ಹೇ, ಇದು ನಮಗೆ ಗೊತ್ತಿಲ್ವಾ? ಇದೊಂದು ಜನಪ್ರಿಯ ಗಾದೆ ಅಂತಾ ತೆಗೆದು ಹಾಕದೇ ಸ್ವಲ್ಪ ಸೂಕ್ಷ್ಮವಾಗಿ ಆಲೋಚನೆ ಮಾಡಿದಲ್ಲಿ, ಇದು ಕೇವಲ ಗಾದೆಯ ಮಾತಾಗಿರದೇ, ಉತ್ತಮ ಒಳಾರ್ಥವನ್ನು ಹೊಂದಿದೆ. ಆಡುವ ಮಾತುಗಳು ಹಿಡಿತದಲ್ಲಿ ಇದ್ದಲ್ಲಿ ಕೇಳುವವರಿಗೂ ಮತ್ತು ಆಡುವವರಿಗೂ, ಇಬ್ಬರಿಗೂ ಹಿತ ಮಿತ. ಅದೇ ಅದು ಅತೀ ಆದ್ರೆ ಅಮೃತವೂ ಕೂಡಾ ವಿಷ ಆಗುತ್ತದೆ ಎನ್ನುವುದು ಈ ಗಾದೆಯ ಎಚ್ಚರಿಕೆಯ ಮಾತಾಗಿದೆ. ಇದಕ್ಕೆ ಜ್ವಲಂತ ಉದಾಹರಣೆ ಎನ್ನುವುಂತೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಜನಪ್ರಿಯ ನಟ ದರ್ಶನ್ ಅವರ ಸಂದರ್ಶನದ ವೀಡೀಯೋ ವೈರಲ್ ಆಗಿದೆ. ಅದರ ಕುರಿತಾಗಿ ಚರ್ಚೆ ಮಾಡೋಣ ಬನ್ನಿ.
ದರ್ಶನ್, ಕನ್ನಡದ ಪ್ರಖ್ಯಾತ ಖಳನಾಯಕರಾಗಿ ಪ್ರಸಿದ್ಧರಾಗಿದ್ದ, ಸರಳ ಸಜ್ಜನರಾದ ಶ್ರೀ ತೂಗುದೀಪ ಶ್ರೀನಿವಾಸ್ ಅವರ ಮಗ. ತಂದೆಯ ಹೆಸರನ್ನು ಬಳಸಿಕೊಳ್ಳದೇ, ಚಿತ್ರರಂಗದಲ್ಲಿ ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಾ, ಹಂತ ಹಂತವಾಗಿ ತನ್ನ ಸ್ವಸಾಮರ್ಥ್ಯದಿಂದ ಮತ್ತು ಬಹಳ ಕಷ್ಟದಿಂದ ಈ ಪರಿಯ ಮಟ್ಟಕ್ಕೆ ಬೆಳೆದು ಬಂದಿರುವಂತಹ ಎತ್ತರದ ಜನಪ್ರಿಯ ಸುರದ್ರೂಪಿ ನಟ. ಜನರು ಅತನನ್ನು ಪ್ರೀತಿಯಿಂದ ದರ್ಶನ್, ದಚ್ಚು, ಡಿಬಾಸ್ ಎಂದು ಕರೆಯುವಷ್ಟರ ಮಟ್ಟಿಗೆ ಏರಿರುವುದು ನಿಜಕ್ಕೂ ಅಭಿನಂದನಾರ್ಹವೇ ಸರಿ. ಕೇವಲ ನಟನಾಗಿರುವುದಲ್ಲದೇ, ಬಲಗೈಯ್ಯಲ್ಲಿ ಕೊಟ್ಟಿರುವುದು ಎಡಗೈಗೂ ಗೊತ್ತಾಗಬಾರದು ಎನ್ನುವಂತೆ ಅನೇಕರಿಗೆ ಸಹಾಯ ಮಾಡಿರುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಅದೇ ರೀತಿ ಮಣ್ಣಿನ ಮೇಲಿನ ಆಸೆಯಿಂದಾಗಿ ತಮ್ಮದೇ ಆದ ಚಂದನೆಯ ಫಾರ್ಮ್ ಹೌಸ್ ಮಾಡಿಕೊಂಡಿದ್ದು ಅಲ್ಲಿ ಹತ್ತಾರು ಪ್ರಾಣಿಗಳನ್ನು ಸಾಕಿರುವುದಲ್ಲದೇ, ಮೈಸೂರು ಮೃಗಾಲಯದ ಕಲವು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ಪ್ರಾಣಿ ಪ್ರಿಯತೆಯನ್ನು ಜಗಜ್ಜಾಹೀರಾತು ಪಡಿಸಿದ್ದಾರೆ. ಅದರೆ ದುರಾದೃಷ್ಟವಷಾತ್ ಮಾತು ಒಲೆ ಕೆಡಿಸಿತು, ತೂತು ಒಲೆ ಕೆಡಿಸಿತು, ಎನ್ನುವಂತೆ ಅಗ್ಗಾಗ್ಗಾ ಕುಡಿದ ಮತ್ತಿನಲ್ಲೋ ಅಥವಾ ಮತ್ತಾರೋ ವಂಧಿಮಾದಿಗರನ್ನು ಮೆಚ್ಚಿಸುವ ಸಲುವಾಗಿ ಕೆಲವು ಕ್ಷುಲ್ಲಕ ಅಥವಾ ಅಸಭ್ಯ/ಅಸಹ್ಯ/ಅಶ್ಲೀಲಕರ ಹೇಳಿಕೆಗಳನ್ನು ಪದೇ ಪದೇ ನೀಡುತ್ತಾ ತಾವೂ ಸಹಾ ತೊಂದರೆಗೊಳಗಾಗುವುದಲ್ಲದೇ, ಜನ ಸಾಮಾನ್ಯರನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಹಾಗೆ ಎತ್ತರಕ್ಕೆ ಏರಿದವರು ಹೇಗಿರಬೇಕು ಎಂಬುದನ್ನು ಸುಮಾರು ನೂರು ವರ್ಷಗಳ ಹಿಂದೆಯೇ ರಾಷ್ಟ್ರಕವಿಗಳಾದ ಶ್ರೀ ಪಂಜೆ ಮಂಗೇಶರಾವ್ ಅವರು ತಮ್ಮ ಉದಯರಾಗ ಪದ್ಯದಲ್ಲಿ ಅತ್ಯಂತ ಮನೋಜ್ಞವಾಗಿ ಹೀಗೆ ತಿಳಿಸಿದ್ದಾರೆ.
ಏರುವನು ರವಿ ಏರುವನು, ಬಾನೊಳು ಸಣ್ಣಗೆ ತೋರುವನು,
ಏರಿದವರು ಚಿಕ್ಕವನಿರಬೇಕೆಲೆ, ಎಂಬಾ ಮಾತನು ಸಾರುವನು. ರವಿ ಸಾರುವನು.
ಅಂದರೆ ಸಮಾಜದಲ್ಲಿ ಎತ್ತರಕ್ಕೆ ಏರಿದ ಯಾವುದೇ ನಟ, ರಾಜಕಾರಣಿ, ಆಟಗಾರ ಅಥವಾ ಸಾಮಾನ್ಯ ವ್ಯಕ್ತಿಯೇ ಆಗಿರಲಿ ಆತನ ಬೆಳವಣಿಗೆಯನ್ನು ಸಮಾಜ ಯಾವಾಗಲೂ ಗಮನಿಸುತ್ತಲೇ ಇರುತ್ತದೆ ಮತ್ತು ಅವರಿಗೇ ಗೊತ್ತಿಲ್ಲದಂತೆ ಅವರನ್ನು ಅನುಕರಿಸುವ ಇಲ್ಲವೇ ಅನುಸರಿಸುವ ಒಂದು ವರ್ಗ ಬೆಳೆದುಕೊಂಡು ಬಿಟ್ಟಿರುತ್ತದೆ. ಕೆಲವೊಮ್ಮೆ ಅವರು ಹೇಳಿದ್ದು ವೇದವಾಕ್ಯ ಎಂಬಂತೆ ಪರಿಪಾಲಿಸುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಅದೆಷ್ಟೋ ಬಾರಿ ಅಭಿಮಾನದ ಪರಾಕಾಷ್ಟೆಯಲ್ಲಿ ಅವರನ್ನೇ ದೇವರು ಎನ್ನುವ ಮಟ್ಟಕ್ಕೆ ಏರಿಸಿಬಿಡುವುದಲ್ಲದೇ (ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಎಂದು ಕರೆಯುವ ಹಾಗೆ) ಅವರಿಗೆಂದೇ ಅಭಿಮಾನ ಪೂರ್ವಕವಾಗಿ ದೇವಾಲಯವನ್ನು ಕಟ್ಟಿ ಪೂಜಿಸುವ ಮಟ್ಟಿಗೆ ಇರುತ್ತದೆ (ನಟಿ ಖುಷ್ಬೂ, ಪ್ರಧಾನಿ ಮೋದಿ ಅವರ ದೇವಾಲಯ ಕಟ್ಟಿದ್ದಾರೆ). ಅಭಿಮಾನಿಗಳ ಈ ರೀತಿಯ ಹುಚ್ಚು ಪ್ರೀತಿಯನ್ನು ತಪ್ಪು ಎಂದು ಹೇಳಲಾಗದು ಅದರೆ, ಈ ರೀತಿಯ ಅಭಿಮಾನಿಗಳು ಇರುತ್ತಾರೆ ಎನ್ನುವುದನ್ನು ಮನಗಂಡು ನಾಯಕರುಗಳು ಎರಡು ಆಲಗಿನ ಕತ್ತಿಯ ಮೇಲೆ ಎಚ್ಚರಿಕೆಯಿಂದ ನಡೆಯುವಂತಾದಲ್ಲಿ ಸಮಾಜಕ್ಕೂ ಮತ್ತು ನಾಯಕರುಗಳಿಗೂ ಉತ್ತಮ.
ಇದರ ಅರಿವಿದ್ದೋ ಇಲ್ಲವೇ ಅರಿವಿಲ್ಲದೆಯೋ ಮೊನ್ನೆ ಸಂದರ್ಶನ ಒಂದರಲ್ಲಿ ದರ್ಶನ್ ಮಾತನಾಡುವ ಭರದಲ್ಲಿ, ಅದೃಷ್ಟ ದೇವತೆ ಎಲ್ಲರಿಗೂ ಒಲಿಯುವುದಿಲ್ಲ. ಹಾಗೆ ಅದೃಷ್ಟ ದೇವತೆ ಬಂದಾಗ ಒಳಗೆ ಕರ್ಕೊಂಡ್ ಬಟ್ಟೆ ಬಿಚ್ಚಿ ಕೂರಿಸಿಕೊಳ್ಳ ಬೇಕು ಬಟ್ಟೆ ಹಾಕೋಳೋಕೆ ಬಿಟ್ರೆ ಹೊರಗೆ ಹೋಗಿಬಿಡ್ತಾಳೆ ಎನ್ನುವ ಮಾತುಗಳನ್ನು ಆಡಿರುವ ವಿಡಿಯೋ ವೈರಲ್ ಆಗಿದ್ದು ಅದರ ಪರ ಮತ್ತು ವಿರೋಧಗಳ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ, ವಿರೋಧ, ಆಕ್ರೋಶದ ಸಿಟ್ಟು ಜೊತೆಗೆ ಟ್ರೋಲ್ ಕೂಡಾ ಆಗುತ್ತಿದ್ದು, ಇವೆಲ್ಲರೂ ಸಹಾ ಸಹಜವಾದ ಅರ್ಹವಾದ ಪ್ರಕ್ರಿಯೆ ಅಥವಾ ಪ್ರತಿಕ್ರಿಯೆಗಳೇ ಆಗಿವೆ.
ನಿಜ ಅವಕಾಶಗಳು ಎಲ್ಲರಿಗೂ ಎಲ್ಲಾ ಸಮಯದಲ್ಲು ಬರೋದಿಲ್ಲ. ಹಾಗೆ ಅವಕಾಶಗಳು (ನಿರ್ಮಾಪಕರು) ಬಂದಾಗ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎನ್ನುವ ಹಿನ್ನಲೆಯಿಂದ ಹೇಳಿರುವ ಮಾತು ಸರಿಯಾಗಿಯೇ ಇದೆ. ಆದರೆ ಮಾತಿನ ಭರದಲ್ಲಿ ಅದನ್ನು ಸಮರ್ಥನೆ ಮಾಡಿಕೊಳ್ಳಲು ಬಳಸಿಕೊಂಡಿರುವ ಉದಾಹರಣೆ ಪ್ರಾಯಶಃ ಅವರು ಪಡೆದುಕೊಂಡು ಬಂದಿರುವಂತಹ ಸಂಸ್ಕಾರವನ್ನು ತೋರಿಸುತ್ತಿದೆ. ಇದಕ್ಕೇ ನಮ್ಮ ಪೂರ್ವಜರು ಅತ್ಯಂತ ಸುಂದರವಾಗಿ ಮಾತೇ ಮುತ್ತು. ಮಾತೇ ಮೃತ್ಯು ಎಂದು ಸೂಕ್ಷ್ಮವಾಗಿ ಎಚ್ಚರಿಸಿದ್ದಾರೆ. ಇದೇ ಮಾತಿಗೆ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಳ್ಳಬಾರದು ಎಂಬ ಮಾತು ಅತ್ಯಂತ ಸೂಕ್ತವಾಗಿರುತ್ತಿತ್ತು ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ.
ದರ್ಶನ್ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ ಆತ ನಿಜವಾಗಿಯೂ ಹೆಣ್ಣು ಮಕ್ಕಳನ್ನು ಅತ್ಯಂತ ಗೌರವಯುತವಾಗಿ ಅಮ್ಮಾ ಅಕ್ಕಾ ತಂಗಿ ಎಂದೇ ಸಂಬೋಧಿಸುತ್ತಾರೆ ಮತ್ತು ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳುತ್ತಾರೆ ಎಂದೇ ಹೇಳುತ್ತಾರೆ ಮತ್ತು ಅನೇಕ ಬಾರಿ ಅನೇಕ ಸಂದರ್ಶನದಲ್ಲಿ ಅದನ್ನು ನೋಡಿಯೂ ಇದ್ದೇವೆ. ಇದೇ ದರ್ಶನ್ ಅವರ ಶಕ್ತಿಯಾಗಿದ್ದರೆ, ಅದಕ್ಕೆ ತದ್ವಿರುದ್ಧವಾಗಿ ಕೆಲವು ಆಯ್ದ ಹೆಣ್ಣುಮಕ್ಕಳ ವಿಷಯದಲ್ಲಿ ಆತ ನಡೆದುಕೊಂಡ ರೀತಿ ಅತನ ದೌರ್ಬಲ್ಯತೆಯನ್ನೂ ಎತ್ತಿ ತೋರಿಸಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಲ್ಲದೇ ಬಿಗ್ ಬಾಸ್ ಮೊದಲ ಸರಣಿಯಲ್ಲಿ ಭಾಗವಹಿಸಿದ್ದ ಪಂಜಾಬಿ ಮೂಲದ ನಿಖಿತಾ ತುಕ್ರಾಲ್ ಎಂಬ ನಟಿಯ ಹಿಂದೆ ಬಿದ್ದು, ತಾನೇ ಪ್ರೀತಿ ಮಾಡಿ, ಕಾಡಿ, ಬೇಡಿ, ಮದುವೆ ಮಾಡಿಕೊಂಡಿದ್ದ ಅತನ ಹೆಂಡತಿ ವಿಜಯಲಕ್ಷ್ಮಿ ಮತ್ತು ಆತನ ಮಗ ವಿನೀಶ್ ಗೆ ಹಿಂಸೆ ಕೊಟ್ಟಿದ್ದು ಅದರಲ್ಲೂ, ತನ್ನ ಹೆಂಡತಿಯ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದದ್ದಲ್ಲದೇ, ಆಕೆಯ ಮೈಮೇಲೆ ಸಿಗರೇಟಿನಿಂದ ಸುಟ್ಟು ಹೊಡೆದು ಹಿಂಸೆ ಮಾಡಿದ್ದರಿಂದಲೇ ಜೈಲಿಗೂ ಹೋಗಿ ಬಂದಾಗಿದೆ. ಅದೇ ರೀತಿ ಆತನೊಂದಿಗೆ ನಟಿಸಿದ್ದ ರಚಿತಾರಾಮ್ ಮನೆಗೂ ಮೇಲಿಂದ ಮೇಲೆ ಕುಡಿದು ಹೋಗಿ ಗಲಾಟೆ ಮಾಡಿದ್ದಲ್ಲದೇ ನಾನು ಕರೆದ ಕಡೆಗೆಲ್ಲಾ ಬರಬೇಕು ಎಂದು ಧಮ್ಕಿ ಹಾಕಿದ್ದರು ಎಂಬ ಸುದ್ದಿಯೂ ಹರಡಿತ್ತು. ಅದೇ ರೀತಿ ಈ ರೀತಿಯೆಲ್ಲಾ ಮಾಡಬಾರದು ಎಂದು ತಿಳಿ ಹೇಳಿದ್ದ ರಾಜಕುಮಾರ್ ಕುಟುಂಬದ ಮೇಲೂ ಏರಿ ಹೋಗಿದ್ದರು ಎಂಬುದು ಈಗ ಇತಿಹಾಸ.
ಈ ಲೇಖನ ಓದಿದ ಬಹುತೇಕರು ಅದರಲ್ಲೂ ಅವರ ಅಭಿಮಾನಿಗಳು ಲೇಖನದ ಹಿಂದಿರುವ ಉದ್ದೇಶವನ್ನು ಅರಿಯದೇ ಅಥವಾ ಅರಿಯಲು ಮನಸ್ಸು ಮಾಡದೇ ಅಂದಾಭಿಮಾನದಿಂದ ನನ್ನ ಅಮ್ಮ ಅಕ್ಕ ಎಲ್ಲರನ್ನೂ ಕರೆತಂದೋ ಇಲ್ಲವೇ, ಬೋ.. ಸೂ.. ಮಗ ಎಂಬ ಬಯ್ಗುಳಗಳಿಂದ ಬೆದರಿಸಲೂ ಬಹುದು ಎಂಬುದರ ಅರಿವಿದೆ. ಆದರೆ ಒಂದು ಕ್ಷಣ ನಿರ್ಮಲ ಮನಸ್ಸಿನಿಂದ ಮುಂದೆ ಬರೆದಿರುವುದನ್ನು ಓದಿ ಅರ್ಥ ಮಾಡಿಕೊಂಡಲ್ಲಿ prevention is better than cure ಎನ್ನುವಂತೆ ಮುಂದೆ ಇಂತಹ ಅಭಾಸಗಳು ಉಳಿದವರಿಂದ ಆಗುವುದನ್ನು ತಪ್ಪಿಸಬಹುದಾಗಿದೆ.
ಮುಂದೊಂದು ದಿನ ಈ ರೀತಿಯಾದ ಸಂಧರ್ಭಗಳು ಬರಬಹುದು ಎಂಬು ಕಾರಣದಿಂದಲೇ ನಮ್ಮ ಹಿರಿಯರು ಈ ರೀತಿಯ ಸುಭಾಷಿತವನ್ನು ಬರೆದಿದ್ದಾರೆ ಎಂದೆನಿಸುತ್ತದೆ.
ಕರ್ತಾ ಕಾರಯಿತಾಶ್ಚೈವ ಪ್ರೇರಕಾಶ್ಚಾನುಮೋದಕಃ | ಸುಕೃತೇಃ ದುಕೃತೇಶ್ಚೈವ ಚತ್ವಾರಿ ಸಮಭಾಗಿನಃ || ಅಂದರೆ, ಯಾವುದೇ ಒಳ್ಳೆಯ ಕೆಲಸವೇ ಇರಲಿ, ಅಥವಾ ಕೆಟ್ಟ ಕೆಲಸವೇ ಇರಲಿ, ಅದನ್ನು ಮಾಡಿದವರು, ಮಾಡಿಸಿದವರು, ಅದಕ್ಕೆ ಪ್ರೇರಣೆ ಕೊಟ್ಟವನು, ಅದನ್ನು ನೋಡಿ ಸರಿ ತಪ್ಪುಗಳನ್ನು ವಿಶ್ಲೇಷಿಸಿದೆ ಸುಮ್ಮನಿದ್ದು ಆ ಕಾರ್ಯವನ್ನು ಅನುಮೋದಿಸಿದವರು. ಹೀಗೆ ಆ ಕಾರ್ಯದ ಕರ್ಮಗಳಿಗೆ ಆ ನಾಲ್ಕೂ ಜನರೂ ಸಮಭಾಗಿಗಳಾಗಿ ಫಲವನ್ನು ಪಡೆಯುತ್ತಾರೆ ಎನ್ನುತ್ತದೆ.
ದರ್ಶನ್ ಅವರು ಅಗ್ಗಾಗ್ಗೇ ಈ ರೀತಿಯಾಗಿ ಒಬ್ಬೊಬ್ಬರ ಮೇಲೆ ಏರಿ ಹೋಗುವ ಛಾಳಿಯಿಂದಾಗಿ ಮಾಧ್ಯಮಗಳ ಕುರಿತೂ ಕೆಟ್ಟದ್ದಾಗಿ ಮಾತನಾಡಿದ್ದರಿಂದಲೇ ಕನ್ನಡದ ಮಾಧ್ಯಮಗಳು ಆತನ ಮೇಲೆ ನಿಷೇಧ ಹೇರಿದ್ದದ್ದನ್ನೇ, ಲಾಭವಾಗಿ ಮಾಡಿಕೊಂಡು ಅನೇಕ YouTube Channelಗಳು ದರ್ಶನ್ ಕುರಿತಾಗಿ ತಮ್ಮ Channelಗಳಲ್ಲಿ ಸಂದರ್ಶನ ಮಾಡುತ್ತಾ, ತಮ್ಮ ಸ್ವಂತ ಲಾಭಕ್ಕಾಗಿ ಸಂದರ್ಶನದ ಸಮಯದಲ್ಲಿ ಆತನನ್ನು ಇಂದ್ರ ಚಂದ್ರ ದೇವೇಂದ್ರ ಎಂದು ಹೊಗಳುತ್ತಾ, ಆತ ಹೇಳಿದ್ದನ್ನೇ ಯಥಾವತ್ತಾಗಿ (ತಪ್ಪೇ ಇರಲೇ ಸರಿಯೇ ಇರಲಿ) ತೋರಿಸಿ ತಾವು ದರ್ಶನ್ ಅವರಿಗೆ ಬಾರೀ ಬೆಂಬಲ ಕೊಡುತ್ತಿದ್ದೇವೆ ಎಂದು ಕೊಂಡಲ್ಲಿ ಅದು ದರ್ಶನ್ ಅವರಿಗೆ ಪ್ರಖ್ಯಾತಿಗಿಂತ ಕುಖ್ಯಾತಿ ತಂದು ಕೊಡುತ್ತಿದೆ ಎನ್ನುವುದಕ್ಕೆ ಮೇಲಿನ ಪ್ರಕರಣವೇ ಸಾಕ್ಷಿಯಾಗಿದೆ.
ಅದಕ್ಕೇ ನಮ್ಮ ಹಿರಿಯರು, ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮ ಪ್ರಿಯಂ.
ಪ್ರಿಯಂಚ ನಾನೃತಂ ಬ್ರೂಯಾತ್, ಏಷ ಧರ್ಮಃ ಸನಾತನ.
ಅಂದರೆ ಯಾವಾಗಲೂ ಎಲ್ಲರಿಗೂ ಪ್ರಿಯವಾಗುವ ಸತ್ಯದ ಮಾತುಗಳನ್ನೇ ಆಡಬೇಕು. ನಾವು ಆಡುವ ಸತ್ಯವಾದ ಮಾತುಗಳು ಮತ್ತೊಬ್ಬರಿಗೆ ಬೇಸರ/ನೋವಾಗುವಂತಿದ್ದಲ್ಲಿ ಅಂತಹ ಅಪ್ರಿಯವಾದ ಸತ್ಯವನ್ನು ಹೇಳಕೂಡದು. ಅದೇ ರೀತಿಯಾಗಿ ಬೇರೆಯವರಿಗೆ ಸಂತೋಷವಾಗುತ್ತದೆ ಎಂದು ಅವರಿಗೆ ಪ್ರಿಯವಾಗುವ ಸುಳ್ಳನ್ನೂ ಹೇಳಕೂಡದು. ಇದೇ ನಿಜವಾದ ಸನಾತನ ಧರ್ಮ. ಎನ್ನುವ ಸುಭಾಷಿತದ ಮೂಲಕ ಎಚ್ಚರಿಸಿದ್ದಾರೆ
ದರ್ಶನ್ ಈ ರೀತಿಯಾಗಿ ಆಡಿರುವ ಮಾತುಗಳು ಸಮಾಜಕ್ಕೆ ಯೋಗ್ಯವಾದುದ್ದಲ್ಲ ಎಂಬುದು ಖಂಡಿತವಾಗಿಯೂ ಆ YouTube Channel ನವರ ಅರಿವಿಗೆ ಬಂದಿರುತ್ತದೆ. ಆಗ ಅವರು ದರ್ಶನ್ ಮತ್ತು ಸಮಾಜದ ಹಿತದೃಷ್ಟಿಯಿಂದ, ಕೂಡಲೇ ದರ್ಶನ್ ಅವರಿಗೆ ಸರ್ ಈ ಮಾತುಗಳು ಸರಿಯಾಗಿಲ್ಲ ಹಾಗಾಗಿ ಇದನ್ನು ಕತ್ತರಿಸಿ ಉಳಿದ ಸಂದರ್ಶನವನ್ನು ಮಾತ್ರವೇ ಬಿತ್ತರಿಸುತ್ತೇವೆ ಎಂದು ಹೇಳಿದ್ದಲ್ಲಿ ದರ್ಶನ್ ಆವರಿಗೂ ತಾವು ಮಾಡಿದ್ದ ತಪ್ಪು ಅರಿವಾಗುತ್ತಿದ್ದದ್ದಲ್ಲದೇ, ಸಮಾಜದಲ್ಲಿ ದರ್ಶನ್ ಅವರ ಬಗ್ಗೆ ಮತ್ತಷ್ತು ತಪ್ಪು ಅಭಿಪ್ರಾಯ ಮೂಡುವುದನ್ನು ತಪ್ಪಿಸಬಹುದಾಗಿತ್ತು. ಆದರೆ ಮಾಧ್ಯಮದ ಧರ್ಮವನ್ನು (ಅದು ಕಾಣೆಯಾಗಿ ಎಷ್ಟೋ ವರ್ಷಗಳಾಗಿವೆ ಎಂಬುದು ಬೇರೆ ಮಾತು) ಮರೆತು ಪ್ರಚಾರದ ಹಪಾಹಪಿ ಮತ್ತು ಯಾವ ಛಾನೆಲ್ಲುಗಳೂ ತೋರಿಸದ Exclusive ವಿಷಯಗಳನ್ನು ತಮ್ಮ ಛಾನೆಲ್ಲಿನಲ್ಲಿ ತಾವು ತೋರಿಸುತ್ತ್ತಿದ್ದೇವೆ ಎಂಬ ಹಮ್ಮು ಬಿಮ್ಮು ಎಲ್ಲರಿಗೂ ಮಾರಕವಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.
ಇನ್ನು ದರ್ಶನ್ ಅವರನ್ನು ಡಿಬಾಸ್ ಎಂದೋ ಇಲ್ಲವೇ ದೇವರೆಂದೇ ಬರೆದಿರುವ ಅವರ ಅಭಿಮಾನಿಗಳೂ ಸಹ ಅಂಧಾಭಿಮಾನದಲ್ಲಿ ಹೇಳಿದ್ದೆಲ್ಲವೂ ಸರಿ. ಮಾಢ್ಯಮಗಳು ಅದನ್ನು ತಪ್ಪಾಗಿ ಬಿಂಬಿಸುತ್ತಿವೆ ಅಥವಾ ತಿರುಚುತ್ತಿವೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸಹಾ ಸಮಾಜಕ್ಕೆ ತಪ್ಪು ಸಂದೇಶವನ್ನು ತಲುಪಿಸುತ್ತಿದೆ.. ಇನ್ನೂ ಕಲವರು ಬಡವರ ಮಕ್ಕಳನ್ನು ಕಂಡರೆ ಅಸೂಯೆ ಪಡುವುದನ್ನು ಬಿಟ್ಟು ಬಡವರ ಮಕ್ಕಳನ್ನು ಬೆಳೆಯಲು ಬಿಡಿ ಎನ್ನುವ ಪುಗಸಟ್ಟೆ ಪ್ರವಚನವನ್ನೂ ಮಾಡುತ್ತಾರೆ. ಇಂತಹವರಿಗೆ ಹೇಳುವುದಿಷ್ಟೇ ಹೇಗೆ ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿಕೊಳ್ಳಲು ಆಗುವುದಿಲ್ಲವೋ ಹಾಗೆಯೇ, ಬಡವರ ಮಕ್ಕಳೆಂದೋ, ನಮ್ಮ ಜಾತಿ/ಧರ್ಮದವರು ಎಂದೋ, ಈ ರೀತಿ ಬಾಯಿಗೆ ಬಂದದ್ದನ್ನು ಆಡಿದಾಗ, ತಮ್ಮ ಹೊಟ್ಟೆಯ ಪಾಡಿಗೆ ರೌಡಿ ಶೀಟರ್ಗಳನ್ನು ತೆರೆಯ ಮೇಲೆ ನಾಯಕರೆಂದು ಬಿಂಬಿಸಿ ಹಾಡಿ ಹೊಗಳುತ್ತಾ, ಸಮಾಜವನ್ನು ತಪ್ಪು ದಾರಿಗೆೆ ಎಳೆಯುವವರನ್ನು ಖಂಡಿಸದೇ ಹೊದಲ್ಲಿ ಕರ್ತಾ ಕಾರಯಿತಾಶ್ಚೈವ.. ಸುಭಾಷಿತದಲ್ಲಿ ಹೇಳಿರುವಂತ ಆ ತಪ್ಪಿನಲ್ಲಿ ನಾವೂ ನೀವೂ ಸಹಾ ಭಾಗಿಗಳಾಗುವ ಕಾರಣ, ಸಮಾಜ ಮತ್ತು ದರ್ಶನ್ ಮೇಲಿನ ಅಭಿಮಾನದಿಂದಾಗಿ ಇಷ್ಟು ಸುದೀರ್ಘವಾದ ಲೇಖನವನ್ನು ಬರೆದಿದ್ದೇನೆ. ಅದೇ ರೀತಿ ಪ್ರಚಾರಕ್ಕಾಗಿ ಆದರೆ ಇಂತಹ ವಿವಾದಾತ್ಮಕ ವಿಷಯಗಲನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದರಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಎಲ್ಲಾ ಮಾಧ್ಯಮಗಳೂ ಒಮ್ಮೆ ಯೋಚಿಸಬೇಕು. ಅಗ್ಗದ ಪ್ರಚಾರ ಮತ್ತು ಹಣಕ್ಕಾಗಿ ನೈತಿಕತೆ ಮತ್ತು ಮಾಧ್ಯಮ ಧರ್ಮವನ್ನು ಇಷ್ಟು ಕೆಳ ಮಟ್ಟಕ್ಕೆ ಇಳಿಸಬಾರದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
[…] […]
LikeLike