ಅರೇ ಇದೇನಿದು? ಇದೆಂತಹ ಶೀರ್ಷಿಕೆ? ಆಗಸ್ಟ್ 8, 1942 ರಂದು ಬಾಂಬೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ, ಮಹಾತ್ಮಾ ಗಾಂಧಿಯವರು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಎಂಬ ಚಳುವಳಿಯನ್ನು ಮಾಡಿದ್ದನ್ನು ನಾವೆಲ್ಲಾ ಕೇಳಿದ್ದೇವೆ ಓದಿದ್ದೇವೆ. ಅದರೆ ಇದೇನಿದು? ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ ಎಂಬ ಚಳುವಳಿ? ಎಂದು ಆಶ್ಚರ್ಯ ಪಡುವುದು ಸಹಜ. ಹೀಗೆ ಹೇಳುತ್ತಿರುವುದು ನಾನಲ್ಲ. ಬದಲಾಗಿ, ಭಾರತೀಯರು ಕಷ್ಟ ಪಟ್ಟು ಬೆವರು ಸುರಿಸಿ ಕಟ್ಟಿದ ತೆರಿಗೆ ಹಣದಲ್ಲಿ ವರ್ಷಾನು ವರ್ಷ ದೆಹಲಿಯ ಜವಹರ್ ಲಾಲ್ ವಿಶ್ವವಿದ್ಯಾನಿಲಯದ (ಜೆ.ಎನ್.ಯು) ತುಕ್ಡೇ ತುಕ್ಡೇ ಗ್ಯಾಂಗಿನ ದಂಡಪಿಂಡಗಳ ಹೊಸಾ ವರಸೆ.
ಕೆಲ ವರ್ಷಗಳ ಹಿಂದೆ ಇದೇ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ವಿಧ್ಯಾರ್ಥಿ ಸೋಗಿನಲ್ಲಿರುವ ಕೆಲವು ಧರ್ಮಾಂಧ ಮತ್ತು ದೇಶದ್ರೋಹಿಗಳು ಸೇರಿಕೊಂಡು ಭಾರತದ ಸಂಸತ್ತಿನ ಮೇಲೆ ಧಾಳಿ ನಡೆಸಿದ ರೂವಾರಿಯನ್ನು ಗಲ್ಲು ಹಾಕಿದ್ದನ್ನು ವಿರೋಧಿಸಿ ಘೋಷಣೆ ಕೂಗಿದ್ದು ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ದುರಾದೃಷ್ಟವೆಂದರೆ ಈ ರೀತಿಯ ಕುಕೃತ್ಯಗಳನ್ನು ಖಂಡಿಸುವ ಬದಲು ಅನೇಕ ರಾಜಕೀಯ ಪಕ್ಷಗಳು ನರೇಂದ್ರ ಮೋದಿ ಮತ್ತು ಬಿಜೆಪಿಯ ವಿರುದ್ಧ ತಮ್ಮ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಅ ದೇಶದ್ರೋಹಿಗಳ ಪರ ಹೇಳಿಕೆಯನ್ನು ನೀಡುವ ಮೂಲಕ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದರು.
ಈಗ ಅದೇ ಕ್ಯಾಂಪಸ್ಸಿನ ಗೋಡೆಯ ಮೇಲೆ ಕೆಂಪು ಅಕ್ಷರಗಳಲ್ಲಿ ಬ್ರಾಹ್ಮಣರು ಕ್ಯಾಂಪಸ್ ತೊರೆಯುತ್ತಾರೆ. ನಾವು ಬ್ರಾಹ್ಮಣರಾದ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಬಯಸುತ್ತೇವೆ. ರಕ್ತಪಾತವಾಗುತ್ತದೆ ಎಂದು ಕಮ್ಯುನಿಸ್ಟ್ ಜಿಹಾದಿಗಳು ಬರಹಗಳನ್ನು ಹಾಕಿರುವುದು ದೇಶದ ಭಧ್ರತೆಯ ಹಿತದೃಷ್ಟಿಯಿಂದ ಎಚ್ಚರಿಕೆಯ ಗಂಟೆಯಾಗಿದೆ. ಈ ರೀತಿಯಾಗಿ ಹಿಂದೂ ಅಥವಾ ಬ್ರಾಹ್ಮಣ ಪದ ಬಳಸಿ ಯಾರೇ ಆಗಲೀ, ಎಂತಹದ್ದೇ ಹೇಳಿಕೆಯನ್ನು ನೀಡಿದರೂ ಅದರನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವ ಹೆಸರಿನಲ್ಲಿ ಸಮರ್ಥನೆ ಮಾಡಿಕೊಳ್ಳಲು ಕೆಲ ಪಟ್ಟಭದ್ರ ಹಿತಾಸಕ್ತಿಯ ಮಂದಿ ಸದಾ ಸಿದ್ಧರಿರುತ್ತಾರೆ. ಅದೇ ಹಿಂದೂ ಅಥವಾ ಬ್ರಾಹ್ಮಣ ಎಂಬ ಪದದ ಬದಲು ಮತ್ತೊಂದು ಧರ್ಮ, ಇಲ್ಲವೇ ಮುಲ್ಲಾ ಎಂದು ಬರೆದ ಕೂಡಲೇ ಅದು ಕೋಮುವಾದ, ಮನುವಾದ, ಬ್ರಾಹ್ಮಣ್ಯತ್ವ, ಹಿಂದೂ ಮತಾಂಧತೆ ಎಂದು ಬೊಬ್ಬೆ ಹೊಡೆಯುವುದು ಹಾಸ್ಯಾಸ್ಪದ ಎನಿಸುತ್ತದೆ.
ಈ ಕಮ್ಯೂನಿಸ್ಟ್ ಮನಸ್ಥಿತಿಯವರು ಮತ್ತು ಅಹಿಂದ ನಾಯಕರು ಪದೇ ಪದೇ ಮಾರ್ಕ್ಸ್ ಸಿದ್ಧಾಂತ ಮತ್ತು ಅಂಬೇಡ್ಕರ್ ಅವರ ಭಾರತದ ಸಂವಿಧಾನದ ಆಧಾರದ ಮೇಲೇ ಸಮಾನತೆಗಾಗಿ ದೇಶದಲ್ಲಿ ಕ್ರಾಂತಿಯಾಗಬೇಕಿದೆ ಎಂದು ಬೊಬ್ಬಿರಿಯುತ್ತಾರೆ. ಅದರೆ ನಿಜ ಹೇಳಬೇಕೆಂದರೆ ಅವರಿಗೆ ಆ ಎರಡೂ ಸಿದ್ಧಾಂತದ ಬಗ್ಗೆ ಸಂಪೂರ್ಣವಾದ ಮಾಹಿತಿಯೇ ಇಲ್ಲ ಎನ್ನುವುದು ಸ್ಪಷ್ಟವಾಗಿದೆ.
5 ಮೇ 1818ರಲ್ಲಿ ಜರ್ಮನಿಯಲ್ಲಿ ಜನಿಸಿದ ಕಾರ್ಲ್ ಹೆನ್ರಿಕ್ ಮಾರ್ಕ್ಸ್, ಒಬ್ಬ ಶ್ರೇಷ್ಠ ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ, ಇತಿಹಾಸಕಾರ, ಸಮಾಜಶಾಸ್ತ್ರಜ್ಞ, ರಾಜಕೀಯ ಸಿದ್ಧಾಂತಿ, ಪತ್ರಕರ್ತ, ರಾಜಕೀಯ ಆರ್ಥಿಕತೆಯ ವಿಮರ್ಶಕ ಮತ್ತು ಸಮಾಜವಾದಿ ಕ್ರಾಂತಿಕಾರಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಆತ ಅಂದಿನ ಕಾಲದಲ್ಲಿ ಲಾಭ ಮತ್ತು ಖಾಸಗಿ ಒಡೆತನಕ್ಕೆ ಒತ್ತು ನೀಡುವ ಬಂಡವಾಳಶಾಹಿಗಳಿಂದಾಗಿ ಸಮಾಜದಲ್ಲಿ ಅಸಮಾನತೆಗೆ ಕಾರಣವಾಗಿರುವುದರಿಂದ, ವರ್ಗರಹಿತ ಸಮಾಜವನ್ನು ಉತ್ತೇಜಿಸುವ ವ್ಯವಸ್ಥೆಯನ್ನು ಪ್ರೋತ್ಸಾಹಿಸಿದರು. ದೇಶದ ಸಮಸ್ತ ಆಸ್ತಿಗಳೆಲ್ಲವೂ ಸರ್ಕಾರದ ಅಧೀನಕ್ಕೆ ಒಳಪಟ್ಟು, ದೇಶದ ಪ್ರಜೆಗಳೆಲ್ಲರೂ ಕಾರ್ಮಿಕರಮ್ತೆ ಒಟ್ಟಾಗಿ ದುಡಿದು ತಿನ್ನಬೇಕು ಎಂದು ಹೇಳಿದ್ದಾರೆ. ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಮತ್ತು ನಾಲ್ಕು-ಸಂಪುಟಗಳ ದಾಸ್ ಕ್ಯಾಪಿಟಲ್ ಎಂಬ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ, ಇದೇ ರಾಜಕೀಯ ಮತ್ತು ತಾತ್ವಿಕ ಚಿಂತನೆಯ ಕುರಿತಾಗಿ ಸವಿವರವಾಗಿ ಹೇಳಿದ್ದಾರೆ.
ಇನ್ನು 14 ಏಪ್ರಿಲ್ 1891ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಶ್ರೀ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಒಬ್ಬ ಭಾರತೀಯ ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಸಮಾಜ ಸುಧಾರಕ ಮತ್ತು ರಾಜಕೀಯ ನಾಯಕರಾಗಿದ್ದು, ಭಾರತದ ಸಂವಿಧಾನವನ್ನು ರಚಿಸುವ ಸಮಿತಿಯ ನೇತೃತ್ವ ವಹಿಸಿದ್ದಲ್ಲದೇ ಭಾರತದ ಮೊದಲ ಕಾನೂನು ಮತ್ತು ನ್ಯಾಯ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಕಲ್ಪನೆಯಂತೆ ಒಂದು ಉತ್ತಮ ಸಮಾಜವೆಂದರೆ, ಅಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಆಧಾರದ ಮೇಲೆ ಇರಬೇಕು ಎಂದು ಹೇಳಿರುವುದಲ್ಲದೇ, ಪ್ರಜಾಪ್ರಭುತ್ವವು ಈ ಆದರ್ಶದ ಸಾಧನವಾಗಿದೆ ಎಂದಿದ್ದಾರೆ. ಸ್ವಾತ್ರಂತ್ರ್ಯ ಪೂರ್ವದಲ್ಲಿ ಅತೀಯಾದ ಜಾತಿ ವ್ಯವಸ್ಥೆ ಇದ್ದು ಉಳ್ಳವರು ಇಲ್ಲದವರ ಮೇಲೆ ಸವಾರಿ ಮಾಡುತ್ತಿದ್ದದ್ದನ್ನು ಮನಗಂಡು ಉಳ್ಳವರು ಮತ್ತು ಇಲ್ಲದವರ ಮಧ್ಯೆ ಸಮಾನತೆಯನ್ನು ತರುವ ಸಲುವಾಗಿ ಕೆಲವು ಹಿಂದುಳಿದ ವರ್ಗಗಳಿಗೆ ಕೇವಲ 10 ವರ್ಷಗಳ ಕಾಲ ಮೀಸಲಾತಿಯ ವಿಶೇಷ ಸೌಲಭ್ಯಗಳನ್ನು ನೀಡುವ ಮೂಲಕ ದೀನದಲಿತರು ಮತ್ತು ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಮಾಜ ಮುಖ್ಯವಾಹಿನಿಗೆ ತರಬೇಕು ಎಂದಿದ್ದರು. ಅದೇ ರೀತಿಯಾಗಿ ಮೀಸಲಾತಿ ಹಕ್ಕು ಎಂಬುದು ಈ ದೇಶದ ಮೂಲಭೂತ ಹಕ್ಕಲ್ಲ ಎಂದೂ ಸಹಾ ಹೇಳಿದ್ದಲ್ಲದೇ, ಜೀವನವು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು. ದೇಶದ ಜನರು ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ನಾನು ನೋಡಿದಲ್ಲಿ, ಅದನ್ನು ಸುಡುವವರಲ್ಲಿ ನಾನು ಮೊದಲಿಗನಾಗುತ್ತೇನೆ ಎಂದು ಎಚ್ಚರಿಸಿದ್ದರು.
ಹೀಗೆ ಕಾರ್ಲ್ ಮಾರ್ಕ್ಸ್ ಮತ್ತು ಅಂಬೇಡ್ಕರ್ ಇಬ್ಬರೂ ಸಹಾ ಸಮಾಜದಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸುವುದಕ್ಕಾಗಿ ಸಮಾನತೆ ತರಬೇಕು ಎಂದು ಪ್ರತಿಪಾದಿಸಿದ್ದಾರೆಯೇ ಹೊರತು, ಇಂದಿನ ಸ್ವಘೋಷಿತ ಬುದ್ಧಿ ಜೀವಿಗಳು, ನಕಲಿ ಜಾತ್ಯಾತೀತರು ಮತ್ತು ಅಹಿಂದ ನಾಯಕಮಣಿಗಳು ಹೇಳುವಂತೆ ಜಾತಿ ಜಾತಿಯಲ್ಲಿ ಸಂಘರ್ಷವನ್ನು ಉಂಟು ಮಾಡಿ ಎಂದು ಎಲ್ಲಿಯೂ ಹೇಳಿಲ್ಲ ಎನ್ನುವುದು ಸ್ಪಷ್ಟವಾಗಿ ಅರಿವಾಗುತ್ತದೆ.
ನಮ್ಮ ದೇಶದಲ್ಲಿ ಬಹಳ ಹಿಂದಿನಿಂದಲೂ ಕರ್ಮಾನುಸಾರವಾಗಿ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮತ್ತು ಶೂದ್ರ ಎಂಬ ವರ್ಣಾಶ್ರಮಗಳು ರೂಢಿಯಲ್ಲಿ ಇತ್ತೇ ವಿನಃ, ಅವು ಜನ್ಮತಃವಾಗಿ ಬಂದಿರಲಿಲ್ಲ. ಯಾರು ಬ್ರಹ್ಮತ್ವವನ್ನು ಪಾಲಿಸಿ ಕರ್ಮಾನುಷ್ಠಾನಗಳನ್ನು ಪಾಲಿಸುತ್ತಾ ಶಾಸ್ತ್ರ ಸಂಪ್ರದಾಯಗಳ ಜೊತೆಗೆ ವೇದಾಧ್ಯಯನದ ಮೂಲಕ ಜ್ಞಾನಾರ್ಜನೆ ಮಾಡುವುದಲ್ಲದೇ ತಮ್ಮ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುತ್ತಾರೋ, ಅವರು ಬ್ರಾಹ್ಮಣರಾಗುತ್ತಿದ್ದರು. ಒಕ್ಕಲುತನ ಮಾಡುವವರ ಮನೆ ಹುಡುಗ ಓದಿ ಬ್ರಹ್ಮತ್ವವನ್ನು ಪಡೆದು ಜ್ಞಾನಿಯಾಗಿ ಬ್ರಾಹ್ಮಣನಾಗಬಹುದಿತ್ತು. ಅದೇ ರೀತಿ ಬ್ರಾಹ್ಮಣರ ಮನೆಯ ಕ್ಷಾತ್ರತೇಜದ ಬಲಶಾಲಿ ಹುಡುಗ ಸೈನ್ಯವನ್ನು ಸೇರಿ ದೇಶವನ್ನು ಕಾಯುವ ಕ್ಷತ್ರಿಯನಾಗಬಹುದಿತ್ತು. ಇಲ್ಲವೇ ವ್ಯಾಪಾರ ವಹಿವಾಟುಗಳನ್ನು ಮಾಡುವ ಮೂಲಕ ವೈಶ್ಯ ಇಲ್ಲವೇ ಇದಾವುದರ ಗೊಡವೇಯೇ ಇಲ್ಲದೇ ತನ್ನ ಪಾಡಿಗೆ ತಾನು ತನ್ನ ಕುಲಕಸುಬಿನ್ನು ಮಾಡಿಕೊಂಡೂ ಸಹಾ ಇರಬಹುದಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದೇ ವರ್ಣಾಶ್ರಮ ಜನ್ಮತಃ ಜಾತಿಯತೆಗೆ ಬದಲಾಗಿದ್ದು ವಿಷಾಧನೀಯವೇ ಸರಿ
ಬ್ರಾಹ್ಮಣರು ತಮ್ಮ ಪಾಡಿಗೆ ತಾವು ವೇದಾಧ್ಯಯನ ಪೂಜೆ ಪುನಸ್ಕಾರ ಹೋಮ ಹವನಾದಿಗಳನ್ನು ಮಾಡಿಕೊಂಡು ಊರ ಪುರೋಹಿತರಾಗಿ (ಪುರದ ಹಿತವನ್ನು ಕಾಪಾಡುವವರೇ ಪುರೋಹಿತರು) ರಾಜಾಶ್ರಯದಲ್ಲಿ ತಮ್ಮ ಪಾಂಡಿತ್ಯವನ್ನು ಪ್ರಚುರಪಡಿಸಿಕೊಂಡು ಅವರಿಂದ ಸಿಕ್ಕ ಅಷ್ಟೋ ಇಷ್ಟೋ ಜಮೀನಿನಲ್ಲಿ ತಕ್ಕ ಮಟ್ಟಿಗೆ ಬೇಸಾಯ ಮಾಡಿಕೊಂಡು, ಹಿಂದೆ ಬಂದರೆ ಹಾಯದೇ, ಮುಂದೆ ಬಂದರೆ ಒದೆಯದಂಥ ಯಾರಿಗೂ ಉಪದ್ರವ ನೀಡಂತಹ ನಿರುಪದ್ರವಿಗಳಾಗಿದ್ದರು. ಅರಬ್ ರಾಷ್ಟ್ರಗಳಿಂದ ಭಾರತದಮೇಲೆ ಧಾಳಿ ನಡೆಸಿದ ಮೊಘಲರು ಮೊದಲು ಆಕ್ರಮಣ ಮಾಡಿ, ಲೂಟಿ ಹೊಡೆದು ನಂತರ ಮತಾಂತರ ಮಾಡಿದ್ದೂ ಇದೇ ಕಾಶ್ಮೀರದ ಬ್ರಾಹ್ಮಣರಾದ ಪಂಡಿತರ ಮೇಲೆಯೇ. ಅದಕ್ಕೆ ಸಾಕ್ಷಿಯಾಗಿ ಇಂದಿಗೂ ಶ್ರೀನಗರ ಬಳಿ ಬಟ್ಟ್ ಮಜಾರ್ ಪ್ರದೇಶವನ್ನು ಕಾಣಬಹುದಾಗಿದೆ.
ಮುಸಲ್ಮಾನರು ಅ ಪಾಟಿಯಾಗಿ ಲೂಟಿ ಹೊಡೆದುಕೊಂದು ಹೋಗಿದ್ದರೂ, ಯುರೋಪಿಯನ್ನರು ಭಾರತಕ್ಕೆ ಬರುವ ಸಮಯದಲ್ಲಿ ಈ ದೇಶ ಅತ್ಯಂತ ಸುಭಿಕ್ಷವಾಗಿಯೇ ಇದ್ದ ಕಾರಣ ಅವರು ವ್ಯಾಪಾರದ ಸಂಬಂಧಕ್ಕಾಗಿಯೇ ಭಾರತಕ್ಕೆ ಬಂದರು. ಅಂದಿನ ಸಮಯದಲ್ಲಿ ಇಲ್ಲಿ ಎಲ್ಲರೂ ದುಡಿದು ತಿನ್ನುತ್ತಿದ್ದರೇ ಹೊರತು ಮತ್ತೊಬ್ಬರ ಹತ್ತಿರ ಬೇಡುವುದಾಗಲೀ, ಕಂಡವರ ತಲೆಯನ್ನು ಹೊಡೆದು ತಿನ್ನುವ ಕುಕೃತ್ಯಕ್ಕೆ ಇಳಿಯುತ್ತಿರಲಿಲ್ಲ. ಇಡೀ ಭಾರತದಲ್ಲಿ ಒಬ್ಬನೇ ಒಬ್ಬ ಭಿಕ್ಷುಕರನ್ನು ಕಾಣಲಿಲ್ಲ ಎಂದು ಪಾಹಿಯಾನ್ ಮತ್ತು ಹುಯ್ಯನ್ ಸ್ಯಾಂಗ್ ಎಂಬ ಚೀನೀ ಇತಿಹಾಸಕಾರರೇ ಹೇಳಿದ್ದಾರೆ ಎಂದರೆ ನಮ್ಮ ದೇಶ ಎಷ್ಟು ಸಂಪತ್ತು ಭರಿತವಾಗಿತ್ತು ಎಂಬುದರ ಅರಿವಾಗುತ್ತದೆ. ಅದೇ ರೀತಿ ದೇಶಾದ್ಯಂತ ಇದ್ದ ಲಕ್ಷಾಂತರ ದೇವಾಲಯಗಳು ಮತ್ತು ಗುರುಕುಲಗಳಿಂದಾಗಿ ಇಲ್ಲಿನ ಜನರು ಜ್ಞಾನವಂತರಾಗಿದ್ದರು. ಇಂತಹ ದೇಶವನ್ನು ತಮ್ಮ ಕೈವಶ ಮಾಡಿಕೊಳ್ಳುವ ಸಲುವಾಗಿ, ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟಿ ಅವರವರಲ್ಲೇ ಒಳಜಗಳ ತಂದು ಇಬ್ಬರ ಜಗಳ ಮೂರನೆಯವನಿಗೆ ಲಾಭ ಎನ್ನುವಂತೆ ಒಂದೊಂದೇ ರಾಜ್ಯಗಳನ್ನು ಕೈವಶ ಮಾಡಿಕೊಳ್ಳ ತೊಡಗಿದರು.
ಯುರೋಪಿಯನ್ನರ ಈ ಕುಕೃತ್ಯವನ್ನು ಸೂಕ್ಷ್ಮವಾಗಿ ಗಮನಿಸಿದ ಬುದ್ಧಿವಂತ ಬ್ರಾಹ್ಮಣರು ಸ್ಥಳೀಯರಿಗೆ ಅವರಿಂದ ದೂರ ಇರುವಂತೆ ಎಚ್ಚರಿಸಿತೊಡಗಿದರು. ತಮ್ಮ ಬೇಳೆ ಬೇಯಬೇಕಾದರೆ, ಬ್ರಾಹ್ಮಣರನ್ನು ಮೊದಲು ಬಗ್ಗಿ ಬಡಿಯಲೇ ಬೇಕು ಎಂದು ನಿರ್ಧರಿಸಿದ್ದರಿಂದಲೇ, ಗೋವಾವನ್ನು ಆಕ್ರಮಣ ಮಾಡಿಕೊಂಡಿದ್ದ ಪೋರ್ಚುಗೀಸರು ಗೋವಾದಲ್ಲಿ ಬಹುಸಂಖ್ಯಾತರಾಗಿದ್ದ ಬ್ರಾಹ್ಮಣರನ್ನು ಬಲವಂತವಾಗಿಯೋ ಮತಾಂತರ ಗೊಳಿಸಿದ್ದಲ್ಲದೇ, ಮತಾಂತರಕ್ಕೆ ಒಪ್ಪದವರನ್ನು ಮಾರಣ ಹೋಮ ಮಾಡುತ್ತಿರುವುದನ್ನು ಸಹಿಸಿದ ಲಕ್ಷಾಂತರ ಬ್ರಾಹ್ಮಣರು ರಾತ್ರೋ ರಾತ್ರಿ ಮನ ಮಠಗಳನ್ನೆಲ್ಲಾ ಬಿಟ್ಟು ತಮ್ಮಪ್ರಾಣ ಉಳಿಸಿಕೊಳ್ಳುವುದಕ್ಕಾಗಿದೇ ಕೇರಳ ಮತ್ತು ಕರ್ನಾಟಕದ ಕಡೆ ವಲಸೆ ಬಂದಿದ್ದು ಈಗ ಇತಿಹಾಸ.
ಹೀಗೆ ಬ್ರಾಹ್ಮಣರು ಎಚ್ಚೆತ್ತರೆ ತಮಗೆ ಉಳಿಗಾಲವಿಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿದ್ದ ಬ್ರಿಟೀಷರೂ ಸಹಾ ಮೊದಲು ಕೈ ಹಾಕಿದ್ದೇ ತಮ್ಮ ಹೊಸಾ ಶಿಕ್ಷಣದ ಪದ್ದತಿಯ ಮೂಲಕ ಗುರುಕುಲವನ್ನು ನಾಶಮಾಡುವುದಕ್ಕೇ. ಕೇವಲ ಗುರುಕುಲವನ್ನು ನಾಶ ಪಡಿಸಿದ್ದಲ್ಲದೇ ಬ್ರಾಹ್ಮಣರು ಶೂದ್ರರನ್ನು ಶೋಷಣೆ ಮಾಡಿದರು ಎಂಬ ಕಾಗಕ್ಕ ಗುಬ್ಬಕ್ಕ ಕತೆಯನ್ನು ಕಟ್ಟಿ ಜನರು ಬ್ರಾಹ್ಮಣರ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಮೂಲಕ ನಮ್ಮ ನಮ್ಮಲೇ ಒಳಜಗಳ ತಂದಿದ್ದನ್ನೇ ಇಂದಿಗೂ ಎಡಚರು ಮತ್ತು ಅಹಿಂದ ಮುಖಂಡರು ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ
ಇನ್ನು ಸ್ವಾತ್ರಂತ್ರ ಬಂದ ನಂತರವೂ ಬ್ರಾಹ್ಮಣರ ಮೇಲಿನ ಶೋಷಣೆ ಮತ್ತು ದಬ್ಬಾಳಿಗಳು ಅವಿರತವಾಗಿ ನಡೆಯುತ್ತಲೇ ಹೋಯಿತು. ವಂಶ ಪಾರಂಪರ್ಯವಾಗಿ ಬಂದಿದ್ದ ಜಮೀನುಗಳನ್ನು ಆಳು ಕಾಳುಗಳೊಂದಿಗೆ ನೋಡಿಕೊಳ್ಳುತ್ತಾ ರಾಮಾ ಕೃಷ್ಣಗೋವಿಂದಾ ಎಂದು ಭಗವಂತನ ಧ್ಯಾನ ಮಾಡುತ್ತಾ ಇದ್ದದ್ದರಲ್ಲಿಯೇ ಸುಖಃವನ್ನು ಕಾಣುತ್ತಿದ್ದ ಬಹುತೇಕ ಬ್ರಾಹ್ಮಣರ ಜಮೀನು ಎಪ್ಪತ್ತರ ದಶಕದಲ್ಲಿ ಸರ್ಕಾರ ತಂದ ಉಳುವವನೇ ರೈತ ಎಂಬ ನಿಯಮದಡಿಯಲ್ಲಿ ರಾತ್ರೋ ರಾತ್ರಿ ಇದ್ದ ಬದ್ದ ಜಮೀನುಗಳೆಲ್ಲಾ ತಮ್ಮ ಬಳಿ ಕೆಲಸ ಮಾಡುತ್ತಿದ್ದವರ ಪಾಲಾಗಿ ಬೀದಿಗೆ ಬಿದ್ದು ಅಕ್ಷರಶಃ ಭಿಕ್ಷುಕರಾದರೂ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿದರೇ ವಿನಾಃ ಉಗ್ರಗಾಮಿಗಳಾಗುವುದು ಬಿಡಿ, ಉಗ್ರವಾಗಿ ಪ್ರತಿಭಟನೆಯನ್ನೂ ಮಾಡದೇ ಪಟ್ಟಣಗಳಲ್ಲಿ ತಮಗೆ ತಿಳಿದಿದ್ದ ದೇವರ ಪೂಜೆ, ಆಡುಗೆ ಕೆಲಸ ಮಾಡಿಕೊಂಡು ಜೀವಿಸತೊಡಗಿದರು. ಇನ್ನು ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಕಾಶ್ಮೀರದಲ್ಲಿ ಬಹುಸಂಖ್ಯಾತರಾಗಿದ್ದ ಕಾಶ್ಮೀರೀ ಪಂಡಿತರನ್ನು ಹೇಗೆ ಹಿಂಸಿಸಿ ನರಮೇಧ ನಡೆಸಿ ಅವರನ್ನು ಕಾಶ್ಮೀರದ ಕಣಿವೆಯಿಂದ ರಾತ್ರೋ ರಾತ್ರಿ ಬಲವಂತವಾಗಿ ಹೇಗೆ ಓಡಿಸಿದರು ಎಂಬುದನ್ನು ಇತ್ತೀಚೆಗೆ ಬಂದ ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ನೋಡಿದ್ದೇವೆ. ಇಷ್ಟೆಲ್ಲ ಆದರೂ, ಬ್ರಾಹ್ಮಣರು ಯಾವುದೇ ರೀತಿಯ ಉಗ್ರವಾದ ಪ್ರತಿಭಟನೆ ನಡೆಸದೇ, ಉಗ್ರವಾದಿಗಳಾಗದೇ ತಮ್ಮ ಪಾಡಿಗೆ ತಾವು ಸ್ವಾವಲಂಭಿಗಳಾಗಿ ವಿದ್ಯಾವಂತರಾಗಿ ದೇಶ ವಿದೇಶಗಳಲ್ಲಿ ಉನ್ನತ ಸ್ಥಾನ ಮಾನಗಳಿಸುತ್ತಾ ದೇಶದ ಕೀರ್ತಿಯನ್ನು ಎಲ್ಲೆಡೆಯಲ್ಲಿಯೂ ಹರಿಸುತ್ತಿರುವುದು ಗಮನಾರ್ಹವಾದ ವಿಷಯವಾಗಿದೆ.
ಈಗ ಮತ್ತೆ ಅದೇ ಚಾಳಿಯನ್ನು ಜೆ.ಎನ್.ಯುದ ಎಡಚರು ಮುಂದುವರೆಸಿದ್ದು, ಇದು ಬ್ರಾಹ್ಮಣರ ಬಗ್ಗೆ ಆದ್ದರಿಂದ ನಮಗೆ ಏನೂ ಆಗೋದಿಲ್ಲ ಎಂದು ಉಳಿದ ಹಿಂದೂ ಸಮುದಾಯವು ಎಚ್ಚರ ತಪ್ಪಿದಲ್ಲಿ ನಿಜಕ್ಕೂ ದೇಶದ ಹಿತದೃಷ್ಟಿಯಿಂದ ಅಪಾಯಕಾರಿ ಆಗುವ ಸಂಭವವಿದೆ. ಹಿಂದೂ ಸಮಾಜವನ್ನು ಜಾತಿಯಿಂದ ಒಡೆದು ದುರ್ಬಲರನ್ನಾಗಿಸಿ ಮತ್ತೊಮ್ಮೆ ದೇಶ ವಿಭಜನೆ ಮಾಡಲು ಕಮ್ಯುನಿಸ್ಟ್ ಜಿಹಾದಿಗಳು ಮುಂದಾಗಿದ್ದರೆ ಅವರಿಗೆ ಬೆಂಬಲವಾಗಿ ದಲಿತರು ಎಂಬ ಹಣೆಪಟ್ಟಿ ಕಟ್ಟಿಕೊಂಡು ಆರ್ಯರು, ದ್ರಾವಿಡರು, ಮೂಲವಾಸಿ ಬೌದ್ಧರು ಎಂದು ತಮ್ಮದೇ ಹೊಸ ಇತಿಹಾಸವನ್ನು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಸಹಾ ಎಚ್ಚರಿಕೆಯ ಗಂಟೆಯಾಗಿದೆ. ಇದರ ಜೊತೆ ಜೊತೆಯಲ್ಲೇ ಇತ್ತೀಚೆಗೆ ಕರ್ನಾಟಕದ ಉಡುಪಿಯಲ್ಲಿ ಉಡುಪಿನ ಕುರಿತಾಗಿ ಆರಂಭವಾದ ಹಿಜಾಬ್ ಪ್ರಕರಣ ಮೇಲ್ನೋಟಕ್ಕೆ ಸಣ್ಣದು ಎನಿಸುವುದಾದರೂ, ನಮ್ಮದು ಒಂದು ಕಣ್ಣು ಹೋದರೂ ನಮ್ಮ ಶತ್ರುಗಳ ಎರಡೂ ಕಣ್ಣುಗಳು ಹೋಗಬೇಕು ಎನ್ನುವಂತೆ ನ್ಯಾಯಾಲಯದಲ್ಲಿ ಈ ಕುರಿತಾದ ವಾದದ ಸಮಯದಲ್ಲಿ ನಮ್ಮ ಹೆಣ್ಣು ಮಕ್ಕಳು ಹಿಚಾಬ್ ಧರಿಸಬಾರದು ಎಂದಾದಲ್ಲಿ, ಹಿಂದೂಗಳ ಹೆಣ್ಣುಮಕ್ಕಳೇಕೆ ಹಣೆಗೆ ಕುಂಕುಮ, ಕಿವಿಗೆ ಓಲೆ, ಕೈಗೆ ಬಳೆ, ಕಾಲಿನ ಗೆಜ್ಜೆಗೇಕೆ ಅವಕಾಶ ಕೊಟ್ಟಿದ್ದೀರಿ? ಅವುಗಳನ್ನೂ ನಿರ್ಭಂಧಿಸಿ ಎಂದು ವಕೀಲರು ಹೇಳುವ ಮೂಲಕ ಅವರ ರಹಸ್ಯ ಕಾರ್ಯಸೂಚಿಯ ಬಹಿರಂಗವಾಗುತ್ತಿದೆ.
ಹಾಗಾಗಿ ಹಿಂದೂಗಳಾದ ನಾವು ನಮ್ಮ ನಮ್ಮಲ್ಲೇ ಬ್ರಾಹ್ಮಣರು, ಲಿಂಗಾಯಿತರು, ಗೌಡರು, ಕುರುಬರು ಇತ್ಯಾದಿ ಇತ್ಯಾದಿ ಎಂದು ಜಾತಿ ಆಧಾರಿತವಾಗಿ ತಮ್ಮ ತಮ್ಮಲೇ ಕಚ್ಚಾತ್ತಾ ಹೋದಲ್ಲಿ, ಕಡೆಗೆ ಇಡೀ ದೇಶ ದೇಶದ್ರೋಹಿಗಳ ಕೈವಶವಾಗುತ್ತದೆ ಇಲ್ಲವೇ ಮತ್ತೆ ಧರ್ಮ/ಜಾತಿ ಆಧಾರಿತವಾಗಿ ವಿಭಜನೆ ಆಗುವ ಸಂಭವವೂ ಇರುವುದರಿಂದ, ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎನ್ನುವುದು ಕೇವಲ ಘೋಷಣೆಯಾಗಿಯೇ ಉಳಿಯದೇ ಅದನ್ನು ಅಕ್ಷರಶಃ ಕಾರ್ಯರೂಪಕ್ಕೆ ತಂದಲ್ಲಿ ಮಾತ್ರವೇ ಈ ದೇಶಕ್ಕೆ ಉಳಿಗಾಲವಿದೆ.
ಧರ್ಮೋರಕ್ಷತಿ ರಕ್ಷಿತಃ. ಹಿಂದೂ ಎದ್ದಲ್ಲಿ ದೇಶ ಎದ್ದೀತು ಮತ್ತು ಉಳಿದೀತು
ಏನಂತೀರೀ? ನಿಮ್ಮವನೇ ಉಮಾಸುತ