ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ ಎಂದೇ ನಾವೆಲ್ಲರೂ ಶ್ರೀ ಶಾರದಾದೇವಿಯನ್ನು ಸ್ತುತಿಸುತ್ತೇವೆ. ಕಾಶ್ಮೀರೀ ಲಿಪಿಯ ಹೆಸರೇ ಶಾರದಾ ಎಂದಾಗಿದ್ದು, ಪೂಜ್ಯ ಜಗದ್ಗುರುಗಳಾದ ಆದಿ ಶಂಕರಾಚಾರ್ಯರು ಇದೇ ಶಾರಾದೇವಿಯ ದೇವಾಲಯಕ್ಕೆ ಹೋಗಿ ಅಲ್ಲಿನ ಸರ್ವಜ್ಞ ಪೀಠದ ದಕ್ಷಿಣ ಭಾಗದ ಬಾಗಿಲನ್ನು ಪ್ರಪ್ರಥಮ ಬಾರಿಗೆ ತೆರಿಸಿ, ಅಲ್ಲಿದ್ದ ಘನ ಪಂಡಿತರನ್ನೆಲ್ಲಾ ವಾದದಲ್ಲಿ ಮಣಿಸಿ ಸರ್ವಜ್ಞ ಆ ಪೀಠವನ್ನು ಅಲಂಕರಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
1947ರಲ್ಲಿ ದೇಶ ವಿಭಜನೆಯಾದಾಗ ಈ ಪುರಾತನ ಪವಿತ್ರ ಶಾರದಾ ಮಂದಿರವು ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿ ಹೋದ ಕಾರಣ, ಕೆಲ ದುಷ್ಕರ್ಮಿಗಳು ಈ ದೇವಾಲಯವನ್ನು ಸುಟ್ಟು ಕೆಡವಿ ಹಾಳು ಮಾಡಿದರು. 1948ರಲ್ಲಿ ಯೋಗಿ ಸ್ವಾಮಿ ನಂದಲಾಲ್ ಜೀ ಅವರು ನಡೆಸಿದ ಶಾರದಾ ಯಾತ್ರೆಯೇ ಕಡೆಯದಾಗಿ, ನಂತರದ ದಿನಗಳಲ್ಲಿ ಆ ದೇವಾಲಯವನ್ನು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಶಿಥಿಲಾವಸ್ಥೆಯನ್ನು ತಲುಪಿತ್ತು.
ಈ ಶಾರದಾ ಯಾತ್ರೆಯನ್ನು ಮತ್ತೆ ಆರಂಭಿಸಬೇಕೆಂದು ಅನೇಕ ಕಾಶ್ಮೀರೀ ಪಂಡಿತರು ಮೇಲಿಂದ ಮೇಲೆ ನಡೆಸುತ್ತಿದ್ದ ಹೋರಾಟದ ಫಲವಾಗಿ ಈಗ ಪಾಕ್ ಆಕ್ರಮಿತ ಕಾಶ್ಮೀರದಿಂದ ಕೂಗಳತೆ ದೂರದಲ್ಲೇ ಇರುವ, ತೀತ್ವಾಲ್ ಎಂಬ ಸ್ಥಳದಲ್ಲೇ ಹಿಂದಿದ್ದ ಶಾರದಾ ಮಂದಿರದ ತದ್ರೂಪಿನಂತೆಯೇ ಭವ್ಯವಾದ ಮಂದಿರವನ್ನು ನಿರ್ಮಾಣ ಮಾಡಲಾಗಿದೆ. ಈ ನೂತನ ದೇವಾಲಯದ ವಾಸ್ತು ಶಿಲ್ಪವು, ಆ ಪುರಾತನ ಶಾರದಾ ಮಂದಿರದ ಸರ್ವಜ್ಞ ಪೀಠದ ಮಾದರಿಯಲ್ಲೇ ಇದ್ದು ಪ್ರಸ್ತುತ ಇಲ್ಲಿ ಪ್ರತಿಷ್ಟಾಪನೆ ಆಗಿರುವ ಪಂಚಲೋಹದ ವಿಗ್ರಹ 3 ಅಡಿ ಎತ್ತರ, 2 ಅಡಿ ಅಗಲವಿದ್ದು, ಬಲ ಭಾಗದ ಒಂದು ಕೈಯಲ್ಲಿ ಗಿಳಿ ಮತ್ತೊಂದರಲ್ಲಿ ಅಭಯಹಸ್ತ ಸಹಿತ ಎಡಗೈಯಲ್ಲಿ ಸ್ಫಟಿಕ ಮಾಲೆ ಹಾಗೂ ಪುಸ್ತಕ ಹಿಡಿದುಕೊಂಡಿರುವ ತಾಯಿ ಶಾರದಾ ಮಾತೆಯ ಅದ್ಭುತವಾದ ವಿಗ್ರಹವನ್ನು ನಮ್ಮ ಕರ್ನಾಟಕದ ಹೆಮ್ಮೆಯ ಶೃಂಗೇರಿ ಮಠದಿಂದ ಕಳುಹಿಸಲಾಗಿದೆ. ಶ್ರೀ ಶಾರದಾ ದೇವಿಯ ವಿಗ್ರಹದ ಪ್ರಾಣ ಪತಿಷ್ಠಾಪನೆ ಮತ್ತು ದೇವಾಲಯದ ಉದ್ಘಾಟನೆಯ ಜೊತೆಗೆ ನಾನಾ ವಿಧದ ಧಾರ್ಮಿಕ ಕಾರ್ಯಕ್ರಮಗಳು ಇದೇ 2023 ಮಾರ್ಚ್ 22 ರಿಂದ 24ರ ವರೆಗೆ ಹಮ್ಮಿಕೊಳ್ಳಲಾಗಿದೆ. ದೇವಾಲಯದ ಉದ್ಘಾಟನೆಗಾಗಿ ಕರ್ನಾಟಕದಿಂದ ಹೋಗಿರುವ ಕೆಲವು ಭಕ್ತಾದಿಗಳು ಸ್ಥಳೀಯರೊಂದಿಗೆ ಸೇರಿಕೊಂಡು ಇಡೀ ದೇವಾಲಯವನ್ನು ಸುಂದರವಾಗಿ ಅಲಂಕರಿಸಿದ್ದದ್ದು ಎಲ್ಲರೆ ಮೆಚ್ಚುಗೆಗೆ ಪಾತ್ರವಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಕರ್ನಾಹ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಕಟ್ಟಲಾಗಿರುವ ಈ ಮಾತಾ ಶಾರದಾ ದೇವಿ ದೇವಸ್ಥಾನವನ್ನು ಬುಧವಾರ ವರ್ಚುವಲ್ ಮೂಲಕ ಉದ್ಘಾಟನೆ ಮಾಡಿದರು. ಒಂದು ಕಾಲದಲ್ಲಿ ಈ ಶಾರದಾ ಪೀಠವನ್ನು ಭಾರತ ಉಪಖಂಡದಲ್ಲಿ ಶಿಕ್ಷಣದ ಕೇಂದ್ರವೆಂದು ಪರಿಗಣಿಸಲಾಗಿತ್ತು. ಈಗ ಕರ್ತಾರ್‌ಪುರ ಕಾರಿಡಾರ್ ಮಾದರಿಯಲ್ಲಿ ಎಲ್‌ಒಸಿಯಲ್ಲಿ ಶಾರದಾ ಪೀಠವನ್ನು ತೆರೆಯುವ ಮೂಲಕ ಕಾಶ್ಮೀರಿ ಪಂಡಿತರ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದ ಕೇಂದ್ರ ಗೃಹ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ಮತ್ತು ಅಲ್ಲಿನ ಕಣಿವೆ ಮತ್ತು ಜಮ್ಮುವಿನಲ್ಲಿ ತನ್ನ ಹಳೆಯ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಗಂಗಾ-ಜಮುನಾ ತೆಹಜೀಬ್‌ಗೆ ಮತ್ತೆ ಕೊಂಡೊಯ್ಯುವುದರಲ್ಲಿ ಸಫಲವಾಗಿದೆ ಎಂದು ಅವರು ತಿಳಿಸಿದರು. ಮಾತಾ ಶಾರದೆಯ ಆಶೀರ್ವಾದವು ಆಚಂದ್ರಾರ್ಕವಾಗಿ ಮುಂದಿನ ಹಲವಾರು ಶತಮಾನಗಳವರೆಗೆ ಇಡೀ ದೇಶದಲ್ಲಿ ಉಳಿಯುತ್ತದೆ ಎಂದಿದ್ದಲ್ಲದೇ, ಇನ್ನು ಮುಂದೆ ತಾವು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದಾಗಲೆಲ್ಲಾ ಈ ಮಾತಾ ಶಾರದಾ ದೇವಿ ದೇವಸ್ಥಾನಕ್ಕೆ ನಮಸ್ಕರಿಸಿ ನನ್ನ ಕಾಶ್ಮೀರದ ಭೇಟಿಯನ್ನು ಪ್ರಾರಂಭಿಸುತ್ತೇನೆ ಎಂದು ತಿಳಿಸಿದ್ದದ್ದು ಗಮನಾರ್ಹವಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಈ ದೇವಾಲಯದ ಉದ್ಘಾಟನೆಯು ಹೊಸ ಉದಯದ ಆರಂಭವಾಗಿದ್ದು, ಈ ಮೂಲಕ ಕಾಶ್ಮೀರೀ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಅನ್ವೇಷಣೆಯಾಗಿದೆ. ಇಡೀ ದೇಶವೇ ಸಡಗರ ಸಂಭ್ರಮಗಳಿಂದ ಶೋಭಕೃತ್ ನಾಮ ಸಂವತ್ಸದ ಯುಗಾದಿ ಹಬ್ಬದ ಮೂಲಕ ಹೊಸ ವರ್ಷವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲೇ ಮಾತಾ ಶಾರದಾ ಮಂದಿರವನ್ನು ಲೋಕಾರ್ಪಣೆ ಮಾಡಿರುವುದು ದೇಶಾದ್ಯಂತ ಇರುವ ಶಾರದ ಭಕ್ತರಿಗೆ ಶುಭ ಸೂಚನೆಯಾಗಿದ್ದು ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿಕೊಟ್ಟಿದೆ.
ಕೆಡವುವ ಶಕ್ತಿಗಿಂತ ಕಟ್ಟುವ ಶಕ್ತಿ ದೊಡ್ಡದು. ಅವರು ಕೆಡವಿದವರು ನಾವು ಅದನ್ನೇ ಸವಾಲಾಗಿ ಸ್ವೀಕರಿಸಿ ಮತ್ತೆ ಮತ್ತೆ ಇಡೀ ವಿಶ್ವವೇ ಬೆರಗಾಗುವ ಹಾಗೆ ಎದ್ದು ನಿಂತೆವು. ಅಲ್ಲಿನ ದುಷ್ಟಶಕ್ತಿಗಳೇ ಕಾಲವಾಗುವ ಹಾಗೆ ಅಲ್ಲಿಯೇ ಮತ್ತಷ್ಟು ಗಟ್ಟಿಯಾಗಿ ಪುಟಿದು ನಿಲ್ಲುತ್ತೇವೆ. ಇದೇ ಸನಾತನ ಹಿಂದೂ ಧರ್ಮದ ಶಕ್ತಿ. ಇದೇ ದೈವಿಕ ಅನುಭಾವ, ಭಕ್ತಿಯ ಅನುಸಂಧಾನ. ಮತಾಂಧರು ಕೆಡವಿದ್ದ ಪ್ರವಾಸಿ ಶಾರದಾ ಮಂದಿರವನ್ನು ಮತ್ತೆ ಹಿಂದಿನ ಸಾಂಸ್ಕೃತಿಕ, ಧಾರ್ಮಿಕ, ಕಾಶ್ಮೀರಿ ಪರಂಪರೆಯ ಗತ ವೈಭವ ನೆನಪಿಸುವಂತೆ ಪುನರ್ ಪ್ರತಿಷ್ಠಾಪನೆ ಮಾಡುವ ಮೂಲಕ ತಾಯಿ ಶಾರದಾಂಬೆ ಮತ್ತು ಶಂಕರ ಭಗವದ್ಪಾದರ ಅನುಷ್ಠಾನ ಕಾಶ್ಮೀರದಲ್ಲಿ ಮತ್ತೆ ಹಿಂದವೀ ಶಕ್ತಿ ಸಂಚಯನಕ್ಕೆ ಕಾರಣವಾಗಲಿದೆ. ಭವಿಷ್ಯ ಬದಲಾಗಲಿದೆ. ಅದಕ್ಕಿದು ಪ್ರಾರಂಭವಷ್ಟೆ.
ಏನಂತೀರೀ?
ನಿಮ್ಮವನೇ ಉಮಾಸುತ