ಕಾಶಿಯ ವಾಲಿರುವ ರತ್ನೇಶ್ವರ ದೇವಾಲಯ

pisaಇಟಲಿಯ ಟಸ್ಕನಿ ಪ್ರದೇಶದ ಒಂದು ನಗರವಾದ ಪಿಸಾ ಇಂದು ಜಗತ್ಪ್ರಸಿದ್ದವಾಗಿದೆ. ಆ ನಗರ ಹಾಗೆ ಪ್ರಸಿದ್ಧವಾಗಲು ಅಲ್ಲಿರುವ ಓರೆಯಾಗಿರುವ ಗೋಪುರವೊಂದು ಕಾರಣವಾಗಿದ್ದು ಅದು ಪ್ರಪಂಚದ ಏಳು ಅದ್ಭುತಗಳಲ್ಲಿ  ಒಂದಾಗಿದೆ.  ಆಗಸ್ಟ್‌ 9, 1173 ರಲ್ಲಿ ಆ ಪ್ರದೇಶದಲ್ಲಿ  ಎತ್ತರವಾದ ಒಂದು ಗೋಪುರವನ್ನು ನಿರ್ಮಿಸಿ  ಅದರ ಮೇಲೊಂದು ದೊಡ್ಡ ಘಂಟೆಯನ್ನು ಇಡಬೇಕೆಂದು ನಿರ್ಧರಿಸಲಾಗಿತ್ತು. ಅದರೆ 1778ರಲ್ಲಿ ಮೂರು ಅಂತಸ್ತಿನ ಕೆಲಸ ಮುಗಿಯುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಈ ಕಟ್ಟಡ ಒಂದು ಕಡೆಗೆ ಸ್ವಲ್ಪ ವಾಲಿದ್ದನ್ನು ಕಂಡ ಅಲ್ಲಿನ ಜನ ಈ ಕಟ್ಟಡ ಬೀಳಬಹುದು ಎಂದು ಹೌಹಾರಿದ್ದರಂತೆ. ಆಷ್ಟು  ಎತ್ತರದ ಗೋಪುರವನ್ನು ಕಟ್ಟಲು ಕೇವಲ ಮೂರು ಮೀಟರ್ ಅಡಿಪಾಯ ಹಾಕಿದ್ದಲ್ಲದೇ.  ಆ ಆಡಿಪಾಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೇಡಿಮಣ್ಣು ಇದ್ದು ಆ ಜೇಡಿಮಣ್ಣಿನ ಸಾಂದ್ರತೆ ದುರ್ಬಲವಾಗಿದ್ದ ಕಡೆ ಅದು ವಾಲಲಾರಂಭಿಸಿ ಒಂದು ಹಂತದಲ್ಲಿ ವಾಲುವುದು ನಿಂತಾಗ ಎಲ್ಲರೂ ನಿಟ್ಟಿಸಿರು ಬಿಟ್ಟಿದ್ದಲ್ಲದೇ, ಮುಂದಿನ ನೂರು ವರ್ಷಗಳ ಕಾಲ ಆ ಕಟ್ಟಡ ಮೇಲೆ ಯಾವುದೇ ರೀತಿಯ  ನಿರ್ಮಾಣವನ್ನು ಮಾಡದೇ ಹಾಗೆ ಸುಮ್ಮನಾಗಿದ್ದರಂತೆ. ಹೀಗೆ ನೂರು ವರ್ಷಗಳ ನಂತರ ಅಲ್ಲಿನ ಮಣ್ಣು ಹೊಂದಿಕೊಂಡಿರಬಹುದು ಎಂಬ ನಿರ್ಧಾರಕ್ಕೆ ಬಂದ ಗ್ಯೋವಾನ್ನಿ ಎಂಬ ತಂತ್ರಜ್ಞ 1272 ಇದರ ಮೇಲ್ಭಾಗ ನಿರ್ಮಾಣಕ್ಕೆ ಮುಂದಾದರೂ,  ಮೋಲೊರೀಯಾ ಯುದ್ಧದಿಂದಾಗಿ ಇದರ ನಿರ್ಮಾಣ ಕಾರ್ಯ ಮತ್ತೆ ನಿಂತು ಹೋಗುತ್ತದೆ.  ಅಂತೂ ಇಂತೂ 1319ರಲ್ಲಿ ಏಳನೇ ಅಂತಸ್ತನ್ನು  ಪೂರ್ಣಗೊಳಿಸಿ ಅದರ ಮೇಲೆ  ಘಂಟೆಯನ್ನು ಕಟ್ಟಲು ನಿರ್ಧರಿಸಿದರು.  1838 ಅಲೆಕ್ಸಾಂಡರೋ ಡೆಲ್ಲಾ ಎಂಬ ಪ್ರಸಿದ್ಧ ಎಂಜಿನಿಯರ್‌ ಆ ಕಟ್ಟಡ ಬುಡದಲ್ಲಿ ಹಾಕಲಾದ ಆಡಿಪಾಯವನ್ನು ಜನರಿಗೆ ತೋರಿಸಲು ಗುಂಡಿಯೊಂದನ್ನು ತೋಡಿಸಿದ ಪರಿಣಾಮ,  ಮಣ್ಣು ಮತ್ತೆ ಸಡಿಲವಾದ ಕಾರಣ ಗೋಪುರ ಇನ್ನಷ್ಟು ವಾಲಿದಾಗ, ಇನ್ನು ಮುಂದೆ ಆ ಕಟ್ಟಡದ ಮೇಲೆ ಯಾವುದೇ ರೀತಿಯ ನಿರ್ಮಾಣ ಕಾರ್ಯಮಾಡದಿರಲು ನಿರ್ಧರಿಸಲಾಯಿತು. 1987 ರಲ್ಲಿ ಈ ಕಟ್ಟಡ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಕೊಂಡ ನಂತರ, 1990ರಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಸಾರ್ವಜನಿಕರಿಗೆ ಆ ಕಟ್ಟಡದ ಪ್ರವೇಶವನ್ನು ನಿಷೇಧಿಸಿ, ಆ ಕಟ್ಟಡ ಮೇಲಿದ್ದ  ಭಾರವಾದ ಘಂಟೆಯನ್ನು ಕೆಳಗಿಳಿಸಲಾಯಿತು. 2001ರಲ್ಲಿ ಗೋಪುರದ ಮತ್ತೊಂದು ಪಕ್ಕದಲ್ಲಿ ಭಾರವನ್ನು ಹೆಚ್ಚಿಸಿ ಗೋಪುರ ಮತ್ತೆ ವಾಲದಂತೆ  ಬಲಪಡಿಸಿದ ನಂತರ ಸಾರ್ವಜನಿಕರಿಗೆ ಆ ಕಟ್ಟಡ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಹೀಗೆ  ಸುಮಾರು 4 ಡಿಗ್ರಿಗಳಷ್ಟು ವಾಲಿರುವ, 180 ಅಡಿ ಎತ್ತರದ ಈ ಗೋಪುರ ವೃತ್ತಾಕಾರವಾಗಿದ್ದು, ಆರು ಅಂತಸ್ತುಗಳನ್ನು ಹೊಂದಿದೆ. ಮೇಲೆ ಹೋಗಲು 250 ಮೆಟ್ಟಿಲುಗಳಿದ್ದು, ಕಟ್ಟಡದ ಹಿತದೃಷ್ಟಿಯಿಂದ ಒಂದು ಸಲಕ್ಕೆ ಕೇವಲ 25 ಜನರಿಗೆ ಮಾತ್ರ ಮೇಲೆ ಹತ್ತಲು ಅವಕಾಶ ನೀಡಲಾಗಿದೆ. ಹೀಗೆ ಆರು ಅಂತಸ್ತುಗಳ ಮೇಲೆ ಹತ್ತಿ ನಿಂತರೆ, ಇಡಿ ಪೀಸಾ ನಗರ ಮನಮೋಹಕ ದೃಶ್ಯವನ್ನು ಕಾಣಬಹುದಾಗಿದೆ.   ಇಂತಹ ಅದ್ಭುತವಾದ ಕಟ್ಟಡವನ್ನು ನೋಡಲು ದೇಶ ವಿದೇಶಗಳಿಂದ ಸಹಸ್ರಾರು ಜನರು ಪ್ರತಿ ದಿನವೂ ಪೀಸಾ ನಗರಕ್ಕೆ ಬರುತ್ತಾರೆ.

kashi2ಆದರೆ  ಇದ್ದಕ್ಕಿಂತಲೂ ಅಚ್ಚರಿಯ ವಿಷಯವೆಂದರೆ,  180 ಅಡಿ ಎತ್ತರದ ಪಿಸಾದ ವಾಲುವ ಗೋಪುರವು ಕೇವಲ 4 ಡಿಗ್ರಿಗಳಷ್ಟು ವಾಲಿದರೆ, ನಮ್ಮ ವಾರಣಾಸಿಯ ಮಣಿಕರ್ಣಿಕಾ ಘಾಟ್ ಬಳಿ ಇರುವ  ಸುಮಾರು 74 ಮೀಟರ್ ಎತ್ತರದ (ಪಿಸಾ ಗೋಪುರಕ್ಕಿಂತ ಸುಮಾರು 20 ಮೀಟರ್ ಎತ್ತರ) ರತ್ನೇಶ್ವರ ದೇವಾಲಯವು ಸುಮಾರು 9 ಡಿಗ್ರಿಗಳಷ್ಟು ವಾಲಿದ್ದರೂ, ಈ ಐತಿಹಾಸಿಕ ರತ್ನೇಶ್ವರ ದೇವಾಲಯವು ಶತ ಶತಮಾನಗಳ ಹಿಂದಿನದ್ದಾಗಿದ್ದರೂ, ಇಂದಿಗೂ  ಅತ್ಯಂತ ಸುಸ್ಥಿತಿಯಲ್ಲಿದೆ. ದುರಾದೃಷ್ಟವಷಾತ್ ನಮ್ಮ ಜನರಿಗೆ ನಮ್ಮ ದೇಶದಲ್ಲಿರುವ ಕಟ್ಟಡ ಮತ್ತು ವಾಸ್ತುಶಿಲ್ಪದ ಬಗ್ಗೆಯೇ ಅರಿವಿಲ್ಲದ, ಅರಿವಿದ್ದರೂ ಅದನ್ನು ಬಗ್ಗೆ ತಾತ್ಸಾರದ ಭಾವನೆಯಿಂದಾಗಿ ಇಂತಹ ಅದ್ಭುತವಾದ ಕಟ್ಟಡ  ಇಂದಿಗೂ ವಿಶ್ವದ  7 ಅದ್ಭುತಗಳಲ್ಲಿ ಒಂದಾಗಿಲ್ಲದ್ದಿರುವುದು ವಿಪರ್ಯಾಸವಾಗಿದೆ.

kashi3ಹಿಂದೂಗಳಿಗೆ ಅತ್ಯಂತ ಪವಿತ್ರ ನಗರವಾದ ಕಾಶಿಯಲ್ಲಿ ಸಾವಿರಾರು ಪುರಾತನ ದೇವಾಲಯಗಳಿದ್ದು, ಅವುಗಳಲ್ಲಿ ರತ್ನೇಶ್ವರ ಮಹಾದೇವ ದೇವಾಲಯವೂ ಒಂದಾಗಿದೆ. ಈ ದೇವಾಲಯವನ್ನು ಕಾಶಿ ಕರ್ವತ್ ಎಂದೂ ಕರೆಯುತ್ತಾರೆ (ಕಾಶಿ ಎಂಬುದು ವಾರಣಾಸಿಯ ಪ್ರಾಚೀನ ಹೆಸರು ಮತ್ತು ಕರ್ವತ್ ಎಂದರೆ ಹಿಂದಿಯಲ್ಲಿ ಒಲವು ಎಂಬುದಾಗಿದೆ).ಸುಮಾರು 500 ವರ್ಷಗಳ ಹಿಂದೆ  ಗಂಗಾ ನದಿಯ ದಡದಲ್ಲಿರುವ ಸಿಂಧಿಯಾ ಘಾಟ್‌ನಲ್ಲಿ ನಿರ್ಮಿಸಲಾಗಿರುವ ಈ  ದೇವಾಲಯದ ಕೆಳಗಿನ  ಭಾಗವು ವರ್ಷದಲ್ಲಿ ಹೆಚ್ಚಿನ ಸಮಯ ನೀರಿನಲ್ಲಿಯೇ ಮುಳುಗಿದ್ದರೆ, ಇನ್ನು ಮಳೆಗಾಲದಲ್ಲಿ, ನೀರಿನ ಮಟ್ಟ ಹೆಚ್ಚಾದಾಗ, ದೇವಾಯದದ  ಶಿಖರದವರೆಗೂ ಮುಳುಗುತ್ತದೆ. ಈ ಹಿಂದೆ ದೇವಾಲಯದ ಪ್ರವೇಶದ್ವಾರವು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದಾಗ ದೇವಾಯದ ಅರ್ಚಕರು ದೇವರಿಗೆ ಪೂಜೆಯನ್ನು ಸಲ್ಲಿಸಲು ಅ ರಭಸಭರಿತ ನೀರಿನಲ್ಲಿ ಧುಮುಕಿ ಪೂಜೆಯನ್ನು ಸಲ್ಲಿಸು ಬರುತ್ತಿದ್ದರಂತೆ. ಇದೇ ರತ್ನೇಶ್ವರ ಮಹಾದೇವ್ ದೇವಸ್ಥಾನದ ಗಡಿಯಲ್ಲಿಯೇ ಪ್ರಸಿದ್ಧವಾದ ಮಣಿಕರ್ಣಿಕಾ ಘಾಟ್ (ಇಲ್ಲಿ ಮತ್ತು ಹರಿಶ್ಚಂದ್ರ ಘಾಟ್ ನಲ್ಲಿ ಮೃತ ದೇಹಗಳ ದಹನ ಕ್ರಿಯೆ ನಿರಂತರವಾಗಿ ನಡೆಯುತ್ತದೆ)ಕಾಣಬಹುದಾಗಿದೆ.

ಈ ರೀತಿಯಾಗಿ ಈ ಶಿವನ ದೇವಾಲಯದ ವಾಲುವಿಕೆಗೆ ಸಂಬಬಂಧಿಸಿದಂತೆ ಅನೇಕ ದಂತಕಥೆಗಳಿವೆ. 1860ರಕ್ಕೂ  ಮೊದಲು ನೇರವಾಗಿಯೇ ಇತ್ತು ಎಂದು ನಂಬಲಾಗಿರುವ ಈ ದೇವಾಲಯದ ಘಾಟ್ ಅದರ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಕುಸಿದ ಪರಿಣಾಮ  ಹಿಂದಕ್ಕೆ ವಾಲಿರಬಹುದು ಎಂದು ಸ್ಥಳೀಯರು ಹೇಳುತ್ತಾರಾದರೂ, ಈ ವಾಲುವಿಕೆಯ ಹಿಂದಿರುವ ನಿಖರವಾದ ಕಾರಣಗಳು ಇಂದಿಗೂ ನಿಗೂಢವಾಗಿದೆ.

ಒಂದು ದಂತ ಕಥೆಯ ಪ್ರಕಾರ ರಜಪೂತರ ರಾಜ, ರಾಜ ಮಾನ್ ಸಿಂಗ್ ಅವರ ಸೇವಕನು ತನ್ನ ತಾಯಿ ರತ್ನಾಬಾಯಿಯ  ಗೌರವಾರ್ಥವಾಗಿ ಈ ದೇವಾಲಯವನ್ನು ನಿರ್ಮಿಸುವ ಮೂಲಕ ತಾನು ತನ್ನ ತಾಯಿಯ ಋಣವನ್ನು ಸಂಪೂರ್ಣವಾಗಿ ತೀರಿಸಿದ್ದೇನೆ ಎಂದು  ಹೆಮ್ಮೆಯಿಂದ ಹೆಮ್ಮೆಪಡುತ್ತಾನೆನಂತೆ ಆದರೆ, ಆತನ  ತಾಯಿಯು, ಹತ್ತು ಜನ್ಮ ಎತ್ತಿ ಬಂದರೂ ತಾಯಿಯ ಹೆತ್ತ  ಋಣವನ್ನು ಎಂದಿಗೂ ಯಾರಿಂದಲೂ  ತೀರಿಸಲಾಗದು ಎಂದು ಹೇಳಿ ದೇವಸ್ಥಾನಕ್ಕೆ ಶಾಪ ಹಾಕಿದಳಂತೆ. ಹಾಗೆ ಆ ತಾಯಿಯ ನೋವು, ಯಾತನೆ ಮತ್ತು ಶಾಪದ ಪರಿಣಾಮವಾಗಿ, ಅಂದಿನಿಂದ ಆ ದೇವಾಲಯವು ಹಿಂದಕ್ಕೆ ವಾಲಲು ಆರಂಭಿಸಿತು ಎನ್ನುವ ನಂಬಿಕೆ ಇದೆ.

ahalya_bai_indoreಅದೇ ರೀತಿ ಇನ್ನೂ ಕೆಲವು ಜನರ ಪ್ರಕಾರ, ಈ ದೇವಾಲಯವನ್ನು ಇಂದೋರ್‌ನ ಅಹಲ್ಯಾ ಬಾಯಿಯ ರತ್ನಾ ಬಾಯಿ ಎಂಬ ಮಹಿಳಾ ಸೇವಕಿ ನಿರ್ಮಿಸಿ,  ಅದಕ್ಕೆ ದೇವಾಲಯಕ್ಕೆ  ತನ್ನ ಹೆಸರನ್ನೇ ಇಟ್ಟಿದ್ದರಿಂದ, ಕೋಪಗೊಂಡ ರಾಣಿ ಅಹಲ್ಯಾ ಬಾಯಿ ಆ ದೇವಾಲಯ ಒರಗುವಂತೆ ಶಾಪ ಕೊಟ್ಟಳಂತೆ ಹಾಗೆ ಅಹಲ್ಯಾಬಾಯಿಯವರ ಶಾಪವನ್ನು ಆವಾಹಿಸಿಕೊಂಡ ಪರಿಣಾಮ ಆ ದೇವಾಲಯ ವಾಲಿಕೊಂಡಿದೆ ಎಂದು ಹೇಳಲಾಗುತ್ತದೆ.  ಸತತವಾಗಿ ಮೋಘಲರ ದಾಳಿಯಿಂದ ಶಿಥಿಲಾವಸ್ಥೆಯನ್ನು ತಲುಪಿದ್ದ ಕಾಶೀ ವಿಶ್ವನಾಧನ ದೇವಾಲಯದ ಜೀರ್ಣೋದ್ಧಾರಕ್ಕೆ ಅಹಿರ್ನಿಶಿಯಾಗಿ ದುಡಿದ ಇಂದೋರ್ ರಾಣಿ ಅಹಲ್ಯಾಬಾಯಿಯವರು ಈ ರೀತಿಯಾಗಿ ಶಾಪ ಕೊಟ್ಟಿದ್ದಾರೆ ಎಂದು ನಂಬಲು ಅಸಾಧ್ಯವಾಗಿದೆ.

kashi1ಒಟ್ಟಿನಲ್ಲಿ ನಾಗರ ಶಿಖರ ಶೈಲಿಯ ಪ್ರಾಕಾರ ಸ್ತಂಭಗಳಿಂದ ಅಲಂಕೃತವಾದ ಫಮಸಾನ ಮಂಟಪದೊಂದಿಗೆ ತನ್ನ ಶಿಖರವನ್ನು ನಿರ್ಮಿತವಾಗಿರುವ ಈ ದೇವಾಲಯ ನೋಡಲು ಅತ್ಯಂತ ಮನಹೋಹರವಾಗಿದೆ. ಹಿಂದೂಗಳ ಪವಿತ್ರ ನಗರವಾದ ವಾರಣಾಸಿಗೆ ಭೇಟಿ ನೀಡಿ ಅಸ್ಸಿ ಘಾಟ್‌ನಿಂದ ಆದಿ ಕೇಶವ ಘಾಟ್‌ಗೆ ದೋಣಿಯಲ್ಲಿ ಪ್ರಯಾಣಿಸಿ ಅಲ್ಲಿರುವ 64 ಘಾಟ್‌ಗಳಿಗೆ ಸಂಬಂಧಿಸಿದ ಮಹತ್ವ ಮತ್ತು ಇತಿಹಾಸವನ್ನು ಅರ್ಥ ಮಾಡಿಕೊಂಡಾಗಲೇ ನಮ್ಮ  ಪೂರ್ವಜರ ಬುದ್ದಿಮತ್ತೆಯ ಬಗ್ಗೆ ಹೆಮ್ಮೆ ಮೂಡುವಂತಾಗುತ್ತದೆ. ಖಂಡಿತವಾಗಿಯೂ ಪ್ರತಿಯೊಬ್ಬ ಭಾರತೀಯರು ಸ್ವಲ್ಪ ಸಮಯ ಮಾಡಿಕೊಂಡು ಕಾಶಿಗೆ ಬಂದು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ಶುಚಿರ್ಭೂತರಾಗಿ ಈಗ ಸುಂದರವಾಗಿ ಕಾರಿಡಾರ್ ರೂಪದಲ್ಲಿ ವಿಸ್ತೃತಗೊಂಡಿರುವ ಕಾಶಿ ವಿಶ್ವನಾಥ ಮತ್ತು ವಿಶಾಲಾಕ್ಷಿ ಅಮ್ಮನವರ ದರ್ಶನವನ್ನು ಪಡೆದು ಅದರ ಸುತ್ತಮುತ್ತಲೇ ಇರುವ ನೂರಾರು ದೇವಾಲಯಗಳಿಗೆ ಭೇಟಿ ನೀಡಿ ಧನ್ಯರಾಗೋಣ ಅಲ್ವೇ?

ಏನಂತೀರೀ?

ನಿಮ್ಮವನೇ ಉಮಾಸುತ

ಈ ಲೇಖನ 2023ರ ಏಪ್ರಿಲ್ ತಿಂಗಳ ಸಂಪದಸಾಲು ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ

ratneshwara

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s