ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿದ್ಯಾರಣ್ಯಪುರದ ಬಳಿ ಇರುವ ವಿಶ್ವಗುರು ಚಾರಿಟೆಬಲ್ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದಲೂ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಸಾಧಕಿಯರ ಸಾಧನೆಯನ್ನು ಗುರುತಿಸಿ ಅವರ ಸಾಧನೆಗಳು ಮತ್ತಷ್ಟು ಮಗದಷ್ಟು ಹೆಚ್ಚಾಗಲಿ ಎಂದು ಅವರಿಗೆ ಗೌರವ ಸಲ್ಲಿಸುತ್ತ ಬಹಳ ವಿಶಿಷ್ಠವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಈ ಬಾರಿ ಮಹಿಳಾದಿನಾರಣೆ ವಾರದ ಮಧ್ಯದಲ್ಲಿ ಬಂದಿದ್ದ ಕಾರಣ, ಎಲ್ಲರಿಗೂ ಅನುಕೂಲವಾಗಲಿ ಎಂದು 12.03.23 ಭಾನುವಾರ ದೊಡ್ಡಬೆಟ್ಟಹಳ್ಳಿಯ ವ್ಯಾಪ್ತಿಯಲ್ಲಿರುವ ಶ್ರೀ ಆನಂದ ಕುಟೀರ ಸೇವಾ ಟ್ರಸ್ಟ್ ಅವರು ನಡೆಸುತ್ತಿರುವ ಬಡ ಮಕ್ಕಳ ಆಶ್ರಮದಲ್ಲಿ ಮಹಿಳಾ ಸಾಧಕಿಯರನ್ನು ಮತ್ತು ಆನಂದ ಕುಟೀರದ ಸಂಸ್ಥಾಪಕರನ್ನು ಸನ್ಮಾನಿಸುವುದರ ಜೊತೆಗೆ ಅಲ್ಲಿನ ಮಕ್ಕಳಿಗೆ ಪುಸ್ತಕಗಳು ಮತ್ತು ಆಶ್ರಮಕ್ಕೆ ಅವಶ್ಯಕವಿದ್ದ ದಿನಸಿ ಪದಾರ್ಥಗಳನ್ನು ನೀಡುವ ಮೂಲಕ ಅಚರಿಸಿದ್ದು ನಿಜಕ್ಕೂ ಅದ್ಭುತವಾಗಿದ್ದು ಆ ಕಾರ್ಯಕ್ರಮದ ಝಲಕ್ ಇದೋ ನಿಮಗಾಗಿ.
ಕುಟುಂಬ ಪ್ರಭೋಧನ ಕರ್ನಾಟಕ ದಕ್ಷಿಣದ ವತಿಯಿಂದ ಪಾಲ್ಗುಣ ಶುಕ್ಲ ಪಂಚಮಿ ಅರ್ಥಾತ್ ಭಾನುವಾರ ಸಂಜೆ 4 ರಿಂದ ಅವರವರ ಮನೆಗಳಲ್ಲಿ ಭಜನೆಗಳನ್ನು ಮಾಡುವ ಸಂಕಲ್ಕವನ್ನು ತೊಟ್ಟಿತ್ತು. ಅದೇ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11 ರಿಂದ 12ರ ವರೆಗೆ ಯಲಹಂಕದ ಅನಂತಪುರದ ಧರ್ಮಜಾಗರಣದ ಕಾರ್ಯಕರ್ತರಾದ ಶ್ರೀ ಲೋಕೇಶ್ ಮತ್ತು ಕುಟುಂಬದ ಜೊತೆಯಲ್ಲಿ ಅವರ ಸಂಗಡಿಗರು ಅತ್ಯಂತ ಭಕ್ತಿ ಪರವಶರಾಗುವಂತೆ ಭಜನೆಗಳನ್ನು ಮಾಡುವ ಮೂಲಕ ಆರಂಭವಾದ ಕಾರ್ಯಕ್ರಮ ನಂತರ ಹೃಷಿಕೇಷದಲ್ಲಿ ವಿದ್ಯಾಭ್ಯಾಸ ಮುಗಿಸಿರುವಂತ ಆಚಾರ್ಯ ವಿಶ್ವಾಮಿತ್ರರಿಂದ ಆ ಆಶ್ರಮದಲ್ಲಿದ್ದ ಕೊರಗಜ್ಜನ ಪಾದುಕೆಗಳಿಗೆ ಭಕ್ತಿಯಿಂದ ವಂದಿಸುವ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಕ್ಶಕ್ಷತೆಯನ್ನು ವಹಿಸಿದ್ದ ಶ್ರೀಮತಿ ಮಣಿಲಾ ರೆಡ್ಡಿ (ಸ್ವದೇಶಿ ಜಾಗರಣ ಮಂಚ್ ಬೆಂಗಳೂರು ಉತ್ತರ ಭಾಗದ ಮಹಿಳಾ ಪ್ರಮುಖ್), ಶ್ರೀ ಆಚಾರ್ಯ ವಿಶ್ವಾಮಿತ್ರರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಸಮಾಜ ಸೇವಕರಾದ ಶ್ರೀ ಪಿಳ್ಳಪ್ಪನವರು ವೇದಿಕೆಯನ್ನು ಅಲಂಕರಿಸಿದ ನಂತರ ಕುಮಾರಿ ಶಯನಾ ತನ್ನ ಮುದ್ದು ಮುದ್ದಾದ ಕಂಠಸಿರಿಯಿಂದ ವಿಘ್ನ ವಿನಾಶಕ ವಿನಾಯಕ ಮತ್ತು ವಿದ್ಯ ಅದಿದೇವತೆ ಸರಸ್ವತಿಯ ಕುರಿತಾಗಿ ಪ್ರಾರ್ಥನೆ ಸಲ್ಲಿಸಿದ ನಂತರ ಒಂದೊಂದೇ ಸಾಧಕಿಯನ್ನು ವೇದಿಕೆಯ ಮೇಲೆ ಕರೆದು ಅವರ ಸಾಧನೆಗಳನ್ನು ವಿವರಿಸುತ್ತಾ ಎಲ್ಲರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಸಾಧಕಿಯರಲ್ಲಿ ಅತ್ಯಂತ ಕಿರಿಯ ವಯಸ್ಸಿನವಳಾದ ಕುಮಾರಿ ಶ್ರೇಯಾ ಶ್ರೀರಂಗ ಅವರಿಗೆ ಮೊದಲು ಸನ್ಮಾನಿಸಲಾಯಿತು.
ಕು. ಶ್ರೇಯ ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ತನ್ನ 3ನೇ ವರ್ಷದಿಂದ ಹಾಡಲು ಪ್ರಾರಂಭಿಸಿ ಶ್ರೀಮತಿ ಲಕ್ಷ್ಮಿ ವರುಣ್ ಅಡಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಶ್ರೀಮತಿ ಶಶಿಕಲಾ ಭಟ್ ಅವರ ನೇತೃತ್ವದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜೊತೆಗೆ ಪ್ರಸಿದ್ಧ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್ ಮತ್ತು ಶ್ರೀ ವಿಷ್ಣು ರಾಮನ್ ಅವರಲ್ಲಿ ಲಘು ಸಂಗೀತವನ್ನು ಅಭ್ಯಾಸ ಮಾಡಿ ಪ್ರಸ್ತುತ ಮೊದಲನೇ ವರ್ಷದ B.E ಕಂಪ್ಯೂಟರ್ ಸೈನ್ಸ್ ಅಭ್ಯಾಸ ಮಾಡುತ್ತಿದ್ದಾಳೆ.
ಸಣ್ಣ ವಯಸ್ಸಿನಲ್ಲೇ ಅನೇಕ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಹೆಗ್ಗಳಿಕೆ ಶ್ರೇಯಾಳದ್ದಾಗಿದೆ.
2015 ರಲ್ಲಿ ETV ಎದೆ ತುಂಬಿ ಹಾಡುವೆನು ಕ್ವಾರ್ಟರ್ ಫೈನಲಿಸ್ಟ್
2015 ರಲ್ಲಿ ಜೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 10, ಟಾಪ್ 10 ಸ್ಪರ್ಧಿ.
2016ರಲ್ಲಿ ನೀತಿ ಮೋಹನ್, ಶಾನ್ ಮತ್ತು ಶೇಖರ್ ಅವರೊಂದಿಗೆ ಹಿಂದಿ ರಿಯಾಲಿಟಿ ಶೋ & ಟಿವಿ ದಿ ವಾಯ್ಸ್ ಇಂಡಿಯಾ ಕಿಡ್ಸ್ ಅಲ್ಲದೇ, ಕನ್ನಡ ಚಲನಚಿತ್ರ ಅಜ್ಜಾದಲ್ಲಿ ಒಂದು ಹಾಡಿಗೆ ಹಿನ್ನೆಲೆ ಗಾಯನವನ್ನೂ ಸಹಾ ಮಾಡಿದ್ದಾಳೆ. ಅದಲ್ಲದೇ, ಕನ್ನಡ ಧಾರಾವಾಹಿ ‘ತ್ರಿವೇಣಿ ಸಂಗಮ’ದ ಶೀರ್ಷಿಕೆ ಹಾಡನ್ನು ಸಹಾ ಹಾಡಿರುವುದಲ್ಲದೇ, ವಿವಿಧ ಆಲ್ಬಂಗಳು, ಕಿರುಚಿತ್ರಗಳು, ಜಾಹೀರಾತು – ಜಿಂಗಲ್ಸ್ ಮುಂತಾದ ವಿವಿಧ ಯೋಜನೆಗಳಲ್ಲಿ ಭಾಗವಾಗಿದ್ದಾಳೆ, ಇದಲ್ಲದೇ ಅನೇಕ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಂಗೀತ ಕಚೇರಿಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದು ನಾಡಿನ ಪ್ರಖ್ಯಾತ ಹಿನ್ನಲೆ ಗಾಯಕಿಯಾಗುವ ಎಲ್ಲಾ ಪ್ರಭುದ್ಧತೆಯನ್ನೂ ಹೊಂದಿದ್ದಾಳೆ.
ಸನ್ಮಾನದ ನಂತರ ನೆರೆದಿದ್ದವರ ಒತ್ತಾಯದ ಮೇರೆಗೆ ಅತ್ಯಂತ ಸುಶ್ರಾವ್ಯವಾಗಿ ಕಲಿಯುಗದಲಿ ಹರಿ ನಾಮವ ನೆನೆದರೆ ಕುಲ ಕೋಟಿಗಳು ಉದ್ದರಿಸುವವೋ ರಂಗಾ ಹಾಡಿನ ಚರಣವನ್ನು ಹಾಡುವ ಮೂಲಕ ದೈವದತ್ತವಾದ ತನ್ನ ಅದ್ಭುತವಾದ ಕಂಠ ಸಿರಿಯನ್ನು ನೆರೆದಿದ್ದವರಿಗೆ ಪರಿಚಯಿಸಿ ಎಲ್ಲರ ಕರತಾಡನವನ್ನು ಗಿಟ್ಟಿಸಿಕೊಳ್ಳುವುದರಲ್ಲಿ ಸಫಲರಾದಳು.
ಶ್ರೀಮತಿ ಜಯಶ್ರೀ ಸುನಿಲ್
ನೈಋತ್ಯ ರೈಲ್ವೆಯ ಸರಕು ಸಾಗಾಣಿಕಾ ವಿಭಾಗದಲ್ಲಿ ಮುಖ್ಯ ನಿಯಂತ್ರಕನಾಗಿ ಅತ್ಯಂತ ಜವಾಬ್ಧಾರಿಯುತ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಮೊದಲ ಮಹಿಳಾ ನಿಯಂತ್ರಕೆ ಎನ್ನುವ ಹೆಗ್ಗಳಿಗೆ ಶ್ರೀಮತಿ ಜಯಶ್ರೀ ಸುನೀಲ್ ಅವರದ್ದು. ಮೂಲತಃ ಕೇರಳದವರಾದರೂ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅಪ್ಪಟ ಕನ್ನಡತಿ. ಬಾಲ್ಯದ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿಯೇ ಮುಗಿಸಿದ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಿಂದ ತಮ್ಮ ಸ್ನಾತಕೋತ್ತರ ಪದವಿ ಮತ್ತು ಅಲ್.ಫಾರೂಕ್ ಕಾಲೇಜಿನಿಂದ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಡಿಪ್ಲೊಮ ಮುಗಿಸಿ ರೈಲ್ವೇ ಇಲಾಖೆಯನ್ನು ಸೇರಿದ ನಂತರ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಸುನೀಲ್ ಕುಮಾರ್ ಅವರನ್ನು ಮದುವೆಯಾಗಿ ಸದ್ಯ ಪದವಿಯನ್ನು ಮುಗಿಸಿ ಹೆಚ್ಚಿನ ವ್ಯಾಸಂಗವನ್ನು ಮಾಡುತ್ತಿರುವ ಅಭಿಷೇಕ್ ಸುನಿಲ್ ಎಂಬುವರ ತಾಯಿಯಾಗಿದ್ದಾರೆ.
ಅಂತಹ ಜವಾಬ್ಧಾರಿಯುತವಾದ, ಕಠಿಣವಾದ ಮತ್ತು ಕ್ಷಣ ಕ್ಷಣಕ್ಕೂ ಅಯಾಯಾ ಸಂದರ್ಭಕ್ಕೆ ಅನುಗುಣವಾಗಿ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳ ಬೇಕಾದಂತಹ ಸ್ಥಾನದಲ್ಲಿ ಕೆಲಸ ಮಾಡಲು ಬಹಳವಾದ ಶಕ್ತಿ ಮತ್ತು ತಾಳ್ಯೆಯ ಅವಶ್ಯಕತೆ ಎಲ್ಲವೂ ತನ್ನ ತಾಯಿಯವರಿಂದ ಪಡೆದಂತಹ ಬಳುವಳಿ ಎಂದು ತಮ್ಮ ತಾಯಿಯವರನ್ನು ಹೃತ್ಪೂರ್ವಕವಾಗಿ ನೆನಸಿಕೊಳ್ಳುತ್ತಾರೆ. ಇಂತಹ ಕೆಲಸವನ್ನು ಗಂಡಸರುಗಳೇ ನಿಭಾಯಿಸಲು ಪರದಾಡುವಾಗ, ಪ್ರವಾಹದ ವಿರುದ್ಧ ಈಜುವುದರಲ್ಲೇ ಮಜಾ ಎಂದು ಭಾವಿಸಿರುವ ಜಯಶ್ರೀ ಅವರು ರೈಲ್ವೇ ಇಲಾಖೆಯ ಮುಖ್ಯ ಆದಾಯಕರ ಸೇವೆಯಾದ ಸರಕು ಸಾಗಣೆ ವಿಭಾಗದಲ್ಲಿ ಮುಖ್ಯ ನಿಯಂತ್ರಕನಾಗಿ ಸರಕುಗಳ ದಟ್ಟಣೆಗಳ ವಿವಾರಣೆಯ ಕುರಿತಾದ ಬೆಂಗಳೂರು ವಿಭಾಗದ ಯೋಜನೆಯಲ್ಲಿ ಪ್ರಮುಖ ಭಾಗವಾಗಿದ್ದು, ಇಂತಹ ತುಂಬಾ ಸವಾಲಿನ ಕೆಲಸಕ್ಕೆ ಹೆಚ್ಚು ಹೆಚ್ಚು ಮಹಿಳೆಯರು ಬರಬೇಕು ಎಂದು ಆಶಿಸುತ್ತಾರೆ.
ಶ್ರೀಮತಿ ಆಶಾರಾಣಿ ಎ
ತಮ್ಮ M com ಪದವಿಯನ್ನು ಮುಗಿಸಿದ ನಂತರ ತರಬೇತಿ ಮತ್ತು ಬೋಧನೆ ಯಲ್ಲಿ Pgdpm+ ಪಡೆದು ಶ್ರೀ ಡಿ ಕೆ ಸೋಮನಾಥ್ ಅವರೊಂದಿಗೆ ವಿವಾಹವಾದ ನಂತರರ ಕರ್ನಾಟಕ ಸರ್ಕಾರದ ಅತಿಥಿ ಶಿಕ್ಷಕರಿಯಾಗಿ ನನ್ನ ವೃತ್ತಿ ಬೋಧನೆ ಮಾಡುವುದರ ಜೊತೆಗೆ ಅಡುಗೆ ಮತ್ತು ಹಾಡುವುದುನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ.
ಕಳೆದ 15 ವರ್ಷದಿಂದ ಉಳ್ಳವರ ಬಳಿ ಅತ್ಯಂತ ಕಡಿಮೆ ಫೀ ತೆಗೆದುಕೊಂಡು ಪಾಠ ಮಾಡುತ್ತಿದ್ದರೆ ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಬಡ ಮಕ್ಕಳಿಗೆ ಉಚಿತವಾಗಿ ಮನೆ ಪಾಠವನ್ನು ಕೊಡುತ್ತಿರುವುದು ಅವರ ಹೆಗ್ಗಳಿಕೆಯಾಗಿದೆ.
ಇದರ ಜೊತೆ ಜೊತೆಯಲ್ಲೇ ಕನ್ನಡದ ಬಹುತೇಕ ಟಿವಿ ಚಾನೆಲ್‌ಗಳಲ್ಲಿ ಸುಮಾರು 120ಕ್ಕೂ ಹೆಚ್ಚಿನ ಅಡುಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಪಾಕ ಪ್ರವೀಣೆಯಷ್ಟೇ ಅಲ್ಲದೇ ಆಶಾರಾಣಿಯವರು ಅಡಿಗೆ ರಾಣಿ ಎಂದು 3 ಬಾರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶ್ರೀಮತಿ ಜ್ಯೋತಿ ರೈ
ಮೂಲತಃ ಕರಾವಳಿಯ ಮಂಗಳೂರಿನವರಾದ ಶ್ರೀಮತಿ ಜ್ಯೋತಿ ರೈ ಅವರು ಮಂಗಳೂರಿನಲ್ಲಿಯೇ ತಮ್ಮ ಬಿಬಿಎಂ ಮುಗಿಸಿದ ನಂತರ ಸನಾತನ ಯೋಗದತ್ತ ಹರಿಸಿದರು ತಮ್ಮ ಚಿತ್ತ. ವಿವಾಹವಾಗಿ ಬೆಂಗಳೂರಿಗೆ ಬಂದ ನಂತರ ನಾಗರಭಾವಿಯಲ್ಲಿ ಯೋಗಕ್ಷೇಮ ಎಂಬ ವಿನೂತನವಾದ ಯೋಗ ಕೇಂದ್ರದ ಮೂಲಕ ಸಾವಿರಾರು ಯೋಗಪಟುಗಳನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿರುವ ಶ್ರೀ ವಿರೂಪಾಕ್ಷ ಬೆಳವಾಡಿಯವರ ಬಳಿ ಯೋಗಾಭ್ಯಾಸ ಮಾಡಿದ ನಂತರ ಯೋಗವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂದಿದ್ದಾರೆ.
ಪ್ರಸ್ತುತ ವಿದ್ಯಾರಣ್ಯಪುರದ ರಾಮಚಂದ್ರ ಪುರದಲ್ಲಿ ಓಂ ಸಾಯಿ ಯೋಗ ಮಂದಿರ ಎಂಬ ತಮ್ಮ ಆದ ಯೋಗಕೇಂದ್ರವನ್ನು ಆರಂಭಿಸಿ ಅನೇಕರಿಗೆ ಯೊಗಭ್ಯಾಸವನ್ನು ಮಾಡಿಸುತ್ತಿದ್ದಾರೆ
ಶ್ರೀಮತಿ ಆಶಾ ರವಿಕಿರಣ್
ಆಡು ಮುಟ್ಟದ ಸೊಪ್ಪಿಲ್ಲಾ ಯೋಗದಲ್ಲಿ ಶ್ರೀಮತಿ. ಆಶಾ ರವಿಕಿರಣ್ ಮಾಡದ ಸಾಧನೆಯಿಲ್ಲಾ ಎಂದರೂ ಅತಿಶಯೋಕ್ತಿಯಾಗದು. ಬೆಂಗಳೂರಿನ ಮಲ್ಲೇಶ್ವರ ಮತ್ತು ಶೇಷಾದ್ರಿಪುರದ ಆಸುಪಾಸಿನಲ್ಲೇ ಹುಟ್ಟಿ ಬೆಳೆದ ಶ್ರೀಮತಿ ಆಶಾರವರು, ಪುರಾತನ ಕಾಲದ ಬಗ್ಗೆ ಅಪಾರ ಒಲವಿನಿಂದಾಗಿ ಯೋಗದ ವಿಜ್ಞಾನ, ಯೋಗದ ಬೆಳಕು ಮತ್ತು ಪರಿಮಳವನ್ನು ಹರಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ತಮ್ಮದೇ ಆದ ಆಶಾ ಯೋಗ ಸೆಂಟರ್ ಆರಂಭಿಸಿ ಕಳೆದ ಒಂದು ದಶಕಗಳಿಂದಲೂ ಸಾವಿರಾರು ಜನರಿಗೆ ಯೋಗದ ತರಭೇತಿಯನ್ನು ನೀಡಿರುವುದು ಅವರ ಹೆಗ್ಗಳಿಕೆಯಾಗಿದೆ.
ಫಲಿತಾಂಶ ಆಧಾರಿತ ಮತ್ತು ವಿದ್ಯಾರ್ಥಿಗಳ ಅವಶ್ಯಕತೆಗೆ ಅನುಗುಣವಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ತರಭೇತಿಯನ್ನು ನೀಡುವುದರಲ್ಲಿ ಆಶಾರವರು ಎತ್ತಿದ ಕೈ. ಯೋಗದಲ್ಲಿ ಅವರ ಸಾಧನೆಯನ್ನು ಗುರುತಿಸಿ ಇದುವರೆಗೂ ವಿವಿಧ ಸಂಘ ಸಂಸ್ಥೆಗಳಿಂದ 100ಕ್ಕೂ ಅಧಿಕ ಪ್ರಶಂಸಾ ಪತ್ರಗಳನ್ನು ಪಡೆದಿರುವುದು ಅವರ ಯೋಗಸಾಧನೆಯನ್ನು ತೋರಿಸುತ್ತದೆ.
ಶ್ರೀಮತಿ ಆಶಾ ರವಿಕಿರಣ್ ಎಸ್ ವ್ಯಾಸ ಯೋಗ ವಿಶ್ವವಿದ್ಯಾನಿಲಯದಿಂದ ಯೋಗದಲ್ಲಿ ಎಂಎಸ್ಸಿ ಮುಗಿಸಿದ ನಂತರ ಪ್ರಸ್ತುತ ಮೈಸೂರಿನಲ್ಲಿ ಯೋಗದಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾರೆ.
ಹೀಗೆ ವಿವಿಧ ಶ್ರೇಣಿಗಳಲ್ಲಿ ಸಾಧನೆ ಮಾಡಿದ ಐದು ಮಹಿಳಾ ಸಾಧಕಿಯರನ್ನು ಸನ್ಮಾನಿಸಿದ ನಂತರ ಅಂದಿನ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದ್ದಲ್ಲದೇ ಸಮಾಜದಲ್ಲಿ ನಿರ್ಗತಿಕರಿಗೆ ಮತ್ತು ಆನಾಧರಿಗೆ ಇಂದಿನ ಕಾಲದಲ್ಲೂ ಉಚಿತವಾಗಿ ಆಶ್ರಯ ಮತ್ತು ಶಿಕ್ಷಣವನ್ನು ನೀಡುತ್ತಿರುವ ಶ್ರೀ ಆನಂದ ಕುಟೀರದ ಸಂಸ್ಥಾಪಕರಾದ ಶ್ರೀ ಸತ್ಯಾನಂದ ಮತ್ತು ಮತ್ತು ಅವರ ಶ್ರೀಮತಿಯವರ ಸೇವೆಯನ್ನು ಗುರುತಿಸಿ ಅವರಿಗೆ ವಿಶ್ವಗುರು ಚಾರಿಟೆಬಲ್ ವತಿಯಿಂದ ಹೃತ್ಪೂರ್ವವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಲ್ಲದೇ ಆಶ್ರಮದ ಮಕ್ಕಳಿಗೆ ಈಗಾಗಲೇ ತಿಳಿಸಿದಂತೆ ಪುಸ್ತಕಗಳು ಮತ್ತು ಅಗತ್ಯ ವಸ್ತುಗಳನ್ನು ನೀಡಿದರೆ, ಸಮಾಜ ಸೇವಕರಾದ ಪಿಳ್ಳಪ್ಪನವರೂ ಸಹಾ 50ಕೆಜಿ ಅಕ್ಕಿಯನ್ನು ಆಶ್ರಮಕ್ಕೆ ದಾನವನ್ನಾಗಿ ನೀಡಿದರು. ಇದರಿಂದ ಪ್ರೇರಣೆಗೊಂಡ ಅನೇಕರು ಸ್ಥಳದಲ್ಲೇ ತಮ್ಮ ಕೈಲಾದ ಸಹಾಯವನ್ನು ಆಶ್ರಮಕ್ಕೆ ಮಾಡಿದ್ದಲ್ಲದೇ ಅಶ್ರಮಕ್ಕೆ ತಮ್ಮ ಕೈಲಾಗುವ ಸೇವೆಯನ್ನು ಮಾಡುವುದಾಗಿ ವಾಗ್ದಾನ ಮಾಡಿದ್ದದ್ದು ಕಾರ್ಯಕ್ರಮದ ಸಾರ್ಥಕತೆಯನ್ನು ಎತ್ತಿ ಹಿಡಿಯಿತು ಎಂದರೂ ಅತಿಶಯವಾಗದು.
ವಿಶ್ವಗುರು ಚಾರಿಟೆಬಲ್ ಟಸ್ಟ್ ನ ಧ್ಯೇಯೋದ್ದೇಶಗಳು ಮತ್ತು ಅದರ ಇದುವರೆಗಿನ ಸಾಧನೆಗಳ ಪರಿಚಯವನ್ನು ಟ್ರಸ್ಟಿನ ಸಂಸ್ಥಾಪಕ ಆಧ್ಯಕ್ಷರಾದ ಶ್ರೀ ಧನುಂಜಯ್ ಮರ್ದಂಬಿಲ್ ಆವರು ಮಾಡಿಕೊಟ್ಟಿದ್ದಲ್ಲದೇ, ಈ ಆಶ್ರಮದಲ್ಲಿ ಸುಮಾರು 8 ಜನ ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿದ್ದಲ್ಲದೇ ಅವರಿಗೆ ವಿದ್ಯಾಭ್ಯಾಸವನ್ನೂ ಸಹಾ ಮಾಡಿಸುತ್ತಿರುವ ಶ್ರೀ ಸತ್ಯಾನಂದ (91 99642 24126) ಮತ್ತು ಮತ್ತು ಅವರ ಶ್ರೀಮತಿಯವರ ಸಾಧನೆಗೆ ಮೆಚ್ಚುಗೆ ಸೂಚಿಸಿ, ತಮ್ಮ ಮನೆಯಲ್ಲಿ ಯಾವುದಾದರೂ ಶುಭ ಕಾರ್ಯಕ್ರಮ ಇಲ್ಲವೇ ಹುಟ್ಟು ಹಬ್ಬವನ್ನು ಇದೇ ಸ್ಥಳದಲ್ಲಿ ಬಂದು ಈ ಮಕ್ಕಳ ಸಮ್ಮುಖದಲ್ಲಿ ಮಾಡಿದರೆ ಮಕ್ಕಳಿಗೂ ಉತ್ಸಾಹ ಬಹುವುದಲ್ಲದೇ ಸಾರ್ಥಕತೆ ದೊರೆಯುತ್ತದೆ ಎಂದು ಹೇಳುವ ಮೂಲಕ ಅರ್ಥಪೂರ್ಣವಾಗಿ ೨೦೨೩ರ ಮಹಿಳಾ ದಿನಾಚರಣೆಯನ್ನು ಸಮಾಪ್ತಿಗೊಳಿಸಿದರು.
ಕಾರ್ಯಕ್ರಮವನ್ನು ಎಂದಿನಂತೆ ಸರಳ ಸುಂದರವಾಗಿ ತಮ್ಮ ಸ್ಪುಟವಾದ ಅಚ್ಚಕನ್ನಡಲ್ಲಿ ನಿರೂಪಣೆ ಮಾಡುವ ಜೊತೆಗೆ, ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿ ಶಾಂತಿ ಮಂತ್ರವನ್ನು ಪಠಿಸಿ ತಮ್ಮ ವಿನೂತನ ಶೈಲಿಯ ಸುದೀರ್ಘವಾದ ಬೋಲೋ… ಭಾರತ್ ಮಾತಾ ಕೀ…. ಜೈ ಎಂದು ಎಲ್ಲರ ಮೂಲಕ ಹೇಳಿಸಿದ ಅಂಕಣಕಾರ ಶ್ರೀಕಂಠ ಬಾಳಗಂಚಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದ ಮುಗಿದ ನಂತರ ಕಾರ್ಯಕ್ರಮಕ್ಕೆ ಬಂದಿದ್ದವರೆಲ್ಲರೂ ಆಶ್ರಮದ ಮಕ್ಕಳೊಂದಿಗೆ ಕುಳಿತು ಒಟ್ಟಿಗೆ ಸುಗ್ರಾಸವಾದ ಭೋಜನವನ್ನು ಸವಿಯುವ ಮೂಲಕ ಆ ಮಕ್ಕಳಿಗೆ ತಾವು ಅನಾಥ ಮಕ್ಕಳಲ್ಲ. ತಮ್ಮ ಯೋಗಕ್ಷೇಮವನ್ನು ನೋಡಿಕೊಳ್ಳಲು ಇಂತಹ ನೂರಾರು ಜನರು ಇದ್ದಾರೆ ಎಂಬ ನಂಬಿಕೆ ಬರುವಂತಾದದ್ದು ಬಹಳ ಮೆಚ್ಚುಗೆಯ ವಿಷಯವಾಗಿತ್ತು.
ಎಲ್ಲಾ ಅಚರಣೆಗಳು ತೋರ್ಪಡಿಕೆಗಾಗಿ ಇರದೇ ಈ ರೀತಿ ಅವಶ್ಯಕತೆ ಇರುವವರಿಗೆ ಅನುಕೂಲವಾಗುವಂತಾದಲ್ಲಿ ಕಾರ್ಯಕ್ರಮಕ್ಕೂ ಒಂದು ಸಾರ್ಥಕತೆ ದೊರೆಯುವುದಲ್ಲದೇ ಅರ್ಥಪೂರ್ಣವಾಗಿ ಇರುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ