ಕೃಷ್ಣಮಾಚಾರಿ ಶ್ರೀಕಾಂತ್ (ಚೀಕಾ)

krish6ನಾವೆಲ್ಲರೂ ಚಿಕ್ಕವರಿದ್ದಾಗ ಆಮೆ ಮತ್ತು ಮೊಲದ ಸ್ಪರ್ಥೆಯ ಕಥೆಯನ್ನು ಕೇಳಿಯೇ ಇರುತ್ತೇವೆ. 80ರ ದಶಕದಲ್ಲಿ ಭಾರತದ ಕ್ರಿಕೆಟ್ ತಂಡದ ಆರಂಭಿಕ ಇಬ್ಬರು ಆಟಗಾರರು ಇದಕ್ಕೆ ಅನ್ವಯವಾಗುವಂತೆಯೇ ಇದ್ದದ್ದು ಕಾಕತಾಳೀಯವೇ ಸರಿ. ಆಮೆಯಂತೆ ದಿಗ್ಗಜ ಲಿಟಲ್ ಮಾಸ್ಟರ್ ಸುನೀಲ್ ಗವಾಸ್ಕರ್ ಇದ್ದರೆ, ಹೊಡೀ ಬಡೀ ಕಡೀ ಆಟಕ್ಕೆ ಮುನ್ನುಡಿ ಬರೆಯುವಂತೆ ಬಿರುಗಾಳಿಯ ದಾಂಡಿಗರಾಗಿ ಇದ್ದವರೇ ಕೃಷ್ಣಮಾಚಾರಿ ಶ್ರೀಕಾಂತ್. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎನ್ನುವಂತೆ, ಅವರ ಆಕಾರಕ್ಕೂ ಆವರ ಆಟಕ್ಕೂ ಸಂಬಂಧವೇ ಇರದಿದ್ದದ್ದು ಗಮನಾರ್ಹವಾಗಿತ್ತು. ಕುಳ್ಳಗಿನ ಸಪೂರದ ಸಸ್ಯಹಾರಿ ವ್ಯಕ್ತಿ ಎಂಭತ್ತರ ದಶಕದಲ್ಲಿ ಬೆಂಕಿ ಉಗುಳುವಂತೆ ಚಂಡನ್ನು ಎಸೆಯುತ್ತಿದ್ದ ವೆಸ್ಟ್ ಇಂಡೀಸ್ ವೇಗಿಗಳು ಅದರಲ್ಲೂ ಮಾಲ್ಕಮ್ ಮಾರ್ಷಲ್ ಅವರ ಎಸೆತಗಳನ್ನು ಲೀಲಾಜಾಲವಾಗಿ ಮೈದಾನದ ಹೊರಗೆ ಅಟ್ಟುತ್ತಿದ್ದ ಪರಿಯನ್ನು ವರ್ಣಿಸುವುದಕ್ಕಿಂತಲೂ ನಿಜಕ್ಕೂ ನೋಡಿದವರಿಗೇ ಗೊತ್ತು ಅದರ ಮಜ. ಅದೇ ರೀತಿ ಪಾಕೀಸ್ತಾನದ ಲೆಗ್ ಸ್ಪಿನ್ನರ್ ಅಬ್ದುಲ್ ಖಾದರ್ ಸ್ಪಿನ್ ದಾಳಿಗೆ ಅಂದಿನ ಕಾಲದ ಬಹುತೇಕ ದಾಂಡಿಗರು ಪದಾಡುತ್ತಿದ್ದರೆ, ಶ್ರೀಕಾಂತ್ ಮಾತ್ರವೇ, ಖಾದರ್ ಅವರ ಮೊದಲನೇ ಓವರಿನ ಚಂಡನ್ನು ಆಟ್ಟಿಸಿಕೊಂಡು ಸಿಕ್ಸರ್ ಹೊಡೆಯುವ ಮೂಲಕ ಅಬ್ದುಲ್ ಖಾದರ್ ಗೆ ಸಿಂಹಸ್ವಪ್ನವಾಗಿದ್ದದ್ದು ಈಗ ಇತಿಹಾಸ

krish1121 ಡಿಸೆಂಬರ್ 1959ರಲ್ಲಿ ಅಂದಿನ ಮದರಾಸ್ ಇಂದಿನ ಚೆನ್ನೈ ನಲ್ಲಿ ಸಂಪ್ರದಾಯಸ್ಥ ಸಿ.ಆರ್.ಕೃಷ್ಣಮಾಚಾರಿ ಮತ್ತು ಇಂದಿರಾ ಕೃಷ್ಣಮಾಚಾರಿ ದಂಪತಿಗಳ ಮಗನಾಗಿ ಶ್ರೀಕಾಂತ್ ಜನಿಸುತ್ತಾರೆ. ಚಿಕ್ಕಂದಿನಿಂದಲೂ ಆಟ ಪಾಠಗಳೆರಡರಲ್ಲೂ ಚುರುಕಾಗಿದ್ದ ಶ್ರೀಕಾಂತ್, ಓದಿನ ಜೊತೆ ಜೊತೆಯಲ್ಲೇ ಕ್ರಿಕೆಟ್ ಆಟದಲ್ಲಿಯೂ ಅಸಕ್ತಿಯನ್ನು ಹೊಂದಿದ್ದಲ್ಲದೇ, ಅಂದಿನ ಕಾಲದ ಸಾಂಪ್ರದಾಯಿಕ ನಿಧಾನಗತಿಯ ಆಟಕ್ಕಿಂತ ವೇಗಕ್ಕೆ ಅತ್ಯಂತ ಮಹತ್ವ ಕೊಟ್ಟು ಚಂಡು ಇರುವುದೇ ಹೊಡೆಯುವುದಕ್ಕೆ ಎಂಬ ಮನಸ್ಥಿತಿಯಿಂದ ಆಡುತ್ತಿದ್ದ ಕಾರಣ ಅತಿ ಶೀಘ್ರದಲ್ಲಿಯೇ ಪ್ರವರ್ಧಮಾನಕ್ಕೆ ಬರುತ್ತಾರೆ. ಆಟದ ಜೊತೆಯಲ್ಲಿಯೇ ಮದರಾಸಿನ ಗಿಂಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲೇ ಭಾರತದ ಪರ ಸುನೀಲ್ ಗವಾಸ್ಕರ್ ಆವರೊಂದಿಗೆ ನವೆಂಬರ್ 25, 1981 ರಂದು ಗುಜರಾತಿನ ಮೊಟೇರಾ ಕ್ರೀಂಡಾಗಣದಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಏಕ ದಿನಕ್ಕೆ ಪಾದರ್ಪಣ ಮಾಡಿ 0 ದೊಂದಿಗೆ ಪೆವಿಲಿಯನ್ನಿಗೆ ಮರಳುತ್ತಾರೆ. ಅದಾದ ಎರಡೇ ದಿನಗಳಲ್ಲಿಯೇ ನವೆಂಬರ್ 27, 1981 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟಿನ ಮೊದಲನೇ ಇನ್ನಿಂಗ್ಸ್ ನಲ್ಲಿಯೂ ಸಹಾ 0 ಸಂಪಾದಿಸಿ ತನ್ನ ಚೊಚ್ಚಲ ಪಂದ್ಯದಲ್ಲೇ ಸೊನ್ನೆ ಸುತ್ತಿದ ವೀರ ಎಂಬ ಅಪಕೀರ್ತಿಗೆ ಪಾತ್ರರಾಗಿ ಎರಡನೇ ಇನ್ನಿಂಗ್ಸ್ ನಲ್ಲಿ 13 ರನ್ ಗಳಿಸಿದರೂ ಭಾರತ ತಂಡ ಆ ಟೆಸ್ಟ್ ಪಂದ್ಯವನ್ನು ಗೆದ್ದ ಪರಿಣಾಮ ಸರಣಿಯಲ್ಲಿ ಉಳಿದುಕೊಳ್ಳುತ್ತಾರೆ.

krish4ಡಿಸೆಂಬರ್ 09 – 14ರ ವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟಿನಲ್ಲಿ ಒಂದು ತುದಿಯಲ್ಲಿ ಗವಾಸ್ಕರ್ ಆಮೆಯಂತೆ ನಿಧಾನವಾಗಿ ಆಡುತ್ತಿದ್ದರೆ ಮತ್ತೊಂದು ತುದಿಯಲ್ಲಿ ತಾನು ಎರಡನೇ ಟೆಸ್ಟ್ ಆಡುತ್ತಿದ್ದೇನೆ ಎಂಬ ಅಳುಕೇ ಇಲ್ಲದೇ ಪಟ ಪಟನೇ ಹುಕು, ಪುಲ್, ಮಾಡುತ್ತಾ ನೋಡ ನೋಡುತಿದ್ದಂತೆಯೇ ಊಟಕ್ಕೆ ಹೋಗುವ ಮುನ್ನವೇ ಚೊಚ್ಚಲ ಅರ್ಧಶತಕವನ್ನು ಗಳಿಸಿದ್ದಲ್ಲದೇ, ಮೊದಲನೇ ವಿಕೆಟ್ಟಿಗೆ ಶತಕದ ಜೊತೆಯಾಟವಾಡಿ 65 ರನ್ನುಗಳನ್ನು ಗಳಿಸುವ ಮೂಲಕ ತಾನು ಎಂತಹ ಅದ್ಭುತ ಆಟಗಾರ ಎಂದು ಇಡೀ ಕ್ರಿಕೆಟ್ ಜಗತ್ತಿಗೆ ಪರಿಚಯ ಮಾಡಿಕೊಟ್ಟರು. ಅದೇ ಪಂದ್ಯದಲ್ಲಿ ಸುಮಾರು 12 ಗಂಟೆಗಳ ಕಾಲ ಮಂದಗತಿಯಲ್ಲಿ ಬ್ಯಾಟಿಂಗ್ ಮಾಡಿದ ನಾಯಕ ಗವಾಸ್ಕರ್ 172ರನ್ ಗಳಿಸಿದರೂ, ಕ್ರಿಕೆಟ್ ಪ್ರೇಮಿಗಳು ಶ್ರೀಕಾಂತ್ ಗಳಿಸಿದ ಪಟಪಟನೆಯ 65 ರನ್ನುಗಳನ್ನೇ ಮೆಚ್ಚಿಕೊಂಡಿದ್ದು ಗಮನಾರ್ಹ.

krish5ಅದುವರೆವಿಗೂ ಸಾಂಪ್ರದಾಯಕವಾಗಿ ನಿಧಾನ ಗತಿಯ ಆಟವನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಶ್ರೀಕಾಂತ್ ಅವರ ಆಸಂಪ್ರದಾಯಕ ವಿನೂತನವಾದ ಬ್ಯಾಟಿಂಗ್ ಶೈಲಿಯು ಮನರಂಜನೆ ನೀಡಿದ್ದಲ್ಲದೇ, ಮುಂದೆ ಸುನಿಲ್ ಗವಾಸ್ಕರ್ ಮತ್ತು ಶ್ರೀಕಾಂತ್ ಅವರ ಈ ಜೋಡಿಯು ಭಾರತಕ್ಕೆ ಹಲವಾರು ಉತ್ತಮ ಆರಂಭಗಳನ್ನು ಕೊಟ್ಟಿತು. ಸ್ವಾರ್ಥಕ್ಕಾಗಿ ಎಂದೂ ಆಡದ ಶ್ರೀಕಾಂತ್, ಭರದಲ್ಲಿ ಬಾರಿಸುವ ನೆಪದಲ್ಲಿ ಅಗ್ಗದ ರನ್ನುಗಳಿಗೂ ಓಟಾದರೂ ಚಿಂತಿಸದೇ ಇದ್ದದ್ದು ಆಯ್ಕೆದಾರರಿಗೂ ಕೆಲ ಕಾಲ ತಲೆ ಬಿಸಿ ತರುತ್ತಿತ್ತು. 1983ರಲ್ಲಿ ಶ್ರೀಮತಿ ವಿದ್ಯಾರವರನ್ನು ವರಿಸಿದ ಕೆಲವೇ ದಿನಗಳಲ್ಲಿ ಇಂಗ್ಲೇಂಡಿನಲ್ಲಿ ಆರಂಭವಾಗುತ್ತಿದ್ದ 3ನೇ ವಿಶ್ವಕಪ್ ಪಂದ್ಯಾವಳಿ ಆಕ್ರಮಣಕಾರಿ ಸ್ವಭಾವದ ಶ್ರೀಕಾಂತ್ ಅವರಿಗೆ ಹೇಳಿ ಮಾಡಿಸಿದಂತಿತ್ತು. ಆರಂಭದ ಪಂದ್ಯಗಳಲ್ಲಿ ಅಷ್ಟೇನೂ ಮಿಂಚದ ಶ್ರೀಕಾಂತ್ 1983 ರ ಫೈನಲ್‌ನಲ್ಲಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪ್ರಯಾಸದಿಂದ ಗಳಿಸಿದ 183ರನ್ನುಗಳಲ್ಲಿ ಶ್ರೀಕಾಂತ್ ಅವರು ಗಳಿಸಿದ 38 ರನ್ನುಗಳೇ ಹೆಚ್ಚಿನದ್ದಾಗಿತ್ತು ಎಂಬುದು ವಿಶೇಷ. ನಂತರ ಮಿಂಚಿನಂತೆ ಕ್ಷೇತ್ರರಕ್ಷಣೆಯನ್ನು ಮಾಡಿದ್ದಲ್ಲದೇ, ಆ ಐತಿಹಾಸಿಕ ವಿಜಯ ಭಾಗವಾದರು.

krish71985ರಲ್ಲಿ ಅಸ್ಟ್ರೇಲಿಯಾದಲ್ಲಿ ನಡೆದ ಬೆನ್ಸನ್ ಮತ್ತು ಹೆಡ್ಜಸ್ ವರ್ಲ್ಡ್ ಚಾಂಪಿಯನ್‌ಶಿಪ್ ನಲ್ಲಿ ರವಿಶಾಸ್ತ್ರಿಯವರು ಒಂದು ತುದಿಯಲ್ಲಿ ನಿಧಾನ ಗತಿಯಲ್ಲಿ ಆಡುತ್ತಿದ್ದರೆ, ಆಕರ್ಷಣೀಯವಾಗಿ ಬ್ಯಾಟನ್ನು ತಿರುಗಿಸುತ್ತಾ, ಆಗ್ಗಾಗ್ಗೆ ಮೂಗನ್ನೂ ಸೊರ್ ಸೊರ್ ಎಂದು ಎಳೆದುಕೊಳ್ಳುತ್ತಾ, ಅಗಲವಾಗಿ ಎರಡೂ ಕಾಲುಗಳನ್ನು ಚಾಚಿ ಅರಮಂಡಿಯಲ್ಲಿ ಬ್ಯಾಟಿಂಗ್ ಮಾಡಲು ನಿಂತರೆ ಎಂತಹ ದಿಗ್ಗಜರೂ ಅವರಿಗೆ ಚಂಡನ್ನು ಎಸೆಯುವ ಮುನ್ನಾ ಒಂದು ಬಾರಿ ಯೋಚಿಸುವಂತೆ ಮಾಡುತ್ತಿದ್ದರು ಎಂದರೂ ಸುಳ್ಳಲ್ಲ.  ಆ ಪಂದ್ಯಾವಳಿಯನ್ನೂ ಸಹಾ ಭಾರತ ಜಯಿಸಿತು. ಏಕದಿನ ಪಂದ್ಯಾವಳಿಗಳಲ್ಲಿ ಮೊದಲ 15 ಓವರುಗಳಲ್ಲಿ 30 ಯಾರ್ಡಿನ ಹೊರಗೆ ಭಾರಿಸಿ ಹೊಡೆಯುವ ಪಿಂಚ್ ಹಿಟ್ಟಿಂಗ್ ಆರಂಭಿಸಿದ್ದೇ ಶ್ರೀಕಾಂತ್ ಎಂದರೂ ತಪ್ಪಾಗದು. ನಂತರ ಅದೇ ಕಲೆಯನ್ನು ಶ್ರೀಲಂಕಾದ ಜಯಸೂರ್ಯ ಮತ್ತು ಕಲುವಿತರಣ ಹೆಚ್ಚಾಗಿ ಅಳವಡಿಸಿಕೊಂಡು ಪ್ರವರ್ಧಮಾನಕ್ಕೆ ಬಂದರು. 

ಕಪಿಲ್ ಮತ್ತು ಗವಾಸ್ಕರ್ ನಡುವೆ ನಾಯಕತ್ವ ಬದಲಾಗುತ್ತಾ ಅಂತಿಮವಾಗಿ 1989ರಲ್ಲಿ ಶ್ರೀಕಾಂತ್ ಭಾರತ ತಂಡದ ನಾಯಕರಾಗಿ ಬಲಿಷ್ಟ ಪಾಕಿಸ್ತಾನದ ಪ್ರವಾಸ ಮಾಡಿದ್ದಲ್ಲದೇ ಎಲ್ಲರೂ ಭಾರತ ಸರಣಿ ಸೋಲುತ್ತದೆ ಎಂದು ಭಾವಿಸಿರುವಾಗಲೇ ಡ್ರಾ ಮಾಡಿಕೊಂಡಿದ್ದೇ ಹೆಚ್ಚುಗಾರಿಕೆಯಾಗಿತ್ತು. ಅದೇ ಸರಣಿಯಲ್ಲಿಯೇ ಬಾಲಕ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದರು. ತಂಡವನ್ನು ಉತ್ತಮವಾಗಿ ಮುನ್ನಡೆಸಿದರೂ, ವಯಕ್ತಿಯವಾಗಿ ಕಳಪೆ ಫಾರ್ಮ್‌ನಿಂದಾಗಿ ಅವರನ್ನು ಮುಂದಿನ ಸರಣಿಗೆ ಕೈಬಿಟ್ಟರೂ, ಛಲದಂಗ ಮಲ್ಲನಂತೆ ದೇಶೀ ಕ್ರಿಕೆಟ್ಟಿಗೆ ಹಿಂದಿರುಗಿ ತಮ್ಮ ಸಾಮರ್ಥ್ಯವನ್ನು ತೋರಿಸಿ ಮತ್ತೆ 1991 ರಲ್ಲಿ ತಂಡಕ್ಕೆ ಪುನರಾಗಮನ ಮಾಡಿದರಾದರೂ, ಹಿಂದಿನಷ್ಟು ಪ್ರಖರವಾಗಿ ಮಿಂಚಲು ಸಾಧ್ಯವಾಗಲಿಲ್ಲ.

ಆದರೇ ಅದುವರೆವಿಗೂ ಕೇವಲ ಆರಂಭಿಕ ಬ್ಯಾಟ್ಸ್ ಮನ್ ಮಾತ್ರವೇ ಆಗಿದ್ದ ಶ್ರೀಕಾಂತ್ ತಮ್ಮ ಈ ಎರಡನೇ ಇನ್ನಿಂಗ್ಸಿನಲ್ಲಿ ಅದೊಂದು ರೀತಿಯ ವಿಲಕ್ಷಣ ಶೈಲಿಯಲ್ಲಿ ಲೆಗ್ ಬ್ರೇಕ್ ಮತ್ತು ಗೂಗ್ಲೀ ಬೌಲಿಂಗ್ ಮಾಡುತ್ತಾ, ನ್ಯೂಜಿಲೆಂಡ್ ವಿರುದ್ಧದ ಏಕದಿನದ ಪಂದ್ಯವೊಂದರಲ್ಲಿ ಅರ್ಧಶತಕ ಮತ್ತು 5 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಲ್ಲದೇ, ಇಂದೊಂದು ಅಕಸ್ಮಿಕ ಎಂದು ಯಾಗೂ ಹೀಯಾಳಿಸಬಾರದು ಎಂಬಂತೆ ಮತ್ತೊಮ್ಮೆ ಇದೇ ಸಾಧನೆಯನ್ನು ಮಾಡಿ ತೋರಿಸಿದರು, 1992ರ ಆಸ್ಟ್ರೇಲಿಯಾ ಸರಣಿ ಮತ್ತು ವಿಶ್ವಕಪ್ ಪಂದ್ಯಾವಳಿಯಾದ ನಂತರ ತಂಡವನ್ನು ಕದತಟ್ಟುತ್ತಿದ್ದ ಅನೇಕ ಯುವ ಆಟಗಾರರೊಂದಿಗೆ ಸ್ಪರ್ಧೆ ಮಾಡಲಾಗದೇ, ತಮ್ಮ 33 ನೇ ವಯಸ್ಸಿನಲ್ಲಿ ಕ್ರಿಕೆಟ್‌ ಆಟಗಾರನಾಗಿ ವಿದಾಯ ಹೇಳಿದರಾದರೂ, ಕ್ರಿಕೆಟ್ ನೊಂದಿಗೆ ಅವರ ಅವಿನಾಭಾವ ಸಂಬಂಧ ಇಂದಿನ ವರೆಗೂ ಮುಂದುವರೆದಿದೆ.  ಶ್ರೀಕಾಂತ್ ಭಾರತದ ಪರ 43 ಟೆಸ್ಟ್ ಪಂದ್ಯಗಳಲ್ಲಿ 29.88ರ ಸರಾಸರಿಯಲ್ಲಿ 2,062 ರನ್ ಗಳಿಸಿದ್ದರೆ, 146 ಏಕದಿನ ಪಂದ್ಯಗಳಲ್ಲಿ 29.01ರ ಸರಾಸರಿಯಲ್ಲಿ 4,091 ರನ್‌ಗಳಿಸಿದ್ದಾರೆ. ಏಕದಿನ ಪಂದ್ಯಾವಳಿಯಲ್ಲಿ ಸ್ಪಿನ್ ಬೌಲರ್ ಆಗಿ 25.64ರ ಸರಾಸರಿಯಲ್ಲಿ 25 ವಿಕೆಟ್ಗಳನ್ನು ಸಹಾ ಪಡೆದಿದ್ದಾರೆ.

krish8ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯ ನಂತರ, ಶ್ರೀಕಾಂತ್ ಭಾರತ ‘ಎ’ ತಂಡದ ಕೋಚ್ ಆಗಿ ಯಶಸ್ವಿಯಾಗುವುದರ ಜೊತೆಗೆ ವಿವಿಧ ಟಿವಿ ಚಾನೆಲ್‌ಗಳಲ್ಲಿ ವೀಕ್ಷಕ ವಿವರಣೆ ಮತ್ತು ಪರಿಣಿತ ವಿಶ್ಲೇಷಕರಾಗಿಯೂ ಕೆಲಸ ಮಾಡಿದ್ದಾರೆ. 2008ರಲ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗಾಗಿ ಕ್ರಿಕೆಟ್ ರಾಯಭಾರಿಯಾಗಿದ್ದಲ್ಲದೇ, ಅದೇ ವರ್ಷ ಭಾರತೀಯ ಕ್ರಿಕೆಟ್ ತಂಡ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ರೀತಿಯ ಸ್ವಜನ ಪಕ್ಷಪಾತವನ್ನು ಮಾಡದೇ ಆಟಗಾರರ ಅರ್ಹತೆಯನ್ನು ಗುರುತಿಸಿ ಅವರಿಗೆ ತಂಡದಲ್ಲಿ ಸೂಕ್ತಸ್ಥಾನ ನೀಡಿದ ಕಾರಣ ಆವರ ಸಮಯದಲ್ಲಿ ಹಲವಾರು ಉದಯೋನ್ಮುಖ ಆಟಗಾರರು ಭಾರತದ ತಂಡಕ್ಕೆ ಆಯ್ಕೆಯಾಗಿ ಭಾರತದ ಕೀರ್ತಿಪತಾಕೆಯನ್ನು ವಿಶ್ವದಲ್ಲೆಲ್ಲಾ ಹಾರಾಡಿಸಿದ್ದಾರೆ.

krish22ಶ್ರೀಕಾಂತ್ ಮತ್ತು ವಿದ್ಯಾ ದಂಪತಿಗಳಿಗೆ ಅನಿರುದ್ಧ ಮತ್ತು ಆದಿತ್ಯ ಎಂಬ ಇಬ್ಬರು ಮಕ್ಕಳಿದ್ದು ಅನಿರುದ್ಧ ಶ್ರೀಕಾಂತ್ ಕೆಲ ಕಾಲ ತಮಿಳುನಾಡು ರಣಜಿ ತಂಡ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಪರವಾಗಿ ಉದಯೋನ್ಮುಖ ಆಟಗಾರನಾಗಿ ಆಟವಾಡಿರುವುದು ಗಮನಾರ್ಹವಾಗಿದೆ. ನಂತರದ ದಿನಗಳಲ್ಲಿ ಬಂದ ವೀರೇಂದ್ರ ಶೆಹ್ವಾಗ್ ಶ್ರೀಕಾಂತ್ ರಂತೆಯೇ ನಿರ್ಭೀತವಾಗಿ ಫುಲ್, ಹುಕ್ ಮತ್ತು ಡ್ರೈವ್ ಮಾಡುವ ಮೂಲಕ ಶ್ರೀಕಾಂತ್ ಅವರನ್ನು ನೆನಪಿಸುವಂತೆ ಮಾಡಿದ್ದದ್ದು ವಿಶೇಷ. ಸುನಿಲ್ ಗವಾಸ್ಕರ್ ಅವರ ನಿಧಾನಗತಿಯ ದೃಢ ಬ್ಯಾಟಿಂಗ್, ಗುಂಡಪ್ಪ ವಿಶ್ವನಾಥ್ ಅವರ ಆಕರ್ಷಕ ಬ್ಯಾಟಿಂಗ್ ದಿನಗಳಲ್ಲಿ ತಮ್ಮದೇ ಆದ ಅಪೂರ್ವ ರೀತಿಯಾದ ಹೊಡೀ ಬಡೀ ಶೈಲಿಯ ಬ್ಯಾಟಿಂಗ್ ನಿಂದ ಭಾರತೀಯ ಕ್ರಿಕೆಟ್ಟಿಗೆ ಒಂದು ರೀತಿಯ ವಿಶೇಷ ಮೆರುಗನ್ನು ಶ್ರೀಕಾಂತ್ ಅವರು ತಂದು ಕೊಟ್ಟ ಕಾರಣದಿಂದಲೇ ಇಂದಿಗೂ ಸಹಾ ಅವರು ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿದ್ದಾರೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s