ಸಾಧಾರಣವಾಗಿ ಡಿಸೆಂಬರ್ ತಿಂಗಳು ಅಂತ್ಯ ಬಂದಿತೆಂದರೆ ಬಹಳಷ್ಟು ದುಗುಡಗಳು ಕಾಣಿಸಿಕೊಳ್ಳುತ್ತವೆ. ಅದೇಕೋ ಏನೋ? ಅನೇಕ ಜನಪ್ರಿಯ ವ್ಯಕ್ತಿಗಳು ಡಿಸೆಂಬರ್ ಮಾಸಾಂತ್ಯಕ್ಕೆ ತಮ್ಮ ಬದಕನ್ನು ಅಂತ್ಯ ಗೊಳಿಸಿದ್ದಾರೆ. ಕನ್ನಡದ ಜನಪ್ರಿಯ ನಟ ವಿಷ್ಣುವರ್ಧನ್, ಪ್ರಖ್ಯಾತ ಗಾಯಕ ಸಿ ಅಶ್ವತ್ ಅಲ್ಲದೇ ವಿದೇಶಿಗರಾದ ಸ್ಯಾಮ್ಯುಯೆಲ್ ಡಿ ಚಾಂಪ್ಲೈನ್, ಹಾಸ್ಯ ನಟ ಚಾರ್ಲಿ ಚಾಪ್ಲಿನ್, ಬಿಲ್ಲಿ ಮಾರ್ಟಿನ್, ನಿಕೋಲೇ ಸಿಯುಸೆಸ್ಕು, ಡೀನ್ ಮಾರ್ಟಿನ್, ಜೇಮ್ಸ್ ಬ್ರೌನ್, ಜಾರ್ಜ್ ಮೈಕೆಲ್.. ಹೀಗೆ ಹೇಳ್ತಾ ಹೋದ್ರೇ ಪಟ್ಟಿ ದೊಡ್ಡದಾಗುವಷ್ಟು ಪ್ರಖ್ಯಾತರು ಡಿಸೆಂಬರ್ ತಿಂಗಳಲ್ಲಿ ನಿಧರಾಗಿದ್ದರೆ, ಈಗ ಅ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿ ವಿಶ್ವ ಫುಟ್‌ಬಾಲ್ ಆಟದ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ತನ್ನ ತಾಯ್ನಾಡು ಬ್ರೆಜಿಲ್ ದೇಶಕ್ಕೆ 3 ಬಾರಿ ವಿಶ್ವಕಪ್‌ಗಳನ್ನು ಗೆದ್ದು ಕೊಟ್ಟಿದ್ದ ಖ್ಯಾತ ಆಟಗಾರ ಪೀಲೆ ತನ್ನ 82ನೇ ವಯಸ್ಸಿನಲ್ಲಿ ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. 2021ರಿಂದಲೂ ಕ್ಯಾನ್ಸರ್ ಖಾಯಿಲೆಗಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಪೀಲೆಯ ಆರೋಗ್ಯದ ಬಗ್ಗೆ ಕಳವಳಕಾರಿಯಾದ ಸುದ್ದಿ ಕಳೆದ ಒಂದು ವಾರದಿಂದಲೇ ಪ್ರಕಟವಾಗುತ್ತಿದ್ದ ಈಗ್ಗೆ ಮೂರ್ನಾಲ್ಕು ದಿನಗಳ ಹಿಂದೆಯೇ ಪೀಲೆ ಇನ್ನಿಲ್ಲಾ.. ಎಂಬ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈಗ ಡಿಸೆಂಬರ್ 29ರಂದು ಅವರ ನಿಧನವನ್ನು ಅಧಿಕೃತವಾಗಿ ಘೋಶಿಸಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.
ಸರ್ವೇ ಸಾಮಾನ್ಯವಾಗಿ ಬಹುತೇಕ ವೇಗವಾಗಿ ಆಡುವ ಆಟಗಳ ಆಟಗಾರರನ್ನು ಸುಲಭವಾಗಿ ಗುರುತಿಸುವಂತಾಗಲೂ ಪ್ರತಿಯೊಬ್ಬ ಆಟಗಾರರಿಗೆ ಒಂದೊಂದು ಸಂಖ್ಯೆ ಕೊಟ್ಟಿರುತ್ತಾರೆ. ಅದೇ ರೀತಿ ಪುಟ್ಬಾಲ್ ಆಟದಲ್ಲೂ ಪ್ರತೀ ತಂಡವೂ ಜರ್ಸಿ #10ನ್ನು ತನ್ನ ತಂಡದ ಅತ್ಯಂತ ಪ್ರಮುಖ ಮತ್ತು ಅತ್ಯುತ್ತಮ ಆಟಗಾರರಿಗೆ ಮೀಸಲಾಗಿರುಸುತ್ತದೆ. ಅದರಲ್ಲೂ ಪ್ಲೇಮೇಕರ್ ಅಥವಾ ಆಕ್ರಮಣಕಾರಿ ಮಿಡ್‌ಫೀಲ್ಡರ್‌ಗೆ ತನ್ನ ಆಟದ ಮೂಲಕ ತಂಡಕ್ಕೆ ಹೆಚ್ಚು ಹೆಚ್ಚು ಗೋಲು ಗಳಿಸುವ ಆಟಗಾರನಿಗೆ ಜರ್ಸಿ #10 ಮೀಸಲಾಗಿದ್ದು ಫುಟ್ಬಾಲ್ ಜಗತ್ತಿನ ಅಸಾಧಾರಣ ಆಟಗಾರರಾದ ಪೀಲೆ, ಮರಡೋನಾ, ಮೆಸ್ಸಿಯಲ್ಲದೇ ಇನ್ನೂ ಅನೇಕರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಇದೇ ಸಂಖ್ಯೆಯನ್ನು ಧರಿಸಿರುತ್ತಾರೆ. 1958ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಬ್ರಿಜಿಲ್ ಆಟಗಾರರಿಗೆ ಸೂಕ್ತವಾದ ಶರ್ಟ್ ಸಂಖ್ಯೆಗಳನ್ನು ಕಳಿಸದೇ ಹೋದಾಗ, ತಂಡದ ಪ್ರಮುಖ ಆಟಗಾರ ತನಗೆ ಸಿಕ್ಕ #10 ಸಂಖ್ಯೆಯ ಅಂಗಿಯನ್ನೇ ಹಾಕಿಕೊಂಡು ಇಡೀ ಪಂದ್ಯಾವಳಿಯಲ್ಲಿ ಅಮೋಘವಾಗಿ ಆಟವಾಡಿ ಪಂದ್ಯಾವಳಿಯ ಎರಡನೇ ಅತ್ಯುತ್ತಮ ಆಟಗಾರನಾಗಿ ಸಿಲ್ವರ್ ಬಾಲ್ ಗಳಿಸಿದ ನಂತರ ಜರ್ಸಿ #10 ಪ್ರಾಮುಖ್ಯತೆ ಪಡೆದು ಕೊಂಡಿತು. ಹೀಗೆ ಜರ್ಸಿ #10 ಗೆ ಅತ್ಯಂತ ಪ್ರಾಮುಖ್ಯತೆಯನ್ನು ತಂದು ಕೊಟ್ಟಿದ್ದೇ ಪುಟ್ಬಾಲ್ ಆಟದ ದಂತೆ ಕಥೆ ಪೀಲೆ ಎನ್ನುವುದು ಗಮನಾರ್ಹವಾದ ಸಂಗತಿ.
ಅದೇಕೋ ಏನೋ ಕೊಳೆಗೇರಿಯಲ್ಲಿ ಬಡತನದಲ್ಲಿ ಬೆಳೆಯುವ ಮಕ್ಕಳೇ ಪುಟ್ಬಾಲ್ ಜಗತ್ತಿನ ಪ್ರಮುಖ ಆಟಗಾರರಾಗಿ ಹೊರಹೊಮ್ಮುತ್ತಾರೆ. ಇದೇ ಸಾಲಿಗೆ ಪೀಲೆ ಕೂಡಾ ಸೇರುತ್ತಾರೆ. ಅಕ್ಟೋಬರ್ 23, 1940 ರಂದು ದಕ್ಷಿಣ ಬ್ರೆಜಿಲಿಯನ್ ರಾಜ್ಯದ ಮಿನಾಸ್ ಗೆರೈಸ್‌ನ ಟ್ರೆಸ್ ಕೊರಾಕೋಸ್ ಪಟ್ಟಣದ ಹೆಸರಾಂತ ಪುಟ್ಬಾಲ್ ಆಟಗಾರರಾಗಿದ್ದ ಡೊಂಡಿನ್ಹೋ ಮತ್ತು ಡೊನಾ ಸೆಲೆಸ್ಟ್ ಅರಾಂಟೆಸ್ ದಂಪತಿಗಳಿಗೆ ಜನಿಸಿದ ಮಗನಿಗೆ ಖ್ಯಾತ ವಿದ್ಯುತ್ ಶಕ್ತಿಯನ್ನು ಕಂಡು ಹಿಡಿದಿದ್ದ ಸಂಶೋಧಕ ಥಾಮಸ್ ಅಲ್ವಾ ಎಡಿಸನ್ ನೆನಪಿರಾರ್ಥವಾಗಿ ಎಡಿಸನ್ ಎಂದು ನಾಮಕರಣ ಮಾಡಿದರು. ನಂತರದ ದಿನಗಳಲ್ಲಿ Edison ಎಂಬ ಪದದಲ್ಲಿ “i” ಅನ್ನು ತೆಗೆದುಹಾಕಿ ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ ಎಂದು ಅಧಿಕೃತವಾಗಿ ಹೆಸರಿಟ್ಟರೂ, ಮನೆಯಲ್ಲಿ ಮುದ್ದಿನಿಂದ “ಡಿಕೊ” ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದರು.
ಎಡ್ಸನ್ ಆರಂಭದ ದಿನಗಳು ಅತ್ಯಂತ ಬಡತನದಿಂದ ಕೂಡಿತ್ತು. ಸ್ಥಳೀಯ ಮಟ್ಟದ ಖ್ಯಾತ ಆಟಗಾರರಾಗಿದ್ದ ಅವರ ತಂದೆಯೇ ಆತನ ಮೊದಲ ಗುರು. ಆಟ ಆಡಲು ಸರಿಯಾದ ಚಂಡು ಸಹಾ ಇಲ್ಲದಿದ್ದಂತಹ ಅತ್ಯಂತ ಕೆಟ್ಟ ದುಸ್ಥಿತಿ. ಹಾಗಾಗಿ ತನ್ನ ಅಣ್ಣಂದಿರೊಂದಿಗೆ ಚೀಲದೊಳಗೆ ಹಳೆಯ ವೃತ್ತಪತ್ರಿಕೆ ಮತ್ತು ಚಿಂದಿ ಬಟ್ಟೆಗಳನ್ನು ತುರುಕಿ ಚಂಡಿನಾಕಾರ ಮಾಡಿಕೊಂಡು ಆರಂಭದಲ್ಲಿ ಪುಟ್ಬಾಲ್ ಆಡುತ್ತಾರೆ. ಜೀವನೋಪಯಕ್ಕಾಗಿ ಸ್ಥಳೀಯವಾದ ಚಹಾ ಅಂಗಡಿಯಲ್ಲಿ ಸೇವಕನಾಗಿ ಕೆಲಸ ಮಾಡುತ್ತಾ, ನೋಡ ನೋಡುತ್ತಿದ್ದಂತೆಯೇ ಸ್ಥಳೀಯವಾಗಿ ಉತ್ತಮ ಫುಟ್ಬಾಲ್ ಆಟಗಾರನಾಗಿ ಬೆಳೆದು, ತನ್ನ ಯೌವನದಲ್ಲಿ ಹಲವಾರು ಹವ್ಯಾಸಿ ತಂಡಗಳಿಗೆ ಆಡುತ್ತಾನೆ. ಆತನ ಅತ್ಯುತ್ತಮ ಆಟದಿಂದಾಗಿ ಆತ ಪ್ರತಿನಿಧಿಸುತ್ತಿದ್ದ ಬೌರು ಅಥ್ಲೆಟಿಕ್ ಕ್ಲಬ್ 1954 ಮತ್ತು 1956 ನಡುವೆ ಸತತ ಮೂರು ಸಾವೊ ಪಾಲೊ ರಾಜ್ಯದ ಯುವ ಚಾಂಪಿಯನ್ಶಿಪ್ ಗಳಿಸುತ್ತದೆ.
ಇದೇ ಸಮಯದಲ್ಲೇ ಆತ ಅತ್ಯಂತ ವೇಗವಾಗಿ ತನ್ನ ಎರಡೂ ಕಾಲಿನಿಂದ ಚಂಡುಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದ ಕಾರಣ, ಪೋರ್ಚುಗೀಸ್ ಭಾಷೆಯಲ್ಲಿ, ಕಾಲಿನಿಂದ ಚೆಂಡನ್ನು ಒದೆಯುವುದಕ್ಕೆ ಪೀ ಎಂದು ಕರೆಯುತ್ತಾರೆ. ಹಾಗಾಗಿ ಅವನ ಸಹ ಆಟಗಾರರು ತಮ್ಮತ್ತ ಚಂಡನ್ನು ಒದೆ ಎನ್ನುವುದಕ್ಕೆ ಪೀ ಪೀ.. ಎಂದು ಕರೆಯುತ್ತಿದ್ದವರು ನಂತರ ಪೀ-ಲೆ ಎಂದು ಹೇಳಲು ಆರಂಭಿಸಿದ್ದು ನಂತರದ ದಿನಗಳಲ್ಲಿ ಎಡ್ಸಿನ್ ಹೆಸರು ತನ್ನ ಸಹ ಆಟಗಾರಿಂದಾಗಿ ಪೀಲೇ ಎಂದೇ ಪ್ರಖ್ಯಾತವಾಗುತ್ತದೆ. ಆರಂಭದ ದಿನಗಳಲ್ಲಿ ಎಡ್ಸಿನ್ನಿಗೆ ಆ ಹೆಸರು ಇಷ್ಟವಿಲ್ಲದಿದ್ದರೂ, ನಂತರ ದಿನಗಳಲ್ಲಿ ಪೀಲೇ ಎಂಬ ಹೆಸರಿನಿಂದಲೇ ಆತ ಜಗತ್ ಪ್ರಸಿದ್ಧಿಯಾಗಿದ್ದು ಈಗ ಇತಿಹಾಸ. ಸಾಧಾರಣವಾಗಿ ಬಹುತೇಕರು ಮುಂದಿನಿಂದ ಗೋಲನ್ನು ಹೊಡೆಯುವುದು ಸಹಜ. ಆದರೆ ಪೀಲೇ ಹಿಮ್ಮುಖವಾಗಿ ಹೊಡೆಯುತ್ತಿದ್ದ ಗೋಲು ನಿಜಕ್ಕೂ ಆಕರ್ಷಣೀಯವಾಗಿ ಮುಂದೆ ಅದು ಪೀಲೇ ಶಾಟ್ ಎಂದೇ ಪ್ರಸಿದ್ಧವಾಗಿ ಇಂದಿನ ಬಹುತೇಕ ಆಟಗಾರರು ಅದೇ ರೀತಿಯ ಹೊಡೆತವನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ
ಫುಟ್‌ಬಾಲ್ ಇತಿಹಾಸದಲ್ಲಿ ದಂತಕಥೆಯಾಗುವ ಮೊದಲು ಪೀಲೆ ಬ್ರೆಜಿಲ್ಲಿನ ಸ್ಯಾಂಟೋಸ್ ಕ್ಲಬ್ ಅಲ್ಲದೇ, 1958ರಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ಸ್ವೀಡನ್‌ನಲ್ಲಿ ನಡೆದ ಫುಟ್‌ಬಾಲ್ ವಿಶ್ವಕಪ್ ನಲ್ಲಿ ತಮ್ಮ ರಾಷ್ಟ್ರೀಯ ತಂಡದ ಪರವಾಗಿ ಪದಾರ್ಪಣೆ ಮಾಡಿ ಅಲ್ಲಿಂದ ಸುಮಾರು 2 ದಶಕಗಳ ಕಾಲ ಆಡಿ ತನ್ನ ವೇಗ ಮತ್ತು ಚಾಕಚಕ್ಯತೆಯ ಚಲನೆಯಿಂದಾಗಿ ವಿಶ್ವದ ಕೊಟ್ಯಾಂತರ ಅಭಿಮಾನಿಗಳ ಮನೆ ಮತ್ತು ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದದ್ದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ. ಈ ಮೂಲಕ ಪೀಲೆ ಬ್ರೆಜಿಲ್ಲಿನಲ್ಲಿ ರಾಷ್ಟ್ರೀಯ ಹೀರೋ ಆದ ಮೊದಲ ಕಪ್ಪುಬಣ್ಣದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಪೀಲೆ 1958ರಲ್ಲಿ ತಾನಾಡಿದ ಚೊಚ್ಚಲು ವಿಶ್ವಕಪ್ ಪಂದ್ಯಾವಳಿಯಲ್ಲದ್ದೇ, 1962 ಹಾಗೂ 1972ರಲ್ಲಿ ತನ್ನ ಅಮೋಘವಾದ ಆಟದಿಂದಾಗಿ ಬ್ರೆಜಿಲ್‌ಗೆ ಮೂರು ಬಾರಿ ವಿಶ್ವಕಪ್ ಗೆದ್ದು ಕೊಟ್ಟಿದ್ದಲ್ಲದೇ ಆ ರೀತಿಯ ಖ್ಯಾತಿ ಹೊಂದಿರುವ ಏಕೈಕ ಆಟಗಾರ ಎಂಬ ದಾಖಲೆ ಇಂದಿನವರೆಗೂ ಅವರ ಹೆಸರಿನಲ್ಲಿದೆ.
ಒಟ್ಟು 92 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 77 ಗೋಲುಗಳನ್ನು ಗಳಿಸಿರುವ ಪೀಲೆ, ಇತರೇ ಖಾಸಗಿ ಕ್ಲಬ್‌ಗಳು ಸೇರಿದಂತೆ ಒಟ್ಟು 840 ಪಂದ್ಯಗಳಲ್ಲಿ ಪೀಲೆ 775 ಗೋಲುಗಳನ್ನು ಗಳಿಸಿದ್ದಾರೆ. 100ಕ್ಕೂ ಹೆಚ್ಚು ಬಾರಿ ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಲ್ಲದೇ, ಫುಟ್‌ಬಾಲ್ ಇತಿಹಾಸದಲ್ಲಿ ‘ಕಿಂಗ್’ ಎಂಬ ಹೆಸರನ್ನು ಸಹಾ ಗಳಿಸಿಕೊಂಡಿದ್ದಾರೆ. 1997ರಲ್ಲಿ ಪೀಲೆ ಬ್ರಿಟನ್ ರಾಣಿಯಿಂದ ಪ್ರತಿಷ್ಠಿತ ‘ನೈಟ್’ ಪದವಿಗೂ ಸಹಾ ಭಾಜನರಾಗಿದ್ದರು.
ಪೀಲೆಯವರ ಆಟ ಉತ್ತುಂಗದ ಸ್ಥಿತಿಯಲ್ಲಿದ್ದಾಗ ಅವರ ಖ್ಯಾತಿ ಎಷ್ಟಿತ್ತು ಎಂಬುದಕ್ಕೆ ಈ ಪ್ರಸಂಗವೇ ಸಾಕ್ಷಿಯಾಗಿದೆ. 1967ರಲ್ಲಿ ನೈಜೀರಿಯಾದಲ್ಲಿ ಎರಡು ಬಣಗಳ ನಡುವೆ ಆಂತರಿಕವಾಗಿ ನಡೆಯುತ್ತಿದ್ದ ಯುದ್ಧದ ಕದನ ವಿರಾಮ ಪೀಲೆಯವರ ಮಧ್ಯಸ್ಥಿಕೆಯಲ್ಲಿ ಆದ ನಂತರ ಪೀಲೆಯವರು ಆ ದೇಶದಲ್ಲಿ ಕೆಲವು ಪ್ರದರ್ಶನ ಪಂದ್ಯಗಳನ್ನು ಆಡಿದರು. ಉತ್ತರ ಅಮೆರಿಕಾದಲ್ಲಿ ಪುಟ್ಬಾಲ್ ಆಟವನ್ನು ಜನಪ್ರಿಯಗೊಳಿಸುವ ಸಲುವಾಗಿ ಪೀಲೇ ವಾಷಿಂಗ್ಟನ್‌ಗೆ ಭೇಟಿ ನೀಡಿದಾಗ, ಅಂದಿನ ಅಮೇರಿಕಾದ ಜನಪ್ರಿಯ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ (ನಟರಾಗಿ ಖ್ಯಾತರಾಗಿ ನಂತರ ರಾಜಕೀಯ ಪ್ರವೇಶಿದ್ದರು) ಅವರೇ ಅಲ್ಲಿನ ಜನರ ಸಮ್ಮುಖದಲ್ಲಿ ನನ್ನ ಹೆಸರು ರೊನಾಲ್ಡ್ ರೇಗನ್, ನಾನು ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಎಂದು ಪರಿಚಯಿಸಿಕೊಂಡು, ನಿಮಗೆ ನನ್ನ ಹೆಸರು ಚಿರಪರಿಚಿತವಾಗಿಲ್ಲದೇ ಇರಬಹುದು ಆದರೆ ನನ್ನ ಜೊತೆ ಇರುವ ಈ ವ್ಯಕ್ತಿಯನ್ನು ಅರ್ಥಾತ್ ಪೀಲೆಯವರನ್ನು ಪರಿಚಯಿಸುವ ಅಗತ್ಯ ಇಲ್ಲಾ ಎಂದೆನಿಸುತ್ತದೆ ಎಂದು ಹೇಳಿದ್ದದ್ದು ಪೀಲೆಯವರ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಮೂತ್ರಪಿಂಡ ಹಾಗೂ ಪ್ರಾಸ್ಟೇಟ್ ಸಮಸ್ಯೆಯಿಂದ ಬಳಲುತ್ತಿದ್ದದ್ದಲ್ಲದೇ. 2021ರ ಸೆಪ್ಟೆಂಬರ್‌ನಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೂ ಒಳಗಾಗುವ ಮೂಲಕ ಸುದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು. ಆಗ್ಗಾಗ್ಗೇ ದಿಢೀರ್ ಎಂದು ಸ್ಥಳೀಯ ಆಸ್ಪತ್ರೆಗೆ ಸೇರುತ್ತಿದ್ದದ್ದು ಸಹಜ ಪ್ರಕ್ರಿಯೆ ಆಗಿ ಹೋಗಿತ್ತು. ಕಳೆದ ಒಂದು ವಾರದ ಮುಂಚೆ ಆಸ್ಪತ್ರೆಗೆ ಸೇರಿದಾಗ ಎರಡು ಮೂರು ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪೀಲೆಯವರ ನಿಧನದ ಸುದ್ದಿಯನ್ನು ಬಿತ್ತಿರಿಸಿದ್ದರೂ ಅದು ಅಧಿಕೃತವಾಗಿ ಪ್ರಕಟವಾಗಿರದೇ ಇದ್ದ ಕಾರಣ, ಪ್ರಪಂಚಾದ್ಯಂತ ಇರುವ ಅವರ ಅಭಿಮಾನಿಗಳು ದೇವರೇ ಈ ಸುದ್ದಿ ಸುಳ್ಳಾಗಿರಲಿ, ಪೀಲೇ ನೂರ್ಕಾಲ ಸುಖಃವಾಗಿ ಜೀವಿಸಲಿ ಎಂದು ಪ್ರಾರ್ಥಿಸಿದರೂ, ಅವರ ಪ್ರಾರ್ಥನೆಯು ಫಲಕಾರಿಯಾಗದೇ 2022ರ ಡಿಸೆಂಬರ್ 29ರಂದು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು ಎಂದು ಅವರ ಏಜೆಂಟ್ ಜೋ ಫ್ರಾಗಾ ಅವರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಪೀಲೆ ಅವರ ಅಂತ್ಯಕ್ರಿಯೆ ಎಂದು ಮತ್ತು ಎಲ್ಲಿ ನಡೆಯಲಿದೆ ಎಂಬದರ ಕುರಿತಾಗಿ ಹೆಚ್ಚಿನ ಮಾಹಿತಿ ಇದುವರೆವಿಗೂ ಲಭ್ಯವಾಗಿಲ್ಲ.
ಬ್ರೆಜಿಲ್ಲಿನ ಸಾಮಾನ್ಯ ಕಪ್ಪು ಜನರ ಹೆಮ್ಮೆಯ ಪ್ರತಿನಿಧಿ ತನ್ನ ಆಟದಿಂದಾಗಿ ಇಂದು ಪ್ರಪಂಚಾದ್ಯಂತ ಕೋಟ್ಯಾಂತರ ಜನರ ಮನಸ್ಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಳ್ಳುವ ಮೂಲಕ ಅರ್ಹರಿಗೆ ಎಲ್ಲೆಡೆಯೂ ಸೂಕ್ತವಾದ ಸ್ಥಾನಮಾನ ದೊರೆಯುತ್ತದೆ ಎಂಬುದನ್ನು ಸಾಭೀತು ಪಡಿಸಿದ್ದಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ