ಕರ್ನಾಟಕದ ರಾಜಾಧಾನಿ ಬೆಂಗಳೂರಿನಲ್ಲಿರುವ ಅಧಿಕಾರದ ಶಕ್ತಿ ಕೇಂದ್ರವಾದ ವಿಧಾನಸೌಧದಿಂದ ಕೂಗಳತೆ ದೂರದಲ್ಲೇ ಇರುವ ಜನರಲ್ ಪೋಸ್ಟ್ ಆಫೀಸ್ (ಜಿಪಿಒ) ನಂತಹ ಜನನಿಬಿಡ ಟ್ರಾಫಿಕ್ ಜಂಕ್ಷನ್ ಇರುವಂತಹ ವೃತ್ತಕ್ಕೆ ಪೊಲೀಸ್ ತಿಮ್ಮಯ್ಯ ಸರ್ಕಲ್ ಎಂದು ಹೆಸರಿಸಲಾಗಿದೆ. ಅರೇ ಶಕ್ತಿಕೇಂದ್ರದ ಅಕ್ಕ ಪಕ್ಕದಲ್ಲಿ ಸಾಧಾರಣವಾಗಿ ಯಾವುದೋ ಒಬ್ಬ ಹಿರಿಯ ರಾಜಕಾರಣಿಗಳ ಬದಲಾಗಿ ಸಾಮಾನ್ಯ ಪೋಲೀಸ್ ಒಬ್ಬರ ಹೆಸರನ್ನು ಇಡಲು ಕಾರಣವಾದರೂ ಏನೂ? ಎಂಬುದನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅದು 90ರ ದಶಕ. ಆಗಿನ್ನೂ ರಾಜಭವನದ ರಸ್ತೆ ಏಕಮುಖವಾಗಿರದೇ, ದ್ವಿಮುಖ ರಸ್ತೆಯಾಗಿದ್ದು ಇಂದಿನಷ್ಟು ಇಲ್ಲದೇ ಹೋದರೂ ಅಧಿಕವಾದ ವಾಹನಗಳು ಸಂಚರಿಸುತ್ತಲೇ ಇತ್ತು. ಆಗಿನ್ನೂ ನಂಬರ್ ಸಿಗ್ನಲ್ ಇಲ್ಲದೇ ಇದ್ದ ಕಾರಣ, ಪೋಲೀಸರೇ ಸಂಚಾರವನ್ನು ನಿಯಂತ್ರಿಸ ಬೇಕಾಗುತ್ತಿತ್ತು. ಅದರಲ್ಲೂ ಜಿಪಿಓ ಸಿಗ್ನಲ್ ನಲ್ಲಂತೂ ರಾಜ್ಯದ ಹಿರಿಯ ರಾಜಕಾರಣಿಗಳೆಲ್ಲರೂ ಅದೇ ಮಾರ್ಗವಾಗಿ ಪ್ರಯಾಣಿಸಬೇಕಾಗಿದ್ದ ಕಾರಣ ಅಲ್ಲಿ ಹೆಚ್ಚಿನ ಕಾರ್ಯ ಕ್ಷಮತೆಯನ್ನು ಹೊಂದಿರುವ ಮತ್ತು ಅಷ್ಟೇ ಜನಾನುರಾಗಿ ಆಗಿರುವಂತಹ ಸಂಚಾರಿ ಪೋಲೀಸ್ ಅವಶ್ಯಕತೆ ಇತ್ತು. ಅಂತಹ ಪೋಲಿಸರ ತಲಾಶೆಯಲ್ಲಿದ್ದಾಗಲೇ, ಸಿಕ್ಕವರೇ, ಪೋಲೀಸ್ ಮೀಸೆ ತಿಮ್ಮಯ್ಯ.
ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನವರಾದ ತಿಮ್ಮಯ್ಯನವರು 1977 ರಲ್ಲಿ ಬೆಂಗಳೂರು ಪೋಲೀಸ್ ಇಲಾಖೆಗೆ ಸೇರಿಕೊಳ್ಳುತ್ತಾರೆ. ಹಾಗೆ ನೋಡಿದರೆ ತಿಮ್ಮಯ್ಯನವರಿಗೆ ಪೋಲೀಸ್ ಕೆಲಸವೇನೂ ಮೊದಲ ಆದ್ಯತೆ ಆಗಿರಲಿಲ್ಲ. ಅವರು ಶಿಕ್ಷಕರಾಗಬೇಕೆಂದು ಟಿಸಿಹೆಚ್ ಮಾಡಿದ್ದರು. ಆದರೆ ಪೋಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕಾಗ, ಸರ್ಕಾರಿ ಕೆಲಸ ದೇವರ ಕೆಲಸ ಎಂದು ತಿಳಿದು ಪಾಲಿಗೆ ಬಂದದ್ದು ಪಂಚಾಮೃತ ಎಂದು ಪೋಲೀಸ್ ಇಲಾಖೆಗೆ ಸೇರಿಕೊಂಡಿದ್ದರು. ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳ ಬಾಳನ್ನು ಬೆಳಗಬೇಕಾಗಿದ್ದವರು, ಕಾನೂನು ರಕ್ಷಕರಾಗಿ ಹೋದರು. ಎತ್ತರದ ಸ್ವಲ್ಪ ದಡೂತಿ ಎನಿಸುವಷ್ಟೇ ಇದ್ದ ತಿಮ್ಮಯ್ಯನವರು ಪೋಲೀಸ್ ಇಲಾಖೆಗೆ ಸೇರಿದ ಒಂದು ವರ್ಷದ ನಂತರ ಅವರು ಶ್ರೀಮತಿ ಲಕ್ಷ್ಮಮ್ಮ ಎಂಬುವವರನ್ನು ಮದುವೆಯಾಗಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ನಂತರದ ದಿನಗಳಲ್ಲಿ ಸಂಚಾರಿ ವಿಭಾಗಕ್ಕೆ ವರ್ಗಾವಣೆ ಆದಾಗ, ಸ್ವಲ್ಪ ವಿಭಿನ್ನವಾಗಿ ಕಾಣಿಸಿಕೊಳ್ಳುವ ಆಸೆಯಿಂದಾಗಿ ತಿಮ್ಮಯ್ಯನವರು 1985ರ ಹೊತ್ತಿಗೆ ದಪ್ಪನಾದ ಗಿರಿಜಾ ಮೀಸೆಯನ್ನು ಬೆಳೆಸಲು ಪ್ರಾರಂಭಿಸಿದ ನಂತರ ಬಲು ಬೇಗನೆ ಎಲ್ಲರ ಆಕರ್ಷಣೆಯ ವ್ಯಕ್ತಿಯಾಗಿ ಅಲ್ಲಿಯ ವರೆಗೂ ಪೋಲಿಸ್ ತಿಮ್ಮಯ್ಯ ಎಂದು ಹೆಸರಾಗಿದ್ದವರೂ ಪೋಲೀಸ್ ಮೀಸೆ ತಿಮ್ಮಯ್ಯ ಎಂದೇ ಹೆಸರಾಗುತ್ತಾರೆ.
ಶಿಸ್ತು ಮತ್ತು ಸಂಯಮಕ್ಕೆ ಹೆಸರಾಗಿರುವ ಪೋಲೀಸ್ ಇಲಾಖೆಯಲ್ಲಿ ಎಲ್ಲರೂ ಅಚ್ಚುಕಟ್ಟಾಗಿ ಮತ್ತು ಕ್ಲೀನ್ ಶೇವಿಂಗ್ ಮಾಡುವುದು ಖಡ್ಡಾಯವಾದರೂ ಗಿರಿಜಾ ಮೀಸೆ ಬಿಡುವುದಕ್ಕೆ ಅನುಮತಿ ಇದ್ದು, ಉತ್ತಮವಾಗಿ ಮೀಸೆ ಬೆಳಸಿದವರಿಗೆ ಇಲಾಖೆಯ ವತಿಯಂದ ಅದರ ಶೃಂಗಾರಕ್ಕಾಗಿ ವಾರ್ಷಿಕ ಭತ್ಯೆ ಸಹಾ ಕೊಡುವ ಪದ್ದತಿ ಇದ್ದು ತಿಮ್ಮಯ್ಯ ಅವರ ಮೀಸೆಯ ಜನಪ್ರಿಯತೆಯಿಂದಾಗಿ ಪ್ರತೀ ವರ್ಷ ₹ 500 ಭತ್ಯೆಯನ್ನು ಪಡೆಯುತ್ತಿದ್ದರು. ದಪ್ಪನೆಯ ಕಪ್ಪನೆಯ ದೊಡ್ಡ ಮೀಸೆಯಿಂದಾಗಿ ತಿಮ್ಮಯ್ಯನವರು ಅತಿ ಶೀಘ್ರದಲ್ಲಿಯೇ ಬಲು ಜನಪ್ರಿಯತೆ ಗಳಿಸಿದ್ದ ಕಾರಣ, ಪ್ರತಿದಿನ ಬೆಳಗ್ಗೆ ಕೆಲಸಕ್ಕೆ ಹೋರಡುವ ಮುನ್ನ ಮೀಸೆಗೆ ಚೆನ್ನಾಗಿ ಎಣ್ಣೆಯನ್ನು ಹಾಕುವ ಮೂಲಕ ಮಿರಿ ಮಿರಿ ಮಿಂಚುವಂತೆ ಹುರಿಗೊಳಿಸುತ್ತಿದ್ದರು ಎಂದು ಅವರ ಪತ್ನಿಯವರಾದ ಶ್ರೀ ಲಕ್ಷ್ಮಮ್ಮ ಆವರು ನೆನಪಿಸಿಕೊಳ್ಳುತ್ತಾರೆ.
ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ/ ಲೋಕೋತ್ತರಾಣಾಂ ಚೇತಾಂಸಿ ಕೋಹಿವಿಜ್ಞಾತುಮರ್ಹತಿ//
ಸಜ್ಜನರ, ಒಳ್ಳೆಯವರ ಮನಸ್ಸು, ಒಂದೊಂದು ಸಮಯ ಸಂದರ್ಭಕ್ಕೆ ಅನುಗುಣವಾಗಿ, ವಜ್ರಕ್ಕಿಂತಲೂ ಕಠಿಣ ಇದ್ದರೂ, ಕೆಲವು ಸಂದರ್ಭದಲ್ಲಿ ಹೂವಿನ ಎಸಳಿನಷ್ಟು ಮೃದುತ್ವ ಮತ್ತು ಕೋಮಲತೆಯನ್ನು ಹೊಂದಿರುತ್ತದೆ. ಹಾಗಾಗಿ ಸಜ್ಜನಿಕೆ ಹೇಳುವುದು ಯಾವಾಗಲೂ ಪುಟಕ್ಕಿಟ್ಟ ಚಿನ್ನದ ಹಾಗೆ ಎನ್ನುವ ಈ ಶುಭಾಷಿತಕ್ಕೆ ಅನ್ವಯವಾಗುವಂತೆಯೇ ಮೀಸೆ ತಿಮ್ಮಯ್ಯನವರ ವ್ಯಕ್ತಿತ್ವ ಇತ್ತು ಎಂದರೂ ಅತಿಶಯವಾಗದು. ಪೋಲೀಸ್ ಸಮವಸ್ತ್ರ ಧರಿಸಿದ ಗಿರಿಜಾ ಮೀಸೆಯ ತಿಮ್ಮಯ್ಯನವರು ನೋಡಲು ಅತ್ಯಂತ ಕಠಿಣ ಹೃದಯದ ಕಠೋರ ಮನಸ್ಸಿನ ವ್ಯಕ್ತಿ ಎನಿಸಿದರೂ ನಿಜ ಜೀವನದಲ್ಲಿ ಅವರದ್ದು ಹೂವಿನಂತಹ ಮನಸ್ಸಾಗಿತ್ತು.
ಆ ರಸ್ತೆಯಲ್ಲಿ ಅಂದಿನ ಕಾಲದಲ್ಲಿ ಓಡಾಡುತ್ತಿದ್ದ ಬಿ.ಟಿ.ಎಸ್. ಬಸ್‌ಗಳಲ್ಲಿ ಫುಟ್‌ಬೋರ್ಡ್ ಮೇಲೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ಮಧ್ಯವನ್ನು ಸೇವಿಸಿ ಗಾಡಿಯನ್ನು ಚಲಾಯಿಸುತ್ತಿದ್ದ ವಾಹನ ಚಾಲಕರು ಮತ್ತು ಸಂಚಾರ ನಿಯಮ ಉಲ್ಲಂಘಿಸುವವರಿಗೆ ನಿದಾಕ್ಷಿಣ್ಯವಾಗಿ ತಮ್ಮ ಲಾಠಿ ರುಚಿಯನ್ನು ತೋರಿಸಲು ಹಿಂದು ಮುಂದೂ ನೋಡದೇ ಇರುತ್ತಿದ್ದ ಮೀಸೆ ತಿಮ್ಮಯ್ಯನವರನ್ನು ಕಂಡರೆ ಭಯಪಡುತ್ತಿದ್ದರು. ಕರ್ತವ್ಯದ ಮೇಲೆ ಇದ್ದಾಗ ಬಲು ಕಾನೂನು ಪಾಲನೆಗೆ ಒತ್ತಿ ನೀಡುತ್ತಿದ್ದರೂ, ಆ ವೃತ್ತದಲ್ಲಿ ಸಂಚರಿಸುತ್ತಿದ್ದ ಪ್ರತೀ ವಾಹನ ಚಾಲಕರುಗಳಿಗೂ, ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ತಮ್ಮ ಮುಗುಳ್ನಗೆಯ ಮೂಲಕವೇ ಆತ್ಮೀಯರಾಗಿದ್ದರು ಎನ್ನುವುದು ಗಮನಾರ್ಹವಾಗಿತ್ತು.
ಪೋಲೀಸ್ ತಿಮ್ಮಯ್ಯನವರ ಮತ್ತು ಜನರ ನಡುವಿನ ಸಂಬಂಧ ಹೇಗೆ ಇರುತ್ತಿತ್ತು ಎಂದರೆ, ಆ ವೃತ್ತದಲ್ಲಿ ನಿಂತ ವಾಹನ ಚಾಲನನೊಬ್ಬ ಸಿಗ್ನಲ್ ಬಿಡುವ ಮುನ್ನವೇ ವಾಹನವನ್ನು ಚಲಾಯಿಸಲೋ ಇಲ್ಲವೇ ಮತ್ತೇನೋ ಮಾಡಲು ಚಡಪಡಿಕೆಯಿಸುತ್ತಿದ್ದರೆ, ಕೂಡಲೇ ಕಣ್ಣಿನಿಂದಲೇ ಕಣ್ಸನ್ನೆಯಲ್ಲೇ ಎಚ್ಚರಿಸುತ್ತಿದ್ದರು, ಅಗ ಅವನ್ನು ನೋಡಿ ಆ ವಾಹನ ಸವಾರ ಒಂದು ರೀತಿಯಾಗಿ ಕ್ಷಮೆಯಾಚಿಸಿದರೆ, ಹಾಗೇ ಒಂದು ಸಣ್ಣ ಕಿರು ನಗೆಯನ್ನು ಅವರತ್ತ ಬೀರಿ ತಮ್ಮ ಕರ್ತವ್ಯವನ್ನು ಮುಂದುವರೆಸುತ್ತಿದ್ದರು. ಇಂತಹ ವ್ಯಕ್ತಿತ್ವದಿಂದಾಗಿಯೇ, ಆ ಕಡೆ ಸಂಚರಿಸುವ ಪ್ರತಿಯೊಬ್ಬರೂ ಜಿಪಿಓ ವೃತ್ತದಲ್ಲಿ ಬಂದಾಗ ಒಂದು ಕ್ಷಣ ನಿಂತು ಮೀಸೆ ತಿಮ್ಮಯ್ಯನವರನು ಕಣ್ತುಂಬಿಸಿಕೊಂಡು ಒಂದು ಮುಗುಳ್ನಗೆಯ ವಿನಿಮಯ ಮಾಡಿಕೊಂಡು ಹೋಗುತ್ತಿದ್ದರು. ಅದರಲ್ಲೂ ಸರ್ಕಾರಿ ಕಚೇರಿಗಳಿಂದಲೇ ಆವೃತ್ತವಾಗಿದ್ದ ಕಾರಣ, ಅಲ್ಲಿನ ಅನೇಕ ಸರ್ಕಾರಿ ಸಿಬ್ಬಂದಿಗಳು ಮೀಸೆ ತಿಮ್ಮಯ್ಯನವರಿಗೆ ಚಿರಪರಿಚಿತರಾಗಿದ್ದರು.
ಹೀಗೆ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದ ತಿಮ್ಮಯ್ಯನವರು ಕರ್ತವ್ಯದ ಮೇಲೆ ಇರುವಾಗಲೇ, ಆಗಸ್ಟ್ 26, 1995 ರ ಶನಿವಾರದ ಮಧ್ಯಾಹ್ನದ ಸ್ವಲ್ಪ ಮಳೆಯೂ ಬೀಳುತ್ತಿತ್ತು ಅದೇ ಸಮಯದಲ್ಲಿ ದಿ ಕ್ಯಾಪಿಟಲ್ ಹೋಟೆಲ್ ಬಳಿ ರಸ್ತೆ ದಾಟುತ್ತಿದ್ದ ಮಹಿಳೆ ಹಾಗೂ ಅವರ ಪುತ್ರಿಯನ್ನು ವೇಗವಾಗಿ ಬಂದ ಟ್ರಕ್ಕೊಂದು ಇನ್ನೇನು ಡಿಕ್ಕಿ ಹೊಡೆಯವುದರಲ್ಲಿತ್ತು. ಅದನ್ನು ಗಮನಿಸಿದ ಮೀಸೆ ತಿಮ್ಮಪ್ಪನವರು ಕೂಡಲೇ ಅವರಿಬ್ಬರನ್ನು ರಕ್ಷಿಸಲು ಹೋದಾಗ, ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಆ ತಾಯಿ ಮಕ್ಕಳಿಬ್ಬರೂ ಅಪಘಾತದಿಂದ ಪಾರಾದರೆ, ಆ ವೇಗದ ಟ್ರಕ್ ತಿಮ್ಮಯ್ಯನವರಿಗೆ ಡಿಕ್ಕಿ ಹೊಡೆದು ಮೀಸೆ ತಿಮ್ಮಯ್ಯನವರು ಆ ಟ್ರಕ್ಕಿನ ಅಡಿಯಲ್ಲಿ ಸಿಕ್ಕಿಕೊಂಡು ಆ ವಾಹನ ತಿಮ್ಮಯ್ಯನವರ ಮೇಲೆ ಹರಿದ ಪರಿಣಾಮ ಅ ಕ್ಷಣದಲ್ಲೇ ಅದೇ ಸ್ಥಳದಲ್ಲೇ ತಿಮ್ಮಯ್ಯನವರು ಅಸುನೀಗಿದರು. ಕಾಳ್ಗಿಚ್ಚಿನಂತೆ ಈ ಸುದ್ದಿ ನಗರಾದ್ಯಂತ ಹರಡಿ ಎಲ್ಲರೂ ಮೀಸೆ ತಿಮ್ಮಯ್ಯನವರ ಅಕಾಲಿಕ ಮರಣಕ್ಕೆ ದುಃಖವನ್ನು ವ್ಯಕ್ತಪಡಿಸಿದರು. ಈ ಪ್ರಸಂಗ ನಡೆದ ಸುಮಾರು ತಿಂಗಳುಗಳ ಕಾಲ ಆ ವೃತ್ತದಲ್ಲಿ ಸಂಚಾರ ಮಾಡುತ್ತಿದ್ದವರಿಗೆ ಮೀಸೆ ತಿಮ್ಮಯ್ಯನವರನ್ನು ಕಾಣದೇ ಒಂದು ಸೂತಕದ ಛಾಯೆಯಂತಾಗಿತ್ತು ಎಂದರೂ ಅತಿಶಯವೆಸದಾಗಿತ್ತು. ಕರ್ತವ್ಯದ ಮೇಲೆ ಇದ್ದಾಗ ಪಾದಾಚಾರಿಗಳನ್ನು ರಕ್ಷಿಸಲು ಹೋಗಿ ಹುತಾತ್ಮರಾದ ಮೀಸೆ ತಿಮ್ಮಯ್ಯನವರ ಪರಾಕ್ರಮಕ್ಕಾಗಿ ರಾಜ್ಯ ಸರ್ಕಾರವು ಮರಣೋತ್ತರವಾಗಿ ಗೌರವಿಸಿದ್ದಲ್ಲದೇ, ಅವರ ನೆನಪಿನಾರ್ಥವಾಗಿ ಅವರು ಕರ್ತವ್ಯ ಮಾಡುತ್ತಿದ್ದ ಜಿಪಿಒ ವೃತ್ತಕ್ಕೆ ಪೊಲೀಸ್ ತಿಮ್ಮಯ್ಯ ವೃತ್ತ ಎಂದು ಹೆಸರಿಡುವ ಮೂಲಕ ಅವರ ತ್ಯಾಗ ಮತ್ತು ಬಲಿದಾನಗಳು ಶಾಶ್ವತವಾಗುವಂತೆ ಮಾಡಿತು.
ಮೀಸೆ ತಿಮ್ಮಯ್ಯನವರ ಮರಣದ ನಂತರ ಅದೇ ವೃತ್ತಕ್ಕೆ ಮತ್ತೊಬ್ಬ ಗಿರಿಜಾ ಮೀಸೆ ಬಿಟ್ಟಿರುವ ಪೋಲೀಸರನ್ನು ನಿಯುಕ್ತಿ ಮಾಡಿದರೂ ಸಹಾ ಅವರು ಮೀಸೆ ತಿಮ್ಮಯ್ಯನವರಷ್ಟು ಪ್ರಸಿದ್ಧಿ ಹೊಂದದೇ ಕೆಲವೇ ತಿಂಗಳುಗಳ ನಂತರ ಅಲ್ಲಿಂದ ಸದ್ದಿಲ್ಲದೇ ಮತ್ತೊಂದು ಪ್ರದೇಶಕ್ಕೆ ವರ್ಗಾವಣೆ ಮಾಡಿಸಿಕೊಂಡು ಹೋದರು ಎಂದರೆ ಮೀಸೆ ತಿಮ್ಮಯ್ಯನವರ ಖ್ಯಾತಿ ಎಷ್ಟರ ಮಟ್ಟಿಗೆ ಇತ್ತು ಎಂಬುದರ ಅರಿವಾಗುತ್ತದೆ.
ತುಮಕೂರಿನ ಮರೀಚಿಕ್ಕಯ್ಯ ತಿಮ್ಮಯ್ಯನವರು ಮೃತರಾದಾಗ ಅವರ ಪತ್ನಿ ಲಕ್ಷ್ಮಮ್ಮ ಮತ್ತು ಮೂರು ಚಿಕ್ಕ ಮಕ್ಕಳನ್ನು ಅಗಲಿದ್ದರು. ಇನ್ನೂ ದುಃಖಕರವಾದ ವಿಷಯವೆಂದರೆ ಅವರು ಮೃತಪಡುವುದಕ್ಕೆ ಕೇವಲ ಎರಡು ತಿಂಗಳ ಹಿಂದೆಯಷ್ಟೇ ವಾಸಿಸಲು ಗೊರಗುಂಟೆಪಾಳ್ಯದಲ್ಲಿ ಮನೆಯೊಂದನ್ನು ಸಾಲ ಸೋಲ ಮಾಡಿ ನಿರ್ಮಿಸಿದ್ದರು. ಕುಟುಂಬದ ನಿರ್ವಹಣೆಯನ್ನು ಹೊತ್ತಿಕೊಂಡ ಶ್ರೀಮತಿ ಲಕ್ಷಮ್ಮನವರು ಸುಮಾರು ಮೂರು ವರ್ಷಗಳ ಕಾಲ ತಮ್ಮ ಮನೆಯ ಸಮೀಪವೇ ಇದ್ದ ಬಟ್ಟೆ ತಯಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ, ಅವರಿಗೆ ರಾಜ್ಯ ಸರ್ಕಾರ ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ತುಮಕೂರು ಕಚೇರಿಯಲ್ಲಿ ವಿಭಾಗ ಸಹಾಯಕಿ ಕೆಲಸ ನೀಡಿದ ನಂತರ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ತಾಯಿಯ ಆಶ್ರಯದಲ್ಲೇ ಬೆಳೆದ ಆ ಮಕ್ಕಳಲ್ಲಿ ಹಿರಿಯ ಮಗ ಅರುಣ್ ಕುಮಾರ್ ಫಿಟ್‌ನೆಸ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಅವರ ಸಹೋದರ ವೇಣು ಪ್ರಸಾದ್ ನಗರದಲ್ಲಿ ಕ್ಯಾಬ್ ಓಡಿಸುತ್ತಿದ್ದಾರೆ ಅವರಿಬ್ಬರ ಸಹೋದರಿ ಚೈತ್ರಾ ಅವರಿಗೆ ಮದುವೆಯಾಗಿ ಗೃಹಿಣಿಯಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.
ತಿಮ್ಮಯ್ಯನವರಿಗೆ ಗೌರವ ಸಲ್ಲಿಸಲು ಫೋರ್ಟಿಸ್ ಆಸ್ಪತ್ರೆಯ ಸಹಯೋಗದೊಂದಿಗೆ ಬೆಂಗಳೂರು ನಗರದ ಸಂಚಾರ ಪೊಲೀಸರು ಆಯೋಜಿಸುವ ಜಾಗೃತಿ ಕಾರ್ಯಕ್ರಮಗಳು, ಯೋಜನೆಗಳ ಜಾರಿ ವೇಳೆ ಪೋಸ್ಟರ್‌ಗಳು, ಭಿತ್ತಿಪತ್ರಗಳು, ಬ್ಯಾನರ್‌ಗಳ ಮೇಲೆ ಸಂಚಾರ ನಿಯಂತ್ರಣದ ವೇಳೆ ವಾಹನ ಡಿಕ್ಕಿಯಲ್ಲಿ ಪ್ರಾಣತೆತ್ತ ದಿ. ಹೆಡ್ ಕಾನ್ಸ್‌ಟೆಬಲ್ ಮೀಸೆ ತಿಮ್ಮಯ್ಯ ಅವರ ಹುರಿ ಮೀಸೆಯನ್ನೇ ಹೋಲುವಂತಹ ಚಿತ್ರವನ್ನು ಬಳಸಿಕೊಳ್ಳಲು ತೀರ್ಮಾನಿಸುವ ಮೂಲಕ, ಆ ಪ್ರಸಿದ್ಧ ಟ್ರಾಫಿಕ್ ಪೋಲೀಸ್ ಅವರ ಟ್ರೇಡ್‌ಮಾರ್ಕ್ ಆದ ಪೊದೆ ಮೀಸೆ ಜೊತೆಗೆ ತ್ಯಾಗ ಮತ್ತು ಶೌರ್ಯವನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯವಾಗಿರುವುದಲ್ಲದೇ, ಅತೀ ವೇಗದಿಂದ ಮತ್ತು ನಿರ್ಲಕ್ಷದಿಂದ ವಾಹನವನ್ನು ಚಲಾಯಿಸಿ ಅಮಾಯಕರ ಬಲಿಯನ್ನು ತೆಗೆಯದಿರಿ ಎಂಬುವ ಎಚ್ಚರಿಕೆಯನ್ನು ವಾಹನ ಚಾಲಕರಿಗೆ ನೀಡುವಂತಿದೆ.
ಹೀಗೆ ಬೆಂಗಳೂರಿನ ಪ್ರತಿಯೊಂದು ರಸ್ತೆ, ಗಲ್ಲಿಗಳು, ಕಟ್ಟಡಗಳು, ಪ್ರದೇಶಗಳು ಮತ್ತು ವೃತ್ತಗಳಿಗೂ ಒಂದೊಂದು ಹೆಸರಿದ್ದು, ಆ ಹೆಸರಿನ ಹಿಂದೆ ರೋಚಕವಾದ ಇಲ್ಲವೇ ಇಂತಹ ತ್ಯಾಗ ಬಲಿದಾನಗಳ ಹೃದಯ ವಿದ್ರಾವಕ ಕಥೆಗಳೂ ಇರುತ್ತದೆ. ಅಂತಹ ಕಧೆಗಳನ್ನು ತಿಳಿದುಕೊಂಡು ಅವರ ಬಗ್ಗೆ ಒಮ್ಮೆ ಅರಿತು ಕೊಂಡು ಆ ಮಹಾನ್ ವ್ಯಕ್ತಿಗಳಿಗೆ ಒಂದು ಪ್ರಣಾಮಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ನಾಗರೀಕರ ಅದ್ಯ ಕರ್ತವ್ಯವೇ ಆಗಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಹೌದು, ಗಿರಿಜಾ ಮೀಸೆಯ ತಿಮ್ಮಯ್ಯ ನವರನ್ನು ನಾನೂ ನೋಡುತ್ತಿದ್ದೆ. ಲೇಖನ ಚೆನ್ನಾಗಿದೆ. ಧನ್ಯವಾದಗಳು
LikeLiked by 1 person
ಧನ್ಯೋಸ್ಮಿ
LikeLike