ಮೊನ್ನೆ ಮಂಡ್ಯದ ಆತ್ಮೀಯ ಸ್ನೇಹಿತರೊಬ್ಬರು, ಪ್ರತಿ ವರ್ಷದಂತೆ ಈ ವರ್ಷವು ಸಹ ನನ್ನ ಮಗನ ಶಾಲಾವಾರ್ಷಿಕೋತ್ಸದ ನಡೆಯಲಿದ್ದು ಆ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ನೃತ್ಯ ಕಾರ್ಯಕ್ರಮಗಳು ಇದ್ದು ಅದರಲ್ಲಿ ನನ್ನ ಮಗನೂ ಆಯ್ಕೆಯಾಗಿದ್ದಾನೆ. ಸಿನೆಮಾ ಹಾಡಿಗೆ ನೃತ್ಯ ಮಾಡಬೇಕು ಅಂದರೆ, ಒಳ್ಳೆಯ ದೇವರ ಹಾಡು, ಜಾನಪದ ಹಾಡು ಇಲ್ಲವೇ ನೈತಿಕತೆ ಇರುವಂತಹ ಹಾಡಾದರೆ ಸೇರಿಕೋ ಅಂತ ಹೇಳಿದ್ದೆ. ದುರಾದೃಷ್ಟ ಎಂದರೆ ನನ್ನ ಮಗ ಟಗರು ಬಂತು ಟಗರು ಹಾಡಿಗೆ ಆಯ್ಕೆಯಾಗಿರುವುದು ಕೇಳಿ ಬೇಜಾರಾಗಿದೆ. ಒಬ್ಬ ಜವಾಬ್ಧಾರಿ ತಂದೆಯಾಗಿ, ಆತ್ಮಸಾಕ್ಷಿಯ ವಿರುದ್ಧವಾಗಿ ಆ ಹಾಡಿಗೆ ನೃತ್ಯ ಮಾಡಿಸುವುದೋ ಬೇಡವೋ ಎಂಬ ಗೊಂದದಲ್ಲಿದ್ದೇನೆ. ನನ್ನ ಜಾಗದಲ್ಲಿ ನೀವಿದ್ದರೆ ನೀವೇನು ಮಾಡುತ್ತಿದ್ದಿರಿ? ಎಂದು ಅಭಿಪ್ರಾಯ ಕೇಳಿದ್ದರು. ಅದಕ್ಕೆ ಉತ್ತರವಾಗಿ ನಮ್ಮ ಮಕ್ಕಳು ಶಾಲೆಗೆ ಹೋಗುತ್ತಿದ್ದಾಗ ನಾನೂ ಸಹಾ ಇದೇ ಸಮಸ್ಯೆಯನ್ನು ಅನುಭವಿಸಿದ್ದೆ. ಕಡೆಗೆ ಶಾಲೆಯ ಪ್ರಾಂಶುಪಾಲರ ಬಳಿ ಹೋಗಿ ಮಾತನಾಡಿ ನಮ್ಮದೇ ಸೊಗಡಿನ ಹಾಡಿಗೆ ನೃತ್ಯ ಮಾಡಿಸಲು ಒಪ್ಪಿಸಿದ್ದೆ. ನಂತರ ದಿನಗಳಲ್ಲಿ ನಿರಂತರವಾಗಿ ಮಕ್ಕಳ ಶಾಲೆಯೊಂದಿಗೆ ಸಂಪರ್ಕ ಇಟ್ಟು ಕೊಂಡು ಮಕ್ಕಳ ಕೈಯ್ಯಲ್ಲಿ ಬೀಜದುಂಡೆ ಮಾಡಿಸುವುದು, ಸಂಸ್ಕಾರ ಭಾರತಿ ಕಡೆಯಿಂದ ಮಕ್ಕಳಿಗೆ ದೇಶಭಕ್ತರ ಭಾರತ ಭಾರತಿ ಪುಸ್ತಕ ಕೊಡಿಸಿ ಅದರ ಕಥೆ ಹೇಳಿಸುವುದು, ಅಂತರಾಷ್ಟ್ರೀಯ ಯೋಗದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವಗಳಲ್ಲಿ ಅವರ ಜೊತೆ ಭಾಗಿಯಾಗುವ ಮೂಲಕ ಇಡೀ ಶಾಲೆಯನ್ನೇ ನಮ್ಮ ಮಣ್ಣಿನ ಸೊಗಡಿಗೆ ಅನುಗುಣವಾಗಿ ನಡೆದುಕೊಂಡು ಹೋಗುವಂತೆ ಮಾಡಿದ್ದೆವು. ಎಂಬ ಉತ್ತರ ನೀಡಿದ್ದೆ.
ಕಾಕತಾಳೀಯವೋ ಏನೋ ಎನ್ನುವಂತೆ, ಬೆಂಗಳೂರಿನ ಸರ್ಜಾಪುರದ ಬಳಿ ಇರುವ ದೊಮ್ಮಸಂದ್ರದ ಶ್ರೀ ಸರಸ್ವತಿ ವಿದ್ಯಾನಿಕೇತನ ಶಾಲೆಯ 42ನೇ ವಾರ್ಷಿಕೋತ್ಸವ 2022ರ ಡಿಸೆ೦ಬರ್ 30, ಶುಕ್ರವಾರ 4.00 ಘಂಟೆಗೆ ಆಯೋಜಿಸಲಾಗಿರುವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಅದೇ ಶಾಲೆಯ ಕನ್ನಡ ಶಿಕ್ಷಕಿಯವರು ಕಳುಹಿಸಿ ಖಂಡಿತವಾಗಿಯೂ ಕಾರ್ಯಕ್ರಮಕ್ಕೆ ಬರಬೇಕು ಎಂದು ಕೇಳಿಕೊಂಡಿದ್ದರು. ಆ ಶಾಲೆಯ ಬಹುತೇಕ ಶಿಕ್ಷಕರು ನಮ್ಮ ಆಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದೊಮ್ಮಸಂದ್ರ ಘಟಕದ ಸದಸ್ಯರಾಗಿದ್ದು ಕಳೆದ ಮೂರು ವರ್ಷಗಳಿಂದಲೂ ಕೇವೆಲ online ಮುಖೇನ ಪರಿಚಿತವಾಗಿದ್ದ ಕಾರಣ ಎಲ್ಲರಲ್ಲೂ ಮುಖಃತಹ ಭೇಟಿಯಾಗ ಬಹುದು ಎಂಬ ಸದುದ್ದೇಶದಿಂದ ಇದ್ದರೂ, ನಾವಿರುವ ಬೆಂಗಳೂರಿನ ವಿದ್ಯಾರಣ್ಯಪುರದಿಂದ ಮತ್ತೊಂದು ತುದಿಯಾದ ದೊಮ್ಮಸಂದ್ರಕ್ಕೆ ಹೋಗುವುದೋ ಬೇಡವೋ? ಎಂಬ ಜಿಜ್ಞಾಸೆ ಕಾಡಿದರೂ ಅಂತಿಮವಾಗಿ ಹೋಗೇ ಬಿಡುವ ಎಂದು ನಿರ್ಧರಿಸಿ, ಎಂದಿನಂತೆ ಬೆಂಗಳೂರಿನ ಟ್ರಾಫಿಕ್ ದಾಟಿಕೊಂಡು ಶಾಲೆಯ ಆವರಣಕ್ಕೆ ತಲುಪುವಷ್ಟರಲ್ಲಿ ಅರ್ಧಗಂಟೆ ತಡವಾಗಿತ್ತು.
ಶಾಲಾ ವಾರ್ಷಿಕೋತ್ಸವವಲ್ಲವೇ, ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಏನೂ ಆರಂಭವಾಗಿರುವುದಿಲ್ಲಾ ಎಂಬ ಭಾವನೆ ಇಟ್ಟುಕೊಂಡಿದ್ದಲ್ಲಿ ಅದು ಈ ಶಾಲೆಯಲ್ಲಿ ಖಂಡಿತವಾಗಿಯೂ ತಪ್ಪಾಗುತ್ತದೆ. ನಿಗಧಿತ ಸಮಯಕ್ಕೆ 3.50ಕ್ಕೆ ಸೀಟಿ, 3.55ಕ್ಕೆ ಅತಿಥಿಗಳನ್ನು ವೇದಿಕೆಯ ಮೇಲೆ ಕೂರಿಸಿ, 4.00ಗಂಟೆಗೆ ಸರಿಯಾಗಿ ಶಂಖಘೋಷದೊಂದಿಗೆ ಕಾರ್ಯಕ್ರಮ ಆರಂಭಿಸಿಯೇ ಬಿಟ್ಟಿದ್ದರು. ವಿಶೇಷ ಎಂದರೆ ಕಾರ್ಯಕ್ರಮದ ನಂತರ ಅದೇ ಶಾಲೆಯ 10th A ತರಗತಿಯ ಬೋರ್ಡಿನ ಮೇಲೆ ಯಾರು ಸಮಯವನ್ನು ಸರಿಯಾಗಿ ಪಾಲಿಸುತ್ತಾರೋ ಅವರ ಎಲ್ಲಾ ಕೆಲಸಗಳು ಸುಗಮವಾಗಿರುತ್ತದೆ ಎಂಬ ಸರ್ ಎಂ. ವಿಶ್ವೇಶ್ವರಯ್ಯನವರ ಉಲ್ಲೇಖವನ್ನು ಬರೆದಿದ್ದನ್ನು ಗಮನಿಸಿದಾಗ, ಈ ಶಾಲೆಯ ಮಕ್ಕಳು ಹೇಳಿದ್ದನ್ನೇ ಮಾಡ್ತಾರೆ. ಮಾಡುವುದಕ್ಕೆ ಆಗುವುದನ್ನೇ ಹೇಳ್ತಾರೆ ಎಂದು ಅನಿಸಿದ್ದಂತೂ ಸುಳ್ಳಲ್ಲ.
ಎಲ್ಲಾ ಕಾರ್ಯಕ್ರಮದ ಸಹಜ ಪ್ರಕ್ರಿಯೆಯಂತೆ, ಅತಿಥಿಗಳಿಂದ ದೀಪ ಪ್ರಜ್ವಲನೆ, ಭಾರತಮಾತೆಗೆ ಪುಷ್ಪಾರ್ಚನೆ, ಪ್ರಾರ್ಥನೆ, ಸ್ವಾಗತ ನೃತ್ಯ, ಸ್ವಾಗತ ಪರಿಚಯ ಎಲ್ಲವೂ ಮುಗಿದ ನಂತರ ಶಾಲೆಯ ಮಕ್ಕಳಿಂದ ಸಾ೦ಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗುತ್ತದೆ. ಈ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘೋಷಕಿಯವರು ನಮ್ಮ ಈ ಅಮೃತ ಭಾರತ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ ಸುಸ್ವಾಗತ ಎಂದು ಹೇಳಿದಾಗಲೇ ಕಾರ್ಯಕ್ರಮ ಏನೋ ವಿಶೇಷವಾಗಿದೆಯಲ್ಲಾ ಎಂಬ ಕುತೂಹಲ ಮೂಡಿಸಿತು. ನಾವೇ ಬೇರೆ ನಮ್ಮ ಸ್ಟೈಲೇ ಬೇರೆ ಎನ್ನುವಂತೆ ಕಾರ್ಯಕ್ರಮ ಆರಂಭವಾಗಿದ್ದೇ ಶಾಲೆಯ ಶಿಶುವಿಹಾರದ (Nursery ಎನ್ನುವುದಕ್ಕಿಂತಲೂ ಹೆಸರೇ ಎಷ್ಟು ಆಪ್ಯಾಯಮಾನ ಅಲ್ವೇ?) ಮಕ್ಕಳನ್ನು ಸಾಲಾಗಿ ಕೂರಿಸಿ ಅದರಲ್ಲಿ ಆಯ್ದ 42 ಕುಟುಂಬಗಳು ಅದರಲ್ಲೂ ವಿಶೇಷವಾಗಿ ವಯಸ್ಸಾದ ಅಜ್ಜಿ ಮತ್ತು ತಾತ ಅವರನ್ನು ಕುರ್ಚಿಯಮೇಲೆ ಕುಳ್ಳರಿಸಿ ಅವರ ಸುತ್ತಲೂ ಅಪ್ಪಾ ಅಮ್ಮ ಮತ್ತು ಮಕ್ಕಳು ಎಲ್ಲರೂ ಸೇರಿ ನಮ್ಮ ಸಂಸಾರ, ಆನಂದ ಸಾಗರ ಪ್ರೀತಿಯೆಂಬ ದೈವವೇ ನಮಗಾಧಾರ ಆ ದೈವ ತಂದ ವರದಿಂದ ಬಾಳೇ ಬಂಗಾರ ಹಾಡಿಗೆ ನೃತ್ಯ ಮಾಡುವ ಮೂಲಕ ಈ ಕಾರ್ಯಕ್ರಮ ಕೇವಲ ಶಾಲಾ ಮಕ್ಕಳಿಗಷ್ಟೇ ಅಲ್ಲದೇ ಅವರ ಇಡೀ ಕುಟುಂಬದ ಕಾರ್ಯಕ್ರಮವಾಗಿಸಿದ್ದದ್ದು ವಿಶೇಷವಾಗಿತ್ತು. ಆದಾದ ನಂತರ ವಸುದೈವ ಕುಟುಂಬಕಂ ಅರ್ಥಾತ್ ಇಡೀ ವಿಶ್ವವೇ ಒಂದು ಮನೆ ಎನ್ನುವಂತೆ ಹಿರಿಯರ ಸಂಸ್ಜಾರ ಮತ್ತು ಸಂಪ್ರದಾಯದಲ್ಲಿ ಬೆಳೆಯುತ್ತಿರುವ ಮುದ್ದು ಮುದ್ದಾದ ಶಿಶುವಿಹಾರದ ಪುಟಾಣಿ ಮಕ್ಕಳು ನಮ್ಮ ಮನೆ ಇದು ನಮ್ಮ ಮನೆ ನಂದಗೋಕುಲ ನಮ್ಮ ಮನೆ ಎಂಬ ಹಾಡಿಗೆ ನೃತ್ಯ ಮಾಡುವ ಮೂಲಕ ಇಡೀ ಕಾರ್ಯಕ್ರಮಕ್ಕೆ ಉತ್ತಮವಾದ ಆರಂಭವನ್ನು ನೀಡಿದ್ದಂತು ಸುಳ್ಳಲ್ಲ
ಅದಾದ ನಂತರ ಯದಾ ಯದಾ ಹಿ ಧರ್ಮಸ್ಯ ಗ್ಲಾನಿಃ- ಭವತಿ ಭಾರತ | ಅಭ್ಯುತ್ಸಾನಂ ಅಧರ್ಮಸ್ಯ – ತದಾತ್ಮಾನಂ ಸೃಜಾಮ್ಯಹಂ, ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ. ಎಂದು ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ, ಮಹಾವಿಷ್ಣುವಿನ ದಶವತಾರದ 3ನೇ ಅವತಾರವಾದ ವರಾಹ ಅವತಾರದ ನೃತ್ಯವನ್ನು ಶಾಲೆಯ ಭರತನಾಟ್ಯ ವಿದ್ಯಾರ್ಥಿಗಳು ಆರಂಭಿಸಿದಾಗ ಇತ್ತೀಚೆಗೆ ಬಿಡುಗಡೆಯಾಗಿ ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಕನ್ನಡ ಚಿತ್ರ ಕಾಂತಾರದ ಛಾಯೆ ಏನಾದರೂ ಇರಬಹುದಾ? ಎಂದು ಯೋಚಿಸುತ್ತಿದ್ದಂತೆಯೇ ದೈವ ನರ್ತಕ ಗುಳಿಗ ಹೇಳುವ ವಾವ್!! ವಾವ್!! ಹಿನ್ನಲೆಯ ಸದ್ದಿನೊಂದಿಗೆ ಭಗವಾನ್ ವಿಷ್ಣು ವರಹಾನನ್ನು ಸಂಹರಿಸುತ್ತಿದ್ದಂತೆಯೇ, ಉಳಿದ ಮಕ್ಕಳು ಅದೇ ಚಿತ್ರದ ಜನಪ್ರಿಯ ಗೀತೆ ವರಾಹ ರೂಪಂ ಹಾಡಿಗೆ ಈ ರೀತಿಯಲ್ಲೂ ಅತ್ಯಂತ ಮನೋಜ್ಞವಾಗಿ ಮತ್ತು ಅರ್ಥಗರ್ಭಿತವಾಗಿ ನೃತ್ಯ ಮಾಡಬಹುದೇ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಶಾಲೆಯ ಒಂದನೇ ತರಗತಿ ಯಿಂದ ಹಿಡಿದು ಹತ್ತನೇ ತರಗತಿಯವರಗಿನ ಅಯ್ದ ಗಂಡು ಮತ್ತು ಹೆಣ್ಣು ಮಕ್ಕಳು ನೃತ್ಯ ಮಾಡಿದದ್ದು ಕಣ್ಣಿಗೆ ಕಟ್ಟುವಂತಿದ್ದದ್ದಲ್ಲದೇ, ಈ ಮೂಲಕ ಶಾಲೆ ಪ್ರಚಲಿತ ವಿದ್ಯಮಾನದ ಜನಪ್ರಿಯತೆಯನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಎಲ್ಲರಿಗೂ ತಿಳಿಸುವಂತೆ ಮಾಡಿತು ಎಂದರೂ ತಪ್ಪಾಗದು.
ಇಲ್ಲಿಯವರೆಗಿನ ಕಾರ್ಯಕ್ರಮ ಒಂದು ರೀತಿಯಾದರೆ ಅಲ್ಲಿಂದ ಮುಂದಿನ ಕಾರ್ಯಕ್ರಮಗಳು ಮತ್ತೊಂದು ಲೋಕಕ್ಕೆ ಕೊಂಡೊಯ್ಯಿತು ಎಂದರೂ ಅತಿಶಯವಲ್ಲ. ಮುಂದೆ ವ್ಯವಸ್ಥಿತವಾಗಿ ಕ್ರಮವಾಗಿ 1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ಮಕ್ಕಳ ಕಾರ್ಯಕ್ರಮಗಳನ್ನು ಯೋಜಿಸಿದ್ದರು. ಅದರಲ್ಲಿ ಮೊದಲಿಗೆ ಪ್ರಸಕ್ತ ಕಾಲಕ್ಕೆ ಅನುಗುಣವಾಗಿ ಸುಗ್ಗಿ ಹಬ್ಬ ಸಂಕ್ರಾತಿ ಹಬ್ಬಕ್ಕೆ ಸೂಕ್ತವಾಗುವ ತೆಲುಗು ಹಾಡಿನಲ್ಲಿ ಇಡೀ ಅನ್ನದಾತ ರೈತರು ತಮ್ಮ ಹೊಲಗಳಲ್ಲಿ ಉತ್ತಿ, ಬಿತ್ತಿ, ಕಾಲ ಕಾಲಕ್ಕೆ ಅದಕ್ಕೆ ಸೂಕ್ತವಾದ ನೀರು, ಗೊಬ್ಬರಗಳನ್ನು ಹಾಯಿಸಿ ಬೆಳೆ ಬೆಳೆದು ಅವುಗಳನ್ನು ಕಟಾವು ಮಾಡಿ ಕಣದಲ್ಲಿ ತೂರಿ ರಾಶಿ ರಾಶಿ ಕಾಳುಗಳನ್ನು ಒಗ್ಗೂಡಿಸಿ ನಂತರ ಎಲ್ಲರೂ ಸೇರಿ ಒಟ್ಟಾಗಿ ಸುಗ್ಗಿ ಹಬ್ಬವನ್ನು ಆಚರಿಸಿದ ಸಂಜೆ ರಾಸುಗಳ ಕಿಚ್ಚು ಹಾಯಿಸುವ ವರೆಗೂ ಪ್ರಸ್ತುತ ಪಡಿಸಿದ್ದದ್ದು ಅತ್ಯಂತ ಅಪ್ಯಾಯಮಾನವಾಗಿತ್ತು.
ನಂತರ ಶಂಕರಾಭರಂಣಂ ಚಿತ್ರದ ಹಾಡಿಗೆ ಭರತನಾಟ್ಯದ ನಂತರ 2ನೇ ತರಗತಿಯ ಮಕ್ಕಳು ನಾವು ಮಕ್ಕಳು ಮುಂದಿನ ಪ್ರಜೆಗಳು ನಮಗೆ ಒಂದಿಷ್ಟು ಉಳಿಸಿ ಎಂದು ನಿರ್ಮಲ ಗಾಳಿ ನೀರು ಬೆಳಕು ಇಷ್ಟಾದರೂ ನಮಗೆ ಉಳಿಸಿ ಎಂದು ಪರಿಸರ ಕಾಳಜಿಯ ಕುರಿತಾದ ಹಾಡಿಗೆ ನೃತ್ಯ ಕೇವಲ ನೃತ್ಯವಾಗಿರದೇ ನೆರೆದಿದ್ದವರಿಗೆ ಎಗ್ಗಿಲ್ಲದೇ ಪರಿಸರ ಹಾಳು ಮಾಡುತ್ತಿರುವ ವಿರುದ್ಧ ಜಾಗೃತಿ ಮೂಡಿಸಲು ಸಹಕಾರಿಯಾಯಿತು. ಮೋಜುಗಾರ ಸೊಗಸುಗಾರ ಚಿತ್ರದಲ್ಲಿ ಜನಪ್ರಿಯ ನಟ ವಿಷ್ಣುವರ್ಧನ್ ಅವರೇ ಹಾಡಿ ನೃತ್ಯಮಾಡಿರುವ ಕನ್ನಡವೆ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ ಮಾತಾಡೋ.. ದೇವರಿವಳು ನಮ್ಮ ಕಾಪಾಡೋ.. ಗುರು ಇವಳು. ಹಾಡಿಗೆ 3ನೇ ತರಗತಿಯ ಮಕ್ಕಳು ನೃತ್ಯ ಮಾಡುತ್ತಾ ಅಚ್ಚರಿಯಂತೆ ಇದೇ ಡಿಸೆಂಬರ್ 30ರಂದೇ ನಮ್ಮೆಲ್ಲರನ್ನು ಅಗಲಿದ ಡಾ.ವಿಷ್ಣುವರ್ಧನ್ ಅವರನ್ನು ಮತ್ತೆ ನೆನಪಿಸಿ ಕಣ್ಣಂಚಿನಲ್ಲಿ ನಮಗೇ ಅರಿವಿಲ್ಲದಂತೆ ಕಣ್ಣೀರು ಜಿನುಗುವಂತೆ ಮಾಡಿತು.
ರೈತ ಈ ದೇಶದ ಬೆನ್ನೆಲುಬು. ದೇಶ ಕಾಯುವ ಸೈನಿಕ ಮತ್ತು ದೇಶಕ್ಕೆ ಅನ್ನ ನೀಡುವ ರೈತರೇ ನಮ್ಮ ನಿಜವಾದ ನಾಯಕರು ಕೃಷಿತೋ ನಾಸ್ತಿ ದುರ್ಭಿಕ್ಷಂ ಅಂದರೆ ಕೃಷಿಯನ್ನು ನಂಬಿದವರಿಗೆ ಎಂದೂ ದುರ್ಭಿಕ್ಷಬಾರದು. ಅಲ್ಪ ಇಳುವರಿ ನೀಡಿದರೂ ಸಾಂಪ್ರದಾಯಿಕ ಕೃಷಿ ಮಾಡುವ ಮೂಲಕ ಈ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕುವ ಮೂಲಕ ಆಹಾರವನ್ನು ವಿಷಪೂರಿತ ಮಾಡದಿರೋಣ. ಅಭಿವೃದ್ಧಿ ಮತ್ತು ಕೈಗಾರೀಕರಣದ ಹೆಸರಿನಲ್ಲಿ ರೈತರು ತಮ್ಮ ಭೂಮಿಯನ್ನು ಹಣವಂತರಿಗೆ ಮಾರಿದ ನಂತರ ತಮ್ಮದೇ ಭೂಮಿಯಲ್ಲಿ ಮತ್ತೊಬ್ಬರ ಕೈ ಕೆಳಗೆ ಕೂಲಿ ಮಾಡುವ ಪರಿ ಯಾರಿಗೂ ಬಾರದಿರಲಿ ಎಂಬ ಎಚ್ಚರಿಕೆಯ ಮಾತಿನೊಂದಿಗೆ ಆರಂಭವಾಗಿ ನಂತರ ವರನಟ ರಾಜಕುಮಾರ್ ಮತ್ತು ಪ್ರಜ್ಞಾವಂತ ನಟ ಅನಂತ್ ನಾಗ್ ಅಭಿನಯದ, ಸಿ. ಅಶ್ವಥ್ ಅವರ ಕಂಚಿನ ಕಂಠದಲ್ಲಿದ್ದ ಉಳುವಯೋಗಿಯ ನೋಡಲ್ಲಿ ಹಾಡಿನ ನೃತ್ಯ ನೆರೆದಿದ್ದ ಪ್ರೇಕ್ಷರಿಗೂ ರೈತರಾಗಿಯೂ ಉತ್ತಮವಾದ ಜೀವನವನ್ನು ನಡೆಸಬಹುದು ಎಂಬುದನ್ನು ಹೇಳಿದಂತಿತ್ತು.
ಹೇಳಿ ಕೇಳಿ ಕರ್ನಾಟಕ ನಮ್ಮ ಭಾರತದೇಶದ ಜಾನಪದ ಕಲೆಗೆ ತವರೂರು ಎಂದರೂ ತಪ್ಪಾಗದು. ನಮ್ಮಲ್ಲಿನ ಕಂಸಾಳೆ, ಯಕ್ಷಗಾನ, ಕೋಲಾಟ, ಪಟ್ಟದ ಕುಣಿತ ಅಥವಾ ನಂದೀ ಕೋಲು ಕುಣಿತ ಈ ಎಲ್ಲಾ ಪ್ರಾಕಾರಗಳೂ ನಮ್ಮ ಕರ್ನಾಟಕದ ವಿವಿಧ ಪ್ರಾಂತ್ಯಗಳ ಜನ ಜೀವನದಲ್ಲಿ ಹಾಸು ಹೊಕ್ಕಾಗಿದ್ದು ತಮ್ಮ ದೈನಂದಿನ ಚಟುವಟಿಕೆಯ ಆಯಾಸ ಪರಿಹರಿಸಿಕೊಳ್ಳುವ ಜೊತೆಗೆ ಮನೋರಂಜನೆಯನ್ನು ಹೊಂದಲು ಸಹಕರಿಸುತ್ತದೆ. ಈ ನಾಲ್ಕೂ ಪ್ರಾಕಾರಗಳನ್ನೂ ತಂದಾನೀ ತಾನಾ ಎಂಬ ಒಂದೇ ಹಾಡಿಗೆ 6ನೇ ಮತ್ತು 7ನೇ ಇಯತ್ತೆಯ ಮಕ್ಕಳು ಕಣ್ಣಿಗೆ ಕಟ್ಟುವಂತೆ ನೃತ್ಯ ಮಾಡಿದ್ದದ್ದು ಎಲ್ಲರನ್ನೂ ಮನರಂಜಿಸಿತು. ಅದರಲ್ಲೂ ವಿಶೇಷವಾಗಿ ಆರಂಭದಿಂದ ಕಡೆಯವರೆವಿಗೂ ಯಕ್ಷಗಾನದ ವೇಷ ಹಾಕಿ ಮುಂಚೂಣಿಯಲ್ಲಿ ಕುಣಿಯುತ್ತಿದ್ದ ಆ ಇಬ್ಬರು ಹೆಣ್ಣು ಮಕ್ಕಳಿಗೆ ನಿಜವಾಗಲೂ ಎಲ್ಲರ ದೃಷ್ಟಿ ತಾಗಿಯೇ ಇರುತ್ತದೆ.
ಸ್ವಾತಂತ್ರ್ಯ ನಂತರ ಸಣ್ಣ ಸಣ್ಣದಾದ 565ರಾಜ್ಯಗಳನ್ನು ಒಗ್ಗೂಡಿಸಿ ಭಾರತ ಎಂಬ ಒಕ್ಕೂಟ ದೇಶವನ್ನು ಕಟ್ಟಿದವರು ಸರ್ದಾರ್ ವಲ್ಲಭಬಾಯ್ ಪಟೇಲರಾದರೇ, ಹೀಗೆ ಕಷ್ಟ ಪಟ್ಟು ಗಳಿಸಿದ ಸ್ವಾತ್ರಂತ್ಯ ದೇಶವನ್ನು ಎಲ್ಲರೂ ಹೇಗೆ ಒಂದಾಗಿ ನಡೆಸಿಕೊಂಡು ಹೋಗಬೇಕು ಎಂಬುದಕ್ಕೆ ಮಾರ್ಗದರ್ಶಕವಾದ ಸಂವಿಧಾನವನ್ನು ಕೊಡುವ ಮೂಲಕ ಎಲ್ಲರಿಗೂ ಸಮಾನತೆಯನ್ನು ಹಾಕಿಕೊಟ್ಟವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಈ ಕಾರ್ಯ ಮಾಡುವ ನಿಟ್ಟಿನಲ್ಲಿ ಅವರು ಸಾಗಿ ಬಂದ ದಾರಿಯೇನು ಸುಗಮವಾಗಿರಲಿಲ್ಲ. ಅವರಿಬ್ಬರ ಕುರಿತಾದ ನೃತ್ಯರೂಪಕವನ್ನು 8,9 & 10ನೇ ತರಗತಿಯ ಮಕ್ಕಳು ಎಲ್ಲರ ಮುಂದೆ ಪ್ರದರ್ಶನ ಮಾಡುವ ಮೂಲಕ ಸಾಂಸ್ಕೃತಿಕ ಚಟುವಟಿಕೆಯ ಕಾರ್ಯಕ್ರಮಕ್ಕೆ ಅಂತ್ಯ ಹಾಡಿದರು.
ಶಾಲೆಯ ಆವರಣದಲ್ಲಿ ಅಳವಡಿಸಿರುವ ಫಲಕದಲ್ಲಿ ರಾ.ಸ್ವ.ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರ ಕಾರ್ಯವೊಂದರ ಗುರಿಯು ಶ್ರೇಷ್ಟವಾಗಿದ್ದರಷ್ಟೇ ಸಾಲದು. ಅದನ್ನು ಸಾಧ ಹೊರಡುವವರಲ್ಲಿ ಬಲಿಷ್ಟ ಹೃದಯಗಳು, ಬಲವಾದ ತೋಳುಗಳೂ ಬೇಕು ಎಂದು ಬರೆಸಿದ್ದಾರೆ. ಇದಕ್ಕೆ ಅನ್ವಯ ದಂತೆ ಶಾಲೆಯಲ್ಲಿ ಉತ್ತಮ ವಿದ್ಯೆ, ಸಂಸ್ಕಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೌದ್ಧಿಕ ವಿಕಸನ ಮಾಡುವುದರ ಜೊತೆ ಜೊತೆಗೇ, ಮಕ್ಕಳಿಗೆ ದೈಹಿಕ ಬೆಳವಣಿಗೆಯ ಬಗೆಯೂ ಒತ್ತು ನೀಡಬೇಕು. ಎಂಬುದನ್ನು ಮನಗಂಡೇ ಈ ಶಾಲೆಯಲ್ಲಿ ಮಕ್ಕಳಿಗೆ ವಿಶೇಷವಾಗಿ ವಿವಿಧ ರೀತಿಯ ವ್ಯಾಯಾಮಗಳು, ಡಂಬಲ್ಸ್ ವ್ಯಾಯಾಮ, ಯೋಗ, ನಿಯುದ್ಧ(ಕರಾಟೆ) ಮಲ್ಲಕಂಬಗಳನ್ನು ಹೇಳಿಕೊಡುವುದು ಗಮನಾರ್ಹವಾಗಿದೆ. ಮಕ್ಕಳು ಹೀಗೆ ದೈಹಿಕವಾಗಿ ಸಧೃಡರಾಗಿಸಲು ಮತ್ತು ದೇಶವನ್ನು ಚುರುಕು ಮತ್ತು ಹುರಿಗೊಳಿಸಲು ಛತ್ರಪತಿ ಶಿವಾಜಿ ಮಹರಾಜ ತನ್ನ ಸೈನಿಕರಿಂದ ಮಾಡಿಸುತ್ತಿದ್ದ ಯೋಗಚಾಪ್(ಲೆಜಿಮ್) ನೊಂದಿಗೆ ಜನಪದ ನೃತ್ಯವನ್ನು ಈ ಶಾಲೆಯ ಮಕ್ಕಳು ಎಲ್ಲರ ಮುಂದೆ ಮಾಡಿತೋರಿಸಿದರು. ಅದಲ್ಲೂ ವಿಶೇಷವಾಗಿ ಸುಮಾರು 30-40 ಮಕ್ಕಳು ಮಲ್ಲ ಕಂಬದ ಮೇಲೆ ಕೋತಿಗಳಿಗಿಂತಲೂ ವೇಗವಾಗಿ ಸರ ಸರನೆ ಹತ್ತಿ ವಿವಿಧ ಭಂಗಿಗಳ ಪ್ರದರ್ಶನ ಮಾಡಿ ಛಂಗನೇ ಮೇಲಿಂದ ಕೆಳಕ್ಕೆ ನೆಗೆಯುತ್ತಾ ಮೈ ಮನಗಳು ರೋಮಾಂಚನಗೊಳ್ಳುವಂತೆ ಮಾಡಿದ್ದಲ್ಲದೇ, ಅಯ್ಯೋ ಮಕ್ಕಳು ಆಯ ತಪ್ಪಿ ಬಿದ್ದರೆ ಏನಾಗುವುದೋ ಎನ್ನುವ ಕಾಳಯಿಂದ ಎಲ್ಲರೂ ನಿಶ್ಯಬ್ಧವಾಗಿ ಕಣ್ಣು ಬಾಯಿ ಬಿಟ್ಟು ಕೊಂಡು ನೋಡುವಂತೆ ಪ್ರದರ್ಶನ ನೀಡಿ ಅತ್ಯಂತ ಹೆಚ್ಚಿನ ಕರತಾಡನ ಗಳಿಸಿದರು.
ಆನಕ-ಶಂಖ-ವಂಶಿ-ಪಣವ-ಝಲ್ಲರಿ-ತ್ರಿಭುಜ ಮೊದಲಾದ ವಾದ್ಯಗಳನ್ನು ಸಾಮೂಹಿಕವಾಗಿ ನುಡಿಸುತ್ತಾ, ವಿವಿಧ ತಾಳದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ನಾನಾ ಬಗೆಯ ರಚನೆಯಲ್ಲಿ ಸಂಯೋಜನೆಗೊಂಡ ಶಾಲಾ ಮಕ್ಕಳ ಘೋಷ್ ಪ್ರದರ್ಶನವೂ ಸಹಾ ನೆರೆದಿದ್ದವರ ಹೃನ್ಮನಗಳನ್ನು ಸೆಳೆಯಲು ಸಫಲವಾಗುತ್ತಿದ್ದಂತೆಯೇ, ಸೂರ್ಯ ಸಂಪೂಣವಾಗಿ ನಿದ್ರೆಗೆ ಜಾರಿ ಕತ್ತಲಾವರಿಸುತ್ತಿದ್ದಂತೆಯೇ, ಚಂದ್ರ ಅಗ ತಾನೇ ತಾಜಾ ತಾಜಾವಾಗಿ ಬಾನಂಗಳದಲ್ಲಿ ಕಾಣಿಸುಳ್ಳುವ ಸಮಯಕ್ಕೆ ಸರಿಯಾಗಿ LED bulbs ನೊಂದಿಗೆ ಬೆಳಕು ಮತ್ತು ಕತ್ತಲಿನ ಜೊತೆಯಾಟದಲ್ಲಿ ಪ್ರೌಢಶಾಲೆಯ ಮಕ್ಕಳು ಮಾಡಿದ ಸಾಮೂಹಿಕ ವ್ಯಾಯಾಮವೂ ಸಹಾ ಆಕರ್ಷಣೀಯವಾಗಿದ್ದಲ್ಲದೇ ಇಡೀ ಕಾರ್ಯಕ್ರಮಕ್ಕೆ ಮೆರಗು ನೀಡುವಂತಹ ಅಂತ್ಯವನ್ನು ನೀಡುವುದರಲ್ಲಿ ಯಶಸ್ವಿಯಾಯಿತು.
ಇಷ್ಟೆಲ್ಲಾ ಅದ್ಭುತವಾಗಿ ಸಾಂಸ್ಕೃತಿಕ ಮತ್ತು ಶಾರೀರಿಕ ಪ್ರದರ್ಶನದ ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯ೦ಸೇವಕ ಸ೦ಘದ ಬೆ೦ಗಳೂರು ಉತ್ತರ ಭಾಗದ ಮಾನ್ಯ ವಿಭಾಗ ಸಹ ಸ೦ಘಚಾಲಕರಾದ ಡಾ|| ಜಯಪ್ಪ ಮತ್ತು ವಿಜಯ ಶಿಕ್ಷಣ ಮಹಾ ವಿದ್ಯಾಲಯದ ನಿವೃತ್ತ ಪ್ರಾ೦ಶುಪಾಲರು ಹಾಗೂ ಪ್ರಸ್ತುತವಾಗಿ ಸತ್ಯ ಎಜುಕೇರ್ ಕಾ೦ಪಿಟೆನ್ಸಿ ಟ್ರಸ್ಟಿನ ನಿರ್ದೇಶಕರಾದ ಡಾ|| ಜಿ.ವಿಜಯ ಕುಮಾರಿ ಅವರುಗಳು ಮಕ್ಕಳು ಮತ್ತು ಸಭಿಕರನ್ನು ಉದ್ದೇಶಿಸಿ ಭಾಷಣ ಮಾಡಬೇಕಿದ್ದರೂ ಮಕ್ಕಳ ಈ ಸಮಗ್ರ ಪ್ರದರ್ಶನ ಅವರನ್ನು ಮೂಕ ವಿಸ್ಮಿತ ಮಾಡಿದ್ದ ಕಾರಣ ಅತ್ಯಂತ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಇಂತಹ ಅದ್ಭುತವಾದ ಕಾರ್ಯಕ್ರಮದ ಮೂಲಕ ಕರ್ನಾಟಕದ ಸಾರಸ್ವತ ಲೋಕದ ಸಮಗ್ರ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಬಿಚ್ಚಿಟ್ಟಿದ್ದಕ್ಕಾಗಿ ಶಾಲೆಯ ಆಡಳಿತವರ್ಗ, ಮಕ್ಕಳನ್ನು ತಯಾರು ಮಾಡಿದ ಶಿಕ್ಷಕವೃಂದ ಮತ್ತು ಮಕ್ಕಳನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ೦ತಗೊ೦ಡನಹಳ್ಳಿಯ ವಶಿಷ್ಟ ಶಿಕ್ಷಣ ಸ೦ಸ್ಥೆಗಳ ಅಧ್ಯಕ್ಷರಾದ ಶ್ರೀ ಎ೦.ನಾಗರಾಜು ಅವರೂ ಸಹಾ ಮಕ್ಕಳಿಗೆ ಕಲಿಯವ ವಯಸ್ಸಿನಲ್ಲಿ ಶ್ರದ್ಧೆಯಿಂದ ಅಭ್ಯಾಸ ಮಾಡಿ ವಿದ್ಯೆಯನ್ನು ಚೆನ್ನಾಗಿ ಕಲಿತಲ್ಲಿ ಮುಂದೆ ಅದು ಜೀವನದಲ್ಲಿ ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದರ ಕುರಿತಾಗಿ ಒಂದು ಸಣ್ಣದಾದ ನೀತಿ ಕಥೆಯೊಂದನ್ನು ಹೇಳುವ ಮೂಲಕ ತಮ್ಮ ಮಾತನ್ನು ಮುಗಿಸಿದಿದರು.
ಇಡೀ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಅದರಲ್ಲೂ ವಿಶೇಷವಾಗಿ ಇಡೀ ಕಾರ್ಯಕ್ರಮದ ಶೇ 90ರಷ್ಟು ವೆಚ್ಚವನ್ನು ಶಾಲೆಯ ಹಿರಿಯ ವಿದ್ಯಾರ್ಥಿಗಳೇ ಭರಿಸಿದ್ದನ್ನು ತಿಳಿಸಿ ಅವರೆಲ್ಲರಿಗೂ ವಿಶೇಷವಾದ ಧನ್ಯವಾದಗಳನ್ನು ಶ್ರೀ ಸರಸ್ವತಿ ವಿದ್ಯಾನಿಕೇತನದ ಆಡಳಿತ ಮ೦ಡಳಿ ಸದಸ್ಯರು ಹಾಗೂ ಅದೇ ಶಾಲೆಯ ಹಿರಿಯ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದ ಯುವಕ ಶ್ರೀ ಎಸ್. ನವೀನ್ ಕುಮಾರ್ ಅವರು ತಮ್ಮ ವಂದನಾರ್ಪಣೆಯ ಸಮಯದಲ್ಲಿ ತಿಳಿಸಿಕೊಟ್ಟ ನಂತರ ಬೆಳಿಗ್ಗೆ 10 ಘಂಟೆಗೆ ಶಾಲೆಯ ಅಧ್ಯಕ್ಷರಾದ ಶ್ರೀ ಡಿ.ಸಿ.ಚ೦ದ್ರಹಾಸ್ ಅವರ ಅಮೃತ ಹಸ್ತದಿಂದ ಧ್ವಜಾರೋಹಣದ ಮೂಲಕ ಆರಂಭವಾಗಿದ್ದ ಕಾರ್ಯಕ್ರಮ ಮತ್ತೆ ಅವರಿಂದಲೇ ಧ್ವಜಾವತರಣವಾಗಿ ಸರ್ವೇಭವಂತು ಸುಖಿಃನಃ ಎಂಬ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆಯೇ ಸಭಿಕರೊಬ್ಬರಿಂದ ಎತ್ತರದ ಧ್ವನಿಯಲ್ಲಿ ವಿಶೇಷವಾದ ಶೈಲಿಯಲ್ಲಿ ಬೋಲೋ….. ಭಾರತ್ ಮಾತಾ ಕೀ….. ಎಂಬ ಘೋಷಣೆಗೆ ನೆರದಿದ್ದವರೆಲ್ಲರೂ ಒಕ್ಕೊರಲಿನಿಂದ ಜೈ…… ಎಂದು ಭಾರತ ಮಾತೆಗೆ ಜೈಕಾರ ಹಾಕುವ ಮೂಲಕ ಅರ್ಥಪೂರ್ಣವಾಗಿ ಶಾಲಾ ವಾರ್ಷಿಕೋತ್ಸವ ಮುಕ್ತಾಯವಾದಾಗ, ಕಳೆದ ಒಂದು ತಿಂಗಳಿನಿಂದಲೂ ತಮ್ಮ ಮಕ್ಕಳಿಗೆ ತರಭೇತಿ ನೀಡಿದ್ದು ಅದ್ಭುತವಾಗಿ ಪ್ರದರ್ಶನ ಗೊಂಡು ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದು ಶಾಲೆಯ ಸಮಸ್ತ ಶಿಕ್ಷಕರು ಮತ್ತು ಸಿಬ್ಬಂಧಿ ವರ್ಗಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತಲ್ಲದೇ, ಆಡಳಿತ ಮಂಡಳಿಯೊಂದಿಗೆ ಸಂತೋಷವಾಗಿ ಛಾಯಾಚಿತ್ರವನ್ನು ತೆಗೆಸಿಕೊಳ್ಳುವಂತೆ ಮಾಡಿತು
ಬೆಂಗಳೂರು ನಗರಕ್ಕೆ ಹೊಂದಿಕೊಂಡೇ ಇದ್ದರೂ ಇಂದಿಗೂ ಗ್ರಾಮೀಣ ಸೊಗಡನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಅತ್ತ ಸಂಪೂರ್ಣ ನಗರವೂ ಅಲ್ಲದ, ಹಳ್ಳಿ ಎಂದು ಹೇಳಲಾಗದ ದೊಮ್ಮಸಂದ್ರ ಎಂಬ ಸಣ್ಣ ಗ್ರಾಮದಲ್ಲಿ 42 ವರ್ಷಗಳ ಹಿಂದೆ ರಾಷ್ಟ್ರೀಯ ಚಿಂತನೆಯುಳ್ಳ ಜನಸಾಮಾನ್ಯರಿಗೆ ಕೈಗೆಟುಕವಂತಹ ವೆಚ್ಚದಲ್ಲಿ (ಶಿಶುವಿಹಾರದಿಂದ 10ನೇ ತರಗತಿಯವರೆಗೆ, ವಾರ್ಷಿಕವಾಗಿ ಕೇವಲ 15 ರಿಂದ 36 ಸಾವಿರದ ವರೆಗೆ ಶುಲ್ಕ) ಅತ್ಯುತ್ತಮವಾದ ಶಿಕ್ಷಣವನ್ನು ನೀಡುವಂತಹ ಇಂತಹ ಶಾಲೆಯನ್ನು ಆರಂಭಿಸಿದ ಸಂಸ್ಥಾಪಕರ ದೂರದೃಷ್ಟಿ ತನದ ಬಗ್ಗೆ ಮೆಚ್ಚುಗೆಯನ್ನು ಸೂಚಿಸುವಂತೆ ಮಾಡಿತು. ಸರ್ಜಾಪುರದ ಸುತ್ತಮುತ್ತಲು ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಪೀಕುವಂತಹ ನೂರಾರು ಅಂತರಾಷ್ಟ್ರೀಯ ಶಾಲೆಗಳ ಮಧ್ಯೆಯೂ ಎಲೆ ಮರೆಕಾಯಿಯಂತೆ ವಾಣಿಜ್ಯೀಕರಣ ಗೊಳ್ಳದೇ, ಕೇವಲ ನಮ್ಮ ಸನಾತನ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಕಲಿಸಿಕೊಡುತ್ತಿರುವ, ಮಕ್ಕಳಿಗೆ ಆಸ್ತಿ ಮಾಡ ಬೇಡಿ. ಬದಲಾಗಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲಿಸಿಕೊಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಹೇಳಿದ ಹಿರಿಯ ಸಾಹಿತಿಗಳು, ನಡೆದಾಡುವ ವಿಶ್ವಕೋಶ ಎಂದೇ ಪ್ರಖ್ಯಾತವಾಗಿದ್ದ ಜ್ಞಾನಪೀಠ ಪುರಸ್ಕೃತರಾದ ಡಾ. ಶಿವರಾಮ ಕಾರಂತರ ಮಾತುಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ತರುತ್ತಿರುವ ಇಂತಹ ಶಾಲೆಗಳ ಸಂಖ್ಯೆ ದೇಶಾದ್ಯಂತ ಅಗಣಿತವಾಗಲಿ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಹಾಗಾಗಿ ಅವರಿಗೆ ರಾಷ್ಟ್ರೀಯ ಚಿಂತನೆಯುಳ್ಳ ಉತ್ತಮ ಶಿಕ್ಷಣವನ್ನು ಕೊಡಿಸುವುದು ನಮ್ಮ ನಿಮ್ಮದೇ ಜಬಾವ್ಧಾರಿಯಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ