ಗುಡ್ ಫ್ರೈಡೆ

ಅರೇ ಇದೇನಿದು? ಏನಂತೀರಿ? ಬ್ಲಾಗ್ ನಲ್ಲಿ ಕ್ರಿಶ್ಚಿಯನ್ ಧರ್ಮದ ಗುಡ್ ಫ್ರೈಡೆ ಹಬ್ಬದ ಬಗ್ಗೆ ಮಾಹಿತಿಯೇ ಎಂದು ಅಚ್ಚರಿ ಪಡುವವರಿಗೆ, ನಮ್ಮ ಸನಾತನ ಧರ್ಮದ ಶ್ರೇಷ್ಠತೆಯೇ ಇದು. ಮೊದಲು ನಮ್ಮ ಧರ್ಮದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವುದರ ಜೊತೆಗೆ ಅನ್ಯ ಮತದ ಬಗ್ಗೆಯೇ ತಿಳಿದುಕೊಂಡಿರುವುದಷ್ಟೇ ಅಲ್ಲದೇ ಅದರಲ್ಲಿರುವ ಒಳ್ಳೆಯ ಸಂಗತಿಗಳನ್ನೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಹೇಳಿಕೊಟ್ಟಿದೆ. ಹಾಗಾಗಿ ನಾವಿಂದು ಕ್ರಿಶ್ಚಿಯನ್ನರು ಆಚರಿಸುವ ಗುಡ್ ಫ್ರೈಡೆ ಆಚರಣೆಯ ಹಿನ್ನಲೆ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

gf2ಗುಡ್ ಫ್ರೈಡೆ ಪದದಲ್ಲಿ ಗುಡ್ ಎಂಬುದನ್ನು ನೋಡಿ ಇದು ಕ್ರಿಶ್ಚಿಯನ್ ಮತದವರಿಗೆ ಅತ್ಯಂತ ಸಂತೋಷದಾಯಕ ದಿನ ಎಂದು ತಿಳಿದಲ್ಲಿ ಅದು ಖಂಡಿತವಾಗಿಯೂ ತಪ್ಪಾಗುತ್ತದೆ. ನಿಜ ಹೇಳಬೇಕೆಂದರೆ ಕ್ರಿಶ್ಚಿಯನ್ ಸಮುದಾಯದ ಜನರು ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿದರೂ ಅವರಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದೆ. ವಿಶ್ವದ ಪ್ರಮುಖ ಧರ್ಮಗಳಲ್ಲಿ ಒಂದಾದ ಕ್ರಿಶ್ಚಿಯನ್ ಧರ್ಮದ ಧಾರ್ಮಿಕ ನಾಯಕರಾದ ಮತ್ತು ಬಹುತೇಕ ಕ್ರಿಶ್ಚಿಯನ್ನರು ದೇವರ ಅವತಾರ ಎಂದೇ ಪರಿಗಣಿಸಲ್ಪಡುವ ಜೀಸಸ್ ಕ್ರೈಸ್ಟ್ ಅಥವಾ ಯೇಸುವಿನನ್ನು ಪಾಂಟಿಯಸ್ ಪಿಲಾಟ್ ಆಳ್ವಿಕೆಯಲ್ಲಿ ರೋಮನ್ ಅಧಿಕಾರಿಗಳು ಬಂಧಿಸಿ, ನಾನಾ ರೀತಿಯ ಚಿತ್ರ ಹಿಂಸೆಗಳನ್ನು ಕೊಟ್ಟು ಶಿಲುಬೆಗೇರಿಸುವ ಮೂಲಕ ಆತನಿಗೆ ಮರಣ ದಂಡನೆಯನ್ನು ವಿಧಿಸಿದರು. ಹೀಗೆ ಯೇಸುವಿನನ್ನು ಶಿಲುಬೆಗೇರಿಸಿದ ದಿನವು ಶುಕ್ರವಾರವಾಗಿದ್ದ ಕಾರಣದಿಂದಲೇ ಈ ಶುಕ್ರವಾರವನ್ನು ಕ್ರಿಶ್ಚಿಯನ್ನರು ಕ್ರಿಸ್ತ ಪರಮಾತ್ಮನ ತ್ಯಾಗದ ದಿನವೆಂದೇ ಪೂಜಿಸುತ್ತಾರೆ. ಹಾಗಾಗಿ ಈ ದಿನವನ್ನು ಪವಿತ್ರ ಶುಕ್ರವಾರ, ಕಪ್ಪು ಶುಕ್ರವಾರ ಅಥವಾ ಗ್ರೇಟ್ ಫ್ರೈಡೆ ಎಂದೂ ಸಹಾ ಕರೆಯುತ್ತಾರೆ.

gf4ಉಳಿದೆಲ್ಲಾ ಕ್ರೈಸ್ತ ಹಬ್ಬಗಳಂತೆ ಗುಡ್ ಫ್ರೈಡೇ ಪ್ರತೀ ವರ್ಷವೂ ಅದೇ ದಿನವೇ ಆಚರಿಸಲ್ಪಡದೇ, ಈಸ್ಟರ್ ಭಾನುವಾರದ ಹಿಂದಿನ ಶುಕ್ರವಾರದಂದು ಪ್ರತಿ ವರ್ಷ ಗುಡ್ ಫ್ರೈಡೆಯನ್ನಾಗಿ ಆಚರಿಸಲಾಗುತ್ತದೆ. ಈಸ್ಟರ್ ಭಾನುವಾರ ಎಂದರೆ, ಯೇಸುಕ್ರಿಸ್ತನ ಪುನರುತ್ಥಾನದ ದಿನ ಎಂದು ಕ್ರಿಶ್ಚಿಯನ್ನರ ನಂಬಿಕೆಯಾಗಿದೆ. ಬೈಬಲ್‌ನ ಹೊಸ ಒಡಂಬಡಿಕೆಯಲ್ಲಿ, ಯೇಸುವನ್ನು ರೋಮನ್ನರು ಶಿಲುಬೆಗೇರಿಸಿದ ಆತ ಮರಣ ಹೊಂದಿದ ಮೂರು ದಿನಗಳ ನಂತರ ಮೇರಿ ಮ್ಯಾಗ್ಡಲೀನ್ ಯೇಸುವನ್ನು ಸಮಾಧಿ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ, ಆಲ್ಲಿ ಯೇಸುವಿನ ಶವವು ಕಾಣದೇ ಹೋದಾಗ, ಅಲ್ಲಿಗೆ ಬಂದ ದೇವದೂತನೊಬ್ಬನು ಯೇಸು ಎದ್ದಿದ್ದಾನೆ ಎಂದು ಹೇಳಿದನಂತೆ ಹಾಗಾಗಿ ಈಸ್ಟರ್ ದಿನವನ್ನು ಯೇಸು ಮತ್ತೆ ಭೂಮಿಗೆ ಹಿಂದಿರುಗಿದ ದಿನ ಎಂಬುದಾಗಿ ಕ್ರಿಶ್ಚಿಯನ್ನರ ನಂಬಿಕೆಯಾಗಿದೆ.

gf5ಈ ಪವಿತ್ರ ಶುಕ್ರವಾರವು ಕ್ರಿಶ್ಚಿಯನ್ನರಿಗೆ ಬಹಳ ವಿಶೇಷವಾದ ಹಬ್ಬವಾಗಿದ್ದು, ಸಾಮಾನ್ಯ ದಿನಗಳಲ್ಲಿ ಬಿಳಿಯುಡುಪನ್ನು ಧರಿಸಿ ಪ್ರಾರ್ಥನೆಗಾಗಿ ಚರ್ಚುಗಳಿಗೆ ಹೋಗುವ ಕ್ರಿಶ್ಚಿಯನ್ನರು ಈ ಪವಿತ್ರ ಶುಕ್ರವಾರವರು ಅವರಿಗೆ ಕರಾಳ ದಿನವಾದ ಕಾರಣ ಹೆಚ್ಚಿನವರು ಅಂದು ಕಪ್ಪು ಬಟ್ಟೆಯನ್ನು ಧರಿಸಿ ತಮ್ಮ ತಮ್ಮ ಚರ್ಚ್‌ಗಳಿಗೆ ಹೋಗಿ ತಮ್ಮನ್ನು ಅಗಲಿದ ಯೇಸು ಕ್ರಿಸ್ತನಿಗಾಗಿ ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಹಾಗೆ ಪ್ರಾರ್ಥನೆ ಸಲ್ಲಿಸಿದ ನಂತರ ಚರ್ಚ್‌ನಲ್ಲಿರುವ ಶಿಲುಬೆಗೆ ಮುತ್ತಿಡುವ ಮೂಲಕ ಪ್ರಭು ಯೇಸುವನ್ನು ಸ್ಮರಿಸುತ್ತಾರೆ. ಇನ್ನೂ ವಿಶೇಷವೆಂದರೆ ಈ ದಿನವಿಡೀ ಚರ್ಚುಗಳಲ್ಲಿ ಎಂದಿನಂತೆ ಗಂಟೆಗೊಮ್ಮೆ ಬಾರಿಸುವ ಘಂಟೆಯನ್ನು ಅಂದು ಬಾರಿಸುವುದಿಲ್ಲ. ಪ್ರಾರ್ಧನೆ ಮುಗಿದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿ, ಅವರ ಜನ್ಮಕರ್ತನಾದ ಯೇಸುವಿನ ಸ್ಮರಣೆಯಲ್ಲಿ, ಉಪವಾಸವನ್ನು ಆಚರಿಸುವುದಲ್ಲದೇ ತಮ್ಮ ಮನೆಗಳಲ್ಲಿ ಸಿಹಿ ತಿನಿಸು ತಯಾರಿಸಿ ಉಪವಾಸ ಮುಗಿದ ನಂತರ ಅದನ್ನು ತಮ್ಮ ಬಂಧು ಮಿತ್ರರೊಂದಿಗೆ ಹಂಚಿಕೊಳ್ಳುತ್ತಾರೆ. ಅದೇ ರೀತಿ ಯೇಸು ಕ್ರಿಸ್ತನು ಅವರಿಗೆ ಹೇಳಿದಂತೆ ಎಲ್ಲರೊದಿಗೆ ಪ್ರೀತಿ, ಸತ್ಯ ಮತ್ತು ನಂಬಿಕೆಯ ಮಾರ್ಗವನ್ನು ಜೀವನದುದ್ದಕ್ಕೂ ಅನುಸರಿಸುವುದಾಗಿ ಯೇಸುವಿನ ನೆನಪಿನಲ್ಲಿ ಪ್ರಮಾಣ ಮಾಡಿ, ಯೇಸುವಿನನ್ನು ಸ್ಮರಿಸುತ್ತಾ, ಅಗತ್ಯ ಇರುವವರಿಗೆ ತಮ್ಮ ಕೈಲಾದ ಮಟ್ಟಿಗೆ ದಾನಗಳನ್ನು ಮಾಡುತ್ತಾರೆ.

gf6ಇತರೇ ಧರ್ಮಗಳಂತೆಯೇ ಕ್ರಿಶ್ಚಿಯನ್ನರಲ್ಲಿಯೂ ನೂರಾರು ಉಪ ಪಂಗಡಗಳು ಇದ್ದು ಅವುಗಳಲ್ಲಿ ಕ್ಯಾಥೊಲಿಕ್, ಈಸ್ಟರ್ನ್ ಆರ್ಥೊಡಾಕ್ಸ್, ಲುಥೆರನ್, ಆಂಗ್ಲಿಕನ್, ಮೆಥೋಡಿಸ್ಟ್, ಓರಿಯಂಟಲ್ ಆರ್ಥೊಡಾಕ್ಸ್, ಯುನೈಟೆಡ್ ಪ್ರೊಟೆಸ್ಟಂಟ್ ಮತ್ತು ಕೆಲವು ಸುಧಾರಿತ ಸಂಪ್ರದಾಯಗಳು ಸೇರಿದಂತೆ ಅನೇಕ ಕ್ರಿಶ್ಚಿಯನ್ ಪಂಗಡಗಳ ಸದಸ್ಯರು ಈ ಶುಭ ಶುಕ್ರವರದಂದು ಉಪವಾಸ ಮಾಡುತ್ತಾ ಚರ್ಚುಗಳಿಗೆ ಹೋಗಿ ಯೇಸು ಕ್ರಿಸ್ತನಿಗೆ ಪೂಜೆ ಸಲ್ಲಿಸುವ ಮೂಲಕ ಈ ಶುಭ ಶುಕ್ರವಾರವನ್ನು ಆಚರಿಸುತ್ತಾರೆ. ಇನ್ನೂ ಕೆಲವು ಕ್ಯಾಥೋಲಿಕ್, ಲುಥೆರನ್, ಆಂಗ್ಲಿಕನ್ ಮತ್ತು ಮೆಥೋಡಿಸ್ಟ್ ಚರ್ಚ್‌ಗಳಲ್ಲಿ, ಯೇಸುವಿನನ್ನು ಶಿಲುಬೆಗೆ ಏರಿಸಿದಾಗ ಯೇಸು ಆರು ಗಂಟೆಗಳ ಕಾಲ ಶಿಲುಬೆಯಲ್ಲಿ ಸಂಕಟಪಡುತ್ತಾರೆ. ಶಿಲುಬೆಯ ಮೇಲಿನ ಆ ಆರು ಗಂಟೆಗಳಲ್ಲಿ ಮರಣ ಹೊಂದುವ ಕಡೆಯ ಮೂರು ಗಂಟೆಗಳಲ್ಲಿ, ಮಧ್ಯಾಹ್ನದಿಂದ 3 ಗಂಟೆಯವರೆಗೆ, ಇಡೀ ಭೂಮಿಯಲ್ಲಿ ಕತ್ತಲೆ ಆವರಿಸಿತ್ತು ಎಂದು ಬೈಬಲ್ಲಿನಲ್ಲಿ ಬರೆಯಲಾಗಿದೆ. ಹಾಗೆ ಯೇಸು ಕ್ರಿಸ್ತನು ಅನುಭವಿಸಿದ ನೋವಿನ ಸಂಕೇತವಾಗಿ ಗ್ರೇಟ್ ತ್ರೀ ಅವರ್ಸ್ ಸಂಕಟದ ಸೇವೆಯನ್ನು ಮಧ್ಯಾಹ್ನದಿಂದ 3 ಗಂಟೆಯವರೆರೂ ನಡೆಸಲಾಗುತ್ತದೆ. ಈ ಅವಧಿಯು ಯೇಸುವಿನ ಶಿಲುಬೆಯ ಮೇಲಿನ ತ್ಯಾಗದ ಮರಣದವರೆಗೆ ಭೂಮಿಯನ್ನು ಕತ್ತಲೆಯಾಗಿ ಆವರಿಸುತ್ತು ಎಂದು ಬೈಬಲ್ ದಾಖಲಿಸಿರುವುದರ ಪ್ರತೀಕವಾಗಿ ಕೆಲವು ಕಡೆ ಚರ್ಚಿನಲ್ಲಿ ದೀಪಗಳನ್ನು ಆರಿಸಿ ಕೃತಕವಾಗಿ ಕತ್ತಲನ್ನು ಮಾಡುವುದೂ ರೂಢಿಯಲ್ಲಿದೆ. ಇನ್ನು ಮೊರಾವಿಯನ್ ಚರ್ಚ್‌ನ ಸಂವಹನಕಾರರು ಮೊರಾವಿಯನ್ ಸ್ಮಶಾನಗಳಲ್ಲಿ ಸಮಾಧಿಗಳನ್ನು ಸ್ವಚ್ಛಗೊಳಿಸುವ ಮೂಲಕ ಶುಭ ಶುಕ್ರವಾರದ ಸಂಪ್ರದಾಯವನ್ನು ಆಚರಿಸುತ್ತಾರೆ.

GF1ಈಗಾಗಲೇ ತಿಳಿಸಿದಂತೆ ಗ್ರೆಗೋರಿಯನ್ ಮತ್ತು ಜೂಲಿಯನ್ ಕ್ಯಾಲೆಂಡರ್‌ಗಳಲ್ಲಿ ಶುಭ ಶುಕ್ರವಾರದ ದಿನಾಂಕವು ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಬದಲಾಗುತ್ತಲೇ ಇರುತ್ತದೆ. ಪಾಸ್ಚಲ್ ಹುಣ್ಣಿಮೆಯ ನಂತರದ ಮೊದಲ ಭಾನುವಾರದಂದು ಈಸ್ಟರ್ ಬರುತ್ತದೆ, ಮಾರ್ಚ್ 21 ರಂದು ಅಥವಾ ನಂತರದ ಹುಣ್ಣಿಮೆಯನ್ನು ವಸಂತ ವಿಷುವತ್ ಸಂಕ್ರಾಂತಿಯ ದಿನಾಂಕವೆಂದು ತೆಗೆದುಕೊಳ್ಳಲಾಗುತ್ತದೆ. ಪೂರ್ವ ಮತ್ತು ಪಾಶ್ಚಿಮಾತ್ಯ ಕ್ರಿಶ್ಚಿಯನ್ ಧರ್ಮವು ಈಸ್ಟರ್ ದಿನಾಂಕದ ಲೆಕ್ಕಾಚಾರವನ್ನು ಒಪ್ಪುವುದಿಲ್ಲವಾದ್ದರಿಂದ ಶುಭ ಶುಕ್ರವಾರದ ಆಚರಣೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಹೋಗುತ್ತದೆ. ಬಹುತೇಕ ಪಾಶ್ಚಿಮಾತ್ಯ ದೇಶಗಳು ಮತ್ತು 12 U.S. ರಾಜ್ಯಗಳನ್ನು ಒಳಗೊಂಡಂತೆ ಪ್ರಪಂಚದಾದ್ಯಂತ ಈ ಶುಭಶುಕ್ರವಾರ ಸಾರ್ವಜನಿಕ ರಜೆ ಎಂದು ಘೋಷಿಸಲಾಗಿದೆ. ಇನ್ನೂ ಕೆಲವು ಖಾಸಗೀ ಕಂಪನಿಗಳಲ್ಲಿ ಸಾಂಧರ್ಭಿಕ ರಜಾದಿನವಾಗಿದೆ. ಜರ್ಮನಿಯಂತಹ ಕೆಲವು ಕ್ರಿಶ್ಚಿಯನ್ ಪ್ರಧಾನ ದೇಶಗಳಲ್ಲಿ ಈ ಕರಾಳ ಶುಭ ಶುಕ್ರವಾರದ ನೆನಪಿಗಾಗಿ ನೃತ್ಯ ಮತ್ತು ಕುದುರೆ ರೇಸಿಂಗ್‌ನಂತಹ ಕೆಲವು ಮನೋರಂಜನಾತ್ಮಕ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

f3ಒಟ್ಟಿನಲ್ಲಿ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಅವರವರ ಶ್ರದ್ಧೆ ಮತ್ತು ನಂಬಿಕೆಗೆ ಅನುಸಾರ ಪ್ರಪಂಚಾದ್ಯಂತ ಕ್ರಿಶ್ಚಿಯನ್ನರು ಈ ಪವಿತ್ರ ಶುಕ್ರವಾರವನ್ನು ಆಚರಿಸುತ್ತಾರೆ. ಇನ್ನು ನಮ್ಮ ರಾಜ್ಯದಲ್ಲೂ ಈ ದಿನ ಸರ್ಕಾರಿ ರಜಾ ದಿನವಾಗಿರುವ ಕಾರಣ, ವಾರಾಂತ್ಯದ ಜೊತೆಗೆ ಹೆಚ್ಚಿನ ಮತ್ತೊಂದು ರಜೆ ಸಿಕ್ಕಿತು ಎಂದು ಕುಟುಂಬ ಸಮೇತ ತಮ್ಮ ನೆಚ್ಚಿನ ಪ್ರವಾಸಿ ತಾಣಗಳಿಗೆ ಹೋಗಿ ಸಂಭ್ವಮಿಸುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಒಟ್ಟಿನಲ್ಲಿ ಹಬ್ಬ ಹರಿದಿನಗಳು ಇರುವುದೇ ಕುಟುಂಬದ ಸದಸ್ಯರು ಮತ್ತು ಬಂಧು ಮಿತ್ರರೆಲ್ಲರೂ ಒಂದೆಡೆ ಸೇರಿ, ಸಂತೋಷದಿಂದ ಕೆಲ ಕಾಲವನ್ನು ಕಳೆದು ನಂತರ ಎಲ್ಲರೂ ಒಟ್ಟಾಗಿ ಕೂಡಿ ಆಹಾರವನ್ನು ಸೇವಿಸಿ ಸಂಭ್ರಮಿಸುವ ದಿನವಾಗಿದೆ.

ದೇವನೊಬ್ಬ ನಾಮ ಹಲವು ಎನ್ನುವಂತೆ, ಹಬ್ಬದ ಆಚರಣೆಯ ಹಿಂದಿನ ಮಹತ್ವಗಳು ಮತ್ತು ಕಾರಣಗಳು ಒಂದೇ ಆದರೂ ಅದರ ಆಚರಣೆಗಳು ಮಾತ್ರಾ ವಿಭಿನ್ನ. ಬಗೆ ಬಗೆಯಾದರೂ ದೇಹದ ಬಣ್ಣ ಎಲ್ಲರ ನಗೆಯೂ ಒಂದೇ ಅಣ್ಣ ಎನ್ನುವ ಕವಿವಾಣಿಯಂತೆ ನಾವೆಲ್ಲರೂ ನಗು ನಗುತ ಭಾವೈಕತ್ಯೆಯಿಂದ ಬಾಳಬೇಕು. ಬದುಕು ಜೀವನೋತ್ಸಾಹದ ಹೂರಣವಾಗಬೇಕೇ ಹೊರತು ನಿರಾಶೆಯ ಕಾರ್ಮೋಡವಾಗಬಾರದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s