ದೇಶದ ರಾಜಧಾನಿ ದೆಹಲಿಯ ಕೇಜ್ರೀವಾಲ್ ಸರ್ಕಾರ 2021 ರಲ್ಲಿ ಹೊಸಾ ಮದ್ಯ ಮಾರಾಟದ ನೀತಿಯನ್ನು ಜಾರಿಗೆ ತಂದಿದ್ದು ಈ ನೀತಿಯ ಅಡಿಯಲ್ಲಿ ಅದುವರೆವಿಗೂ ಸರ್ಕಾರದ ಅಡಿಯಲ್ಲಿದ್ದ ಮದ್ಯವನ್ನು ಮಾರಾಟವನ್ನು ತೆಗೆದು ಹಾಕಿ ಸರ್ಕಾರದ ಯಾವುದೇ ಸಂಬಂಧವಿಲ್ಲದೇ ನೇರವಾಗಿ ಖಾಸಗಿ ಅಂಗಡಿಗಳೇ ಮದ್ಯದ ಮಾರಾಟ ಮಾಡುವ ಅವಕಾಶವನ್ನು ಕಲ್ಪಿಸಿಕೊಡಲಾಯಿತು. ಈ ರೀತಿಯಿಂದಾಗಿ ಕಪ್ಪು ಮಾರುಕಟ್ಟೆಯನ್ನು ನಿಲ್ಲಿಸುವುದರ ಜೊತೆಗೆ ಸರ್ಕಾರಕ್ಕೆ ಯಾವುದೇ ಕೆಲಸವಿಲ್ಲದೇ ಆದಾಯವೂ ಹೆಚ್ಚುಫುದಲ್ಲದೇ ಗ್ರಾಹಕರ ಅನುಭವವನ್ನು ಸುಧಾರಿಸುತ್ತದೆ ಎನ್ನುವುದು ಆಮ್ ಆದ್ಮಿ ಸರ್ಕಾರದ ಹೇಳಿಕೆಯಾಗಿತ್ತು. ಇವಿಷ್ಟೇ ಅಲ್ಲದೇ, ಮದ್ಯವನ್ನು ನೇರವಾಗಿ ಗ್ರಾಹಕರುಗಳ ಮನೆಗಳಿಗೇ ವಿತರಣೆ ಮಾಡುವ ಮತ್ತು ಮದ್ಯದ ಅಂಗಡಿಗಳನ್ನು ಬೆಳಗಿನ ಜಾವ 3 ಗಂಟೆಯವರೆಗೆ ತೆರೆದಿರಲು ಅವಕಾಶ ನೀಡಿದ್ದಲ್ಲದೇ, ಪರವಾನಗಿದಾರರು ಗ್ರಾಹಕರುಗಳನ್ನು ಸೆಳೆದುಕೊಳ್ಳುವ ಸಲುವಾಗಿ ಅವರ ಇಷ್ಟಕ್ಕೆ ಅನುಗುಣವಾಗಿ ರಿಯಾಯಿತಿಗಳನ್ನು ಕೊಡಬಹುದು ಎಂಬುದಾಗಿತ್ತು. ಈ ಹೊಸಾ ನೀತಿಯಿಂದ ಸರ್ಕಾರದ ಆದಾಯದಲ್ಲಿ ಗಣನೀಯವಾಗಿ ಶೇಕಡಾ 27 ರಷ್ಟು ಹೆಚ್ಚಳವಾಗಿದೆ ಎಂದು ಸರ್ಕಾರವು ವರದಿ ಮಾಡಿತ್ತು.
ಮೇಲ್ನೋಟಕ್ಕೆ ದೆಹಲಿಯ ಉಪ ಮುಖ್ಯಮಂತ್ರಿ ಮತ್ತು ಹಲಿಯ ಅಬಕಾರಿ ಇಲಾಖೆಯ ಮುಖ್ಯಸ್ಥರಾಗಿದ್ದ ಮನೀಶ್ ಸಿಸೋಡಿಯಾ ಹೇಳಿದ್ದೆಲ್ಲವೂ ಸತ್ಯ ಎನಿಸಿದರೂ ಆಳವಾಗಿ ಅಧ್ಯಯನ ಮಾಡಿದಲ್ಲಿ ಸತ್ಯದ ಮೇಲೆ ಹೊಡೆದಂತೆ ಸುಳ್ಳನ್ನು ಹೇಳಿ ಸರ್ಕಾರದ ಕೋಟ್ಯಾಂತರ ರೂಪಾಯಿಗಳ ಆದಾಯ ಸೋರಿಕೆಯಾಗಿ ನೇರವಾಗಿ ಮದ್ಯ ಮಾರಾಟಗಾರ ಕೈಸೇರಿ ಅವರಿಂದ ಕಿಕ್ ಬ್ಯಾಕ್ ಪಡೆಯಲು ಸಹಾಯಕವಾಗಿತ್ತು ಎನ್ನುವುದು ತಿಳಿಯುತ್ತದೆ. ಇದಕ್ಕಾಗಿಯೇ, ಶ್ರೀ ಸಿಸೋಡಿಯಾ ಅವರು ನಿಯಮಗಳನ್ನು ಬಾಗಿಸಿ ಮದ್ಯ ಮಾರಾಟ ಪರವಾನಗಿದಾರರಿಗೆ ಅನಗತ್ಯ ಪ್ರಯೋಜನಗಳನ್ನು ಒದಗಿಸುತ್ತಿದ್ದಾರೆ ಎಂದು ಆರೋಪಿಸಿ ದೆಹಲಿಯ ಉನ್ನತ ಅಧಿಕಾರಿಯ ವರದಿಯನ್ನು ಉಲ್ಲೇಖಿಸಿ, ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಕೋರಿದರು.
ಕೇಂದ್ರ ಸರ್ಕಾರ ಈ ಕುರಿತಂತೆ ಸಿಬಿಐ ತನಿಖೆಗೆ ಮುಂದಾಗುತ್ತದೆ ಎಂದು ಅರಿತ ಮನೀಷ್ ಸಿಸೋಡಿಯಾ, ಕೂಡಲೇ ಬಿಜೆಪಿಯು ಮಾರಾಟಗಾರರನ್ನು ಬೆದರಿಸಲು ತಾನು ನಿಯಂತ್ರಿಸುವ ತನಿಖಾ ಸಂಸ್ಥೆಗಳನ್ನು ಬಳಸುತ್ತಿರುವುದರಿಂದ ಈ ಹೊಸಾ ನೀತಿಯನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದಾಗ, ದಾಲ್ ಮೆ ಕುಚ್ ಕಾಲಾ ಹೈ ಎಂದು ಅರಿತ ಸರ್ಕಾರ ಇದರ ಕುರಿತಾಗಿ ಸಿಬಿಐ ತನಿಖೆಗೆ ಸೂಚಿಸಿದ ಕೂಡಲೇ, ಸಿಬಿಐ 31 ಸ್ಥಳಗಳ ಮೇಲೆ ದಾಳಿ ನಡೆಸಿದರೆ, ಜಾರಿ ನಿರ್ದೇಶನಾಲಯವು (ED) ಸಹಾ ಪ್ರತ್ಯೇಕವಾಗಿ ದೆಹಲಿ ಮದ್ಯದ ಹಗರಣದ ತನಿಖೆಯನ್ನು ಪ್ರಾರಂಭಿಸಿತು. ಆಗ ಸೌತ್ ಗ್ರೂಪ್ ಎಂದು ಕರೆಯಲ್ಪಡುವ ಮದ್ಯದ ಲಾಬಿಯು ಗೋವಾ ಚುನಾವಣಾ ಪ್ರಚಾರಕ್ಕಾಗಿ ಎಎಪಿಗೆ ಕನಿಷ್ಠ ₹ 100 ಕೋಟಿ ಕಿಕ್‌ಬ್ಯಾಕ್‌ನಲ್ಲಿ ಪಾವತಿಸಿದೆ ಎಂಬ ವಿಷಯವನ್ನು ಬಯಲಿಗೆ ತಂದಿತಲ್ಲದೇ, ಬಂಧಿತ ಉದ್ಯಮಿಗಳ ಇಡಿ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿತು.
ಹಾಗೆ ಒಬ್ಬೊಬ್ಬರ ಮೇಲೆ ತನಿಖೆಯನ್ನು ಮುಂದುವರೆಸಿದಾಗ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಅವರೂ ಸಹಾ ಈ ಲಾಬಿದಾರ ಪರವಾಗಿದ್ದಾರೆ ಎಂಬ ಅಂಶ ತಿಳಿದು ಕವಿತಾ ಅವರ ಮಾಜಿ ಅಕೌಂಟೆಂಟ್ ಅನ್ನು ಬಂಧಿಸಿ ತನಿಖೆ ನಡೆಸಿದ್ದಲ್ಲದೇ, ಕೆಲ ದಿನಗಳ ಹಿಂದೆ ಮನೀಶ್ ಸಿಸೋಡಿಯಾ ಅವರನ್ನು ತನಿಖೆಗೆ ಕರೆಸಿಕೊಂಡ ಸಿಬಿಐ ಈಗ ಮನೀಶ್ ಅವರನ್ನು ತನ್ನ ವಶಕ್ಕೆ ತೆಗೆದು ಕೊಂಡಿದೆ. ಸಹಜವಾಗಿ ಆಮ್ ಆದ್ಮೀ ಪಕ್ಷ ಮತ್ತು ಬಿಜೆಪಿ ವಿರೋಧಿಗಳು ಇದು ರಾಜಕೀಯದ ಪ್ರೇರಿತವಾಗಿದೆ ಎಂದು ಕಂಡ ಕಂಡಲ್ಲಿ ಪ್ರತಿಭಟನ ಮಾಡುತ್ತಿದೆ ಆದರೂ ಈ ನೀತಿಯಿಂದ ಸರ್ಕಾರಕ್ಕೆ ₹2,800 ಕೋಟಿ ನಷ್ಟವಾಗಿರುವುದು ಮೇಲ್ನೋಟಕ್ಕೆ ಸ್ಕಷ್ಟವಾಗಿದ್ದು ಅದರ ಸುಲಭವಾದ ಲೆಕ್ಖಾಚಾರ ಹೀಗಿದೆ.
ದೆಹಲಿಯ ಹಳೆಯ ಮದ್ಯ ನೀತಿಯ ಪ್ರಕಾರ
750ML ಸಗಟು ಬೆಲೆ ₹166.73
ಅಬಕಾರಿ ಸುಂಕ ₹223.88
ವ್ಯಾಟ್ ₹106.00
ಚಿಲ್ಲರೆ ಕಮಿಷನ್ ₹ 33.39 ಹೀಗೆ ಎಲ್ಲವೂ ಸೇರಿ ಗ್ರಾಹಕರಿಗೆ 750ML ಬಾಟಲ್ ಮದ್ಯದ ಬೆಲೆ ₹530.00 ಆಗುತ್ತಿತ್ತು.
ಕೇಜ್ರಿವಾಲ್ ಸರ್ಕಾರ ಮಾರ್ಚ್ 2022 ರಲ್ಲಿ ಜಾರಿಗೆ ತಂದ ಹೊಸ ಮದ್ಯ ನೀತಿಯ ಪ್ರಕಾರ
750ML ಸಗಟು ಬೆಲೆ ₹188.41
ಅಬಕಾರಿ ಸುಂಕ ₹ 1.88
ವ್ಯಾಟ್ 1% ₹ 1.90
ಚಿಲ್ಲರೆ ಮಾರ್ಜಿನ್ ₹ 363.27
ಹೆಚ್ಚುವರಿ ಅಬಕಾರಿ ₹ 4.54 ಎಲ್ಲವೂ ಸೇರಿ ಗ್ರಾಹಕರಿಗೆ 750ML ಬಾಟಲ್ ಮದ್ಯದ ಬೆಲೆ MRP ₹560.00 ಆಗುತ್ತದೆ.
ಇದರ ಪ್ರಕಾರ ಗ್ರಾಹರಿಗೆ 30 ರೂಪಾಯಿ ಹೆಚ್ಚಾದರೆ, ಹಳೆಯ ಮದ್ಯ ನೀತಿಯಲ್ಲಿ, ಒಂದು ಬಾಟಲಿಯ ಮೇಲೆ ಸರ್ಕಾರದ ಆದಾಯ ₹329.89 ಇದ್ದರೆ, ಈ ಹೊಸಾ ಮದ್ಯ ನೀತಿಯಲ್ಲಿ ಕೇವಲ 8.32 ಸಿಗುತ್ತದೆ. ಅಂದರೆ, ಹೊಸ ನೀತಿಯಿಂದ ಪ್ರತಿ ಬಾಟಲಿಗೆ ಸರ್ಕಾರಕ್ಕೆ ₹321.57 ನಷ್ಟವಾಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಹಳೆಯ ಲೆಕ್ಕಾಚಾರದಲ್ಲಿ ಚಿಲ್ಲರೆ ವ್ಯಾಪಾರಿಯ ಕಮಿಷನ್ 33.39 ಆಗಿದ್ದರೆ, ಹೊಸ ನೀತಿಯಲ್ಲಿ ಅದು 363.27 ರೂಗಳಿಗೆ ಏರಿದ್ದು ಪ್ರತೀ ಬಾಟೆಲ್ ಮೇಲೆ ಚಿಲ್ಲರೆ ವ್ಯಾಪಾರಿಗೆ ₹330.12 ಅಧಿಕ ಲಾಭ ದೊರೆಯುತ್ತದೆ.
ಪ್ರತಿ ಬಾಟಲಿನ ಮೇಲೆ ಸರ್ಕಾರವು ಅನುಭವಿಸುವ ನಷ್ಟ ಚಿಲ್ಲರೆ ವ್ಯಾಪಾರಿಗೆ ಲಾಭಗಾಗುತ್ತದೆ. ಹಳೆಯ ನೀತಿಯಲ್ಲಿ ತಿಂಗಳಿಗೆ 132 ಲಕ್ಷ ಲೀಟರ್ ಮದ್ಯ ಮಾರಾಟವಾಗುತ್ತಿದ್ದರೆ ಈಗ ಮದ್ಯದ ಮಾರಾಟ ಮುಂಜಾನೆ 3 ಗಂಟೆಯವರೆಯ ವರೆಗೂ ವಿಸ್ತರಿದ ಕಾರಣವಲ್ಲದೇ, ಕುಡಿಯುವ ವಯಸ್ಸನ್ನು 18 ವರ್ಷಕ್ಕೆ ಇಳಿಸಲಾಗಿದ ಕಾರಣ, ಈಗ ತಿಂಗಳಿಗೆ 245 ಲಕ್ಷ ಲೀಟರ್ ಮದ್ಯ ಮಾರಾಟವಾಗುತ್ತಿದೆ. ಡ್ರೈ ಡೇಗಳನ್ನು 31 ರಿಂದ ಕೇವಲ 3 ದಿನಕ್ಕೆ ಕಡಿಮೆ ಮಾಡಲಾಗಿದೆ. ಇದರಿಂದ ಆಲ್ಕೋಹಾಲ್ ಸೇವನೆಯು ಗರಿಷ್ಠವಾಗಿದೆ.
ಇದು ದೊಡ್ಡ ಹಗರಣ ನಡೆದಿರುವ ವಿಷಯ ಸಾಮಾನ್ಯ ಜನರ ಅರಿವಿಗೂ ಬಂದಿದ್ದರೂ ಲಜ್ಜೆಗೆಟ್ಟ ಕೇಜ್ರೀವಾಲ್ ಸರ್ಕಾರ, ತಮ್ಮದು ಪಾರದರ್ಶಕ ನೀತಿ. ತಮ್ಮಿಂದೇನೂ ತಪ್ಪಾಗಿಯೇ ಇಲ್ಲಾ, ಎಂದು ವಾದಿಸುತ್ತಿದೆ. ವಿಚಾರಣೆಗಾಗಿ ಸಿಬಿಐ ಪ್ರಧಾನ ಕಚೇರಿಗೆ ತೆರಳುವ ಮುನ್ನ ಸಿಸೋಡಿಯಾ ತನ್ನ ತಾಯಿಯ ಆಶೀರ್ವಾದ ಪಡೆದು ಮಹಾತ್ಮ ಗಾಂಧಿಯವರ ಸಮಾಧಿ ರಾಜ್‌ಘಾಟ್‌ಗೆ ತೆರಳಿದ್ದರು. ಇದರ ಜೊತೆ ಮೋದಿ ಅರೆಸ್ಟ್ ಮನೀಶ್ ಸಿಸೋಡಿಯಾ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಆಪ್ ನಾಯಕರುಗಳು ಟ್ವೀಟ್‌ಗಳನ್ನು ಮಾಡುವಾಗ, ಸಿಸೋಡಿಯಾ ಅವರನ್ನು ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರಿಗೆ ಹೋಲಿಸಿರುವುದು ಹಾಸ್ಯಾಸ್ಪದವಾಗಿದೆ. ಇದಕ್ಕೆ ಇಂಬು ನೀಡುವಂತೆ ದೆಹಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ಅವರು ಜೈಲು ಕಂಬಿಗಳು ಮತ್ತು ನೇಣು ಕುಣಿಕೆಗಳು ಭಗತ್ ಸಿಂಗ್ ಅವರ ಉನ್ನತ ಉದ್ದೇಶಗಳನ್ನು ತಡೆಯಲು ಸಾಧ್ಯವಿಲ್ಲ ಇದು ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಎರಡನೇ ಹೋರಾಟ. ಮನೀಶ್ ಮತ್ತು ಸತ್ಯೇಂದ್ರ (ಹಣ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ಸೇರಿರುವ ಜೈನ್) ಇಂದಿನ ಭಗತ್ ಸಿಂಗ್. 75 ವರ್ಷಗಳ ನಂತರ ಬಡವರಿಗೆ ಉತ್ತಮ ಶಿಕ್ಷಣ ನೀಡಿ ಉಜ್ವಲ ಭವಿಷ್ಯದ ಭರವಸೆ ಮೂಡಿಸಿದ ಶಿಕ್ಷಣ ಸಚಿವರು ದೇಶಕ್ಕೆ ಸಿಕ್ಕಿದ್ದಾರೆ. ಕೋಟ್ಯಂತರ ಬಡವರ ಪ್ರಾರ್ಥನೆ ನಿಮ್ಮೊಂದಿಗಿದೆ ಎನ್ನುವ ಮೂಲಕ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವುದಲ್ಲದೇ, ಜನರ ದಿಕ್ಕನ್ನು ಸಹಾ ತಪ್ಪಿಸಲು ಹರ ಸಾಹಸ ಪಡುತ್ತಿರುವುದು ವಿಪರ್ಯಾಸವಾಗಿದೆ.
ಸಿಸೋಡಿಯ ಮತ್ತು ಲಿಕ್ಕರ್ ಲಾಭಿಯಲ್ಲಿ ಭಾಗಿಗಳಾಗಿದ್ದವರೆಲ್ಲರೂ ಸಹಾ ಯಾರಿಗೂ ಯಾವುದೇ ರೀತಿಯ ಮಾಹಿತಿಗಳು ದೊರೆಯಂತೆ ಮಾಡುವ ಸಲುವಾಗಿ ಪ್ರತಿ 3 ದಿನಗಳಿಗೊಮ್ಮೆ ಅವರೆಲ್ಲರೂ ತಮ್ಮ ತಮ್ಮ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳನ್ನು ಶಾಶ್ವತವಾಗಿ ನಾಶಪಡಿಸುವ ಮೂಲಕ ಯಾವುದೇ ಡಿಜಿಟಲ್ ಪುರಾವೆಗಳು ದೊರೆಯದಂತೇ ಅದೇ ರೀತಿ ಭವಿಷ್ಯದಲ್ಲಿ ಯಾರೂ ಯಾರನ್ನೂ ಬ್ಲ್ಯಾಕ್‌ಮೇಲ್ ಮಾಡಲು ಆಗದಂತೆ ಒಪ್ಪಂದ ಮಾಡಿಕೊಂಡಿದ್ದರು.
ಆದರೆ ಈಗಾಗಲೇ ಸಿಬಿಐ ಕೈಗೆ ಸಿಕ್ಕಿ ಹಾಕಿಕೊಂಡಿರುವ 3 ಆರೋಪಿಗಳಾದ ದಿನೇಶ್ ಅರೋರಾ, ಅಮಿತ್ ಅರೋರಾ ಮತ್ತು ಅರ್ಜುನ್ ಪಾಂಡೆ ಈ ಆಲೋಚನೆಯ ಹಿಂದೆ ದೊಡ್ಡ ಕುತಂತ್ರವಿದೆ ಎಂದು ಭಾವಿಸಿ, ಉಳಿದವರಂಟೆ ಅವರು ತಮ್ಮ ಫೋನ್ ಮತ್ತು ಸಿಮ್ ಕಾರ್ಡ್‌ಗಳನ್ನು ನಾಶಪಡಿಸದೇ, ತಮ್ಮ ಫೋನ್‌ಗಳನ್ನು ನಾಶಪಡಿಸಿದ್ದೇವೆ ಎಂದು ಮನೀಶ್ ಸಿಸೋಡಿಯಾ ಅವರ ಬಳಿ ಸುಳ್ಳು ಹೇಳಿದರು. ಅಚ್ಚರಿಸ ಸಂಗತಿ ಎಂದರೆ, ಈ ಲಿಕ್ಕರ್ ಲಾಬಿಯ ತಂಡವು ಕೇವಲ 6 ತಿಂಗಳಲ್ಲಿ 500 ಫೋನ್‌ಗಳನ್ನು ಬದಲಾಯಿಸಿದ್ದರೆ, ಯಾವುದೇ ತಪ್ಪು ಮಾಡಿಲ್ಲ ಎಂದು ವಾದ ಮಾಡುತ್ತಿರುವ ಸಿಸೋಡಿಯಾ ಕೂಡಾ ಬರೋಬ್ಬರಿ 170 ಫೋನ್ ಬದಲಾಯಿಸಿರುವುದು ಸಿಬಿಐ ಅವರ ತನಿಖೆಯಲ್ಲಿ ತಿಳಿದು ಬಂದಿರುವುದು ಆತಂಕಕ್ಕೆ ಏಡೆ ಮಾಡಿಕೊಟ್ಟಿದೆ.
ಸಿಬಿಐ ತಮ್ಮ ತನಿಖೆಯನ್ನು ಬಿಗಿಗೊಳಿಸಿದಾಗ ದಿನೇಶ್, ಅಮಿತ್ ಮತ್ತು ಅರ್ಜುನ್ ಈ ಅವ್ಯವಹಾರದಲ್ಲಿ ತಮ್ಮ ಪಾತ್ರವನ್ನು ಒಪ್ಪಿಕೊಂಡಿದ್ದಲ್ಲದೇ ಮನೀಷ್ ಸಿಸೋಡಿಯಾ ಅವರಿಗೆ ಹಣವನ್ನು ನೀಡಿರುವುದಾಗಿ ಸಿಬಿಐಗೆ ಮುಂದೆ ಒಪ್ಪಿಕೊಂಡಿರುವುದಲ್ಲದೇ, ಈ ತನಿಖೆಗೆ ಎಲ್ಲಾ ಸಾಕ್ಷ್ಯಗಳೊಂದಿಗೆ ಸಹಕಾರ ನೀಡಲು ಒಪ್ಪಿಕೊಂಡಿದ್ದಾರೆ.
ಈ ಮೂವರು ತಮ್ಮ ಫೋನ್‌ಗಳನ್ನು ನಾಶಪಡಿಸಿಲ್ಲ ಎಂಬ ಸಂಗತಿ ತಿಳಿಯದ ಮನೀಶ್ ಸಿಸೋಡಿಯಾ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಲೋಕಕ್ಕೆ ಗೊತ್ತಾಗುವುದಿಲ್ಲ ಎಂದು ಆರಾಮಾಗಿ ಇದ್ದಾಗ, ಆ ಮೂವರ ಫೋನ್ ಮತ್ತು ಸಿಮ್ ಕಾರ್ಡ್‌ಗಳನ್ನು ಸಿಬಿಐ ವಶಪಡಿಸಿಕೊಂಡಿದ್ದು ಸಂಪೂರ್ಣವಾದ ಸಾಕ್ಷಾಧಾರಗಳು ಸಿಕ್ಕಿವೆ ಎಂದು ತಿಳಿದಾಗ ಶಾಕ್ ಆಗಿದ್ದಲ್ಲದೇ, ಈ ಹಗರಣಲ್ಲಿ ಸಿಬಿಐ ತನ್ನನ್ನು ಬಂಧಿಸುತ್ತದೆ ಎಂದು ಮನವರಿಕೆಯಾಗುತ್ತಿದ್ದಂತೆಯೇ ತನ್ನ ನಾಯಕ ಕೇಜ್ರೀವಾಲ್ ನಂತೆಯೇ ಎಲ್ಲಾ ಗಿಮಿಕ್‌ಗಳು ಮತ್ತು ನಾಟಕಗಳನ್ನು ಆಡಲು ಶುರು ಮಾಡಿದ್ದಲ್ಲದೇ ಬಿಜೆಪಿ ರಾಜಕೀಯವಾಗಿ ತನ್ನನ್ನು ಮಣಿಸಲಾರದೇ ಈ ರೀತಿಯಾಗಿ ತನಿಖಾ ಸಂಸ್ಥೆಗಳನ್ನು ತನ್ನನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಕರುಬುತ್ತಾ ಸಾರ್ವಜನಿಕವಾಗಿ ಅನುಕಂಪವನ್ನು ಪಡೆಯಲು ಪ್ರಯತ್ನಿಸಿದ್ದಾರೆ.
ಅದಕ್ಕಾಗಿಯೇ ಜನರ ದಿಕ್ಕನ್ನು ತಪ್ಪಿಸುವ ಸಲುವಾಗಿ ಸಿಬಿಐಗೆ ವಿಚಾರಣೆಗೆ ಬರುವ ಮುನ್ನಾ ತನ್ನ ತಾಯಿಯನ್ನು ಭೇಟಿಯಾಗಿದ್ದಲ್ಲದೇ, ಕೇಂದ್ರ ಸರ್ಕಾರ ತನ್ನನ್ನು ಈ ಹಗರಣದಲ್ಲಿ ಬಲಿಪಶುವಾಗಿ ಮಾಡುತ್ತಿದೆ ಎಂದು ಜನರ ಅನುಕಂಪ ಪಡೆಯಲು ತನ್ನ ಅನಾರೋಗ್ಯದ ಹೆಂಡತಿಯ ಬಗ್ಗೆ ಕಣ್ಣಿರು ಸುರಿಸಿದ್ದಲ್ಲದೇ, ತಾನೊಬ್ಬ ಸತ್ಯ ಸಂಧ ಎಂದು ಜನರ ಮುಂದೆ ತಿಳಿಸುವ ಸಲುವಾಗಿ ಮಹಾತ್ಮಾ ಗಾಂಧಿಯವರ ರಾಜ್‌ಘಾಟ್‌ಗೆ ಹೋಗಿದ್ದಲ್ಲದೇ ಗಾಂಧಿಯವರ ಸಮಾಧಿಯ ಮುಂದೆ ಫೋಟೋಶೂಟ್ ಕೂಡಾ ಮಾಡಿಸಿದ್ದಾರೆ.
ನ್ಯಾಯಾಲಯದ ಮುಂದೆ ಸಿಬಿಐ ಸರಿಯಾಗಿ ವಾದಿಸಿದ್ದಲ್ಲದೇ ಸರಿಯಾದ ಸಾಕ್ಷಾಧಾರಗಳನ್ನು ತೋರಿಸಿದ ಪರಿಣಾಮ, ನ್ಯಾಯಾಲಯವು ಮನೀಶ್ ಸಿಸೋಡಿಯಾ ಅವರನ್ನು 5 ದಿನಗಳ ಸಿಬಿಐ ಕಸ್ಟಡಿಗೆ ಕೊಡಲು ಒಪ್ಪಿಕೊಂಡಿದೆ
ರಾಜಕೀಯದಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಪಕ್ಷದ ಸ್ಥಿತಿ ಗತಿ ಇದಾದರೆ, ಸದ್ಯಕ್ಕೆ ತೆಲಂಗಾಣದ ಮುಖ್ಯಮಂತ್ರಿಯಾಗಿದ್ದು ಮುಂದಿನ ಪ್ರಧಾನಿ ಆಗುವ ಕನಸು ಕಾಣುತ್ತಿರುವ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕಲ್ವಕುಂಟ್ಲ ಕವಿತಾ ಅವರೂ ಸಹಾ ಈ ಹಗರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದು ಆವರ ಹೇಳಿಕೆಗಳನ್ನು ಸಹಾ ಕೇಂದ್ರೀಯ ತನಿಖಾ ದಳ (ಸಿಬಿಐ) ಈಗಾಗಲೇ ಸುಮಾರು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿ ದಾಖಲಿಸಿಕೊಂಡಿದೆ.
ಅರಬಿಂದೋ ಫಾರ್ಮಾದ ಪಿ ಶರತ್, ಎಂಎಲ್ಸಿ ಕವಿತಾ ಮತ್ತು ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರದ ಪ್ರಮುಖ ಅಧಿಕಾರಿಗಳಿಗೆ 100 ಕೋಟಿ ರೂಪಾಯಿ ಪಾವತಿಸಿದ ಮದ್ಯದ ಗುತ್ತಿಗೆದಾರರ ದಕ್ಷಿಣ ಕಾರ್ಟೆಲ್ ಅನ್ನು ಆರೋಪಿ ಅಮಿತ್ ಅರೋರಾ ಜಾರಿ ನಿರ್ದೇಶಕರ ವಿಚಾರಣೆಯ ವೇಳೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಹಾಗಾಗಿ ಕವಿತಾ ಅವರು ಮಧ್ಯವರ್ತಿ ಪಾತ್ರ ವಹಿಸಿದ್ದಾರೆಯೇ, ಇಲ್ಲವೇ ಕಾರ್ಟೆಲ್‌ನಿಂದ ಲಂಚ ಸಂಗ್ರಹಿಸಿ ಅದನ್ನು ಆಮ್ ಆದ್ಮಿ ಪಕ್ಷದ ಸರ್ಕಾರದ ಸಚಿವರು ಮತ್ತು ಅಧಿಕಾರಿಗಳಿಗೆ ಪಾವತಿಸಿದ್ದಾರೆಯೇ ಎಂಬುದರ ಕುರಿತಾಗಿ ಸಿಬಿಐ ತನಿಖೆ ನಡೆಸುತ್ತಿದೆ. ಈ ಪ್ರಕರಣ ಆದ ನಂತರ ಆರೋಪಿಗಳು ಮತ್ತು ಕವಿತಾ ಅವರು ತಮ್ಮ ಮೊಬೈಲ್ ಫೋನ್ ಸಾಧನಗಳ ಬದಲಾವಣೆ ಮಾಡುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಿರುವ ಸಾಧ್ಯತೆ ಇದೆ ಎಂದು ತನಿಖಾ ಸಂಸ್ಥೆ ಶಂಕಿಸಿರುವ ಕಾರಣ, ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳದ ಡಿಐಜಿ ರಾಘವೇಂದ್ರ ವತ್ಸಾ ನೇತೃತ್ವದ ಐವರು ಸಿಬಿಐ ಅಧಿಕಾರಿಗಳ ತಂಡವು ಈ ಹಗರಣದಲ್ಲಿ ಕವಿತಾ ಅವರ ಪಾತ್ರದ ಕುರಿತು ತನಿಖೆ ನಡೆಸುತ್ತಿದೆ. ತನಿಖೆಯ ವೇಳೆ ಕವಿತಾ ಅವರಿಗೆ ಪ್ರಕರಣದ ನಿರ್ದಿಷ್ಟ ಸಂಗತಿಗಳ ಪರಿಚಯವಿರುವುದು ಪತ್ತೆಯಾಗಿದೆ ಎಂದು ಸಿಬಿಐ ಸಲ್ಲಿಸಿರುವ ನೋಟಿಸ್‌ನಲ್ಲಿ ತಿಳಿಸಿರುವುದು ಕುತೂಹಲಕಾರಿಯಾಗಿದ್ದು ಪ್ರಕರಣ ಅಂತ್ಯ ಹೇಗಾಗುತ್ತದೆ ಎಂಬುದನ್ನೇ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ.
ಒಟ್ಟಿನಲ್ಲಿ ದೇಶದ ಹಿತವನ್ನು ಕಾಯುವುದು ಬಿಟ್ಟು ಸ್ವಾರ್ಧಕ್ಕಾಗಿ ದೇಶವಿರೋಧಿಗಳೊಂದಿದೆ ಕೈ ಜೋಡಿಸುತ್ತಿರುವವರ ಅಸಲೀ ಬಣ್ಣ ಒಂದೊಂದೇ ಬಯಲಾಗುತ್ತಿದ್ದು ಅವರ ಕಪಾಟಿನಿಂದ ಒಂದೊದೇ ಅಸ್ಥಿಪಂಜರಗಳು ಹೊರ ಬೀಳುತ್ತಿವೆಯಾದರೂ, ಜಟ್ಟಿ ಬಿದ್ದರೂ ಮೀಸೆಗೆ ಮಣ್ಣಾಗಲಿಲ್ಲ ಎಂಬ ಹುಂಬತನದಿಂದಲೇ ಕೇಜ್ರೀವಾಲ್ ಮತ್ತವರ ಸಂಗಡಿಗರು ದೇಶಾದ್ಯಂತ ದೊಂಬಿ ಎಬ್ಬಿಸುತ್ತಿರುವುದು ದೇಶದ ಆಂತರಿಕ ಭಧ್ರತೆಗೆ ಧಕ್ಕೆ ತರುವಂತಿದೆ.
ರಾಜಕಾರಣಿಗಳ ಮೇಲೆ ಹೆಂಡದ ದೊರೆಗಳ ಲಾಬಿ ಈ ದೇಶದಲ್ಲಿ ಇದೇನೂ ಮೊದಲೂ ಅಲ್ಲಾ ಕಡೆಯದೂ ಅಲ್ಲಾ. ಒಂದು ಕಾಲದಲ್ಲಿ ಕಾಂಗ್ರೇಸ್ ಮತ್ತು ಜನತಾದಳದ ಸರ್ಕಾರಗಳು ಪರೋಕ್ಷವಾಗಿ ಆದಿಕೇಶವಲು, ಮಲ್ಯ, ಹರಿ ಖೋಡೆ ಇವರೆಲ್ಲರೂ ಅಂದಿನ ಮುಖ್ಯಮಂತ್ರಿಗಳ ಆಪ್ತರಾಗಿದ್ದು ಸರ್ಕಾರದ ಅಬಕಾರಿ ವಿಷಯಗಳಲ್ಲಿ ಮೂಗು ತೂರಿಸುತ್ತಿದ್ದದ್ದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷದವರೂ ಸೆಕೆಂಡ್ಸ್ ಲಾಬಿಯಲ್ಲಿ ಮೆದ್ದವರೇ. ಈಗ ರಾಜ್ಯದಲ್ಲಿ ಸರ್ಕಾರಿ ಸ್ವಾಧೀನದ MSIL ಕಂಪನಿಯ ಮೂಲಕ ವಿತರಣೆ ಆಗುತ್ತಿರುವ ಕಾರಣ ಸ್ವಲ್ಪ ಮಟ್ಟಿಗಿನ ಲಿಕ್ಕರ್ ಲಾಬಿ ಕಡಿಮೆ ಆಗಿದೆ. ಆದರೆ, ಮಾತಿಗೆ ಮುಂಚೆ ಭ್ರಷ್ಟಾಚಾರದ ವಿರುದ್ಧ ನಾವು ಸತ್ಯಹರಿಶ್ಚಂದ್ರನ ವಂಶದವರು ಎಂದು ಕೊಚ್ಚಿಕೊಳ್ಳುವ ಬಿಟ್ಟಿ ಆಮಿಷಗಳ ಸರದಾರ ಕೇಜ್ರೀವಾಲ್ ಅಂತಹವರೇ ಈ ರೀತಿಯಾಗಿ ಲಿಕ್ಕರ್ ಲಾಬಿಗೆ ಮಣಿದು ಅವರ ಎಂಜಿಲು ಕಾಸಿನಾಸಿಗೆ ಸರ್ಕಾರಕ್ಕೆ ಬರುವ ಆದಾಯಕ್ಕೆ ಕಲ್ಲು ಹಾಕಿದಲ್ಲಿ ಜನರಿಗೆ ಬಿಟ್ಟಿ ನೀರು, ಕರೆಂಟ್ ಕೊಡಲು ಎಲ್ಲಿಂದ ದುಡ್ಡು ತರ್ತಾರೆ ? ಒಟ್ಟಿನಲ್ಲಿ ತನಿಖೆಯು ನಿಶ್ಪಕ್ಷಪಾತವಾಗಿ ನಡೆದು ಭ್ರಷ್ಟರು ಯಾರೇ ಆಗಿರಲಿ, ಎಷ್ಟೇ ದೊಡ್ಡವರಾಗಿರಲಿ ಅವರಿಗೆ ತಕ್ಕ ಶಿಕ್ಷೆ ಆಗಲೇ ಬೇಕೆನ್ನುವುದು ಎಲ್ಲರ ಆಶಯವಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ