ನಮ್ಮ ಸನಾತನದ ಧರ್ಮದಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ತ್ಯಜಿಸಿ ತಮ್ಮ ಇಡೀ ಜೀವನವನ್ನು ಭಗವಂತನ ಧ್ಯಾನ ಮಾಡುತ್ತಾ ಸಮಾಜಕ್ಕೇ ಮುಡುಪಾಗಿ ಇಡುವ ಸನ್ಯಾಸಿಗಳಿಗೆ ಅರ್ಥಾತ್ ಸ್ವಾಮಿಗಳಿಗೆ ಬಹಳ ಪ್ರಾಮುಖ್ಯತೆ ಇದೆ. ದುರಾದೃಷ್ಟವಷಾತ್ ಇಂದು ಕೆಲವು ಕಾವಿಧಾರಿ ಮಠಾಧಿಪತಿಗಳು ಈ ಮೇಲೆ ಹೇಳಿದ ಎಲ್ಲವನ್ನೂ ಬಿಟ್ಟು ಭಕ್ತಾದಿಗಳು ಮಠಕ್ಕೆ ನೀಡುವ ಕಾಣಿಕೆಯ ಹಣವನ್ನು ದುರ್ಬಳಕೆ ಮಾಡಿಕೊಂಡು ಐಶಾರಾಮ್ಯ ಜೀವನ ನಡೆಸುತ್ತಾ, ಇರುವ ಸಂದರ್ಭದಲ್ಲಿ, ಸನ್ಯಾಸತ್ವ ಸ್ವೀಕರಿಸಿದರೂ, ಕಾವಿಧಾರಿಗಳಾಗದೇ, ಮನಸ್ಸು ಸದಾಕಾಲವೂ ಶುಭ್ರವಾಗಿಯೇ ಇರಬೇಕೆನ್ನುವ ಕಾರಣಕ್ಕಾಗಿ ಸರಳ ಶ್ವೇತ ಖಾದಿ ವಸ್ತ್ರಧಾರಿಗಳಾಗಿ, ಅದರಲ್ಲೂ ವಿಶೇಷವಾಗಿ ಜೋಬಿಲ್ಲದ ಅಂಗಿ ಧರಿಸುತ್ತಾ, ಸ್ವಂತ ಮನೆ ಕಾರು ಬಿಡಿ, ಸ್ವಂತ ಮಠವೂ ಇಲ್ಲದೇ, ಭಕ್ತರೇನಾದರೂ ಮಾಡಿ ತoದರೆ ಅದನ್ನೇ ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಾ, ಇಲ್ಲದೇ ಹೋದರೆ, ಉಪವಾಸ ಮಾಡುತ್ತಾ, ಜೀವನದಲ್ಲಿ ಎಂದಿಗೂ ಯಾರ ಬಳಿಯೂ ಕೈ ಒಡ್ಡದೇ ಸದಾಕಾಲವೂ ಭಗವಂತಹ ಧ್ಯಾನ, ಪ್ರವಚನ ಮಾಡುತ್ತಲೇ ಸನ್ಯಾಸತ್ವಕ್ಕೆ ಸಾರ್ಥಕತೆಯನ್ನು ತುಂಬಿದ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ವ್ಯಕ್ತಿ ವ್ಯಕ್ತಿತ್ವದ ಪರಿಚಯ ಇದೋ ನಿಮಗಾಗಿ
ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಸಿದ್ದಗೊಂಡಪ್ಪ ಎಂಬ ಬಾಲಕ, ಬಾಲ್ಯದಿಂದಲೂ ಅತ್ಯಂತ ಚುರುಕು ಬುದ್ದಿಯುಳ್ಳನಾಗಿ ತನ್ನ ಹುಟ್ಟೂರು ಬಿಜ್ಜರಗಿಯಲ್ಲೇ ನಾಲ್ಕನೇ ತರಗತಿ ಓದುತ್ತಿರುವಾಗ, ಸ್ಥಳೀಯ ಸ್ವಾಮೀಜಿಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಣ್ಣಿಗೆ ಬಿದ್ದು, ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವಂತೆ ಆ ಬಾಲಕನ ಚುರುಕುತನವನ್ನು ಕಂಡು, ಮುಂದೇ ಈ ಬಾಲಕ ಅಸಾಧಾಣ ವ್ಯಕ್ತಿಯಾಗುತ್ತಾನೆ ಎಂಬ ದೂರಾಲೋಚನೆಯಿಂದ ಆ ಬಾಲಕನಿಗೆ ತಮ್ಮ ಬಳಿ ಆಶ್ರಯ ನೀಡಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದಲ್ಲದೇ, ತಾವು ಪ್ರವಚನ ಮಾಡುವ ಸ್ಥಳಗಳಳಿಗೆ ಆ ಬಾಲಕನನ್ನೂ ಕರೆದೊಯ್ಯುವ ಮೂಲಕ ಪರೋಕ್ಷವಾಗಿ ಆ ಬಾಲಕನಲ್ಲಿ ಧರ್ಮ ಮತ್ತು ಧಾರ್ಮಿಕ ವಿಚಾರಗಳನ್ನು ತುಂಬತೊಡಗುತ್ತಾರೆ. ಗುರುಗಳ ಸತ್ಸಂಗದಲ್ಲಿ ಭಾಗಿಯಾಗುತ್ತಲೇ, ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ ಬಾಲಕ ಸಿದ್ದಗೊಂಡಪ್ಪ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ್ರದ ವಿಷಯದಲ್ಲಿ ಎಂ.ಎ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ, ಲೌಕಿಕ ಬದುಕಿನಿಂತಲೂ ಆಧ್ಯಾತ್ಮದತ್ತಲೇ ಹೆಚ್ಚಿನ ವ್ಯಾಮೋಹವಿದ್ದ ಕಾರಣ, ಸನ್ಯಾಸತ್ವದ ದೀಕ್ಷೆಯನ್ನು ಸ್ವೀಕರಿಸಿ, ಶ್ರೀ ಸಿದ್ದೇಶ್ವರ ಸ್ವಾಮಿ ಗಳಾಗುತ್ತಾರೆ.
ಸನ್ಯಾಸಿಗಳು ಇಲ್ಲವೇ ಸ್ವಾಮಿಗಳಾದವರು ಕಾವಿ ಬಟ್ಟೆಯನ್ನು ಧರಿಸಬೇಕು, ತಮ್ಮದೇ ಆದ ಮಠವನ್ನು ಕಟ್ಟಿಯೋ ಇಲ್ಲವೇ ಈಗಾಗಲೇ ಇರುವ ಮಠವೊಂದರ ಮಠಾಧಿಪತಿಗಳಾಗಬೇಕು ಎಂಬ ಸಹಜ ಪ್ರಕ್ರಿಯೆಗೆ ತದ್ವಿರುದ್ಧವಾಗಿ, ಸದಾಕಾಲವೂ ಸರಳ ಮತ್ತು ಶುಭ್ರವಾಗಿ ಇರಬೇಕು ಎನ್ನುವ ಕಾರಣದಿಂದ ಬಿಳಿಯ ಜೋಬಿಲ್ಲದ ಖಾದಿ ನಿಲುವಂಗಿ ಮತ್ತು ಪಂಚೆಯನ್ನು ಧರಿಸುತ್ತಾ ಯಾವುದೇ ಮಮಕಾರಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೇ, ಅದಕ್ಕೂ ವಿಶೇಷವಾಗಿ ಯಾವುದೇ ಜಾತಿ ಅಥವಾ ಪಂತದ ಹಂಗಿಲ್ಲದೇ, ಸರ್ವಧರ್ಮೀಯರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿ, ತಮ್ಮ ಪೂಜ್ಯ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ನಡೆಸಿಕೊಂಡು ಹೋಗುತ್ತಿದ್ದ ಪಾಠ ಪ್ರವಚನಗಳನ್ನು ನಿಸ್ವಾರ್ಥವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ. ತಮ್ಮ ಕಾರ್ಯಕ್ಷೇತ್ರವನ್ನು ವಿಜಯಪುರ ಜ್ಞಾನ ಯೋಗಾಶ್ರಮ ಎಂದು ಇಟ್ಟುಕೊಂಡರೂ, ಕರ್ನಾಟಕ ರಾಜ್ಯವಲ್ಲದೇ ನೆರೆರಾಜ್ಯವಾದ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳಾನುಗಟ್ಟಲೆ ಪ್ರವಾಸ ಮಾಡುತಾ, ಅಣ್ಣ ಬಸವಣ್ಣನವರು ಹೇಳಿರುವಂತೆ ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ ಎನ್ನುವಂತೆ ಅಲ್ಲಾ ವರ್ಗದವರಿಗೂ ಅಪ್ಯಾಯಮಾನವಾಗುವ ರೀತಿಯಲ್ಲಿ ಪ್ರತಿದಿನವೂ ಸರಣಿಯ ರೂಪದಲ್ಲಿ ತಿಂಗಳುಗಟ್ಟಲೆ ಪ್ರವಚನ ಮಾಡುವ ಕಾಯಕವನ್ನು ಮುಂದುವರೆಸಿಕೊಂಡು ಹೋದರು.
ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಅಪಾರವಾದ ಪಾಂಡಿತ್ಯವನ್ನು ಹೊಂದಿದ್ದ ಸಿದ್ದೇಶ್ವರ ಶ್ರೀಗಳು ತಮ್ಮ ಸರಳವಾದ ಭಾಷೆಯಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಮಾಡುತ್ತಿದ್ದ ಪ್ರವಚನಗಳು ಸುತ್ತಮುತ್ತಲ ಜನರ ಮೇಲೆ ಗಾಢವಾಗಿ ಪ್ರಭಾವ ಬೀರುತ್ತಿದ್ದ ಕಾರಣ ಬೇರೆಲ್ಲಾ ಆಕರ್ಷಣೆಯನ್ನು ತೊರೆದು ಸ್ವಾಮಿಗಳ ಪ್ರವಚನವನ್ನು ಕೇಳಲು ಸ್ವಾಮಿಗಳು ಹೋದಡೆಯಲ್ಲೆಲ್ಲಾ ಜನರು ಮುಗಿಬೀಳುತ್ತಿದ್ದದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯ ಹಿನ್ನಲೆಯ ಈ ಆಶ್ರಮ ಸಿದ್ದೇಶ್ವರ ಸ್ವಾಮಿಗಳ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದ್ದಲ್ಲದೇ ಅದರ ಜೊತೆಗೆ ಆ ಮಕ್ಕಳಿಗೆ ಉಚಿತವಾಗಿ ಊಟ ಮತ್ತು ವಸತಿಗಳಿಗೆ ವ್ಯವಸ್ಥೆ ಮಾಡುವ ಮೂಲಕ ಸಾವಿರಾರು ಗ್ರಾಮೀಣ ಮಕ್ಕಳು ವಿದ್ಯಾವಂತರಾಗಲು ಕಾರಣೀಭೂತರಾಗಿದ್ದರು. ಹೀಗೆ ಶ್ರೀಮಠದಿಂದ ಉಪಕೃತರಾಗಿದ್ದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರಾಗಿದ್ದ ಕಾರಣ, ಸಿದ್ದೇಶ್ವರರೂ ತಮ್ಮ ಗುರುಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾ, ಆಧ್ಯಾತ್ಮದ ಕುರಿತಾದ ತಮ್ಮ ಆಳವಾದ ಅಧ್ಯಯನ ಮತ್ತು ಚಿಂತನೆಗಳ ಮೂಲಕ ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಅನ್ನದಾಸೋಹದ ಜೊತೆ ಜೊತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರವಾಗಿ ಮತ್ತಷ್ಟು ಪ್ರವರ್ಧಮಾನಕ್ಕೆ ತಂದಿದ್ದಲ್ಲದೇ, ಇಡೀ ವಿಶ್ವವೇ ಆ ಕೆಂದ್ರದತ್ತ ಗಮನ ಹರಿಸುವಂತಹ ಉಚ್ಚ್ರಾಯ ಸ್ಥಿತಿಯನ್ನು ತಲುಪಲು ಕಾರಣವಾಗಿದ್ದಲ್ಲದೇ, ಸಿದ್ದೇಶ್ವರ ಶ್ರೀಗಳ ವಿಚಾರ ಮತ್ತು ಪ್ರವಚನದಿಂದಾಗಿ ಕೇವಲ ಉತ್ತರ ಕರ್ನಾಟಕಕ್ಕೇ ಮಾತ್ರವೇ ಸೀಮಿತವಾಗಿ ದೇಶಾದ್ಯಂತ ಅತ್ಯಂತ ಮಹತ್ವ ಪಡೆದುಕೊಂಡಿತು ಎಂದರೂ ಅತಿಶಯವಾಗದು.
ಬದುಕುವದು ಹೇಗೆ?, ನಾವು ಹೇಗೆ ಬದುಕಬೇಕು?, ಬದುಕಲು ಹೇಗೆ ದಾರಿ ಮಾಡಿಕೊಳ್ಳಬೇಕು?, ಎನ್ನುವ ಜೀವನಕ್ಕೆ ದಾರಿ ದೀಪವಾಗಬಲ್ಲ ಸರಳವಾದ ವಿಷಯಗಳ ಕುರಿತಾಗಿ ಅವರು ಮಾಡುತ್ತಿದ್ದ ಸರಣಿ ಉಪನ್ಯಾಸಗಳಲ್ಲಿ ವಿವಿಧ ವಚನಕಾರರ ವಚನಗಳನ್ನು ಉಲ್ಲೇಖಿಸುತ್ತಿದ್ದಲ್ಲದೇ, ರಾಮಾಯಣ, ಮಹಾಭಾರತ, ಭಗವದ್ಗೀತೆ ಮುಂತಾದ ಪುರಾಣಗಳಲ್ಲಿ ಬರುವ ಸಣ್ಣ ಸಣ್ಣ ನೀತಿಕಥೆಗಳ ಉದಾರಣೆಯನ್ನು ನೀಡುತ್ತಾ, ಜನರಿಗೆ ಗೊತ್ತಿದ್ದ ವಿಷಯವನ್ನೇ ಮತ್ತೊಂದು ದೃಷ್ಟಿ ಕೋನದದಲ್ಲಿ ನೋಡಿದಾಗ ಹೊಸದೊಂದು ಬೆಳಕನ್ನು ಚೆಲ್ಲುವಂತೆ ಮಾಡುವ ಮೂಲಕ, ವಿಶ್ವದ ಯಾವುದೇ ಹೆಸರಾಂತ ತತ್ವಜ್ಞಾನಿಗಳಿಗಿಂತಲೂ ಕಡಿಮೆ ಇಲ್ಲದೇ, ಮಾಡುತ್ತಿದ್ದ ಅವರ ಉಪನ್ಯಾಸಗಳು ಅತ್ಯಂತ ಪರಿಣಾಮಕಾರಿಯಾಗಿರುತ್ತಿದ್ದವು.
ತಮ್ಮ ಸರಣಿ ಪ್ರವಚನಗಳಲ್ಲಿ ಭಾರತದ ಅನೇಕ ಸಾಧು ಸಂತರುಗಳ ಕೃತಿಗಳನ್ನು ಅವಲೋಕನ ಮಾಡುವ ಕೃತಿಗಳಲ್ಲದೇ, ವೇದಾಂತ, ಗೀತೆ, ಯೋಗಸೂತ್ರ, ವಚನಗಳ ಕುರಿತಾದ ಚಿಂತನೆ ನಡೆಸುವುದರ ಜೊತೆಯಲ್ಲೇ ಅದೇ ವಿಷಯದ ಕುರಿತಾಗಿ ಅನೇಕ ಪುಸ್ತಕಗಳನ್ನು ಸಹಾ ಬರೆದಿದ್ದರು. ಯೋಗದಲ್ಲಿ ಪ್ರಾವೀಣ್ಯತೆಯನ್ನು ಪಡೆದಿದ್ದ ಶ್ರೀಗಳು ಪತಂಜಲಿಯ ಯೋಗಶಾಸ್ತ್ರವನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಪುಸ್ತಕ ರೂಪದಲ್ಲಿ ತಂದಿದ್ದಲ್ಲದೇ ಕಳೆದ ಕೆಲವು ದಶಕಗಳಲ್ಲಿ, ಸ್ವಾಮೀಜಿ ಅವರು ಉಪನಿಷತ್ತುಗಳು, ಗೀತೆ, ಶರಣ ತತ್ವಶಾಸ್ತ್ರ ಮತ್ತು ಸಾಮಾನ್ಯ ಆಧ್ಯಾತ್ಮಿಕತೆಯ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕೆಲವು ಪ್ರಮುಖ ಕೃತಿಗಳೆಂದರೆ, ಸಿದ್ಧಾಂತ ಶಿಖಾಮಣಿ, ಅಲ್ಲಮಪ್ರಭುವಿನ ವಚನ ನಿರ್ವಚನ, ಭಗವದ್ ಚಿಂತನ (ದೈವಿಕ ಪ್ರತಿಬಿಂಬಗಳು). ಇನ್ನು ಇಂಗ್ಲಿಷ್‌ನಲ್ಲಿ ದೇವರು, ಪ್ರಪಂಚ ಮತ್ತು ಆತ್ಮ, ಪತಂಜಲಿ ಯೋಗ ಸೂತ್ರಗಳು, ನಾರದ ಭಕ್ತಿ ಸೂತ್ರ ಮತ್ತು ಶಿವ ಸೂತ್ರ. ಅವರ ಅಲ್ಲಮಪ್ರಭುದೇವರ ವಚನ-ನಿರ್ವಚನ, ಮತ್ತು ಷಟ್ಸ್ಥಲ ವಚನವು ಇಂಗ್ಲಿಷ್ ಭಾಷೆಗೆ ಅನುವಾದವಾಗಿ ಬಿಡುಗಡೆಯಾಗಿದೆ.
ಮಠ ಮಾನ್ಯಗಳಿಗೆ ಸಣ್ಣದಾದ ಗಂಟೆ, ಟ್ಯೂಬ್ ಲೈಟ್ಗಳನ್ನು ದಾನ ಮಾಡಿ ಅದರ ಮೇಲೆ ದೊಡ್ಡ ದೊಡ್ಡದಾದ ಹೆಸರು ಬರೆಸಿಕೊಳ್ಳುವವರೇ ಹೆಚ್ಚಿನವರು ಇರುವ ಈ ಸಂದರ್ಭದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಸೇವೆಗೆ ಅನ್ವರ್ಥ ಪದವೇ ಶ್ರೀ ಸಿದ್ದೇಶ್ವರ ಸ್ವಾಮೀಜಿ ಎಂದರೂ ತಪ್ಪಾಗದು. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರೂ ಅವರ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ, ಅವರ ಹೆಸರಾಗಲಿ ಇರುವುದಿಲ್ಲ. ಅವರ ಎಲ್ಲಾ ಸೇವೆಯೂ ಶುದ್ದ ಮನಸ್ಸಿನ ಕೆರೆಯ ನೀರನ್ನು ಕೆರೆಗೆ ಚೆಲ್ಲಿ. ಎಂಬ ದಾಸ ವಾಣಿಯಂತೆ, ಇಲ್ಲಿ ನನ್ನದೇನಿದೆ, ಎಲ್ಲವೂ ಭಗವಂತನದು. ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು. ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತಿದ್ದ ಅಪರೂಪದ ಯೋಗಿಗಳು ಶ್ರೀ ಸಿದ್ದೇಶ್ವರರು.
ಸಾಮಾನ್ಯವಾಗಿ ಸರ್ಕಾರಗಳು ಹತ್ತು ಹಲವು ಜಾತಿಗಳನ್ನು ಓಲೈಸಿಕೊಳ್ಳುವ ಸಲುವಾಗಿ ಎಲ್ಲಾ ಜಾತಿ ಮತ್ತು ಧರ್ಮದ ಮಠಮಾನ್ಯಗಳಿಗೆ ಬಜೆಟ್ಟಿನಲ್ಲಿ ಸರ್ಕಾರದ ಕಡೆಯಿಂದ ಅನುದಾನ ಕೊಡುದನ್ನು ರೂಢಿ ಮಾಡಿಕೊಂಡಿದ್ದು ಆಯಾಯಾ ಸರ್ಕಾರದ ಜೊತೆಗಿನ ಸಂಬಂಧ ಅನುಪಾತದೊಂದಿಗೆ ಅಯಾಯಾ ಮಠಗಳಿಗೆ ಸರ್ಕಾರದ ಹಣ ಬಿಡುಗಡೆ ಮಾಡಿದರೂ,, ಕೊಟ್ಟಿದ್ದು ಸಾಲಲಿಲ್ಲ. ಇನ್ನಷ್ಟು ಕೊಡಬೇಕಿತ್ತು ಎಂದು ಒಂಟೀ ಕಣ್ಣೀನಲ್ಲಿ ಅಳುವ ಮಠಾದೀಶರೇ ಹೆಚ್ಚಾಗಿರುವಾಗ, ಸರ್ಕಾರದ ಈ ರೀತಿಯ ಅನುದಾನಕ್ಕೆ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪ್ರತಿಕ್ರಿಯೆ ಹೇಗಿತ್ತು ಎನ್ನುವುದಕ್ಕೆ ಈ ಪ್ರಸಂಗ ಅತ್ಯಂತ ರೋಚಕವಾಗಿದೆ.
ಶ್ರೀ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಜೆಟ್ ಮಂಡಿಸಿದಾಗ, ರಾಜ್ಯದ ಅನೇಕ ಮಠಮಾನ್ಯಗಳಿಗೆ ಕೋಟಿ ಕೋಟಿಗಟ್ಟಲೆ ಹಣ ಹಂಚಿದಾಗ, ಆ ಪಟ್ಟಿಯಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಆಶ್ರಮದ ಹೆಸರು ಇಲ್ಲದೇ ಹೋದಾಗ ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ ಅವರು ಯಡಿಯೂರಪ್ಪನವರಿಗೆ ಈ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ವತಿಯಿಂದ ಶ್ರೀಗಳ ಆಶ್ರಮಕ್ಕೆ 10 ಕೋಟಿ ಹಣವನ್ನು ಬಿಡುಗಡೆ ಮಾಡಿಸಿದರು.
ತಾವು ಸರ್ಕಾರವನ್ನು ಕೇಳದೇ ಹೋದರೂ, ಬಯಸದೇ ಬಂದ ಭಾಗ್ಯದಂತೆ ಇಷ್ಟೊಂದು ಹಣ ಸರ್ಕಾರದ ಕಡೆಯಿಂದ ಬರಲು ಯಾರು ಕಾರಣರು? ಎಂದು ವಿಚಾರಿಸಿದ ಸ್ವಾಮಿಗಳು, ಇದರ ಹಿಂದಿನ ರೂವಾರಿ ಜಗದೀಶ್ ಶೆಟ್ಟರ್ ಎಂಬುದನ್ನು ತಿಳಿದು ಅವರನ್ನು ತಮ್ಮಲ್ಲಿಗೆ ಕರೆದು ಕುಶಲೋಪರಿ ವಿಚಾರಿಸಿ, ನಮ್ಮ ಆಶ್ರಮಕ್ಕೆ 10 ಕೋಟಿ ಹಣ ಬಿಡುಗಡೆಯನ್ನು ನೀವು ಮಾಡಿಸಿದಿರಿ ಎಂದು ತಿಳಿದು, ನಮ್ಮ ಆಶ್ರಮದ ಮೇಲಿರುವ ನಿಮ್ಮ ಭಕ್ತಿ ಮತ್ತು ಗೌರವಕ್ಕಾಗಿ ಬಹಳ ಸಂತೋಷವಾಗಿದೆ. ಆದರೆ, ಸಾರ್ವಜನಿಕರ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಸರ್ಕಾರಿ ಹಣದಲ್ಲಿ ಆಶ್ರಮ ನಡೆಸಲು ನಮ್ಮ ಮನಸ್ಸು ಒಪ್ಪುವುದಿಲ್ಲವಾದ್ದರಿಂದ, ತಾವು ಅನ್ಯತಾ ಭಾವಿಸದೇ ನಮಗೆ ನಿಗಧಿ ಪಡಿಸಿದ ಹಣವನ್ನು ಈ ಕೂಡಲೇ ಹಿಂಪಡೆದುಕೊಳ್ಳಿ ಎಂದು ಎರಡೂ ಕೈಗಳನ್ನು ಜೋಡಿಸಿ ಬಹಳ ವಿನಮ್ರತೆಯಿಂದ ಕೋರಿಕೊಂಡಾಗ, ಸ್ವಾಮಿಗಳ ಮುಂದೆ ಮರುಮಾತನಾಡಲು ಇಚ್ಚಿಸದ ಶೆಟ್ಟರ್ ಮತ್ತೆ ಯಡೆಯೂರಪ್ಪನವರ ಬಳಿ ಬಂದು ನಡೆದದ್ದೆಲ್ಲವನ್ನೂ ಸೂಕ್ಶ್ಮವಾಗಿ ತಿಳಿಸಿ ಆ ಸರ್ಕಾರೀ ಅನುದಾನವನ್ನು ರದ್ದು ಪಡಿಸಿದ್ದರಂತೆ. ಬಿಟ್ಟಿ ಹಣಕ್ಕೆ ಬಾಯಿ ಬಾಯಿ ಬಿಟ್ಟುಕೊಂಡು ನನಗೂ ಇರಲೀ ನಮ್ಮ ಮುಂದಿನ ತಲೆಮಾರಿಗೂ ಇರಲೀ ಎಂದು ಸರ್ಕಾರೀ ಹಣವನ್ನು ಹೊಂಚಿಹಾಕುವ ಮಂದಿಯೇ ಹೆಚ್ಚಾಗಿರುವಾಗ ಇಂತಹ ನಿಸ್ವಾರ್ಥ ಸ್ವಾಮಿಗಳು ನಿಜಕ್ಕೂ ಶ್ರೇಷ್ಠವೇ ಸರಿ.
ಇಂತಹ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳನ್ನು ವಿಜಯಪುರದ ಸುತ್ತ ಮುತ್ತಲಿನ ಜನರು ಜೀವಂತ ದೇವರು ಎಂದೇ ನಂಬಿದ್ದ ಕಾರಣ, ಅವರು ಹೇಳಿದ್ದನ್ನು ದೈವವಾಕ್ಯ ಎಂದೇ ಪಾಲಿಸುತ್ತಿದ್ದರು. ಸಿದ್ದೇಶ್ವರ ಸ್ವಾಮಿಗಳ ಈ ಪರಿಯ ಸಮಾಜ ಸೇವೆಯನ್ನು ಭಾರತ ಸರ್ಕಾರವು ಗುರುತಿಸಿ ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಸಿದ್ದೇಶ್ವರ ಸ್ವಾಮಿಗಳನ್ನು ಆಯ್ಕೆ ಮಾಡಿದಾಗ, ಸ್ವಾಮಿಗಳು ಬಹಳ ವಿನಯದಿಂದಲೇ, ನನಗೆ ಪದ್ಮ ಪ್ರಶಸ್ತಿಯ ಮೇಲೆ ಅಪಾರ ಗೌರವವಿದೆ. ನನಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ, ನಾನೊಬ್ಬ ಸರಳ ಸನ್ಯಾಸಿಯಾಗಿದ್ದು, ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದಾಗಿದೆ. ಹಾಗಾಗಿ ಇಂತಹ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಸಕಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ ಎಂದು ನಗುನಗುತ್ತಲೇ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು ಇದೇ ರೀತಿಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವೂ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿದಾಗ ಮತ್ತು ಅನೇಕ ಸಂಘಸಂಸ್ಥೆಗಳು ಅವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲು ಮುಂದಾದಾಗಲೂ ಅತ್ಯಂತ ವಿನಮ್ರವಾಗಿಯೇ ನಿರಾಕರಿಸಿದಂತಹ ಮಹನೀಯರು.
ಸ್ವಾಮೀಜಿಗಳು ತಮ್ಮ ಪ್ರವಚನಗಳಿಗಾಗಿ ವಿವಿಧ ಪಟ್ಟಣಗಳಿಗೆ ಪ್ರವಾಸಕ್ಕೆ ಬಂದಾಗ ಆವರ ಶಿಷ್ಯಂದಿರು, ಹಾಗೂ ಅವರ ಹಿತೈಷಿಗಳು ಸ್ವಾಮಿಗಳನ್ನು ತಮ್ಮ ಮನೆಗೆ ಆತಿಥ್ಯಕ್ಕಾಗಿ ಕರೆದುಕೊಂಡು ಹೋಗುವುದು ಸಹಜ ಪ್ರಕ್ರಿಯೆಯಾಗಿತ್ತು. ಅದೇ ರೀತಿ ಮೈಸೂರಿನ ನಂಜನಗೂಡು ಮೂಲಕದ ಖ್ಯಾತ ಪತ್ರಕರ್ತರು, ಸ್ವಾಮೀಗಳು ಸುತ್ತೂರು ಮಠಕ್ಕೆ ಬಂದಿದ್ದಾಗ ತಮ್ಮ ನಂಜನಗೂಡಿನ ಮನೆಗೆ ಕರೆದುಕೊಂಡು ಹೋಗಿ ಈ ಅಪರೂಪದ ಸಂತರಿಗೆ ಫಲ ಪುಷ್ಪಾಗಳನ್ನು ಸಮರ್ಪಿಸಿ, ಬಹುತೇಕ ಎಲ್ಲಾ ಸ್ವಾಮೀಗಳಿಗೂ ನೀಡುವ ಪಾದಪೂಜೆಯ ಪಾದಕಾಣಿಕೆಯನ್ನು ತಟ್ಟೆಯಲ್ಲಿ ಮರೆಮಾಚಿ ಸಮರ್ಪಿಸಿದ್ದರಂತೆ. ತಟ್ಟೆಯನ್ನು ಸ್ವೀಕರಿಸುವಾಗ ಈ ರೀತಿಯಾಗಿ ಸಮರ್ಪಿಸಿದ ಕಾಣಿಕೆಯನ್ನು ಗಮನಿಸದಿದ್ದ ಸ್ವಾಮೀಜಿಗಳು ನಂತರ ಅದನ್ನು ಗಮನಿಸಿ ಮರು ದಿನ ಸುತ್ತೂರು ಮಠದಲ್ಲಿ ಪ್ರವಚನ ಪ್ರಾರಂಭಕ್ಕೂ ಮುನ್ನಾ ಅವರ ಸಹಾಯಕರು ಆ ಪತ್ರಕರ್ತರನ್ನು ಸಂಪರ್ಕಿಸಿ, ಪೂಜ್ಯರು ಯಾರಿಂದಲೂ ಕಾಣಿಕೆಯನ್ನು ಸ್ವೀಕರಿಸುವುದಿಲ್ಲ ಹಾಗಾಗಿ ನಿಮಗೆ ನನ್ನ ಮೂಲಕ ಹಿಂದಿರುಗಿಸಲು ಹೇಳಿದ್ದಾರೆ ಎಂದು ಅವರು ಕೊಟ್ಟ ಕಾಣಿಕೆಯನ್ನು ಹಿಂದಿರುಗಿಸಲು ಮುಂದಾದಾಗ, ಆ ಹಿರಿಯ ಪತ್ರಕರ್ತರು, ಒಮ್ಮೆ ಗುರುಗಳಿಗೆ ಕೊಟ್ಟ ಕಾಣಿಕೆಯನ್ನು ಮತ್ತೆ ಪಡೆಯುವುದು ನಮ್ಮ ಆಚರಣೆಯಲ್ಲಿ ಇಲ್ಲಾ ಎಂದು ಹೇಳಿ ಕಳುಹಿಸಿದ್ದರಂತೆ. ಸುಖಾಃ ಸುಮ್ಮನೇ ವಾಗ್ವಾದಗಳೇಕೆ ಎಂದು ಹಿಂದುರಿಗಿದ ಸ್ವಾಮಿಗಳ ಸಹಾಯಕ ಆ ದಿನ ಪ್ರವಚನ ಮುಗಿದು ಪತ್ರಕರ್ತರು ಗುರುಗಳ ಆಶೀರ್ವಾದಕ್ಕೆ ಹೋಗುತ್ತಿದ್ದಂತೆಯೇ, ಅವರಿಗೆ ಪುಸ್ತಕಗಳು ತುಂಬಿದ ದೊಡ್ಡ ಗಾತ್ರದ ಎರಡು ಚೀಲಗಳನ್ನು ಕೊಟ್ಟು, ನೆನ್ನೆ ನಿಮ್ಮ ಮನೆಯಲ್ಲಿದ್ದ ಪುಸ್ತಕ ಬಂಡಾರ ನೋಡಿ ಸಂಭ್ರಮಿಸಿದ್ದೇ. ಅದಕ್ಕೆ ಸಂಗ್ರಹಕ್ಕೆ ಈ ಪುಸ್ತಕಗಳೂ ಜೋಡಣೆಯಾಗಿ ನಿಮ್ಮ ಜ್ಞಾನ ಸಂಪತ್ತು ವೃದ್ಧಿಯಾಗಲೀ ಎಂದು ಹರಸಿದ್ದರು ಎಂದು ಬರೆದುಕೊಂಡಿದ್ದಾರೆ. ತನ್ಮೂಲಕ ಅವರು ಸಮರ್ಪಿಸಿದಂತಹ ಗುರುಕಾಣಿಯ ಮೊತ್ತಕ್ಕೆ ಸರಿಸಮನಾಗಿ ಪುಸ್ತಕಗಳನ್ನು ನೀಡುವ ಮೂಲಕ ತಮ್ಮ ಭಕ್ತಾದಿಗಳಿಗೆ ಬೇಸರ ಬಾರದಂತೆ ತಮ್ಮ ಪ್ರತಿಜ್ಞೆಯನ್ನು ಮುಂದುವರೆಸಿಕೊಂಡು ಹೋಗಿದ್ದದ್ದು ನಿಜಕ್ಕೂ ಅನನ್ಯ ಮತ್ತು ಅನುಕರಣಿಯವೇ ಸರಿ. ಇದನ್ನು ಓದಿದಾಗ ಮೈಸೂರು ಮಹಾರಾಜರೂ ಸಹಾ ಇದೇ ರೀತಿಯಾಗಿ ಪ್ರಜೆಗಳು ರಾಜರಿಗೆಂದೇ ಸಮರ್ಪಿಸುತ್ತಿದ್ದ ಪೂರ್ವ ಕಾಣಿಕೆಗಳನ್ನು ಒಮ್ಮೆ ಸ್ವೀಕರಿಸಿ ನಿಮ್ಮ ಕಾಣಿಕೆ ಪ್ರಭುಗಳಿಗೆ ಸಮರ್ಪಣೆಯಾಗಿದೆ ಎಂದು ಹೇಳಿ ಮತ್ತೆ ಹೃದಯಪೂರ್ವಕವಾಗಿ ಅದೇ ಪ್ರಜೆಗಳಿಗೆ ಆವರು ಕೊಟ್ಟ ಕಾಣಿಕೆಯನ್ನು ಹಿಂದಿರುಗಿಸುತ್ತಿದ್ದದ್ದು ನೆನಪಾಗಿ ಸ್ವಾಮಿಗಳ ಬಗ್ಗೆ ಮತ್ತಷ್ಟು ಗೌರವ ಹೆಚ್ಚಾಗಿ, ಕಣ್ಣಂಚಿನಿಂದ ನನಗೇ ಅರಿವಿಲ್ಲದಂತೆ ಕಣ್ಣೀರು ಸುರಿದಿದ್ದು ಸುಳ್ಳಲ್ಲ.
Begin your day with Smile, end your day with Smile Your life will become haven ಎಂದು ಹೇಳುತ್ತಿದ್ದರು. ಅಂದರೆ ನಗುವಿನೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ಮತ್ತದೇ ನಗುವಿನಿಂದಲೇ ನಿಮ್ಮ ದಿನವನ್ನು ಕೊನೆಗೊಳಿಸಿದಲ್ಲಿ ನಿಮ್ಮ ಜೀವನ ಸ್ವರ್ಗವಾಗುತ್ತದೆ ಎಂದು ಹೇಳುತಿದ್ದ ಸಮಾಜಕ್ಕಾಗಿ ಸರ್ವಸಂಗ ಪರಿತ್ಯಾಗಿಯಾಗಿದ್ದ ಜ್ಞಾನಯೋಗಿ ಶ್ರೀ ಸಿದ್ದೇಶ್ವರರು ವಯೋಸಹಜವಾಗಿ ಕೆಲದಿನಗಳಿಂದಲೂ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಸೇರಲು ಇಚ್ಚಿಸದೇ ತಮ್ಮ ಆಶ್ರಮದಲ್ಲಿ ವೈದ್ಯರ ತುರ್ತುನಿಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಜನವರಿ 2 2023 ಸೋಮವಾರ ರಾತ್ರಿ 8.15 ಕ್ಕೆ ಮಹಾ ಸಮಾದಿ ಹೊಂದಿದ್ದು ನಿಜಕ್ಕೂ ಆಧ್ಯಾತ್ಮ ಮತ್ತು ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವೇ ಸರಿ. ಸ್ವಾಮಿಗಳು ಮಹಾಸಮಾದಿ ಹೊಂದಿದ ದಿನ ವೈಕುಂಠ ಏಕದಶಿಯಾಗಿದ್ದು ಈ ದಿನದಂದು ವೈಕುಂಠದ (ಸ್ವರ್ಗ ಲೋಕ ಅಥವಾ ವಿಷ್ಣುವಾಸದ ಸ್ಥಾನ) ಬಾಗಿಲು ತೆರೆದಿರುವ ದಿನ ಎಂಬ ಪ್ರತೀತಿ ಇರುವುದರಿಂದ ಸಕಲ ಭಕ್ತಾದಿಗಳಿಗೆ ಗುರುಗಳ ಅಗಲಿಕೆಯ ನೋವಿದ್ದರೂ, ವೈಕುಂಠವಾಸಿಯಾದ ಸಾಕ್ಷಾತ್ ಮಹಾವಿಷ್ಣುವೇ ಸಿದ್ದೇಶ್ವರ ಸ್ವಾಮಿಗಳನ್ನು ಕರೆಸಿಕೊಂಡಿರಬಹುದು ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ಬದುಕು ಮುಗಿಯುತ್ತದೆ. ದೀಪ ಆರಿದಂತೆ, ತೆರೆ ಅಡಗಿದಂತೆ, ಮೇಘ ಕರಗಿದಂತೆ. ಉಳಿಯುವುದು ಬರೀ ಬಯಲು. ಮಹಾಮೌನ, ಶೂನ್ಯ ಸತ್ತು ನನ್ನದು ಆ ವೇಗವಿಲ್ಲದ, ಸಾವಧಾನದ ಸಾಮಾನ್ಯ ಬದುಕು ಆದ್ದರಿಂದಲೇ ನಾನು ಎಲ್ಲರಿಗೂ ಎಲ್ಲದಕ್ಕೂ ಉಪಕೃತ. ಸಹಜವೂ ಇಲ್ಲ, ಅಸಹಜವೂ ಇಲ್ಲ. ನಾನೂ ಇಲ್ಲ, ನೀನೂ ಇಲ್ಲ, ಇಲ್ಲ, ಇಲ್ಲ ಎಂಬುದು ತಾನಿಲ್ಲ ಹೀಗೆಂದು ಮಾರ್ಮಿಕವಾಗಿ, ಅಷ್ಟೇ ಕಟು ಸತ್ಯವನ್ನು 2014ರ ಗುರುಪೂರ್ಣಿಮೆಯಂದೇ ತಮ್ಮ ಅಂತಿಮ ಅಭಿನಂದನ ಪತ್ರ ಬರೆದಿಟ್ಟಿದ್ದರು ಎಂಬುದೀಗ ಬೆಳಕಿಗೆ ಬಂದಿದೆ. ಅದರಲ್ಲಿ ಸ್ಪಷ್ಟವಾಗಿ ನನ್ನ ದೇಹವನ್ನು ಸಮಾದಿ ಮಾಡದೇ, ನನ್ನ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿಬಿಡಿ. ನನಗೆ ಯಾವುದೇ ರೀತಿಯ, ಸ್ಮಾರಕವೂ ಬೇಡ ಎಂದು ಸಾವಿನಲ್ಲೂ ಸಾರ್ಥಕತೆ ಮೆರೆಸಿ ಎಲ್ಲರಿಗೂ ಅನುಕರಣಿಯರಾದ ಸರಳತೆಯ ಸಾಕಾರ ಮೂರ್ತಿಯಾಗಿದ್ದ ಶ್ರೀ ಸಿದ್ದೇಶ್ವರ ಸಾಮೀಗಳಂತಹ ಸಂತರ ಸಂತತಿ ನಮ್ಮ ದೇಶದಲ್ಲಿ ಅಗಣಿತವಾಗಲಿ ಎಂಬುದೇ ಸಕಲ ಭಾರತೀಯರ ಆಶಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
very good,, we the citizens of India should follow this Swamiji principles and then teach our next generation , then our India and world will become Haven
LikeLike
ನಾನೂ ಸಹ ಸಿದ್ಧೇಶ್ವರ ಸ್ವಾಮಿಗಳ ಬಗೆಗೆ ಕವನ ಬರೆದಿದ್ದೇನೆ… ಓದಿ ಅಭಿಪ್ರಾಯ ತಿಳಿಸಿ
LikeLike