ಜಯನಗರ

ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ನಾವಿಂದು ದಕ್ಷಿಣ ಬೆಂಗಳೂರಿನ ಪ್ರಮುಖ ಸ್ಥಳವಾದ ಜಯನಗರದ ಆರಂಭ ಮತ್ತು ಅಲ್ಲಿನ ಪ್ರಮುಖ ಸ್ಥಳಗಳ ಬಗ್ಗೆ ತಿಳಿಸುಕೊಳ್ಳೋಣ. ಬೆಂಗಳೂರಿನ ಜಯನಗರ ಪ್ರದೇಶವು ಮಥ್ಯಮ ವರ್ಗ ಮತ್ತು ಶ್ರೀಮಂತರ ವಸತಿ ಮತ್ತು ವಾಣಿಜ್ಯಗಳನ್ನು ಹೊಂದಿರುವ ಪ್ರದೇಶವಾಗಿದ್ದು ಹಲವಾರು ಮೊದಲುಗಳಿಗೆ ಇದು ಪ್ರಖ್ಯಾತವಾಗಿದೆ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

jayanagara21948ರಲ್ಲಿ ಆರಂಭವಾದ ಜಯನಗರದ ಇಂದು ಬಸವನಗುಡಿ, ಜೆಪಿ ನಗರ, ವಿಲ್ಸನ್ ಗಾರ್ಡನ್, ಬನಶಂಕರಿ 2 ನೇ ಹಂತ, ಗುರಪ್ಪನಪಾಳ್ಯ, ಸಿದ್ದಗುಂಟೆಪಾಳ್ಯ ಮತ್ತು ಬಿಟಿಎಂ ಬಡಾವಣೆಗಳಿಂದ ಸುತ್ತುವರಿದಿದ್ದು, ಇತಿಹಾಸ ಪ್ರಖ್ಯಾತವಾದ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಅತ್ಯಂತ ಸಮೀಪದಲ್ಲಿದೆ. ಜಯನಗರ ಬಡಾವಣೆಯು 1 ರಿಂದ 9ನೇ ಬ್ಲಾಕ್ ವರೆಗೂ ಇದ್ದು ಜಯನಗರದ 4 ನೇ ‘ಟಿ’ ಬ್ಲಾಕ್ ಕೂಡಾ ಸೇರಿದಂತೆ ಒಟ್ಟು 10 ಬ್ಲಾಕ್‌ಗಳು ಹೆಚ್ಚಾಗಿ ಜನನಿಬಿಡ ವಸತಿಯ ತಾಣವಾಗಿದ್ದರೆ, 3 ನೇ ಮತ್ತು 4 ನೇ ಬ್ಲಾಕ್‌ಗಳು ಅಂದಿನಿಂದ ಇಂದಿನ ವರೆಗೂ ಸಹಾ ವಾಣಿಜ್ಯ ಕೇಂದ್ರಗಳಾಗಿ ಬೆಂಗಳೂರಿಗರನ್ನು ಆಕರ್ಷಿಸುತ್ತಿದೆ. 2010 ರಲ್ಲಿ ಡಿಎನ್ಎ ನಡೆಸಿದ ಬೆಂಗಳೂರಿನ ಸಮೀಕ್ಷೆಯಲ್ಲಿ ಜಯನಗರವು ಬೆಂಗಳೂರಿನ ಅತ್ಯಂತ ವಾಸಯೋಗ್ಯ ಸ್ಥಳವೆಂದು ಪರಿಗಣಿಸಲ್ಪಟ್ಟು ಈಗಲೂ ಸಹಾ ಕನ್ನಡಿಗರ ಸೊಗಡು ಮತ್ತು ಅಸ್ಮಿತೆಯನ್ನು ಉಳಿಸಿಕೊಂಡಿರುವ ಪ್ರದೇಶವಾಗಿದ್ದು, ಜಾಗತೀಕವಾಗಿ ಬದಲಾಗುತ್ತಿರುವ ಕಾಲದಲ್ಲಿಯೂ ತನ್ನ ಹಳೆಯ ಆಕರ್ಷಣೆಯನ್ನು ಇನ್ನೂ ಉಳಿಸಿಕೊಂಡಿರುವುದು ಹೆಚ್ಚು ಗಮನಾರ್ಹವಾಗಿದೆ.

ಪ್ರತಿಯೊಂದು ಪ್ರದೇಶಗಳಿಗೂ ಅದರದ್ದೇ ಆದ ಐತಿಯಾಸಿಕ ಇಲ್ಲವೇ ಪೌರಾಣಿಕ ಹಿನ್ನಲೆ ಇರುವಂತೆ ಇಂತಹ ಜಯನಗರದ ಆರಂಭಕ್ಕೂ ಒಂದು ಸುಂದರವಾದ ರೋಚಕತೆ ಇದೆ. 1902 ರಿಂದ 1940ರ ವರೆಗೂ ಮೈಸೂರು ಸಂಸ್ಥಾನವನ್ನು ವಿಶ್ವವಿಖ್ಯಾತ ಗೊಳಿಸಿದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಗಸ್ಟ್ 3, 1940ರಲ್ಲಿ ನಿಧನರಾದ ನಂತರ ಮೈಸೂರು ಸಂಸ್ಥಾನಕ್ಕೆ ಮಹಾರಾಜರಾದ ಶ್ರಿಮನ್ಮಾಹಾರಾಜರಾದ ಶ್ರೀ ಚಯಚಾಮರಾಜೇಂದ್ರ ಒಡೆಯರ್ ಅವರು 1948ರಲ್ಲಿ ತಮ್ಮ ಪಟ್ಟಕ್ಕೇರಿದ 8ನೇ ವರ್ಷದ ಸವಿನೆನಪಿಗಾಗಿ, ಅಗಾಧವಾಗಿ ಎಗ್ಗಿಲ್ಲದೇ ದಿನೇ ದಿನೇ ಬೆಳೆಯುತ್ತಿದ್ದ ಬೆಂಗಳೂರಿನಲ್ಲಿ ಒಂದು ಸುಂದರವಾದ ಯೋಜಿತವಾದ ಬಡಾವಣೆಯನ್ನು ನಿರ್ಮಾಣ ಮಾಡಲು ಯೋಜಿಸಿ ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (CITB) ಎಂಬ ಪ್ರಾಧಿಕಾರವನ್ನು ಸ್ಥಾಪಿಸಿ ಅದಕ್ಕೆ ಸಿ.ನರಸಿಂಗ ರಾವ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಆರ್ ಮಾಧವನ್ ಅವರು ಮುಖ್ಯ ಎಂಜಿನಿಯರ್ ಆಗಿದ್ದರೆ, ಇಡೀ ಬಡಾವಣೆಯ ಕೆಲಸಕ್ಕೆ ಅಧಿಕೃತ ಗುತ್ತಿಗೆದಾರರಾಗಿ ಶ್ರೀ P. C. ರಂಗನಾಥಚಾರ್ ಅವರನ್ನು ನೇಮಿಸಲಾಯಿತು.

jayanagaraಅಂದಿನ ಮಾವಳ್ಳಿ ಮತ್ತು ಸಿದ್ದಾಪುರಕ್ಕೆ ಸೇರಿದ್ದ ಲಾಲ್ಬಾಗ್ ನಂತರ ಇದ್ದ, ಅರೇ ಕೆಂಪನಹಳ್ಳಿ (ಇಂದಿನ ಸೋಮೇಶ್ವರ ನಗರ), ಸಿದ್ಧಾಪುರದ ಕೆಲವು ಭಾಗ. ಕನಕನಪಾಳ್ಯ, ಬೈರಸಂದ್ರ (ಇಂದಿನ ತಿಲಕ್ ನಗರ), ಗುರಪ್ಪನಪಾಳ್ಯ (ಶಿವಬಾಲ ಯೋಗಿ ಆಶ್ರಮ), ತಾಯಪ್ಪನ ಪಾಳ್ಯ (ಇಂದಿನ ಜಯನಗರ ಟಿ ಬ್ಲಾಕ್), ಟಾಟ ಸಿಲ್ಕ್ ಫಾರ್ಮ್, ಶ್ರೀ ಪಟ್ಟಾಭಿರಾಮ ನಗರ, ಸಾಕಮ್ಮಾ ಗಾರ್ಡನ್, ಯಡಿಯೂರು ಕೆರೆ ಸೇರಿದಂತೆ ಹತ್ತು ಹಲವಾರು ಪ್ರದೇಶಗಳನ್ನು ಒಳಗೊಂಡಂತೆ, ಅಂದಿನ ಕಾಲದಲ್ಲೇ ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ ಯೋಜಿತ ಬಡಾವಣೆಯನ್ನು ನಿರ್ಮಾಣ ಮಾಡುವ ನೀಲ ನಕ್ಷೆಯನ್ನು ತಯಾರಿಸಲಾಯಿತು

ap2ಇಂತಹ ಸುಂದರ ಕಲ್ಪನೆಯ ಯೋಜನೆಯನ್ನು ಸಿದ್ದಾಪುರ ಮತ್ತು ಲಾಲ್ ಬಾಗ್ ಹಿಂದೆ ಇದ್ದ ಕನಕನಪಾಳ್ಯದಿಂದ ಆರಂಭಿಸಲು ನಿರ್ಧರಿಸಿ ಆಯೋಜನೆಗೆ ಅಡಿಗಲ್ಲನ್ನು ಹಾಕಲು 20 ಆಗಸ್ಟ್ 1948 ರಂದು ನಿಗಧಿಪಡಿಸಿ ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತದ ಕೊನೆಯ ಗವರ್ನರ್ ಜನರಲ್ ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದ ಅಡಿಕಲ್ಲು ಹಾಕುವ ಸಲುವಾಗಿ ಹಿಂದಿನ ದಿನ ಅರ್ಥಾತ್ ಆಗಸ್ಟ್ 19 ರಂದು ಕಂಡು ಕೇಳರಿಯದ ಮಳೆಯು ಬೀಳುತ್ತಿದ್ದ ಸಮಯದಲ್ಲಿ ಅಲ್ಲಿನ ಸ್ಮಾರಕ ನಿರ್ಮಾಣದ ಹೊಣೆ ಹೊತ್ತಿದ್ದ ಮೇಸ್ತ್ರಿ ಇದ್ದಕ್ಕಿದ್ದಂತೆಯೇ ಕಾಣದೇ ಹೋದಾಗ, ಎಲ್ಲರ ಮನದಲ್ಲೂ ಆತಂಕ ಮೂಡಿತ್ತು. ಆದರೆ ಸುರಿವ ಮಳೆಯನ್ನೂ ಲೆಖ್ಖಿಸದೇ ಆಂತಹ ಮಧ್ಯರಾತ್ರಿಯಲ್ಲಿಯೂ ಅಂದಿನ ಸಿಐಟಿಬಿಯ ಅಧ್ಯಕ್ಷರಾಗಿದ್ದ ಸಿ.ನರಸಿಂಗ ರಾವ್, ಮುಖ್ಯ ಎಂಜಿನಿಯರ್ ಆರ್ ಮಾಧವನ್ ಮತ್ತು ಗುತ್ತಿಗೆದಾರರಾಗಿದ್ದ ಪಿ.ಸಿ.ರಂಗನಾಥಚಾರ್ ಅರುಣಾಚಲಂ ಎಂಬ ಮತ್ತೊಬ್ಬ ನುರಿತ ಮೇಸ್ತ್ರಿಯನ್ನು ತ್ವರಿತವಾಗಿ ನಿಯೋಜಿಸಿ, ಕೂಡಲೇ ಎತ್ತರದ ಟಾರ್ಪಾಲ್ ಹಾಕಿಸಿ, ಪೆಟ್ರೋಮ್ಯಾಕ್ಸ್ ದೀಪಗಳ ಸಹಾಯದೊಂದಿಗೆ ರಾತ್ರಿಯಿಂದ ಬೆಳಗಾಗುದರ ಒಳಗೆ 20 ಅಡಿ ಎತ್ತರದ ಕಲ್ಲಿನ ರಚನೆಯಾದ ಅಶೋಕ ಸ್ತಂಭವನ್ನು ಅಲ್ಲಿ ಸ್ಥಾಪನೆ ಮಾಡಿ, 1948ರ ಆಗಸ್ಟ್ 20ರಂದು ಸಿ. ರಾಜಗೋಪಾಲಾಚಾರಿ ಅವರ ಅಮೃತ ಹಸ್ತದಿಂದ ಆ ಮಹೋನ್ನತ ಯೋಜನೆಗೆ ಅಡಿಕಲ್ಲನ್ನು ಹಾಕಿಸಿ ಆ ಬಡಾವಣೆಗೆ ಜಯನಗರ ಎಂಬ ಹೆಸರಿಡಲಾಯಿತು. ಕನ್ನಡದಲ್ಲಿ ಜಯ+ನಗರ ಎಂದು ವಿಭಜಿಸಿದರೆ ಅದು ಜಯ ಅಥವಾ ವಿಜಯದ ಸಂಕೇತ ಎಂದು ಮೂಡಿಸುತ್ತದಾದರೂ, ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರ ನೆನಪಿನಾರ್ಥವಾಗಿ ಜಯನಗರ ಎಂದು ಹೆಸರಿಸಲಾಯಿತು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಂದಿನ ಕಾಲದಲ್ಲಿ ಆ ಅಶೋಕಸ್ಥಂಭದ ಸ್ಥಾಪನೆಗೆ ಸುಮಾರು 3,000 ರೂಗಳನ್ನು ವೆಚ್ಚ ಮಾಡಲಾಗಿತ್ತು. 20 ಅಡಿ ಎತ್ತರದ ಗ್ರಾನೈಟ್ ಕಲ್ಲಿನಿಂದ ಮಾಡಲಾಗಿರುವ ಅಶೋಕ ಸ್ತಂಭದ ಮೇಲ್ತುದಿಯಲ್ಲಿ ನಮ್ಮ ರಾಷ್ಟ್ರೀಯ ಲಾಂಛನದಂತೆಯೇ ನಾಲ್ಕು ಸಿಂಹಗಳನ್ನು ಹೊಂದಿದ್ದು ಅದರ ಜೊತೆಯಲ್ಲಿಯೇ ಮೈಸೂರಿನ ರಾಜ ಲಾಂಛನವಾದ ಎರಡು ತಲೆಯ ಗಂಡಭೇರುಂಡವನ್ನು ಸಹ ಹೊಂದಿರುವುದು ವಿಶೇಷವಾಗಿದೆ. ಇಂದು ಈ ಸ್ಥಳ ಆಶೋಕ ಪಿಲ್ಲರ್ ಎಂದೇ ಪ್ರಸಿದ್ಧವಾಗಿದೆ

ಮುಖ್ಯ ಇಂಜಿನಿಯರ್ ಮಾಧವನ್ ಅವರ ಸಾರಥ್ಯದಲ್ಲಿ, ರಂಗನಾಥ ಚಾರ್ ನಿರ್ಮಿಸಿದ, ಜಯನಗರವು ಈಗಾಗಲೇ ತಿಳಿಸಿರುವ ಹಳೆಯ ಹಳ್ಳಿಗಳನ್ನು ಒಗ್ಗೂಡಿಸಿ ಒಟ್ಟು 10 ಬ್ಲಾಕ್‌ಗಳನ್ನಾಗಿ ವಿಂಗಡಿಸಿ ನಿರ್ಮಿಸಲಾಯಿತು. ಜಯನಗರದ 3 ಮತ್ತು 4 ನೇ ಬ್ಲಾಕ್ ಗಳಲ್ಲಿ ಹೆಚ್ಚು ವಾಣಿಜ್ಯ ಕಟ್ಟಡಗಳಿಗೆ ಮಾನ್ಯತೆ ಕೊಟ್ಟು ಅಲ್ಲಿ ತರಕಾರಿ ಮಾರುಕಟ್ಟೆ, ಹೋಟೇಲ್ಲುಗಳನ್ನು ಆರಂಭಿಸಲಾಯಿತು. ಅದೇ ರೀತಿ ಇಡೀ ಬಡಾವಣೆ ಅತ್ಯಂತ ತಂಪಾದ ಹವಾಮಾನ ಹೊಂದಿರುವಂತೆ ಜಯನಗರದ ಮಾರ್ಗಗಗಳ ಇಕ್ಕೆಲಗಳಲ್ಲಿಯೂ ಗರಿಷ್ಠ ಪ್ರಮಾಣದ ಮರಗಳನ್ನು ನೆಟ್ಟ ಪರಿಣಾಮ ಇಂದಿಗೂ ಸಹಾ ಬಹುಶಃ ಬೆಂಗಳೂರಿನ ಇತರೇ ಎಲ್ಲಾ ಪ್ರದೇಶಗಳಿಗಿಂತಲೂ ಹೆಚ್ಚಿನ ಮರಗಳನ್ನು ಜಯನಗರದಲ್ಲಿ ಕಾಣಬಹುದಾಗಿದೆ. ಜಯನಗರದಲ್ಲಿ 1968ರಲ್ಲಿ ಉದ್ಘಾಟನೆಗೊಂಡ ಸಿಟಿ ಸೆಂಟ್ರಲ್ ಲೈಬ್ರರಿಯು ಅತ್ಯಂತ ಜನನಿಬಿಡ ಗ್ರಂಥಾಲಯಗಳಲ್ಲಿ ಒಂದಾಗಿದ್ದು ಇಂದಿಗೂ ಸಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಹೆಚ್ಚಾಗಿ ಭೇಟಿ ನೀಡುವ ಗ್ರಂಥಾಲಯವಾಗಿದೆ.

elephant-rock-looks-likeಈಗಾಗಲೇ ತಿಳಿಸಿದಂತೆ ಜಯನಗರದ 1 ರಿಂದ 9ನೇ ಬ್ಲಾಕಿನ ವರೆಗೂ ಇದ್ದ ಅನೇಕ ಹಳ್ಳಿಗಳು ತಮ್ಮ ಮೂಲ ಹೆಸರಿನ ಅಸ್ಮಿತೆಯನ್ನು ಕಳೆದು ಕೊಂಡು ಜಯನಗರದ ವಿವಿಧ ಬ್ಲಾಕ್ ಗಳಲ್ಲಿ ವಿಲೀನ ವಾದರೂ ಜಯನಗರ 4ನೇ ಬ್ಲಾಕಿನ ಪಕ್ಕದಲ್ಲಿದ್ದ ತಾಯಪ್ಪನ ಹಳ್ಳಿ ಗ್ರಾಮದವರು ಮಾತ್ರಾ, ತಮ್ಮ ಮೂಲ ಹೆಸರಿನ ಅಸ್ಮಿತೆಯನ್ನು ಕಳೆದುಕೊಳ್ಳಲು ಇಚ್ಚಿಸಲಿಲ್ಲ. ಬಹಳ ಹಿಂದೆ ತಾಯಪ್ಪ ಎಂಬ ಪುಣ್ಯಾತ್ಮ ಆ ಪ್ರದೇಶಕ್ಕೆ ಅತ್ಯಂತ ಹೆಚ್ಚಿನ ರೀತಿಯ ಸೌಕರ್ಯಗಳನ್ನು ನೀಡಿ ಆ ಪ್ರದೇಶವನ್ನು ಆಳಿದ್ದ ಕಾರಣ ಅವರ ನೆನಪಿನಾರ್ಥವಾಗಿಯೇ ಆ ಪ್ರದೇಶಕ್ಕೆ ತಾಯಪ್ಪನಹಳ್ಳಿ ಎಂಬ ಹೆಸರು ಬಂದಿದ್ದ ಕಾರಣ, ಅಲ್ಲಿನ ಜನರು ತಾಯಪ್ಪ ಹೆಸರು ಅಜರಾಮರವಾಗಿರಸಬೇಕೆಂದು ಆಗ್ರಹ ಪಡಿಸಿದರು. ಆಗ ಮಹಾರಾಜರು ಜನರ ಒತ್ತಾಯಕ್ಕೆ ಮಣಿದು ಅವರ ಮನಸ್ಸನ್ನು ಬೇಸರ ಪಡಿಸಲು ಇಚ್ಚಿಸದೇ, ಜಯನಗರದ ಜೊತೆ ತಾಯಪ್ಪನವರ ಹೆಸರೂ ಸೇರಿಸಿ ಆ ಪ್ರದೇಶಕ್ಕೆ ಜಯನಗರ 4ನೇ ಟಿ ಬ್ಲಾಕ್‌ ಎಂದು ಕರೆಯುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಜಾಣ್ಮೆಯನ್ನು ತೋರಿದ್ದರು. ತಾಯಪ್ಪನಹಳ್ಳಿ ಜನರ ಆಶಯವೇನೋ ಈಡೇರಿತಾದರೂ. ಜನರ ನೆನಪಿನಂಗಳದಲ್ಲಿ ತಾಯಪ್ಪನವರ ಹೆಸರು ಮಾಯವಾಗಿ ಅದು ಕೇವಲ ‘ಟಿ’ ಆಗಿ ಉಳಿದುಕೊಂಡಿದ್ದು ಹೆಚ್ಚಿನವರು ‘ಟಿ’ ಎಂದರೆ ತಿಲಕ್ ನಗರ ಎಂದು ತಿಳಿದುಕೊಂಡಿರುವುದು ವಿಪರ್ಯಾಸವಾಗಿದೆ.

jshopping complex1976 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ್ ಅರಸ್ ಅವರು ಜಯನಗರದ 4 ನೇ ಬ್ಲಾಕಿಗೆ ಮುಖುಟ ಪ್ರಾಯವಾಗಿ ಜಯನಗರ BDA ಶಾಪಿಂಗ್ ಕಾಂಪ್ಲೆಕ್ಸ್ ಒಂದನ್ನು ಕಟ್ಟಿಸಿ ಅದು ಬೆಂಗಳೂರಿನ ಮೊತ್ತ ಮೊದಲ ಶಾಪಿಂಗ್ ಕಾಂಪ್ಲೆಕ್ಸ್ ಎಂಬ ಕೀರ್ತಿಗೆ ಪಾತ್ರಗಿದ್ದಲ್ಲದೇ, ಅದೇ ಕಾಂಪ್ಲೆಕ್ಸಿನಲ್ಲಿ ಒಂದು ಪುಟ್ಟ ರಂಗಮಂದಿರವನ್ನೂ ಸಹಾ ಕಟ್ಟಿಸುವ ಮೂಲಕ ಮನೋರಂಜನೆಯ ತಾಣವಾಯಿತು, ಮುಂದೆ ಇದು ಪ್ರಸಿದ್ಧ ಪುಟ್ಟಣ್ಣ ಕಣಗಾಲ್ ರಂಗಮಂದಿರ ಎಂದೇ ಪ್ರಖ್ಯಾತವಾಯಿತು. ಅಂದಿನ ಕಾಲಕ್ಕೆ ಜಯನಗರವನ್ನು ಸಾಂಪ್ರದಾಯಿಕವಾಗಿ ಬೆಂಗಳೂರಿನ ದಕ್ಷಿಣ ತುದಿ ಎಂದು ಪರಿಗಣಿಸಲಾಗಿದ್ದು ಹಾಗಾಗಿಯೇ ಆರು ರಸ್ತೆಗಳು ಸೇರುವ ವೃತ್ತಕ್ಕೆ “ಸೌತ್ ಎಂಡ್ ಸರ್ಕಲ್” ಎಂದೇ ಹೆಸರಿಸಲಾಗಿತ್ತು.

ragigudda70ರ ದಶಕದಲ್ಲಿ ಜಯನಗರ 9ನೇ ಬ್ಲಾಕ್‌ನಲ್ಲಿ ತಲೆ ಎತ್ತಿದ ರಾಗಿಗುಡ್ಡ ಆಂಜನೇಯ ದೇವಸ್ಥಾನವಲ್ಲದೇ, ಅಲ್ಲಿರುವ ಮೂರ್ನಾಲ್ಕು ರಾಘವೇಂದ್ರ ಸ್ವಾಮಿ ಮಠಗಳು, ಹತ್ತಾರು ಹಿಂದೂ ದೇವಾಲಯಗಳಲ್ಲದೇ, ಜೈನ ಮಂದಿರವೂ ಸೇರಿಕೊಂಡು ಜಯನಗರವು ದಕ್ಷಿಣ ಬೆಂಗಳೂರಿನ ಅತ್ಯಂತ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಶಾಲಿನಿ ಆಟದ ಮೈದಾನ, ಜಯನಗರ ಕ್ಲಬ್, ಅದರ ಹಿಂದೆಯೇ ಇರುವ ಕ್ರೀಡಾಂಗಣ ಮತ್ತು ವಿಶ್ವವಿಖ್ಯಾತ ಈಜುಕೊಳ, ಅದೇ ರೀತಿಯಲ್ಲೇ ಜಯನಗರದ 3ನೇ ಬ್ಲಾಕಿನಲ್ಲಿ ಇರುವ 500 ವರ್ಷಗಳಷ್ಟು ಹಳೆಯದಾದ ಪಟಾಲಮ್ಮ ದೇವಾಲಯವಿದ್ದು, ಅಲ್ಲಿ ಪಟಾಲಮ್ಮ ದೇವಿಯು ಆನೆಯ ಮೇಲೆ ಸವಾರಿ ಮಾಡುತ್ತಾ ಈ ಸ್ಥಳದಲ್ಲಿ ಇಳಿದಾಗ ಅದು ಆನೆಯು ಬಂಡೆಯ ರೂಪವನ್ನು ಪಡೆಯಿತು ಎಂದು ನಂಬಲಾಗಿರುವ ಕಾರಣ, ಆ ಬಂಡೆ ಆನೆ ಬಂಡೆ ಅಥವಾ ‘ಎಲಿಫೆಂಟ್ ರಾಕ್’ ಎಂದೇ ಪ್ರಖ್ಯಾತವಾಗಿದ್ದು, ಸ್ಥಳೀಯರು ಆ ಬಂಡೆಗೆ ಆನೆಯ ಮುಖದ ಬಣ್ಣ ಬಳಿದಿರುವ ಕಾರಣ ಅದನ್ನು ನೋಡಲು ಸಹಸ್ರಾರು ಜನರು ತಮ್ಮ ಮಕ್ಕಳೊಂದಿಗೆ ಬರುತ್ತಾರೆ.

jayanagara3ಇತ್ತೀಚೆಗೆ ಬೆಂಗಳೂರಿನಲ್ಲಿ ಅತ್ಯಾಧುನಿಕ ರೀತಿಯ ಹತ್ತಾರು ಮಾಲ್ ಗಳು ಇದ್ದರೂ ಸಹಾ ಇಂದಿಗೂ ಸಹಾ ಹಳೆಯ ಬೆಂಗಳೂರಿಗರು ಜಯನಗರವ ವಾಣಿಜ್ಯ ಮಳಿಗೆಯಲ್ಲೇ ವ್ಯಾಪಾರ ಮಾಡಲು ಇಚ್ಚಿಸುವುದು ಜಯನಗರದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದರ ಜೊತೆಯಲ್ಲೇ ಅನೇಕ ಮತ್ತು ಸಾಂಸ್ಥಿಕ ಸಂಸ್ಥೆಗಳನ್ನು ಹೊಂದಿರುವ ಅತ್ಯಂತ ಶ್ರೀಮಂತ ವಸತಿ ಪ್ರದೇಶವಾಗಿದ್ದು ಇಂದಿಗೂ ಜಯನಗರ ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಅತ್ಯಂತ ದುಬಾರಿ ನೆರೆಹೊರೆಗಳಲ್ಲಿ ಒಂದಾಗಿದ್ದು, ಇಂದು ಕಾಲ ಬದಲಾದಂತೆಲ್ಲಾ, ಹಿಂದೆ ಇರುತ್ತಿದ್ದ ವಿಶಾಲವಾದ ಒಂಟೀ ಮನೆಗಳ ಜಾಗದಲ್ಲಿ ಇಂದು ಬಹುಮಹಡಿಯ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದ್ದರೂ, ಇಂದಿಗೂ ಹಳೆಯ ಮರಗಿಡಗಳನ್ನು ಉಳಿಸಿಕೊಂಡಿರುವ ಕಾರಣ, ಬೆಂಗಳೂರಿನ ಇತರ ಪ್ರದೇಶಗಳಿಗೆ ಹೋಲಿಸಿದಲ್ಲಿ ಜಯನಗರ ಮತ್ತು ಸುತ್ತಮುತ್ತಲಿನ ಹವಾಮಾನವು ಅತ್ಯಂತ ತಂಪಾಗಿದೆ.

ಜಯನಗರದ 4ನೇ ಬ್ಲಾಕ್‌ನಲ್ಲಿರುವ ಸಾತ್ವಿಕ್ ಸಸ್ಯಾಹಾರಿ ರೆಸ್ಟೋರೆಂಟ್ ಈ ಪ್ರದೇಶದ ಅತ್ಯಂತ ಹಳೆಯ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದ್ದು, ಹಲವು ದಶಕಗಳಿಂದ ರುಚಿಕರವಾದ ಆಹಾರವನ್ನು ನೀಡುತ್ತಿದರೆ ಅಲ್ಲೇ ಕೂಲ್ ಜಾಯಿಂಟ್ ಜೊತೆಗೆ ಅನೇಕ ಬೇಕರಿಗಳು ಮತ್ತು ಫಾಸ್ಟ್ ಪುಡ್ ಸೆಂಟರ್ ಗಳು ಇಂದಿನ ಜನಾಂಗದ ವೈವಿಧ್ಯಮಯ ಖಾದ್ಯಗಳ ಬರವನ್ನು ನೀಗಿಸುತ್ತಿದೆ.

ಅಂದು ದಕ್ಷಿಣ ಬೆಂಗಳೂರಿನ ತುತ್ತ ತುದಿಯಾಗಿದ್ದ ಜಯನಗರದ ಆಚೆಗೂ ಹತ್ತಾರು ಕಿಮೀಗಳ ದೂರಕ್ಕೆ ಅನೇಕ ಬಡಾವಣೆಗಳು ಬೆಳೆದು, ಇಂದು ಜಯನಗರ ಬೆಂಗಳೂರಿನ ಹೃದಯಭಾಗವಾಗಿದೆ. ಕೆಲ ವರ್ಷಗಳ ಹಿಂದೆ ಆಧುನಿಕ ಶೈಲಿಯಲ್ಲಿ ನಿರ್ಮಾಣವಾದ ಜಯನಗರ ಬಸ್ ಸ್ಟಾಂಡ್ ಅಲ್ಲದೇ ನಮ್ಮ ಮೆಟ್ರೋ ಸಹಾ ಜಯನಗರದ ಪ್ರಮುಖ ಪ್ರದೇಶಗಳ ಮೂಲಕ ಹಾದು ಹೋಗಿರುವ ಕಾರಣ, ಎಲ್ಲರೂ ಸಹಾ ಆರಾಮವಾಗಿ ಜಯನಗರಕ್ಕೆ ಬಂದು ಹೋಗಿ ಮಾಡುವಂತಾಗಿದೆ.

ಸಮಯ ಮಾಡಿಕೊಂಡು ಇಷ್ಟೆಲ್ಲಾ ಇತಿಹಾಸದ ಹಿನ್ನಲೆ ಇರುವ ಮತ್ತು ವೈವಿದ್ಯಮಯವಾಗಿರುವ ಜಯನಗರಕ್ಕೆ ಒಮ್ಮೆ ಭೇಟಿ ನೀಡಿ ಅಲ್ಲಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನಕ್ಕೆ ಅಗತ್ಯವಿರುವ ಮಾಹಿತಿಗಳನ್ನು ಒದಗಿಸಿದ ಸಹೋದರ ಸುದರ್ಶನ್ ಬಾಳಗಂಚಿ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು

13 thoughts on “ಜಯನಗರ

 1. ಬೆಂಗಳೂರಿನ ಪ್ರತಿಷ್ಟಿತ ಬಡವಾಣೆ ಜಯನಗರದ ಮಾಹಿತಿ ತಿಳಿಸಿ ಕೊಟ್ಟ ಶ್ರೀ ಕಂಠ ಅಣ್ಣ ನಿಗೆ ಧನ್ಯವಾದಗಳು.

  ಮೊದಲನೆಯದಾಗಿ ಜಯನಗರ ಬಡವಾಣೆ ಅಂತ ವಿಷಯ ಬರೆದಿದ್ದಾರೆ ಎಂದ ಕಣ್ಣಾಡಿಸಲ್ಲು ಕೂಡಲೇ ಕುತೂಹಲ ಕೆರಳಿಸಿತು, ಬಿಡದೆ ಓದಬೇಕು ಎಂದು ನಿರ್ಧರಿಸಿದೆ ಕಾರಣ ನಾನು ಸಹ ಆ ಬಡವಾಣೆಯ ಸಮೀಪ ವಾಸ ಮಾಡಿದು.

  ಓದುತ್ತಾ ಸಾಗುತ್ತಿದ್ದಂತೆ ಆ ಬಡವಾಣೆಯ ಹಿಂದಿನ ಕಥೆ ತಿಳಿಯಿತು,

  ಮೈಸೂರು ಅಂದಿನ ಮಹಾರಾಜರು ತಮ್ಮ ದೂರದೃಷ್ಟಿಯ ಫಲವಾಗಿ ಇಂದು ಜಯನಗರ ೧ ಬ್ಲ್ಯಾಕ್ ನಿಂದ ೯ ಬ್ಲಾಕ್ ವರೆಗೆ ಹೆಮ್ಮರವಾಗಿ ಬೆಳೆಯತೊಡಗಿತು,

  ಜಯನಗರ ಇಂದಿಗೂ ಸಹ ಪ್ರತಿಷ್ಠಿತ ಶಾಲಾ ಕಾಲೇಜುಗಳು, ( ವಿಜಯ, ನ್ಯಾಷನಲ್ ಕಾಲೇಜ್, ಎನ್. N.M.K.R V, ರಾಷ್ಟ್ರೀಯ ವಿದ್ಯಲಯ, ) ಹೀಗೆ ಹತ್ತು ಹಲವಾರು ಶಾಲ ಕಾಲೇಜುಗಳು ಒಡಗೂಡಿದೆ, ವಿಶೇಷವಾಗಿ ಅಗಲವಾದ ರಸ್ತೆ, ಹಸಿರು ಸಾಲು ಮರಗಳು, ಲಾಲ್ ಬಾಗ್, ಉದ್ಯಾನವು, ಪ್ರತಿಷ್ಠಿತ Nimhans, ,jayadeva, Appolo, Sagar Hospitals, ಕಲ್ಯಾಣಮಂಟಪಗಳು ಹೀಗೆ ನಾನಾ ವಿಧವಾದ ಜನರಿಗೆ ಬೇಕಾದ ಎಲ್ಲಾ ತರಹ ಪ್ರದೇಶವಾಗಿದೆ. ಸುಪ್ರಸಿದ್ಧ ಚಲನಚಿತ್ರ ನಟರು , Software company CEO ಗಳು ಸಹ ಇಲ್ಲೆ ವಾಸಿಸುತ್ತಿದ್ದು, ಒಂದು ರೀತಿಯಲ್ಲಿ ದುಬಾರಿ ಕೇಂದ್ರ ವಾಗಿದೆ.

  ಒಂದು ಕಾಲದಲ್ಲಿ ಬೆಂಗಳೂರು ಹಳೆಯ ಕೆಲವು ಪ್ರದೇಶಗಳಲ್ಲಿ ಇದು ಒಂದು. ಇಂದು ಸಹ ತನ್ನ ಸೊಬಗನ್ನು ಉಳಿಸಿಕೊಂಡಿದೆ.

  ಹಿಂದೆ ಇಲ್ಲೆ ಇದ್ದ ನಂದ, ಶಾಂತಿ, ಸ್ವಾಗತ್, ಪುಟ್ಟಣ, ಡ್ರೈವಿನ್ Theaters ಗಳು
  ಇಂದು ಮಾಲ್ , apartment ಗಲ್ಲಾಗಿ ಬದಲಾಗಿವೆ.

  ಜಯನಗರದ ಬಗ್ಗೆ ಇನ್ನೂ ನೂರಾರು ವಿಷಯ ಕುರಿತು ಹೇಳಬಹುದು,
  ಆದರೆ ಈ ಸಂದರ್ಭ ಒದಗಿ ಬಂದ ದರಿಂದ ನನಗೂ ತಿಳಿಯಲು ಹಾಗೂ ತಳಿಸಲು ಸಂತೋಷವಾಯಿತು.

  ನನ್ನ ಹಳೆಯದಾದ ನೆನಪಿಗೆ ಕರೆದೊಯ್ದು ಶ್ರೀ ಕಂಠ ರವರಿಗೆ ಧನ್ಯವಾದ ತಿಳಿಸುತ್ತ ಮುಗಿಸುತ್ತೆನೆ.

  ಓಂ ನಮೋ ನಾರಾಯಣಾಯ

  Like

  1. ಗತ ವೈಭವದೊಂದಿಗೆ ಇಂದಿನದ್ದನ್ನು ಹೋಲಿಸಿಕೊಂಡಾಗ ಈ ರೀತಿ ಭಾವನೆ ಮೂಡುವುದು ಸಹಜ.

   ಅಶ್ವತ್ಥಾಮನಿಗೆ ದುರ್ಯೋಧನನ ಅರಮನೆಯಲ್ಲಿ ನಿಜವಾದ ಹಸುವಿನ ಹಾಲನ್ನು ಕುಡಿಯುವವರೆಗೂ ಅವರಮ್ಮ ಕೊಡುತ್ತಿದ್ದ ಹಿಟ್ಟು ಕಲೆಸಿದ ಬಿಳಿ ದ್ರವ್ಯವೇ ಹಾಲು ಎಂದು ತಿಳಿದಿದ್ದ ಹಾಗೆ ಜಯನಗರದಿಂದ ಹೊರಗೆ ಹೋಗಿ ಬಂದ ನಂತರವೇ, ಜಯನಗರದ ಮಹತ್ವ ಅರಿವಾಗುವುದು ಅಲ್ವೇ?

   ಏನಂತೀರೀ?

   Like

 2. ಜಯನಗರ ೧೯೭೬ ರಲ್ಲಿ ನಾವು ಬಂದು ನೆಲಸಿದಾಗ ಭೂಲೋಕ-ಸ್ವರ್ಗದಂತಿತ್ತು. ಅದಾಗಲೇ ನಿರ್ಮಿತವಾದ ಶಾಪಿಂಗ್ ಕಾಂಪ್ಲೆಕ್ಸ್ ಮನ ಸೆಳೆಯುತಿತ್ತು. ಕಾಲ್ದಾರಿಗಳು ಅಗಲವಾಗಿ ನಿರ್ಮಲವಾಗಿದ್ದವು. ಈಗಿನ ಜಯನಗರ ತುಂಬಾ ಬದಲಾಗಿದೆ. ಕಾಲ್ದಾರಿಗಳನ್ನು ಬೀದಿ ವ್ಯಾಪಾರಿಗಳು ಆಕ್ರಮಿಸಿ ಕೊಂಡಿದ್ದಾರೆ
  ಜನ ಹಾಗೂ ವಾಹನ ನಿಬಿಡತೆ ಜತೆಗೆ ಪಾರ್ಕಿಂಗ್ ಪ್ರದೇಶದ ಅಲಭ್ಯತೆಯಿಂದ ಸಂಚಾರ ಕಷ್ಟಸಾಧ್ಯವಾಗಿದೆ. ಇವೆಲ್ಲ ಕೊರತೆಗಳಿದ್ದರೂ, ನಮ್ಮ ಜಯನಗರ ಬೆಂಗಳೂರಿನ ಇತರ ಭಾಗಗಳಿಂದ ಎಷ್ಟೋ ಮೇಲು. ಜೈ ಜಯನಗರ …..

  Like

 3. My uncle was stated at khb quaters at lalbagh siddapura behind lalbagh South gate who working in mico factory audugidi my sister established at 36th cross near RV metro station really Jayanagar once upon a time called- it as layout of trees but due to heavy traffic metro establishment almost 50%if the trees are cut down and day to day become silicon city

  Like

  1. ನಮ್ಮ ಸಂಸ್ಥೆಯ ಮುಖ್ಯ ಕಛೇರಿ ಇರುವುದೇ ಜಯನಗರದಲ್ಲಿ. ನಾನು ಕೆಲಸ ಮಾಡುವುದು ಅಲ್ಲಿಯೇ. ಒಂದು ಬ್ಲಾಕ್ ಮಾತ್ರ T ಬ್ಲಾಕ್ ಹೇಗೆ ಎಂಬ ನನ್ನ ದಶಕಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಧನ್ಯವಾದಗಳು

   Like

 4. Our house was built in 1957 in 3rd block, very first house tobe constructed near stadium, standing alone. Family moved in 1965. Most of the time we used to see film shooting especially kannada. Mosquito was the main problem for the residents. After BDA complex came up it became pensioner’s meeting point. Madhavan park was the last BTS bus stop. Rest is history. Nostalgic memories.

  Liked by 2 people

 5. ನಮ್ಮ ಸಂಸ್ಥೆಯ ಮುಖ್ಯ ಕಛೇರಿ ಇರುವುದೇ ಜಯನಗರದಲ್ಲಿ. ನಾನು ಕೆಲಸ ಮಾಡುವುದು ಅಲ್ಲಿಯೇ. ಒಂದು ಬ್ಲಾಕ್ ಮಾತ್ರ T ಬ್ಲಾಕ್ ಹೇಗೆ ಎಂಬ ನನ್ನ ದಶಕಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಧನ್ಯವಾದಗಳು

  Liked by 1 person

 6. I am SV Jayarama ( Siddapura Venkatappa Jayarama) born in Siddapura in 1955
  In student days I used to go Lalbagh for playing and studied primery school in lalbagh only I mean just opposite to siddapura gate those days very nice for playing in lalbagh
  Later on for middle school shifted to Wilson garden going by walk only through Siddapura lake
  JAYANAGAR
  Jayanagar start from Ashoka pillar only means Ist block In
  Our house address mention as Lal bagh siddapura Jayanagar Ist block
  Always going to market and other places to catch buses from Ashoka pillar only it is very close to Siddapura
  Iam very much remember
  Jayanagar surrounded by Siddapura, Kanakanapalya, Byrasandra, Nagasandra, Tayappana palya Yediyuru in Ist phase of Extension from Jayanagar Ist block to 9th block
  Later on started JP nagar

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s