ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

ಸಾಧಾರಣವಾಗಿ ಎಲ್ಲಾ ಮಕ್ಕಳಿಗೂ ಬಾಲ್ಯದಲ್ಲಿ ಅವರ ಅಪ್ಪಾ ಹೀರೋ ಎನಿಸಿದರೆ, ಬಾಲ್ಯದಲ್ಲಿ ನನಗೆ ನನ್ನ ಅಪ್ಪನಿಗಿಂತಲೂ ನನ್ನ ಸೋದರ ಮಾವನೇ ಅತಿದೊಡ್ಡ ಹೀರೋ. ನಮ್ಮ ಸನಾತನ ಧರ್ಮದಲ್ಲಿ ಶಾಸ್ತ್ರದ ರೀತಿಯಿಂದಲೂ ತಂದೆಯನ್ನು ಬಿಟ್ಟರೆ, ಬಹುತೇಕ  ಜವಾಬ್ಧಾರಿಗಳಲ್ಲಿ ಸೋದರ ಮಾವನದ್ದೇ ಹೊಣೆಗಾರಿಕೆ. ಹಾಗಾಗಿ ಭಯ ಭಕ್ತಿಯಿಂದಾಗಿ ತಂದೆಯಿಂದ ಪಡೆಯಲಾಗದ್ದನ್ನು ಪ್ರೀತಿಯಿಂದ ಮತ್ತು ಸಲುಗೆಯಿಂದ ಸೋದರ ಮಾವನ ಕಡೆಯಿಂದ ಪಡೆದುಕೊಳ್ಳುತ್ತಿದ್ದದ್ದೇ ಹೆಚ್ಚು. ಬಾಲ್ಯದಲ್ಲಿ ನಾನೂ ಸಹಾ ಇದರಿಂದ ಹೊರತಾಗಿರಲಿಲ್ಲ.

ನಮ್ಮ ಅಜ್ಜ ರಾಜಾ ರಾವ್ ಮತ್ತು ಅಜ್ಜಿ ವಿಶಾಲಾಕ್ಷಿ ಅವರಿಬ್ಬರ ಅನ್ಯೋನ್ಯ ದಾಂಪತ್ಯ ಜೀವನದ ಕುರುಹಾಗಿ ಸಾಲು ಸಾಲಾಗಿ ಏಳು ಗಂಡು ಮಕ್ಕಳು ಜನಿಸಿದ ಕೆಲವೇ ಕೆಲವು ತಿಂಗಳೊಳಗೆ ಮರಣ ಹೊಂದಿದ ನಂತರ 1941ರ ಕಾಮನ ಹುಣ್ಣಿಮೆಯಂದು ದೇವಕಿಯ ಗರ್ಭದಲ್ಲಿ ಎಂಟನೆಯವನಾಗಿ ಜನಿಸಿದ ಶ್ರೀಕೃಷ್ಣನಂತೆ ಜನಿಸಿದವರೇ ನಮ್ಮ ಮಾವ. ಬೆಳ್ಳಗೆ ದಷ್ಟ ಪುಷ್ಟವಾಗಿ ಚಂದವಿದ್ದ ಮಗುವಿಗೆ ತಮ್ಮ ಮನೆ ದೇವರು ಮೇಲುಕೊಟೆಯ ಚಲುವನಾರಾಯಣ ನೆನಪಿನಲ್ಲಿ ಚಲುವಯ್ಯ ಎಂದೇ ನಾಮಕರಣ ಮಾಡಿದರು. ಆದಾದ ನಂತರ ನಮ್ಮ ಅಜ್ಜಿಗೆ ಸಾಲು ಸಾಲಾಗಿ ಅಹಲ್ಯಾ ದ್ರೌಪತಿ ತಾರಾ, ತಾರ ಮಂಡೋದರಿ ಎನ್ನುವ ಪಂಚಕನ್ಯೆಯರಂತೆ ನಮ್ಮ ಅಮ್ಮನೂ ಸೇರಿ ಐದು ಹೆಣ್ಣು ಮಕ್ಕಳು ಜನಿಸಿ ಅವರೆಲ್ಲರೂ ತಮ್ಮ ಮುದ್ದಿನ ಅಣ್ಣನನ್ನು ಚಲುವಣ್ಣಾ ಎಂದು ಕರೆದ ಪರಿಣಾಮ ಕಡೆಯವರೆಗೂ ಎಲ್ಲರಿಗೂ ಚಲುವಣ್ಣಾನಾಗಿಯೇ ಬಿಟ್ಟರು. ನಾವು ಸಹಾ ಅವರನ್ನು ಕರೆಯುತ್ತಿದ್ದದ್ದೇ ಚಲುವಣ್ಣಾ ಮಾವಾ ಎಂದೇ.

ಏಳು ಮಕ್ಕಳ ಮರಣಾನಂತರ ಎಂಟನೆಯವನಾಗಿ ಜನಿಸಿದ ಮಗನ ಮೇಲೆ ತಂದೆ ತಾಯಿಯರ ಮಮಕಾರ ಸ್ವಲ್ಪ ಹೆಚ್ಚಾದರೂ, ಮಾವ ಎಸ್.ಎಸ್.ಎಲ್.ಸಿ. ಓದುವಷ್ಟರಲ್ಲೇ ಕನ್ನಡ, ತಮಿಳು, ತೆಲುಗು ನೀರು ಕುಡಿದ ಹಾಗೆ ಸುಲಲಿತವಾಗಿ ಬರುತ್ತಿದ್ದರೆ ಜೊತೆಗೆ ಹಿಂದಿ (ಅದೂ ಉರ್ದು ಮಿಶ್ರಿತ) ಜೊತೆಗೆ ವ್ಯವಹಾರಕ್ಕೆ ತಕ್ಕಷ್ಟು ಇಂಗ್ಲೀಷ್ ಬರುತ್ತಿತ್ತು. ನಮ್ಮ ಅಜ್ಜನವರ ಆರೋಗ್ಯ ಕ್ಷೀಣಿಸಿ ಪದೇ ಪದೇ ಆಸ್ಪತ್ರೆಗೆ ಸೇರಿಕೊಳ್ಳುತ್ತಿದ್ದರಿಂದ ಮನೆಯ ಜವಾಬ್ಧಾರಿ ನನ್ನ ಮಾವನ ಮೇಲೆ ಬಿತ್ತು. ಅಜ್ಜಿ ಅಜ್ಜನನ್ನು ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು ಅಸ್ಪತ್ರೆಗೆ ಆಗ್ಗಾಗ್ಗೆ ಕರೆದುಕೊಂಡು ಹೋಗುತ್ತಿದ್ದ ಕಾರಣ ಆರ್ಥಿಕವಾಗಿಯೂ ಹೆಚ್ಚು ಖರ್ಚಾಗುತ್ತಿದ್ದನ್ನು ಗಮನಿಸಿದ ನಮ್ಮ ಅಜ್ಜನ ಸಹೋದ್ಯೋಗಿಗಳೊಬ್ಬರು ನಮ್ಮ ಮಾವವಿಗೆ ಬಿಜಿಎಂಎಲ್ ಆಸ್ಪತ್ರೆಯಲ್ಲಿ ಕ್ಲರ್ಕ್ ಕೆಲಸ ಕೊಡಿಸಿದ ನಂತರ ಮನೆಯ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿತು.

ನಮ್ಮ ಅಜ್ಜ ಸ್ವಾತಂತ್ರ್ಯ ಪೂರ್ವ ಕಾಂಗ್ರೇಸ್ ಕಟ್ಟಾಳು. ಅಂದಿನ ಪ್ರಧಾನಿ ನೆಹರು ಅವರೊಂದಿಗೆ ನೇರ ಪತ್ರ ವ್ಯವಹಾರವನ್ನು ನಡೆಸುವಷ್ಟರ ಮಟ್ಟಿಗಿನ ಬಾಂಧ್ಯವ್ಯ. ಆದರೆ ಮಾವ ಅದಕ್ಕೆ ತದ್ವಿರುದ್ಧ. ಅದೊಮ್ಮೆ ಗೆಳೆಯರ ಜೊತೆ ಕಮ್ಯೂನಿಷ್ಟರ ಭಾಷಣಕ್ಕೆ ಹೋಗಿದ್ದ ವಿಷಯ ಯಾರದ್ದೋ ಮೂಲಕ ನಮ್ಮ ಅಜ್ಜನಿಗೆ ತಲುಪಿ ಮಾವ ರಾತ್ರಿ ಮನೆಗೆ ಬಂದಾಗ, ಕಮ್ಯೂನಿಸ್ಟ್ ಭಾಷಣ ಕೇಳಲು ಹೋಗಿದ್ದವರಿಗೆ ನಮ್ಮ ಮನೆಯಲ್ಲಿ ಜಾಗವಿಲ್ಲ ಎಂದು ಅಪ್ಪಾ ಮಗ ಶರಂಪರ ಕಿತ್ತಾಡಿದ್ದರಂತೆ.

champion

ನಮ್ಮ ತಾಯಿಯೇ ಹಿರಿಯ ಮಗಳಾಗಿದ್ದರಿಂದ ನಮ್ಮ ಅಜ್ಜಿ ಮನೆಯಲ್ಲಿ ನಾನೇ ಮೊದಲ ಮೊಮ್ಮಗ ಹಾಗಾಗಿ, ಅಜ್ಜಿ, ಮಾವ ಮತ್ತು ಚಿಕ್ಕಮ್ಮಂದಿರ ಪ್ರೀತಿಯಲ್ಲಿ ಅಂದು, ಇಂದು ಮತ್ತು ಮುಂದೆಯೂ ನನ್ನ ಪಾಲು ತುಸು ಹೆಚ್ಚೇ. ಹಾಗಾಗಿ ಸ್ವಲ್ಪ ನನ್ನ ಬಗ್ಗೆ ಎಲ್ಲರಿಗೂ ಸ್ವಲ್ಪ ಮುದ್ದು ಕೂಡಾ ಹೆಚ್ಚೇ. ಏನು ಕೇಳಿದರೂ ಇಲ್ಲಾ ಎನ್ನುತ್ತಿರಲಿಲ್ಲ. ಬೈಗುಳವೇ ಇಲ್ಲ ಎಂದಾದಲ್ಲಿ ಇನ್ನು ಹೊಡೆತ ಎಲ್ಲಿಂದ ಬಂತು. ಹಾಗಾಗಿ ನನಗೆ ಅಜ್ಜಿಯ ಊರಾದ ಕೆಜಿಎಫ್ ಗೆ ಹೋಗುವುದೆಂದರೆ ಪಂಚ ಪ್ರಾಣ. ನಾವು ಇಂತಹ ದಿನ ಬರ್ತೀವಿ ಎಂದು ಕಾಗದ ಬರೆದ ಕೂಡಲೇ ಅಜ್ಜಿ ನನಗೆ ಇಷ್ಟವಾದ ತಿಂಡಿಗಳನ್ನೆಲ್ಲಾ ಮಾಡಿ ಸಿದ್ಧವಾಗಿದ್ದರೆ, ಸದಾ ಕಾಲವೂ ಯಾರಾದರೂ ಭಂಟರನ್ನು ಜೊತೆಗೆ ಇಟ್ಟುಕೊಂಡು ಆಡ್ಡಾಡುತ್ತಿದ್ದ ನಮ್ಮ ಮಾವ, ಆ ಕತ್ತಲಿನಲ್ಲಿಯೂ ಟಾರ್ಚ್ ಹಿಡಿದುಕೊಂಡು ಛಾಂಪಿಯನ್ ರೈಲ್ವೇ ನಿಲ್ದಾಣದಲ್ಲಿ ನಮಗಾಗಿ ಕಾಯುತ್ತಿದ್ದದ್ದನ್ನು ನೆನಪಿಸಿಕೊಂಡರೆ ಇಂದಿಗೂ ಮನಸ್ಸು ತುಂಬಿ ಬರುತ್ತದೆ. ರೈಲು ಇಳಿದು ಮಾವನನ್ನು ಕಂಡ ಕೂಡಲೇ, ಓಡಿ ಹೋಗಿ ಅವರನ್ನು ಅಪ್ಪಿ ಮುದ್ದಾಡಿ, ಸೈಕಲ್ಲಿಗೆ ತಂದ ಸಾಮಾನುಗಳನ್ನೆಲ್ಲಾ ಹಾಗೇ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದಂತೆಯೇ ಛಾಂಪೀಯನ್ ರೈಲ್ವೇ ಸ್ಟೇಷನ್ನಿನಿಂದ ಮಾರಿಕುಪ್ಪಂ ಪೋಲೀಸ್ ಸ್ಟೇಷನ್ನಿನ ಪಕ್ಕದ ಸಾಯಲ್ ಸಿಮೆಂಟ್ ಬ್ಲಾಕಿನ ಅಜ್ಜಿಮನೆಯ ಸುಮಾರು ಒಂದೂವರೆ ಕಿಮೀ ದೂರ ಕಳೆದು ಹೋಗುತ್ತಿದ್ದದ್ದೇ ಗೊತ್ತಾಗುತ್ತಿರಲಿಲ್ಲ.

ಅಜ್ಜಿಯ ಮನೆಗೆ ಹೋಗಲಿಕ್ಕೆ ಪ್ರಮುಖ ಆಕರ್ಷಣೆ ಎಂದರೆ ನಮ್ಮ ಮಾವನ ಮೇಲಿನ ಪ್ರೀತಿ, ಸಂಜೆ ಸೋದರ ಅಳಿಯ ಮತ್ತು ಸೊಸೆಯಂದಿರಿಗೆ ಅಕ್ಕರೆಯಿಂದ ತಂದು ಕೊಡುತ್ತಿದ್ದ ಪೊಟ್ಟಣ (ಏನಾದರೂ ಒಂದು ಕುರುಕಲು ತಿಂಡಿ) ಅದರ ಜೊತೆಗೆ ನಮ್ಮ ಮಾವ ಬಲು ಮುದ್ದಿನಿಂದ ಸಾಕಿದ್ದ ನಾಯಿ ಕರಿಯನ ಜೊತೆ ಆಟ ಆಡೋದು, ಮಾವನ ಸೈಕಲ್ ತುಳಿಯುವುದು (ಅಗ ತಳ್ಳುವುದು). ಯಾವಾಗಲಾದರೂ ಮಾವ ಆಫೀಸಿನಿಂದ ಬೇಗನೆ ಬಂದರೆ ನನ್ನನ್ನು ಕರೆದುಕೊಂಡು ಮಾವನ ಜೊತೆ ಬೀರ್ ಶಾಪ್ (ರಾಬರ್ಟ್ ಸನ್ ಪೇಟೆ) ಟೌನ್ (ಆಂಡರ್ ಸನ್ ಪೇಟೆ)ಗೆ ಕರೆದುಕೊಂಡು ಹೋಗಿ ಹೋಟೆಲ್ಲಿನಲ್ಲಿ ಮಸಾಲೆ ದೋಸೆ ಕೊಡಿಸಿ ಬರುವಾಗ ಆಗಷ್ಟೇ ತಮಿಳು ನಾಡಿನಿಂದ ತಾಜವಾಗಿ ಬಂದಿರುತ್ತಿದ್ದ ತಾಳೇಕಾಯಿ (ತಮಿಳಿನಲ್ಲಿ ತಾಟಿನಿಂಗು) ಬೇಕರಿಯಲ್ಲಿ ಬಗೆ ಬಗೆಯ ಬಿಸ್ಕತ್ತು, ರಸ್ಕ್, ಬ್ರೆಡ್ ಬನ್ನು ಗಳನ್ನು ತೆಗೆಸಿಕೊಡ್ಟುತ್ತಿದ್ದದ್ದು ನನಗೆ ತುಂಬಾ ಖುಷಿ ಕೊಡುತ್ತಿತ್ತು.

bgml

ನನ್ನ ಬಾಲ್ಯದಲ್ಲಿ ನನ್ನ ಮಾವನೇ ಹೀರೋ ಎನಿಸಲು ನೂರಾರು ಕಾರಣಗಳಿದ್ದವು. ಅದರಲ್ಲಿ ಎಲ್ಲದ್ದಕ್ಕಿಂತಲೂ ಹೆಚ್ಚಾಗಿ ನನ್ನ ಮಾವ ಅತ್ಯಂತ ಜನಾನುರಾಗಿ. ಬಿಜಿಎಂಲ್ ಆಸ್ಪತ್ರಯ ಕಾರ್ಡ್ ಸೆಕ್ಷೆನ್ನಲ್ಲಿ ಕೆಲಸ ಮಾಡುತ್ತಿದ್ದರಿಂದ ಕೆಜಿಎಫ್ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕರಿಗೆ ಮಾವನ ಕಡೆಯಿಂದ ಒಂದಲ್ಲಾ ಒಂದು ಕೆಲಸ ಮಾಡಿಸಿಕೊಳ್ಳಲೇ ಬೇಕಿದ್ದ ಕಾರಣ, ಎಲ್ಲರಿಗೂ ಮಾವನ ಪರಿಚಯವಿರುತ್ತಿತ್ತು. ಅದೇ ರೀತಿ ಆಸ್ಪತ್ರೆಗೆ ಬರುತ್ತಿದ್ದ ಅವರೆಲ್ಲರ ಕುಟುಂಬಗಳೂ ನಮ್ಮ ಮಾವನಿಗೆ ಪರಿಚಯವಿದ್ದ ಕಾರಣ, ಅಂದು ಇಡೀ ಕೆಜಿಎಫ್ ನಲ್ಲಿ ನಮ್ಮ ಮಾವನನ್ನು ಎಲ್ಲೇ ಕಂಡರೂ ವಣಕ್ಕಂ ಸರ್ (ನಮಸ್ಕಾರ ಸರ್) ಎಂದು ಪ್ರೀತಿಯಿಂದ ನಮಸ್ಕರಿಸಿ, ಪಕ್ಕದಲ್ಲಿ ಇರುತ್ತಿದ್ದ ನನ್ನನ್ನು ನೋಡಿ ಯಾರ್ ಸರ್ ಇಂದ ಪಯ್ಯಾ? ಎಂದು ಹೇಳುತ್ತಾ ನನ್ನ ಕೆನ್ನೆಯನ್ನು ಚಿವುಟಿ ಮುತ್ತು ಕೊಡುತ್ತಿದ್ದರು. ಮಾವನ ಜೊತೆ ಹೊರಗೆ ಹೋಗುವುದೆಂದರೆ ಅದೊಂದು‌ ರೀತಿಯಲ್ಲಿ VIP‌ ಜೊತೆ ಹೊಗ್ತಾ ಇದ್ದಿವೇನೋ ಅನ್ನಿಸ್ತಿತ್ತು ಎಂದರೂ ಅತಿಶಯವಲ್ಲ. ಅರೇ ಇಷ್ಟೋಂದು ಜನರ ಸಂಪರ್ಕ ಇರುವ ನಮ್ಮ ಮಾವ ಅತ್ಯಂತ ಪ್ರಭಾವಿ ವ್ಯಕ್ತಿ ಎಂದು ನನಗೆ ಹೆಮ್ಮೆ ತರಿಸುತ್ತಿತ್ತು.

ಇನ್ನು ತಮ್ಮ ಸಾಕು ಪ್ರಾಣಿ ಕರಿಯನ ಮೇಲಿಟ್ಟಿದ್ದ ಪ್ರೀತಿಯಿಂದಾಗಿ. ಎಷ್ಟೇ ಹೊತ್ತಿನಲ್ಲೂ ನಮ್ಮ ಮಾವ ಬರುತ್ತಿದ್ದದ್ದು ಗೊತ್ತಾಗುತ್ತಿದ್ದಂತೆಯೇ ಕರಿಯ ಓಡಿ ಹೋಗಿ ಅವರ ಸೈಕಲ್ಲಿನ ಕ್ಯಾರಿಯರ್ ಮೇಲೆ ಛಂಗನೆ ಹಾರಿ ಕುಳಿತುಕೊಳ್ಳುತ್ತಿದ್ದದ್ದು ನನಗೆ ಬಲು ಮಜ ಕೊಡುತ್ತಿತ್ತು. ಅದೇ ಅಲ್ಲದೇ, ಕರಿಯ ಎಷ್ಟೇ ಚೇಷ್ಟೆ ಮಾಡುತ್ತಿದ್ದರೂ, ಒಮ್ಮೆ ನಮ್ಮ ಮಾವ ಕರಿಯಾ ಸುಮ್ನಿರೂ ಎಂದು ಹೇಳುತ್ತಿದ್ದಂತೆಯೇ ಬಾಲ ಮುದುರಿಕೊಂಡು ಮೂಲೆಯಲ್ಲಿ ಕೂರಿಸುತ್ತಿದ್ದದ್ದು ಸಹಾ ನನಗೆ ನನ್ನ ಮಾವನನ್ನು ಹೀರೋ ಎನಿಸುವಂತೆ ಮಾಡುತ್ತಿತ್ತು.

chel2-removebg-preview

ಇನ್ನು ನನ್ನ ಮಾವನ ಉಡುಗೆ ತೊಡುಗೆಯೂ ನನಗೆ ಸೋಜಿಗವನ್ನುಂಟು ಮಾಡುತ್ತಿತ್ತು. ಚಿಕ್ಕ ವಯಸ್ಸಿನಲ್ಲಿ ಅಂದಿನ ಕಾಲಕ್ಕೆ ತಕ್ಕಂತೆ ಸ್ಟೈಲ್ ಮಾಡುವುದರಲ್ಲಿ ನನ್ನ ಮಾವ ಎತ್ತಿದ ಕೈ. ಆಯಾಯಾ ಕಾಲದ ತಮಿಳು ಚಿತ್ರದ ನಾಯಕರಂತೆ ಕೂದಲು ಬಾಚುವುದು, ಸೈಡ್ ಲಾಕ್ ಬಿಡುವುದು, ಬಣ್ಣ ಬಣ್ಣದ ಶರ್ಟ್ ಹಾಕಿ ಕಾಲರ್ ಕೊಳೆಯಾಗಬಾರದು ಎಂದು ಕರ್ಛೀಫ್ ಕಟ್ಟಿಕೊಳ್ಳುತ್ತಿದ್ದದನ್ನು ನೋಡಿದಾಗ ನನಗೆ ನನ್ನ ಮಾವ ಯಾವುದೇ ಹೀರೋ ವಿಗಿಂತಲೂ ಕಡಿಮೆ ಎನಿಸುತ್ತಲೇ ಇರಲಿಲ್ಲ. ಇನ್ನು ಮಾವ ಶೇವಿಂಗ್ ಮಾಡುತ್ತಿದ್ದದ್ದರ ಕುರಿತಾಗಿಯೇ ಒಂದು ದೊಡ್ದ ಪ್ರಬಂಧ ಬರೆಯಬಹುದು. ನನ್ನ ಜೀವನವಿಡೀ ಅವರನ್ನು ಗಡ್ಡ ಬಿಡಿ, ಕುರುಚಲು ಗಡ್ಡಧಾರಿಯಾಗಿಯೂ ನೋಡಲೇ ಇಲ್ಲಾ.ಳ್ಳೆಯ ಮಿಲಿಟರಿ ಶಿಸ್ತಿನ ಸಿಪಾಯಿಂತೆ ಅರ್ಧಗಂಟೆ ಶೇವಿಂಗ್ ಮಾಡುತ್ತಿದ್ದದಲ್ಲದೇ ನೀಟಾಗಿ ಪೊಟ್ಯಾಸಿಯಮ್ ಅಲ್ಯೂಮ್‌ನಿಂದ ಕೆನ್ನೆಗೆ ಸವರಿಕೊಂಡು ಕ್ಷೌರದ ಸಮಯದಲ್ಲಿ ಚರ್ಮದ ಮೇಲಾಗುವ ಸಣ್ಣ ಪುಟ್ಟ ತರಚುಗಳಿಗೆ ಉಪಶನಮವಾಗುವಂತೆ ನೋಡಿಕೊಳ್ಳುತ್ತಿದ್ದರು.  ನಾನು ದೊಡ್ಡವನಾಗಿ ಶೇವಿಂಗ್ ಮಾಡಿಕೊಳ್ಳಲು ಆರಂಭಿಸಿದಾಗಲೂ ನನ್ನ ಮಾವನೇ ಇದೇ ಆಲ್ಯೂಮ್ ಕಲ್ಲನ್ನು ತಂದು ಕೂಟ್ಟಿದ್ದರು. ಪ್ರತೀ ಸಾರಿ ಅವರ ಮನೆಗೆ ಹೋದಾಗಲೂ ನನ್ನ ಗಲ್ಲವನ್ನು ಸವರಿ ಇದೇನೋ ಹೀಗೆ ಗಡ್ಡ ಬಿಟ್ಟಿದ್ದೀ, ನೋಡು ನಾನು ಹೇಗಿದ್ದೀನೀ? ಎಂದು ತಮ್ಮ ನುಣುಪಾದ ಕೆನ್ನೆಗಳನ್ನು ಸವರಿ ಅಣುಕಿಸುತ್ತಿದ್ದರು

ನಮ್ಮ ಮಾವನ ಸಮಯ ಪ್ರಜ್ಞೆ ನನಗೆ ಮತ್ತೊಂದು ಇಷ್ಟವಾಗುತ್ತಿದ್ದ ಸಂಗತಿ. ಕೆಲಸಕ್ಕೆ ಸದಾಕಾಲವೂ ನಿಗಧಿತ ಸಮಯಕ್ಕೆ ಹೋಗಿಬರುತ್ತಿದ ಮಾವ, ಮಧ್ಯಾಹ್ನ ಊಟಕ್ಕೆಂದು ಮಾವ ಬರುವ ಹೊತ್ತಿಗೆ ಮನೆಯಲ್ಲಿ ಎಲ್ಲರಿಗೂ ಸಾಲಾದ ತಟ್ಟೆಗಳನ್ನು ಹಾಕಿದ್ದರೆ, ನಾವು ಮಕ್ಕಳುಗಳು ಲೋಟಗಳಿಗೆ ನೀರು ಬಡಿಸುವ ತಾಮುಂದು ನಾಮುಂದು ಎಂದು ಕಿತ್ತಾಡುತ್ತಿದ್ದೆವು. ಮಾವ ಮನೆಗೆ ಬಂದು ಸೈಕಲ್ಲು ಸ್ಟಾಂಡ್ ಹಾಕಿ ಬಟ್ಟೆ ಬಿಚ್ಚಿ ಪಂಚೆ ಉಟ್ಟುಕೊಂಡು ಕೈ ಕಾಲು ತೊಳೆದುಕೊಂಡು ತಟ್ಟೆ ಮುಂದೆ ಕುಳಿತು ಸುತ್ತಮುತ್ತಲೂ ನಾವೆಲ್ಲರೂ ಅವರಿಗಾಗಿಯೇ ಕಾಯುತ್ತಿದ್ದೆವು ಎಂಬುದರ ಅರಿವೇ ಇಲ್ಲದೇ, ಗಬ ಗಬ ಎಂದು ಊಟ ಮಾಡಿ ಸೀದಾ ಆವರ ರೂಮಿಗೆ ಹೋಗುತ್ತಿದ್ದಂತೆಯೇ ಗೋರ್ ಗೋರ್ ಎಂದು ಸದ್ದು ಬಂದಿತೆಂದರೆ ಇನ್ನು 20 ನಿಮಿಷ ಪ್ರಪಂಚವೇ ಅಲುಗಾಡಿದರೂ ಮಾವ ಏಳುತ್ತಿರಲಿಲ್ಲ. ಸರಿಯಾಗಿ 20 ನಿಮಿಷ ಗಾಢ ನಿದ್ದೆ ಮಾಡಿ ಪುನಃ ಎದ್ದು ಮುಖ ತೊಳೆದುಕೊಂಡು ಬಟ್ಟೆ ಹಾಕಿಕೊಂಡು ಪುನಃ ಬಿಜಿಎಂಎಲ್ ಅಸ್ಪತ್ರೆಗೆ ಸಮಯಕ್ಕೆ ಸರಿಯಾಗಿ ಹಾಜರಿ.

ಇನ್ನೇನು ಸೂರ್ಯ ಮುಳುಗಿ ಕತ್ತಲಾಗುತ್ತಿದೆ ಎಂದರೆ ನಮಗೆ ಮಾವ ಇವತ್ತು ಏನು ಪೊಟ್ಟಣ ತರಬಹುದು? ಎಂಬ ಕುತೂಹಲ. ಮಾವ ಬರುತ್ತಿದ್ದಂತೆಯೇ ಯಥಾ ಪ್ರಕಾರ ಬಟ್ಟೆ ಬಿಚ್ಚಿ ಪಂಚೆ ಉಟ್ಟುಕೊಂಡು ದೇವರರಿಗೆ ಮತ್ತು ನಮ್ಮ ಅಜ್ಜನಿಗೆ ನಮಸ್ಕರಿಸಿ, ಹಜಾರಕ್ಕೆ ಬಂದು ನಮ್ಮೆಲ್ಲ ರಜೊತೆ ಕುಳಿತು ತಂದಿರುತ್ತಿದ್ದ ಪೊಟ್ಟಣ ಬಿಡಿಸುತ್ತಿದ್ದಂತೆಯೇ ನಮ್ಮ ಮಾವನ ಮುದ್ದು ಶುರುವಾಗುತ್ತಿತ್ತು. ಪೊಟ್ಟಣ ಬೇಕಿದ್ದರೆ, ಮೊದಲು ಮುತ್ತು ಕೊಡಬೇಕು ಎಂದು ಲೊಚ ಲೊಚನೆ ಮುದ್ದಾಡುತ್ತಲೋ ಇಲ್ಲವೇ ನಮ್ಮ ಕೆನ್ನೆಗೆ ನಯಸ್ಸಾಗಿ ಸವರುತ್ತಲೋ, ಇಲ್ಲವೇ ಗುದ್ದುತ್ತಲೋ ದಾಲ, ದೋಲ, ದುಮ್ಮ, ಪನ್ನಾಲೋ, ಪನ್ನಿಕೋ, ಪಚ್ಚಮಕ್ಕೋ, ದಾಲುಮಾ, ದಾಲ್ಮಕೋ, ದಾಲುಮಾ (ನಮ್ಮ ಮಾವ ನಮ್ಮನ್ನು ಮುದ್ದಾಡುವಾಗ ಹೇಳುತ್ತಿದ್ದ ಪ್ರೀತಿಯ ಚುಟುಕು) ಎಂದು ಹೇಳುತ್ತಿದ್ದ ಪ್ರೀತಿಯ ಚುಟುಕದ ಅರ್ಥ ಇಂದಿಗೂ ನಮಗೂ ಮತ್ತು ಅವರಿಗೂ ಗೊತ್ತಿಲ್ಲ. ಅದೇ ರೀತಿಯಲ್ಲೇ ಆಫ್ ಫಾರ್ ಸಿಕ್ಸ್, ಟಿಮ್ ಬಾಕ್ಸ್ ಜಾನ್, ಎಕ್ಸಾಟ್ಲಿ ಫಿಟಿಂಗ್, ಎಕ್ಸಾಟ್ಲಿ ಕಟಿಂಗ್, ಟುಫಾನ್ ಕ್ವೀನ್ ಎನ್ನುವ ಮತ್ತೊಂದು ಚುಟುಕು. ನಾನು ದೊಡ್ಡವನಾದ ಮೇಲೆ ಅರ್ಥೈಸಿಕೊಂಡಂತೆ, ಸ್ವಾತ್ರಂತ್ರ್ಯ ಪೂರ್ವದಲ್ಲಿ ಕೆಜಿಎಫ್ ನಲ್ಲಿ ಬ್ರಿಟೀಶರ ಕಾಲೋನಿಗಳೇ ಹೆಚ್ಚಾಗಿದ್ದ ಕಾರಣ ಮತ್ತು ನಮ್ಮ ಅಜ್ಜಿಯ ಮನೆಯೂ ಅಲ್ಲಿಯೇ ಇದ್ದು ನಮ್ಮ ಅಮ್ಮಾ ಮತ್ತು ಮಾವ ತುಂಬಾ ಮುದ್ದು ಮುದ್ದಾಗಿದ್ದ ಕಾರಣ ಆ ಬ್ರೀಟೀಷರು ಪುಟ್ಟ ಮಕ್ಕಳನ್ನು ಅವರ ಮನೆಗೆ ಕರೆದುಕೊಂಡು ಹೋಗಿ ಮುದ್ದಾಡುತ್ತಿದ್ದರಂತೆ. ನಮ್ಮ ಮಾವನ ಈ ಮುದ್ದಿನ ಮಾತುಗಳಲ್ಲಿ ಇಂಗ್ಲೀಶ್ ಮತ್ತು ಹಿಂದಿ ಇರುವುದನ್ನು ನೋಡಿದರೆ ಬಹುಶಃ ಇದು ಬ್ರಿಟೀಶರಿಂದ ಬಂದ ಬಳುವಳಿಯಾಗಿರಬಹುದು.

ಇಷ್ಟೆಲ್ಲಾ ಕಷ್ಟ ನಷ್ಟಗಳ ನಡುವೆಯೂ ನಮ್ಮ ತಂದೆಯವರ ನೇತೃತ್ವ ಮತ್ತು ಸಹಕಾರದಲ್ಲಿ ಉಳಿದ ನಾಲ್ಕು ತಂಗಿಯರಿಗೆ ಮದುವೆ ಮಾಡಿ ಅವರ ಬಸುರಿ ಬಾಣಂತನಗಳನ್ನೆಲ್ಲಾ ಸ್ವಲ್ಪವೂ ಬೇಸರಿಸಿಕೊಳ್ಳದೇ ಮಾಡಿದ ನಮ್ಮ ಮಾವ ನಿಜಕ್ಕೂ ಗ್ರೇಟ್ ಎಂದರೂ ತಪ್ಪಾಗದು. ಇನ್ನು ನಾನು ಸ್ವಲ್ಪ ದೊಡ್ಡವನಾಗಿ ಮಿಡ್ಲ್ ಸ್ಕೂಲಿಗೆ ಬಂದಾಗ ಅಜ್ಜಿ ಮನೆಯಲ್ಲಿ ಇಡೀ ದಿನ ಇರಲು ಬೇಜಾರು ಎಂದಾಗ, ಮಾವನ ಜೊತೆ ಬಿಜಿಎಂಎಲ್ ಆಸ್ಪತ್ರೆಗೆ ಹೋಗಿ Card ತೆಗೆದುಕೊಡುತ್ತಾ ಅವರಿಗೆ ಸಹಾಯ ಮಾಡುವುದರಲ್ಲಿ ಏನೋ ಮಜಾ. ನಂತರ ಬಂದವರೆಲ್ಲರಿಗೂ ಎನ್ನುಡೆಯ ತಂಗಚ್ಚಿ ಪಯ್ಯಾ ಎಂದು ಪರಿಚಯಿಸುತ್ತಾ ಇನ್ನೇನು ರಜಾ ಮುಗಿದು ಬೆಂಗಳೂರಿಗೆ ಹೊರಡ ಬೇಕು ಎನ್ನುವಷ್ಟರಲ್ಲಿ ಡೆಟಾಲ್, ಹತ್ತಿ, ಬ್ಯಾಂಡೇಜ್, ಕೆಲವೊಂದು ಸಣ್ಣ ಪುಟ್ಟ ಔಷಧಗಳ ಜೊತೆ, ಮಾವ ನಮಗೆ ತಂದು ಕೊಡುತ್ತಿದ್ದ ಬಟ್ಟೆಯನ್ನು ಹಾಕಿಕೊಂಡಾಗ ಆಗುತ್ತಿದ್ದ ಸಂತೋಷ ಮತ್ತು ಸಂಭ್ರಮದ ಮುಂದೆ, ಅಪ್ಪ ಕೊಡಿಸಿದ ಇಲ್ಲವೇ ನಾವೇ ಇಂದು ಎಷ್ಟೇ ದುಡ್ಡು ಕೊಟ್ಟು ಯಾವುದೇ ದೊಡ್ಡ ದೊಡ್ಡ ಬ್ರಾಂಡ್ ಬಟ್ಟೆಯನ್ನು ಹಾಕಿಕೊಂಡರೂ ಆಗುವುದಿಲ್ಲ.

ನಾವು ದೊಡ್ಡವರಾಗುವಷ್ಟರಲ್ಲಿ ಅಜ್ಜಿಯೇ ಬೆಂಗಳೂರಿಗೆ ಹೆಣ್ಣುಮಕ್ಕಳ ಮನೆಯಲ್ಲಿ ಇರುತ್ತಿದ್ದ ಕಾರಣ, ತಾಯಿಯ ಮೇಲಿನ ಪ್ರೀತಿಯಿಂದ ಪ್ರತೀ ಹದಿನೈದು ದಿನಕ್ಕೊಮ್ಮೆ ಅಜ್ಜಿಗೆ ಬೇಕಾದ ಮಾತ್ರೆಗಳನ್ನು ತೆಗೆದುಕೊಂಡು ಹಾಗೇ ಅಕ್ಕ ಪಕ್ಕದವರ ಮನೆಯಿಂದ ದೇವರ ದೀಪ ಹಚ್ಚಲು ಹೂ ಬತ್ತಿ, ನುಗ್ಗೇಕಾಯಿ (ಕೆಜಿಎಫ್ ಮಣ್ಣು ನುಗ್ಗೇಕಾಯಿಗೆ ಪ್ರಶಸ್ತವಾಗಿರುವ ಕಾರಣ ಬಹುಶಃ ಅಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ನುಗ್ಗೇ ಮರವನ್ನು ಕಾಣಬಹುದಾಗಿತ್ತು) ಬೆಟ್ಟದ ಹುಣಸೇ (ಕೊರ್ಕಾಂ ಪಿಲ್ಲೆ) ಎಲ್ಲವನ್ನೂ ನ್ಯೂಸ್ ಪೇಪರಿನಲ್ಲಿ ಚೆಂದವಾಗಿ ಪ್ಯಾಕ್ ಮಾಡಿ ತರುತ್ತಿದ್ದ ಮಾವನನ್ನು ಮರೆಯಲು ಸಾಧ್ಯವೇ ಇಲ್ಲ.

WhatsApp Image 2023-03-09 at 19.19.13

90ರ ದಶಕದಲ್ಲಿ ಚಿನ್ನದ ಗಣಿಯನ್ನೇ ಸರ್ಕಾರ ಮುಚ್ಚುವ ಪರಿಸ್ಥಿತಿ ಬಂದಾಗ ಮಾವನಿಗೆ ಸ್ವಯಂ ನಿವೃತ್ತಿ ಕೊಡಿಸಿ, ಅದರಲ್ಲಿ ಬಂದ ಹಣದಲ್ಲಿಯೇ ಬೆಂಗಳೂದಿನಲ್ಲಿ ನಮ್ಮ ಮನೆಯ ಹತ್ತಿರವೇ ಅವರಿಗೆ ಒಂದು ಚೆಂದದ ಪುಟ್ಟದಾದ ಮನೆಯನ್ನು ಕಟ್ಟಿಸಿಕೊಟ್ಟು ಇಲ್ಲಿಗೆ ಕರೆಸಿಕೊಂಡು ನಂತರವಂತೂ ಪ್ರತೀ ದಿನವೂ ಮಾವನ ದರ್ಶನವಾಗುತ್ತಿತ್ತು. ಕೆಲ ವರ್ಷಗಳ ನಂತರ ನಾವೇ ಅಲ್ಲಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಮನೆಯನ್ನು ಕಟ್ಟಿಕೊಂಡು ಹೋದಾಗ ಹಬ್ಬ ಹರಿ ದಿನಗಳಿಗೇ ನಮ್ಮ ಭೇಟಿ ಸೀಮಿತವಾಯಿತು. ಪ್ರತಿಬಾರಿ ಅವರ ಮನೆಗೆ ಹೋದ ಕೂಡಲೇ ಹಾಯ್ ಸೆಲೈ (ಚಲುವ ಎನ್ನುವುದರ ತಮಿಳು ಅಪಭ್ರಂಶ) ಎಪ್ಪಡಿ ಇರ್ಕೆ? ಎಂದು ತಮಿಳಿನಲ್ಲಿಯೇ ಕೇಳಿದರೇ, ಏಯ್ ಕನ್ನಡದಲ್ಲಿ ಮಾತಾಡೋ! ಎಂದು ಮಾವ ತಮಾಷೆಗೆ ಹೇಳುವಷ್ಟರಲ್ಲಿ ಅವರ ಎರಡೂ ಕೈಗಳನ್ನು ತೆಗೆದುಕೊಂಡು ಚೆನ್ನಾಗಿ ನೆಟಿಕೆ ತೆಗೆದು, ಆವರ ಕೆನ್ನೆಗೆ ಸಣ್ಣದಾಗಿ ಗುದ್ದುತ್ತಾ ಅವರದ್ದೇ ದಾಲಾ.. ದೋಲಾ.. ಹೇಳಿ ತಬ್ಬಿಕೊಂಡಾಗಲೇ ಏನೋ ಅಪ್ಯಾಯಮಾನ.

ಕೆಜಿಎಫ್ ನಿಂದ ಬೆಂಗಳೂರಿಗೆ ನಮ್ಮ ಮನೆಯ ಹತ್ತಿರ ಬಂದಾಗ, ಶ್ರೀಕಂಠನ ಮಾವ ಎಂದು ಗುರುತಿಸಿಕೊಳ್ಳುತ್ತಿದ್ದವರು ಕೆಲವೇ ವರ್ಷಗಳಲ್ಲಿ ನಾನೇ ಚಲುವಯ್ಯನವರ ತಂಗಿಯ ಮಗ ಎಂದು ಗುರುತಿಸಿಕೊಳ್ಳಬೇಕಾದಷ್ಟು ಜನಪ್ರಿಯರಾಗಿ ಬಿಟ್ಟಿದ್ದರು. ನಾವೂ ಬೆಳೆದು ದೊಡ್ಡವರಾಗಿ ಕೆಲಸದಲ್ಲಿ ನಿರತರಾದರೆಮಾವ ಕೂಡಾ ನಾನಾ ರೀತಿಯ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ನಂತರ ಮೊದಲಿನಷ್ಟು ಕಾಲ ಮಾವನೊಂದಿಗೆ ಸಮಯ ಕಳೆಯಲು ಸಾಧ್ಯವಾಗದೇ ಹೋದರೂ, ಗಣೇಶನ ಹಬ್ಬ ಮತ್ತು ಸಂಕ್ರಾಂತಿಗೆ ಎಳ್ಳು ಬೀರಲು ಕಡ್ಡಾಯವಾಗಿ ಅವರ ಮನೆಗೆ ಹೋಗಿ  ಅತ್ತೆಗೆ ನಮಸ್ಕರಿಸಿ,  ಎರಡ್ಮೂರು ಗಂಟೆಗಳ ಕಾಲ ಮಾವನನ್ನು ರೇಗಿಸಿ ಬಂದಾಗಲೇ ಸಮಾಧಾನ.

ಮಕ್ಕಳಿಗೆ ಕೆಲವೊಂದು ಗುಣ ಸ್ವಭಾವಗಳು ತಂದೆ ಕಡೆಯಿಂದಲೂ ಕೆಲವೊಂದು ತಾಯಿಯ ಕಡೆಯಿಂದಲೂ ಬರುತ್ತದೆ. ಅದೇ ರೀತಿ ನನಗೆ ಬೌದ್ದಿಕವಾಗಿ ಅಪ್ಪನ ಕಡೆಯಂದ ಬಂದರೆ ಭೌತಿಕವಾಗಿ ಅಮ್ಮನ ಕಡೆ ಅದರಲ್ಲೂ ಮಾವನ ಕಡೆಯಿಂದ ಧಾರೆ ಎರೆದು ಬಂದಿದೆ. ಅವರದ್ದೇ ರಕ್ತದ ಗುಂಪು (ಹಾಗಾಗಿಯೇ ಅವರ ಹೃದಯಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ರಕ್ತ ಕೊಡುವ ಸದಾವಕಾಶ ದೊರೆತಿತ್ತು) ಅವರದ್ದೇ ಬಣ್ಣ, ಅವರಿದ್ದಂತೆಯೇ ನರೆಹುಲಿ, ಬಿಪಿ ಎಲ್ಲವೂ ಅನುವಂಶಿಕವಾಗಿ ಮಾವನಿಂದ ಅಳಿಯನಾದ ನನಗೆ ಧಾರೆ ಎರೆಯಲ್ಪಟ್ಟಿದೆ.

ಹೀಗೆ ಸೋದರ ಮಾವ ಮತ್ತು ಸೋದರಳಿಯ ಎನ್ನುವುದಕ್ಕಿಂತಲೂ ಆತ್ಮೀಯ ಗೆಳೆಯರಂತಿದ್ದ ಮಾವ ಇತ್ತೀಚೆಗೆ ವಯೋಸಹಜವಾಗಿ ಅನಾರೋಗ್ಯಕ್ಕೆ ತುತ್ತಾದಾಗ ಒಂದೆರಡು ಬಾರಿ ಮುಖತಃ ಭೇಟಿಯಾಗಿ ಕೆಲವೊಮ್ಮೆ ಫೋನ್ ಮುಖಾಂತರ ಸಾಂತ್ವನ ಹೇಳಿದ್ದೆ. ಕಳೆದವಾರ ಮತ್ತೆ ಹೃದಯ ಸಂಬಂಧಿತವಾದ ಚಿಕಿತ್ಸೆಗೆಂದು ರಾಮಯ್ಯ ಆಸ್ಪತ್ರೆಗೆ ಸೇರಿದ್ದಾಗ, ಮಂಗಳವಾರದ ಕಾಮನ ಹುಣ್ಣಿಮೆ (ಹೋಲಿಹಬ್ಬ)ದಂದು ತಮ್ಮ 82 ವರ್ಷ ಮುಗಿಸಿ 83 ಕ್ಕೆ ಕಾಲಿಟ್ಟಾಗ, ಆಸ್ಪತ್ರೆಯಲ್ಲಿದ್ದ ಮಾವನಿಗೆ, ಚಲುವಣ್ಣ ಮಾವನಿಗೆ ಹುಟ್ಟು ಹಬ್ಬದ ಶುಭಾಶಯಗಳು ಭಗವಂತನ ಅನುಗ್ರದಿಂದ ಆಯುರಾರೋಗ್ಯ ದೊರೆತು ನೂರ್ಕಾಲ ಸುಖವಾಗಿರಿ ಎಂದು ಹಾರೈಸುತ್ತೇವೆ. ಬೇಗ ಗುಣಮುಖರಾಗಿ ನಮ್ಮೆಲ್ಲರ ಮನೆಗಳಿಗೂ ಬರುವಂತಾಗಿ ಎಂದು ಹಾರೈಸಿದ್ದೇ ಕಡೆಯದಾಗಿ ಹೋಗಿ ವೈದ್ಯರು ನೀಡುತ್ತಿದ್ದ ಚಿಕಿತ್ಸೆಗಳು ಫಲಕಾರಿಯಾಗದೆ ಗುರುವಾರ, 09.03.2023ರ ಬೆಳಿಗ್ಗೆ ಸುಮಾರು 8:30ರ ಹೊತ್ತಿಗೆ ನಮ್ಮನ್ನೆಲ್ಲಾ ಅಗಲುವ ಮೂಲಕ ನಮ್ಮ ಕುಟುಂಬದ ಹಿರಿಯ ಕೊಂಡಿಯೊಂದು ಕಳಚಿ ಹೋದದ್ದು ವಯಕ್ತಿಯವಾಗಿ ತುಂಬಲಾರದ ನಷ್ಟವೇ ಸರಿ. ಸದ್ಯಕ್ಕೆ ನಾವೆಲ್ಲರೂ ನಮ್ಮ ಚಲುವಣ್ಣಾ ಮಾವನ ಆತ್ಮಕ್ಕೆ ಆ ಭಗವಂತ ಸದ್ಗತಿಯನ್ನು ನೀಡಲಿ ಎಂದಷ್ಟೇ ಕೋರಬಹುದಾಗಿದೆ.

ಇತ್ತೀಚೆಗೆ ಆರೋಗ್ಯವಾಗಿರುವವರೇ ಅಕಾಲಿಕವಾಗಿ ಅಚಾನಕ್ಕಾಗಿ ನಮ್ಮನ್ನಗಲಿ ಹೋಗುತ್ತಿರುವಾಗ, ನಾವುಗಳು ಎಷ್ಟೇ ಕೆಲಸ ಕಾರ್ಯಗಳಲ್ಲಿ ನಿರತವಾಗಿದ್ದರೂ ಒಂದಷ್ಟು ಸಮಯವನ್ನು ಕುಟುಂಬ ಅದರಲ್ಲೂ ಸ್ವಲ್ಪ ವಯಸ್ಸಾದವರಿಗಾಗಿ ಮೀಸಲಿರಿಸಿ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಿಯೋ ಇಲ್ಲವೇ ಫೋನ್ ಮುಖಾಂತರ ಸಂಪರ್ಕ ಮಾಡುವುದು ಉತ್ತಮ. ಹಣ ಕೆಲ ಕಾಲ ಖುಷಿ ನೀಡಿದರೆ ಆತ್ಮೀಯರ ಜೊತೆ ಕಳೆದ ಕಾಲ, ಅವರ ಪ್ರೀತಿ ಮತ್ತು ವಿಶ್ವಾಸದ ಮುಂದೆ ನಾವು ಗಳಿಸಿದ ಆಸ್ತಿ ಅಂತಸ್ತು ಎಲ್ಲವೂ ನಗಣ್ಯ ಎನಿಸುತ್ತದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ನನ್ನ ಬಾಲ್ಯದ ಹೀರೋ ಚಲುವಣ್ಣಾ ಮಾವಾ ಇನ್ನಿಲ್ಲಾ..

 1. ಅಬ್ಬಾ, ಸೋದರ ಮಾವನ ಬಗ್ಗೆ ಅದೆಷ್ಟು ಆಪ್ತತೆ, ಆತ್ಮೀಯತೆಯಿಂದ ಬರೆದಿದ್ದೀರಿ, ಓದಿದ ನಂತರ ಮನ ಕಲಕಿದ್ದು ಸುಳ್ಳಲ್ಲ. ಅವರು ಇತ್ತೀಚಿನವರೆಗೂ ಇದ್ದದ್ದು ಕೇಳಿ ಒಮ್ಮೆ ಇಂತಹ ಹಿರಿಯ ಜೀವವನ್ನು ಭೇಟಿಯಾಗಲಿಲ್ಲವಲ್ಲ ಎನಿಸಿತು. ನೀವೇ ಧನ್ಯರು. 🙏

  Like

 2. ನಾನು ಕಂಡಂತೆ ನನ್ನ ಸೋದರ ಮಾವ.

  ಸಾಮಾನ್ಯವಾಗಿ ಮನೆಯಲ್ಲಿ ಅಥವಾ ತುಂಬಾ ಬೇಕಾದವರೂ ತೀರೀ ಹೋದಾಗ ನಾವು ಅದರಿಂದ ಹೊರಬರುವುದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಆದರೂ ಸಹ ನಿಂತಲ್ಲಿ, ಕುಳಿತಲ್ಲಿ, ಎಲ್ಲೆ ಹೋದರು ಮನಸ್ಸು ಅವರ ನೆನಪು ಕಾಡುತ್ತದೆ,
  ಅದರ ಆವೃತವಾಗಿ ಕೆಲವೊಮ್ಮೆ ಈ ಜೇವನವೇ ನಶ್ವರ, ಏತಕ್ಕಾಗಿ ಬದುಕು, ಒಂದು ರೀತಿಯಲ್ಲಿ ಸ್ಮಶಾನ ವ್ರೈರಾಗ್ಯ ಕಾಡುತ್ತದೆ, ಮನುಷ್ಯ ಸತ್ತ ಮೇಲೆ ಎಲ್ಲಿ ಹೋಗುತ್ತಾರೆ, ಮನುಷ್ಯ ಜೀವನವೇ ಇಷ್ಟೇನಾ? ನಾನ ರೀತಿಯ ವೇದಾಂತ, ಧಾರ್ಮಿಕ, ಅಧ್ಯಾತ್ಮಿಕ ಚಿಂತನೆಗಳು ಒಂದರ ನಂತರ ಬಂದು ಹೋಗುತ್ತದೆ.

  ಮನುಷ್ಯ ಸಂಘ ಜೀವಿ, ಪ್ರೀತಿ ವಿಶ್ವಾಸ, ಸ್ನೇಹ ಸಂಬಂಧ ಗಳು ಬದುಕಿರುವ ತನಕ ಕಾಡುತ್ತದೆ.

  ಇವತ್ತು ಎಷ್ಟೇ ವಿಜ್ಞಾನ ತಂತ್ರಜ್ಞಾನ ಬೆಳೆದರೂ ಸಂಬಂಧಕ್ಕೆ ಕುಂದುಕೊರತೆಗಳು ಇದ್ದರೂ ಏಕಾಂಗಿ ಬದುಕಲ ಸಾಧ್ಯವಿಲ್ಲ. ಇದು ಬರೀ ಮನುಷ್ಯರಲ್ಲಿ ಮಾತ್ರ ವಲ್ಲದೆ ಸಕಲ ಚರಾಚರಾ ಜೀವಿಗಳಲ್ಲಿಯೂ ಕಾಣಬಹುದು, ಅದಕ್ಕೆ ಅಲ್ಲವೇ ಪ್ರೀತಿ ಬಾಂಧವ್ಯ ಹೇಗೆ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ,
  ಇದಕ್ಕೆ ಸಾಕ್ಷಿ ಎನ್ನುವಂತೆ ನನ್ನ ಸೋದರ ಮಾವ ಚೆಲುವಣ್ಣ ಮಾವ ಬದುಕಿ ಬಾಳಿದರು. ನಮ್ಮ ತಾಯಿಯ ಮನೆಯ ಕಡೆಯ ಹಿರಿಯ ಕೋಂಡಿ 82 ವಸಂತಗಳನ್ನು ತುಂಬಿ ಸ್ವರ್ಗಸ್ತರಾದರೂ.

  ಹೆಸರು ಚೇಲುವಯ್ಯ ಅದರೂ, ಎಲ್ಲರ ಬಾಯಿಯಲ್ಲು ಚೇಲುವಣ್ಣ ಎಂದು ಪ್ರಖ್ಯಾತ ರಾಗಿ ಕರೆಯಲ್ಪಡುತ್ತಿದ್ದರು.

  ನಮ್ಮ ಅಜ್ಜಿಗೆ 5 ಹೆಣ್ಣು , ಒಂದು ಗಂಡು ಮಕ್ಕಳು, ಅಜ್ಜ ಸಣ್ಣ ವಯಸ್ಸಿನಲ್ಲಿ ನಿಧನರಾದ ಮೇಲೆ ಎಲ್ಲಾ ಜವಾಬ್ದಾರಿ ನಮ್ಮ ಅಜ್ಜಿ ಹಾಗೂ ಮಾವನ ಮೇಲೆ ಹೊರೆ ಬಿದ್ದಿತು.

  ಹೆಸರು ಚೆಲುವಯ್ಯ, ತಕ್ಕಂತೆ ಮಾವ ಸುರದ್ರೂಪಿ, ಕಟ್ಟು ಮಸ್ತಾದ ದೇಹ, ದಟ್ಟ ಹಾಗೂ ಅಗಲವಾದ ಮೀಸೆ, ಅಕ್ಕ ತಂಗಿ ಯವರ ಪಾಲಿಗೆ ಚೇಲುವ ( ಗಣಿ ಬ್ರದರ್ ), ಎಲ್ಲಾ ರಿಗೂ ಪ್ರೀತಿ ಅಣ್ಣ, ಕೆ.ಜಿ.ಎಫ್ ನಲ್ಲಿ ‌‌‌ಗೋತ್ತಿಲ್ಲದವರು ಯಾರು ಇಲ್ಲ, ಅವರ ಪಾಲಿಗೆ ಸೇಲ್ವ ಎಂಬ ಅಂಕಿತ ನಾಮ.
  ಕೆ.ಜಿ.ಎಫ್ ನಲ್ಲಿ ಇರುವ ತನಕವೂ ಎಲ್ಲರಿಗೂ ಬೇಕಾದ ಮಾವ, ಮನೆಯ ಪಕ್ಕಪಕ್ಕದಲ್ಲಿಯೆ ಪೋಲಿಸ್ ಠಾಣೆ, ಅಲ್ಲಿಯ ಸಬ್ ಇನ್ಸ್‌ಪೆಕ್ಟರ್, ಸಿಬ್ಬಂದಿ ಗಳಿಗೆ ಅಚ್ಚುಮೆಚ್ಚು, ಮಾವ ಕೈ ಎತ್ತಿ wow ಮಾಡುವ ಪರಿಯೆ ವಿಬ್ಬಿನ್ನ ವಾಗಿ ಕಾಣುತ್ತಿತ್ತು. ನಮಗೆ ಒಂದು ರೀತಿಯಲ್ಲಿ ಆತ್ಮವಿಶ್ವಾಸ ಯಾಕೆಂದರೆ ಮಾನವನಿಗೆ ಪೋಲಿಸ್ ರು ಪರಿಚಯ.

  ಪ್ರತಿ ವರ್ಷವೂ ನಾವು ಬೇಸಿಗೆ ರಜೆಯ ಸಂದರ್ಭದಲ್ಲಿ ಊರಿಗೆ ಹೋದರೆ ಅಲ್ಲಿ ಎಲ್ಲಾ ದೊಡ್ಡಮ್ಮ , ಚಿಕ್ಕಮ್ಮ ಮಕ್ಕಳು ಸೇರುತ್ತಿದೇವು.
  ಎಲ್ಲಾರೂ 2 ರಿಂದ 5 ವರ್ಷ ಅಂತರ, ಮಾವ ಮಧ್ಯಾಹ್ನ ಮನೆಗೆ ಊಟಕ್ಕೆ ಬರುತ್ತಿದ್ದರು, ಬರುವ ಹೊತ್ತಿಗೆ ಮನೆಯಲ್ಲಿ ಗಪ್ ಚುಪ್, ಮಾವ ಊಟ ವಾದ ನಂತರ ಮಾನವನಿಗೆ ನಾವು ಸೇವೆ, ಕೈ ಕಾಲುಗಳು ಒತ್ತುತ್ತಿದರೆ ಮಾವ ಸಣ್ಣ ನಿದ್ರೆ ಗೆ ಜಾರುತ್ತಿದ್ದರು, ನಾವು ಏನಾದರೂ ಮಾವ ಮಲಿಗಿದಾರೆ ಎಂದು ಒತ್ತು ವುದನ್ನು ನಿಲ್ಲಿಸಿದಾಗ ಯಾಕೋ ನಿಲ್ಲಿಸಿದು ಎಂದು ಕೂಗೂ ಹಾಕಿದರೆ ಸಾಕು ಮತ್ತೆ ನಾವು ಬಯದಿಂದ ಮುಂದುವರೆಸಿತ್ತಿದೇವು.

  ಸಣ್ಣ ವಯಸ್ಸಿನಲ್ಲಿ ನಾನು ಊಟಮಾಡುತ್ತಿರಲ್ಲಿಲ್ಲ, ಅಮ್ಮ ಏನಾದರೂ ಚೇಲುವಣ್ಣ ಮಾನವನಿಗೆ ಹೇಳುವೆ ಎಂದರೆ ಸಾಕು ಬಯ ಬೀತರಾಗಿ ಒಂದೇ ಸಮನೆ ಬಯಿಗೆ ತುರುಕಿಕೊಂಡು ಊಟ ಮಾಡುತ್ತಿದ್ದೆ. ಮಾನವನಿಗೆ ಎಲ್ಲವೂ ಅಚ್ಚುಕಟ್ಟಾಗಿ ಇರಬೇಕು, ಊಟ, ಬಟ್ಟೆಗಳನ್ನು ಇಸ್ತ್ರಿ ಇಲ್ಲದೆ ಬಟ್ಟೆ ಹಾಕುತ್ತಿರಲ್ಲಿಲ್ಲ, ಎಲ್ಲಿಯಾದರೂ ಪ್ರಯಾಣ ಮಾಡುವಾಗ ಮುಂಜಾಗ್ರತಾವಾಗಿ ದುಡ್ಡು, ಮಾತ್ರೆಗಳ ಜೋಪಾನವಾಗಿ ಪ್ಯಾಕ್ ಮಾಡಿ ಯಾರಿಗೂ ತಿಳಿಯದ ಹಾಗೆ ಇಟ್ಟುಕೊಳ್ಳುತ್ತಿದರು.

  ನಾನು ಐ.ಟಿ.ಐ ನಲ್ಲಿ ಓದುತ್ತಿದ್ದಾಗ ನನ್ನ Master ಮುಸ್ಲಿಮ್ ಸಮುದಾಯವುರು, ಪರೀಕ್ಷೆ ಮುಂಚೆಯೇ ಎಲ್ಲಾ ಪೋಷಕರು ಕರೆದಾಗ‌, ನಾನು ನನ್ನ ತಂದೆಯ ಜೋತೆಗೆ ಮಾವನನ್ನು ಕರೆದುಕೊಂಡು ಹೋದೆ, ಮಾನವನಿಗೆ ಉರ್ದು ಮತಾನಾಡಲು ಬರುತ್ತಿದ್ದ ಕಾರಣ, ನನ್ನ ಮಾಸ್ಟರ್ ಗೂ impress ಯಾಗಿತ್ತು.

  ಮುಂದೆ ನಾವೆಲ್ಲರೂ ದೊಡ್ಡ ರಾಗಿ ಮದುವೆಯಾಗಿ ಯಾವುದಾದರೂ ಶುಭಾ , ಹಬ್ಬ ಹರಿದಿನಗಳಲ್ಲಿ ಮಾವ ಸಿಕ್ಕಾಗ ಏನೋ ಒಂದು ರೀತಿಯಲ್ಲಿ ಅವಿನಾಭಾವ, ಉಭಯ ಕ್ಷೇಮ ಸಮಾಚಾರ.

  ಈಗೆ ಮಾನವನಿಗೆ ಕೆಲವು ದಿನಗಳ ಹಿಂದೆ ಸ್ವಲ್ಪ ಬಳಲುತ್ತಿರುವ ಕಂಡು ಬಂದು, ಸ್ವಲ್ಪ ಉಸಿರಾಟದ ಮೇಲ್ಲುಪ್ಸ , ವಯೋ ಸಮಸ್ಯೆ, ಕಳೆದ ವಾರ M.S.Ramaiaha Hospital ನಲ್ಲಿ Heart ಸಂಬಂಧಿಸಿದಂತೆ Stunt ಅಲಾವಡಿಸಿದಾಗ, ಒಂದು ರೀತಿಯಲ್ಲಿ ಸಮಸ್ಯೆ ಬಗ್ಗೆ ಅರೆಯಿತು ಎಂದು ಬಯೆಸಿದೆವು, ಬೇಗ ಗುಣ ಮುಖರಾಗಿ ಮಾವ ಮನೆಗೆ ಹಿಂತಿರುಗಿ ಬರುತ್ತಾರೆ ಎಂಬ ವಿಶ್ವಾಸ ವಿತ್ತು. ಆಸ್ಪತ್ರೆಗೆ ಸೇರುವ ಮುನ್ನ ಮನೆಗೂ ಹೋಗಿ ನೋಡಿ ಮಾತಾನಾಡಿಸಿ ಆರ್ಶಿವಾದ ಪಡುದು ಬಂದವು.

  ತಾ 9/03/23 ಬೆಳ್ಳಿಗೆ 9 ಗಂಟೆಗೆ ಮನೆಯಿಂದ ಕರೆ ಬಂತು, ಮಾವ ಇನ್ನಿಲ್ಲ ಎಂಬ ಸುದ್ದಿ ಒಂದು, ಒಂದು ರೀತಿಯಲ್ಲಿ shock ಆಗಿ ಹೋದೆ, ಹಿಂದಿನ ದಿವಸ ನಾವೆಲ್ಲರೂ ಮಾನವನನ್ನು ಆಸ್ಪತ್ರೆಗೆ ಹೋಗಿ ನೋಡಿಕೊಂಡು ಬಂದೆವು.

  ಹಿರಿಯ ಚೇತನಕ್ಕೆ ಭಗವಂತನ ಅನುಗ್ರಹದಿಂದ ನಿಜವಾದ ಮನೆ (ಭಗವಂತನ ಸಾನಿದ್ಯ) ಸೇರಿದ್ದಾರೆ.

  ಮಾವನ ಇಬ್ಬರೂ ಮಕ್ಕಳು ಸುಸಂಸ್ಕೃತ ಬೆಳೆದು ನಿಂತಿದ್ದಾರೆ. ಮಕ್ಕಳು ಸಹ ತಮ್ಮ ಕರ್ತವ್ಯವನ್ನು. ಚೆನ್ನಾಗಿ ನಿರ್ವಾಹಿಸಿ, ಸೇವೆ ಹಾಗೂ ಆರೈಕೆ ಮಾಡಿದರು, ಎಲ್ಲಾವೂ ಭಗವಂತನ ಚಿತ್ತ.

  ಓಂ ನಮೋ ನಾರಾಯಣಾಯ 🙏🙏

  ಅಂತವೆಲ್ಲಕುಮಿರುವುದಿರಲಿ; ವಿಷಯೇಂದ್ರಿಯದ ।
  ಸಂತಾಪವುಂ ಮುಗಿವುದೆಂಬುದಲ ಪುಣ್ಯ? ॥
  ಎಂತೊ, ನಿನ್ನಾಜ್ಞೆಯಿನೊ, ತಾಂ ಸೋತೋ, ಬೇಸತ್ತೊ ।
  ಶಾಂತಿವಡೆಯಲಿ ಕರಣ – ಮಂಕುತಿಮ್ಮ

  ಆರ್. ಸುದರ್ಶನ

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s