ಮುಂದಿನ ತಿಂಗಳು ಮೇ 10 ರಂದು ನಡೆಯಲಿರುವ ರಾಜ್ಯವಿಧಾನ ಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆಯೇ, ಟಿಕೆಟ್ ನಿರೀಕ್ಷೆಯಲ್ಲಿದ್ದ ಅನೇಕರು ಮಿಶ್ರ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಟಿಕೆಟ್ ಸಿಕ್ಕವರು ಚುನಾವಣೆಯನ್ನೇ ಗೆದ್ದಂತೆ ಸಂಭ್ರಮಿಸುತ್ತಿದ್ದರೆ, ಇನ್ನು ಟಿಕೆಟ್ ಸಿಗದವರು ಆಕಾಶವೇ ಕಳಚಿ ತಮ್ಮ ಮೇಲೆ ಬಿದ್ದು ತಮ್ಮ ಜೀವನವೇ ಕಳೆದು ಹೋಯಿತೇನೋ ಎನ್ನುವಂತೆ ಸಂಕಟ ಪಡುತ್ತಿದ್ದಾರೆ.
1947ರಲ್ಲಿ ಸ್ವಾತ್ರಂತ್ಯ ಬಂದಾಗ 565 ವಂಶಾಡಳಿತ ರಾಜರ ಆಳ್ವಿಕೆಯಲ್ಲಿದ್ದ ಸಣ್ಣ ಸಣ್ಣ ರಾಜ್ಯಗಳನ್ನು ಒಗ್ಗೂಡಿಸಿ ಒಕ್ಕೂಟ ರಾಷ್ಟ್ರವನ್ನಾಗಿಸಿ, ಪ್ರಜೆಗಳಿಂದ ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರವಾಗಿಯೇ ಸರ್ಕಾರ ಇರಲೆಂದು ಪ್ರಜಾಪ್ರಭುತ್ವವನ್ನು ಜಾರಿಗೆ ತಂದರೂ ಕಳೆದ 70+ ವರ್ಷಗಳಲ್ಲಿ ಈ ದೇಶದ ಕಂಡಿದ್ದು ಪ್ರಜಾಪ್ರಭುತ್ವದ ಹೆಸರಿನ ವಂಶಪಾರಂಪರ್ಯವನ್ನೇ ಎನ್ನುವುದು ಬಹಳ ದುಃಖಕರವದ ಸಂಗತಿಯಾಗಿದೆ. ಆರಂಭದಲ್ಲಿ ವಂಶಪಾರಂಪರ್ಯ ಅಧಿಕಾರ ಮತ್ತು ಅಡಳಿತ ಕೇವಲ ಒಂದು ಪಕ್ಷಕ್ಕಷೇ ಸೀಮಿತವಾಗಿದ್ದದ್ದು ನಂತರದ ದಿನಗಳಲ್ಲಿ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಹಾಸು ಹೊಕ್ಕಾಗಿ ಹೋಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ. ಇನ್ನು ಬಹುತೇಕ ಪ್ರಾದೇಶಿಕ ಪಕ್ಷಗಳಂತೂ ಕೇವಲ ಕುಂಟಂಬದಿಂದ ಕುಟುಂಬಕ್ಕಾಗಿ ಮತ್ತು ಕುಟುಂಬಕ್ಕೋಸ್ಕರವಾಗಿಯೇ ಎಂದು ಪ್ರಜಾಪ್ರಭುತವಕ್ಕೇ ಹೊಸಾ ಭಾಷ್ಯವನ್ನು ಬರೆಯುವಂತಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.
ನಿಜ. ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಸಾಕಷ್ಟು ದುಡಿದಿದ್ದವರು ರಾಜಕೀಯವಾಗಿ ಇನ್ನೂ ಹೆಚ್ಚಿನ ಸ್ಥಾನ ಮಾನ ಗಳಿಸಲು ಅಸೆ ಪಟ್ಟಿದ್ದವರಿಗೆ ಅಧಿಕಾರದ ಆಸೆ ಇರುವುದು ತಪ್ಪಲ್ಲಾ. ರಾಜ್ಯದಲ್ಲಿ ಇರುವುದೇ 224 ವಿಧಾನ ಸಭಾ ಕ್ಷೇತ್ರ ಮತ್ತು 28 ಲೋಕಸಭಾ ಕ್ಷೇತ್ರಗಳು ಇರುವ ಕಾರಣ ಎಲ್ಲರಿಗೂ ಅವಕಾಶವನ್ನು ಒದಗಿಸಲು ಸಾಧ್ಯವಾಗದು. ಹಾಗಾಗಿ ಎಲ್ಲರೂ ಸರಿಸಮನಾಗಿ ಹಂಚಿಕೊಂಡು ಹೋಗುಬೇಕಾದದ್ದು ಎಲ್ಲರ ಧರ್ಮ ಮತ್ತು ಕರ್ಮವಾಗಿದೆ. ಸಾಯುವವರೆಗೂ ಒಬ್ಬನೇ ಅಧಿಕಾರವನ್ನು ಸವಿದು ಅವನ ಮರಣಾನಂತರ ಅವನ ಹೆಂಡತಿಗೆ, ಅವನ ಮಗನಿಗೆ ಇಲ್ಲವೇ ಅವನ ಹತ್ತಿರದ ಸಂಬಂಧಿಗೇ ಅಧಿಕಾರ ಕೊಡ ಬೇಕು ಎನ್ನುವುದಾರೆ ಪ್ರಜಾಪ್ರಭುತ್ವ ಎಲ್ಲಿಂದ ಬಂತು?
ರಾಜಕೀಯ ಪಕ್ಷಗಳು ರಚನೆ ಆಗಿರುವುದೇ ಸಿದ್ಧಾಂತಗಳ ಮೇಲೆ. ಪ್ರತಿಯೊಂದು ತಾಜಕೀಯ ಪಕ್ಷಗಳಿಗೂ ಅದರದ್ದೇ ಆದ ತತ್ವ ಸಿದ್ಧಾಂತಗಳು ಇದ್ದು ಅದಕ್ಕೆ ಅನುಸಾರವಾಗಿ ನೀತಿ ಮತ್ತು ನಿಯಮಗಳು ನಿರ್ಮಿಸಿಕೊಂಡಿರುತ್ತವೆ ಮತ್ತು ಈ ಎಲ್ಲಾ ರಾಜಕೀಯ ನಾಯಕರುಗಳು ಮತ್ತು ಕಾರ್ಯಕರ್ತರು ಅದಕ್ಕೆ ಒಪ್ಪಿಕೊಂಡೇ ಪಕ್ಷಕ್ಕೆ ಸೇರಿಕೊಂಡಿರುತ್ತಾರೆ. ಪಕ್ಷಕ್ಕಾಗಿ ಸಮಾನವಾಗಿ ದುಡಿಯುತ್ತಾರೆ. ಪಕ್ಷವನ್ನು ಅಧಿಕಾರಕ್ಕೆ ತಂದ ನಂತರ ತಮ್ಮ ಕನಸು ಸಾಕಾರವಾಗುತ್ತದೆ ಎಂದು ಭಾವಿಸುತ್ತಾರೆ. ಹಾಗಾಗಿ ಎಲ್ಲರೂ ಪಕ್ಷವನ್ನು ತಮ್ಮ ತಾಯಿಯ ಸಮಾನ ಎಂದು ಹೋಲಿಸುವುದಲ್ಲದೇ ಪಕ್ಷದ ಸಹ ಸದಸ್ಯರನ್ನು ತಮ್ಮ ಸಹೋದರ ಸಹೋದರಿಯನ್ನಾಗಿ ಭಾವಿಸುತ್ತಾರೆ. ಹೀಗೆ ಸಹೋದರತ್ವದಲ್ಲಿ ಸಹಬಾಳ್ವೆಯಿಂದ ನಡೆದುಕೊಂಡು ಹೋಗಬೇಕಾಗಿದ್ದವರು ತಮಗೆ ಚುನಾವಣೆಯಲ್ಲಿ ಸ್ಪರ್ಥಿಸಲು ಪಕ್ಷದಿಂದ ಟಿಕೆಟ್ ಸಿಗಲಿಲ್ಲಾ ಎಂದ ತಕ್ಶಣ ಎಲ್ಲವನ್ನೂ ಮರೆದು ಪಕ್ಷದ ವಿರುದ್ಧವೇ ತಿರುಗಿ ಬೀಳುವುದು ಎಂತಹ ಸಂಸ್ಕಾರ?
ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತಿದ್ದು ಅವರೆಂದೂ ಸಹಾ ಅಧಿಕಾರಕ್ಕಾಗಿ ಆಸೆ ಪಡುವುದಿಲ್ಲ ಮತ್ತು ಅಧಿಕಾರಕ್ಕಾಗಿ ಬೀದಿ ಬೀದಿಯಲ್ಲಿ ಪರಸ್ಪರ ಕಿತ್ತಾಡುವುದಿಲ್ಲ. ತಮ್ಮ ನಾಯಕರ ವಿರುದ್ಧ ತಿರುಗಿ ಬೀಳುವುದಿಲ್ಲ. ದುರಾದೃಶ್ಟವಷಾತ್ ಇಂದು ಬಹುತೇಕರು ಸ್ವಾರ್ಥಿಗಳಾಗಿ ಕೂಪಮಂಡೂಕದ ತರಹ ಪಕ್ಷದ ಸಾಮರ್ಥ್ಯವೆಲ್ಲವೂ ತಮ್ಮಿಂದಲೇ ಎಂದು ತಪ್ಪು ತಿಳಿದಿರುತ್ತಾರೆ. ವಿಶಾಲವಾದ ಸಮುದ್ರದಲ್ಲಿ ಪ್ರತಿಯೊದು ಹನಿ ಹನಿ ನೀರಿಗೂ ಬೆಲೆ ಇರುತ್ತದೆ. ಪ್ರತಿಯೊಂದು ಹನಿ ನೀರು ಸೇರಿ ವಿಶಾಲವಾದ ಸಾಗರವಾಗಿರುತ್ತದೆ. ಆದರೆ ತಾನೇ ಶಕ್ತಿಶಾಲಿ. ತನ್ನಿಂದಲೇ ಸಾಗರಕ್ಕೇ ಈ ಪರಿಯಾದ ಶಕ್ತಿ ಬಂದಿದೆ ಎಂದು ಸಾಗರದಿಂದ ಹನಿಯೊಂದು ಹೊರಬಂದು ಕೂಗಾಡುತ್ತಿದ್ದಂತೆಯೇ ಸೂರ್ಯನ ಕಿರಣವನ್ನು ತಾಳಲಾಗದೇ ಒಣಗಿ ಆವಿಯಾಗಿಬಿಡುತ್ತದೆ. ಇದನ್ನೇ ಮುತ್ತಿನಂತ ಮಾತೊಂದು ಗೊತ್ತೇನಮ್ಮ ಎಂಬ ಹಾಡಿನಲ್ಲಿ ಸೂಚ್ಯವಾಗಿ ಕೋಟೆಕಟ್ಟಿ ಮೆರೆದವರೆಲ್ಲ ಏನಾದರೂ, ಇನ್ನು ಮೀಸೆ ತಿರುಗಿ ಕುಣಿದವರೆಲ್ಲ ಮಣ್ಣಾದರು ಇನ್ನು ನೀ ನ್ಯಾವ ಲೆಕ್ಕಕ್ಕುಂಟು ಎಂದು ಸಾಲಿನಲ್ಲಿ ತಿಳಿಸಿದ್ದಾರೆ.
ಚುನಾವಣಾ ಸಮಯದಲ್ಲಿ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ಇಲ್ಲವೇ ಪಕ್ಷದ ವಿರುದ್ಧವೇ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವವರ ಸಂಖ್ಯೆ ಕೇವಲ ಬರಳಷ್ಟಿದೆ ಅಷ್ಟೇ. ಪಕ್ಷವನ್ನು ಸೋಲಿಸುತ್ತೇವೆ ಎಂದು ಹೋಗಿ ಕಡೆಗೆ ತಾವೇ ಸೋತು ಸುಣ್ಣವಾಗಿ ಹೋಗಿ ಮರಳಿ ಪಕ್ಷಕ್ಕೆ ಹಿಂದಿರುಗಿದ ಘಟಾನುಘಟಿ ನಾಯಕರುಗಳ ಸಂಖ್ಯೆ ಅಪಾರವಾಗಿದೆ.
ನಮಗೆ ಪಕ್ಷ ಮತ್ತು ಸಿದ್ಧಾಂತವೇ ಮುಖ್ಯವಾಗುತ್ತದೆ ಹೊರತು ವ್ಯಕ್ತಿಯಲ್ಲಾ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಪರಸ್ಪರ ಕೈ ಕೈ ಹಿಡಿದು ಎಲ್ಲರ ಮುಂದೆ ಪೋಟೋಗಳಿಗೆ ಫೋಸ್ ಕೊಟ್ಟು ನಂತರ ಪಕ್ಷದ ನಾಯಕರುಗಳು, ಹಿರಿಯರು ಮತ್ತು ಹಿತೈಷಿಗಳ ಮಾತುಗಳಿಗೆ ಕೊಂಚವೂ ಗೌರವ ಕೊಡದೆ ಪ್ರಕ್ಷವನ್ನು ಬಿಟ್ಟು ಹೋಗುತ್ತೇವೆ ಎಂದು ಬ್ಲಾಕ್ ಮೇಲ್ ಮಾಡುವುದನ್ನು ಯಾರೂ ಸಹಾ ಒಪ್ಪಿಕೊಳ್ಳಲಾಗದು. ಈ ರೀತಿಯ ಮನಸ್ಥಿಯವರು ಖಂಡಿತವಾಗಿಯೂ ಸಮಾಜ ಸೇವಕರಾಗುವುದಕ್ಕೆ ಆರ್ಹತೆಯನ್ನೇ ಹೊಂದಿರದೇ ಕೇವಲ ಸ್ವಾರ್ಥಿಗಳಾಗಿ ಕಾಣುತ್ತಾರೆ.
ಹತ್ತಾರು ವರ್ಷಗಳಷ್ಟು ಕಾಲ ಪಕ್ಷದಿಂದ ಎಲ್ಲವನ್ನೂ ಪಡೆದು ಈ ಬಾರಿ ಬೇರೆಯವರಿಗೆ ಟಿಕೆಟ್ ಸಿಕ್ಕಾಗಿ ಪಕ್ಷವನ್ನು ತೊರೆದು ಹೋಗುವವರೇ, ನಿಮ್ಮನ್ನು ಅಧಿಕಾರಕ್ಕೆ ತರುವ ಸಲುವಾಗಿ ಯಾವುದೇ ಅಧಿಕಾರದ ಆಸೆಗಳಿಲ್ಲದೇ, ನಿಮ್ಮಿಂದ ಯಾವುದೇ ರೀತಿಯ ಎಂಜಿಲು ಕಾಸಿಗೆ ಆಸೆ ಪಡದೇ ಕಳೆದ ೩೦-೪೦ ವರ್ಷಗಳ ಕಾಲ ನಿಮಗಾಗಿ ಕಾಯಾವಾಚಾ ಮನಸಾ ಹಗಲು ರಾತ್ರಿ ಪ್ರಚಾರ ಮಾಡಿ, ತಮ್ಮ ಸ್ವಂತ ಖರ್ಚಿನಲ್ಲಿ ಪೋಸ್ಟರ್, ಬ್ಯಾನರ್ ಮಾದಿಸಿ ಅದೆಲ್ಲವನ್ನೂ ಕಟ್ಟಿ ನಿಮ್ಮ ವಿರುದ್ಧ ಯಾರೇ ತಪ್ಪಾಗಿ ಮಾತನಾಡಿದರೂ ಅಂತಹವರೆಲ್ಲರ ವಿರೋಧ ಕಟ್ಟಿಕೊಂಡು ನಿಮ್ಮ ಪರವಾಗಿ ಇರುವವರನ್ನು ಹೀಗೆ ಏಕಾಏಕಿ ಬಿಟ್ಟು ಹೋಗಲು ಹೇಗೆ ಮನಸ್ಸಾಗುತ್ತದೆ?
ಟಿಕೆಟ್ ಸಿಕ್ಕಿದ ಹುಡುಗ ನಮ್ಮ ಮುಂದೇ ಬಚ್ಚಾ. ನಾವು ಬೆಳೆಸಿದ ಹುಡುಗ ಎಂದು ಹೇಳುತ್ತೀರಲ್ಲಾ, ಯಾಕೇ? ಅವರೂ ಸಹಾ ರಾಜಕೀಯವಾಗಿ ಬೆಳೆಯಬಾರದೇ? ಎಷ್ಟು ದಿನಾ ಅಂತಾ ನಿಮ್ಮ ಬಳಿ ಗುಲಾಮರಾಗಿರಲು ಸಾಧ್ಯ? ಮಾನವ ಆಹಾರ ಸರಪಳಿಯಲ್ಲಿ ಒಬ್ಬರನ್ನು ತಿಂದೇ ಮತ್ತೊಬ್ಬರು ಬದುವುದು ಮತ್ತು ಬಲಾಢ್ಯರಾಗುವುದು. ಹಿಂದೆ ನಿಮಗೆ ಟಿಕೆಟ್ ಸಿಕ್ಕಾಗಲೂ ನಿಮ್ಮ ಜೊತೆ ಮತ್ತೊಬ್ಬ ಆಕಾಂಕ್ಷಿ ಇದ್ದನಲ್ಲವೇ? ಅಂದು ಅವನಿಗೆ ಟಿಕೆಟ್ ಕೈತಪ್ಪಿ ನಿಮಗೆ ಸಿಕ್ಕಿತ್ತು ಇಂದು ನಿಮ್ಮ ಕೈ ತಪ್ಪಿ ಮತ್ತೊಬ್ಬರಿಗೆ ಸಿಕ್ಕಿದೆ ಅಷ್ಟೇ.
ಪಕ್ಢ ಮತ್ತು ಸಿದ್ಧಾಂತಕ್ಕೆ ನಿಷ್ಟನಾಗಿರುವ ವ್ಯಕ್ತಿಗಳು ಹೇಗಿರುತ್ತಾರೆ ಮತ್ತು ಅಧಿಕಾರ ಸಿಕ್ಕಾಗ ಸ್ವಾರ್ಥಿಗಳಾಗಿ ಹೇಗೆ ಬದಲಾಗುತ್ತಾರೆ ಎಂಬುದಕ್ಕೆ ಕೆಲವೊಂದು ಉದಾಹಣೆಗಳನ್ನು ನೋಡೋಣ.
ಲಾಲಾಜಿ ಮೆಂಡನ್ ಅವಿಭಜಿತ ದಕ್ಷಿಣ ಕನ್ನಡದ ಕಾಪು ಕ್ಷೇತ್ರದ ಹಿರಿಯ ನಾಯಕರು. ಪಕ್ಷ ಅವರಿಗೆ ಮೂರ್ನಾಲ್ಕು ಬಾರಿ ಟಿಕೆಟ್ ನೀಡಿತ್ತು. ಎರಡು ಬಾರಿ ಅವರು ಗೆದ್ದು ಶಾಸಕರಾಗಿದ್ದರು. ಈ ಬಾರಿ ಅವರ ಬದಲಾಗಿ ಮತ್ತೊಬ್ಬರಿಗೆ ಟಿಕೆಟ್ ಸಿಕ್ಕಾಗ ಅವರು ಆಡಿದ ಮಾತುಗಳು ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರಿಗೆ ಮಾದರಿಯಾಗುತ್ತದೆ. ಪಕ್ಷದ ಸೇವೆ ಮಾಡೋದಿಕ್ಕೆ ಮೂರು ಬಾರಿ ಅವಕಾಶ ಸಿಕ್ಕಿದೆ. ಕಳೆದ ಬಾರಿ ನಾನು ಜಯಗಳಿಸಲು ಗುರ್ಮೆಯವರು ಬಹಳ ಶ್ರಮ ಪಟ್ಟಿದ್ದಾರೆ.ೀ ಬಾರಿ ಅವರಿಗೆ ಪಕ್ಷದ ಟಿಕೆಟ್ ಸಿಕ್ಕಿದೆ. ಹಾಗಾಗಿ ಯಾವುದೇ ರೀತಿಯ ಬೇಸರ ಇಲ್ಲವೇ ಬಂಡಾಯವಿಲ್ಲದೇ, ಗುರ್ಮೆಯವರ ಪರ ಕೆಲಸ ಮಾಡಿ ಅವರನ್ನು ಗೆಲ್ಲಿಸುವುದು ನನ್ನ ಜವಾವ್ಧಾರಿ ಎಂದಿದ್ದಾರೆ.
ಅದೇ ರೀತಿಯಲ್ಲಿ ಉಡುಪಿಯ ಶಾಸಕರಾದ ರಘುಪತಿ ಭಟ್ ಅವರಿಗೂ ಎರಡು ಬಾರಿ ಟಿಕೆಟ್ ಸಿಕ್ಕಿ ಶಾಸಕರಾಗಿದ್ದಾರೆ ಈ ಬಾರಿ ಅವರಿಗೆ ಟಿಕೆಟ್ ತಪ್ಪಿ ಹೋದಾಗ ಆರಂಭದಲ್ಲಿ ನನಗೆ ತುಂಬಾ ಬೇಸರವಾಗಿದೆ. ಬೇರೆ ಬೇರೆ ಪಕ್ಷಗಳ ಕರೆ ಬರುತ್ತಿದೆ ಎಂದೆಲ್ಲಾ ಹೇಳಿದರೂ ನಂತರ ಕೆಲವೇ ಗಂಟೆಗಳಲ್ಲಿ ಅವರ ತಪ್ಪಿನ ಅರಿವಾಗಿ. ನಾನು ಪಕ್ಷವನ್ನು ಬಿಡುವುದಿಲ್ಲ ಮತ್ತು ಯಾವ ಪಕ್ಷಕ್ಕೂ ಹೋಗುವುದಿಲ್ಲ. ನನ್ನ ನಿಷ್ಟೆ ಏನಿದ್ದರೂ ಪಕ್ಢ ಮತ್ತು ಸಿದ್ಧಾಂತಕ್ಕಷ್ಟೇ ಎಂದು ಹೇಳಿದ್ದಲ್ಲದೇ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಸಾವಿನ ಬಳಿಕ ನನ್ನ ಶವದ ಮೇಲೆ ಪಕ್ಷದ ಬಾವುಟವೇ ಇರಬೇಕು ಎನ್ನುವುದೇ ನನ್ನ ಕಡೆಯ ಆಸೆ ಎಂದು ಹೇಳಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.
ಇನ್ನು ಅಂಗಾರ ಎಂಬ ಸುಳ್ಯದ ಶಾಸಕರು ಮೊತ್ತ ಮೊದಲಿಗೆ ಸ್ಪರ್ಥಿಸಿದ್ದಾಗ ಕಡು ಬಡವರಾಗಿ ಊರಿನಲ್ಲಿ ಕೂಲಿ ಮಾಡುತ್ತಿದ್ದವರನ್ನು ಪಕ್ಷ ಕರೆದು ಟಿಕೆಟ್ ಕೊಟ್ಟು ತನ್ನದೇ ಖರ್ಚಿನಲ್ಲಿ ಚುನಾವಣೆ ಎದುರಿಸಿದರೂ, ಸೋತ ನಂತರ ಅವರನ್ನು ಪಕ್ಷದ ಪೂರ್ಣಾವಧಿ ಕಾರ್ಯಕರ್ತರನ್ನಾಗಿ ಮಾಡಿಕೊಂಡು ಅವರ ಕುಟುಂಬದ ನಿರ್ವಹಣೆಯನ್ನೆಲ್ಲಾ ಪಕ್ಷವೇ ಹೊತ್ತು ಕೊಂಡು ಅವರಿಗೆ ಪಕ್ಷದ ಪರವಾಗಿ ಕೆಲಸ ಮಾಡಿಕೊಂಡಿರಲು ಹೇಳಿತು. ಮುಂಚಿನ ಚುನಾವಣೆಯವರೆಗೂ ಊರು ಊರು ಅಲೆದು ಪಕ್ಷದ ಪರವಾಗಿ ಪ್ರಚಾರ ಮಾಡಿದ ಕಾರಣ, ಸತತವಾಗಿ ಆರು ಬಾರಿ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಈ ದೇಶದಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಚುನಾವಣೆ ಗೆದ್ದ ಹೆಗ್ಗಳಿಕೆಯೂ ಅಂಗಾರದ್ದೇ. ಚುನವಣಾ ಖರ್ಚಿಗಂದು ಪಕ್ಷ ನೀಡಿದ್ದ ಹಣದಲ್ಲಿ ಇನ್ನೂ ಉಳಿದಿದೆ ಎಂದು ಪಕ್ಷಕ್ಕೆ ಹಿಂದಿರುಗಿಸಿದಂತಹ ವ್ಯಕ್ತಿತ್ವ ಅಂಗರದ್ದು. ಅಂತಹದ್ದೇ ಜನಾರೆ ಅಧಿಕಾರ ಸಿಕ್ಕ ನಂತರ ಹೇಗೆ ಬದಲಾಗುತ್ತಾರೆ ನೋಡಿ. ವ್ಯಕ್ತಿಗೆ ಪ್ರಾಮಾಣಿಕರಿಗೆ ಇದು ಕಾಲವಲ್ಲ.. ನನಗೆ ನೋವಾಗಿದೆ.. ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತಿದ್ದೇನೆ ಹಾಗೂ ಈಗ ಘೋಷಣೆಯಾದ ಅಭ್ಯರ್ಥಿಯ ಗೆಲುವಿಗೆ ಪಕ್ಷವೇ ಶ್ರಮಿಸಲಿ. ಎಂದು ಕೈ ತೊಳೆದುಕೊಂದಿರುವುದು ನಿಜಕ್ಕೂ ಬೇಸರದ ಸಂಗತಿ ಇಂತಹ ಸ್ವಾರ್ಥ ವ್ಯಕ್ತಿಗಳ ಪರವಾಗಿ ನಿರ್ಸ್ವಾರ್ಥವಾಗಿ ನಾವುಗಳೇಕೆ ತಮ್ಮ ಪರಿಶ್ರಮವನ್ನು ಹಾಕಬೇಕು ಎಂದು ಕಾರ್ಯಕರ್ತರು ಮತ್ತು ಮತದಾರದು ಯೋಚಿಸಿದರೆ ಇಂತಹವರು ಗೆಲ್ಲುತ್ತಾರೆಯೇ?
ಇನ್ನು ಅಥಣಿಯ ಲಕ್ಷಣ ಸವದಿಯದ್ದು ಮತ್ತೊಂದು ರೋಚಕ ಕತೆ. ದೂರದ ಅಥಣಿಯಿಂದ 2004, 2008 ಮತ್ತು 2013ರಲ್ಲಿ ಆರಿಸಿ ಬಂದು ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದಗೌಡ ಸರ್ಕಾರದಲ್ಲಿ ಸಹಕಾರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ವಿಧಾನಸಭೆಯ ಮದ್ಯದಲ್ಲಿ ನೀಲಿಚಿತ್ರವನ್ನು ನೋಡಿದ್ದ ಕಾರಣ ಪಕ್ಷಕ್ಕೂ ಮುಜುಗೊರ ತರಿಸಿದ್ದಲ್ಲದೇ, ಸಚಿವಸ್ಥಾನವನ್ನೂ ಕಳೆದು ಕೊಂಡು 2018ರ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿಯ ವಿರುದ್ಧ ಸೋಲನ್ನು ಅನುಭವಿಸಿದರೂ ಪಕ್ಷ ಅವರನ್ನು ಯಡೆಯೂರಪ್ಪನವರ ಸರ್ಕಾರದಲ್ಲಿ 2019ರಲ್ಲಿ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿ ಸಾರಿಗೆ ಸಚಿವರನ್ನಾಗಿ ಮಾಡಿದ್ದಲ್ಲದೇ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅಥಣಿ ಕ್ಷೇತ್ರವನ್ನು ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಿದ ಮಹೇಶ್ ಕುಮಟಳ್ಳಿಯವರಿಗೆ ಟಿಕೆಟ್ ಕೊಟ್ಟಾಗ, ಸವದಿಯವರು ತಾವು ಸೋತಾಗಲೂ ಪಕ್ಷ ತಮಗೆ ಮಾಡಿದ್ದೆಲ್ಲವನ್ನೂ ಮರೆತು ಕ್ಷಣಾರ್ಧದಲ್ಲಿ ಪಕ್ಷವನ್ನು ಬಿಟ್ಟು ಹೋರ ಹೋದದ್ದು ಎಷ್ಟು ಸರಿ?
ಇದು ಕೇವಲ ಒಂದು ಪಕ್ಷಕ್ಕಷ್ಟೇ ಸೀಮಿತವಾಗಿಲ್ಲ. ದೇವೇಗೌಡರ ಮಾನಸ ಪುತ್ರ ಎಂದೇ ಖ್ಯಾತಿಯಾಗಿದ್ದ ವೈ.ಎಸ್.ವಿ.ದತ್ತಾ ದೇವೇಗೌಡರು ಅಧಿಕಾರದಲ್ಲಿ ಇರಲೀ ಬಿಡಲಿ ಸದಾಕಾಲವೂ ಅವರ ಜೊತೆಯಲ್ಲೇ ಇದ್ದವರು. ಹಾಗಾಗಿಯೇ ಅವರನ್ನು ಒಮ್ಮೆ ವಿಧಾನ ಪರಿಷತ್ತಿಗೆ ಮತ್ತು ಒಮ್ಮೆ ವಿಧಾನ ಸಭೆಗೆ ಪಕ್ಷದ ವತಿಯಿಂದ ಆಯ್ಕೆ ಮಾಡಿಕಳುಹಿಸಿದ್ದರು. ಇತ್ತೀಚೆಗೆ ಕುಮಾರಸ್ವಾಮಿ ಮತ್ತು ದತ್ತಾರವರ ನಡುವೆ ಭಿನ್ನಾಭಿಪ್ರಾಯ ಬಂದು ಪಕ್ಷವನ್ನು ತೊರೆದು ಟಿಕೆಟ್ ಸಿಗುತ್ತದೆ ಎಂಬ ಭರವಸೆಯಲ್ಲಿ ಮತ್ತೊಂದು ಪಕ್ಷವನ್ನು ಸೇರಿಕೊಂಡರು. ಪಾಪಿ ಸಾಯಲು ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು ಎನ್ನುವಂತೆ ಆ ಪಕ್ಷದವರು ಟಿಕೆಟ್ ಕೊಡದೇ ಹೋದಾಗ ಹಳೇ ಗಂಡನ ಪಾದವೇ ಗತಿ ಎಂದು ದೇವೇಗೌಡರ ಬಳಿ ಪಕ್ಷಕ್ಕೆ ಸೇರಿಸಿಕೊಳ್ಳಲು ದಂಬಾಲು ಬೀಳುವ ದೈನೇಸಿ ಸ್ಥಿತಿ ಬೇಕಿತ್ತಾ?
ಎಲ್ಲರ ಮನೆಯ ದೋಸೆ ತೂತಾದರೇ, ಸಿದ್ಧಾಂತವೇ ಇಲ್ಲದೇ ಇದ್ದರೂ ದೇಶದ ಅತ್ಯಂತ ಹಳೆಯ ಪಕ್ಷದ ಕಾವಲಿಯೇ ತೂತು ಎನ್ನುವಂತೆ ಆ ಪಕ್ಷದಲ್ಲೂ ಇಂತಹ ಹತ್ತಾರು ಪ್ರಕರಣಗಳಿದ್ದು ಕೊಚ್ಚೆಗೆ ಕಲ್ಲು ಹಾರಿಸಿ ಮೈ ಮೇಲೆ ಸಿಡಿಸಿಕೊಳ್ಳುವ ಬದಲು ಸುಮ್ಮನಾಗುವುದೇ ಜಾಣತನ ಎನ್ನುವಂತ ಅದರ ಬಗ್ಗೆ ಮಾತನಾಡದಿರುವುದೇ ಒಳಿತು.
ಸಾಮಾನ್ಯ ಕಾರ್ಯಕರ್ತನಾಗಿ ಟಿಕೆಟ್ ಗಿಟ್ಟಿಸಿಕೊಂಡು ಅಪ್ಪಾ ಅಮ್ಮಾ ದಯವಿಟ್ಟು ಮತ ಭಿಕ್ಷೆಯನ್ನು ನೀಡಿ ನನ್ನನ್ನು ಆಯ್ಕೆ ಮಾಡಿ. ಸದಾಕಾಲವೂ ನಿಮ್ಮ ಸೇವೆಯಲ್ಲಿ ಇರುತ್ತೇನೆ ಎನ್ನುವವರು, ಗೆದ್ದು ಅಧಿಕಾರಕ್ಕೆ ಬಂದ ನಂತರ ಅವರ ವ್ಯಕ್ತಿತ್ವವೇ ಬದಲಾಗಿ ಬಿಡುತ್ತದೆ. ಪ್ರಜೆ ಮತ್ತು ಪಕ್ಷಗಳಿಂದ ತಾವು ಎನ್ನುವುದನ್ನು ಮರೆತು ತಮ್ಮಿಂದಲೇ ಪಕ್ಷ ಮತ್ತು ಪ್ರಜೆ ಎಂದು ಭಾವಿಸುವವರು ಖಂಡಿತವಾಗಿಯೂ ನಂಬಿಕೆಗೆ ಅರ್ಹರಲ್ಲ. ವ್ಯಕ್ತಿ ಮತ್ತು ಅಧಿಕಾರ ಎಂದಿಗೂ ಶಾಶ್ವತವಲ್ಲಾ. ಹಾಗಾಗಿ ಅಧಿಕಾರದಲ್ಲಿ ಕಡೆಯವರೆಗೂ ಇದ್ದು ಎಲ್ಲಾ ರೀತಿಯ ಅಧಿಕಾರವನ್ನೂ ಸವಿದು ನಂತರ ಮತ್ತೆ ಅಧಿಕಾರಕ್ಕೆ ಆರು ಕೊಟ್ಟರೆ ಅತ್ತೇ ಕಡೇ, ಮೂರು ಕೊಟ್ಟರೆ ಸೊಸೇ ಕಡೇ ಎಂಡು ಮತ್ತೊಂದು ಪಕ್ಷಕ್ಕೆ ಹಾರುವ ಪಕ್ಷಾಂತರಿಗಳನ್ನು ನಿಸ್ಸಂಕೋಚವಾಗಿ ಸೋಲಿಸುವ ಮೂಲಕ ಅವರ ತಪ್ಪನ್ನು ಅವರಿಗೆ ತಿಳಿಸುವ ಜವಾಬ್ಧಾರಿ ನಮ್ಮ ನಿಮ್ಮಿಲ್ಲರ ಮೇಲೆಯೇ ಇದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಖಂಡಿತಾ Sir
Ticket ಸಿಗಲಿಲ್ಲವೆಂದು ಪಕ್ಷಾಂತರ (ಯಾವುದೇ ಪಕ್ಷದವರಾಗಲಿ) ಆಗಿಂದಾಗ್ಗೆ ತಿರಸ್ಕರಿಸಬೇಕು.
LikeLiked by 1 person