ಬೆಂಗಳೂರು ಕರಗ

ಬೆಂಗಳೂರಿನ ಆಸುಪಾಸಿನ ಪ್ರಮುಖ ದೇವಾಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ದೇವಿಯ ದೇವಸ್ಥಾನಗಳಲ್ಲಿ ಶತಶತಮಾನಗಳಿಂದಲೂ ಕರಗ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಿಕೊಂಡು ಬರುವ ಸಂಪ್ರದಾಯವಿದೆ. ಬೆಂಗಳೂರಿನ ಹೃದಯಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪ್ರತೀ ವರ್ಷವೂ ಬಹಳ ಸಡಗರ ಸಂಭ್ರಮಗಳಿಂದ ಬಹಳ ಅದ್ದೂರಿಯಾಗಿ ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆ, ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

karaga2ಈ ಕರಗಕ್ಕೇ ತನ್ನದೇ ಆದ ವೈಶಿಷ್ಟ್ಯವಿದ್ದು, ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದಾಗಿದೆ. ಕರಗ(ಕರಕ) ಎಂಬ ಪದಕ್ಕೆ ‘ಕುಂಭ’ ಎಂಬ ಅರ್ಥವೂ ಇದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಸಂಕೇತವನ್ನು ಹೊಂದಿವೆ ಎನ್ನುವ ಪ್ರತೀತಿ ಇದೆ.
ಕ-ಕೈಯಿಂದ ಮುಟ್ಟದೆ,
ರ-ರುಂಡದ ಮೇಲೆ ಧರಿಸಿ,
ಗ-ಗತಿಸುವುದು (ತಿರುಗುವುದು) ಎಂಬ ಅರ್ಥ ವಿವರಣೆ ಬಳಕೆಯಲ್ಲಿದೆ. ಕರಗ ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ಆಚರಿಸಲ್ಪಟ್ಟು ಕ್ರಮೇಣ ಕರ್ನಾಟಕದ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಈ ಆಚರಣೆ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ.

ಕರಗ ಆಚರಣೆಯ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಾಗಿದ್ದು, ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಛಿತಳಾಗಿ ಬಿದ್ದಳಂತೆ. ಹಾಗೆ ದ್ರೌಪದಿ ಮೂರ್ಛಿತಳಾಗಿ ಬಿದ್ದದ್ದು ಪಾಂಡವರಿಗೆ ತಿಳಿಯದೆ ಅವರು ಹಾಗೆಯೇ ಮುಂದೆ ನಡೆಯುತ್ತಾರೆ. ಸ್ವಲ್ಪ ಸಮಯದ ನಂತರ ಆಕೆಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ಅವಳಿಂದ ಸ್ವಲ್ಪ ದೂರದಲ್ಲಿ ನಿಂತಿರುತ್ತಾನೆ. ಆಗ ದ್ರೌಪದಿಯು ಆದಿಶಕ್ತಿಯ ರೂಪವನ್ನು ತೋರುತ್ತಾ ತಿಮರಾಸುರನನ್ನು ಸೆದೆ ಬಡಿಯಲು, ತನ್ನ ತಲೆಯಿಂದ ‘ಯಜಮಾನ’ರನ್ನು, ಹಣೆಯಿಂದ ‘ಗಣಾಚಾರಿ’ಗಳನ್ನು, ಕಿವಿಗಳಿಂದ ‘ಗವ್ಡ’ರನ್ನು, ಬಾಯಿಯಿಂದ ‘ಗಂಟೆಪೂಜಾರಿ’ಗಳನ್ನು ಮತ್ತು ಹೆಗಲಿನಿಂದ ‘ವೀರಕುಮಾರ’ರನ್ನು ಸೃಷ್ಟಿಸುತ್ತಾಳೆ. ಹೀಗೆ ದ್ರೌಪತಿಯ ತಪೋಬಲದಿಂದ ಹುಟ್ಟಿದವರೆಲ್ಲರೂ ಸೇರಿ ಆ ರಾಕ್ಷಸನ ವಿರುದ್ಧ ವೀರಾವೇಷದಿಂದ ಹೋರಾಡಿ ಅವನನ್ನು ಸಂಹರಿಸುತ್ತಾರೆ. ಹೀಗೆ ಮಕ್ಕಳನ್ನು ಹುಟ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ ಮತ್ತೆ ಭೂಮಿಗೆ ಮರಳಿ ಬಾರದೆ ಕೈಲಾಸಕ್ಕೆ ಹೋಗುವುದು ಆ ಮಕ್ಕಳಿಗೆ ಬೇಸರವನ್ನು ಉಂಟು ಮಾಡುತ್ತದೆ. ತಮ್ಮ ತಾಯಿ ತಮ್ಮಿಂದ ದೂರಹೋಗುವುದನ್ನು ತಡೆಯುವಂತೆ ಶ್ರೀ ಕೃಷ್ಣನ ಮೊರೆ ಹೋಗುತ್ತಾರೆ. ಆಗ ಶ್ರೀ ಕೃಷ್ಣನು ಆ ವೀರಕುಮಾರರಿಗೆ ತಮ್ಮ ತಾಯಿಯನ್ನು ಹೋಗದಂತೆ ತಡೆಯಲು ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ (ಇದನ್ನು ಕರಗ ಹಬ್ಬದಲ್ಲಿ ‘ಅಲಗು ಸೇವೆ’ ಎನ್ನುತ್ತಾರೆ) ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು ಎಂದು ಅಲವತ್ತು ಮಾಡಿಕೊಳ್ಳಲು ತಿಳಿಸುತ್ತಾನೆ. ವೀರಕುಮಾರರು ಶ್ರೀಕೃಷ್ಣನ ಆಣತಿಯನ್ನು ಚಾಚೂ ತಪ್ಪದೇ ಪಾಲಿಸಿದ್ದನ್ನು ನೋಡಿದ ದ್ರೌಪದಿಗೆ ಮರುಕವಾಗಿ ಪ್ರತಿ ವರುಷವೂ ತಾನು ಭೂಮಿಗೆ ಬಂದು ತನ್ನ ಮಕ್ಕಳೊಂದಿಗೆ ಇರುವುದಾಗಿ ಭಾಷೆ(ಮಾತು) ನೀಡುತ್ತಾಳೆ. ಹಾಗೆ ದೌಪದಿಯು ತನ್ನ ಮಕ್ಕಳಿಗೆ ಆಣೆ ಮಾಡಿದ ದಿನವೇ ಕರಗ ಹಬ್ಬದ ದಿನವಾಗಿದ್ದು, ಆ ಸಂದರ್ಭದ ನೆನಪಿಗೆಗಾಗಿಯೇ ಕರಗ ಮಹೋತ್ಸವ ನಡೆಯುತ್ತದೆ ಎಂಬ ಪ್ರತೀತಿ ಇದೆ.

ಇದಲ್ಲದೇ ಮತ್ತೊಂದು ಐತಿಹ್ಯವಿದ್ದು, ದ್ವಾಪರ ಯುಗದಲ್ಲಿ, ತನ್ನ ಸ್ವಯಂವರದ ಸಮಯದಲ್ಲಿ ಸರ್ವಾಲಂಕಾರ ಭೂಷಿತೆಯಾದ ದ್ರೌಪದಿಯು ಮಂಗಳ ಕಲಶವನ್ನು ಹಿಡಿದು ಸ್ವಯಂವರ ಮಂಟಪವನ್ನು ಪ್ರವೇಶಿಸುತ್ತಾಳೆ. ಆ ಸ್ವಯಂವರದಲ್ಲಿ ಕೆಳಗೆ ಪಾತ್ರೆಯಲ್ಲಿದ್ದ ಎಣ್ಣೆಯಲ್ಲಿ ಮೀನ ಪ್ರತಿಬಿಂಬವನ್ನು ನೋಡಿಕೊಂಡು ತನ್ನ ಬಾಣದಿಂದ ಮತ್ಸ್ಯವನ್ನು ಅರ್ಜುನನು ಭೇದಿಸಿದಾಗ, ಕುಂತಿದೇವಿಯ ಅಭಿಲಾಷೆಯಂತೆ ದೌಪದಿಯು ಉಳಿದ ನಾಲ್ವರು ಪಾಂಡವ ಸಹೋದರರೊಂದಿಗೆ ಶಾಸ್ತ್ರೋಸ್ತವಾಗಿ ವಿವಾಹವಾಗಿ ಪಾಂಚಾಲಿ ಎಂಬ ಬಿರುದನ್ನು ಪಡೆಯುತ್ತಾಳೆ. ಹೀಗೆ ತನಗೆ ವಿವಾಹವಾದ ಸಂತೋಷದಲ್ಲಿ ಆಕೆ ತನ್ನ ಕೈಯಲಿದ್ದ ಕಲಶವನ್ನು ಶಿರದಲ್ಲಿ ಧರಿಸಿದಳಂತೆ. ಹಾಗೆ ಧರಿಸಿದ ಕಳಸವೇ ಕರಗವಾಯಿತು ಎಂಬ ನಂಬಿಕೆಯೂ ಸ್ಥಳೀಯ ಭಕ್ತಾದಿಗಳಿಗೆ ಇದೆ.

karaga3ಪ್ರತೀ ವರ್ಷ ಚೈತ್ರ ಮಾಸದ ಹುಣ್ಣಿಮೆಯಂದು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯ ಬಳಿಯ ಧರ್ಮರಾಜ ದೇವಸ್ಥಾನದಲ್ಲಿ ಬಹಳ ಅದ್ದೂರಿಯಿಂದ ಅದ್ದೂರಿಯಿಂದ ಆಚರಿಸಲ್ಪಡುತ್ತದೆ. ಕರಗ ಉತ್ಸವದ ಕೇಂದ್ರ ಬಿಂದುಗಳೇ ತಿಗಳ ಸಮುದಾಯವಾಗಿದ್ದು ಇವರನ್ನು ವಹ್ನಿಕುಲ ಕ್ಷತ್ರಿಯರು ಎಂದೂ ಕರೆಯಲಾಗುತ್ತದೆ. ಕ್ಷತ್ರಿಯ ಎಂಬ ಹೆಸರಿಗೆ ಅನ್ವರ್ಥದಂತೆಯೇ ಈ ಜನರು ಬಲಾಢ್ಯರಾಗಿದ್ದ ಕಾರಣ, ಹಿಂದಿನ ರಾಜರ ಆಳ್ವಿಕೆಯಲ್ಲಿ ಸೇನೆಯಲ್ಲಿ ಕೆಲಸ ಮಾಡುತ್ತಾ, ಯುದ್ಧಗಳಲ್ಲಿ ತಮ್ಮ ರಾಜ್ಯಗಳ ಪರವಾಗಿ ಹೋರಾಟವನ್ನು ನಡೆಸುತ್ತಿದ್ದದ್ದಲ್ಲದೇ, ಯುದ್ಧವಿಲ್ಲದ ಬಿಡುವಿನ ಸಮಯದಲ್ಲಿ ಕೃಷಿ , ಹೈನುಗಾರಿಕೆ ಮತ್ತು ತೋಟಗಾರಿಕೆ ಮಾಡುತ್ತಿದ್ದವರು, ಕ್ರಮೇಣ ಯುದ್ಧಗಳೆಲ್ಲವೂ ಕಡಿಮೆಆದ ನಂತರ ಕೃಷಿಯೇ ಅವರ ಕುಲ ಕಸುಬಾಗುತ್ತದೆ.

karaga6ಮೇಲೆ ತಿಳಿಸಿದ ದ್ರೌಪತಿಯ ದೃಷ್ಟಾಂತದಲ್ಲಿ ದ್ರೌಪದಿಯಿಂದ ಸೃಷ್ಟಿ ಆದ ವೀರ ಕುಮಾರರೇ ಮಂದೆ ತಿಗಳ ಸಮುದಾಯವಾಗಿ ಬೆಳೆದರು ಎನ್ನುವ ಪ್ರತೀತಿಯಿದೆ. ತಿಗಳರು ಎಂದರೆ ತಿ ಕುಲದವರು. ತಿ ಎಂದರೆ ಸಂಸ್ಕೃತದಲ್ಲಿ ಬೆಂಕಿ ಎಂದು ಅರ್ಥ. ತಮಿಳು ಭಾಷೆಯಲ್ಲಿಯೂ ಬೆಂಕಿ ಪೊಟ್ಟಣಕ್ಕೆ ತಿಪೆಟ್ಟಿ ಎಂದೇ ಕರೆಯಲಾಗುತ್ತದೆ ಅದೇ ರೀತಿ ಇವರು ತ್ರಿಶೂಲವನ್ನು ಪೂಜೆ ಮಾಡುತ್ತಾರಲ್ಲದೇ, ಯುದ್ದದ ಹೋರಾಟದ ಸಮಯದಲ್ಲೇ ಅದೇ ತ್ರಿಶೂಲವನ್ನು ಹಿಡಿದು ಕಾದಾಟ ನಡೆಸುತ್ತಿದ್ದ ಕಾರಣ, ಅದು ಕ್ರಮೇಣ ತಿಗಳರು ಎಂದಾಗಿರಬಹುದು ಎಂದೂ ಸಹಾ ನಂಬಲಾಗಿದೆ. ತಿಗಳರಲ್ಲಿ ಪ್ರಮುಖವಾಗಿ ಮೂರು ಪಂಗಡಗಳಿದ್ದು, ವಹ್ನಿಕುಲ ಕ್ಷತ್ರಿಯರು, ಅಗ್ನಿಕುಲ ಕ್ಷತ್ರಿಯರು ಮತ್ತು ಶಂಭುಕುಲ ಕ್ಷತ್ರಿಯರು ಎಂಬುದಾಗಿದೆ. ವಹ್ನಿಕುಲ ಕ್ಷತ್ರಿಯರೇ ಬೆಂಗಳೂರಿನ ಕರಗದ ರೂವಾರಿಗಳು. ಈ ಪಂಗಡದವರನ್ನು ತಮಿಳುನಾಡು ಮತ್ತು ಪಾಂಡಿಚೇರಿಯ ಭಾಗದಲ್ಲಿ ವಣ್ಣೇರ್, ವಣ್ಣಿಯಾರ್ ಎಂದೂ ಕರೆಯಲಾಗುತ್ತದೆ. ಇನ್ನು ಅಗ್ನಿಕುಲ ಕ್ಷತ್ರಿಯರು ಮಾಗಡಿ ಮತ್ತು ತುಮಕೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಇನ್ನು ಶಂಭುಕುಲ ಕ್ಷತ್ರಿಯರು ಇಲ್ಲಿಂದ ತಮಿಳುನಾಡಿನ ಕಡೆಗೆ ವಲಸೆ ಹೋಗಿ ನೆಲೆಸಿದ್ದಾರೆ.

ವಹ್ನಿಕುಲ ಕ್ಷತ್ರಿಯರು ಬೆಂಗಳೂರಿನಲ್ಲಿ ನೆಲೆಸಿದ ಹಿಂದಿಯೂ ಮತ್ತೊಂದು ಪೌರಾಣಿಕ ಕಥೆಯಿದೆ. ತನ್ನ ಮಕ್ಕಳಾದ ವೀರಕುಮಾರರನ್ನು ಕಾಣಲು ಪ್ರತಿವರ್ಷವೂ ಬರುತ್ತೇನೆ ಎಂದು ಆಣೆ ಮಾಡಿದ ದೌಪತಿಯು ಸ್ವರ್ಗಕ್ಕೆ ಹೋಗುವ ಮುನ್ನಾ ಆ ವೀರಕುಮಾರರಿಗೆ ಅಭಿಮನ್ಯುವಿನ ಮಗ ಜನಮೇಜಯನ ಬಳಿ ಆಶ್ರಯ ಪಡೆಯುವಂತೆ ಆದೇಶಿಸುತ್ತಾಳೆ. ದ್ರೌಪತಿಯ ಆಣತಿಯ ಮೇರೆಗೆ ಆ ವೀರುಕುಮಾರರು ಜನಮೇಜಯನ ಬಳಿ ಬಂದು ಆಶ್ರಯ ಪಡೆದು ಆತನ ಸೈನ್ಯಕ್ಕೆ ಸೇರಿಕೊಳ್ಳುತ್ತಾರೆ. ಅಂದಿನ ವನ್ನೇರು ಘಟ್ಟವೇ ಇಂದಿನ ಬನ್ನೇರುಘಟ್ಟ ಎಂದು ನಂಬಲಾಗಿದೆ. ಅದರ ಕುರುಹು ಆಗಿ ಇಂದೂ ಸಹಾ ಆ ಬನ್ನೇರುಘಟ್ಟದಲ್ಲಿ ಏಳು ಸುತ್ತಿನ ಕೋಟೆ ಮಾದರಿಯಲ್ಲಿ ಪ್ರಾಕಾರವನ್ನು ಕಾಣಬಹುದಾಗಿದೆ. ಆ ಕೋಟೆ ಬಳಿ ಇದ್ದ ಸರೋವರದಲ್ಲಿ ಸ್ನಾನ ಮಾಡಿದರೆ ನಾನಾ ಕಾಯಿಲೆಗಳು ವಾಸಿ ಆಗುತ್ತವೆ ಎಂಬ ನಂಬಿಕೆ ಇದ್ದ ಕಾರಣ, ವಿವಿಧ ಕಾಯಿಲೆಗಳಿಂದ ನರಳುತ್ತಿದ್ದ ಜನಮೇಜಯನು ಆ ವನ್ನೇರುಘಟ್ಟದ ಸರೋವರದಲ್ಲಿ ಸ್ನಾನ ಮಾಡಿದ ನಂತರ ಆತನ ಕಾಯಿಲೆಗಳು ವಾಸಿ ಆಯಿತಂತೆ. ಆಗ ಆತನು ತನ್ನ ಜೊತೆಗಿದ್ದ ವೀರುಕಮಾರರಿಗೆ ನೀವು ಇಲ್ಲೇಯೇ ಇದ್ದು, ಇಲ್ಲಿನ ಭೂಸಂರಕ್ಷಣೆ, ಸ್ತ್ರೀ ಮತ್ತು ಗೋವುಗಳ ರಕ್ಷಣೆ ಮಾಡಿ ಎಂದು ಆದೇಶಿಸಿದನಂತೆ. ಹಾಗಾಗಿ ವೀರುಕುಮಾರರು ವನ್ನೇರುಘಟ್ಟದಲ್ಲೇ ನೆಲೆ ನಿಂತ ವೀರಕುಮಾರರು ವಹ್ನಿಕುಲ ಕ್ಷತ್ರೀಯರು ಎಂಬ ಪಂಗಡವಾಗಿ ಬೆಳೆದು ಕಾಲ ಕ್ರಮೇಣ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಅದರಲ್ಲಿ ಹೆಚ್ಚಿನವರು ಸಂಪಗಿರಾಮ ನಗರದ ಕೆರೆಯ ಸುತ್ತಲೇ ನೆಲಸಿದ ಕಾರಣ ಆ ಪ್ರದೇಶ ತಿಗಳರ ಪೇಟೆ ಎಂದು ಹೆಸರಾಗಿದ್ದಲ್ಲದೇ ಅಲ್ಲೊಂದು ಭವ್ಯವಾದ ಧರ್ಮರಾಯಸ್ವಾಮಿ ದೇವಾಲಯವನ್ನು ಕಟ್ಟಿ ಪ್ರತಿವರ್ಷ ತಮ್ಮ ತಾಯಿ ದ್ರೌಪತಿಯ ಕರಗ ಮಹೋತ್ಸವವನ್ನು ಆಚರಿಸುವ ರೂಡಿಗೆ ಬಂದಿತು ಎಂಬುದು ಸ್ಥಳೀಯರ ನಂಬಿಕೆಯಾಗಿದೆ.

karaga2ಇನ್ನು ಕರಗ ಹೊರುವ ಪೂಜಾರಿ ಮತ್ತು ವೀರ ಕುಮಾರರು ಕರಗದ ಹಿಂದಿನ 11 ದಿನಗಳ ಕಾಲ ಕಠಿಣ ವ್ರತಾಚರಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಧೂಮಪಾನ, ಮದ್ಯ, ಮಾಂಸಾಹಾರ ಸೇವನೆ ಮತ್ತು ಸ್ರೀಯರ ಸಂಪರ್ಕದಿಂದ ದೂರ ಇರುತ್ತಾರೆ. ಕರಗದ ದಿನ, ಕರಗವನ್ನು ಹೊರುವವರು ಬಹಳ ಬಹಳ ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪೂಜಿಸಿ ಹೂವಿನ ಕರಗವನ್ನು ತನ್ನ ತಲೆಯ ಮೇಲೆ ಹೊತ್ತರೆ ಇನ್ನು ಕತ್ತಿ ಹಿಡಿದ ವೀರ ಕುಮಾರರು ಗೋಂವಿದಾ ಗೋವಿಂದಾ ಎಂದು ಗೋವಿಂದನ ನಾಮಸ್ಮರಣೆ ಮಾಡುತ್ತಾ ಅಲಗು ಸೇವೆಯನ್ನು ಸಲ್ಲಿಸುತ್ತಾ ನಾದಸ್ವರ ಮತ್ತು ತಮಟೆಯ ಸದ್ದಿನೊಂದಿಗೆ ಧರ್ಮರಾಯನ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ನಂತರ ಇಡೀ ರಾತ್ರಿ ಮಾರುಕಟ್ಟೆಯ ಸುತ್ತಮುತ್ತಲಿನ ಬಹುತೇಕ ದೇವಸ್ಥಾನ ಮತ್ತು ದರ್ಗಗಳ ಬಳಿ ಹೋಗಿ ಪೂಜೆಯನ್ನು ಸ್ವೀಕರಿ ಬೆಳಗಿನ ಹೊತ್ತಿಗೆ ಮತ್ತೆ ಧರ್ಮರಾಯನ ದೇವಾಲಯಕ್ಕೆ ಹಿಂದಿರುಗುದರೊಂದಿಗೆ ಕರಗದ ಆಚರಣೆ ಸಂಪನ್ನವಾಗುತ್ತದೆ.

karaga5 ಈ ಕರಗದ ಹಿಂದೆ ಸುತ್ತಮುತ್ತಲಿನ ಬಹುತೇಕ ದೇವಾಲಯಗಳ ನೂರಾರು ಉತ್ಸವ ಮೂರ್ತಿಗಳು ಕರಗದ ಹಿಂದೆ ಬರುತ್ತಿದ್ದದ್ದಲ್ಲದೇ, ಜನರ ಮನರಂಜನೆಗಾಗಿ ಆ ಉತ್ಸವದೊಂದಿಗೆ ಸಾಗುತ್ತಿದ್ದ ಕೀಲುಕುದುರೆ, ವೀರಗಾಸೆ ಕುಣಿತಗಾರರು, ಬೆದರುಗೊಂಬೆ, ತಾಳ ಮದ್ದಳೆ, ತಮಟೆಗಳ ಗತ್ತಿನೊಂದಿಗೆ ಸಾಗುವ ಮೆರವಣಿಗೆಯನ್ನು ನೋಡುವುದಕ್ಕಾಗಿದೇ ಲಕ್ಷಾಂತರ ಜನರು ದೇಶವಿದೇಶಗಳಿಂದ ಕೃಷ್ಣರಾಜಾ ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶಕ್ಕೆ ಆಗಮಿಸುತ್ತಿದ್ದರು. ದೇವಾಲಯದ ಸುತ್ತಮುತ್ತಲಿನ ಪ್ರಮುಖ ಬೀದಿಗಳಲ್ಲಿ, ಕತ್ತಿ ಹಿಡಿದ ವೀರಕುಮಾರರು ಗೋವಿಂದಾ ಗೋವಿಂದಾ ಎಂಬ ಘೋಷಣೆಯೊಂದಿಗೆ ನರ್ತಿಸುತ್ತಾ ರಾತ್ರಿ ಇಡೀ ಸಂಭ್ರಮದಿಂದ ಸಾಗುವ ಬೀದಿಗಳಲ್ಲಿನ ಮನೆಯವರು ತಮ್ಮ ಮನೆಗಳ ಮುಂದೆ ಸಾರಿಸಿ ಗುಡಿಸಿ ಭವ್ಯವಾದ ರಂಗೋಲಿಗಳನ್ನು ಇಟ್ಟು ಕರಗ ಬರುತ್ತಿದ್ದಂತೆಯೇ ಭಕ್ತಿಯಿಂದ ಹಣ್ಣು ಕಾಯಿ ನೈವೇದ್ಯ ಮಾಡಿ ಆರತಿ ಬೆಳಗಿ ಕರಗ ಹೊತ್ತವರ ಕೈಯಿಂದ ಪ್ರಸಾದ ರೂಪದಲ್ಲಿ ನಿಂಬೇಹಣ್ಣು ಇಲ್ಲವೇ ಮಲ್ಲಿಗೆಯ ಹೂವನ್ನು ಪಡೆದು ಪರಮ ಪಾವನರಾಗುವುದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು.

karaga4ದೇವಾಲಯಗಳು ಕೇವಲ ದೇವರ ಆಲಯವಲ್ಲದೇ ಅದು ನಮ್ಮ ಸನಾತನ ಧರ್ಮದ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ ಅಂತಹ ಶ್ರದ್ಧಾ ಕೇಂದ್ರಗಳಲ್ಲಿ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಅಗ್ಗಿಂದ್ದಾಗೆ ನಡೆಯುತ್ತಿದ್ದಾಗಲೇ ನಮ್ಮ ಇಂದಿನ ಜನಾಂಗಕ್ಕೆ ನಮ್ಮ ಧರ್ಮ, ಕರ್ಮ ಮತ್ತು ನಮ್ಮ ದೇವರುಗಳ ಬಗ್ಗೆ ಅರ್ಥೈಸಿಕೊಂಡು ನಮ್ಮ ಆಚಾರ ವಿಚಾರಗಳ ಬಗ್ಗೆ ಶ್ರದ್ಧಾ ಭಕ್ತಿ ಹೆಚ್ಚಾಗುತ್ತದೆ ಅಲ್ವೇ

ಏನಂತೀರೀ?
ನಿಮ್ಮವನೇ ಉಮಾಸುತ

ಕರಗ ಮಹೋತ್ಸವದ ಆಚರಣೆಯ ಸಣ್ಣ ಝಲಕ್ ಇದೋ ನಿಮಗಾಗಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s