ಸಾಮಾನ್ಯವಾಗಿ ವಿವಿಧ ರಂಗಗಳಲ್ಲಿ ಪ್ರಸಿದ್ಧರಾದವರುಗಳಿಗೆ ಅಭಿಮಾನಿಗಳು ಇರುವುದು ಸಹಜ. ಅದರಲ್ಲೂ ಸಿನಿಮಾ ರಂಗ ಎಂದ ಮೇಲೆ ಅಭಿಮಾನಿಗಳ ಬಗ್ಗೆ ಕೇಳಬೇಕೆ. ಅದಕ್ಕೆಂದೇ ಕನ್ನಡದ ವರನಟ ಡಾ. ರಾಜಕುಮಾರ್ ಅವರು ಅಭಿಮಾನಿಗಳನ್ನು ಸದಾಕಾಲವೂ ಅಭಿಮಾನಿ ದೇವರುಗಳೇ ಎಂದು ಸಂಭೋಧಿಸುತ್ತಿದ್ದರು. ಅಭಿಮಾನಿಗಳಿಂದಲೇ ತಾವು ಈ ಮಟ್ಟಕ್ಕೆ ಬೆಳೆದಿರುವುದು ಎಂಬ ಕೃತಜ್ಞತೆ ಅವರ ಮನಸ್ಸಿನಲ್ಲಿ ಸದಾ ಕಾಲವೂ ಜಾಗೃತವಾಗಿರುತ್ತಿತ್ತು. ತಾವು ತೆರೆಯ ಮೇಲೆ ಅಥವಾ ಖಾಸಗೀ ಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳನ್ನೂ ಅಭಿಮಾನಿಗಳು ಗಮನಿಸುತ್ತಿರುತ್ತಾರೆ ಮತ್ತು ಬಹುತೇಕರು ಅದನ್ನು ಅನುಕರಿಸಲು ಪ್ರಯತ್ನಿಸುತ್ತಾರೆ ಎಂಬುದರ ಅರಿವಿದ್ದ ಕಾರಣ ಡಾ. ರಾಜ್ ಎಂದಿಗೂ ತೆರೆಯ ಮೇಲೆ ಬೀಡಿ ಸಿಗರೇಟ್ ಸೇದುವುದಾಗಲೀ, ಮಧ್ಯಪಾನ ಮಾಡುವುದಾಗಲೀ, ಅತ್ಯಾಚಾರ ಅನಾಚಾರ ಮಾಡುವಂತಹ ಪಾತ್ರಗಳನ್ನು ಮಾಡಲೇ ಇಲ್ಲಾ ಎನ್ನುವುದು ಗಮನಾರ್ಹ.
ಆದರೆ ಇತ್ತೀಚೆಗೆ ಕೇವಲ ಒಂದೆರಡು ಸಿನಿಮಾಗಳಲ್ಲಿಯೋ ಇಲ್ಲವೇ ಕನಿಷ್ಟ ಪಕ್ಷ ಒಂದೆರಡು ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಸಾಕು ಆ ನಟ ನಟಿಯರು ತಾವೇನೋ ಸಾಧಿಸಿಬಿಟ್ಟಿದ್ದೇವೆ ಎಂಬ ಅಹಂ ತಲೆಯ ಮೇಲಿಟ್ಟುಕೊಂಡು ದೊಡ್ಡವರು ಚಿಕ್ಕವರು, ಗುರು ಹಿರಿಯರು ಎಂಬ ಬೇಧಭಾವವಿಲ್ಲದೇ, ಆನೆ ನಡೆದದ್ದೇ ಹಾದಿ ಎಂದು ದುರಹಂಕಾರದ ಮಾತುಗಳನ್ನು ಆಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಅದೇ ರೀತಿ ಪ್ರತಿಯೊಬ್ಬ ನಟ ನಟಿಯರಿಗೂ ಅವರದ್ದೇ ಆದ ಅಭಿಮಾನಿಗಳ ಗುಂಪುಗಳು ರಾಜ್ಯದ ಗಲ್ಲಿ ಗಲ್ಲಿಗಳಲ್ಲಿಯೂ ನಾಯಿಕೊಡೆಯಂತೆ ಹುಟ್ಟಿಕೊಂಡು ಅತಿಯಾದ ಅಂಧಾಭಿಮಾನ ಪರವಾಗಿ ಅನಾವಶ್ಯಕವಾಗಿ ಬೇರೆ ಬೇರೆ ನಟ ನಟಿಯರ ಅಭಿಮಾನಿ ಬಳಗದ ಜೊತೆ ವೈಮನಸ್ಯಕ್ಕೆ ಕಾರಣಿಭೂತವಾಗುತ್ತಿರುವುದು ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಆರೋಗ್ಯಕರವಾದ ಲಕ್ಷಣವಾಗಿಲ್ಲ.
ಇದಕ್ಕೆ ಪುರಾವೆ ಎಂಬಂತೆ ಕನ್ನಡದ ಜನಪ್ರಿಯ ನಟ ದರ್ಶನ್ ಅವರು ಮತ್ತವರ ತಂಡ, 2023ರ ಜನವರಿ 26ರಂದು ಬಿಡುಗಡೆಯಾಗುತ್ತಿರುವ ಕ್ರಾಂತಿ ಚಿತ್ರದ ಪ್ರಚಾರದ ಅಂಗವಾಗಿ ರಾಜ್ಯದ ವಿವಿಧ ಪಟ್ಟಣಗಳಲ್ಲಿ ತಮ್ಮ ಚಿತ್ರದ ಒಂದೊಂದೇ ಹಾಡುಗಳನ್ನು ಬಿದುಗಡೆಮಾಡುವ ಮೂಲಕ ಚಿತ್ರದ ಬಗ್ಗೆ ಸಣ್ಣ ಪುಟ್ಟ ಮಾಹಿತಿಗಳನ್ನು ನೀಡುವ ಮೂಲಕ ಜನಾಕರ್ಷಣೆ ಮಾಡುತ್ತಿದೆ. ಇದರ ಮುಂದುವರೆದ ಭಾಗವಾಗಿ ಹೊಸಪೇಟೆಯಲ್ಲಿ ಕ್ರಾಂತೀ ಚಿತ್ರದ ಬೊಂಬೆ ಬೊಂಬೆ ಹಾಡನ್ನು ಬಿಡುಗಡೆ ಮಾಡಲು ನಿರ್ಧರಿಸಿತ್ತು. ಈ ಕಾರ್ಯಕ್ರಮಕ್ಕೆ ಪೂರಕವಾಗಿ, ನಗರಾದ್ಯಂತ ದರ್ಶನ್ ಅವರ ಕಟೌಟ್ ಮತ್ತು ಬ್ಯಾನರ್ಗಳನ್ನು ಹಾಕುವ ಮೂಲಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿತ್ತು
ಹೊಸಪೇಟೆಯಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಭಿಮಾನಿಗಳೇ ಹೆಚ್ಚಾಗಿದ್ದು ಪುನೀತ್ ಅವರನ್ನು ಅಕಾಲಿಕವಾಗಿ ಕಳೆದುಕೊಂಡ ಬಳಿಕ ಅವರ ಅಭಿಮಾನಿಗಳು ಸಣ್ಣ ಪುಟ್ಟ ವಿಷಯಗಳಿಗೂ ಭಾವುಕರಾಗುತ್ತಿದ್ದಾರೆ. ಅದೇ ರೀತಿ ಈ ಹಿಂದೆ ದರ್ಶನ್ ಅವರು ಪುನೀತ್ ಅವರ ಬಗ್ಗೆ ಕೊಟ್ಟ ಕೆಲವು ಹೇಳಿಕೆಗಳಿಂದಾಗಿ ಪುನೀತ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸಣ್ಣದಾದ ಅಸಮಾನದ ಕಿಡಿ ಹೊತ್ತು ಉರಿಯುತ್ತಲೇ ಇತ್ತು. ಹಾಗಾಗಿ ಸಮಾಜಿಕ ಜಾಲತಾಣಗಳಲ್ಲಿ ಒಂದು ವಾರದಿಂದಲೂ ಈ ವಿಚಾರವಾಗಿ ದರ್ಶನ್ ಮತ್ತು ಪುನೀತ್ ಅಭಿಮಾನಿಗಳ ನಡುವೆ ಭಾರೀ ತಿಕ್ಕಾಟ ನಡೆಯುತ್ತಲೇ ಇದ್ದು, ಅದರ ಮುಂದುವರೆದ ಭಾಗವಾಗಿ ನಗರದಲ್ಲಿ ಕೆಲವೆಡೆ ಕ್ರಾಂತಿ ಚಿತ್ರದ ಬ್ಯಾನರ್ ಹರಿದು ಹಾಕುವ ಮೂಲಕ ತಮ್ಮ ಆಕ್ರೋಶವನ್ನು ಹರಹಾಕುವ ಮೂಲಕ ಹೊಸಪೇಟೆಯಲ್ಲಿ ಎಲ್ಲವೂ ಸರಿ ಇಲ್ಲಾ ಎನ್ನುವ ಭಾವನೆಯನ್ನು ಮೂಡಿಸಿದ್ದರು.
ಇಷ್ಟ ಮಧ್ಯೆ ಕೆಲವು ದರ್ಶನ್ ಸಹಾ ಅದೃಷ್ಟ ದೇವತೆ ಲಕ್ಷ್ಮೀ ಮನೆಗೆ ಬಂದಾಗ ಆಕೆಯ ಬಟ್ಟೆ ಬಿಚ್ಚಿ ಬೆಡ್ ರೂಮಿನೊಳಗೆ ಕೂಡಿ ಹಾಕಬೇಕು ಎಂಬ ಅಸಹ್ಯಕರ ಮಾತುಗಳನ್ನು ಆಡಿದ ಮೇಲಂತೂ ಕೇವಲ ಪುನೀತ್ ಅಭಿಮಾನಿಗಳಲ್ಲದೇ ಅನೇಕ ಹಿಂದೂ ಕಾರ್ಯಕರ್ತರ ಭಾವನೆಗಳಿಗೂ ಧಕ್ಕೆ ತರಿಸಿದ ಕಾರಣ ಕ್ರಾಂತಿ ಬ್ಯಾನ್ ಮಾಡಬೇಕು ಎಂಬ ಆಕ್ರೋಶವೂ ಕೇಳಿ ಬರುತ್ತಿತ್ತು. ಉರಿಯುವ ಬೆಂಕಿಗೆ ತುಪ್ಪಾ ಹಾಕಿದಂತೆ ಇವೆಲ್ಲದರ ಮಧ್ಯೆ, ಕೆಲ ಕಿಡಿಗೇಡಿ ಅಂಧ ದರ್ಶನ್ ಅಭಿಮಾನಿಗಳು ದರ್ಶನ್ ಅವರು ಹೊಸಪೇಟೆಗೆ ಬರ್ತಾ ಇದ್ದಾರೆ ಅದೇನು ಮಾಡ್ಕೋತೀರೋ ಮಾಡ್ಕೊಳ್ಳಿ ನಾವು ನೋಡ್ತೀವಿ ಎಂಬ ಅಬ್ಬರದ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತಿದ್ದಂತೆಯೇ ಹೊಸಪೇಟೆಯಲ್ಲಿ ಯಾರ ಅಭಿಮಾನಿಗಳು ಹೆಚ್ಚು? ಯಾರ ಅಬ್ಬರ, ಹಾವಳಿ ಜೋರು ಎನ್ನುವ ಕಿತ್ತಾಟ ಶುರುವಾಗಿತ್ತು. ಹೊಸಪೇಟೆಯಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ ಎಂದು ಅಪ್ಪು ಅಭಿಮಾನಿಗಳು ಒಂದ್ಕಡೆ ಹೇಳಿದ್ರೆ, ಮತ್ತೊಂದು ಕಡೆ ದರ್ಶನ್ ಅಭಿಮಾನಿಗಳೂ ಸಹಾ ನಾವು ಏನು ಎನ್ನುವುದನ್ನು ತೋರಿಸುತ್ತೇವೆ ಎಂದು ತೊಡೆ ತಟ್ಟಿ ಪಂಥಾಹ್ವಾನ ನೀಡಿದ್ದರು.
ಇಷ್ಟೇಲ್ಲಾ ಬಿಗುವಾದ ವಾತಾವರಣ ಇದ್ದದ್ದು ತಿಳಿದಿದ್ದರೂ, ಧೈರ್ಯದಿಂದ ದರ್ಶನ್ ಮತ್ತು ಅವರ ತಂಡ ಕ್ರಾಂತಿ ಸನಿಮಾ ಪ್ರಚಾರಕ್ಕೆಂದು ಹೊಸಪೇಟೆಗೆ ಬಂದಿಳಿದಿದೆ. ಅಂದು ಸಂಜೆ ಕಾರ್ಯುಕ್ರಮಕ್ಕೆ ಹೋಗುವ ಮುನ್ನಾ ನಟ ದರ್ಶನ್, ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಸ್ಥಾಪಿಸಿದ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮದ ಕಡೆಗೆ ಹೊರಟಿದ್ದಾರೆ. ಆದರೆ ದರ್ಶನ್ ಬರುವುದಕ್ಕೂ ಮುನ್ನವೇ ಪುನೀತ್ ಅಭಿಮಾನಿಗಳು ಕ್ರಾಂತಿ ಸಿನಿಮಾದ ಹಾಡು ಬಿಡುಗಡೆ ಆಗುತ್ತಿರುವ ವೇದಿಕೆ ಏರಿದ್ದಲ್ಲದೇ ಅಲ್ಲಿ ಪುನೀತ್ ಬಾವುಟಗಳನ್ನು ಹಿಡಿದು ಜೈ ಅಪ್ಪು ಎಂದು ಘೋಷಣೆಯನ್ನೂ ಹಾಕಿದ್ದಾರೆ. ದರ್ಶನ್ ಮತ್ತವರ ತಂಡವನ್ನು ನೋಡಲು ಬಂದಿದ್ದ ಅಭಿಮಾನಿಗಳ ಸಂಖ್ಯೆಯೂ ಅಪಾರವಾಗಿದ್ದು, ನೂಕು ನುಗ್ಗಲು ಏರ್ಪಟ್ಟಿದ್ದಲ್ಲದೇ, ವೇದಿಕೆಯ ಮೇಲೆ ನಿಲ್ಲಲೂ ಅವಕಾಶವಿರದಷ್ಟು ಅಪ್ಪು ಮತ್ತು ದರ್ಶನ್ ಅಭಿಮಾನಿಗಳು ಸೇರಿದ್ದ ಕಾರಣ ಚಿತ್ರತಂಡ ಹರಸಾಹಸದಿಂದ ವೇದಿಕೆಗೆ ಮೇಲೆ ಬಂದಿದೆ.
ಚಿತ್ರದ ನಾಯಕಿ ರಚಿತಾ ರಾಮ್ ನೆರೆದಿದ್ದ ಅಭಿಮಾನಿಗಳನ್ನು ಸಂಬೋಧಿಸಿ ಮಾತಾಡಲು ಆರಂಭಿಸುತ್ತಿದ್ದಂತೆಯೇ ವೇದಿಕೆಯ ಮುಂಭಾಗದಲ್ಲಿದ್ದ ಕಿಡಿಗೇಡಿಯೊಬ್ಬ ದರ್ಶನ್ ಅವರತ್ತ ಚಪ್ಪಲಿ ತೂರಿದ್ದಾನೆ, ದರ್ಶನ್ ಮೇಲೆ ಚಪ್ಪಲಿ ಬಿದ್ದರೂ, ತಾಳ್ಮೆಗೆಡದ ಚಿತ್ರತಂಡ ಸಮಚಿತ್ತದಿಂದ ವರ್ತಿಸಿ, ಅಲ್ಲಿಯೇ ಇದ್ದ ಪೋಲೀಸ ಪೇದೆಯವರ ಮೂಲಕ ದರ್ಶನ್ ಮೇಲೆ ಬಿದ್ದ ಚಪ್ಪಲಿಯನ್ನು ತೆಗೆಸಿ ರಚಿತಾರವರ ಮಾತನ್ನು ನಿಲ್ಲಿಸಿ ತುರಾತುರಿಯಲ್ಲಿ ಸಭೆಯನ್ನು ಮುಗಿಸಿ ವೇದಿಕೆಯಿಂದ ಕೆಳಗೆ ಇಳಿದಿದ್ದಾರೆ.
ತಮ್ಮ ನೆಚ್ಚಿನ ನಟನಿಗೆ ಈ ರೀತಿಯಾದ ಅವಮಾನ ಆಗಿದ್ದಕ್ಕೇ ಆಕ್ರೋಶ ವ್ಯಕ್ತಪಡಿಸುತ್ತಿರುವ ದರ್ಶನ್ ಅಭಿಮಾನಿಗಳು ಈ ಘಟನೆಯನ್ನು ನಾವು ಸುಮ್ಮನೆ ಮರೆಯುವುದಿಲ್ಲ, ಸೇಡು ತೀರಿಸಿಕೊಳ್ಳುತ್ತೇವೆ ಎಂದು ಕಿಡಿಕಾರಿರುವುದು, ಬೆಂಕಿ ಇನ್ನೂ ಸಂಪೂರ್ಣವಾಗಿ ಆರಿರದೇ ಬೂದಿ ಮುಚ್ಚಿದ ಕೆಂಡದಂತೆ ಇರುವುದು ಕಳವಳಕಾರಿಯಾಗಿದೆ. ಈ ಘಟನೆಯ ಕುರಿತಾಗಿ ದರ್ಶನ್ ಅವರನ್ನು ಸಮರ್ಥಿಸಿಕೊಳ್ಳುತ್ತಾ ಮತ್ತೊಬ್ಬ ಉದಯನ್ಮುಖ ನಟ ಧನ್ವೀರ್. ನಿನ್ನೆ ಹೊಸಪೇಟೆಯಲ್ಲಿ ನಡೆದ ಘಟನೆ ತುಂಬಾ ನೋವುಂಟು ಮಾಡಿದೆ. ನಿಮ್ಮ ಮೇಲೆ ನಡೆದಿರುವ ಪಿತೂರಿ ಖಂಡನೀಯ. ನಿಮ್ಮ ಸಹಸ್ರ ಅಭಿಮಾನಿಗಳಲ್ಲಿ ಒಬ್ಬನಾಗಿ ಸಾಯೋವರೆಗೂ ನಿಮ್ಮ ಮೇಲಿನ ಅಭಿಮಾನ ದುಪ್ಪಟ್ಟಾಗುತ್ತೋ ಹೊರತು ಕಡಿಮೆಯಾಗುವುದಿಲ್ಲ. ಈ ಘಟನೆಗೆ ಕಾರಣರಾದವರಿಗೆ ಭಗವಂತ ಒಳ್ಳೆಯದೇ ಮಾಡಲಿ. ಕೆಟ್ಟದು ಬಯಸಿದವರಿಗೂ ಒಳ್ಳೆದು ಮಾಡಿ ಎಂದು ಹೇಳಿಕೊಟ್ಟಿದ್ದಿರಾ ಬಾಸ್. ಕರ್ಮ ಎನ್ನುವುದು ಯಾರಿಗೂ ಬಿಟ್ಟಿರುವುದಿಲ್ಲ, ಕರ್ಮ ತಿರುಗುತ್ತೆ. ಚಪ್ಪಲಿ ಎಸೆದ ವ್ಯಕ್ತಿಗೂ, ಅವನ ಮನಸ್ಥಿತಿಗೂ ಮತ್ತು ಪ್ರಚೋದಿಸಿದರವರಿಗೂ ನೆಮ್ಮದಿ ಸಿಗಲಿ. ನಿಮ್ಮ ಅಭಿಮಾನಿಗಳ ಮುಂದೆ ಈ ಘಟನೆಗಳು ಸಾಸಿವೆ ಕಾಳಿಗೆ ಸಮ. ನಿಮ್ಮ ಮೇಲಿನ ಅಭಿಮಾನದೊಂದಿಗೆ. ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರೆ ಮತ್ತೊಬ್ಬ ಅಂಧಾಭಿಮಾನಿ ತಟ್ಟುವ ಕೈಗೆ ಚಪ್ಪೈ ಬಂದಾಗ, ಮಲೀನವಾಗಿದ್ದು ಆ ಕೈಗಳೇ ಹೊರತು ಕಲಾವಿದನಲ್ಲಾ ಎಂಬ ಆಣಿಮುತ್ತೊಂದನ್ನು ಉದುರಿಸಿದ್ದಾರೆ.
ಹೊಸಪೇಟೆಯಲ್ಲಿ ನಡೆದ ಈ ರೀತಿಯ ಅಹಿತಕರ ಘಟನೆಯನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ಖಂಡಿಸಲೇಬೇಕಾದ ಸಂಗತಿಯಾಗಿದೆ. ಖಂಡಿತವಾಗಿಯೂ ಎಲ್ಲಾ ನಟ ನಟಿಯರ ಮಧ್ಯೆ ಆರೋಗ್ಯಕರವಾದ ಪೈಪೋಟಿಯಿದ್ದು ಅದರಿಂದ ಉತ್ತಮ ಸದಭಿರುಚಿಯ, ಸಾಮಾಜಿಕ ಬದ್ಧತೆ ಮತ್ತು ಕಾಳಜಿಯ ಜೊತೆಗೆ ಮನೋರಂಜನಾತ್ಮಕವಾದ ಸಿನಿಮಾಗಳು ಬರಬೇಕೇ ಹೊರತು ಈ ರೀತಿಯ ಅಸಹ್ಯಕರವಾದ ಘಟನೆಗಳಿಂದಾಗಿ ಕನ್ನಡ ಚಿತ್ರರಂಗ ಮತ್ತು ಕನ್ನಡಿಗರ ಗೌರವವನ್ನು ಕುಂದಿಸುವಂತ ಕೆಲಸಕ್ಕೆ ಕೈ ಹಾಕಬಾರದು. ನೆರೆಯ ತಮಿಳು ಮತ್ತು ತೆಲುಗು ಚಿತ್ರರಂಗಲ್ಲಿದ್ದ ಅಂಧಾಭಿಮಾನ ದಿನೇ ದಿನೇ ಕರ್ನಾಟಕ್ಕೂ ಹರಡುತ್ತಿರುವುದು ನಿಜಕ್ಕೂ ಒಳ್ಳೆಯ ಲಕ್ಷಣವಲ್ಲಾ.
ಆದರೆ ಈ ಅಹಿತಕಾರಿ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ, ಚಪ್ಪಾಳೆ ತಟ್ಟುವ ಕೈಗಳು ಚಪ್ಪಲಿ ತೂರುವಂತೆ ಮಾಡಲು ಕಾರಣೀಭೂತರು ಅದೇ ಕಲಾವಿದರಾಗಿದ್ದಾರೆ ಎಂಬುದೇ ಕಳವಳಕಾರಿಯಾಗಿದೆ. ಇದೇ ಕಲಾವಿದರೂ ತೆರೆಯ ಹಿಂದೆ, ನಶೆಯಲ್ಲಿದ್ದಾಗಲೋ ಇಲ್ಲವೇ ಮತ್ತಾವುದೋ ಕಾರಣದಿಂದ ಬಾಯಿ ತಪ್ಪಿ ಮತ್ತೊಬ್ಬ ನಟ ನಟಿಯರ ಬಗ್ಗೆ ಸಡಿಲವಾಗಿ ನಾಲಿಗೆ ಹರಿಸುವ ಮೂಲಕ ಇಂತಹ ಘಟನೆಗಳಿಗೆ ಕಾರಣೀ ಭೂತರಾಗುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಉತ್ತಮವಾದ ಬೆಳವಣಿಯಲ್ಲ.
ಕಲಾವಿದರು ಎಂದರೆ ಆಕಾಶದಿಂದ ನೇರವಾಗಿ ಉದುರಿದವರೇನಲ್ಲಾ. ಅವರು ಸಹಾ ನಮ್ಮ ನಿಮ್ಮಂತೆ ಸಾಧಾರಣ ಮನುಷ್ಯರಾಗಿದ್ದು ನಾವು ಜೀವನಕ್ಕಾಗಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಂತೆ ಅವರೂ ಸಹಾ ತಮ್ಮ ಹೊಟ್ಟೆಯ ಪಾಡಿದಾಗಿ ಮುಖಕ್ಕೆ ಬಣ್ಣ ಬಳಿದುಕೊಂಡು ಚಿತ್ರಗಳಲ್ಲಿ ನಟಿಸುವ ಕಾಯಕ ಮಾಡುತ್ತೇವೆ ಎಂಬುದು ಸದಾಕಾಲವೂ ಅವರ ತಲೆಯಲ್ಲಿ ಇರಬೇಕು. ಸುಖಾಃ ಸುಮ್ಮನೆ ತಮ್ಮ ವಯಕ್ತಿಕ ಸಿದ್ಧಾಂತಗಳನ್ನು, ತಮ್ಮ ತೆವಲುಗಳನ್ನು ತಮ್ಮ ಅಭಿಮಾನಿಗಳ ಮೇಲೆ ಹೇರಲು ಹೋದಾಗ ಈ ರೀತಿಯ ಅಹಿತಕರ ಘಟನೆಗಳು ನಡೆಯುತ್ತಲೇ ಹೋಗುತ್ತದೆ. ಸಿನಿಮಾರಂಗದಲ್ಲಿ ಇಂತಹ ಕೆಟ್ಟ ಸಂಸ್ಕೃತಿಗೆ ಕಮಲಹಾಸನ್, ಪ್ರಕಾಶ್ ರಾಜ್, ಹಿಂದಿಯ ಅಮೀರ್ ಖಾನ್, ಶಾರೂಖ್ ಖಾನ್ ಮುಂತಾದ ಖಾನ್ ಗಳಷ್ಟೇ ಅಲ್ಲದೇ ಕನ್ನಡ ರಮ್ಯಾ, ದೀಪಿಕ ಪಡುಕೋಣೆ, ಸ್ವರಾ ಭಾಸ್ಕರ್, ಕಂಗನಾರಾವತ್ ಮುಂತಾದವರು ನಾಂದಿ ಹಾಡಿದರೆ, ಚೇತನ್ ಅಹಿಂಸಾ ಎನ್ನುವ ವಿದೇಶಿ ಪ್ರಜೆ ಸಹಾ ತಮ್ಮ ತಮ್ಮ ಇತಿ ಮಿತಿಯನ್ನು ಅರಿಯದೇ ಇಂತಹ ಕುಕೃತ್ಯಗಳಿಗೆ ಪತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿ ಕಾರಣೀಭೂತರಾಗುತ್ತಿರುವುದು ದುರಾದೃಷ್ಟಕರವೇ ಸರಿ.
ಕಳೆದ ವಾರ ದರ್ಶನ್ ಅವರ ಅದೃಷ್ಟ ಲಕ್ಷ್ಮೀಯ ಕುರಿತಾದ ಹೇಳಿಕೆಯ ಕುರಿತಾಗಿ ಲೇಖನವನ್ನು ಒಂದನ್ನು ಪ್ರಕಟಿಸಿ (ಈ ಕೊಂಡಿಯ ಮೂಲಕ ಆ ಲೇಖನವನ್ನು ಓದಬಹುದಾಗಿದೆ) ದರ್ಶನ್ ಅಲ್ಪರ ಸಂಘದಿಂದಾಗಿ ಪದೇ ಪದೇ ಅಭಿಮಾನ ಭಂಗವನ್ನು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸ್ವಲ್ಪ ಸಂಸ್ಕಾರವನ್ನು ಬೆಳಸಿಕೊಳ್ಳುವುದು ಉತ್ತಮ ಎಂದು ತಿಳಿ ಹೇಳಿದ್ದಕ್ಕೇ ಅವರ ಅಭಿಮಾನಿಗಳು ನನ್ನ, ಅಪ್ಪಾ, ಅಮ್ಮಾ ಅಕ್ಕ ತಂಗಿಯರನ್ನೆಲ್ಲಾ ಅಸಹ್ಯಕರ ರೀತಿಯಲ್ಲಿ ಕೆಟ್ಟ ಕೆಟ್ಟ ಭಾಷೆಗಳಿಂದ ಟೀಕಿಸಿದದ್ದು ಸಹಾ ಮಾರಕವೇ ಸರಿ.
ಇಂತಹ ಪ್ರಸಂಗಗಳು ಮುಂದೆ ಎಂದಾದರೂ ಆಗಬಹುದು ಎಂಬದನ್ನು ಅರಿವಾಗಿಟ್ಟುಕೊಂಡೇ ಆದಿ ಗುರು ಶಂಕರಾಚಾರ್ಯರು ಯದ್ಭಾವಂ ತದ್ಭವತಿ ಎಂದಿದ್ದರೆ, ಅದನ್ನು ಮತ್ತಷ್ಟು ಸರಳೀಕರಿಸಿದ ಬಸವಣ್ಣನವರು ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದಿದ್ದಾರೆ. ಕುಂಬಾರನಿಗೆ ವರ್ಷ, ದೊಣ್ಣೆಗೆ ಒಂದು ನಿಮಿಷ ಎಂಬ ಸೂಕ್ಷ್ಮತೆ ಕೇವಲ ದರ್ಶನ್ ಮಾತ್ರವಲ್ಲದೇ, ಚಿತ್ರರಂಗ, ರಾಜಕೀಯ, ಕ್ರೀಡೆ, ಸಾಹಿತ್ಯ, ಸಾರಸ್ವತ ಲೋಕದಲ್ಲಿರುವ ಎಲ್ಲಾ ಪ್ರಸಿದ್ಧರೂ ಸಹಾ ತಾವು ಮಾತನಾಡುವ/ ಮಾಡುವ ಪ್ರತಿಯೊಂದು ಕಾರ್ಯಗಳಲ್ಲಿಯೂ ಬಹಳ ಅಳೆದೂ ತೂಗಿ ಆಡಿ/ಮಾಡಿದಲ್ಲಿ ಇಂತಹ ಕೃತ್ಯಗಳನ್ನು ತಪ್ಪಿಸಬಹುದಾಗಿದೆ. ಇಲ್ಲದೇ ಹೋದಲ್ಲಿ ಮಾತೇ ಮುತ್ತು, ಮಾತೇ ಮೃತ್ಯು ಎನ್ನುವಂತೆ ಸ್ವತಃ ಅವರೂ ಸಹಾ ಮುಜುಗರಕ್ಕೆ ಈಡಾಗುವುದಲ್ಲದೇ ಎಲ್ಲರ ಸಮ್ಮುಖದಲ್ಲಿ ಕನ್ನಡ, ಕನ್ನಡಿಗರು ಮತ್ತು ಕರ್ನಾಟಕಕ್ಕೆ ಕೆಟ್ಟ ಹೆಸರು ತರಲು ಕಾರಣೀಭೂತರಾಗುವುದು ನಿಜಕ್ಕೂ ಆಘಾತಕಾರಿಯಾಗಿದೆ.
ಏನಂತೀರೀ?
ನಿಮ್ಮವನೇ ಉಮಾಸುತ