ಭಾರತೀಯ ವಿಜ್ಞಾನ ಸಂಸ್ಥೆ (IISc.)

ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಒಂದು ದೇಶ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಧೃಢತೆಯನ್ನು ಹೊಂದಿರಬೇಕಾದಲ್ಲಿ ಶಿಕ್ಷಣ ಮತ್ತು ರಕ್ಷಣಾ ವಿಭಾಗದಲ್ಲಿ ಸ್ವಾವಲಂಭಿ ಆಗಿರಬೇಕು. ಸುಮಾರು 130 ವರ್ಷಗಳ ಹಿಂದೆ ಜಪಾನ್ ದೇಶದ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಭಾರತದ ಹಿರಿಯ ಕೈಗಾರಿಕೋದ್ಯಮಿ ಮತ್ತು ಈ ನಾಡು ಕಂಡ ಶ್ರೇಷ್ಥ ಸನ್ಯಾಸಿಗಳು ಲೋಕಾಭಿರಾಮವಾಗಿ ನಮ್ಮ ದೇಶದ ಬಗ್ಗೆ ಮಾತನಾಡುವಾಗ ಹೊಳೆದ ಆಲೋಚನೆಯಿಂದಾಗಿಯೇ ಇಂದು ಬೆಂಗಳೂರಿನಲ್ಲಿ ವಿಜ್ಞಾನ, ಎಂಜಿನಿಯರಿಂಗ್, ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗಾಗಿ ಸಾರ್ವಜನಿಕ, ಡೀಮ್ಡ್, ಸಂಶೋಧನಾ ವಿಶ್ವವಿದ್ಯಾಲಯವಾಗಿರುವ ಭಾರತೀಯ ವಿಜ್ಞಾನ ಸಂಸ್ಥೆ (IISc.) ಆರಂಭವಾದ ಕುತೂಹಲಕಾರಿ ವಿಚಾರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

tata11893 ರಲ್ಲಿ, ಜಪಾನ್ ದೇಶದ ಯೊಕೊಹಾಮಾದಿಂದ ವ್ಯಾಂಕೋವರ್‌ಗೆ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಇಬ್ಬರು ಶ್ರೇಷ್ಠ ಭಾರತೀಯರು ಸಹಪ್ರಯಾಣಿಕರಾಗಿ ಭೇಟಿಯಾಗುತ್ತಾರೆ. ಅದರಲ್ಲಿ ಒಬ್ಬರು ಸನ್ಯಾಸಿಗಳಾಗಿದ್ದರೆ, ಮತ್ತೊಬ್ಬರು, ಅಂದಿನ ಕಾಲದಲ್ಲೇ ಹೆಸರುವಾಸಿಯಾಗಿದ್ದ ಕೈಗಾರಿಕೋದ್ಯಮಿಯಾಗಿರುತ್ತಾರೆ. ಅವರಿಬ್ಬರೂ ಲೋಕಾಭಿರಾಮವಾಗಿ ಮಾತನಾಡುತ್ತಾ ತಾವು ಸನಾತನ ಧರ್ಮದ ನಂಬಿಕೆ ಮತ್ತು ಸಂಪ್ರದಾಯಗಳ ಬಗ್ಗೆ ತಪ್ಪಾಗಿ ತಿಳಿದುಕೊಂಡಿರುವ ಪಾಶ್ಚಿಮಾತ್ಯರಿಗೆ ಸರಿಯಾದ ವಿಷಯವನ್ನು ತಿಳಿಸುವ ಪ್ರಯತ್ನಕ್ಕಾಗಿ ಪ್ರವಾಸದಲ್ಲಿ ಇರುವುದಾಗಿ ಸನ್ಯಾಸಿಗಳು ತಿಳಿಸಿದರೆ, ತಾವು ಉಕ್ಕಿನ ಉದ್ಯಮವನ್ನು ನಿರ್ಮಿಸುವ ಮತ್ತು ಭಾರತವನ್ನು ಪ್ರಬಲ ಕೈಗಾರಿಕಾ ರಾಷ್ಟ್ರವನ್ನಾಗಿ ಮಾಡಲು ಅಗತ್ಯವಿರುವ ಉಪಕರಣಗಳು ಮತ್ತು ತಂತ್ರಜ್ಞಾನದದ ಹುಡುಕಾಟದಲ್ಲಿ ಈ ದೇಶಕ್ಕೆ ಬಂದಿದ್ದೇನೆ ಎಂದು ಆ ಕೈಗಾರಿಕೋದ್ಯಮಿಗಳು ತಿಳಿಸುತ್ತಾರೆ. ಆಗ ಆ ಸನ್ಯಾಸಿಗಳು ಇನ್ನೂ ಎಷ್ಟು ದಿವಸಗಳ ಕಾಲ ಹೀಗೆ ಮತ್ತೊಬ್ಬರೆ ಮೇಲೆ ಅವಲಂಭಿತರಾಗಿರುತ್ತೀರೀ? ಪಶ್ಚಿಮ ದೇಶಗಳ ವೈಜ್ಞಾನಿಕ ಮತ್ತು ತಾಂತ್ರಿಕ ಸಾಧನೆಗಳ ಹಿಂದೆ ಅತ್ಯುನ್ನತವಾದ ವಿಶ್ವವಿದ್ಯಾಲಯಗಳು ಮತ್ತು ಪ್ರಯೋಗಾಲಯಗಳ ಕೊಡುಗೆ ಸಾಕಷ್ಟಿದೆ. ಹಾಗಾಗಿ ಕೈಗಾರಿಕೆಗಳನ್ನು ಸ್ಥಾಪಿಸುವುದರ ಜೊತೆಯೆಲ್ಲೇ ಭಾರತದಲ್ಲೇ ತಂತ್ರಜ್ಞಾನದ ಅಭಿವೃದ್ಧಿ ಮತ್ತು ತರಬೇತಿ ನೀಡುವ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಸ್ವಾವಲಂಭಿಗಳಾಗಬಹುದಲ್ಲವೇ? ಎಂಬ ಸಲಹೆಯನ್ನು ನೀಡುತ್ತಾರೆ.

chicago_Speechಹಾಗೆ ಮಾತನಾಡಿದ ಅವರಿಬ್ಬರೂ ಪರಸ್ಪರ ತಮ್ಮ ಹೆಸರನ್ನು ಹೇಳಿಕೊಂಡಿರಲಿಲ್ಲ ಮತ್ತು ತಮ್ಮ ನಿಗಧಿತ ಸ್ಥಳ ಬಂದಾಗ ಒಬ್ಬರಿಗೊಬ್ಬರು ವಿದಾಯ ಹೇಳಿ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಕೊಂಡರು. ಸೆಪ್ಟೆಂಬರ್ 11, 1893 ರಂದು ಸ್ವಾಮಿ ವಿವೇಕಾನಂದರು ಚಿಕಾಗೋದ ವಿಶ್ವ ಧರ್ಮ ಸಮ್ಮೇಳನದಲ್ಲಿ ಮಾಡಿದ ದಿಕ್ಸೂಚಿ ಭಾಷಣ ಇಡೀ ವಿಶ್ವಕ್ಕೆಲ್ಲಾ ಹರಡಿದಾಗ, ಅಂದು ತಾವು ಭೇಟಿ ಮಾಡಿದ ಸನ್ಯಾಸಿಗಳೇ ಸ್ವಾಮಿ ವಿವೇಕಾನಂದರು ಎಂದು ತಿಳಿದ ಆ ಕೈಗಾರಿಕೋದ್ಯಮಿ, ಸುಮಾರು ನಾಲ್ಕು ವರ್ಷಗಳ ಪಾಶ್ಚಿಮಾತ್ಯ ದೇಶದ ಸುದೀರ್ಘ ಪಯಣದ ನಂತರ ಭಾರತಕ್ಕೆ ಬಂದ ತಕ್ಷಣವೇ ಅವರಿಗೆ ತಾಂತ್ರಿಕ ಶಿಕ್ಷಣ ನೀಡುವಂತಹ ವಿದ್ಯಾಲಯವನ್ನು ಸ್ಥಾಪಿಸಲು ಹಣವನ್ನು ಹೂಡಲು ತಾನು ನಿರ್ಧರಿಸಿದ್ದರೂ ಅದಕ್ಕೂ ಸೂಕ್ತವಾದ ಬೆಂಬಲ ಸ್ಥಳೀಯ ರಾಜಮಹಾರಾಜರುಗಳಿಂದ ಸಿಗುತ್ತಿಲ್ಲಾ ! ಎಂದು ಬೇಸರ ವ್ಯಕ್ತಪಡಿಸಿದಾಗ, ಕೂಡಲೇ ಅದಕ್ಕೆ ಪ್ರತ್ಯುತ್ತವರನ್ನು ಬರೆದ ಸ್ವಾಮೀಜಿಗಳು ಇಂತಹ ಹೊಸಾ ಆವಿಷ್ಕಾರಗಳಿಗೆ ಸದಾಕಾಲವೂ ಬೆಂಬಲವನ್ನು ನೀಡುವಂತಹ ಮನಸ್ಥಿತಿ ಇರುವ ಮೈಸೂರು ಸಂಸ್ಥಾನದ ರಾಜರನ್ನು ಕೂಡಲೇ ಸಂಪರ್ಕಿಸಲು ಸೂಚಿಸುತ್ತಾರೆ.

kempmmmanniಹಾಗೆ ಸ್ವಾಮಿ ವಿವೇಕಾನಂದರ ಅಪ್ಪಣೆಯ ಮೇರೆಗೆ ಮೈಸೂರಿಗೆ ಬಂದವರೇ ಅಂದಿನ ಕಾಲದಲ್ಲೇ ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ಶ್ರೀ ಜಮ್ಶೆಡ್ಜಿ ನುಸ್ಸರ್ವಾಂಜಿ ಟಾಟಾ. ಅಮೇರಿಕಾ ಪ್ರವಾಸಕ್ಕೆ ಮೊದಲು ಪರಿವ್ರಾಜಕರಾಗಿ ಮೈಸೂರಿಗೂ ಭೇಟಿ ನೀಡಿ ಮೈಸೂರು ಸಂಸ್ಥಾನದ ಮೇಲೆ ಭಾರೀ ಪ್ರಭಾವ ಬೀರಿದ್ದ ವಿವೇಕಾನಂದರ ಅಪ್ಪಣೆಯಾಗಿದೆ ಎಂದು ತಿಳಿದ ಕೂಡಲೇ, ಮಹಾರಾಣಿ ಕೆಂಪನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಮತ್ತು ಆಗಿನ್ನೂ ಅಪ್ರಾಪ್ತರಾಗಿದ್ದ ಅವರ ಮಗ ಕೃಷ್ಣರಾಜ ಒಡೆಯರ್ ಅವರು ಟಾಟಾರವರಿಗೆ ಸಂತೋಷದಿಂದ ಬೆಂಗಳೂರಿನ ಯಶವಂತಪುರದ ಬಳಿ ಸುಮಾರು 371 ಎಕರೆ 16 ಗುಂಟೆ ಭೂಮಿ ಮತ್ತು ಆರಂಭಿಕ ಬಂಡವಾಳವನ್ನು ಕೊಡುವುದಲ್ಲದೇ ಟಾಟಾ ಅವರ ಮಹತ್ವಾಕಾಂಕ್ಷೆಯ ಆ ಯೋಜನೆಗೆ ಕೆಲ ವರ್ಷಗಳ ಕಾಲ ವಾರ್ಷಿಕ 50,000 ಸಾವಿರಗಳ ಕೊಡುಗೆಯನ್ನು ನೀಡಲು ಒಪ್ಪಿಕೊಳ್ಳುತ್ತಾರೆ.

nivedataದುರಾದೃಷ್ಟವಷಾತ್ ಜುಲೈ 4, 1902ರಲ್ಲಿ ವಿವೇಕಾನಂದರು ಸ್ವರ್ಗಸ್ಥರಾದರೆ, 1904ರ ಬೇಸಿಗೆಯಲ್ಲಿ ಟಾಟಾರವರು ಅಕಾಲಿಕವಾಗಿ ಮರಣ ಹೊಂದಿದ ನಂತರ ಈ ಮಹತ್ತರ ಯೋಜನೆಗೆ ಅಡ್ಡಿ ಆತಂಕಗಳು ಎದುರಾಗುತ್ತದೆ. ಆದರೆ, ಸ್ವಾಮಿಗಳ ಶ್ರೇಷ್ಠ ಶಿಷ್ಯೆಯಾದ ಸೋದರಿ ನಿವೇದಿತಾ ಅವರು ಸ್ವಾಮಿ ವಿವೇಕಾನಂದರು ಮತ್ತು ಮಹಾನ್ ದೇಶಭಕ್ತ-ಕೈಗಾರಿಕೋದ್ಯಮಿಯಾದ ಟಾಟಾರವರ ಈ ಯೋಜನೆಯನ್ನು ಕಾರ್ಯಗತಗೊಳಿಸಲೇ ಬೇಕೆಂಬ ಧೃಢ ಸಂಕಲ್ಪ ತೊಟ್ಟು ಅದರ ಕುರಿತಾಗಿ ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದು ಜನ ಜಾಗೃತಗೊಳಿಸಿದ್ದಲ್ಲದೇ, ಅಂದಿನ ಬ್ರಿಟಿಷ್ ಸರ್ಕಾರಕ್ಕು ಮೇಲಿಂದ ಮೇಲೆ ಪತ್ರ ಬರೆದು ಒತ್ತಡ ಹಾಕುತ್ತಿದ್ದ ಪರಿಣಾಮವಾಗಿ ಹಲವಾರು ಅಡೆತಡೆಗಳನ್ನು ನಿವಾರಿಸಿದ ನಂತರ, ಅಂತಿಮವಾಗಿ ಬೆಂಗಳೂರಿನಲ್ಲಿ 27 ಮೇ 1909 ರಂದು ಭಾರತೀಯ ವಿಜ್ಞಾನ ಸಂಸ್ಥೆ (IISc)ಯನ್ನು ಸ್ಥಾಪಿಸಲು ಅಂದಿನ ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿತಲ್ಲದೇ, 1911 ರಲ್ಲಿ ರಸಾಯನಶಾಸ್ತ್ರಜ್ಞರಾಗಿದ್ದ ಮೋರಿಸ್ ಟ್ರಾವರ್ಸ್ ಸಂಸ್ಥೆಯ ನಿರ್ದೇಶಕರರಾಗಿ ಸುಮಾರು ಇಪ್ಪತ್ತನಾಲ್ಕು ವಿದ್ಯಾರ್ಥಿಗಳೊಂದಿಗೆ ಆರಂಭವಾಗುತ್ತದೆ.

vish_iiscಅರಂಭದಲ್ಲಿ ಅನ್ವಯಿಕ ರಸಾಯನಶಾಸ್ತ್ರ ಮತ್ತು ಎಲೆಕ್ಟ್ರಿಕಲ್ ಟೆಕ್ನಾಲಜಿ ಎಂಬ ಎರಡು ಶೈಕ್ಷಣಿಕ ವಿಭಾಗಗಳೊಂದಿಗೆ ಪ್ರಾರಂಭವಾದ ನಂತರ, ಸಂಸ್ಥೆಯ ಕೌನ್ಸಿಲ್‌ಗೆ ನಾಮನಿರ್ದೇಶನಗೊಂಡ ಮೈಸೂರಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರ ಒತ್ತಾಯದ ಮೇರೆಗೆ ಅಲ್ಲಿನ ಸಂಶೋಧಕರು ದೇಶಕ್ಕೆ ತತ್ ಕ್ಷಣದ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡು ಅದರ ಕುರಿತಾಗಿ ಅಧ್ಯಯನಗಳನ್ನು ನಡೆಸಲು ಮುಂದಾಗುತ್ತಾರೆ. ಈ ರೀತಿಯ ಸಂಶೋಧನೆಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ ಆರು ಕಾರ್ಖಾನೆಗಳ ಸ್ಥಾಪನೆಗೆ ಕಾರಣವಾಗುತ್ತದೆ. ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಸಾಬೂನು ಮತ್ತು ಶ್ರೀಗಂಧದ ಎಣ್ಣೆ ಕಾರ್ಖಾನೆಗಳು ಇವುಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ನಂತರದ ದಿನಗಳಲ್ಲಿ ಸಂಸ್ಥೆಯು ಬಯೋಕೆಮಿಸ್ಟ್ರಿ ಮತ್ತು ಭೌತಶಾಸ್ತ್ರದಂತಹ ವಿಭಾಗಗಳನ್ನು ಸೇರಿಸಿಕೊಂಡು ಬೆಳೆಯತೊಡಗಿದಂತೆ, 1933 ರಲ್ಲಿ IIScಗೆ ಮೊದಲ ಭಾರತೀಯ ನಿರ್ದೇಶಕರಾಗಿ ನೊಬೆಲ್ ಪ್ರಶಸ್ತಿ ವಿಜೇತ ಸರ್ CV ರಾಮನ್ ಅವರು ಸೇರಿದ ನಂತರ ಸಂಸ್ಥೆಯ ವಿಸ್ತರಣಾ ಕಾರ್ಯಗಳ ಓಘ ಮತ್ತಷ್ಟು ಹೆಚ್ಚಾಗುತ್ತದೆ.

1940ರ ಎರಡನೇ ಮಹಾ ಯುದ್ದದ ಸಮಯದಲ್ಲಿ IIScಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್, ಮೆಟಲರ್ಜಿ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಂತಹ ಹೊಸ ವಿಭಾಗಗಳನ್ನು ಸೇರಿಸುವ ಮೂಲಕ ಅಲ್ಲಿನ ಸಿಬ್ಬಂದಿಗಳಿಗೆ ತರಬೇತಿ ನೀಡಿ, ಹಿಂದೂಸ್ತಾನ್ ಏರ್‌ಕ್ರಾಫ್ಟ್ ಲಿಮಿಟೆಡ್‌ನ ಸಹಕಾರದೊಂದಿಗೆ ಬ್ರಿಟಿಷ್ ಮತ್ತು ಅಮೇರಿಕನ್ ಯುದ್ಧ ವಿಮಾನಗಳನ್ನು ದುರಸ್ತಿ ಮಾಡುವ ಮೂಲಕ ಸೈನ್ಯಕ್ಕೂ ಸಹಾ ಸಂಸ್ಥೆ ಸಹಾಯ ಮಾಡುತ್ತದೆ.

dhavan1960 ರ ದಶಕ, 70 ರ ದಶಕ ಮತ್ತು 80 ರ ದಶಕದ ಆರಂಭದಲ್ಲಿ, ಸಂಸ್ಥೆಯ ನಿರ್ದೇಶಕರಾಗಿ ಬಂದ ಶ್ರೀ ಸತೀಶ್ ಧವನ್ (ಮುಂದೆ ಇಸ್ರೋವನ್ನು ಮುನ್ನಡೆಸಿದ ಪ್ರಖ್ಯಾತ ಏರೋಸ್ಪೇಸ್ ಇಂಜಿನಿಯರ್) ಅವರ ಉಸ್ತುವಾರಿಯಲ್ಲಿ, ಇನ್ಸ್ಟಿಟ್ಯೂಟ್ ಮೆಟೀರಿಯಲ್ ಸೈನ್ಸ್, ಕಂಪ್ಯೂಟರ್ ಸೈನ್ಸ್ ಮತ್ತು ಆಟೊಮೇಷನ್ ನಂತಹ ವೈವಿಧ್ಯಮಯ ಸಂಶೋಧನಾ ಕ್ಷೇತ್ರಗಳನ್ನು ಸೇರಿಸಿಕೊಂಡು ಮತ್ತಷ್ಟು ಬೆಳೆಯಿತು

ಪ್ರಸ್ತುತ ಇಪ್ಪತ್ತೊಂದನೇ ಶತಮಾನದಲ್ಲಿ, IISc ಪದವಿಪೂರ್ವ ಕಾರ್ಯಕ್ರಮವನ್ನು ಸ್ಥಾಪಿಸಿದೆ, ಮೆದುಳಿನ ಸಂಶೋಧನೆ, ನ್ಯಾನೊಸೈನ್ಸ್ ಮತ್ತು ಎಂಜಿನಿಯರಿಂಗ್, ಹೈಪರ್ಸಾನಿಕ್ಸ್ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಹಲವಾರು ಹೊಸ ವಿಭಾಗಗಳು ಮತ್ತು ಕೇಂದ್ರಗಳನ್ನು ಸ್ಥಾಪಿಸಿದ್ದಲ್ಲದೇ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1500 ಎಕರೆಯಲ್ಲಿ ಮತ್ತೊಂದು ಕ್ಯಾಂಪಸ್ ವರೆಗೂ ವಿಸ್ತರಿಸಿದೆ.

CNR_raoಭಾರತದ ಪರಮಾಣು ಕಾರ್ಯಕ್ರಮದ ಸಂಸ್ಥಾಪಕ ಹೋಮಿ ಜೆ ಭಾಭಾ, ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಸಂಸ್ಥಾಪಕ ವಿಕ್ರಮ್ ಸಾರಾಭಾಯ್, ಹವಾಮಾನಶಾಸ್ತ್ರಜ್ಞ ಅನ್ನಾ ಮಣಿ, ಜೀವರಸಾಯನಶಾಸ್ತ್ರಜ್ಞ ಮತ್ತು ಪೌಷ್ಟಿಕತಜ್ಞ ಕಮಲಾ ಸೊಹೊನಿಯಂತಹ ಹಲವಾರು ಪ್ರಸಿದ್ಧ ವಿಜ್ಞಾನಿಗಳು IISc ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರಾಗಿದ್ದಾರೆ. ಸಂಸ್ಥೆಯ ಈ ಪರಿಯಾದ ಬೆಳವಣಿಗೆಯಲ್ಲಿ ಕನ್ನಡಿಗರೇ ಆದ ವಿಜ್ಞಾನಿ ಸಿಎನ್ಆರ್ ರಾವ್ ಅವರ ಕೊಡುಗೆ ಅಪಾರವಾಗಿದ್ದ ಕಾರಣ, ಅವರ ನೆನಪಿನಲ್ಲಿಯೇ IISc ಮುಂಭಾಗದ ವೃತ್ತಕ್ಕೆ ಅವರ ಹೆಸರನ್ನೇ ಇಡುವ ಮೂಲಕ ಬಿಬಿಎಂಪಿ ಅವರಿಗೆ ಗೌರವವನ್ನು ಸಲ್ಲಿಸಿದೆ.

ghandhi_iiscಮೈಸೂರು ರಾಜಮನೆತನದ ಸದಸ್ಯರಿಂದ ಹಿಡಿದು, ರಾಣಿ ಎಲಿಜಬೆತ್ ಮತ್ತು ಇತರೇ ಬ್ರಿಟಿಷ್ ಅಧಿಕಾರಿಗಳು, ಮೋಹನ್‌ದಾಸ್ ಕರಮಚಂದ ಗಾಂಧಿಯವರು, ವಿಯೆಟ್ನಾಂನ ಹೋ ಚಿ ಮಿನ್ಹ್ ಮತ್ತು USSR ನ ನಿಕಿತಾ ಕ್ರುಶ್ಚೇವ್ ಮುಂತಾದ ರಾಷ್ಟ್ರಗಳ ಮುಖ್ಯಸ್ಥರಲ್ಲದೇ, ನೊಬೆಲ್ ಪ್ರಶಸ್ತಿ ವಿಜೇತರಾದ ಜೇಮ್ಸ್ ವ್ಯಾಟ್ಸನ್ ಮತ್ತು ಬ್ರಿಯಾನ್ ಸ್ಮಿತ್ ಸಹಾ ಸಂಸ್ಥೆಗೆ ಭೇಟಿ ನೀಡಿ ವೈಜ್ಞಾನಿಕ ಕ್ಷೇತ್ರಕ್ಕೆ IISc ಕೊಡುಗೆಯನ್ನು ಶ್ಲಾಘಿಸಿದ್ದಾರೆ. ತಾಂಜೇನಿಯಾದ ಮಂತ್ರಿ ಮತ್ತು ರಾಜತಾಂತ್ರಿಕರಾಗಿದ್ದ ಶ್ರೀ WK ಚಾಗುಲಾ ಅವರಂತಹ ಶಿಕ್ಷಣ ತಜ್ಞರು ಶ್ರೀ ರಾಜೇಂದ್ರ ಪ್ರಸಾದ್, ಪ್ರತಿಭಾ ಪಾಟೀಲ್ ರಂತಹ ರಾಷ್ಟ್ರಪತಿಗಳು, ಶ್ರೀ ಜವಾಹರಲಾಲ್ ನೆಹರು, ಶ್ರೀ ಎಚ್‌ಡಿ ದೇವೇಗೌಡ, ಶ್ರೀ ಮನಮೋಹನ್ ಸಿಂಗ್ ಮತ್ತು ಪ್ರಸ್ತುತ ಶ್ರೀ ನರೇಂದ್ರ ಮೋದಿ ಅವರಂತಹ ಪ್ರಧಾನಿಗಳೂ ಸಹಾ ಸಂಸ್ಥೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿದ್ದಾರೆ

tata_instaitute2ಎಲ್ಲಿಯ ಸ್ವಾಮೀ ವಿವೇಕಾನಂದರು ಮತ್ತು ಎಲ್ಲಿಯ ಜೆಮ್ಷೆಡ್ ಜೀ ಟಾಟಾ? ಅವರಿಬ್ಬರೂ ದೂರದ ಜಪಾನ್ ದೇಶದಲ್ಲಿ ಕಂಡ ಕನಸಿಗೆ ತನು ಮನ ಧನವನ್ನು ಧಾರೆ ಎರೆದು ಇಂದು ಇಡೀ ವಿಶ್ವವೇ ಬೆರಗಾಗುವಂತಹ ಅದ್ಭುತವಾದ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನಾಲಯವನ್ನು ಕಟ್ಟಲು ಅನುವು ಮಾಡಿಕೊಟ್ಟ ನಮ್ಮ ಮೈಸೂರು ಸಂಸ್ಥಾನದ ಅರಸರು ಮತ್ತು ಸ್ವಾಮಿಜೀ ಮತ್ತು ಟಾಟಾರವರ ಅಕಾಲಿಕ ಮರಣದ ನಂತರ ಅಂದಿನ ಬ್ರಿಟಿಶ್ ಸರ್ಕಾರಕ್ಕೆ ಮೇಲಿಂದ ಮೇಲೆ ಪತ್ರಗಳನ್ನು ಬರೆಯುತ್ತಾ, ವಿವಿಧ ಪತ್ರಿಕೆಗಲ್ಲಿ ಈ ಸಂಶೋಧನಾಯದ ಅಗತ್ಯತೆಯ ಕುರಿತಾ ಲೇಖನಗಳನ್ನು ಬರೆದು ಒತ್ತಡವನ್ನು ಹೇರಿ ಅಂತಿಮವಾಗಿ 1909 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಆರಂಭವಾಗಲು ಕಾರಣೀಭೂತರಾದ ಸಹೋದರಿ ನಿವೇದಿತಾ ಅವರ ಕೊಡುಗೆಯನ್ನು ಪ್ರತಿಯೊಬ್ಬ ಭಾರತೀಯರೂ ನೆನೆಯಲೇ ಬೇಕಾದದ್ದು ಆದ್ಯ ಕರ್ತವ್ಯವೇ ಸರಿ

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s