ರಾಜ ಗಾಂಭೀರ್ಯದ ಬಲರಾಮ ಇನ್ನಿಲ್ಲ.

bala2ಮೈಸೂರು ಎಂದ ತಕ್ಷಣವೇ ನಮಗೆ ನೆನಪಾಗೋದೇ ಮೈಸೂರು ದಸರಾ, ಆನೆಯ ಮೇಲೆ ತಾಯಿ ಚಾಮುಂಡೇಶ್ವರಿಯ ಅಂಬಾರಿ, ವೈಭವೋಪೇತ ಮೈಸೂರು ಅರಮನೆ. ಮೈಸೂರು ದಸರಾದಲ್ಲಿ ಸಾಮಾನ್ಯವಾಗಿ ಅಂಬಾರಿಯನ್ನು ಹೊರುವ ಆನೆಯ ಜೊತೆ ನಾಲ್ಕು ಆನೆಗಳು ಸೇರಿ ಒಟ್ಟು ಐದು ಆನೆಗಳು ಇರುತ್ತವೆ. ಲಕ್ಷಾಂತರ ಜನರು ಸೇರುವ ದಸಾರದ ಗದ್ದಲ, ಪೋಲೀಸರ ಬ್ಯಾಂಡಿನ ಜೊತೆ ಕುಶಲ ತೋಪಿನ ಶಬ್ಧ ಇವೆಲ್ಲವನ್ನೂ ಸಹಿಸಿಕೊಂಡು ಅರಮನೆಯಂದ ಬನ್ನಿ ಮಂಟಪದವರೆಗೂ ಸುಮಾರು ಆರು ಕಿಮೀ ದೂರ ನಿಧಾನವಾಗಿ ಕ್ರಮಿಸುವುದಕ್ಕೆ ಒಂದೇ ಬಾರಿಗೆ ಎಲ್ಲಾ ಆನೆಗಳನ್ನು ಬಳಸಿಕೊಳ್ಳುವುದಿಲ್ಲ. ಖೆಡ್ಡಾದಲ್ಲಿ ಹಿಡಿದ ಆನೆಗಳನ್ನು ಮೊದಲಿಗೆ ಪಳಗಿಸಿ, ಅವುಗಳನ್ನು ಸೌಮ್ಯ ಸ್ವಭಾವಕ್ಕೆ ತಂದು ದಿನೇ ದಿನೇ ಅವುಗಳಿಗೆ ತರಭೇತಿ ನೀಡಿ ಮೊದಲು ಸಣ್ಣ ಪ್ರಮಾಣದ ಭಾರವನ್ನು ಹೊರಿಸಿ ಅವುಗಳ ನಡುವಳಿಕೆಗಳನ್ನು ಗಮನಿಸಿ ನಂತರ ಪಟ್ಟದ ಆನೆಯಾಗಿ ಪರಿವರ್ತಿಸಲಾಗುತ್ತದೆ.

ಈ ಮೊದಲು ಮೈಸೂರಿನ ದಸರಾದಲ್ಲಿ ಚಿನ್ನದ ಅಂಬಾರಿಯನ್ನು ಸುದೀರ್ಘವಾಗಿ 19 ವರ್ಷಗಳ ಹೊತ್ತು ನಡೆದ ಕೀರ್ತಿ ದ್ರೋಣನಿಗೆ ಸಲ್ಲುತ್ತದೆ ಅತ್ಯಂತ ಎತ್ತರ ಮತ್ತು ಗಾತ್ರಕ್ಕೆ ಹೆಸರುವಾಸಿಯಾಗಿದ್ದ ದ್ರೋಣನಿಗೆ ಸರಿಸಮನಾದ ಆನೆ ಮತ್ತೊಂದಿರಲಿಲ್ಲ, ಅವನ ಮಟ್ಟಸವಾದ ಭುಜದ ಮೇಲೆ ತಾಯಿ ಚಾಮುಂಡೇಶ್ವರಿ ಪುತ್ಥಳಿಯ ಅಂಬಾರಿ ಕೂರಿಸಿ, ಅರಮನೆಯಿಂದ ಸುಮಾರು ಆರು ಕಿಲೋಮೀಟರ್ ದೂರ ಮೆರವಣಿಗೆಯಲ್ಲಿ ಬನ್ನಿಮಂಟಪದ ಮೈದಾನ ಸೇರುವವರೆಗೂ ತಾಯಿ ಚಾಮುಂಡೇಶ್ವರಿಯ ಚಿನ್ನದ ಅಂಬಾರಿಯನ್ನು ಒಂದಿಷ್ಟೂ ಕೊಂಕಿಸದ ಹೆಗ್ಗಳಿಕೆ ದ್ರೋಣನದ್ದಾಗಿತ್ತು. ಅಷ್ಟೊಂದು ಗೌಜು ಗದ್ದಲಗಳ ನಡುವೆಯೂ ಸತತ ಹತ್ತೊಂಬತ್ತು ವರ್ಷಗಳ ಕಾಲ ಅಂಬಾರಿ ಹೊತ್ತಿದ್ದರೂ ಒಮ್ಮೆಯೂ ಯಾವುದೇ ರೀತಿಯ ತೊಂದರೆಯನ್ನು ಕೊಡದೇ ಇದ್ದ ದ್ರೋಣ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.

bala4ದ್ರೋಣನ ನಂತರ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿಯನ್ನು ಹೊರುವ ಕಾಯಕ ಬಲರಾಮನ ಮೇಲೆ ಬಿತ್ತು. ಅತ್ಯಂತ ಎತ್ತರವಾಗಿ ದಷ್ಟಪುಷ್ಟನಾಗಿದ್ದ ಬಲರಾಮನೂ ಸಹಾ ಸಾಧು ಸ್ವಭಾವದವನಾಗಿದ್ದ ಕಾರಣ, ಸುಮಾರು 14 ಬಾರಿ ಅಂಬಾರಿಯನ್ನು ಹೊರುವ ಮೂಲಕ ಜನಮನ್ನಣೆಯನ್ನು ಪಡೆದಿದ್ದ. 1978ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯದಲ್ಲಿ ನಡೆದ ಖೆಡ್ಡಾದ ಮೂಲಕ ಸೆರೆ ಸಿಕ್ಕು ಅರಣ್ಯ ಇಲಾಖೆಯ ಸುಪರ್ದಿಗೆ ಬಂದಾಗ ಬಲರಾಮ ಉಳಿದ ಕಾಡಾನೆಗಳಂತೆ ಪುಂಡತನಕ್ಕೆ ಹೆಸರುವಾಸಿಯಾಗಿದ್ದ. ಆಗ್ಗಾಗ್ಗೆ ರೈತರ ಹೊಲಗದ್ದೆಗಳಿಗೋ ಇಲ್ಲವೇ ಕಾಫಿ ತೋಟಗಳಿಗೆ ನುಗ್ಗಿ ಪುಂಡಾಟ ನಡೆಸುತ್ತಿದ್ದರಿಂದ ಬೇಸತ್ತ ಸ್ಥಳೀಯರು ಅರಣ್ಯ ಇಲಾಖೆಗೆ ದೂರನ್ನಿತ್ತಾಗ, ಅರಣ್ಯ ಇಲಾಖೆಯ ಸಿಬ್ಬಂಧಿಗಳು ಅತ್ಯಂತ ಶ್ರಮವಹಿಸಿ ಬಲರಾಮನನ್ನು ಸರೆ ಹಿಡಿದು, ತಿತಿಮತಿ ಬಳಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲು ಕಳುಹಿಸಲಾಯಿತು. ಆರಂಭದಲ್ಲಿ ಪುಂಡನಾಗಿದ್ದ ಬಲರಾಮ ನಂತರ ಅಲ್ಲಿನ ಕಾವಾಡಿಗಳ ಮಾತನ್ನು ಕೇಳಲಾರಂಭಿಸಿ, ಸಾಧು ಸ್ವಭಾವದವನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.

bala5ಸರಿ ಸುಮಾರು 2.70 ಮೀಟರ್ ಎತ್ತರ ಮತ್ತು 3.77ಮೀ. ಉದ್ದದಿಂದ ಕೂಡಿ ಅತ್ಯಂತ ಲಶಾಲಿಯಾಗಿದ್ದಲ್ಲದೇ ಆತನ ನಡವಳಿಕೆಯು ಶಾಂತ ರೀತಿಯಲ್ಲಿದ್ದ ಕಾರಣ ಆತನನ್ನು ಆನೆ ಶಿಬಿರದಲ್ಲಿ ಇತರೆ ಪುಂಡಾನೆಗಳನ್ನು ಸೆರೆಹಿಡಿಯಲು ಮತ್ತು ಪಳಗಿಸಲು ಬಳಸಿಕೊಳ್ಳಲಾಗುತ್ತಿತ್ತು. ನಂತರದ ದಿನಗಳಲ್ಲಿ ಆತನ ಕಾರ್ಯಕ್ಷಮತೆಯನ್ನು ಗಮನಿಸಿ ಮೈಸೂರು ದಸರಾ ಜಂಬೂಸವಾರಿಗೆ ಬಳಸಲಾಗುವ ಐದು ಆನೆಗಳಲ್ಲಿ ಬಲರಾಮನನ್ನೂ ಒಬ್ಬನಾಗಿ ಆಯ್ಕೆ ಮಾಡಲಾಗಿತ್ತು. 1999ರಲ್ಲಿ ಮೈಸೂರು ದಸರಾದಲ್ಲಿ ದ್ರೋಣನ ನಂತರ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತ ಬಲರಾಮ ಅಲ್ಲಿಂದ 2011ರವರೆಗೆ ನಿರಂತರವಾಗಿ 14 ವರ್ಷಗಳ ಕಾಲ ಅಂಬಾರಿ ಹೊರುತ್ತಾ ಬಂದಿದ್ದ ಬಲರಾಮನನ್ನು 2012ರಲ್ಲಿ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಗೊಳಿಸಲಾದರೂ, ದಸರಾದಲ್ಲಿ ನಿಶಾನೆ ಆನೆಯಾಗಿ ಸುಮಾರು ೨೫ ವರ್ಷಗಳ ಕಾಲ ದಸರಾದಲ್ಲಿ ಪಾಲ್ಗೊಂಡಿದ್ದ ಬಲರಾಮನಿಗೆ ವಯಸ್ಸಾದ ಹಿನ್ನಲೆಯಲ್ಲಿ 2020ರಿಂದ ದಸರಾದಿಂದ ಮುಕ್ತಿಯನ್ನು ನೀಡಲಾಗಿತ್ತು.

bala6ಇದೆಲ್ಲದರ ಮಧ್ಯೆ ಅನೇಕರಿಗೆ ಬಲರಾಮನ ಬಗ್ಗೆ ತಿಳಿಯದಿರುವ ಮತ್ತೊಂದು ಕುತೂಹಲಕಾರಿ ವಿಷಯವೇನೆಂದರೆ, ಬಲರಾಮ ಒಂಟಿ ಕಣ್ಣಿನ ಶುಕ್ರಾಚಾರಿ. 1978ರಲ್ಲಿ ಅರಣ್ಯ ಇಲಾಖೆಗೆ ಸರೆ ಸಿಕ್ಕುವ ಮುನ್ನವೇ ಕಾಡಿನಲ್ಲಿ ಇತರೇ ಪುಂಡಾನೆಗಳೊಂದಿಗೆ ಕಾದಾಡುವಾಗ, ಮತ್ತೊಂದು ಆನೆಯ ದಂತವು ಬಲರಾಮನ ಕಣ್ಣಿಗೆ ತಾಕಿದ್ದ ಪರಿಣಾಮ ಆತ ಒಂದು ಕಣ್ಣನ್ನು ಕಳೆದುಕೊಂಡರೂ, ಒಂದೇ ಕಣ್ಣಿನಲ್ಲಿಯೇ ಅಂದಿನಿಂದ ಸಾಯುವವರೆಗೂ ಒಂದೇ ಕಣ್ಣಿನಲ್ಲಿ ಬದುಕನ್ನು ನಡೆಸಿದ್ದ ಎನ್ನುವುದೇ ಅಚ್ಚರಿಯ ಸಂಗತಿಯಾಗಿತ್ತು. ಹೀಗಿದ್ದ ಬಲರಾಮ ಅದೊಮ್ಮೆ ದಸರಾ ಮೆರವಣಿಗೆಯಲ್ಲಿ ಆತನ ಹದ್ದುಬಸ್ತಿನಲ್ಲಿ ಇಡಲೆಂದೇ, ಆತನ ಮೈಗೆ ಮೈ ತಗುಲುವಂತೆ ನಿಲ್ಲಿಸಿದ್ದ ಸರೋಜಿನಿ ಮತ್ತು ಕಾಂತಿ ಎಂಬ ಸುರ ಸುಂದರಿಯರಿದ್ದರೂ, ಗಾಬರಿ ಬಿದ್ದು ಎತ್ತೆತ್ತಲೋ ಓಡಾಡಿ ಎಲ್ಲರಿಗೂ ಗಾಭರಿ ಮೂಡಿಸಿದ್ದ ಕಾರಣ ಮುಂದಿನ ಕೆಲವು ವರ್ಷ ಅಂಬಾರಿಯನ್ನು ಹೊರುವ ಜವಾಬ್ಧಾರಿ ಅರ್ಜುನ ಮತ್ತು ಅಭಿಮನ್ಯುವಿನ ಹೆಗಲಿಗೆ ಬಿದ್ದಿತ್ತು.

ವಯೋವೃದ್ಧನಾಗಿದ್ದ ಬಲರಾಮನನ್ನು ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದಲ್ಲಿ ಮುಕ್ತ ಸಂಚಾರಕ್ಕೆ ಬಿಡಲಾಗಿತ್ತು. ಅಲ್ಲಿ ಆತ ಇತರೇ ಆನೆಗಳೊಂದಿಗೆ ಸ್ವಚ್ಚಂದವಾಗಿ ವಿಹರಿರುತ್ತಾ ಕಾಲ ಕಳೆಯುತ್ತಿದ್ದ. 2022ರ ಡಿಸೆಂಬರ್ 22ರಂದು ಎಂದಿನಂತೆ ಬಲರಾಮ ತನ್ನ ಸಾಕಾನೆ ಶಿಬಿರದಲ್ಲೇ ವಿಹಾರಿಸುತ್ತಿದ್ದಾಗ, ಅಚಾನಕ್ಕಾಗಿ ಶಿಬಿರದ ಸಮೀಪದ ಜಮೀನೊಂದಕ್ಕೆ ಹೋಗಿದ್ದಾನೆ. ಮೇಯಲು ಬಿಟ್ಟಿದ್ದ ವೇಳೆ ಆನೆ ಶಿಬಿರ ಬಳಿಯ ಹೊಲದ ಕಡೆಗೆ ಹೋಗಿತ್ತು. ಹೀಗೆ ತನ್ನ ಜಮೀನಿಗೆ ಕಾಡಾನೆಯೊಂದು ನುಗ್ಗಿದೆ ಎಂದು ಭಾವಿಸಿ, ಕೋಪೋದ್ರಿಕ್ತನಾದ ಆ ಜಮೀನಿನ ಮಾಲೀಕನಾದ ಸುರೇಶ್ ಎಂಬಾತ ಮನಸೋ ಇಚ್ಛೆ ಗುಂಡನ್ನು ಹಾರಿಸಿದಾಗ ಸುಮಾರು 45 ಚೆರ್ರಿ(ಚಿಲ್ಲು)ಗಳು ಬಲರಾಮನಿಗೆ ತಗುಲಿದ ಕಾರಣ, ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ. ಈ ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂಧಿಗಳು ಕೂಡಲೇ ಬಲರಾಮನನ್ನು ಆನೆ ಶಿಬಿರಕ್ಕೆ ಕರೆತಂದು ಅದಕ್ಕೆ ಚಿಕಿತ್ಸೆ ನೀಡಿ, ಅಲ್ಲಿನ ವೈದ್ಯರಾದ ಡಾ.ರಮೇಶ್ ಅವರು ಮೆಟಲ್ ಡಿಟೆಕ್ಟರ್ ಬಳಸಿ ದೇಹದಿಂದ ಆ ಎಲ್ಲಾ ಚೆರ್ರಿಗಳನ್ನು ತೆಗೆದು, ಬಲರಾಮನ ಗಾಯ ನಂಜಾಗದಂತೆ ಚಿಕಿತ್ಸೆ ನೀಡಿದ್ದರು.

ಈ ಚಿಕಿತ್ಸೆಯ ನಂತರ ಸ್ವಲ್ಪ ಮಟ್ಟಿಗೆ ಬಲರಾಮ ಚೇತರಿಸಿಕೊಂಡನಾದರೂ, ಮತ್ತೆ ಕೆಲವು ದಿನಗಳ ನಂತರ ಆತನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದಲ್ಲದೇ ಕುಡಿದ ನೀರನ್ನೆಲ್ಲ ವಾಂತಿ ಮಾಡುತ್ತಿದ್ದದ್ದನ್ನು ಗಮನಿಸಿದಾಗ, ಕರಳು ಬೇನೆ ತೊಂದರೆ ಅನುಭವಿಸುತ್ತಿದ್ದದ್ದಲ್ಲದೇ, ಆತನ ಗಂಟಲಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡಿರುವುದು ಪತ್ತೆಯಾಗಿದೆ. ನಂತರದ ತಪಾಸಣೆಯಲ್ಲಿ ಅದು ಹೊಟ್ಟೆಯೊಳಗೆ ಸೇರಿಕೊಂಡು ನಂತರ ಬಹಳ ಶ್ರಮವಹಿಸಿ ಗುದದ್ವಾರದಲ್ಲಿದ್ದ ಆ ಮರದ ತುಂಡನ್ನು ಹೊರ ತೆಗೆಯಲಾಗಿತ್ತು. ದುರಾದೃಷ್ಟವಾಶಾತ್, ಗಂಟಲ್ಲಿ ಸಿಲುಕಿ ಕೊಂಡಿದ್ದ ಆ ಮರದ ತುಂಡು ಹೊಟ್ಟೆಯೊಳಗೆ ಸೇರುವಾಗ ಕರುಳನ್ನೆಲ್ಲಾ ತಿವಿದಿದ್ದ ಕಾರಣ, ಗಾಯವಾಗಿ ತೀವ್ರವಾದ ರಕ್ತಸ್ರಾವವಾಗಿ ಬಲರಾಮ ನಿತ್ರಾಣಗೊಂಡಿದ್ದ. ಇಷ್ಟೆಲ್ಲಾ ಆದರೂ ವೈದ್ಯರ ತಂಡ ನಿರಂತರವಾಗಿ ಆತನಿಗೆ ಚಿಕಿತ್ಸೆ ನೀಡಿ ಚೇತರಿಸಿಕೊಳ್ಳಲು ಶ್ರಮವಿಸಿದ್ದರು. ಇವರ ಜೊತೆಗೆ ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್‌ ಚಿಕ್ಕನರಗುಂದ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ರತ್ನಾಕರ್‌, ಡಿಆರ್‌ಎಫ್‌ಒ ಸಿದ್ದರಾಜು ನೇತೃತ್ವದ ತಂಡ ಹಾಗೂ ಬಲರಾಮನ ಮಾವುತ ತಿಮ್ಮ, ಕಾವಾಡಿ ಮಂಜನಾಥ ಹಾಗೂ ಸಿಬ್ಬಂದಿ ಬಲರಾಮನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವಾರ ಏ.27 ರಂದು ಬಲರಾಮ ಮತ್ತೆ ತಾನು ಸೇವಿಸಿದ ಆಹಾರವನ್ನು ವಾಂತಿ ಮಾಡಿದಾಗ, ತಜ್ಞ ಪಶುವೈದ್ಯಾಧಿಕಾರಿಗಳಾದ ಡಾ.ಚಿಟ್ಟಿಯಪ್ಪ, ಡಾ.ರಮೇಶ್, ಡಾ.ಮಧನ್, ಡಾ.ಯಶಸ್ ಮತ್ತು ಡಾ.ಅಬ್ದುಲ್ ರವರ ತಂಡ ಎಂಡೋಸ್ಕೋಪಿ ಮಾಡಿ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿದಾಗ ಬಲರಾಮನಿಗೆ ಕ್ಷಯ ರೋಗವಿರುವುದು ತಿಳಿದು ಬಂದಿತ್ತು.

bala3ಹೀಗೆ ವಿವಿಧ ಖಾಯಿಲೆಗಳಿಂದ ಬಳಲುತಿದ್ದ ಬಲರಮ ಮೇ.1 ರಿಂದ ಆಹಾರ ಮತ್ತು ನೀರನ್ನು ಸೇವಿಸುವುದನ್ನು ನಿಲ್ಲಿಸಿದ ಕಾರಣ ವೈದ್ಯರುಗಳು ನೀಡುತ್ತಿದ್ದ ಎಲ್ಲಾ ಚಿಕಿತ್ಸೆಗಳು ಫಲಕಾರಿಯಾಗದೇ ಮೇ.7 ರ ಸಂಜೆ 5.15 ರ ಸಮಯದಲ್ಲಿ ಅಧಿಕೃತವಾಗಿ ನಿಧನನಾದ ವಿಷಯ ತಿಳಿಯುತ್ತಿದ್ದಂತೆಯೇ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ಬಲರಾಮನನ್ನು ಸಾಕಿ ಸಲಹಿದ ಮಾವುತರು, ಕಾವಾಡಿಗಳು ದುಃಖದ ಮಡುವಿನಲ್ಲಿ ಮುಳುಗಿದರು. ಸುಮಾರು 45 ವರ್ಷಗಳ ಕಾಲ ಅರಣ್ಯ ಇಲಾಖೆಯ ಒಡನಾಟದಲ್ಲಿದ್ದ ಬಲರಾಮ ಇನ್ನಿಲ್ಲ ಎನ್ನುವುದು ಆತನನ್ನು ಹತ್ತಿರದಿಂದ ನೋಡಿದ ಎಲ್ಲರಿಗೂ ನೋವು ತರಿಸಿರುವುದು ಬೇಸರದ ಸಂಗತಿಯಾಗಿದೆ.

bala7ಹುಣಸೂರು ವನ್ಯಜೀವಿ ವಲಯದ ಕಾರೆಕಟ್ಟೆ ಅರಣ್ಯ ಪ್ರದೇಶದಲ್ಲಿ ಮೇ.8 ರ ಬೆಳಿಗ್ಗೆ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೈಸೂರಿನ ಅರಮನೆ ಪುರೋಹಿತರಿಂದ ಎಲ್ಲಾ ಆನೆಗಳಿಗೂ ನಡೆಸುವಂತೆ ಬಲರಾಮನಿಗೂ ಸಹಾ ಸಾಂಪ್ರದಾಯಿಕವಾಗಿ ಅಂತಿಮ ವಿಧಿ ವಿಧಾನದ ಪೂಜೆ ನಡೆಸಿ, ಕುಶಲತೋಪುಗಳನ್ನು ಸಿಡಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ.

bala414 ಬಾರಿ ತಾಯಿ ಚಾಮುಂಡೇಶ್ವರಿ ತಾಯಿಯ ಚಿನ್ನದ ಅಂಬಾರಿಯನ್ನು ಬಹಳ ಗಾಂಭೀರ್ಯದಿಂದ ಹೊತ್ತು ಸಾಗುವ ಮೂಲಕ ಎಲ್ಲರ ಕಣ್ಮಣಿಯಾಗಿದ್ದ, ಅತ್ಯಂತ ಸೌಮ್ಯ ಸ್ವಭಾವದದ ಬಲರಾಮ ಇನ್ನಿಲ್ಲಾ ಎನ್ನುವುದು ವಾಸ್ತವವಾದರೂ, ಶತ ಶತಮಾನ ಕಳೆದರೂ ದಸರಾ ಮೆರವಣಿಗೆ ನೋಡಿದಾಗಲೆಲ್ಲಾ ದ್ರೋಣ, ಬಲರಾಮ ನೆನಪಿಗೆ ಬಂದೇ ಬರುವ ಕಾರಣ, ಆ ಇಬ್ಬರು ಧೀರೋದ್ಧಾತ್ತರಿಗೂ ಹೃದಯಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸೋಣ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

One thought on “ರಾಜ ಗಾಂಭೀರ್ಯದ ಬಲರಾಮ ಇನ್ನಿಲ್ಲ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s