ಪ್ರಾಮಾಣಿಕತೆಯೇ ದೊಡ್ಡ ಆಸ್ತಿ

Terminally ill woman

ಸರ್ಕಾರಿ ಆಸ್ಪತ್ರೆಯ ಕೊಠಡಿಯಲ್ಲಿ ಮೃತ್ಯುಶಯೆಯಲ್ಲಿದ್ದ ನಾಡಿನ ಹೆಸರಾಂತ ಪ್ರೊಫೇಸರ್ ಶಂಕರ್ ತಮ್ಮ ಮಕ್ಕಳನ್ನು ಕರೆದು, ನನ್ನ ಆಯಸ್ಸು ಮುಗಿಯುತ್ತಾ ಬಂದಿದೆ ಎನಿಸುತ್ತಿದೆ. ನಾನು ಹೆಚ್ಚು ದಿನಗಳು ಬದುಕುವುದಿಲ್ಲ ಎಂದೆನಿಸುತ್ತಿದೆ. ಅಣ್ಣಾ ಮತ್ತು ತಂಗಿ ಇಬ್ಬರೂ ಅನ್ಯೋನ್ಯತೆಯಿಂದ ಪ್ರಾಮಾಣಿಕವಾಗಿರಿ. ನಮ್ಮ ಕುಟುಂಬ ಕಲಿಸಿಕೊಟ್ಟ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯಿಂದ ನೂರ್ಕಾಲ ಸುಖಃವಾದ ಜೀವನ ನಡೆಸಿರಿ ಎಂದು ಹಾರೈಸಿದರು.

p2

ಅಪ್ಪನ ಕೈಯನ್ನು ಮೃದುವಾಗಿ ಒತ್ತಿದ ಮಗಳು ಶಮಾ, ಅಪ್ಪಾ ನಾನು ಹೀಗೆ ಹೇಳುತ್ತಿದ್ದೇನೆ ಎಂದು ತಪ್ಪಾಗಿ ತಿಳಿಯದಿರಿ. ಇಷ್ಟು ವರ್ಷಗಳ ಕಾಲ ಅಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ನಿಮ್ಮ ಕಡೆಯ ದಿನಗಳಲ್ಲಿಯೂ ನಿಮ್ಮ ಬಳಿ ಸ್ವಲ್ಪವೂ ಹಣವಿಲ್ಲ. ಖಾಸಗೀ ಆಸ್ಪತ್ರೆಯ ಚಿಕಿತ್ಸಾ ಶುಲ್ಕವನ್ನು ಭರಿಸಲಾಗದೇ ಈ ರೀತಿ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಿ. ನೀವು ಯಾರನ್ನು ಭ್ರಷ್ಟರೆಂದು ಹೇಳುತ್ತಿದ್ದೀರೋ, ಅಂತಹವರೆಲ್ಲರೂ ಐಶಾರಾಮ್ಯದ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅವರೆಲ್ಲರೂ ತಮ್ಮ ಮಕ್ಕಳಿಗಾಗಿ ಮನೆ ಮತ್ತು ಆಸ್ತಿಯನ್ನು ಮಾಡಿಟ್ಟಿದ್ದಾರೆ. ಆದರೆ ನಾವು ಇಂದಿಗೂ ಬಾಡಿಗೆ ಮನೆಯಲ್ಲೇ ವಾಸಿಸುತ್ತಿದ್ದೇವೆ. ಆದ ಕಾರಣ, ಖಂಡಿತವಾಗಿಯೂ ನಾವು ನಿಮ್ಮ ಆದರ್ಶಗಳಂತೆ ಬಾಳಲು ಸಾಧ್ಯವಿಲ್ಲ. ನಮ್ಮನ್ನು ನಮ್ಮ ಪಾಡಿಗೆ ಬದಕಲು ಬಿಡಿ ಎಂದು ಕಡ್ಡಿ ತುಂಡು ಮಾಡುವ ಹಾಗೆ ಹೇಳಿದಳು.

ಮಗಳ ಕಠಿಣ ಮಾತುಗಳಿಗೆ ಸ್ವಲ್ಪವೂ ಬೇಸರಗೊಳ್ಳದ ಶಂಕರ್ ಅವರು ಮಗಳೇ, ಹೌದು ನಿಜ. ನಾನು ನಿಮಗೆ ಯಾವುದೇ ಆಸ್ತಿಯನ್ನು ಮಾಡಿಲ್ಲ ಆದರೆ ನಿಮಗೆ ಒಳ್ಳೆಯ ವಿದ್ಯೆಯನ್ನು ಕೊಡಿಸಿದ್ದೇನೆ. ಶಿವರಾಮ ಕಾರಾಂತರು ಹೇಳುತ್ತಿದ್ದಂತೆ ಮಕ್ಕಳಿಗೆ ಆಸ್ತಿ ಮಾಡಬೇಡಿ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂಬ ತತ್ವವನ್ನು ನಂಬಿದವನು ನಾನು. ಜೀವನದಲ್ಲಿ ಇಷ್ಟು ದಿನಗಳ ಕಾಲ ಪ್ರಾಮಾಣಿಕತೆಯಿಂದ ಬದುಕಿದ್ದೇನೆ. ಹಾಗಾಗಿ ಪ್ರಾಮಾಣಿಕತೆಯೇ ನನ್ನ ಆಸ್ತಿ. ಅದನ್ನೇ ನಾನು ನಿಮಗೆ ಬಿಟ್ಟು ಹೋಗುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನೀವು ಅದರ ಫಲವನ್ನು ಅನುಭವಿಸಿದಾಗಲೇ ನಿಮಗೆ ಅದರ ಮೌಲ್ಯಗಳು ಅರ್ಥವಾಗುತ್ತದೆ ಎಂದು ಹೇಳಿದ ಸ್ವಲ್ಪ ಸಮಯದಲ್ಲೇ ಇಹಲೋಕವನ್ನು ತ್ಯಜಿಸಿದರು.

interview1

ತಂದೆಯವರು ಅಗಲಿದ ಕೆಲವರ್ಷಗಳ ನಂತರ ಶಮಾ, ಬಹುರಾಷ್ಟ್ರೀಯ ಕಂಪನಿಯ ಸಂದರ್ಶನಕ್ಕೆ ಹೋದಾಗ, ಸಂದರ್ಶಕರು ನಿಮ್ಮ ಸಂಪೂರ್ಣ ಹೆಸರೇನು? ಎಂದು ಕೇಳಿದಾಗ, ಆಕೆ ಶಮಾ ಶಂಕರ್ ಎಂದು ಉತ್ತರಿಸಿದಳು. ಶಂಕರ್.. ಅಂದರೆ ಯಾರು? ಎಂಬ ಪ್ರಶ್ನೆ ಎದುರಾದಾಗ, ನನ್ನ ತಂದೆಯವರು ಪ್ರಖ್ಯಾತ ಪೊಫೇಸರ್ ಶಂಕರ್. ಈಗ ಅವರು ಕಾಲವಾಗಿದ್ದಾರೆ ಎಂದು ಮೆಲ್ಲನೇ ಹೇಳಿದಾಕ್ಷಣವೇ, ಓಹ್! ನೀವು ಪೊಫೇಸರ್ ಶಂಕರ್ ಶಂಕರ್ ಅವರ ಮಗಳೇ!! ಎಂಬ ಉದ್ಗಾರವನ್ನು ತೆಗೆದದ್ದಲ್ಲದೇ, ನಂತರ ಮಾತು ಮುಂದುವರೆಸಿ, ನನ್ನ ಇಂದಿನ ಎಲ್ಲಾ ಏಳ್ಗೆಗೂ ನಿಮ್ಮ ತಂದೆಯವರ ಮಾರ್ಗದರ್ಶನ ಮತ್ತು ಶಿಫಾರಸುಗಳೇ ಕಾರಣ. ನಾನು ಬಹಳ ವರ್ಷಗಳ ಕಾಲ ವಿದೇಶದಲ್ಲಿ ಇದ್ದ ಕಾರಣ ಶಂಕರ್ ಸರ್ ಅವರ ವಿಳಾಸ ತಿಳಿಯದೇ ಇದ್ದ ಕಾರಣ ಅವರನ್ನು ಭೇಟಿ ಮಾಡಲು ಆಗಲೇ ಇಲ್ಲಾ ಎಂಬುದಕ್ಕೆ ವಿಷಾಧವಿದೆ ಎಂದು ತಿಳಿಸಿದರು.

ಕೆಲ ಕಾಲ ಸಂದರ್ಶನದ ಕೊಠಡಿಯಲ್ಲಿ ಮೌನದ ವಾತಾವರಣ ಮೂಡಿದಾಗ, ಶಮಾಳೇ ಧೈರ್ಯದಿಂದ ಸರ್ ಸಂದರ್ಶನವನ್ನು ಮುಂದುವರೆಸಬಹುದೇ? ಎಂದು ಕೇಳಿದಾಗ, ಆ ಸಂದರ್ಶಕರು, ಇಲ್ಲಾ ನಿಮ್ಮ ಸಂದರ್ಶನ ಮುಗಿದಿದೆ, ನನಗೆ ನಿಮ್ಮ ಬಳಿ ಕೇಳಲು ಯಾವುದೇ ಪ್ರಶ್ನೆಗಳಿಲ್ಲ, ನಿಮ್ಮನ್ನು ನಾವು ಆಯ್ಕೆ ಮಾಡಿದ್ದೇವೆ. ತಮ್ಮ ಹೆಚ್.ಆರ್. ತಂಡ ನಿಮ್ಮನ್ನು ಸಂಪರ್ಕಿಸಿ ಮುಂದಿನ ವಿಷಯಗಳನ್ನು ತಿಳಿಸುತ್ತಾರೆ. ಅತೀ ಆದಷ್ಟು ಶೀಘ್ರದಲ್ಲೇ ಕಲಸಕ್ಕೆ ಸೇರಿಕೊಂಡು ನಿಮ್ಮ ತಂದೆಯವರಂತೆಯೇ ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸಿ. ನಿಮಗೆ ಶುಭವಾಗಲಿ ಎಂದು ಎದ್ದು ನಿಂತು ಹಸ್ತಲಾಘವವನ್ನು ನೀಡಿದಾಗ ಶಮಾಳಿಗೆ ಇದು ಕನಸೋ ನನಸೋ ಎಂಬುದನ್ನು ಅರಿಯದೇ ಕೆಲಕಾಲ ಸ್ಥಬ್ಧಳಾದಳು.

ಕೆಲವೇ ದಿನಗಳಲ್ಲಿ ಶಮಾ ಆ ಬಹುರಾಷ್ಟ್ರೀಯ ಕಂಪನಿಯ ಕಾರ್ಪೊರೇಟ್ ವ್ಯವಹಾರಗಳ ಮ್ಯಾನೇಜರ್ ಆಗಿ ನೇಮಕಗೊಂಡು, ಕಂಪನಿಯ ವತಿಯಿಂದಲೇ ಆಕೆಗೆ ಚಾಲಕನ ಸಮೇತ ಕಾರು ಮತ್ತು ಬಂಗಲೆಗಳ ಜೊತೆಗೆ ತಿಂಗಳಿಗೆ ಆರಂಕಿಯ ಸಂಬಳವನ್ನು ಪಡೆಯುವಂತಾದಳು. ನೂಲಿನಂತೆ ಸೀರೆ ತಂದೆ ತಾಯಿಯರಂತೆ ಮಗಳು ಎನ್ನುವಂತೆ ಶಮಾ ತನಗೆ ವಹಿಸಿದ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿದ್ದಲ್ಲದೇ ಈ ಹಿಂದೆ ಕಂಪನಿಯಲ್ಲಿ ನಡೆದಿದ್ದ ಕೆಲವು ಅವ್ಯವಹಾರಗಳನ್ನು ಬಯಲಿಗೆಳೆದು, ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಾತ್ಮಕವಾಗಿ ಶಿಕ್ಷೆಯನ್ನು ಕೊಡಿಸುವ ಮೂಲಕ ಕಂಪನಿಗೆ ಆಗುತ್ತಿದ್ದ ಅಪಾರವಾದ ಆರ್ಥಿಕ ನಷ್ಟವನ್ನು ತಡೆಗಟ್ಟಿದಳು. ಶಮಾಳ ಈ ಅದ್ಭುತವಾದ ಕಾರ್ಯಕ್ಕೆ ಅಕೆಯ ಕಂಪನಿಯವರೆಲ್ಲರ ಪ್ರಶಂಶೆಗೆ ಪಾತ್ರಳಾದಳು.

conference

ಅದೇ ಕಂಪನಿಯಲ್ಲಿ ಐದಾರು ವರ್ಷಗಳ ಕಾಲ ಶ್ರದ್ಧೆಯಿಂದ ಕೆಲಸ ಮಾಡಿದ ನಂತರ, ಆ ಕಂಪನಿಯ ಭಾರತದ ಎಂಡಿ ಅವರು ರಾಜೀನಾಮೆ ನೀಡಿದಾಗ ಅವರ ಬದಲಿಗೆ ಹೊಸಬರನ್ನು ತರುವ ಬದಲು ತಮ್ಮ ಕಂಪನಿಯಲ್ಳೇ ಇರುವ ಹೆಚ್ಚಿನ ಸಮಗ್ರತೆಯನ್ನು ಹೊಂದಿರುವ, ಪ್ರಾಮಾಣಿಕ ವ್ಯಕ್ತಿತ್ವವದವರು ಯಾರು ಇದ್ದಾರೆ ಎಂದು ಹುಡುಕಲಾರಂಭಿಸುತ್ತಿದ್ದಂತೆಯೇ ಥಟ್ ಎಂದು ಶಮಾಳ ಹೆಸರು ಮುನ್ನೆಲೆಗೆ ಬಂದಿತು. ಈ ಕುರಿತಾಗಿ ಆಂತರಿಕವಾಗಿ ಕಂಪನಿಯಲ್ಲಿ ಚರ್ಚೆಗಳು ನಡೆದಾಗ ಎಲ್ಲರೂ ಶಮಾಳ ನದುವಳಿಕೆ, ಕಾರ್ಯತತ್ಪರತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಹಾಡಿ ಹೊಗಳು ಎಲ್ಲರ ಒಮ್ಮತದ ಆಯ್ಕೆಯಾಗಿ ಶಮಾಳನ್ನು ಆ ಹುದ್ದೆಗೆ ಆಯ್ಕೆ ಮಾಡಿ, ಅದನ್ನು ಅಧಿಕೃತವಾಗಿ ಪ್ರಕಟಿಸುವ ಸಲುವಾಗಿ ಅಮೇರಿಕದಿಂದ ಆ ಕಂಪನಿಯ ಸ್ಥಾಪಕರೇ ಖುದ್ದಾಗಿ ಬಂದು ಎಲ್ಲರ ಸಮ್ಮುಖದಲ್ಲಿ ಶಮಾ ರವರು ನಮ್ಮ ಕಂಪನಿಯ ಭಾರತದ ಎಂ.ಡಿ ಜವಾಬ್ಧಾರಿಯನ್ನು ಇನ್ನು ಮುಂದೆ ನಿರ್ವಹಿಸುತ್ತಾರೆ. ತಮ್ಮೆಲ್ಲರ ಸಹಕಾರ ಅಕೆಗೆ ಇರಲಿ ಎಂದು ಹೇಳಿದರು.

ಅಧಿಕಾರವನ್ನು ಸಂತೋಷದಿಂದ ಸ್ವೀಕರಿಸಿ ಎಲ್ಲರನ್ನೂ ಉದ್ದೇಶಿಸಿ ಮಾತನಾಡುತ್ತಿದ್ದಾಗ, ಸಭಿಕರೊಬ್ಬರು, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಆಷ್ಟು ದೊಡ್ಡ ಹುದ್ದೆಯನ್ನು ಪಡೆದ ನಿಮ್ಮ ಯಶಸ್ಸಿನ ರಹಸ್ಯವನ್ನು ತಿಳಿಸಬಹುದೇ ಎಂದು ಕೇಳಿದಾಗ,

ನನ್ನೆಲ್ಲಾ ಸಾಧನೆಗಳ ಹಿಂದೆ ಇರುವ ಅದ್ಭುತವಾದ ಶಕ್ತಿಯೇ ಪ್ರಾಮಾಣಿಕತೆ. ಇದೇ ನಮ್ಮ ತಂದೆ ನಮಗೆ ಕೊಟ್ಟು ಹೊದ ದೊಡ್ಡ ಆಸ್ತಿ. ನನ್ನ ತಂದೆಯವರು ಪ್ರಖ್ಯಾತ ಪ್ರೊಫೆಸರ್ ಆಗಿದ್ದರೂ, ಬಹಳ ಜನಾನುರಾಗಿಯಾಗಿ ಜೀವನ ನಡೆಸಿದ್ದ ಕಾರಣ, ನಾವು ಆರ್ಥಿಕವಾಗಿ ಬಡವರಾಗಿದ್ದರೂ, ಶಿಸ್ತು,ಹೃದಯ ಶ್ರೀಮಂತಿಕೆ ಪ್ರಾಮಾಣಿಕತೆಯಲ್ಲಿ ಶ್ರೀಮಂತರಾಗಿದ್ದೆವು. ದುರಾದೃಷ್ಟವಷ್ಟವಷಾತ್ ಈ ಘನ ಘೋರ ಸತ್ಯ ನನಗೆ ಅವರ ಸಾವಿನ ನಂತರ ಅರಿವಾಯಿತು ಎಂದು ಹೇಳುತ್ತಾ ಗದ್ಗದಿತಳಾಗಿ ಕೆಲ ಕ್ಷಣ ಇಡೀ ಸಭಾಂಗಣದಲ್ಲಿ ಮೌನ ಆವರಿಸಿತು.

p2

ಕೆಲ ಕ್ಷಣಗಳ ನಂತರ ಮತ್ತೆ ಆಕೆಯೇ ಸಾವರಿಸಿಕೊಂಡು ಕಣ್ಣಿನಿಂದ ಸುರಿಯುತ್ತಿದ್ದ ಕಣ್ಣಿರನ್ನು ಮೆಲ್ಲಗೆ ಒರೆಸಿಕೊಂಡು ಒಂದೆರಡು ಗುಟುಕು ನೀರನ್ನು ಕುಡಿದು, ಮಾತನ್ನು ಮುಂದುವರೆಸುತ್ತಾ, ಸಾವಿನಂಚಿನಲ್ಲಿದ್ದ ಪ್ರಾಮಾಣಿಕ ವ್ಯಕ್ತಿಯಾದ ನಮ್ಮ ತಂದೆಯನ್ನು ಅನುಮಾನಿಸಿದೆ. ಅವರು ನಮಗೆ ಯಾವ ಆಸ್ತಿಯನ್ನು ಮಾಡದೇ ಹೋದರಲ್ಲಾ ಎಂದು ಎಂದು ಅವಮಾನಿಸಿದೆ. ಆಗ ನಮ್ಮ ತಂದೆಯವರು, ಮಗಳೇ ನಾನು ಪ್ರಾಮಾಣಿಕನಾಗಿ ಇಷ್ಟು ದಿನಗಳ ಕಾಲ ಜೀವಿಸಿದ್ದೇನೆ. ಪ್ರಾಮಾಣಿಕತೆಯೇ ನಮ್ಮ ಆಸ್ತಿ. ಮುಂದಿನ ದಿನಗಳಲ್ಲಿ ನೀವು ಅದರ ಫಲವನ್ನು ಖಂಡಿತವಾಗಿಯೂ ಅನುಭವಿಸಿದಾಗಲೇ ನಿಮಗೆ ಅದರ ಮೌಲ್ಯಗಳು ಅರ್ಥವಾಗುತ್ತದೆ ಎಂದು ಹೇಳಿ ಪ್ರಾಣ ಬಿಟ್ಟಿದ್ದರು. ಅಂದು ಅರ್ಥವಾಗದ ವಿಷಯ ನನಗೆ ಈಗ ಅರ್ಥವಾಗುತ್ತಿದೆ. ಅವರ ಪ್ರಾಮಾಣಿಕತೆಯೇ ನನ್ನನ್ನು ಇಂದು ಇಷ್ಟು ದೊಡ್ಡ ಹುದ್ದೆಯಲ್ಲಿ ತಂದು ಕೂರಿಸಿದೆ. ಹಾಗಾಗಿ ಸಮಾಧಿಯಲ್ಲಿ ಚಿರಶಾಂತಿಯಲ್ಲಿರುವ ನಮ್ಮ ತಂದೆಯವರು ನನ್ನನ್ನು ಕ್ಷಮಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಇಂತಹ ಕಂಪನಿಯಲ್ಲಿ ಕೆಲಸ ಪಡೆದುಕೊಳ್ಳಲು ಶ್ರಮ ಪಡಲಿಲ್ಲ. ನಮ್ಮ ತಂದೆಯವರ ಸಾಧನೆ ನನಗೆ ಇಲ್ಲಿ ಕೆಲಸ ದೊರೆಕಿಸಿ ಕೊಟ್ಟಿತು. ನಾನು ಈಗ ಇಷ್ಟು ದೊಡ್ಡ ಹುದ್ದೆಗೆ ಏರಲು ಹೆಚ್ಚಿನ ಪರಿಶ್ರಮ ಪಡಲಿಲ್ಲ. ಇನ್ನು ಕೆಲಸದಲ್ಲಿ ನಮ್ಮ ತಂದೆಯವರು ಕಲಿಸಿಕೊಟ್ಟ ಮೌಲ್ಯಗಳನ್ನು ಅಳವಡಿಸಿಕೊಂಡು ಪ್ರಾಮಾಣಿಕವಾಗಿ ದುಡಿದ ಕಾರಣ ಇಷ್ತು ದೊಡ್ದ ಹುದ್ದೆಗೆ ಏರುವಂತಾಗಿದೆ. ಹಾಗಾಗಿ ಇವೆಲ್ಲದರ ಸಂಪೂರ್ಣ ಶ್ರೇಯ ನಮ್ಮ ತಂದೆಯವರಿಗೇ ಸಲ್ಲುತ್ತದೆ ಎಂದು ಹೇಳಿದಳು.

conference2

ಹಾಗೆಯೇ ಮಾತನ್ನು ಮುಂದುವರೆಸಿ, ನಮ್ಮ ತಂದೆಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ನನ್ನ ಮನೆಯಲ್ಲಿರುವ ಅವರ ಆಳೆತ್ತರದ ಭಾವ ಚಿತ್ರವನ್ನು ನೋಡಿದಾಗಲೆಲ್ಲಾ ಅವರು ನಮ್ಮೊಂದಿಗೇ ಇದ್ದಾರೆ ಎನ್ನುವ ಭಾವನೆ ಮೂಡುತ್ತದೆ. ಹಾಗಾಗಿ ನಾನು ಪ್ರತೀ ದಿನವೂ ದೇವರ ಪೂಜೆಯ ಜೊತೆಗೆ ನಮ್ಮ ತಂದೆ ತಾಯಿಯರಿಗೂ ಭಕ್ತಿಯಿಂದ ನಮಿಸುತ್ತೇನೆ. ಅವರಂತೆಯೇ ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡಿದ ಫಲವಾಗಿಯೇ ಈ ಎಲ್ಲಾ ಫಲಗಳು ಲಭಿಸಿವೆ. ಆರಂಭದಲ್ಲಿ ಶುಭ ಫಲಗಳು ಸಿಗುವುದು ಸ್ವಲ್ಪ ತಡವಾದರೂ, ಪ್ರಾಮಾಣಿಕರಿಗೆ ಫಲವು ಖಂಡಿತವಾಗಿಯೇ ಲಭಿಸಿಯೇ ತೀರುತ್ತದೆ. ಆದರೆ ಫಲವನ್ನು ನಿರೀಕ್ಷಿಸಿ ಯಾರೂ ಸಹಾ ಕೆಲಸ ಮಾಡಬಾರದು. ಹಾಗೆ ಮಾಡಿದಲ್ಲಿ ಲಭಿಸಬೇಕಾದ ಪೂರ್ಣಫಲವು ಲಭಿಸುವುದಿಲ್ಲ. ಇದನ್ನೇ ಶ್ರೀಕೃಷ್ಣ ಪರಮಾತ್ಮನು ಸಹಾ ಭಗವದ್ಗೀತೆಯಲ್ಲಿ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂದು ಹೇಳಿರುವುದು ಎಂದು ಹೇಳಿದಾಗ ಇಡೀ ಸಭಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಲ್ಲದೇ ಆಕೆಗೂ ಮತ್ತು ಆಕೆಯ ತಂದೆಯವರಿಗೂ ಜೈ ಕಾರ ಹಾಕಿದ ಸದ್ದು ಮುಗಿಲು ಮುಟ್ಟುವಂತಿತ್ತು. ಅದಕ್ಕೇ ಅಲ್ಲವೇ ನಮ್ಮ ಹಿರಿಯರು ಹೇಳಿರುವುದು ವಿದ್ವಾನ್ ಸರ್ವತ್ರ ಪೂಜ್ಯತೇ ಎಂದು. ಸಮಗ್ರತೆ, ಶಿಸ್ತು, ಸ್ವಯಂ ನಿಯಂತ್ರಣ ಮತ್ತು ದೇವರ ಮೇಲಿನ ನಂಬಿಕೆಯು ಮನುಷ್ಯನನ್ನು ಶ್ರೀಮಂತನನ್ನಾಗಿ ಮಾಡುತ್ತದೆ ಮತ್ತು ಆ ಶ್ರೀಮಂತಿಕೆ ಸುದೀರ್ಘಕಾಲ ವಿರುತ್ತದೆ. ಮನುಷ್ಯರ ಶ್ರೀಮಂತಿಯನ್ನು ಅಳೆಯುವುದು ಕೇವಲ ಬ್ಯಾಂಕಿನ ಖಾತೆಯಲ್ಲಿ ಉಳಿದಿರುವ ಹಣದಿಂದಲ್ಲ. ಬದಲಾಗಿ ಆತನ ಪ್ರಾಮಾಣಿಕತೆ ಮತ್ತು ಹೃದಯ ಶ್ರೀಮಂತಿಕೆಯಿಂದಾಗಿ ಅಲ್ವೇ?

ಸಂಪತ್ತಿಗಿಂತ ಸದ್ಗುಣಗಳನ್ನು ಶೇಖರಿಸಿ ಇಟ್ಟುಕೊಳ್ಳುವುದು ತುಂಬಾ ಸುಲಭ ಕಾರ್ಯ. ಸಂಪತ್ತನ್ನು ನಾವೇ ಕಾಯಬೇಕಾಗುತ್ತದೆ. ಆದರೆ ಅದೇ ಸದ್ಗುಣಗಳು ನಮ್ಮನ್ನು ಸುದೀರ್ಘ ಕಾಲ ಕಾಯುತ್ತವೆ.

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸಾಮಾಜಿಕ ಜಾಲತಾಣವೊಂದರಲ್ಲಿ ಬಂದ ಆಂಗ್ಲ ಸಂದೇಶದ ಭಾವಾನುವಾದವಾಗಿದೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s