ಬಹುತೇಕರಿಗೆ ಈ ಶೀರ್ಷಿಕೆ ನೋಡಿದ ತಕ್ಷಣವೇ ಇಡೀ ಲೇಖನದ ವಿಷಯ ತಿಳಿಯುತ್ತದೆ ಎಂದು ಭಾವಿಸುತ್ತೇನೆ. ನಮ್ಮ ಭಾರತ ದೇಶದಲ್ಲಿ ಸರಿ ಸುಮಾರು 3,000 ಜಾತಿಗಳು ಮತ್ತು 25,000 ಉಪ-ಜಾತಿಗಳಿದ್ದು ಅವುಗಳಲ್ಲಿ ಹೆಚ್ಚಿನ ಜಾತಿ ಮತ್ತು ಉಪಜಾತಿಗಳು ನಿರ್ದಿಷ್ಟ ಉದ್ಯೋಗಕ್ಕೆ ಅರ್ಥಾತ್ ಅವರು ತಲೆ ತಲಾಂತರದಿಂದಲೂ ಮಾಡಿಕೊಂಡು ಬರುತ್ತಿರುವ ಕೆಲಸದ ಆಧಾರಿತವಾಗಿದೆ ಎಂಬುದು ಗಮನಾರ್ಹವಾಗಿದೆ. ಈ ಹಿಂದೆ ಜಾತಿಗಳಿಗಿಂತಲೂ ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಮತ್ತು ಶೂದ್ರ ಎಂದು ಅವರವರುಗಳು ಮಾಡುವ ಕೆಲಸದ ಆಧಾರಿತವಾಗಿ ವರ್ಣಾಶ್ರಮವು ರೂಢಿಯಲ್ಲಿತ್ತೇ ವಿನಃ ಈಗಿನಂತೆ ಜನ್ಮತಃ ಜಾತಿ ಪದ್ದತಿಯು ರೂಢಿಯಲಿರಲಿಲ್ಲ.
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ತಮ್ಮದೇ ಆದ ಸಂವಿಧಾನವನ್ನು ರಚಿಸಿಕೊಂಡಾಗ ಈ ರೀತಿಯ ಜಾತಿಯ ಆಧಾರದ ಋಣಾತ್ಮಕ ತಾರತಮ್ಯವನ್ನು ಹೋಗಲಾಡಿಸುವ ಸಲುವಾಗಿ ದೀನ ದಲಿತರನ್ನು ಸಮಾಜದ ಮುನ್ನೆಲೆಗೆ ತರುವ ಸಲುವಾಗಿ ಕೇವಲ 10 ವರ್ಷಗಳ ಕಾಲ ಮೀಸಲಾತಿ ಕೊಟ್ಟು ದಲಿತರನ್ನು ಸಾಮಾಜಿಕವಾಗಿ ಮೇಲೆತ್ತುವ ಉತ್ತಮವಾದ ಯೋಜನೆಯನ್ನು ರೂಪಿಸಿತಾದರೂ ಈ ದೇಶವನ್ನು ಆಳಿದ ರಾಜಕಾರಣಿಗಳು ಸ್ವಾತಂತ್ರ್ಯ ಬಂದು ೭೦+ ವರ್ಷಗಳಾದರೂ, ಇಂದಿಗೂ ಅದೇ ಮೀಸಲಾತಿ ಪದ್ದತಿಯನ್ನು ಮುಂದುವರೆಸಿಕೊಂಡು ಬಂದಿದ್ದರೂ, ದಲಿತರು ಇನ್ನೂ ಹಾಗೆಯೇ ಉಳಿದಿದ್ದರೂ, ಬ್ರಾಹ್ಮಣದ ದ್ವೇಷ ಮಾತ್ರಾ ಹಿಂದೆಂದಿಗಿಂತಲೂ ಅತಿಯಾಗಿರುವುದು ನಿಜಕ್ಕೂ ಮಾರಕವೇ ಸರಿ.
ಇತ್ತೀಚೆಗಂತೂ ಹಾದಿ ಬೀದಿಯಲ್ಲಿ ಹೋಗುವವರೆಲ್ಲಾ ಬ್ರಾಹ್ಮಣರನ್ನು ಬೈಯ್ಯುವುದೇ ಒಂದು ಪ್ರತಿಷ್ಟೆಯ ಸಂಕೇತ ಎಂದು ಭಾವಿಸಿಕೊಂಡು ಯಾವುದೇ ರೀತಿಯ ಸಭೆ ಸಮಾರಂಭಗಳು ಇರಲಿ ಅಲ್ಲಿನ ತಮ್ಮ ಬಗ್ಗೆ ಹೇಳ್ಕೊಳ್ಳೋಕ್ಕೆ ಏನೂ ಇಲ್ಲದೇ ಹೋದಾಗಾ, ಅವರ ತಲೆಯಲ್ಲಿ ಥಟ್ ಅಂತಾ ಮೂಡಿಬರುವುದೇ ಬ್ರಾಹ್ಮಣರ ಅವಹೇಳನ. ಈ ತುಪ್ಪಾ ತಿನ್ನುವರಿಂದ ದೇಶ ಹಾಳಾಗಿ ಹೋಗಿದೆ (ಯಾಕೇ? ಬೇರೇ ಜಾತಿಯವರ್ಯಾರೂ ತುಪ್ಪವನ್ನೇ ತಿನ್ನುವುದಿಲ್ಲಲ್ವೇ?). ಸಾವಿರಾರು ವರ್ಷಗಳ ಕಾಲದಿಂದಲೂ ಅವರು ನಮ್ಮನ್ನು ತುಳಿದಿದ್ದಾರೆ ಎಂದು ಓತಪ್ರೋತವಾಗಿ ಮಾತನಾಡುವವರ ಬಳಿ, ಸ್ವಾಮೀ ಕಳೆದ 200-300 ವರ್ಷಗಳಲ್ಲಿ ಬ್ರಾಹ್ಮಣರು ದಬ್ಬಾಳಿಕೆ ನಡೆಸಿ ಆವರಿಂದ ಹಾಳಾಗಿ ಹೋದ ಒಂದೇ ಒಂದು ಪ್ರಕರಣವನ್ನು ತೋರಿಸಿ ಎಂದು ಎದ್ದು ನಿಂತು ಕೇಳಿದರೆ ಹೇಳಲು ಬೆಬ್ಬೆಬ್ಬೆ ಎಂದು ತಡವರಿಸಿದರೆ, ಅವರ ಸುತ್ತಲೂ ಇರುವ ವಂಧಿಮಾಗದರೂ ಕೂಡಲೇ ಆ ರೀತಿಯಾಗಿ ಧೈರ್ಯದಿಂದ ಪ್ರಶ್ನಿಸಿದವರ ಸುತ್ತಮುತ್ತಲೂ ಠಳಾಯಿಸಿಕೊಂಡು ವಾಚಾಮಗೋಚರವಾಗಿ ಬೈಯ್ಯುತ್ತಾ ದೈಹಿಕ ಹಲ್ಲೆಯನ್ನು ಮಾಡುವ ಪ್ರಕರಣಗಳು ಈಗ ನಿತ್ಯಕರ್ಮವಾಗಿದೆ.
ಹಿಂದಿನಿಂದಲೂ ತಮ್ಮ ಪಾಂಡಿತ್ಯದಿಂದ ರಾಜನನ್ನು ಮೆಚ್ಚಿಸಿ ಅವರಿಂದ ಉಂಬಳಿಯಾಗಿ ಪಡೆದಿದ್ದ ಜಮೀನುಗಳನ್ನು ಆಳು ಕಾಳುಗಳೊಂದಿಗೆ ನೋಡಿಕೊಳ್ಳುತ್ತಾ ರಾಮಾ ಕೃಷ್ಣಗೋವಿಂದಾ ಎಂದು ಭಗವಂತನ ಧ್ಯಾನ ಮಾಡುತ್ತಾ ಪುರದ ಹಿತವನ್ನು ಕಾಯುವ ಪುರೋಹಿತರಾಗಿ, ಶ್ಯಾನುಭೋಗರಾಗಿ ಇದ್ದದ್ದರಲ್ಲಿಯೇ ಸುಖಃವನ್ನು ಕಾಣುತ್ತಿದ್ದವರೇ ಬ್ರಾಹ್ಮಣರು. ಎಪ್ಪತ್ತರ ದಶಕದಲ್ಲಿ ಸರ್ಕಾರ ತಂದ ಉಳುವವನೇ ರೈತ ಎಂಬ ನಿಯಮದಡಿಯಲ್ಲಿ ರಾತ್ರೋ ರಾತ್ರಿ ಇದ್ದ ಬದ್ದ ಜಮೀನುಗಳನ್ನೆಲ್ಲಾ ಕಳೆದು ಕೊಂಡರೂ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಸ್ವೀಕರಿಸಿ ತಮಗೆ ತಿಳಿದಿದ್ದ ದೇವರ ಪೂಜೆ, ಆಡುಗೆ ಕೆಲಸ ಮಾಡಿಕೊಂಡು ಜೀವಿಸತೊಡಗಿದರು. ನಂತರದ ದಿನಗಳಲ್ಲಿ ಅವರ ಮಕ್ಕಳು ಕಷ್ಟ ಪಟ್ಟು ಶ್ರಮವಹಿಸಿ ಯಾವುದೇ ಮೀಸಲಾತಿಯ ಭಾಗ್ಯವೂ ಇಲ್ಲದೇ ಇದ್ದರೂ ಕೇವಲ ತಮ್ಮ ಇಚ್ಚಾಶಕ್ತಿಯಿಂದಾಗಿ ಚೆನ್ನಾಗಿ ಓದಿ ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿದರೆ ಇನ್ನೂ ಕೆಲವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಗಳಿಗೆ ಹೋಗಿ ಮತ್ತೆ ಅಲ್ಲಿ ತಮ್ಮ ಪಾಂಡಿತ್ಯಕ್ಕೆ ತಕ್ಕಂತೆ ಅರ್ಹತೆಯಾಧಾರಿತವಾಗಿ ಕೆಲಸಗಳನ್ನು ಗಿಟ್ಟಿಸಿಕೊಂಡಿದ್ದಾರೆ.
ಇಂದಿಗೂ ಸಹಾ ಪ್ರಪಂಚದ ಅತ್ಯಂತ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯ ಹುದ್ದೆಯಲ್ಲಿ ಇರುವ ಬಹುತೇಕರು ಬ್ರಾಹ್ಮಣರೇ. ಅದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅವರ್ಯಾರೂ ಸಹಾ ಸರ್ಕಾರದಿಂದ ಯಾವುದೇ ರೀತಿಯ ಮೀಸಲಾತಿಯ ಸೌಲಭ್ಯವನ್ನು ಪಡೆಯದೇ, ಯಾರ ಮುಂದೆಯೂ ದೈನೇಸಿಯಾಗಿ ಬೇಡದೇ, ಯಾವುದೇ ಧರ್ಮ,ಜಾತಿ, ವರ್ಣವನ್ನೂ ಹಳಿಯದೇ ತಮ್ಮ ಸ್ವಸಾಮಥ್ಯದ ಮೇಲೆ ಅಂತಹ ಉನ್ನತ ಮಟ್ಟದ ಹುದ್ದೆಗೆ ಏರಿದ್ದಾರೆ. ಇಷ್ಟೆಲ್ಲಾ ವಿಷಯಗಳು ತಿಳಿದಿದ್ದರೂ ನವಿಲು ನೋಡಿ ಕೆಂಭೂತ ಹೊಟ್ಟೆಯನ್ನು ಉರಿದುಕೊಂಡಂತೆ ವಿನಾ ಕಾರಣ ಬ್ರಾಹ್ಮಣರನ್ನು ನಿಂದಿಸುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ಬ್ರಾಹ್ಮಣರನ್ನು ನಿಂದಿಸಲು ಇತ್ತೀಚೆಗೆ ಕಂಡು ಕೊಂಡಿರುವ ಮತ್ತೊಂದು ಹೊಸಾ ಟ್ರೆಂಡ್ ಎಂದರೆ ತಟ್ಟೇ ಕಾಸು. ಬ್ರಾಹ್ಮಣರು ತಟ್ಟೇ ಕಾಸಿನ ಆಸೆಗಾಗಿ ಜನರನ್ನು ಮರಳು ಮಾಡಿ ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾರೆ. ಅದಕ್ಕೆ ಪೂರಕ ಎಂಬಂತೆ ಜ್ಯೋತಿಬಾ ಪುಲೆಯವರು ಜನ್ಮಕುಂಡಲಿಯನ್ನು ಬರೆಯುವವರು ಅವರೇ, ಅದನ್ನು ವಿವರಿಸಿ ಹೇಳುವವರು ಅವರೇ. ಕುಂಡಲಿಯಲ್ಲಿ ದೋಷ ಇದೆ ಎನ್ನುವವರು ಅವರೇ, ಅದಕ್ಕೆ ಪರಿಹಾರವನ್ನು ಸೂಚಿಸುವವರು ಅವರೇ, ಇದು ಅವರ ಜ್ಞಾನ ಅಲ್ಲಾ ಇದು ಜನರ ಅಜ್ಞಾನ ಎಂದು ಪರೋಕ್ಷವಾಗಿ ಬ್ರಾಹ್ಮಣರನ್ನು ಹೀಯ್ಯಾಳಿಸುತ್ತಾರೆ. ನಿಜ ಹೇಳಬೇಕು ಎಂದರೆ, ಇಡೀ ದೇಶದಲ್ಲಿರುವ ಹಿಂದೂಗಳ ಮನೆಯಲ್ಲಿ ಹುಟ್ಟು ಸಾವು, ಶುಭ ಮತ್ತು ಅಶುಭ ಸಮಾಚಾರಗಳಿಗೆ ಒಳ್ಳೆಯ ಲಗ್ನ ಇಟ್ಟು ಕೊಡುತ್ತೇವೆ ಎಂದು ಬ್ರಾಹ್ಮಣರು ಯಾರೂ ಹೋಗಿಲ್ಲ ಮತ್ತು ಹೋಗುವುದೂ ಇಲ್ಲ. ಜ್ಯೋತಿಷ್ಯ ಶಾಸ್ತ್ರ ಮತ್ತು ಖಗೋಳ ಶಾಸ್ತ್ರ ಎನ್ನುವುದು ವಿಜ್ಞಾನದಷ್ಟೇ ಕರಾರುವಾಕ್ ಆದ ವಿದ್ಯೆಯಾಗಿದ್ದು. ಇಲ್ಲೇ ಕುಳಿತು ಪಂಚಾಂಗ ಹಿಡಿದು ಗ್ರಹಗತಿಗಳ ಸಂಚಲನದ ಲೆಖ್ಖಾಚಾರ ಮಾಡಿ, ವಿವಿಧ ಗ್ರಹಗಳಿಂದ ಅವರಿಗೆ ಆಗಬಹುದಾದ ಗೋಚಾರ ಫಲವನ್ನು ವಿವರಿಸಿ ಮುಂದಾಗಬಹುದಾದ ಅವಫಡಗಳನ್ನು ಮುನ್ನೆಚ್ಚರಿಕೆಯಾಗಿ ಎಚ್ಚರಿಸುತ್ತಾರೆ. ಇದನ್ನು ನಂಬುವುದು ಬಿಡುವುದು ಜನರ ಇಷ್ಟ ಕಷ್ಟಗಳಾಗಿವೆ. ಈಗಂತೂ ಅಬ್ರಾಹ್ಮಣರೂ ಜ್ಯೋತಿಷ್ಯ, ಸಂಖ್ಯಾಶಾಸ್ತ್ರಗಳನ್ನು ಕಲಿತು ದೊಡ್ಡ ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿರುವಾಗ ಕೇವಲ ಬ್ರಾಹ್ಮಣರನ್ನೇ ಹಳಿಯುವುದು ಎಷ್ಟು ಸರಿ?
ಇನ್ನೂ ಕೆಲವರು ಉಡುಪಿ ಕೃಷ್ಣ ಮಠ ಮತ್ತು ಧರ್ಮಸ್ಥಳದಲ್ಲಿ ಊಟದಲ್ಲಿ ಪಂಕ್ತಿ ಭೇದ ಇದೆ. ಅಲ್ಲಿ ಬ್ರಾಹ್ಮಣರಿಗೆಂದೇ ಪ್ರತ್ಯೇಕವಾದ ಊಟಹಾಕುವ ಪದ್ದತಿ ಇದೆ. ಹಾಗಾಗಿ ಈ ದೇಶ ಉದ್ದಾರ ಆಗ್ತಾ ಇಲ್ಲಾ ಎಂದು ಗಂಟಲು ಹರಿಯುವಷ್ಟು ಗಂಟೆ ಗಟ್ಟಲಿ ಕೂಗಾಡುವವರೂ ಇದ್ದಾರೆ. ನಿಜ ಹೇಳಬೇಕೆಂದರೆ, ಅಲ್ಲಿ ಸಾಮಾನ್ಯ ಪಂಕ್ತಿ ಮತ್ತು ಬ್ರಾಹ್ಮಣರ ಪಂಕ್ತಿಯಲ್ಲಿ ಬಡಿಸುವ ಪ್ರಸಾದ ಒಂದೇ ಆಗಿದ್ದು, ಭಕ್ತಾದಿಗಳಿಗೆ ಅನುಕೂಲವಾಗಲಿ ಎಂದು ದೇವರ ಮಹಾಮಂಗಳಾರತಿಗೂ ಮುನ್ನವೇ ಪ್ರಸಾದದ ವ್ಯವಸ್ಥೆಯಾಗಿರುತ್ತದೆ. ಅದೇ ಬ್ರಾಹ್ಮಣರ ಪಂಕ್ತಿಯಲ್ಲಿ ದೇವರಿಗೆ ನೈವೇದ್ಯ ಮಾಡಿ ಮಹಾಮಂಗಳಾರತಿ ಮಾಡಿದ ನಂತರ ಪ್ರಸಾದವನ್ನು ಬಡಿಸಲಾಗುತ್ತದೆ. ಹಾಗೆ ಅಲ್ಲಿ ಪದಾರ್ಥಗಳನ್ನು ಬಡಿಸಿದ ತಕ್ಷಣವೇ ತಿನ್ನಲು ಆಸ್ಪದವಿಲ್ಲದೇ, ಮಾಡಿದ ಎಲ್ಲಾ ಅಡುಗೆಗಳನ್ನು ಎಲೆಗೆ ಬಡಿ ನಂತರ ಭಗವಂತನ ನಾಮ ಸ್ಮರಣೆ ಮಾಡಿದ ನಂತರವೇ ಎಲ್ಲರೂ ಒಟ್ಟಿಗೆ ಪ್ರಸಾದ ಸ್ವೀಕರಿಸುವ ಸಂಪ್ರದಾಯವಿದೆ. ಬಹಳ ಹಿಂದೆ ಹೀಗೆಯೇ ಪಂಕ್ತಿ ಭೋಜನದ ಬಗ್ಗೆ ಆಡಿಕೊಳ್ಳುತ್ತಿದ್ದ ಅಬ್ರಾಹ್ಮಣರೊಬ್ಬರನ್ನು ಪಂಕ್ತಿಯ ಭೋಜನಕ್ಕೆ ಕರೆದುಕೊಂಡು ಹೋಗಿದ್ದಾಗ ಅಲ್ಲಿಯ ರೀತಿ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಕಂಡು ಬೆಚ್ಚಿಬಿದ್ದು, ಅಪ್ಪಾ ಸ್ವಾಮ್ಮೀ ನಿಮ್ಮ ಊಟ ನಿಮಗೇ ಇರಲಿ ಎಂದು ಹೇಳಿದ್ದೂ ಇನ್ನೂ ಹಚ್ಚ ಹಸಿರಾಗಿಯೇ ಇದೆ.
ಪಂಕ್ತಿ ಬೇಧದ ಬಗ್ಗೆ ಮಾತನಾಡುವರ ಬಳಿ, ಸರಿ ಸ್ವಾಮೀ, ಪಂಕ್ತಿ ಬೇಧದಿಂದ ಈ ದೇಶ ಹಾಳಾಗುತ್ತಿದೆ ಎಂದಲ್ಲಿ ನಾವು ಪಂಕ್ತಿ ಬೇಧವನ್ನು ಬಿಟ್ಟು ಬಿಡಲು ಸಿದ್ದ. ಅದೇ ಜಾತಿಯಾಧಾರಿತ ಮೀಸಲಾತಿಯಿಂದಾಗಿ 35% ಅಂಕಗಳನ್ನು ಪಡೆದವರು ಶಿಕ್ಷಣದಿಂದ ಹಿಡಿದು, ಸರ್ಕಾರಿ ನೌಕರಿಯನ್ನು ಗಿಟ್ಟಿಸುವುದು ನಂತರ ಸೇವಭಡ್ತಿಯಲ್ಲೂ ಮೀಸಲಾತಿ ಪಡೆಯುತ್ತಾ 90% ಅಂಕಗಳನ್ನು ಪಡೆದು ನಿಜವಾಗಿಯೂ ಅರ್ಹರಾದವರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ನಿಲ್ಲಿಸುವಿರಾ? ಎಂದು ಪ್ರಶ್ನೆ ಕೇಳಿದ ಕೂಡಲೇ, ನೀನು ಮನುವಾದಿ, ನೀನು ಸಂಘೀ, ಎಂದು ಬೈಯ್ದಾಡುತ್ತಾರೆಯೇ ಹೊರತು, ಹೌದು ನಾವುಗಳು ಸಹಾ ಯಾವುದೇ ಮೀಸಲಾತಿಯ ಹಂಗಿಲ್ಲದೇ, ಚನ್ನಾಗಿ ಓದಿ ನಮ್ಮ ಸ್ವಸಾಮರ್ಧ್ಯದಿಂದ ಅರ್ಹತೆಯ ಆಧಾರದ ಮೇಲೆ ಎಲ್ಲರೊಂದಿಗೂ ಸ್ಪರ್ಧೆ ಮಾಡುತ್ತೇವೆ ಎಂಬ ಸವಾಲನ್ನು ಹಾಕಲು ಮುಂದಾಗದೇ ಇರುವುದು ಶೋಚನೀಯವೇ ಸರಿ.
ಈ ದೇಶದಲ್ಲಿ ಸದ್ಯಕ್ಕೆ ಕೇವಲ 2-3% ಜನ್ಮತಃ ಬ್ರಾಹ್ಮಣರು ಇದ್ದಾರೆ. ಅದರಲ್ಲಿ ನಿಜವಾಗಿಯೂ ಬ್ರಹ್ಮತ್ವದ ಆಚಾರ ವಿಚಾರಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವವರನ್ನು ಎಣಿಕೆ ಹಾಕಿದಲ್ಲಿ ಕೆಲವೇ ಕೆಲವು ಬ್ರಾಹ್ಮಾಣರು ಸಿಗುತ್ತಾರೆ ಅಷ್ಟೇ. ಬ್ರಾಹ್ಮಣರಲ್ಲಿಯೂ ಅತ್ಯಂತ ಕಡು ಬಡವರು ಇದ್ದಾರೆ. ಇಂದಿಗೂ ಸಹಾ ದೆಹಲಿಯ ಕೆಲವು ಸುಲಭ್ ಶೌಚಾಲಯದ ನಿರ್ವಹಣೆಯನ್ನು ಬ್ರಾಹ್ಮಣರೇ ಮಾಡುತ್ತಿರುವ ಸುದ್ದಿ ರಾಷ್ಟೀಯ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಕಳೆದ 300-400 ವರ್ಷಗಳಲ್ಲಿ ಪ್ರಪಂಚಾದ್ಯಂತ ಬ್ರಾಹ್ಮಣರಿಂದ ಯಾವುದೇ ದಬ್ಬಾಳಿಕೆಯಾಗಲೀ ಭಯೋತ್ಪಾದನೆಯಾಗಲೀ ನಡೆದಿಲ್ಲದಿರುವಾಗ ವಿನಾಕಾರಣ ಬ್ರಾಹ್ಮಣರ ವಿರುದ್ಧ ಈ ಪರಿಯಾಗಿ ಹರಿಹಾಯುವುದು ಎಷ್ಟು ಸರಿ?
ವಿದ್ಯೆ ಬುದ್ಧಿ ಅಧಿಕಾರ ಯಾವುದೇ ಧರ್ಮ ಅಥವಾ ಜಾತಿಯ ಸ್ವತ್ತಲ್ಲ. ಸತತ ಸಾಧನೆ ಮತ್ತು ಕಠಿಣ ಪರಿಶ್ರಮದಿಂದ ಯಾರು ಬೇಕಾದರೂ ಏನನ್ನಾದರೂ ಸಾಧಿಸಬಹುದಾಗಿದೆ. ಎನ್ನುವುದಕ್ಕೆ ಲಾಲ್ ಬಹದ್ದೂರ್ ಶಾಸ್ತ್ರೀ, ಫುಲೆ, ನಾರಾಯಣ ಗುರುಗಳು, ರೆವರೆಂಡ್ ಕಿಟ್ಟಲ್, ಅಂಬೇಡ್ಕರ್, ಅಬ್ದುಲ್ ಕಲಾಂ ಅಂತಹವರೇ ಸಾಕ್ಷಿ. ಇಂತಹ ಮಹನೀಯರನ್ನೆಲ್ಲಾ ನಾವು ಪ್ರಾರ್ಥಸ್ಮರಣೀಯರೆಂದೇ ಆದರಿಸುತ್ತೇವೆ. ಶೃಂಗೇರೀ ಜಗದ್ಗುರುಗಳು ಮತ್ತು ಉಡುಪಿಯ ಪೇಜಾವರ ಶ್ರೀಗಳನ್ನು ಅದರಿಸುವಷ್ಟೇ ಗುರುಭಕ್ತಿಯಿಂದ ಸಿದ್ದಗಂಗಾ ಶ್ರೀಗಳು ಮತ್ತು ಬಾಲಗಂಗಾಧರನಾಥ ಸ್ವಾಮೀಗಳನ್ನು ಪೂಜಿಸುವಾಗ ವಿನಾಕಾರಣ ಜಾತಿ ಜಾತಿಗಳ ಮಧ್ಯೆ ತಾರತಮ್ಯವೇಕೆ?
ಬ್ರಾಹ್ಮಣರೂ ಈ ದೇಶದವರೇ ಆಗಿರುವಾಗ ಅವರಿಗೂ ಈ ದೇಶದಲ್ಲಿ ಇರುವ ಹಕ್ಕಿರುವಾಗ, ಭಾರತೀಯನೇ ಅಲ್ಲದ ವ್ಯಕ್ತಿಯೊಬ್ಬ ಎಲ್ಲದರಲ್ಲೂ ವೈದೀಕ ಪರಂಪರೆ ಎನ್ನುತ್ತಾ ಈ ಬ್ರಾಹ್ಮಣ್ಯತ್ವವನ್ನು ನಾಶ ಮಾಡುವುದೇ ನನ್ನ ಗುರಿ ಎಂದು ಅಬ್ಬರಿಸುವಾಗ, ಹಚ್ಚಾ ಎಂದು ಅಂತಹವನನ್ನು ಓಡಿಸುವ ಬದಲು ಆತನನ್ನು ಸಮರ್ಥನೆ ಮಾಡುತ್ತಿರುವುದು ನಮ್ಮ ಜನರ ಬೌದ್ಧಿಕ ದೀವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗದು.
ದಿನ ಬೆಳಗಾದರೆ, ಈ ದೇಶದ ನಾನಾ ಮಠದ ಸ್ವಾಮೀಜಿಗಳು ಬೀದಿಗಿಳಿದು ನಮ್ಮ ಜನಾಂಗಕ್ಕೆ ಮೀಸಲಾತಿ ಕೊಡಿ ಇಲ್ಲದೇ ಹೋದಲ್ಲಿ ನಾವು ಚುನಾವಣೆಯಲ್ಲಿ ನಿಮ್ಮ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂಬ ಬ್ಲಾಕ್ಮೇಲ್ ಮಾಡುತ್ತಿರುವುದನ್ನು ನೋಡಿದಾಗ ಬ್ರಾಹ್ಮಣ ಮಠದ ಯಾವುದೇ ಸ್ವಾಮಿಗಳು ಈ ರೀತಿಯಾದ ಮೀಸಲಾತೀ ಹೋರಾಟಕ್ಕೆ ಇಳಿದಿರುವ ಉದಾಹರಣೆ ಇದೆಯೇ? ಈ ರೀತಿಯಾಗಿ ವಿವಿಧ ಮಠಾಧಿಪತಿಗಳಿಗೆ ಮಣಿದು ಮೀಸಲಾತಿ ಕೊಡುತ್ತಲೇ ಹೋದಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಮೀಸಲಾತಿ 100% ಆಗುತ್ತದೆ. ಹಾಗೆ 100% ಮೀಸಲಾಗಿ ಆದ ಮೇಲೆ ಮೀಸಲಾತಿ ಎನ್ನುವ ವ್ಯವಸ್ಥೆಗೆ ಅರ್ಥವೇ ಇರುವುದಿಲ್ಲ. ಒಮ್ಮೆ ಕೊಟ್ಟ ಮೇಲೆ ಹಿಂದೆ ಪಡೆಯಲು ಆಗುವುದಿಲ್ಲ ಮತ್ತು ಮೀಸಲಾತಿ ಮುಂದುವರೆಸಲೂ ಆಗದಂತಹ ಪರಿಸ್ಥಿತಿಗೆ ಬರಬಹುದು.
ನಿಜ ಹೇಳಬೇಕೆಂದರೆ, ಈ ಮೀಸಲಾತಿಯನ್ನು ದೇಶದಿಂದ ಸಮಗ್ರವಾಗಿ ಮತ್ತು ಸಂಪೂರ್ಣವಾಗಿ ತೆಗೆದುಹಾಕಿ, ವಯಕ್ತಿಕ ಅರ್ಹತೆ ಮತ್ತು ಸಾಧನೆಯೇ ಮಾನದಂಡವಾದಾಗಲೇ ಈ ರೀತಿಯ ವಿನಾಕಾರಣ ಜಾತಿ ನಿಂದನೆಗಳು ನಿಂತುಹೋಗಿ ದೇಶದ ಅಭಿವೃದ್ಧಿಗೂ ಹೆಚ್ಚು ಪೂರಕವಾಗುತ್ತದೆ ಎನ್ನುವುದೇ ಎಲ್ಲರ ಅಭಿಪ್ರಾಯವಾಗಿದೆ. ಶ್ರಮದಿಂದ ಜ್ಞಾನದ ಮೇಧಾವಿತನದಿಂದ ಬದುಕಬೇಕೆ ವಿನಃ ಜ್ಞಾನವನ್ನು ಅಂಧಕಾರ ಮಾಡುವ ಈ ರಾಜಕೀಯದ ಪ್ರೇರಿತವಾದ ಮೀಸಲಾತಿ ಎಂಬ ಸೊಗಲಾಡಿ ಪದದಿಂದಲ್ಲ ಅಲ್ವೇ? ಬೈಯ್ಯಿಸಿಕೊಳ್ಳುವುದಕ್ಕೆ ಬ್ರಾಹ್ಮಣರು ಏನು ಬಿಟ್ಟಿ ಬಿದ್ದಿದ್ದಾರೆಯೇ?
ಏನಂತೀರೀ?
ನಿಮ್ಮವನೇ ಉಮಾಸುತ