ಕೋರಮಂಗಲ

ಇಡೀ ವಿಶ್ವದಲ್ಲಿ ಬೆಂಗಳೂರು ನಗರವನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಗುರುತಿಸಲಾಗುತ್ತದೆ. ಬೆಂಗಳೂರು ನಗರ ಆ ರೀತಿಯ ಖ್ಯಾತಿಯನ್ನು ಪಡೆಯಲು ಪ್ರಮುಖ ಪಾತ್ರವನ್ನು ವಹಿಸಿರುವ ಬೆಂಗಳೂರಿನ ಅತ್ಯಂತ ಪುರಾತನ ಪ್ರದೇಶವಾದ ಕೋರಮಂಗಲದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ 5ನೇ ಮಾಲಿಕೆಯಲ್ಲಿ ತಿಳಿದುಕೊಳ್ಳೋಣ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಬೆಂಗಳೂರಿನಿಂದ ಹೊಸೂರಿಗೆ ಹೋಗುವ ಮಾರ್ಗದಲ್ಲಿ ಆಡುಗೋಡಿಯನ್ನು ದಾಟುತ್ತಿದ್ದಂತೆಯೇ ಸಿಗುವ ಪ್ರದೇಶವೇ ಕೋರಮಂಗಲವಾಗಿದ್ದು, ಜಕ್ಕಸಂದ್ರ, ಶ್ರೀನಿವಾಗಿಲು ಪ್ರದೇಶಗಳನ್ನು ತನ್ನ ಜೊತೆಯಲ್ಲೇ ಸೇರಿಸಿಕೊಂಡು, ಒಂದು ಕಡೆಯಲ್ಲಿ ಈಜಿಪುರ, ಮತ್ತೊಂದೆಡೆಯಲ್ಲಿ ಎಚ್‌ಎಸ್‌ಆರ್ ಲೇಔಟ್, ಬಿಟಿಎಂ ಲೇಔಟ್, ಜಯನಗರ ಪ್ರದೇಶಗಳಿಂದ ಸುತ್ತುವರಿದ ಪ್ರದೇಶವಾಗಿದೆ. ಬೆಂಗಳೂರಿನ ಹಿರಿಯ ನಾಗರೀಕರಿಗೆ ಕೋರಮಂಗಲದ ಬಗ್ಗೆ ಕೇಳಿದರೆ, ಹೇ ಅದಾ, 80 ಮತ್ತು 90ರ ದಶಕಗಳಲ್ಲಿಯೂ ಸೊಳ್ಳೆಗಳ ಆವಾಸ ಸ್ಥಾನವಾಗಿದ್ದು ಮಳೆ ಬಂದರೆ ಮೆನಗೆಳಿಗೆಲ್ಲಾ ನೀರು ನುಗ್ಗುವಂತಹ ಪ್ರದೇಶವಾಗಿದ್ದು ಜನರು ವಾಸಿಸಲು ಯೋಗ್ಯವಾದ ಸ್ಥಳವಾಗಿರಲಿಲ್ಲ ಎಂದೇ ಹೇಳುತ್ತಾರೆ.

ಕಾವೇರೀ ನದಿಯಲ್ಲಿ ನೀರು ಹರಿಯುತ್ತಿದ್ದಂತೆಯೇ ಕಾಲವೂ ಬದಲಾಗಿ 90ರ ದಶಕದಲ್ಲಿ ದೇಶವು ಜಾಗತೀಕರಣಕ್ಕೆ ತೆರೆದುಕೊಂಡ ಪರಿಣಾಮ ಮಾಹಿತಿ ತಂತ್ರಜ್ಞಾನದ ಹೊಸಾ ಆವಿಷ್ಕಾರಗಳಿಗೆ ಸೂಕ್ತವಾದ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಭಾರತದ ಪ್ರತಿಭೆಯನ್ನು ಬಳಸಿಕೊಳ್ಳಲು ಇಡೀ ವಿಶ್ವವೇ ಬಯಸುತ್ತಿದ್ದಂತಹ ಸಂದರ್ಭವನ್ನು ಎರಡೂ ಕೈಗಳಿಂದ ಬರಸೆಳೆದುಕೊಂಡ ಬೆಂಗಳೂರಿಗರೂ ತಮ್ಮ ಕಂಪನಿಗಳಿಗೆ ಅದರಲ್ಲೂ Startup companyಗಳಿಗೆ ಕೋರಮಂಗಲವನ್ನೇ ಪ್ರಧಾನವನ್ನಾಗಿಸಿದ ಪರಿಣಾಮ, ಇದ್ದಕ್ಕಿದ್ದಂತೆಯೇ ಕೋರಮಂಗಲದ ಪ್ರತಿ ಇಂಚು ಇಂಚು ಪ್ರದೇಶವೂ ಕೋಟ್ಯಾಂತರ ಬೆಲೆ ಬಾಳುವಂತಾಗಿರುವುದು ಈಗ ಇತಿಹಾಸ.

Fk_BMDಸುಮಾರು 1800 ಎಕರೆಗಳಷ್ಟು ವಿಸ್ತೀರ್ಣದ ಕೋರಮಂಗಲವನ್ನು 8 ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಆರಂಭದಲ್ಲಿ 1 ರಿಂದ 4 ಬ್ಲಾಕ್‌ಗಳು ಒಂದೆಡೆಯಾದರೆ, 5 ರಿಂದ 8 ಬ್ಲಾಕ್‌ಗಳನ್ನು ದೊಮ್ಮಲೂರು, ಇಂದಿರಾನಗದಿಂದ ಬರುವ ಒಳವರ್ತುಲ ರಸ್ತೆಯಿಂದ ಪ್ರತ್ಯೇಕಿಸಲಾಗಿದೆ. ಬೆಂಗಳೂರಿನ ಹೃದಯ ಭಾಗವಾಗಿರುವ ಮತ್ತು ಕಾಸ್ಲ್ಮೋಪಾಲಿಟಿನ್ ಸಂಸ್ಕೃತಿಯನ್ನು ಹೊಂದಿರುವಂತಹ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಿಂದ ಕೇವಲ 5-6 ಕಿ.ಮೀ. ಅಂದಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ 8-10 ಕಿಮೀ ದೂರವಿದೆ.  90ರ ದಶಕದಲ್ಲಿ ಇಂದಿರಾನಗರದಿಂದ ಹಳೆಯ ವಿಮಾನ ನಿಲ್ಡಾಣದ ರಸ್ತೆಯನ್ನು ಹಾದು ಹೋಗುವಂತೆ ಕೋರಮಂಗಲಕ್ಕೆ ಒಳ ವರ್ತುಲ ರಸ್ತೆ (inner ring road) ನಿರ್ಮಾಣವಾದ ನಂತರವಂತೂ, ಬೆಂಗಳೂರಿನ ಎಲ್ಲಾ ಪ್ರದೇಶಗಳಿಂದಲೂ ಕೋರಮಂಗಲಕ್ಕೆ ಸುಲಭವಾಗಿ ಪ್ರಯಾಣಿಸುವಂತಾಗಿ, ಜಗತ್ತಿನ ಎಲ್ಲಾ ಸಾಘ್ಟ್ವೇರ್ ಕಂಪನಿಗಳು ತಾಮುಂದು ನಾಮುಂದು ಎನ್ನುವಂತೆ ಕೋರಮಂಗದಲ್ಲಿ ತನ್ನ ಕಛೇರಿಗಳನ್ನು ಆರಂಭಿಸುತ್ತಿದ್ದಂತೆಯೇ ಕೋರಮಂಗಲದ ಚಿತ್ರಣವೇ ಬದಲಾಗಿ ಹೋಯಿತು. ಇಂದು ಸಾಫ್ಟ್ವೇರ್ ಜಗತ್ತಿನ ದಿಗ್ಗಜರುಗಳಾದ Infosys ಆರಂಭವಾದದ್ದೇ ಕೋರಮಂಗಲದ ನಂದನ್ ನೀಲೇಕಣಿ ಅವರ ಮನೆಯ ಕಾರ್ ಗ್ಯಾರೇಜಿನಲ್ಲಿ ಎನ್ನುವುದು ವಿಶೇಷ ಅದಾದ ನಂತರ Wipro, Tally Solutions ಮುಂತಾದ ಭಾರತೀಯ ಕಂಪನಿಗಳು ತಮ್ಮ ಕಛೇರಿಗಳನ್ನು ಕೋರಮಂಗಲದಲ್ಲಿ ಆರಂಭಿಸಿ ವಿಶ್ವವಿಶ್ಯಾತವಾದರೆ, ಬಹುರಾಷ್ಟ್ರೀಯ ಕಂಪನಿಗಳಾದ Lucent Technologies, Robert Bosch, MindTree, Zenith Software ಮುಂತಾದ ಕಂಪನಿಗಳೂ ಕೋರಮಂಗಲದಲ್ಲಿ ತಮ್ಮ ಕಚೇರಿಗಳನ್ನು ಹೊಂದಿವೆ. ಭಾರತದ online shopping ಕಂಪನಿಯಾದ Flipkartನ್ನು ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಆರಂಭಿಸಿದ್ದೂ ಕೋರಮಂಗಲದ 4ನೇ ಬ್ಲಾಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರದ ಎದುಗಿರುವ 447-A ಕಟ್ಟಡಲ್ಲಿಯೇ ಎನ್ನುವುದು ವಿಶೇಷವಾಗಿದೆ.

srinivagiluಈ ಎಲ್ಲಾ ವಿಷಯಗಳನ್ನು ತಿಳಿದ ನಂತರ ಕೋರಮಂಗಲ ಇತ್ತೀಚಿನ ಪ್ರದೇಶ ಎಂದು ಭಾವಿಸಿದಲ್ಲಿ ಅದಕ್ಕಿಂತಲೂ ದೊಡ್ಡ ತಪ್ಪು ಮತ್ತೊಂದಿಲ್ಲ ಎಂದರೂ ಅತಿಶಯವಲ್ಲ. ಕೋರಮಂಗಲಕ್ಕೆ ತಾಗಿಕೊಂಡೇ ಇದ್ದು ಈಗ ಕೋರಮಂಗಲದ ಭಾಗವಾಗಿಯೇ ಹೋಗಿರುವ ಶ್ರೀನಿವಾಗಿಲು ಎಂಬ ಪ್ರದೇಶದ ಶಿವನ ದೇವಾಲಯದಲ್ಲಿ (ಸದ್ಯಕ್ಕೆ ಮಿಲಿಟರಿ ಆವರಣದಲ್ಲಿದೆ) ಸಿಕ್ಕಿರುವ ೮ನೇ ಶತಮಾನದ ಮಾಸ್ತಿಕಲ್ಲು ಮತ್ತು ವೀರಗಲ್ಲಿನ ಆಧಾರವಾಗಿ ನೋಡಿದಲ್ಲಿ ಕೋರಮಂಗಲದ ಇತಿಹಾಸ ಕನಿಷ್ಠ ಪಕ್ಷ 1200 ವರ್ಷಗಳು ಎಂದರೂ ತಪ್ಪಾಗದು. ಅಂದು ಸಿಹಿ ನೆಲ್ ವಾಗಿಲು ಅರ್ಥಾತ್ ಸಿಹಿಯಾದ ಬತ್ತವನ್ನು ಬೆಳೆಯುತ್ತಿದ್ದ ಪ್ರದೇಶ ಇಂದು ಜನರ ಆಡುಬಾಷೆಯಲ್ಲಿ ಶ್ರೀನಿವಾಗಿಲು ಎಂಬುದಾಗಿದೆ ಎಂದು ತಿಳಿದು ಬರುತ್ತದೆ.

lakshmmaಇನ್ನು ಐತಿಹಾಸಿಕವಾಗಿ ಇರುವ ಮತ್ತೊಂದು ವೃತ್ತಾಂತದ ಪ್ರಕಾರ, ಬೆಂಗಳೂರಿನ ನಿರ್ಮಾತರಾದ ಶ್ರೀ ಕೆಂಪೇಗೌಡರು, ಶತ್ರುಗಳಿಂದ ಬೆಂಗಳೂರನ್ನು ರಕ್ಷಿಸಲು ನಗರದ ಸುತ್ತಲೂ ಸುಭದ್ರವಾದ ಕೋಟೆಗಳನ್ನು ಕಟ್ಟುತ್ತಿದ್ದಾಗ, ನಗರದ ಮುಖ್ಯ ದ್ವಾರ ಪದೇ ಪದೇ ಬಿದ್ದು ಹೋಗುತ್ತಿತ್ತಂತೆ. ಎಷ್ಟೇ ನುರಿತ ಕೆಲಸಗಾರರನ್ನು ಕರೆತಂದರೂ ಆದು ಪದೇ ಪದೇ ವಿಫಲವಾಗುತ್ತಿದ್ದದ್ದನ್ನು ಕಂಡ ಕೆಂಪೇಗೌಡರು, ತಮ್ಮ ಹಿರಿಯರ ಸಲಹೆಯ ಮೇರೆಗೆ ಜ್ಯೋತಿಷಿಗಳ ಮೊರೆ ಹೋದಾಗ, ಅವರ ಕುಟುಂಬದ ಗರ್ಭಿಣಿಯೊಬ್ಬಳನ್ನು ನರ ಬಲಿಯಾಗಿ ಕೊಟ್ಟಲ್ಲಿ ಈ ಸಮಸ್ಯೆಗೆ ಪರಿಹಾರವಾಗ ಬಹುದು ಎಂದು ತಿಳಿಸಿದಾಗ, ತಮ್ಮ ಕುಟುಂಬರನ್ನು ಹೇಗೆ ಬಲಿ ಕೊಡುವುದು ಎಂಬ ಜಿಜ್ಞಾಸೆಯಲ್ಲಿದ್ದಾಗ, ಈ ವಿಷಯವನ್ನು ತಿಳಿದ ಕೆಂಪೇಗೌಡರ ಗರ್ಭಿಣಿ ಸೊಸೆ ಲಕ್ಷಮ್ಮ ತಮ್ಮ ನಾಡಿನ ರಕ್ಷಣೆಗಾಗಿ, ಸ್ವಯಂ ಪ್ರೇರಿತಳಾಗಿ ಕತ್ತಿಯಿಂದ ತನ್ನ ಶಿರಚ್ಛೇದ ಮಾಡಿಕೊಂಡು ಸಮರ್ಪಣೆ ಮಾಡಿದ ನಂತರ ಕೋಟೆಯ ಮುಖ್ಯದ್ವಾರದ ಸಮಸ್ಯೆ ಪರಿಹಾರವಾಯಿತಂತೆ. ಹಾಗೆ ಆಕೆ ಶ್ರೀಮತಿ ಲಕ್ಷಮ್ಮ ತನ್ನನ್ನು ತಾನು ಅರ್ಪಿಸಿಕೊಂಡ ಪ್ರದೇಶವೇ ಇಂದಿನ ಕೊರಮಂಗಲ ಎನ್ನುವುದು ಇತಿಹಾಸಕಾರರ ಅಭಿಪ್ರಾಯವಾಗಿದೆ. ಕೋರಮಂಗಲದಲ್ಲಿ BBMP ನಿಯಂತ್ರಿತ ಉದ್ಯಾನವನದಿಂದ ಕೂಗಳತೆಯ ದೂರದಲ್ಲಿ ಲಕ್ಷಮ್ಮನ ಸಮಾಧಿ ಮಾಡಿದ ಸ್ಮಾರಕವಿದ್ದು, ತನ್ನ ಸೊಸೆಯ ತ್ಯಾಗ ಮತ್ತು ಬಲಿದಾನದ ಗೌರವಾರ್ಥವಾಗಿ ಕೆಂಪೇಗೌಡರು ನಿರ್ಮಿಸಿದರು ಎನ್ನಲಾದ ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ಇಂದಿಗೂ ಸಹಾ ಕೋರಮಂಗಲದ 8 ನೇ ಬ್ಲಾಕ್ ಬಳಿ ಕಾಣಬಹುದಾಗಿದೆ.

ಇನ್ನು ಕೋರಮಂಗಲ ಎಂಬ ಹೆಸರು ಹೇಗೆ ಬಂದಿತು ಎಂಬುದಕ್ಕೆ ಹಲವಾರು ಸಂಗತಿಗಳಿದ್ದು ಆದರೆ ಅತ್ಯಂತ ಜನಪ್ರಿಯ ಮತ್ತು ಅಂಗೀಕರಿಸಲ್ಪಟ್ಟ ಒಂದು ವಿಷಯವೆಂದರೆ, ಕೋರ + ಮಂಗಲ ಎಂದು ವಿಂಗಡಿಸಿದಲ್ಲಿ ಕೋರ ಅಂದರೆ ಕೂಲಂಕುಷವಾದ ಪರೀಕ್ಷೆ ಮತ್ತು ಮಂಗಲ ಎಂದರೆ ಶುಭಪ್ರದ ಅಥವಾ ಕಲ್ಯಾಣ ಎಂದಾಗುತ್ತದೆ. ಹೀಗೆ ಈ ಎರಡೂ ಪದಗಳ ಸಂಗಮದಿಂದ ಕೋರಮಂಗಲ ಎಂದು ಪ್ರಸಿದ್ಧಿಯಾಗಿದೆ ಎನ್ನುವುದು ಬಲ್ಲವರ ಅಂಬೋಣವಾಗಿದೆ.

raheja90ರ ದಶಕದಲ್ಲಿ ಕೋರಮಂಗಲ ನಗರದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿವ ಪ್ರದೇಶ ಎಂದು ಅರಿವಾಗುತ್ತಿದ್ದಂತೆಯೇ, ರಿಯಲ್ ಎಸ್ಟೇಟ್ ಡೆವಲಪರ್‌ಗಳಾದ ರಹೇಜಾ ಅವರು ಕೋರಮಂಗಲದ 7ನೇ ಬ್ಲಾಕಿನಲ್ಲಿ ನಿರ್ಮಿಸಿದ ರಹೇಜಾ ಆರ್ಕೇಡ್ ಎಂಬ ಮಿಶ್ರ-ಬಳಕೆಯ ಯೋಜನೆಯು ಕೋರಮಂಗಲದ ಭೂದೃಶ್ಯವನ್ನು ಬದಲಾಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದು ಬೆಂಗಳೂರಿನಲ್ಲಿ ಮೊದಲ ಖಾಸಗಿ ಬಹು ಮಹಡಿ ಕಟ್ಟಡವಾದ ಕಾರಣ, ಆ ದಿನಗಳಲ್ಲಿ ಅನೇಕ ಕಂಪನಿಗಳು ಬೆಂಗಳೂರಿನ ಇತರ ಭಾಗಗಳಿಂದ ರಹೇಜಾ ಆರ್ಕೇಡ್‌ಗೆ ಸ್ಥಳಾಂತರಗೊಂಡಿದ್ದಲ್ಲದೇ, ರಜೇಜಾ ಅರ್ಕೆಡ್ಡಿನಲ್ಲಿ ಕಛೇರಿ ಇದೆ ಎನ್ನುವುದೇ ಹೆಮ್ಮೆಯ ಸಂಗತಿಯಾಗಿತ್ತು ಎನ್ನುವುದು ಗಮನಾರ್ಹ.

forumಇನ್ನು ರಹೇಜಾ ಆರ್ಕೆಡ್ದಿನ ಕೂಗಳತೆ ದೂರದಲ್ಲಿಯೇ 2004ರಲ್ಲಿ ಬೆಂಗಳೂರಿನಲ್ಲೆ ಪ್ರಪ್ರಥಮ ಬಾರಿಗೆ ಫೋರಂ ಎಂಬ ಮಾಲ್ ಆರಂಭವಾಗಿ, ನೂರಾರು ಬ್ರಾಂಡೆಡ್ ಉತ್ಪನ್ನಗಳ ಮಳಿಗೆಗಳು, ತರ ತರಹದ ಆಹಾರ ಮಳಿಗೆಗಳ ಜೊತೆ ಪಿವಿಆರ್ ಸಿನಿಮಾಸ್ ಎಂಬ ಮಲ್ಟಿ ಪ್ಲೆಕ್ಸ್ ಥಿಯೇಟರ್ ಸಹಾ ಆರಂಭವಾಗಿ ಹೀಗೆ ಒಂದೇ ಸೂರಿ ನಡಿಯಲ್ಲಿ ಎಲ್ಲರೂ ಸಿಗುವಂತಾದ ನಂತರ ಬೆಂಗಳೂರಿಗರ ಮೆಚ್ಚಿನ ಶಾಪಿಂಗ್ ಮತ್ತು ಸಿನಿಮಾ ತಾಣವಾಗಿದ್ದು ಈಗ ಇತಿಹಾಸ. ವಾಸ್ತವವಾಗಿ ಫೋರಮ್ ಮಾಲ್ ದೇಶದ ಆರಂಭಿಕ ಮಾಲ್‌ಗಳಲ್ಲಿ ಒಂದಾಗಿದ್ದು, ಅದು ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಇದ್ದ ಕಾರಣ ಜನರನ್ನು ಅತ್ಯಂತ ವೇಗವಾಗಿ ಸೆಳೆಯಿತಲ್ಲದೇ, ಅಂದು ವಾರಾಂತ್ಯದಲ್ಲಿ ಏನನ್ನೂ ಕೊಂಡು ಕೊಳ್ಳದೇ ಹೋದರೂ ಈ ಮಾಲ್ ಗಳಿಗೆ ಬಂದು ವಿಂಡೋ ಶಾಪಿಂಗ್ ಮಾದುವುದೇ ಬೆಂಗಳೂರಿಗರ ನೆಚ್ಚಿನ ಕಾರ್ಯವಾಗಿದ್ದು ಇಂದಿಗೂ ಸಹಾ ಫೋರಂ ಮಾಲ್ ಅತ್ಯಂತ ಯಶಸ್ವಿ ಮಾಲ್‌ಗಳಲ್ಲಿ ಒಂದಾಗಿದ್ದು ಜನಭರಿತವಾಗಿ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿರುವುದು ಗಮನಾರ್ಹವಾಗಿದೆ.

jyothi_nivasಕೆ.ಆರ್. ಪುರ, ಮಾರತ್ ಹಳ್ಳಿ, ಕಾಡು ಬೀಸನ ಹಳ್ಳಿ, ಸರ್ಜಾಪುರ, ಅಗರ ಮಾರ್ಗವಾಗಿ ಸಿಲ್ಕ್ ಬೋರ್ಡ್ ವರೆಗೂ ಹೊರವರ್ತುಲ ರಸ್ತೆಯೂ ಸಹಾ ಕೋರಮಂಗಲದ ಬೆಳವಣಿಗೆಗೆ ಸಹಕಾರಿಯಾಗಿದ್ದಲ್ಲದೇ ಒಂದು ಕಾಲದಲ್ಲಿ ವಾಸಿತಲು ಯೋಗ್ಯವಲ್ಲದ ಪ್ರದೇಶ ಎಂಬ ಅಪಖ್ಯಾತಿಗೆ ಒಳಗಾಗಿದ್ದ ಕೋರಮಂಗಲ ಇಂದು ಅತ್ಯಂತ ವೇಗದ ಬೆಳವಣಿಗೆ ಆಯಕಟ್ಟಿನ ಸ್ಥಳವಾಗಿದ್ದು ದಕ್ಷಿಣ ಬೆಂಗಳೂರಿನಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಹೆಚ್ಚು ಬೇಡಿಕೆಯಿರುವ ಸ್ಥಳಗಳಲ್ಲಿ ಒಂದಾಗಿ ಹೋಗಿದೆ. ಎಲೆಕ್ಟ್ರಾನಿಕ್ ಸಿಟಿಯಯ ಐಟಿ ಪಾರ್ಕ್ ಮತ್ತು ಅದರ ಅಕ್ಕ ಪಕ್ಕದ ಸ್ಥಳಗಳು ಉತ್ತಮ ದತವಾದ ವಸತಿ ಕೇಂದ್ರವಾಗಿರುವ ಕಾರಣ, ಇಂದು ಕೋರಂಗಲದಲ್ಲಿ ಅನೇಕ ಸಂಖ್ಯೆಯಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಮನರಂಜನಾ ಕೇಂದ್ರಗಳು ಆರಂಭವಾಗಿ ಕೋರಮಂಗಲದ ಘನತೆಯನ್ನು ಹೆಚ್ಚಿಸಿವೆ. ಕೋರಮಂಗಲದಲ್ಲಿ ಪ್ರತಿಷ್ಟಿತ ಜ್ಯೋತಿ ನಿವಾಸ್ ಕಾಲೇಜ್, ಕೋರಮಂಗಲ 5 ನೇ ಬ್ಲಾಕಿನಲ್ಲಿರುವ ಸೇಂಟ್ ಆನ್ಸ್ ಹೈಸ್ಕೂಲ್, ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್ ಸಮೀಪವಿರುವ ರೆಡ್ಡಿ ಜನಸಂಘದ ವಿವಿಧ ಶಿಕ್ಷಣ ಸಂಸ್ಥೆಗಳು, ಅವರದ್ದೇ ವೇಮನ ಇನಿಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಜೊತೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್‌ನಂತಹ ಅನೇಕ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು ಇದ್ದರೇ ಕೋರಮಂಗಲದ ಸಮೀಪವೇ ಕ್ರೈಸ್ಟ್ ವಿಶ್ವವಿದ್ಯಾಲಯವೂ ಇದ್ದು ಒಂದು ರೀತಿಯ ಶಿಕ್ಷಣ ಕ್ಷೇತ್ರವಾಗಿದೆ.

k_indoor stadium1997ರಲ್ಲಿ ಬೆಂಗಳೂರಿನಲ್ಲಿ ಆಯೋಚಿಸಲ್ಪಟ್ಟಿದ್ದ ರಾಷ್ಟ್ರೀಯ ಕ್ರೀಡಾಕೂಟದ ಸಲುವಾಗಿ ಅಂತರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣವನ್ನು ಕೋರಮಂಗಲದಲ್ಲಿ ನಿರ್ಮಿಸಿದ್ದಲ್ಲದೇ ಅದರ ಪಕ್ಕದಲ್ಲಿಯೇ ಕ್ರೀಡಾಳುಗಳು ಉಳಿದುಕೊಳ್ಳಲು ಕಟ್ಟಿದ ಭವ್ಯವಾದ ಅಪಾರ್ಟ್‌ಮೆಂಟ್‌ಗಳ ವಿಸ್ತಾರವಾದ ಐಷಾರಾಮಿ ವಸತಿ ಸಂಕೀರ್ಣದ ಪ್ರದೇಶಕ್ಕೆ ನ್ಯಾಷನಲ್ ಗೇಮ್ಸ್ ವಿಲೇಜ್ ಎಂಬ ಹೆಸರಿದ್ದು, ಕ್ರೀಡಾಕೂಟ ಮುಗಿದ ನಂತರ ಆ ಕಟ್ಟಡಗಳನ್ನು ಸಾರ್ವಜನಿಕರಿಗೆ ಹರಾಜು ಹಾಕಲಾಗಿದೆ. ಈ ವಸತಿ ವಸತಿ ಸಂಕೀರ್ಣವು ನಗರದ ಅತ್ಯುತ್ತಮವಾದ ಸಂಕೀರ್ಣ ಎಂದೇ ಪ್ರಖ್ಯಾತವಾಗಿದೆ.

ಸಾಫ್ಟ್ವೇರ್ ಕಂಪನಿಗಳು. ಉತ್ತಮ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲದೇ ಧಾರ್ಮಿಕವಾಗಿ ಹಿಂದೂಗಳಿಗೆ ಕೊರಮಂಗದ 5ನೇ ಬ್ಲಾಕ್‌ನಲ್ಲಿ 40ನೇ ವರ್ಷಕ್ಕೂ ಹಳೆಯ ಗಣಪತಿ ದೇವಸ್ಥಾನ, ಯಡನೀರು ಮಠವಲ್ಲದೇ, ಮುಸ್ಲಿಮ್ಮರಿಗೆ 5ನೇ ಬ್ಲಾಕ್ ನಲ್ಲಿರುವ ಮಸ್ಜಿದ್ ಇ ಮಾಮೂರ್ ,ಕ್ರೈಸ್ತರಿಗಾಗಿ ಕೋರಮಂಗಲ ಮೆಥೋಡಿಸ್ಟ್ ಚರ್ಚ್, C.S.I ಕಾನ್ವೆಂಟ್ ಚರ್ಚ್, ಸೇವಾಸದನ್ ಚರ್ಚ್ ಮುಂತಾದವುಗಳು ಇದ್ದು ಒಂದು ರೀತಿಯ ಸರ್ವ ಧರ್ಮ ಸಮನ್ವಯದ ಪ್ರಡೇಶವಾಗಿದೆ.

kalyanmantapa_busstopಕರ್ನಾಟಕ ಪೊಲೀಸ್ ಬೆಟಾಲಿಯನ್ 3ರ ತರಬೇತಿ ಕೇಂದ್ರವೂ ಸಹಾ ಕೋರಮಂಗಲದಲ್ಲಿ ಇದ್ದರೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಕ್ವಾರ್ಟರ್ಸ್ ಸಹಾ ಇದ್ದು ಅವರ ಮದುವೆ ಮುಂಜಿ ಶುಭಸಮಾರಂಭಗಳಿಗೆಂದೇ ಕಟ್ಟಿಸಲಾದ ಪೋಲೀಸ್ ಕಲ್ಯಾಣ ಮಂಟಪವು ಅತ್ಯಂತ ಪಸಿದ್ಧವಾಗಿದ್ದು ಕೋರಮಂಗಲ ಕಲ್ಯಾಣ ಮಂಟಪದ ಬಸ್ ಸ್ಟಾಪ್ ಎಂದೇ ಪ್ರಸಿದ್ಧವಾಗಿದೆ. ಇದರ ಸಮೀಪದಲ್ಲಿಯೇ 3ನೇ ಬ್ಲಾಕ್‌ನಲ್ಲಿರುವ ಇಂಡಿಗೋ 91.9 ಎಫ್‌.ಎಂ. ಕೇಂದ್ರವೂ ಸಹಾ ಇರುವುದು ಗಮನಾರ್ಹವಾಗಿದೆ.

Food_Streetಬೆಂಗಳೂರಿನಲ್ಲಿ ಅತ್ಯುತ್ತಮವಾಗಿ ನಿರ್ವಹಿಸಲ್ಪಡುವ ಕ್ಲಬ್‌ಗಳಲ್ಲಿ ಕೋರಮಂಗಲದ ಕ್ಲಬ್ ಸಹಾ ಒಂದಾಗಿದ್ದು. ಕೋರಮಂಗಲದಲ್ಲಿ ವಾಸಿಸುವ ಐಟಿ ಕಂಪನಿಗಳ ದೊಡ್ಡ ದೊಡ್ಡ ವ್ಯಕ್ತಿಗಳು, ವ್ಯವಹಾರಸ್ಥರುಗಳ ನೆಚ್ಚಿನ ತಾಣವಾಗಿದೆ. ಬೆಂಗಳೂರಿನಲ್ಲಿ ಪ್ರಪಂಚದ ಎಲ್ಲಾ ರೀತಿಯ ಆಹಾರ ಶೈಲಿಯು ಸಿಗುವ ಏಕೈಕ ತಾಣವೆಂದರೆ ಅದು ನಿಸ್ಸಂದೇಹವಾಗಿ ಕೋರಮಂಗಲ ಎಂದರೂ ತಪ್ಪಾಗದು. ಕೋರಮಂಗಲದ ಪ್ರತಿಯೊಂದು ಸಿಗ್ನಲ್‌ನಲ್ಲಿಯೂ ಬಗೆ ಬಗೆಯ ರೆಸ್ಟೊರೆಂಟ್‌ಗಳನ್ನು ಕಾಣಬಹುದಾಗಿದೆ. ಕೋರಮಂಗಲದ 5ನೇ ಬ್ಲಾಕ್‌ವ ಜ್ಯೋತಿನಿವಾಸ್ ಕಾಲೇಜಿನ ಮುಂಭಾಗದ ರಸ್ತೆಯಲ್ಲಂತೂ ಎಲ್ಲಾ ಬಗೆಯ ರೆಸ್ಟೋರೆಂಟ್ ಗಳಿದ್ದರೆ, ರಂಜಾನ್ ಮತ್ತು ಈದ್ ಸಂದರ್ಭದಲ್ಲಿ ಈ ಪ್ರದೇಶವು ಒಂರು ರೀತಿಯ ಆಹಾರದ ರಸ್ತೆಯಾಗಿ ಪರಿವರ್ತಿತವಾಗಿ, ಸಂಜೆ 6 ರಿಂದ ಆರಂಭವಾಗಿ ತಡರಾತ್ರಿ 2-3 ಗಂಟೆಯವರೆಗೂ ತೆರೆದಿದ್ದು, ನಗರದ ವಿವಿಧ ಭಾಗದ ಜನರು ಇಲ್ಲಿ ಜಾತ್ರೆಯಂತೆ ಸೇರುವುದು ವಿಶೇಷವಾಗಿದೆ.

ವಿವಿಧ ಸ್ಟಾರ್ಟಪ್ ಐಟಿ ಕಂಪನಿಗಳು, ಕಾಲೇಜುಗಳು, ಹಿಪ್ ರೆಸ್ಟೊರೆಂಟ್‌ಗಳು ಮತ್ತು ಕೋರಮಂಗಲ 80 ಅಡಿ ಮುಖ್ಯ ರಸ್ತೆಯ ಸುತ್ತ ಮುತ್ತಲೂ ಇರುವ ಮೇಲ್ಛಾವಣಿ ರಹಿತ ಬಾರ್‌ಗಳು, ಜ್ಯೋತಿ ನಿವಾಸ್ ಕಾಲೇಜಿನ ಸುತ್ತಲಿನ ಬೀದಿಗಳಲ್ಲಿ ಸಿಗುವ ಮೋಜಿನ ಬಟ್ಟೆಗಳು, ಸೌಂದರ್ಯವರ್ಧಕ ಪರಿಕರಗಳನ್ನು ಮಾರಾಟ ಮಾಡುವ ಟ್ರೆಂಡಿ ಅಂಗಡಿಗಳಿಂದಾಗಿ, ಒಂದು ರೀತಿಯಲ್ಲಿ ಕಾಸ್ಮೋಪಾಲಿಟನ್ ಪ್ರದೇಶವಾಗಿ ಮಾರ್ಪಟ್ಟ ಕೋರಮಂಗಲವು ದೇಶದ ಯುವ ಟೆಕ್ ಕೆಲಸಗಾರರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುವುದರಲ್ಲಿ ಜನಪ್ರಿಯವಾಗಿದೆ. ಇದೇ ಕಾರಣಕ್ಕಾಗಿಯೇ ಈ ಪ್ರದೇಶದಲ್ಲಿ ದಟ್ಟವಾದ ಮರಗಳಿಂದ ಕೂಡಿದ ಅನೇಕ ಮೇಲ್ದರ್ಜೆಯ ಅಪಾರ್ಟ್‌ಮೆಂಟ್ ಸಮುಚ್ಚಯಗಳಲ್ಲದೇ ನೂರಾರು ವಾಣಿಜ್ಯ ಕಟ್ಟಡಗಳೊಂದಿಗೆ ಕೋರಮಂಗಲವನ್ನು ಮತ್ತಷ್ಟು ಆಕರ್ಷಣಿಯವಾದ ಸ್ಥಳಾವನ್ನಾಗಿಸಿದೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ಡಾಣ, ಶಿವಾಜಿನಗರ, ಕೃ.ರಾ, ಮಾರುಕಟ್ಟೆಯಲ್ಲದೇ ನಗರದ ವಿವಿಧ ಬಡಾವಣೆಗಳಿಂದ ಕೋರಮಂಗಲಕ್ಕೆ ನೇರವಾದ ಬಸ್ ಸೌಕರ್ಯ ಹೊಂದಿದೆ. ಕೋರಮಗಂಗದಲ್ಲಿರುವ ಬಸ್ ಟರ್ಮಿನಲ್ ಬೆಂಗಳೂರಿನ ದೊಡ್ಡ ಟರ್ಮಿನಲ್ ಗಳಲ್ಲಿ ಒಂದಾಗಿದೆ. ಅದೇ ರೀತಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಡಾಣದಿಂದ ಕೋರಮಂಗಲಕ್ಕೆ ವಾಯುವಜ್ರ ಐಶಾರಾಮಿ ಬಸ್ ಸೌಲಭ್ಯವಿದೆ.

ಕೋಶ ಓದಿ ನೋಡು ದೇಶ ಸುತ್ತಿ ನೋಡು ಎಂಬ ಗಾದೆ ಮಾತಿನಂತೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ವಿಶ್ವ ಪರ್ಯಟನೆ ಮಾಡುವ ಆಲೋಚನೆ ಇದ್ದಲ್ಲಿ, ಯಾವುದೇ ಪಾಸ್ಪೋರ್ಟ್ ಇಲ್ಲದೇ, ಹೆಚ್ಚಿನ ಖರ್ಚೂ ಇಲ್ಲದೇ ಕೋರಮಂಗಲದ 8 ಬ್ಲಾಕ್ ಗಳನ್ನು ಸುತ್ತಾಡುತ್ತಾ ಅಲ್ಲಿರುವ ವಿವಿಧ ರೀತಿಯ ರೆಸ್ಟೋರೆಂಟ್ ಗಳಲ್ಲಿ ದೇಶ ವಿದೇಶದ ಆಹಾರಗಳನ್ನು ಸವಿಯುತ್ತಲೇ ಅಲ್ಲಿರುವ ಪಬ್ ಮತ್ತು ಬಾರ್ ಗಳಲ್ಲಿ ವಿವಿಧ ರಾಜ್ಯದ ಜನರುಗಳು ಮತ್ತು ವಿದೇಶಿಗರನ್ನು ಭೇಟಿ ಮಾಡುಬಹುದಲ್ಲದೇ, ಕೋರಮಂಗಲದಲ್ಲಿರುವ ಮಾಲ್ ಗಳಲ್ಲಿ ಆಡ್ಡಾಡುವ ಮೂಲಕ ಅಕ್ಷರಶಃ ವಿದೇಶದಲ್ಲಿರುವಂತಹ ಅನುಭವವನ್ನು ಪಡೆಯಬಹುದು ಎಂದರೂ ತಪ್ಪಾಗದು. ಕೋರಮಂಗಲದ ಕುರಿತಾಗಿ ಇಷ್ಟೆಲ್ಲಾ ಮಾಹಿತಿಗಳನ್ನು ತಿಳಿದ ನಂತರ ಇನ್ನೇಕೆ ತಡಾ, ಈ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಕೋರಮಂಗಲವನ್ನು ಒಮ್ಮೆ ಅಡ್ಡಾಡಿಕೊಂಡು ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ತಾನೇ?

ಏನಂತೀರಿ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s