ಸಾಮಾನ್ಯವಾಗಿ ಎಲ್ಲಿಯಾದರೂ ತಪ್ಪು ವಿಚಾರಗಳನ್ನು ಕಂಡ ಕೂಡಲೇ ಛೇ! ಕಾಲ ಕೆಟ್ಟು ಹೋಯಿತಪ್ಪಾ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಎಂದು ಹೇಳುತ್ತೇವೆ. ಹಿರಿಯರು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ನಮ್ಮ ಸನಾತ ಹಿಂದೂ ಧರ್ಮದಲ್ಲಿ ಇರುವ ಶಾಸ್ತ್ರ ಸಂಪ್ರದಾಯಗಳನ್ನು ಇಂದಿನ ಕಾಲದ ಮಕ್ಕಳು ಒಂದು ಚೂರೂ ಅನುಸರಿಸುವುದಿಲ್ಲ. ದೊಡ್ಡವರು ಚಿಕ್ಕವರು ಎನ್ನುವ ಗೌರವವೇ ಇಲ್ಲಾ. ಈ ಹಾಳು ಮೊಬೈಲ್ ಬಂದ ಮೇಲೆ ಸಣ್ಣ ಸಣ್ಣ ವಯಸ್ಸಿಗೆ ನೋಡಬಾರದ್ದದ್ದೆಲ್ಲವನ್ನೂ ನೋಡಿ ಹಾಳಾಗಿ ಹೋಗಿದ್ದಾರೆ. ಎಂದು ಗೊಣಗುವ ಮಾತುಗಳನ್ನು ಕೇಳಿದ್ದೇವೆ. ಕೆಲ ದಿನಗಳ ಹಿಂದೆ ನಮ್ಮ ನಿಮ್ಮ ನಡುವೆ ನಡೆದ ಅಂತಹದ್ದೇ ಎರಡು ಸಂಗತಿಗಳನ್ನು ತಿಳಿದ ನಂತರ ನಿಜಕ್ಕೂ ಕಾಲ ಇಷ್ಟು ಕೆಟ್ಟು ಹೋಗಿದೆಯಾ? ಎಂದೆನಿಸಿದ್ದು ಸುಳ್ಳಲ್ಲ.
ಉತ್ತರ ಪ್ರದೇಶದ ಮುಜಫ್ಫರನಗರದ ಬಿರಾಲ್ ಗ್ರಾಮದ ರೈತರಾದ ಶ್ರೀ ನಾಥು ಸಿಂಗ್ ಅವರಿಗೆ ನಾಲ್ವರು ಪುತ್ರಿಯರು ಮತ್ತು ಒಬ್ಬ ಪುತ್ರ ಸೇರಿ ಒಟ್ಟು ಐವರು ಮಕ್ಕಳು. ಹೆಣ್ಣು ಮಕ್ಕಳಿಗೆಲ್ಲಾ ಯಥಾಶಕ್ತಿ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ್ದರೆ, ಮಗನಿಗೂ ಸಹಾ ಶಿಕ್ಷಣವನ್ನು ಕಲಿಸಿ ಶಿಕ್ಷಕನಾಗಿದ್ದಾನೆ. ತಮ್ಮ ಮಡದಿಯ ನಿಧನದ ನಂತರ ಮಕ್ಕಳು ನಾಥು ಸಿಂಗ್ ಅವರನ್ನು ಸರಿಯಾಗಿ ನೋಡಿಕೊಳ್ಲದೇ ಹೋದ ಕಾರಣ, ಒಬ್ಬಂಟಿಯಾಗಿ ಮನೆಯಲ್ಲಿ ಇರಲಾಗದೇ, ತನ್ನ ಸ್ನೇಹಿತರ ಸಲಹೆಯ ಮೇರೆಗೆ ವೃದ್ಧಾಶ್ರಮಕ್ಕೆ ಸೇರಿದ ವಿಷಯ ತಮ್ಮ ಮಕ್ಕಳಿಗೆ ತಿಳಿದಿದ್ದರೂ, ಮಕ್ಕಳು, ಅಳಿಯ, ಸೊಸೆ ಕಡೆ ಪಕ್ಷ ಮೊಮ್ಮಕ್ಕಳೂ ತಮ್ಮನ್ನು ನೋಡಲು ಬಾರದೇ, ಕಡೆಯ ಪಕ್ಷ ಹಬ್ಬ ಹರಿದಿನಗಳಲ್ಲಾದರೂ, ತಂದೆಯವರ ಯೋಗಕ್ಷೇಮವನ್ನು ವಿಚಾರಿದದೇ ಹೋದಾಗ, ಇಂತಹ ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಭಾವನೆ ನಾಥು ಸಿಂಗ್ ಅವರ ಮೇಲೆ ಮೂಡಿದ ಪರಿಣಾಮ ತಮ್ಮ ಸ್ವಯಾರ್ಜಿತವಾದ ಆಸ್ತಿಗಳಿಗೆ ಮಗ- ಸೊಸೆ, ಹೆಣ್ಣುಮಕ್ಕಳು ಯಾರೂ ಸಹಾ ವಾರಸುದಾರರಾಗಲು ಯೋಗ್ಯರಲ್ಲ ಎಂದು ತೀಮಾನಿಸಿ, ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ತಮ್ಮ ಕೃಷಿ ಭೂಮಿ ಮತ್ತು ಮನೆಯನ್ನು ಯಾವ ಮಕ್ಕಳಿಗೂ ಕೊಡದೆ, 85 ವರ್ಷದ ನಾಥು ಸಿಂಗ್ ಅವರು ಉತ್ತರ ಪ್ರದೇಶದ ರಾಜ್ಯಪಾಲೆ ಶ್ರೀಮತಿ ಆನಂದಿ ಬೆನ್ ಪಟೇಲ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ, ಅವರ ಹೆಸರಿಗೆ ತಮ್ಮ ಕೋಟ್ಯಂತರ ರೂ ಮೌಲ್ಯದ ಸಂಪತ್ತನ್ನು ಹಸ್ತಾಂತರಿಸಿ ಆ ಆಸ್ತಿಯಿಂದ ಬರುವ ಹಣವನ್ನು ಬಳಸಿಕೊಂಡು ಸರಕಾರದ ವತಿಯಿಂದ ತಮ್ಮ ಊರಿನಲ್ಲಿ ಶಾಲೆಯನ್ನೋ ಇಲ್ಲವೇ ಆಸ್ಪತ್ರೆಯನ್ನೋ ನಿರ್ಮಾಣ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಬುಧಾನಾ ತಾಲ್ಲೂಕು ಉಪ ನೋಂದಾಣಾಧಿಕಾರಿಗಳಾದ ಶ್ರೀ ಪಂಕಜ್ ಜೈನ್ ಅವರು ತಿಳಿಸಿದ್ದಾರೆ.
ಕೇವಲ ಅಸ್ತಿಯಷ್ಟೇ ಅಲ್ಲದೇ, ತಾವು ಜೀವಂತವಿರುವಾಗಲೇ ತಮ್ಮನ್ನು ಬಂದು ನೋಡದ ಮಕ್ಕಳು ಇನ್ನು ಸತ್ತ ಮೇಲೆಯೂ ಸಹಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು ಷರತ್ತು ವಿಧಿಸಿರುವುದಲ್ಲದೇ, ತಮ್ಮ ಮೃತ ಶರೀರವನ್ನು ಯಾವುದಾದರೂ ವೈದ್ಯಕೀಯ ಕಾಲೇಜಿಗೆ ಸಂಶೋಧನಾ ಅಧ್ಯಯನಗಳಿಗೆ ಅನುಕೂಲವಾಗುವಂತೆ ದಾನ ಮಾಡಿ ಎಂದು ಅವರು ಸರ್ಕಾರಕ್ಕೆ ಒಪ್ಪಿಗೆ ಪತ್ರ ಬರೆದಿದ್ದಾರೆ ಎಂದು ಶ್ರೀ ನಾಥು ಸಿಂಗ್ ಅವರು ಸದ್ಯದಲ್ಲಿ ಇರುವ ವೃದ್ಧಾಶ್ರಮದ ಮುಖ್ಯಸ್ಥೆ ರೇಖಾ ಸಿಂಗ್ ತಿಳಿಸಿರುವುದು ನಿಜಕ್ಕೂ ದುಃಖವಾದ ಸಂಗತಿಯಾಗಿದೆ.
ಇನ್ನು ಸಣ್ಣ ವಯಸ್ಸಿನ ಮಕ್ಕಳ ಕೈಯ್ಯಲ್ಲಿ ಮೊಬೈಲ್ ಕೊಟ್ಟು ಆವರು ಏನು ಮಾಡುತ್ತಿದ್ದಾರೆ? ಎಂದು ಗಮನಿಸದೇ ಹೊದಲ್ಲಿ ಎಂತಹ ಅನಾಹುತಗಳು ನಡೆಯುತ್ತವೆ ಎನ್ನುವುರದ ಜ್ವಲಂತ ಉದಾಹರಣೆಯಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ 15 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ನಡೆಸಿರುವಂತಹ ಆಘಾತಕಾರಿ ಘಟನೆ ಸಾಕ್ಷಿಯಾಗಿದೆ. ಸ್ಥಳೀಯ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ಹೆಂಗಸೊಬ್ಬರ ಮಗಳಾದ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯೊಬ್ಬಳು ತನ್ನ ಮೊಬೈಲ್ ನಿಂದ ಸಾಮಾಜಿಕ ತಾಣವಾದ ಇನ್‌ಸ್ಟಾಗ್ರಾಂನಲ್ಲಿ ಯುವಕನೊಬ್ಬನೊಂದಿಗೆ ಸ್ನೇಹ ಬೆಳೆದಿದೆ. ನಂತರದ ದಿನಗಳಲ್ಲಿ ಈ ಸ್ನೇಹ ಪ್ರೀತಿಗೆ ತಿರುಗಿ ಒಬ್ಬರನ್ನೊಬ್ಬರು ಭೇಟಿಯಾಗಲು ನಿರ್ಧರಿಸಿದ್ದಾರೆ.
ಆಕೆಯನ್ನು ಭೇಟಿ ಮಾಡುವ ಸಲುವಾಗಿ ತನ್ನ ಸ್ನೇಹಿತನ ಮನೆಗೆ ಕರೆತಂದ ಆ ಯುವಕ ಆ ಬಾಲಕಿಗೆ ಬಲವಂತವಾಗಿ ಮದ್ಯ ಕುಡಿಸಿ, ಆಕೆಗೆ ಮತ್ತು ಬರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ರೀತಿಯಾಗಿ ಗೆಳೆಯನಿಂದ ಮೋಸಕೊಳ್ಳಗಾದ ವಿಷಯವನ್ನು ತನ್ನ ತಾಯಿಯಿಂದ ಮುಚ್ಚಿಟ್ಟ ಯುವತಿಯ ಬಾಳಿನಲ್ಲಿ ಬರಸಿಡಿಲು ಬಡಿದಂತೆ ಆಕೆ ಗರ್ಭಿಣಿಯಾಗಿದ್ದಾಳೆ. ಆಗಲೂ ಸಹಾ ತನ್ನ ತಾಯಿಗೆ ಹೇಳದೇ, ಪ್ರತಿ ತಿಂಗಳೂ ಎಂದಿನಂತೆ ಋತುಸ್ರಾವ ಆಗುತ್ತಿದೆ ಎಂದು ಬಿಂಬಿಸುವ ಸಲುವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ತಾಯಿಗೆ ಗೊತ್ತಾಗುವ ರೀತಿ ಬದಲಿಸುವ ನಾಟವಾಡಿದ್ದಾಳೆ ಆ ಬಾಲಕಿ. ಕೆಲ ತಿಂಗಳುಗಳ ನಂತರ ಬಾಲಕಿಯ ಹೊಟ್ಟೆ ಮುಂದೆ ಬಂದಿರುವುದನ್ನು ಗಮನಿಸಿದಾಗಲೂ ಅದು ಋತುಸ್ರಾವದ ಪರಿಣಾಮ ಎಂಬ ಸಬೂಬನ್ನು ಹೇಳಿ ತಾಯಿಯನ್ನು ನಂಬಿಸಿದ್ದಾಳೆ. ಹೆತ್ತ ಮಗಳ ಮೇಲಿನ ಮಮಕಾರದಿಂದ ತಾಯಿಯೂ ಮಗಳು ಹೇಳಿದ್ದೆಲ್ಲವನ್ನೂ ನಂಬಿ ಸುಮ್ಮನಾಗಿದ್ದಾಳೆ.
ಕಳೆದ ವಾರ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ಬಂದ ತಾಯಿಗೆ ಮಗಳು ಬಹಳ ಸುಸ್ತಾದ ರೀತಿಯಲ್ಲಿ ಕಂಡಿದ್ದಾಳೆ ಅದಲ್ಲದೇ ಮಗಳ ಕೊಠಡಿಯಲ್ಲಿ ರಕ್ತದ ಕಲೆಗಳನ್ನು ಕಂಡು ಗಾಭರಿಯಾಗಿ ತನ್ನ ಮಗಳನ್ನು ಜೋರು ಮಾಡಿ ಸತ್ಯವನ್ನು ಹೇಳು ಎಂದು ಗದರಿಸಿದಾಗ, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಹುಡುಗನೊಬ್ಬನ ಮೋಸದಿಂದಾಗಿ ತಾನು ಗರ್ಭಿಣಿಯಾದ ವಿಚಾರವನ್ನು ತಿಳಿಸಿದ್ದಲ್ಲದೇ, ಹೆರಿಎ ನೋವು ಬಂದಾಗ, ಯೂಟ್ಯೂಬ್ ನೋಡಿ ಕೊಂಡು ಸ್ವಯಂ ಹೆರಿಗೆ ಮಾಡಿಕೊಂಡಿದ್ದಲ್ಲದೇ, ನವಜಾತ ಶಿಶುವಿನ ಅಳುವ ಶಬ್ಧ ಅಕ್ಕ ಪಕ್ಕದವರಿಗೆ ಕೇಳಿಸಬಾರದೆಂದು ಆ ಮಗುವಿನ ಬಾಯಿಗೆ ಹತ್ತಿ ತುರುಕಿ ನಂತರ ಬೆಲ್ಟನ್ನು ಆ ಮಗುವಿನ ಕುತ್ತಿಗೆ ಕಟ್ಟಿ ಉಸಿರುಗಟ್ಟಿಸಿ ಮಗುವನ್ನು ಸಾಯಿಸಿ ಮಗುವಿನ ಶವವನ್ನು ಚೀಲದಲ್ಲಿ ಹಾಕಿ ಅದನ್ನು ಮನೆಯ ಟೆರೇಸ್ ಮೇಲೆ ಇಟ್ಟಿದ್ದ ಸಂಗತಿ ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ತನ್ನ ಮಗಳು ಯಾವುದೋ ಯುವಕನ ಜೊತೆ ಗಂಟೆಗಟ್ಟಲೆ ಚಾಟ್ ಮಾಡುತ್ತಿರುವ ವಿಷಯ ತಿಳಿದ ತಾಯಿ ಮಗಳ ಸ್ಮಾರ್ಟ್ ಫೋನ್ ಕಿತ್ತಿಟ್ಟುಕೊಂಡಾಗ, ಆ ಬಾಲಕಿಯು ತನ್ನ ತಾಯಿಯ ಫೋನ್ ಮೂಲಕ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡಿ ಅದರಲ್ಲಿ ಇದ್ದ ಬ್ರೌಸಿಂಗ್ ಹಿಸ್ಟರಿ, ಚಾಟ್ ಹಿಸ್ಟರಿ ಹಾಗೂ ಡೌನ್‌ಲೋನ್ ಮಾಹಿತಿಗಳನ್ನು ಡಿಲೀಟ್ ಮಾಡಿದ್ದ ಕಾರಣ, ಮಗಳ ಈ ರೀತಿಯ ಕೃತ್ಯಗಳು ತಾಯಿಗೆ ತಿಳಿಯದೇ ಹೋಗಿರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ.
ತನ್ನನ್ನು ನಂಬಿಸಿ ಮೋಸ ಮಾಡಿದ ಹುಡುಗನ ಪೂರ್ತಿ ಹೆಸರು, ವಿಳಾಸ, ಕಡೆಗೆ ಮೊಬೈಲ್ ನಂಬರ್ ಸಹಾ ತಿಳಿಯದೇ, ಕೇವಲ ಮೆಸೆಂಜರ್ ಮತ್ತು ವಾಯ್ಸ್ ಕಾಲ್ ಮೂಲಕ ಸಂಕರ್ಕ ಬೆಳಿಸಿದ್ದ ಕಾರಣ, ಆ ಆರೋಪಿಯನ್ನು ಪತ್ತೆ ಮಾಡುವುದು ಪೊಲೀಸರಿಗೆ ತಲೆ ನೋವಿನ ಸಂಗತಿಯಾಗಿದ್ದರೂ, ಇಂದಿನ ಆಧುನಿಕ ಯುಗದಲ್ಲಿ ಯಾವುದೂ ಸಹಾ ಅಸಾಧ್ಯ ಇಲ್ಲ ಎನ್ನಲು ಸಾಧ್ಯವಿಲ್ಲದ ಕಾರಣ, ಆರೋಪಿಯ ಪತ್ತೆಗೆ ಪೊಲೀಸರು ಹರಸಾಹಸ ಪಡೆಯುತ್ತಿರುವುದಲ್ಲದೇ, ಸೈಬರ್ ಕ್ರೈಂ ವಿಭಾಗದ ನೆರವಿನೊಂದಿಗೆ ಆರೋಪಿಯನ್ನು ಪತ್ತೆ ಹಚ್ಚಲು ಮುಂದಾಗಿರುವ ವಿಷಯ ತಿಳಿದು ಬಂದಿದೆ.
ಮೇಲಿನ ಎರಡು ಸತ್ಯ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಇಂದಿನ ಜನಾಂಗ ತಮ್ಮ ಹೆತ್ತ ತಂದೆ ತಾಯಿಯರನ್ನಾಗಲೀ ಇಲ್ಲವೇ ತಾವೇ ಜನ್ಮ ನೀಡಿದ ಮಕ್ಕಳ ಕುರಿತಾಗಿ ಸಮಯವನ್ನು ನೀಡದೇ ಇರುವುದು ತಿಳಿಯುತ್ತದೆ. ಹಿಂದಿನ ಕಾಲದಲ್ಲಿ ದುಡಿಯವ ಕೈಗಳು ಎರಡಾದರೆ ಕುಳಿತು ತಿನ್ನುವ ಕೈಗಳು ಹನ್ನೆರಡಾಗಿದ್ದರೂ ಎಲ್ಲವೂ ಚೆನ್ನಾಗಿತ್ತು. ಅವಿಭಕ್ತ ಕುಟುಂಬಗಳು ಇದ್ದು, ಮನೆಯಲ್ಲಿ ಎಷ್ಟೇ ಮಕ್ಕಳಿದ್ದರೂ ತಂದೆ ತಾಯಿಯರು ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾಗ, ಮನೆಯಲ್ಲಿರುವ ಹಿರಿಯರಾದ ಅಜ್ಜ, ಅಜ್ಜಿಯರು ಮನೆಯ ಸಣ್ಣ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಕಲಿಸಿಕೊಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವಂತೆ ಮಾಡುತ್ತಿದ್ದರು. ಅದೇ ರೀತಿ ಮಕ್ಕಳು ಬೆಳೆದು ದೊಡ್ಡವರಾದ ನಂತರ ತಮ್ಮ ಹಿರಿಯರು ಕಲಿಸಿಕೊಟ್ಟ ಸನ್ಮಾರ್ಗದಲ್ಲೇ ನಡೆಯುತ್ತಿದ್ದರು.
ಆದರೆ ಇಂದು ಬಹುತೇಕ ವಿಭಕ್ತ ಕುಟುಂಬಗಳಾಗಿ ಹೋಗಿವೆ. ಬ್ರಿಟೀಷರು ಭಾರತ ಬಿಟ್ಟು ಹೋದ ನಂತರವು ಜಾಗತೀಕ ಮಾರುಕಟ್ಟೆಯ ವಿಸ್ತರಣೆಯ ಅಂಗವಾಗಿ, ಶಿಕ್ಷಣ, ಉಡುಗೆ, ತೊಡುಗೆ, ಆಹಾರ ಪದ್ದತಿ, ಆಚಾರ ವಿಚಾರ ಹೀಗೆ ಎಲ್ಲಾ ರೀತಿಯಲ್ಲೂ ಪಾಶ್ಚಿಮಾತ್ಯ ದೇಶಗಳ ಪ್ರಭಾವದಿಂದಾಗಿ ನಮ್ಮಗಳ ಸ್ವಭಾವವೇ ಬದಲಾಗಿ ಹೋಗಿ ಎಲ್ಲವೂ ವಿಭಕ್ತಗಳಾಗಿ ಹೊಗಿವೆ. ಕಾಲಚಕ್ರ ಉರುಳುತ್ತಿದ್ದಂತೆಯೇ ಅದಕ್ಕಿಂತಲೂ ವೇಗವಾಗಿ ಇಂದಿನ ಯುವ ಜನಾಂಗ ಓಡುತ್ತಿದೆ. ಎಲ್ಲರಂತೆ ಐಶಾರಾಮ್ಯವಾದ ಜೀವನವನ್ನು ನಡೆಸುವ ಸಲುವಾಗಿ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಹೊರೆಗೆ ಹೋಗಿ ಸಂಪಾದನೆ ಮಾಡುವಂತಹ ಅನಿವಾರ್ಯ ಪದ್ಧತಿಯನ್ನು ರೂಢಿ ಮಾಡಿಕೊಂಡ ಪರಿಣಾಮ, ದಿನ ಪೂರ್ತಿ ದುಡಿದು ಬಂದ ಗಂಡ ಹೆಂಡತಿಯರಿಗೆ ವಯೋವೃದ್ಧ ತಂದೆ ತಾಯಿ ಮತ್ತು ಸಣ್ಣ ಮಕ್ಕಳ ಕುರಿತಾಗಿ ಹೆಚ್ಚಿನ ಗಮನ ನೀಡಲು ಆಗದ ಕಾರಣ, ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಎಂದು ಪೋಷಕರನ್ನು ವೃದ್ಧಾಶ್ರಮದಲ್ಲೂ, ಮಕ್ಕಳನ್ನೂ ಡೇ ಕೇರ್ ಗೆ ಕಳುಹಿಸಿದ ಪರಿಣಾಮವೇ ಈ ಎರಡೂ ಪ್ರಸಂಗಗಳಿಗೆ ಮೂಲ ಕಾರಣವಾಗಿದೆ ಎಂದರೂ ತಪ್ಪಾಗದು.
ಆಸೆಯೇ ದಃಖಕ್ಕೆ ಮೂಲ ಎಂದು ನಮ್ಮ ಹಿರಿಯರು ಹೇಳಿದ್ದರೂ, ಆದಕ್ಕೆ ತಲೆ ಕೆಡಸಿಕೊಳ್ಳದೇ, ಸಾಲ ಮಾಡಿಯಾದರೂ ತುಪ್ಪಾ ತಿನ್ನು ಎನ್ನುವಂತೆ ಅನಗತ್ಯವಾಗಿ ಮೋಜು ಮಸ್ತಿ, ಪ್ರವಾಸ ಗಳನ್ನು ಮಾಡುತ್ತಾ ಕಡೆಗೆ ಮಾದಿದ ಸಾಲವನ್ನು ತೀರಿಸಲಾಗದೇ ಖಿನ್ನತೆಗೆ ಹೋಗಿರುವ ಅನೇಕ ಪ್ರಸಂಗಗಳನ್ನು ನೋಡಿದ್ದೇವೆ. ಅದೇ ರೀತಿಯಲ್ಲೇ ವಿಪರೀತ ಹಣದ ಮೋಹಕ್ಕೆ ಸಣ್ಣ ವಯಸ್ಸಿನಲ್ಲಿ ಅತ್ಯಂತ ವೇಗವಾಗಿ ಕೋಟ್ಯಾಂತರ ರೂಪಾಯಿ ಸಂಬಳದ ಆಸೆಗಾಗಿ ಉನ್ನತ ಮಟ್ಟಕ್ಕೇರಿ ಅಲ್ಲಿನ ಒತ್ತಡ ತಡೆಯಲಾರದೇ ಸಣ್ಣ ವಯಸ್ಸಿಗೇ ನಾನಾ ರೀತಿಯ ಖಾಯಿಲೆಗಳಿಗೆ ತುತ್ತಾಗಿ ಸಣ್ಣ ವಯಸ್ಸಿಗೇ ಮರಣ ಹೊಂದಿರುವ ಉದಾಹರಣೆಯೂ ನೂರಾರಿವೆ. ಹಾಗಾಗಿ ಜೀವನಕ್ಕೆ ಎಷ್ಟು ಬೇಕೋ ಅಷ್ಟು ದುಡಿಯಬೇಕೇ ಹೋರತು. ದುಡಿಯುವುದಕ್ಕಾಗಿಯೇ ಜೀವಿಸಬಾರದು. Family First Everything Next.
ಕಾಲ ನಿಜಕ್ಕೂ ಕೆಟ್ಟಿಲ್ಲ. ಕೆಟ್ಟು ಹೋಗಿರುವವರು ನಾವು. ಅದು ಇನ್ನೂ ಹೆಚ್ಚಿಗೆ ಕೆಡುವ ಮುಂಚೆಯೇ ಸರಿ ಮಾಡಿಕೊಂಡಲ್ಲಿ ಹಿಂದಿನಂತೆಯೇ ನೆಮ್ಮದಿಯ ಜೀವನವನ್ನು ನಡೆಸಬಹುದಾಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ