ಕೌದಿ, ಕವುದಿ, ಕವದಿ, ಕವಿದಿ, ಕೌಂದಿ ಇನ್ನು ಮುಂತಾದ ಹೆಸರುಗಳಲ್ಲಿ ಉತ್ತರ ಕರ್ನಾಟಕದ ಭಾಷೆಯಲ್ಲಿ ಕರೆಯಲ್ಪಟ್ಟರೆ ಇನ್ನು ಹಾಸನದ ಭಾಗದಲ್ಲಿ ಇದನ್ನೇ ದಟ್ಟ ಅಥವಾ ದಟ್ಟಾ ಎಂದು ಕರೆಯುತ್ತಾರೆ. ಹೀಗೆ ಬಿನ್ನ ಬಿನ್ನ ಹೆಸರುಗಳಿಂದ ಕರೆಸಿಕೊಂಡರೂ ಅದರ ಅರ್ಥ ಮತ್ತು ವಸ್ತುವು ಒಂದೇ ಆಗಿದ್ದು. ಬೇರೆ ಬೇರೆ ಬಟ್ಟೆಯ ತುಂಡುಗಳನ್ನು ಸೇರಿಸಿ ಅದಕ್ಕೊಂದು ಚಂದನೆಯ ರೂಪವನ್ನು ಕೊಟ್ಟು ಹೊಲಿದಿರುವ ದಪ್ಪನಾದ ಹೊದಿಕೆಯೇ ಕೌದಿ ಅಥವಾ ದಟ್ಟ.
ಸಾಮಾನ್ಯವಾಗಿ ನಮ್ಮ ಪೂರ್ವಜರು ಯಾವುದೇ ವಸ್ತುಗಳನ್ನು ಹೊರಗೆ ಬಿಸಾಡದೇ ಅದೇ ಕಸದಿಂದಲೂ ರಸವನ್ನು ತೆಗೆಯಬಲ್ಲಂತಹ ಸೃಜನಶೀಲತೆಯನ್ನು ಹೊಂದಿದ್ದರು ಎಂಬುದಕ್ಕೆ ಜ್ವಲಂತ ಉದಾಹರಣೆಯೇ ಈ ದಟ್ಟ. ಅಂದಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಹೆಂಗಸರು ಉಡುತ್ತಿದ್ದ ಹತ್ತಿಯ ಸೀರೆ ಮತ್ತು ಗಂಡಸರು ಉಡುತ್ತಿದ್ದ ಪಂಚೆಗಳು ಉಟ್ಟು ಉಟ್ಟೂ ಮಾಸಿಹೋಗುತ್ತಿದ್ದಂತೆಯೇ ಅದನ್ನು ಬಿಸಾಡಲು ಮನಸ್ಸಾಗದೇ ಅವೆಲ್ಲವನ್ನೂ ಒಂದರ ಮೇಲೊಂದು ಚಂದವಾಗಿ ಸೇರಿಸಿ ಅವುಗಳ ಸುತ್ತಲೂ ಹೊಲಿಗೆ ಹಾಕಿ ಅದರ ಮಧ್ಯದಲ್ಲೂ ಸಹಾ ಸಣ್ಣ ಸಣ್ಣದಾದ ಟಾಕವನ್ನು ಹಾಕಿ ಅದನ್ನು ಇನ್ನೂ ಹೆಚ್ಚಿಗೆ ಆಕರ್ಶಣೀಯವನ್ನಾಗಿಸುವ ಸಲುವಾಗಿ ಮಧ್ಯೆ ಮಧ್ಯೆ ಸಣ್ಣ ಸಣ್ಣ ಬಣ್ಣದ ಬಟ್ಟೆಗಳನ್ನು ಹೊಲಿದು ಚಳಿಗಾಲದಲ್ಲಿ ಬೆಚ್ಚಗೆ ಹಾಸಿಕೊಳ್ಳಲು ಇಲ್ಲವೇ ಹೊದ್ದು ಕೊಳ್ಳುವಂತಹ ದಟ್ಟವನ್ನು ತಯಾರಿಸುತ್ತಿದ್ದರು. ಈ ರೀತಿಯ ಹೊದಿಕೆಯನ್ನು ಹಚ್ಚಡ ಎಂದೂ ಕರೆಯುತ್ತಾರೆ. ಅದೇ ರೀತಿಯಲ್ಲಿ ಕೇವಲ ಮನುಷ್ಯರಿಗಲ್ಲದೇ, ದನಕರುಗಳಿಗೂ ಸಹಾ ಈ ಕೌದಿಗಳಿನ್ನು ಹೊದಿಸುತ್ತಿದ್ದ ಅದಕ್ಕೆ ಸಬರ ಎಂದೂ ಸಹಾ ಕರೆಯುತ್ತಾರೆ.
ಕೌದಿ ಎಂಬ ಪದ ಮೂಲತಃ ಕಂಥಾ ಎಂಬ ಸಂಸ್ಕೃತದಿಂದ ಪದವಾಗಿದೆ ಎಂದರೂ ತಪ್ಪಾಗದು. ಸಂಸ್ಕೃತದಲ್ಲಿ ಕಂಥಾ ಎಂದರೆ ಹರಕು ಬಟ್ಟೆ, ತುಂಡುಗಳನ್ನು ಹೊಲಿದು ತಯಾರಿಸಿದ ಬಟ್ಟೆ, ಅಂಗಿ ಅಥವಾ ಚೀಲ ಎಂಬರ್ಥ ಬರುತ್ತದೆ ಅದರಲ್ಲೂ ವಿಶೇಷವಾಗಿ ಇದು ಸನ್ಯಾಸಿಗಳು ಉಪಯೋಗಿಸುತ್ತಿದ್ದ ಜೋಳಿಗೆಯು ಇದೇ ರೀತಿಯ ಚಿಂದಿ ಬಟ್ಟೆಗಳಿಂದಲೇ ತಯಾರಾಗಿರುತ್ತಿತ್ತು ನಂತರ ಅದನ್ನೇ ಸಂಸಾರಿಗಳೂ ಸಹಾ ಉಪಯೋಗಿಸ ತೊಡಗಿದರು. ಈ ಕೌದಿಯ ಬಳಕೆಯು ಕೇವಲ ಕರ್ನಾಟಕ್ಕೆ ಮಾತ್ರವೇ ಸೀಮಿತವಾಗಿರದೇ ದಕ್ಷಿಣದ ಉಳಿದ ರಾಜ್ಯಗಳಲ್ಲಿಯೂ ಕಾಣಬಹುದಾಗಿದೆ. ಇದನ್ನೇ ತಮಿಳಿನಲ್ಲಿ ಕವಜನೈ, ಕವನ್ದಿ, ಕವನ್ದಿಗೈ ಎಂದು ಕರೆದರೆ ಮಲಯಾಳದಲ್ಲಿ ಕವಿಯನ್ ಎಂದು ಕರೆಯಲಾಗುತ್ತದೆ.
ಇದೇ ಕೌದಿ, ಇತ್ತೀಚೆಗೆ ತಾನೇ ಪದ್ಮಭೂಷಣ ವಿಜೇತೆಯಾದ ಮತ್ತು ಇನ್ಫೋಸಿಸ್ ನಂತಹ ವಿಶ್ವವಿಖ್ಯಾತ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀಮತಿ ಸುಧಾ ಮೂರ್ತಿಯವರ ಜೀವನದಲ್ಲಿ ಬಾರೀ ರೀತಿಯ ಬದಲಾವಣೆಯನ್ನು ತಂದರೆ, ವಯಕ್ತಿಕವಾಗಿ ಒಂದು ಕಾಲದಲ್ಲಿ ಇದೇ ದಟ್ಟಾ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತಲ್ಲದೇ ಅದರ ಸುಮಧುರ ನೆನಪು ಸದಾಕಾಲವೂ ಇರುತ್ತದೆ.
ನಾವೆಲ್ಲರೂ ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂದರೆ ಸಾಕು ಬೆಂಗಳೂರಿನಿಂದ ಅಜ್ಜಿ ಮತ್ತು ತಾತ ಇದ್ದ ನಮ್ಮೂರು ಬಾಳಗಂಚಿಗೆ ಹೋಗುತ್ತಿದ್ದೆವು. ಅದೇ ಸಮಯದಲ್ಲಿ ಹದಿನೈದು ದಿನಗಳ ಕಾಲ ನಮ್ಮ ಊರಿನ ಜಾತ್ರೆ ನಡೆಯುತ್ತಿದ್ದ ಕಾಲವಾದ್ದರಿಂದ ನಮ್ಮ ಎಲ್ಲಾ ಕುಟಂಬದ ಸದಸ್ಯರೂ ಸಹಾ ಊರಿಗೆ ಬರುತ್ತಿದ್ದರು. ಮಕ್ಕಳ ಸಂಖ್ಯೆಯೇ ಸುಮಾರು 15-20 ಕ್ಕೂ ಮೀರಿದಾಗ ಅಷ್ಟು ಜನರಿಗೂ ಹಾಸಲು ಮತ್ತು ಹೊದೆಯಲು ನಮ್ಮ ಅಜ್ಜಿಯವರು ಮುಂಗಡವಾಗಿಯೇ ದಟ್ಟವನ್ನು ಸಿದ್ಧ ಪಡಿಸಿಟ್ಟಿರುತ್ತಿದ್ದರು. ಈ ಮೊದಲೇ ಹೇಳಿದಂತೆ ನಮ್ಮ ಅಜ್ಜಿಯ ಹಳೆಯ ಸೀರೆ ಮತ್ತು ನಮ್ಮ ತಾತನ ಹಳೆಯ ಪಂಜೆ ಮತ್ತು ಶಲ್ಯವನ್ನು ಚಂದವಾಗಿ ಸೇರಿಸಿ ದಪ್ಪನಾದ, ಹೊದ್ದು ಕೊಂಂಡರೆ ಮೈ ಪೂರ್ತಿ ಬೆಚ್ಚಗಾಗುವ ದಟ್ತ ಅದಾಗಿರುತ್ತಿತ್ತು. ನಮ್ಮ ಅಜ್ಜಿ ದಟ್ಟಾ ಹೊಲಿಯುವ ಮುನ್ನಾ ಎಷ್ಟೇ ಚೆನ್ನಾಗಿ ಸೀರೆ ಮತ್ತು ಪಂಚೆಗಳನ್ನು ಒಗೆದಿದ್ದರೂ ಸಹಾ, ನಮ್ಮ ತಾತನವರ ನಶ್ಯದ ವಾಸನೆ ಹೋಗಿರದೇ ಅದೊಂದು ರೀತಿಯ ವಿಶೇಷವಾದ ಪರಿಮಳವನ್ನು ಸೂಸುತ್ತಿದ್ದದ್ದು ನಮಗೆ ಅಪ್ಯಾಯಮಾನವಾಗಿರುತ್ತಿತ್ತು. ಆ ದಟ್ಟವನ್ನು ಹಾಸಿಕೊಂಡು ಹೊದ್ದುಕೊಂಡು ಮಲುಗುತ್ತಿದ್ದರೆ, ನನಗಂತೂ ಆದರ ಸುವಾಸನೆಯಿಂದಾಗಿ ನಮ್ಮ ತಾತನವರ ತೊಡೆಯ ಮೇಲೆಯೇ ಮಲಗಿದ್ದಂತೆ ಭಾಸವಾಗುತ್ತಿತ್ತು. ಅದೇ ರೀತಿ ಇಂದಿಗೂ ನಮ್ಮ ತಂದೆಯವರ ನೆನಪಾದಾಗಲೆಲ್ಲಾ ಅವರು ಬಳಸುತ್ತಿದ್ದ ನಶ್ಯದ ಡಬ್ಬದ ಮುಚ್ಚಳವನ್ನೊಮ್ಮೆ ತೆಗೆಯುತ್ತಿದ್ದಂತೆಯೇ ಅದರ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆಯೇ ನನಗೆ ನಮ್ಮ ತಂದೆಯವರು ನನ್ನ ಅಕ್ಕಪಕ್ಕದಲ್ಲೇ ಇದ್ದಾರೇನೋ ಎಂಬಂತೆ ಭಾಸವಾಗುತ್ತದೆ.
ಹಬ್ಬ ಎಲ್ಲಾ ಮುಗಿಸಿ ಎಲ್ಲರೂ ತಮ್ಮ ಊರಿಗೆ ಮರಳುವಾಗ ದಟ್ಟವನ್ನು ತೆಗೆದುಕೊಂಡು ಹೋಗಲು ನಮ್ಮ ನಮ್ಮಲೇ ಜಗಳವಾಗುತ್ತಿತ್ತು. ನಾನು ಹಿರಿಯ ಮಗನ ಮಗನಾಗಿದ್ದರಿಂದ ಒಂದು ರೀತಿಯ ತ್ಯಾಗರಾಜನಾಗಿ ದಟ್ಟವನ್ನು ಹೆಣ್ಣು ಮಕ್ಕಳ ಮಕ್ಕಳಿಗೆ ಕೊಡಬೇಕಾಗುತ್ತಿತ್ತು. ನಮ್ಮ ಅಜ್ಜಿಯೂ ಸಹಾ ಮುಂದಿನ ಸಲಾ ನೀನು ಊರಿಗೆ ಬಂದಾಗ ನಿನಗೋಸ್ಕರ ಇನ್ನೂ ಚನ್ನಾಗಿರುವ ದಟ್ಟ ಹೊಲಿದು ಅಟ್ಟದ ಮೇಲಿ ಇಟ್ಟು ಗುಟ್ಟಾಗಿ ಕೊಡುತ್ತೇನೆ ಎಂದು ನನ್ನನ್ನು ಪುಸಲಾಯಿಸಿ ಒಪ್ಪಿಸುತ್ತಿದ್ದಷ್ಟೇ ಹೊರತು ಊರಿನಿಂದ ದಟ್ಟವನ್ನು ತರುವ ಭಾಗ್ಯವೇ ಸಿಗಲಿಲ್ಲ. ಅದರೆ ನಂತರ ದಿನಗಳಲ್ಲಿ ಅಜ್ಜಿ ನಮ್ಮ ಮನೆಗೆ ಬಂದಾಗ, ಒಂದು ಕ್ಷಣವೂ ಸುಮ್ಮನೇ ಕೂರದೇ, ನಿತ್ಯ ಪೂಜೆಗೆಂದು ಹೂಬತ್ತಿ, ಕಂಬದ ಬತ್ತಿಯ ಜೊತೆಗೆ ಹಬ್ಬ ಹರಿದಿನಗಳಿಗಾಗಿ ಬಣ್ಣ ಬಣ್ನದ ಗೆಜ್ಜೆ ವಸ್ತ್ರದ ಜೊತೆಗೆ ನನಗೆ ಬಂದಿದ್ದ ಎಲ್ಲಾ ಹಿತ್ತಾಳೆಯ ಪಾರಿತೋಷಕಗಳನ್ನು ಚೆನ್ನಾಗಿ ವೀಭೂತಿಯಲ್ಲಿ ತಿಕ್ಕಿ ಫಳ ಫಳ ಹೊಳೆಯುವಂತೆ ಮಾಡುವ ಜೊತೆಗೆ ಅಮ್ಮನ ಹಳೆಯ ಸೀರೆ ಮತ್ತು ಅಪ್ಪನ ಪಂಚೆಗಳನ್ನು ಸೇರಿಸಿ ಚಂದನೆಯ ಡಟ್ಟವನ್ನು ದಬ್ಬಳ ಮೂಲಕ ಹೊಲೆದುಕೊಟ್ಟಿದ್ದರು. ಸುಮಾರು ವರ್ಷಗಳ ಕಾಲ ಅದೇ ದಟ್ಟವನ್ನು ಹೊದ್ದು ಕೊಂಡು ಬೆಳೆದು ದೊಡ್ಡವನಾಗಿದ್ದಕ್ಕೆ ಈಗ ಹೆಮ್ಮೆ ಪಡುತ್ತೇನೆ. ನಂತರದ ದಿನಗಳಲ್ಲಿ ಕಾಟನ್ ಸೀರೆಗಳ ಜಾಗದಲ್ಲಿ ನೈಲಾನ್ ಸೀರೆ ಆವರಿಸಿ ಕೊಳ್ಳುತ್ತಿದ್ದಂತೆಯೇ ದಟ್ಟವೆಲ್ಲೂ ಮಾಯಾವಾಗಿ ಅಟ್ಟಕ್ಕೆ ಸೇರಿಕೊಂಡಿದ್ದು ಈಗ ಇತಿಹಾಸ.
ಶ್ರೀಮತಿ ಸುಧಾಮೂರ್ತಿಯವರು ಸಾವಿರಾರು ಕೋಟಿಗಳ ವ್ಯವಹಾರದ ಸಾಫ್ಟ್ವೇರ್ ಕಂಪನಿಯ ಸಂಸ್ಥಾಪಕಿಯಾಗಿದ್ದರೂ ಸಾಮಾನ್ಯವಾದ ಸೀರೇ ಉಟ್ಟು ನಿರಾಭರಣೆಯಾಗಿ ಒಂದು ಚೂರು ಹಮ್ಮು ಬಿಮ್ಮಿಲ್ಲದೇ ಯಾವುದೇ ಪ್ರಚಾರದ ಗೀಳಿಲ್ಲದೇ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಿದಾಗ ಅರೇ ಈಗೆ ಏಕೆ ಉಳಿದವರಂತೆ ಒಳ್ಳೊಳ್ಳೆ ಸೀರೆಗಳನ್ನು ಉಡುವುದಿಲ್ಲಾ? ಮೈ ತುಂಬಾ ಆಭರಣಗಳನ್ನು ತೊಡುವುದಿಲ್ಲ? ಎಂದೆನಿಸಬಹುದು ಆದರೆ ಶ್ರೀಮತಿ ಸುಧಾಮೂರ್ತಿಯವರ ಜೀವನದಲ್ಲಿ ನಡೆದ ಆ ಒಂದು ಘಟನೆಯಿಂದಾಗಿ ಇಂದು ನಾವೆಲ್ಲರೂ ನೋಡುವ ಸರಳ ಸಹನಾಮೂರ್ತಿಯಾಗಿದ್ದಾರೆ.
ಸುಧಾಮೂರ್ತಿಯವರು ಆರಂಭದಲ್ಲಿ ಉಳಿದ ಹೆಂಗಸರಂತೆಯೇ ಚಂದನೆಯ ಬಟ್ಟೆಗಳನ್ನು ತೊಡುತ್ತಿದ್ದರು. ಜೀಸ್ನ್ ಪ್ಯಾಂಟ್ ಶರ್ಟ್ ಅವರ ಮೆಚ್ಚಿನ ಉಡುಗೆಯಾಗಿತ್ತು. ತಮ್ಮ ಕಂಪನಿ ಬಹಳ ದೊಡ್ಡದಾಗಿ ಬೆಳೆದ ನಂತರ ಆ ಕೆಲಸಕ್ಕೆ ರಾಜಿನಾಮೆ ನೀಡಿ ಇನ್ಫೋಸಿಸ್ ಫೌಂಡೇಷನ್ ಮೂಲಕ ಸಮಾಜ ಸೇವೆ ಮಾಡಲು ಮುಂದಾದಾಗ ಅವರಿಗೆ ದೇವದಾಸಿಯರ ಜೀವನ ವಿಭಿನ್ನವಾಗಿದ್ದು ಸಮಾಜದಲ್ಲಿ ಅವರು ಬಹಳಷ್ಟು ಶೋಷಣೆಗೆ ಒಳಗಾಗುತ್ತಾರೆ. ಹಾಗಾಗಿ ದೇವದಾಸಿಯರ ಜೀವನದಲ್ಲಿ ಬದಲಾವಣೆ ತರಲು ಸಂಕಲ್ಪ ತೊಟ್ಟು ರಾಯಚೂರಿನ ಬಳಿ ಸುಮಾರು ಮೂರು ಸಾವಿರ ದೇವದಾಸಿಯರು ಇದ್ದಾರೆ ಎಂದು ತಿಳಿದು ಅವರನ್ನು ಭೇಟಿ ಮಾಡಲು ಹೋದರು. ಹಾಗೆ ಹೋದಾಗ ಅವರು ಪ್ಯಾಂಟ್ ಮತ್ತು ಟೀ ಶರ್ಟ್ ಧರಿಸಿ, ಕುಂಕುಮ ಇಲ್ಲದ ಹಣೆ ಮತ್ತು ಬಳೆಗಳಿಲ್ಲದ ಕೈನೊಂದಿಗೆ ಹೋಗುತ್ತಿದ್ದರು. ಈ ರೀತಿಯ ಪಾಶ್ಯಾತ್ಯ ಉಡುಗೆಯಲ್ಲಿ ಆ ದೇವದಾಸಿಯರನ್ನು ಭೇಟಿ ಮಾಡಲು ಮೂರ್ನಾಲ್ಕು ಬಾರಿ ಹೋದಾಗಲು ಇವರೊಂದಿಗೆ ಬಿಚ್ಚು ಮನಸ್ಸಿನಿಂದ ಬೆರೆಯಲು ಆ ದೇವದಾಸಿಯರು ಹಿಂದೇಟು ಹಾಕಿದ್ದನ್ನು ಗಮನಿಸಿ ಅದನ್ನು ಸುಧಾರವರು ವೈದ್ಯರಾಗಿದ್ದ ತಮ್ಮ ತಂದೆಯವರ ಬಳಿ ಹೇಳಿದಾಗ, ಸಾಮಾನ್ಯ ಜನರೊಂದಿಗೆ ಬೆರೆಯ ಬೇಕಾದಾಗಾ ಅವರಂತೆಯೇ ಸರಳವಾದ ಉಡುಗೆ ತೊಡುಗೆಯಲ್ಲಿ ಹೋಗಿ ಅವರಂತೆಯೇ ಸರಳವಾಗಿ ಮಾತನಾಡಬೇಕು ಎಂದರಂತೆ. ಮುಂದಿನ ಬಾರಿ ಅಲ್ಲಿಗೆ ಹೋಗುವಾಗ ಸುಧಾರವರು ಸಾಂಪ್ರದಾಯಿಕ ಉಡುಗೆ ಮತ್ತು ಉಡುಗೆಯನ್ನು ಧರಿಸಿಕೊಂಡು ಹೋದಾಗ, ಸುಧಾರವರ ಡ್ರೆಸ್ಸಿಂಗ್ ಶೈಲಿಯಲ್ಲಿ ಬದಲಾವಣೆ ಕಂಡ ನಂತರ ದೇವದಾಸಿಯರು ಅವರೊಂದಿಗೆ ಬಿಚ್ಚು ಮನಸಿನಿಂದ ಬೆರೆಯಲು ತೊಡಗಿದ್ದಲ್ಲದೇ ತಮ್ಮೆಲ್ಲಾ ಸಮಸ್ಯೆಗಳನ್ನು ನಿರಾಯಾಸವಾಗಿ ಹೇಳಿದ ಪರಿಣಾಮ ಇದುವರೆವಿಗೂ ಸುಮಾರು 3,000 ದೇವದಾಸಿಯರನ್ನು ಮುಖ್ಯವಾಹಿನಿಗೆ ತರಲು ಸುಧಾರವರು ಸಹಾಯ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ.
ಹೀಗೆ ದೇವದಾಸಿಯರಿಂದಾಗಿ ಸುಧಾಮೂರ್ತಿಯವರ ವೇಷ ಭೂಷಣಗಳು ಬದಲಾಗಿದ್ದಲ್ಲದೇ, ತಮಗೆ ಸಹಾಯ ಮಾಡಿದ ಸುಧಾರವರಿಗೆ ಏನಾದರೂ ಕೊಡಬೇಕೆಂದು ಯೋಚಿಸಿದಾಗ, ಅವರಿಗೆ ಹೊಳೆದದ್ದೇ, ಕೌದಿ. ಸುಮಾರು ಮೂರು ಸಾವಿರ ದೇವದಾಸಿಯರು ಒಂದೊಂದು ಹೊಲಿಗೆ ಹಾಕಿದಂತಹ ಚಳಿಗಾಲದ ಚಳಿಯಲ್ಲಿ ಬೆಚ್ಚಗಾಗಿಸುವಂತಹ ಕೌದಿಯನ್ನು ಸಿದ್ಧಪಡಿಸಿ ಆ ವಿಶಿಷ್ಟವಾದ ಕೌದಿಯನ್ನು ಸುಧಾಮೂರ್ತಿಯವರಿಗೆ ಉಡುಗೊರೆಯಾಗಿ ನೀಡಿದರಂತೆ. ಅದರಿಂದ ಸ್ಪೂರ್ತಿ ಪಡೆದ ಸುಧಾರವರು ದೇವದಾಸಿಯರ ಕುರಿತಾದ ತಮ್ಮೆಲ್ಲಾ ಅನುಭವಗಳನ್ನು ಮೂರು ಸಾವಿರ ಹೊಲಿಗೆ ಎಂಬ ಪುಸ್ತಕ ರೂಪದಲ್ಲಿ ದಾಖಲಿಸಿದ್ದಾರೆ.
2022ರ ಸೆಪ್ಟೆಂಬರ್ 26ರಂದು ಕರ್ನಾಟಕದ ವಿದ್ಯಾಕಾಶಿ ಧಾರವಾಡದ IIT ಕ್ಯಾಂಪಸ್ ಉದ್ಘಾಟನೆ ಮಾಡಲು ಬಂದಿದ್ದ ರಾಷ್ಟ್ರಪತಿ ಶ್ರೀಮತಿ ದ್ರೌಪತಿ ಮುರ್ಮು ಅವರಿಗೆ ಸುಧಾ ಮೂರ್ತಿಯವರು ರಾಯಚೂರಿನ ಮೂರು ಸಾವಿರ ದೇವದಾಸಿಯರು ತಯಾರಿಸಿದ್ದ ಕೌದಿ ಮತ್ತು ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ಕೊಟ್ಟು ಗೌರವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಅದರ ಜೊತೆಯಲ್ಲೇ ತಮ್ಮ ಪುಸ್ತಕದ ಹಿಂದಿಯ ಅನುವಾದ 3 ಹಜಾರ್ ಟಾಕೆ ಹಾಗೂ ಇಂಗ್ಲೀಷ್ ಅನುವಾದದ 3 thousand stitchs ಪುಸ್ತಕವನ್ನೂ ಸಹಾ ಸುಧಾ ಮೂರ್ತಿಯವರು ರಾಷ್ಟ್ರಪತಿಗಳಿಗೆ ನೀಡಿದ್ದರು. ಇವರ ಈ ರೀತಿಯ ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣವಾದ ಉಡುಗೊರೆಯನ್ನು ನೋಡಿ ರಾಷ್ಟ್ರಪತಿಗಳು ಬಳಳ ಸಂತಸ ಪಟ್ಟರು ಎಂದು ಸ್ವತಃ ಸುಧಾ ಮೂರ್ತಿಯವರು ನಂತರ ತಿಳಿಸಿದ್ದು ಈಗ ಇತಿಹಾಸ.
ನಮ್ಮ ಸುತ್ತಮುತ್ತಲಿನ ಸರ್ವೇ ಸಾಧಾರಣ ವಸ್ತುವೂ ಸಹಾ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೇಗೆ ನಮ್ಮ ಜೀವನದ ಶೈಲಿಯನ್ನು ಬದಲಿಸಿ ಬಿಡುತ್ತದೆ ಎನ್ನುವುದಕ್ಕೆ ಈ ಪ್ರಸಂಗಗಳೇ ಸಾಕ್ಷಿ. ಇಂದೆಲ್ಲಾ ಹೊಸಾ ಹೊಸಾ ಬಣ್ಣ ಬಣ್ಣದ ಬಟ್ಟೆಗಳನ್ನೇ ಬಳಸಿ ಬಹಳ ಸುಂದರವಾಡ ಹೊಚ್ಚ ಹೊಸಾ ಕೌದಿಗಳನ್ನೇ ತಯಾರಿಸಿ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಇನ್ನೂ ಹತ್ತು ಹಲವಾರು ರೀತಿಯಾಗಿ ಕಸರಿಂದ ರಸವನ್ನು ತೆಗೆಯುವಂತಹ ಅದ್ಭುತವಾದ ಸೃಚನಶೀಲತೆಯನ್ನು ಹೊಂದಿದ್ದ ನಮ್ಮ ಹಿರಿಯರ ಕೌಶಲ್ಯದ ಮುಂದೆ ನಮ್ಮದೇನೂ ಇಲ್ಲಾ ಎಂದರು ಅತಿಶಯವಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ