ಬೆಳಕು ಪಾರದರ್ಶಕವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಸಂಚರಿಸುತ್ತದೆ. ಹಾಗೆ ಬೆಳಕು ಸಂಚರಿಸುವಾಗ ಅಪಾರದರ್ಶಕ ವಸ್ತುಗಳು ಆ ಬೆಳಕನ್ನು ತಡೆದಾಗ ಅಲ್ಲೊಂದು ನೆರಳು ಉಂಟಾಗುತ್ತದೆ. ಸಾಮಾನ್ಯವಾಗಿ ನೆರಳು ಬೂದು, ಕಪ್ಪು, ಬಿಳಿ, ಇತ್ಯಾದಿ ಬಣ್ಣಗಳನ್ನು ಒಳಗೊಂಡಿರುತ್ತದೆ. ಈ ರೀತಿಯ ನೆರಳನ್ನು ಸಜೀವ ಮತ್ತು ನಿರ್ಜೀವ ವಸ್ತುಗಳಲ್ಲಿ ಕಾಣಬಹುದಾಗಿದ್ದು. ಉದಾ. ಮನುಷ್ಯರು, ಕಟ್ಟಡಗಳು, ಮರ, ಛತ್ರಿ ಮುಂತಾದ ವಸ್ತುಗಳ ಮೂಲಕ ಸೂರ್ಯನ ಬೆಳಕನ್ನು ತಡೆಯುವುದನ್ನು ಉಲ್ಲೇಖಿಸಬಹುದಾಗಿದೆ.
ಹೀಗೆ ಪ್ರತೀ ಬಾರಿಯೂ ಸೂರ್ಯನ ಬೆಳಕು ಯಾವುದೇ ವಸ್ತುವಿನ ಮೇಲೆ ಬಿದ್ದಾಗ ಅಲ್ಲೊಂದು ಸಣ್ಣ ಪ್ರಮಾಣದಲ್ಲಾಗಲೀ ದೊಡ್ಡ ಪ್ರಮಾಣದಲ್ಲಾಗಲೀ ನೆರಳು ಉಂಟಾಗುತ್ತದೆ. ಆದರೆ ಪ್ರಕೃತಿಯ ವಿಸ್ಮಯ ಎನ್ನುವಂತೆ ಒಂದು ವರ್ಷದಲ್ಲಿ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ, ಅಂದಿನ ದಿನ ಸೂರ್ಯನು ಭೂಮಿಯ ಮೇಲ್ಮೈಗೆ ಸರಿಯಾಗಿ 90 ಡಿಗ್ರಿ ಕೋನದಲ್ಲಿದ್ದಾಗ ಅಥವಾ ಸೂರ್ಯನು ಕೇವಲ ಮೇಲಿರುವಾಗ ವಸ್ತುವಿನ ನೆರಳು ಭೂಮಿಯ ಮೇಲೆ ಬೀಳುವುದಿಲ್ಲ. ನಮ್ಮ ರಾಜ್ಯದಲ್ಲಿ ಏ.22 ರಿಂದ ಮೇ 11 ರವರೆಗೆ ವಿವಿಧ ಪ್ರದೇಶಗಳಲ್ಲಿ ಶೂನ್ಯ ನೆರಳಿನ ದಿನವನ್ನು ಕಾಣಬಹುದಾಗಿದೆ. ಸೂರ್ಯನು ಉತ್ತರ ದಿಕ್ಕಿನತ್ತ ಚಲಿಸುವಾಗ ನಮ್ಮ ನೆತ್ತಿಯ ನೇರದಲ್ಲಿ ಹಾದು ಹೋಗುತ್ತಾನೆ. ಹಾಗೆ ಸೂರ್ಯನು ನಮ್ಮ ತಲೆಯ ಮೇಲೆ ನಿಖರವಾಗಿ ಇರುವಾಗ ನಮ್ಮ ನೆರಳು ನೇರವಾಗಿ ಕಾಲ ಕೆಳಗಿರುತ್ತದೆ. ನಾವು ನಮ್ಮ ನೆರಳಿನ ಮೇಲೆಯೇ ನಿಂತಿರುವುದರಿಂದ ಈ ನೆರಳು ನಮಗೆ ಗೋಚರಿಸುವುದಿಲ್ಲ. ಇದು ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವಿನ ಸ್ಥಳಗಳಿಗೆ ಸಂಭವಿಸುತ್ತದೆ ಮತ್ತು ಬೆಂಗಳೂರಿನಲ್ಲಿ ಏಪ್ರಿಲ್ 25 ಮತ್ತು ಆಗಸ್ಟ್ 18 ರಂದು ಹೀಗೆ ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ.
ಇನ್ನೂ ಸುಲಭವಾಗಿ ಹೇಳ ಬೇಕೆಂದರೆ, ವಸ್ತುವು ಸೂರ್ಯನನ್ನು ಒಂದು ಕೋನದಲ್ಲಿ ಎದುರಿಸುತ್ತಿದ್ದರೆ, ಆಗ ಆ ವಸ್ತುವಿನ ನೆರಳು ಅದರ ಸುತ್ತಮುತ್ತಲಿನ ನೆಲದ ಮೇಲೆ ಬೀಳುತ್ತದೆ. ಸೂರ್ಯನು ಆಕಾಶದಲ್ಲಿ ಮೇಲೇರುತ್ತಿದ್ದಂತೆ, ನೆರಳಿನ ಉದ್ದವು ಕಡಿಮೆಯಾಗುತ್ತದೆ ಮತ್ತು ಅದೇ ರೀತಿ ಸೂರ್ಯನು ಮುಳುಗುವ ಸಮಯದಲ್ಲಿ ನೆರಳಿನ ಉದ್ದವು ಹೆಚ್ಚಾಗುತ್ತಾ ಹೋಗುತ್ತದೆ. ಶೂನ್ಯ ನೆರಳಿನ ದಿನ ಇರುವ ದಿನ/ಸಮಯದಲ್ಲಿ ಸೂರ್ಯನು ವಸ್ತುವಿನ ತಲೆಯ ಮೇಲೆ ನಿಖರವಾಗಿ ಇರುವಾಗ, ಆ ನೆರಳು ನೇರವಾಗಿ ವಸ್ತುವಿನ ಕೆಳಗಿರುವ ಕಾರಣ, ವಸ್ತುವಿನ ನೆರಳಿನ (shadow) ನಮಗೆ ಗೋಚರಿಸುವುದಿಲ್ಲ. ಹಾಗಾಗಿ ಇದನ್ನು ಶೂನ್ಯ ನೆರಳು ಎನ್ನಲಾಗುತ್ತದೆ.(Zero Shadow)
ಬೆಂಗಳೂರಿನಲ್ಲಿ ಏಪ್ರಿಲ್ 25ರ ಮಧ್ಯಾಹ್ನ 12.17 ಕ್ಕೆ, ಸೂರ್ಯನು ನೇರವಾಗಿ ತಲೆಯ ಮೇಲೆ ಇರುತ್ತಾನೆ. ಹಾಗಾಗಿ ಅಂದು ಆ ಕ್ಷಣದಲ್ಲಿ ಯಾವುದೇ ಲಂಬವಾದ ವಸ್ತುವು ನೆರಳು ನೀಡುವುದಿಲ್ಲ. ಸೂರ್ಯ ನಡುನೆತ್ತಿಗೆ ಬರುವ ಸಮಯದಲ್ಲಿ ಶೂನ್ಯ ನೆರಳಿನ ದಿನವು ಘಟಿಸುತ್ತದೆ. ಈ ಪ್ರಕ್ರಿಯೆಯು ಕೇವಲ ಕೆಲವು ನಿಮಿಷಗಳಿಗಷ್ಟೇ ಸೀಮಿತವಾಗಿ ನಂತರ ಯಥಾ ಪ್ರಕಾರ ನೆರಳು ಬೀಳಲಾರಂಭಿಸುತ್ತದೆ
ಪ್ರಕೃತಿಯಲ್ಲಿ ಸಂಭವಿಸುವ ಇಂತಹ ವಿಸ್ಮಯಕಾರಿ ವಿಷಯವನ್ನು ಎಲ್ಲರಿಗೂ ವೈಜ್ಞಾನಿಕವಾಗಿ ಪರಿಚಯಿಸುವ ಮತ್ತು ಅದರ ಕುರಿತಾಗಿ ವಿಶೇಷವಾದ ಅರಿವವನ್ನು ಮೂಡಿಸುವ ಸಲುವಾಗಿ ಬೆಂಗಳೂರಿನ ಜವಾಹರಲಾಲ್ ನೆಹರು ತಾರಾಲಯವು ಈ ಸಮಯದಲ್ಲಿ ಹಲವು ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಆಸಕ್ತಿದಾಯಕ ವಿಜ್ಞಾನ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ.
ಪ್ರಕೃತಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ಉತ್ತರಾಯಣ ಮತ್ತು ದಕ್ಷಿಣಾಯಣ ಎಂಬ ಎರಡು ಆಯನಗಳಿವೆ. ಈ ಆಯನಗಳಲ್ಲಿ ಸೂರ್ಯನು ಬೆಳಕು +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವಿನ ಸ್ಥಳಗಳಿಗೆ ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ಮೇಲಕ್ಕೆ ಹೋಗುವುದಿಲ್ಲ, ಆದರೆ ಸಾಮಾನ್ಯವಾಗಿ ಎತ್ತರದಲ್ಲಿ ಸ್ವಲ್ಪ ಕಡಿಮೆ, ಉತ್ತರಕ್ಕೆ ಅಥವಾ ಸ್ವಲ್ಪ ದಕ್ಷಿಣಕ್ಕೆ ಸಾಗುತ್ತದೆ. ಭೂಮಿಯ ಪರಿಭ್ರಮಣೆಯ ಅಕ್ಷವು ಸೂರ್ಯನ ಸುತ್ತ ಅದರ ಕ್ರಾಂತಿಯ ಸಮತಲಕ್ಕೆ 23.5 ಡಿಗ್ರಿಗಳಷ್ಟು ಒಲವನ್ನು ಹೊಂದಿದೆ. ಇದರರ್ಥ ಸೂರ್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿ, ಆಕಾಶ ಸಮಭಾಜಕದ ದಕ್ಷಿಣಕ್ಕೆ 23.5 ಡಿಗ್ರಿಗಳಿಂದ ಸಮಭಾಜಕದ (ಉತ್ತರಾಯಣ) ಉತ್ತರಕ್ಕೆ 23.5 ಡಿಗ್ರಿಗಳಿಗೆ ಚಲಿಸುತ್ತಾನೆ ಮತ್ತು ಒಂದು ವರ್ಷದಲ್ಲಿ ಮತ್ತೆ (ದಕ್ಷಿಣಾಯಣ) ಚಲಿಸುತ್ತಾನೆ. ಸಹಜವಾಗಿ, ಉತ್ತರದ ಅತ್ಯಂತ ಮತ್ತು ದಕ್ಷಿಣದ ಹೆಚ್ಚಿನ ಬಿಂದುಗಳು ಎರಡು ಅಯನ ಸಂಕ್ರಾಂತಿಗಳು ಮತ್ತು ಸಮಭಾಜಕದ ಉದ್ದಕ್ಕೂ ಸೂರ್ಯನನ್ನು ದಾಟುವುದು ಎರಡು ವಿಷುವತ್ ಸಂಕ್ರಾಂತಿಗಳು.
ಹೀಗಾಗಿ, +23.5 ಮತ್ತು -23.5 ಡಿಗ್ರಿ ಅಕ್ಷಾಂಶದ ನಡುವೆ ವಾಸಿಸುವ ಜನರಿಗೆ, ಸೂರ್ಯನ ಅವನತಿಯು ಅವರ ಅಕ್ಷಾಂಶಕ್ಕೆ ಎರಡು ಬಾರಿ ಸಮನಾಗಿರುತ್ತದೆ – ಒಮ್ಮೆ ಉತ್ತರಾಯಣದಲ್ಲಿ ಮತ್ತು ಒಮ್ಮೆ ದಕ್ಷಿಣಾಯಣದ ಸಮಯದಲ್ಲಿ. ಈ ಎರಡು ದಿನಗಳಲ್ಲಿ, ಸೂರ್ಯನು ಮಧ್ಯಾಹ್ನದ ಸಮಯದಲ್ಲಿ ನಿಖರವಾಗಿ ತಲೆಯ ಮೇಲೆ ಇರುವ ಕಾರಣ, ಆ ವಸ್ತುವಿನ ನೆರಳು ಭೂಮಿಯ ಮೇಲೆ ಬೀಳುವುದಿಲ್ಲ. ಪ್ರತಿಯೊಂದು ಊರಿನ ಅಕ್ಷಾಂಶ ಮತ್ತು ರೇಖಾಂಶಗಳು ವಿಭಿನ್ನವಾಗಿರುವ ಕಾರಣ, ಈ ಶೂನ್ಯ ನೆರಳು ದಿನವು ವಿವಿಧ ಸ್ಥಳಗಳಲ್ಲಿ ವಿಭಿನ್ನ ದಿನಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ನಮ್ಮ ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ಯಾವ ಯಾವ ದಿನ ಶೂನ್ಯ ನೆರಳಿನ ದಿನವನ್ನು ಕಾಣಬಹುದು ಎಂಬುದನ್ನು ಈ ಚಿತ್ರದಲ್ಲಿ ಸ್ಪಷ್ಟವಾಗಿ ತಿಳಿಯಬಹುದಾಗಿದೆ
ಇಷ್ಟೆಲ್ಲಾ ತಿಳಿದುಕೊಂಡ ಮೇಲೆ ಇನ್ನೇಕೆ ತಡಾ? ಇಂದು ಮಧ್ಯಾಹ್ನ 12:17 ಕ್ಕೆ ಸರಿಯಾಗಿ ಮನೆಯ ಹೊರೆಗೆ ಬಂದು ಪ್ರಕೃತಿಯ ಈ ವಿಸ್ಮಯಕಾರಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಮೂಲಕ ಅದರ ಸವಿಯನ್ನು ಅನುಭವಿಸಿ ಎಲ್ಲರೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ