ಅದು 1981ಕರ್ನಾಟಕದ ಹಾಸನ ಜೆಲ್ಲೆಯ ಚನ್ನರಾಯಪಟ್ಟಣದ ಶ್ರವಣಬೆಳಗೊಳದಲ್ಲಿರುವ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಮಯ. ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಆಚರಿಸಲಾಗುವ ಜೈನ ಸಮುದಾಯದ ಅತಿದೊಡ್ಡ ಮತ್ತು ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು 57 ಅಡಿ ಎತ್ತರದ ಏಕಶಿಲೆಯ ಗೋಮಟೇಶ್ವರನ ವಿಗ್ರಹಕ್ಕೆ ದೇಶದ ಪ್ರಮುಖ ನದಿಗಳಿಂದ ತರಲಾದ 1,008 ಕಲಶಗಳ ಪವಿತ್ರ ನೀರು, ಶ್ರೀಗಂಧದದಿಂದ ಪ್ರತಿಮೆಗೆ ಅಭ್ಯಂಜನ ಮಾಡಿಸಿ ನಂತರ ಹಾಲು, ಕಬ್ಬಿನ ರಸ, ಶ್ರೀಗಂಧ, ಅರಿಶಿನ ಕುಂಕುಮದ ಅಭಿಶೇಕದ ಜೊತೆಯಲ್ಲೊಯೇ ಬಗೆಬಗೆಯ ಪುಪ್ಷಗಳು, ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಮತ್ತು ಅಮೂಲ್ಯ ರತ್ನಗಳಿಂದ ಬಾಹುಹಲಿಗೆ ವಿಶೇಷವಾದ ಅಭಿಷೇಕ ಮತ್ತು ಪೂಜೆಗಳನ್ನು ಸುಮಾರು ಒಂದು ವಾರಗಳ ಕಾಲ ಮಾಡಲಾಗುತ್ತದೆ. ಈ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ದೇಶ ವಿದೇಶಗಳಿಂದ ಕೇವಲ ಜೈನ ಸಮುದಾಯವಲ್ಲದೇ ಎಲ್ಲಾ ಧರ್ಮೀಯರು ಲಕ್ಷಾಂತರ ಸಂಖ್ಯೆಯಲ್ಲಿ ಪುಟ್ಟ ಊರಾದ ಶ್ರವಣ ಬೆಳಗೊಳಕ್ಕೆ ಆಗಮಿಸುತ್ತಾರೆ. ಅಂತಹ ಸಮಯದಲ್ಲಿ ಸುಮಾರು 32 ವರ್ಷ ವಯಸ್ಸಿನ ತರುಣ ಜೈನ ಸಸ್ಯಾಸಿಯೊಬ್ಬರು ಇಡೀ ಮಹಾಮಸ್ಕಕಾಭಿಷೇಕದ ಜವಾಬ್ಧಾರಿಯನ್ನು ಹೊತ್ತು, ಅಲ್ಲಿಗೆ ಆಗಮಿಸಿದ ಭಕ್ತಾದಿಗಳಿಗೆ ಅಚ್ಚುಕಟ್ಟದ ವ್ಯವಸ್ಥೆಗಳನ್ನು ಮಾಡಿಕೊಡುವ ಮೂಲಕ ಎಲ್ಲರ ಗಮನ ಸಳೆಯುತ್ತಾರೆ. ಅವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಂದ ಕರ್ಮಯೋಗಿ ಎಂಬ ಬಿರುದಿಗೆ ಪಾತ್ರರಾಗಿದ್ದವರೇ ಶ್ರೀ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿಗಳು.
ಮೂಲತಃ ಕಾರ್ಕಳದ ವರಂಗ ಗ್ರಾಮದವರಾದ ಶ್ರೀಗಳು ಹುಟ್ಟಿದ್ದು, 1949ರ ಮೇ 3ರಂದು. ರತ್ನವರ್ಮ ಎಂಬುದು ಅವರ ಅವರ ಪೂರ್ವಾಶ್ರಮದ ಹೆಸರಾಗಿದ್ದು ಬಾಲ್ಯದಿಂದಲೂ ಆಟಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ ಹುಡುಗ ಯವ್ವನಾವಸ್ಥೆಗ ಬರುವಷ್ಟರಲ್ಲಿ ಲೌಕಿಕದಿಂದ ಅಧ್ಯಾತ್ಮದೆಡೆಗೆ ಹೊರಳಿ, 1969ರ ಡಿಸೆಂಬರ್ 12ರಂದು ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಏಪ್ರಿಲ್ 19 1970 ರಂದು ಶ್ರವಣಬೆಳಗೊಳದ ಜೈನ ಮಠದ ಧರ್ಮಾಚಾರ್ಯ ಪೀಠವನ್ನು ಅಲಂಕರಿಸಿದ ನಂತರ ನಿರಂತರವಾಗಿ ಜೈನ ಸಮುದಾಯದ ಅಭಿವೃದ್ಧಿ ಮತ್ತು ಮಠದ ಪರಂಪರೆಯನ್ನು ಉಳಿಸಲು ಸ್ವಾಮೀಜಿಗಳು ಅಹಿರ್ನಿಶಿ ಶ್ರಮಿಸಿದ್ದಾರೆ. ಸ್ವಾಮೀಜಿಗಳ ದೂರದರ್ಶಿತ್ವ ಮತ್ತು ಕಠಿಣ ಪರಿಶ್ರದಿಂದಾಗಿ ಇಂದು ಶ್ರವಣಬೆಳಗೊಳ ಜೈನ ತತ್ತ್ವಶಾಸ್ತ್ರ, ಧರ್ಮ ಮತ್ತು ಆಚರಣೆಯನ್ನು ಕಲಿಯುವ ಪ್ರಮುಖ ಕೇಂದ್ರವಾಗಿ ಗುರುತಿಸಲ್ಪಟ್ಟಿದೆಯಲ್ಲದೇ, ದೇಶದ ಪ್ರಮುಖ ಶ್ರದ್ಧ ಕೇಂದ್ರವಾಗಿಯೂ ಮಾರ್ಪಾಟಾಗಿರುವುದು ನಿಜಕ್ಕೂ ಗಮನಾರ್ಹವಾದ ವಿಷಯವಾಗಿದೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಸ್ತಾಭಿಷೇಕವು ಇವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯುತ್ತಿತ್ತು. 1981,1993, 2006 ಹಾಗೂ 2018ರ ಮಹಾ ಮಸ್ತಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ ಕೀರ್ತಿ ಇವರದ್ದು.
ಕೇವಲ 21ನೇ ವಯಸ್ಸಿನಲ್ಲಿಯೇ ಸನ್ಯಾಸವನ್ನು ಸ್ವೀಕರಿಸಿದರೂ, ಅವರ ಕಲಿಕೆಯ ದಾಹ ಇಂಗದೇ, ಆಥ್ಯಾತ್ಮ ಶಿಕ್ಷಣದ ಜೊತೆ ಜೊತೆಯಲ್ಲಿಯೇ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಲ್ಲದೇ, ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮಾತೃಭಾಷೆ ತುಳು, ವ್ಯಾವಹಾರಿಕ ಭಾಷೆ ಕನ್ನಡ ಪ್ರಾಕೃತ, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಲ್ಲದೇ, ಹಿಂದೀ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಎಲ್ಲರೊಂದಿಗೂ ಸುಲಲಿತವಾಗಿ ವ್ಹವಹರಿಸಬಲ್ಲವರಾಗಿದ್ದರು. ಕನ್ನಡ, ಹಿಂದಿ, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅತ್ಯಂತ ಸರಳವಾಗಿ ಸರ್ವೇ ಸಮಾನ್ಯ ಜನರಿಗೂ ಅರ್ಥವಾಗುವಂತೆ ಪ್ರವಚನ ಮಾಡುತ್ತಿದ್ದರು. ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇಭಾಷೆ ಅದು ಕನ್ನಡಾ ಕನ್ನಡಾ ಎನ್ನುವಂತೆ ಅಪ್ಪಟ ಕನ್ನಡಿಗರಾಗಿ ಇಡೀ ವಿಶ್ವಾದ್ಯಂತ ಕನ್ನಡಿಗರಾಗಿಯೇ ಕನ್ನಡತನವನ್ನು ಎತ್ತಿಹಿಡಿದ ಹೆಗ್ಗಳಿಗೆ ಶ್ರೀಗಳದ್ದಾಗಿತ್ತು.
ಭಗವಾನ್ ಮಹಾವೀರರ ನಿರ್ವಾಣದ 2500ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ದಕ್ಷಿಣ ಭಾರತದಾದ್ಯಂತ ‘ಧರ್ಮಚಕ್ರ’ ಎಂಬ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸುವಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರಮುಖ ಪಾತ್ರವಹಿಸಿದ್ದರು. ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಶ್ರವಣಬೆಳಗೊಳದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಆಯೋಜನೆ ಮಾಡಿ ಅದರ ಮೂಲಕ ಸುಮಾರು 1000ಕ್ಕೂ ಅಧಿಕ ಜನರು ಇದರ ಪ್ರಯೋಜನವನ್ನು ಪಡೆದಿದ್ದರು. ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸ್ವಾಮೀಜಿಗಳು ಶ್ರವಣಬೆಳಗೊಳದಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲದೇ, ಫಾರ್ಮಸಿ ಕಾಲೇಜು, ಪಿಯು ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಮಾಡಿದ್ದರು. ಇದಲ್ಲದೇ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ದರ ಮೂಲಕ ಪ್ರಾಕೃತ ವಿಶ್ವ ವಿದ್ಯಾಲಯವನ್ನು ಆರಂಭಿಸಿದ ಹೆಗ್ಗಳಿಕೆಯೂ ಸಹಾ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಗೆ ಸೇರುತ್ತದೆ. ಪ್ರಾಕೃತದ ಪುಸ್ತಕಗಳು ಸಾಮಾನ್ಯ ಜನರಿಗೂ ಸಿಗುವಂತೆ ಮಾಡಲು ಬೆಂಗಳೂರಿನಲ್ಲಿ ಪ್ರಾಕೃತ ಜ್ಞಾನಭಾರತಿ ಶಿಕ್ಷಣ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಸಿ ಅದರ ಮೂಲಕ ತಾಳೆಗರಿಗಳನ್ನು ಸಂರಕ್ಷಿಸುವ ಹಾಗೂ ಪ್ರಾಕೃತ ಗ್ರಂಥಗಳ ಕನ್ನಡ ಅನುವಾದದ ವ್ಯವಸ್ಥೆಯನ್ನು ಸಹ ಜಾರಿಗೆ ತಂದಿದ್ದರು. ಅದೇ ಪ್ರತೀ ಎರಡು ವರ್ಷಗಳಿಗೊಮ್ಮೆ ರಾಷ್ಟ್ರೀಯ ಪ್ರಾಕೃತ ಸಮ್ಮೇಳನಗಳನ್ನು ಆಯೋಜನೆ ಮಾಡುತ್ತಿದೆ.
ಕೇವಲ ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ಸಮಾಜದ ಮೇಲಿನ ಬದ್ಧತೆ ಮತ್ತು ಕಳಕಳಿಯಿಂದಾಗಿ, ಶ್ರವಣ ಬೆಳಗೊಳ ಮತ್ತು ಸುತ್ತಮುತ್ತಲಿನ ಹತ್ತಾರು ಗ್ರಾಮಗಳನ್ನು ತಮ್ಮ ಮಠದ ಮೂಲಕ ದತ್ತು ತೆಗೆದುಕೊಂಡು ಆ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸಲು ಸಂಚಾರಿ ಆಸ್ಪತ್ರೆ ವ್ಯವಸ್ಥೆ ಮಾಡಿದ್ದಲ್ಲದೇ, ಆರ್ಯುವೇದಿಕ್ ಆಸ್ಪತ್ರೆ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ, ಆ ಗ್ರಾಮಗಳಲ್ಲಿ ಶಾಲಾ ಕಟ್ಟಡ, ಕುಡಿಯುವ ನೀರು, ಸಮುದಾಯ ಭವನ, ರಸ್ತೆ ಮತ್ತು ಬೀದಿ ದೀಪಗಳ ವ್ಯವಸ್ಥೆಯನ್ನೂ ಸಹಾ ಮಾಡಿಸಿದ್ದರು. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶ್ರವಣಬೆಳಗೊಳಕ್ಕೆ ಆಗಮಿಸುವ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ಹಲವು ಮೂಲ ಸೌಕರ್ಯಗಳ ವ್ಯವಸ್ಥೆಗಳು ಬಹಳ ಅಚ್ಚುಕಟ್ಟಾಗಿ ಸಿಗುವಂತಹ ವ್ಯವಸ್ಥೆಯನ್ನು ಮಾಡಿಸಿದ್ದರು.
ಇಂದಿನ ಆಧುನಿಕ ಜಗತ್ತಿನಲ್ಲಿ ಒಬ್ಬರಿಂದ ಮತ್ತೊಬ್ಬರ ಸಂವಹನ ಮಾಡುವ ಸಲುವಾಗಿ ಮೊಬೈಲ್ ಅತ್ಯಂತ ಸುಲಭವಾದ ಸಾಧನವಾಗಿದ್ದು, ಇಂದು ಆಬಾಲವೃದ್ಧರಾದಿಯಾಗಿ ಮೊಬೈಲ್ ದಾಸರಾಗಿ ಹೋಗಿರುವಾಗ ಶ್ರೀಗಳು ಜೀವಮಾನದಲ್ಲಿ ಎಂದೂ ಸಹಾ ಮೊಬೈಲ್ ಫೋನನ್ನು ಸ್ಪರ್ಶಿಸಲೇ ಇಲ್ಲಾ ಎಂಬುದು ಅತ್ಯಂತ ಅಚ್ಚರಿಯ ಸಂಗತಿಯಾಗಿತ್ತು. ಸರ್ವಸಂಗ ಪರಿತ್ಯಾಗಿಯಾಗಿ ಧರ್ಮ ಮತ್ತು ಸಮಾಜ ಸೇವೆಗಾಗಿ ಇರುವ ನಮಗೆ ಈ ರೀತಿಯ ಆಧುನಿಕ ಸಂಪರ್ಕ ಸಾಧನದ ಅವಶ್ಯಕತೆ ಇಲ್ಲಾ ಎಂದು ಸದಾಕಾಲ ಹೇಳುತ್ತಿದ್ದದ್ದಲ್ಲದೇ ಅದನ್ನು ಅಕ್ಷರಶಃ ಪಾಲಿಸುತ್ತಿದ್ದರು. ಇದೇ ರೀತಿ ಯಾವುದೇ ಆಧುನಿಕ ಸವಲತ್ತುಗಳನ್ನು ಆಶಿಸದೆ 12 ವರ್ಷಗಳ ಕಾಲ ವಾಹನ ಸಂಚಾರವನ್ನೇ ಮಾಡದೇ, ಶ್ರವಣ ಬೆಳಗೊಳದಲ್ಲೇ ಕುಳಿತು, ಜೈನ ಪರಂಪರೆ ಮತ್ತು ಅಧ್ಯಾತ್ಮದ ಮೌಲ್ಯಗಳನ್ನು ಹೇಳುವ ದವಳ ಮತ್ತು ಜಯದವಳ ಆಗಮ ಗ್ರಂಥಗಳ ರಚನೆ ಮಾಡಿದ್ದರು.
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 4 ದಶಕಗಳಿಗೂ ಅಧಿಕ ವರ್ಷಗಳ ಕಾಲ ಜನೋಪಕಾರಿ ಮತ್ತು ಆಧ್ಯಾತ್ಮಿಕ ಕೈಂಕರ್ಯಗಳಲ್ಲಿ ತೊಡಗಿಕೊಂಡಿದ್ದನ್ನು ಗುರುತಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಿಗೆ 2017ನೇ ಸಾಲಿನಲ್ಲಿ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಹೀಗೆ ಸದಾಕಾಲವೂ ಒಂದಲ್ಲಾ ಒಂದು ಸಮಾಜಮುಖೀ ಕಾರ್ಯಗಳಲ್ಲಿ ನಿರತಾಗಿರುತ್ತಿದ್ದ ಶ್ರೀಗಳು ಕಳೆದ 4 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಎಂದಿನಂತೆ ಮಾರ್ಚ್ 23, 2023ರ ಬೆಳಿಗ್ಗೆ 4 ಘಂಟೆಗೆ ಎದ್ದು ತಮ್ಮ ದೈನಂದಿನ ಕೆಲಸಕಾರ್ಯಗಳನ್ನು ಮುಗಿಸಿ ತಮ್ಮ ಉತ್ತರಧಿಕಾರಿಗಳಾಗಿದ್ದ ಕಿರಿಯ ಶ್ರೀಗಳನ್ನು ಕರೆದು ಅವರಿಗೆ ಮಠದ ಕೀಲಿಗಳನ್ನು ಕೊಟ್ಟು ಕೆಲವು ಆಡಳಿತಾತ್ಮಕ ರಹಸ್ಯ ವಿಷಯಗಳನ್ನು ತಿಳಿಸಿದಾಗ, ಇಂದೇಕೆ ಗುರುಗಳೇ ನನಗೆ ಹೇಳುತ್ತಿದ್ದೀರಿ? ಎಂದಾಗ ಮುಂದೇ ನೀವೇ ಇವಲ್ಲವನ್ನೂ ನೋಡಿಕೊಂಡು ಹೋಗಬೇಕು. ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಹೇಳಿದ ಸ್ವಲ್ಪ ಕಾಲದಲ್ಲೇ ಅಲ್ಲೇ ಆಶ್ರಮದ ಭಂಡಾರ ಭವನದಲ್ಲಿ ಬಿಪಿ ಮತ್ತು ಶುಗರ್ ಏರುಪೇರಿನಿಂದ ಅಸ್ವಸ್ಥಗೊಂಡು ಸ್ವಾಮೀಜಿ ಕೆಳಗೆ ಬಿದ್ದು ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿದೆ. ಕೂಡಲೇ ಮಠದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿಗಳು ತಮ್ಮ 74ನೇ ವಯಸ್ಸಿನಲ್ಲಿ ಜೈನೈಕ್ಯರಾಗಿರುವುದು ನಿಜಕ್ಕೂ ವಿಷಾಧನೀಯವಾಗಿದೆ.
ಹೊಯ್ಸಳ ದೊರೆಯಾಗಿದ್ದ ಬಲ್ಲಾಳರಾಯ ಶ್ರವಣಬೆಳಗೊಳ ಜೈನ ಮಠದ ಸ್ವಾಮೀಜಿಗಳಿಗೆ 13ನೇ ಶತಮಾನದಲ್ಲಿ ಚಾರುಕೀರ್ತಿ ಎಂಬ ಬಿರುದು ನೀಡಿದ ನಂತರ ಅಂದಿನಿಂದಲೂ ಶ್ರೀ ಮಠದ ಪೀಠಾಧಿಪತಿಗಳಿಗೆ ಸ್ವಸ್ಥಿ ಶ್ರೀ ಚಾರುಕೀರ್ತಿ ಎಂದೇ ಕರೆಯುವ ಸಂಪ್ರದಾಯ ರೂಢಿಗೆ ಬಂದು ಶ್ರೀ ಭಟ್ಟಾರಕ ಸ್ವಾಮಿಗಳಿಗೂ ಸಹಾ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಎಂದೇ ಪ್ರಖ್ಯಾತವಾಗಿ ದೇಶ ವಿದೇಶಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದರು.
ಶ್ರೀಗಳ ಅಕಾಲಿಕ ಮರಣದ ವಿಷಯ ಕೇಳಿ ದೇಶ ವಿದೇಶಗಳಲ್ಲಿರುವ ಅವರ ಭಕ್ತಾದಿಗಳು ಮತ್ತು ಗಣ್ಯರುಗಳು ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ರಾಜ್ಯಸರ್ಕಾರವೂ ಸಹಾ ಶ್ರೀಗಳ ಅಂತ್ಯಸಂಸ್ಕಾರವನ್ನು ಜೈನ ಸಂಪ್ರದಾಯದಂತೆ ಸೂರ್ಯಾಸ್ತಕ್ಕೂ ಮೊದಲು ಚಂದ್ರಗಿರಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜೈನ ಮಠದ ಸಾವಿರಾರು ಭಕ್ತಾದಿಗಳು ಚಾರೂಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ ಶ್ರೀಗಳು ಪಂಚಭೂತಗಳಲ್ಲಿ ಲೀನವಾಗಿ ಹೋಗಿರುವುದು ನಿಜಕ್ಕೂ ದುಃಖಕರವಾದ ವಿಷಯವಾಗಿದೆ.
ಶ್ರೀಗಳು ಬೌತಿಕವಾಗಿ ನಮ್ಮೊಂದಿಗೆ ಇನ್ನು ಮುಂದೆ ಇರದೇ ಹೋದರೂ ಅವರ ಅಧ್ಯಾತ್ಮ ಸಾಧನೆಯ ಜೊತೆಗೆ ಅವರ ಸಮಾಜಮುಖೀ ಕಾರ್ಯಗಳು/ಸೇವೆಗಳು ಮತ್ತು ಶೈಕ್ಷಣಿಕ ಕ್ಷೇತ್ರಗಳ ಸಾಧನೆಗಳಿಂದಾಗಿ ಆಚಂದ್ರಾರ್ಕವಾಗಿ ಅವರು ನಮ್ಮೊಂದಿಗೆ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ