ಎನ್ನುವಂತೆ ಸ್ಯಾಡಿಯೊ ಮಾನೆಗೆ ಏಳು ವರ್ಷವಿದ್ದಾಗ ಅವರ ತಂದೆ ಅಚಾನಕ್ಕಾಗಿ ನಿಧನರಾಗಿದ್ದು ಆತನ ಜೀವನದಲ್ಲಿ ತುಂಬಲಾರದ ನಷ್ಟವಾದರೂ, ವಯಕ್ತಿಕವಾಗಿ ತನ್ನಿಷ್ಟವಾದ ಫುಟ್ಬಾಲ್ ಆಟವಾಡುವುದನ್ನು ತಡೆಯುವವರು ಇಲ್ಲವಾಗುತ್ತಾರೆ. ಇದನ್ನೇ ಸದ್ಬಳಕೆ ಮಾಡಿಕೊಂಡ ಸ್ಯಾಡಿಯೋ, ಚಿಕ್ಕ ವಯಸಿನಲ್ಲೇ ಸ್ಥಳೀಯ ಮಟ್ಟದಲ್ಲಿ ಉತ್ತಮ ಆಟಗಾರ ಎಂದು ಪ್ರಸಿದ್ದಿ ಪಡೆಯುವುದಲ್ಲದೇ. ಮತ್ತಷ್ಟೂ ಉತ್ತಮ ಫುಟ್ಬಾಲ್ ಆಟಗಾರನಾಗುವ ಮಹತ್ವಾಕಾಂಕ್ಷೆಯಿಂದಾಗಿ, ತನ್ನ 15 ನೇ ವಯಸ್ಸಿನಲ್ಲಿ ಮನೆಯನ್ನು ಬಿಟ್ಟು ಹತ್ತಿರದ ಪಟ್ಟಣಕ್ಕೆ ಬರುತ್ತಾನೆ. 2009 ರಲ್ಲಿ, M’Bour ಕ್ಲಬ್ ಪರ ಆಡುವಾಗ, ತನ್ನ ಕಾಲ್ಚಳಕದಿಂದ ಬಲು ಬೇಗನೆ ಎಲ್ಲರನ್ನೂ ಸೂಜಿಗಲ್ಲಿನಂತ ಆಕರ್ಷಿಸುವ ಮೂಲಕ, Generation Foot ಎಂಬ ಕ್ಲಬ್ಬಿಗೆ ಸೇರಿದ ಕೆಲವೇ ದಿನಗಳಲ್ಲಿ 2010-11 ಋತುವಿನಲ್ಲಿ ತನ್ನ ಸೊಗಸಾದ ಆಟದಿಂದ ತನ್ನ ತಂಡವನ್ನು ಎರಡನೇ ವಿಭಾಗಕ್ಕೆ ಬಡ್ತಿ ಪಡೆಯಲು ಸಹಾಯ ಮಾಡಿದರು.

sadio2ಇಷ್ಟರಲ್ಲೇ ಆತನ ಆಟವನ್ನು ಗಮನಿಸಿದ ಅನೇಕ ಕ್ಲಬ್ಬುಗಳು ತಾಮುಂದು ನಾಮುಂದು ಎಂದು ಆತನನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಇಚ್ಚಿಸಿದ ಕಾರಣ ಬುಂಡೆಸ್ಲಿಗಾ ಕ್ಲಬ್ ಬೇಯರ್ನ್ ಮ್ಯೂನಿಚ್ ಪರ ಆಡುವಾಗಲೇ ಸೆನೆಗಲ್ ರಾಷ್ಟ್ರೀಯ ತಂಡಕ್ಕೆ ಪ್ರಮುಖ ಫಾರ್ವರ್ಡ್ ಆಗಿ ಆಯ್ಕೆಯಾಗಿದಲ್ಲದೇ ತನ್ನ ಚುರುಕಾದ ಆಟದಿಂದ ಕೆಲವೇ ದಿನಗಳಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಲ್ಲದೇ, ತಮ್ಮ ಒತ್ತುವಿಕೆ, ಡ್ರಿಬ್ಲಿಂಗ್ ಮತ್ತು ವೇಗಕ್ಕೆ ಹೆಸರುವಾಸಿಯಾಗಿ ಆಫ್ರಿಕ ಖಂಡದ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗುತ್ತಾರೆ. ತನ್ನ 19 ನೇ ವಯಸ್ಸಿನಲ್ಲೇ Ligue 2 ಕ್ಲಬ್ ಮೆಟ್ಜ್ನೊಂದಿಗೆ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಪ್ರಾರಂಭಿಸಿದರು, ಮುಂದಿನ ಋತುವಿನಲ್ಲೇ ಆಸ್ಟ್ರಿಯನ್ ಕ್ಲಬ್ ರೆಡ್ ಬುಲ್ ಸಾಲ್ಜ್ಬರ್ಗ್ಗೆ € 4 ಮಿಲಿಯನ್ಗೆ ಸೇರಿಕೊಳ್ಳುತ್ತಾರೆ. 2013 ರಲ್ಲಿ ಲೀಗ್ ಮತ್ತು ಕಪ್ ದೇಶೀಯ ಡಬಲ್ ಅನ್ನು ಗೆಲ್ಲುವ ಮೂಲಕ, ಮಾನೆ £11.8 ಮಿಲಿಯನ್ ಕ್ಲಬ್ ದಾಖಲೆ ಶುಲ್ಕಕ್ಕಾಗಿ ಇಂಗ್ಲಿಷ್ ಕ್ಲಬ್ ಸೌತಾಂಪ್ಟನ್ಗೆ ಸೇರಿಕೊಳ್ಳುತ್ತಾರೆ. ಅಲ್ಲಿ, ಅವರು 2015 ರಲ್ಲಿ ಆಸ್ಟನ್ ವಿಲ್ಲಾ ವಿರುದ್ಧ 6-1 ಗೆಲುವಿನಲ್ಲಿ, ಕೇವಲ 176 ಸೆಕೆಂಡುಗಳಲ್ಲಿ ಮೂರು ಗೋಲುಗಳನ್ನು ಗಳಿಸಿ ಪ್ರೀಮಿಯರ್ ಲೀಗ್ ನಲ್ಲಿ ಅತ್ಯಂತ ವೇಗವಾಗಿ ಹ್ಯಾಟ್ರಿಕ್ ಗೋಲು ಗಳಿಸಿದ ದಾಖಲೆಯನ್ನು ಸ್ಥಾಪಿಸುತ್ತಾರೆ.

sadio1 2016 ರಲ್ಲಿ ಸಹ ಪ್ರೀಮಿಯರ್ ಲೀಗ್ ಕ್ಲಬ್ ಲಿವರ್ಪೂಲ್ಗೆ £34 ಮಿಲಿಯನ್ ದಾಖಲೆ ಮೊತ್ತಕ್ಕೆ ಸಹಿ ಹಾಕಿದ್ದಲ್ಲದೇ, ತಮ್ಮ ತಂಡ 2018 ಮತ್ತು 2019 ರಲ್ಲಿ ಬ್ಯಾಕ್-ಟು-ಬ್ಯಾಕ್ UEFA ಚಾಂಪಿಯನ್ಸ್ ಲೀಗ್ ಫೈನಲ್ಗಳನ್ನು ತಲುಪಲು ಸಹಾಯ ಮಾಡಿದ್ದಲ್ಲದೇ ಪ್ರಶಸ್ತಿಯನ್ನೂ ಗೆಲ್ಲಲು ಸಹಾಯ ಮಾಡುತ್ತಾರೆ. ಅದೇ ಋತುವಿನಲ್ಲಿ ಅತ್ಯಂತ ಹೆಚ್ಚಿನ ಗೋಲು ಗಳಿಸುವ ಮೂಲಕ, ಪ್ರೀಮಿಯರ್ ಲೀಗಿನ ಗೋಲ್ಡನ್ ಬೂಟ್ ಅನ್ನು ಸಹಾ ಗೆಲ್ಲುತ್ತಾರೆ. 2019–20 ಪ್ರೀಮಿಯರ್ ಲೀಗ್ ಅನ್ನು ಗೆಲ್ಲುವ ಮೂಲಕ ಲಿವರ್ಪೂಲ್ನ 30 ವರ್ಷಗಳ ಲೀಗ್ ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಸಹಾ ಸಹಾಯ ಮಾಡುತ್ತಾರೆ. ಅಕ್ಟೋಬರ್ 2021 ರಲ್ಲಿ, ಅವರು ತಮ್ಮ 100 ನೇ ಪ್ರೀಮಿಯರ್ ಲೀಗ್ ಗೋಲು ಗಳಿಸುವ ಮೂಲಕ ಈ ರೀತಿಯ ಹೆಗ್ಗುರುತನ್ನು ತಲುಪಿದ ಮೂರನೇ ಆಫ್ರಿಕನ್ ಎನಿಸಿಕೊಳ್ಳುತ್ತಾರೆ.

sadio7ಇವೆಲ್ಲವೂ ಅವರ ವೃತ್ತಿಪರ ಸಾಧನೆಗಳಾಗಿದ್ದು ಸರ್ವೇ ಸಾಮಾನ್ಯ ಅವರಂತಹ ಖ್ಯಾತ ಆಟಗಾರೆಲ್ಲರೂ ಈ ರೀತಿಯ ಒಂದಲ್ಲಾ ಒಂದು ಸಾಧನೆಗಳನ್ನು ಮಾಡಿರುತ್ತಾರಾದ್ದರಿಂದ ಅದರಲ್ಲೇನೂ ವಿಶೇಷ ಎನಿಸುವುದಿಲ್ಲ. ಆದರೆ ವಾರ್ಷಿಕವಾಗಿ ಸುಮಾರು $10.2 ಮಿಲಿಯನ್ ಗಳಿಸುವ ಈ ಮಹಾನ್ ಆಟಗಾರ ತನ್ನ ವಯಕ್ತಿವಾಗಿ ಅದರಲ್ಲಿ ಕಿಂಚಿತ್ತೂ ಬಳಸಿಕೊಳ್ಳದೇ ಬಹುತೇಕ ಆದಾಯವನ್ನು ಸಮಾಜ ಸೇವೆಗಾಗಿಯೇ ಬಳಸುವುದು ಆತನನ್ನು ಮಹಾನ್ ವ್ಯಕ್ತಿಯನ್ನಾಗಿಸಿದೆ. ಸರಳ ಸಾಧಾರಣ ಉಡುಪಿನಲ್ಲಿ ಒಡೆದ ಐಫೋನ್ 11 ಅನ್ನು ಕೈಯ್ಯಲ್ಲಿ ಹಿಡಿದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಆತನ ಅಭಿಮಾನಿಗಳು ಅರೇ ಇದೇನಿದು ಇಂತಹ ಖ್ಯಾತ ಆಟಗಾರ ಒಡೆದ ಪೋನ್ ಬಳಸುವುದೇ? ಹೊಸಾ ಫೋನ್ ಏಕೆ ಕೊಳ್ಳಬಾರದು? ಎಂದು ಅವರನ್ನೇ ಪ್ರಶ್ನಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ನಿಜಕ್ಕೂ ಅದ್ಭುತವಾಗಿತ್ತು.

sadio6“ನನಗೆ ಹತ್ತು ಫೆರಾರಿಗಳು, 20 ಡೈಮಂಡ್ ವಾಚ್ಗಳು ಮತ್ತು ಎರಡು ಜೆಟ್ ವಿಮಾನಗಳು ಏಕೆ ಬೇಕು? ನಾನು ಹಸಿವಿನಿಂದ ಬಳಲುತ್ತಿದ್ದಾಗ ಕೂಲಿಯಾಗಿ ಹೊಲಗಳಲ್ಲಿ ಕೆಲಸ ಮಾಡಿದ್ದೇನೆ. ಶಾಲೆಗೆ ಹೋಗಲಾಗದೇ ಸರಿಯಾದ ಶಿಕ್ಷಣವನ್ನೂ ಪಡೆಯಲಾಗದೇ, ಬರಿಗಾಲಿನಲ್ಲಿ ಪುಟ್ಬಾಲ್ ಆಟವನ್ನು ಆಡಿದ್ದೇವೆ. ಇಂದು ನನ್ನ ಬಳಿ ಸಾಕಷ್ಟು ಹಣವಿದೆ. ಅದರಿಂದ ನನ್ನಂತೆ ಶಿಕ್ಷಣ ವಂಚಿತ ನೂರಾರು ಮಕ್ಕಳಿಗೆ ಸಹಾಯ ಮಾಡಲು ಇಚ್ಚಿಸುತ್ತೇನೆ. ಹಾಗಾಗಿ ನನ್ನ ಸಂಪಾದನೆಯ ಬಹುತೇಹ ಹಣವನ್ನು ನಾನು ಶಾಲೆಗಳನ್ನು ನಿರ್ಮಿಸಲು ಮತ್ತು ಬಡವರಿಗೆ ಆಹಾರ ಅಥವಾ ಬಟ್ಟೆಗಳನ್ನು ಕೊಡಿಸಲು ಮೊದಲ ಆದ್ಯತೆ ನೀಡುತ್ತೇನೆ, ಇದುವರೆವಿಗೂ ಅನೇಕ ಶಾಲೆಗಳು ಮತ್ತು ಕ್ರೀಡಾಂಗಣಗಳನ್ನು ನಿರ್ಮಿಸಿದ್ದೇನೆ, ಲೆಕ್ಕವಿಲ್ಲದಷ್ಟು ಜನರಿಗೆ ಊಟ ವಸತಿ ಮತ್ತು ಬಟ್ಟೆಗಳನ್ನು ಕೊಡಿಸಿದ್ದೇನೆ. ತನ್ನ ಸೆನಗಲ್ ದೇಶದಲ್ಲಿರುವ ಅತ್ಯಂತ ಬಡತನದಲ್ಲಿರುವ ಕುಟುಂಬಗಳ ಆರ್ಥಿಕ ನೆರವು ನೀಡುವ ಸಲುವಾಗಿ ತಿಂಗಳಿಗೆ 70 ಯೂರೋಗಳನ್ನು ಕೊಡುವಂತಹ ವ್ಯವಸ್ಥೆ ಮಾಡಿದ್ದೇನೆ. ಹಾಗಾಗಿ ನಾನು ಐಷಾರಾಮಿ ಫೋನು, ಬಂಗಲೇ ಕಾರುಗಳಾಗಲೀ ಇಲ್ಲವೇ ವಿದೇಶಿ ಪ್ರವಾಸಗಳಿಗೆ ಹೋಗುವುದಿಲ್ಲ. ಅದರ ಬದಲಾಗಿ ಜನರ ಪ್ರೀತಿಯಿಂದ ಗಳಿಸಿದ್ದರಲಿ, ಜನರಿಗೇ ಹಂಚಲು ಬಯಸುತ್ತೇನೆ ಎಂದಿರುವುದು ನಿಜಕ್ಕೂ ಅದ್ಭುತ ಮತ್ತು ಅನುಕರಣೀಯವೇ ಸರಿ.

sadio4ಅವರು ವೃತ್ತಿಪರ ಫುಟ್ಬಾಲ್ ಆಟಗಾರರಾಗಿ ತಮ್ಮ ಸಂಪಾದನೆಯಿಂದ ವರ್ಷಕ್ಕೆ $14 ಮಿಲಿಯನ್ ಹಣವನ್ನು ತಮ್ಮ ದೇಶದಲ್ಲಿ ಅಗತ್ಯ ಇರುವವರಿಗೆ ದಾನ ಮಾಡಲೆಂದೇ ಮೀಸಲಾಗಿಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ತನ್ನೂರಿನಲ್ಲಿ ಆಸ್ಪತ್ರೆ ಇಲ್ಲದಿದ್ದ ಕಾರಣ, ಬಾಲ್ಯದಲ್ಲೇ ತನ್ನ ತಂದೆಯವರನ್ನು ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಬೇರಾರಿಗೂ ಬಾರದಿರಲೆಂದು, ತಮ್ಮ ತವರು ಗ್ರಾಮದಲ್ಲಿ ವಿಶ್ವದರ್ಜೆಯ ದರ್ಜೆಯ ಆಸ್ಪತ್ರೆಯನ್ನು ಕಟ್ಟಿಸಿರುವುದಲ್ಲದೆ ಅದೇ ಸ್ವಗ್ರಾಮವಾದ ಬಂಬಾಲಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಶಾಲೆಯನ್ನೂ ಸಹಾ ನಿರ್ಮಿಸಿರುವುದಲ್ಲದೇ, ಬಿಡುವು ಸಿಕ್ಕಾಗಲೆಲ್ಲಾ ಅದರ ಸ್ಥಿತಿಗತಿಗಳನ್ನು ಪರಿಶೀಲಿಸಲು ಬರುವುದು ಶ್ಲಾಘನೀಯವಾಗಿದೆ. ಶಾಲೆಗಳು ಮತ್ತು ಆಸ್ಪತ್ರೆಗಳಲ್ಲ್ದೇ ಅವರು ನಿಯಮಿತವಾಗಿ ಸಾವಿರಾರು ಬಡ ಕುಟುಂಬಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ.

ಪುಟ್ಬಾಲ್ ಆಟಗಾರನಾಗಿ ಅಷ್ಟೆಲ್ಲಾ ಸಾಧನೆಗಳನ್ನು ಮಾಡಿರುವ ಸೆನೆಗಲ್ಲಿನ ಸ್ಯಾಡಿಯೊ ಮಾನೆ, ಒಂದು ಚೂರು ಹಮ್ಮು ಬಿಮ್ಮು ಇಲ್ಲದೇ ಸಾಧಾರಣ ವ್ಯಕ್ತಿಯಾಗಿ ಎಲ್ಲರೊಂದಿಗೆ ಇಂದಿಗೂ ಬೆರೆಯುತ್ತಾರೆ. ಕ್ಲಬ್ ಪರ ಪಂದ್ಯಗಳನ್ನು ಅಡುವಾಗ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬಸ್ಸಿನಲ್ಲಿ ಹೋಗುವಾಗ ಮತ್ತು ಬರುವಾಗ ತಮ್ಮ ವಸ್ತುಗಳನ್ನಲ್ಲದೇ ಇತರೇ ಆಟಗಾರರ ವಸ್ತುಗಳನ್ನು ಸ್ವತಃ ತಾವೇ ಬಸ್ಸಿಗೆ ಹಾಕಲು ಇಳಿಸಲು ಸಹಾಮ ಆಮ್ಡುವುದಲ್ಲದೇ, ತನ್ನ ಅಭಿಮಾನಿಗಳು ಮತ್ತು ಬಾಲ್ ಬಾಯ್ ಗಳಿಗೆ ಆಗ್ಗಾಗ್ಗೆ ಉಡುಗೊರೆಗಳನ್ನೂ ನೀಡುವುದನ್ನು ರೂಡಿಯಲ್ಲಿಟ್ಟುಕೊಂದಿದ್ದಾರೆ. ಅಷ್ಟು ದೊಡ್ಡ ಆಟಗಾರನಾದರೂ ಸಮಯ ಮಾಡಿಕೊಂದು ಸ್ಥಳೀಯ ಮಸೀದಿಯಲ್ಲಿ ಶೌಚಾಲಯಗಳನ್ನು ಶುಚಿ ಮಾಡುವ ಕಾಯಕದಲ್ಲೂ ತೊಡಗಿಕೊಳ್ಳುವ ಮೂಲಕ, ದಿನಕರ ದೇಸಾಯಿಯವರ ಏರುವನು ರವಿ ಏರುವನು ಬಾನಳು ಸಣ್ಣಗೆ ತೋರುವನು, ಏರಿದವ ಚಿಕ್ಕವನಿರಲೇ ಬೇಕಂಬ ನೀತಿಯನು ಸಾರುವನು ರವಿ ಸಾರುವನು ಎಂಬ ಮಾತನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದಿರುವಂತಹ ಸ್ಯಾಡಿಯೋ ಮಾನೆಯಿಂದ ನಾವೂ ನೀವು ಕಲಿಯಬೇಕಾದದ್ದು ಬಹಳಷ್ಟು ಇದೇ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s