ಕಾಫಿ ಎಂಬುದು ಹುರಿದ ಕಾಫಿ ಬೀಜಗಳಿಂದ ತಯಾರಿಸಿದ ಗಾಢ ಬಣ್ಣದ ಸ್ವಲ್ಪ ಕಹಿ ಮತ್ತು ಸ್ವಲ್ಪ ಆಮ್ಲೀಯ ಇರುವ ಪಾನೀಯವಾಗಿದ್ದು, ಅದರಲ್ಲಿರುವ ಕೆಫಿನ್ ಎಂಬ ಅಂಶ ಕುಡಿದವರ ಮೇಲೆ ಅಲ್ಪಪ್ರಮಾಣದ ಉತ್ತೇಜಕ ಪರಿಣಾಮವನ್ನು ಬೀರಿ ಅವರನ್ನು ಚೈತನ್ಯದಯಕವಾಗಿ ಇಡುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರಪಂಚಾದ್ಯಂತ ಕಾಫೀ ಒಂದು ಜನಪ್ರಿಯ ಪಾನೀಯವಾಗಿದೆ. ಹಾಗಾಗಿ ಅತ್ಯುತ್ತಮವಾದ ಕಾಫೀ ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ ಹಬೆಯಾಡುವ ಬಿಸಿನೀರಿನಿಂದ ಅದರ ಕಷಾಯ (decoction)ವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು ಬೆರೆಸಿ ನೊರೆಯ ಕಾಫೀ ತಯಾರಿಸುವ ನೂರಾರು ಕೇಂದ್ರಗಳು ಜಗತ್ತಿನಾದ್ಯಂತ ಇದ್ದು, ಬೆಂಗಳೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲಿ ಪ್ರಸಿದ್ಧವಾಗಿದ್ದ ಇಂಡಿಯಾ ಕಾಫಿ ಹೌಸ್ ಕೂಡಾ ಒಂದಾಗಿದ್ದು, ಅದರ ಕುರಿತಾದ ಹೆಚ್ಚಿನ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ, ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಕರ್ನಾಟಕದ ಚಿಕ್ಕಮಗಳೂರಿನ ತಗ್ಗಾದ ಇಳಿಜಾರಿನ ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತ್ತವಾಗಿದ್ದು, ಕಾಫೀ ಬೆಳೆಯಲು ಅತ್ಯುತ್ತವಾದ ಪ್ರದೇಶವಾಗಿರುವ ಕಾರಣ ಚಿಕ್ಕಮಗಳೂರು ಜಿಲ್ಲೆಯನ್ನು ಕಾಫಿನಾಡು ಎಂದು ಸಹ ಕರೆಯಲಾಗುತ್ತದೆ. ಇಲ್ಲಿ ಉತ್ಪಾದನೆ ಆಗುವ ಸುಮಾರು 70% ಕಾಫಿ ಬೀಜವು ವಿದೇಶಗಳಿಗೆ ರಫ್ತಾಗುವ ಕಾರಣ, ಕಾಫಿ ಬೋರ್ಡ್ ಆಫ್ ಇಂಡಿಯಾ ಎಂಬ ಸರ್ಕಾರಿ ಸಂಸ್ಥೆ ಬೆಂಗಳೂರಿನಲ್ಲಿದೆ. 16ನೇ ಶತಮಾನದಿಂದಲೂ ಈ ಕಾಫಿಯನ್ನು ವಿದೇಶಗಳಿಗೆ ರಫ್ತುಮಾಡಲಾಗುತ್ತಿದೆ. 18 ನೇ ಶತಮಾನದಲ್ಲಿ ಬ್ರಿಟೀಷರ ಪ್ರಮುಖ ಆಡಳಿತ ಕೇಂದ್ರಗಳಾಗಿದ್ದ ಮದ್ರಾಸ್ ಮತ್ತು ಕಲ್ಕತ್ತಾದಲ್ಲಿ ಬ್ರಿಟೀಷ್ ಅಧಿಕಾರಿಗಳೇ ಹೆಚ್ಚಾಗಿದ್ದ ಪ್ರದೇಶಗಳಲ್ಲಿ ಕಾಫೀ ಹೌಸ್ ಎಂಬುದನ್ನು ಆರಂಭಿಸಿ ಅಲ್ಲಿ ಬಗೆ ಬಗೆಯ ಕಾಫಿಯ ಮಾರಾಟವನ್ನು ಆರಂಭಿಸಿದರು. ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿನಲ್ಲಿ ಆ ಬ್ರಿಟಿಷ್ ಅಥಿಕಾರಿಗಳು ಆ ಕಾಫೀ ಹೌಸಿಗೆ ಬಂದು ರುಚಿಯಾದ ಕಾಫೀಯನ್ನು ಸವಿಯುತ್ತಾ, ಲೋಕಾಭಿರಾಮವಾಗಿ ಹರಟುತ್ತಾ ಕಾಲ ಕಳೆಯುವ ಸ್ಥಳವನ್ನಾಗಿ ಮಾಡಿಕೊಂಡ ನಂತರ ಈ ಪರಿಕಲ್ಪನೆ ಭಾರತಾದ್ಯಂತ ಜನಪ್ರಿಯತೆಯನ್ನು ಗಳಿಸಿ ವಿವಿಧ ವಿವಿಧ ಪ್ರದೇಶಗಳಲ್ಲಿ ಆರಂಭವಾಯಿತು. ಬ್ರಿಟಿಷ್ ಆಡಳಿತಗಾರರ ಜನಾಂಗೀಯ ತಾರತಮ್ಯ ನೀತಿಯಿಂದಾಗಿ ಈ ಕಾಫಿ ಹೌಸ್‌ಗಳಿಗೆ ಸ್ಥಳೀಯ ಭಾರತೀಯರಿಗೆ ಪ್ರವೇಶಿಸಲು ಅನುಮತಿ ಇರಲಿಲ್ಲ.
ಇದರ ವಿರುದ್ಧ ಪ್ರತೀಕಾರ ರೂಪದಲ್ಲಿ 1890 ರ ದಶಕದ ಉತ್ತರಾರ್ಧದಲ್ಲಿ, ಭಾರತೀಯ ಗ್ರಾಹಕರಿಗಾಗಿ ಇಂಡಿಯಾ ಕಾಫಿ ಹೌಸ್ (ICH) ಎಂಬ ಸರಪಳಿ ಕಾಫಿ ಮನೆಗಳನ್ನು ಭಾರತಾದ್ಯಂತ ಸ್ಥಾಪಿಸುವ ಕಲ್ಪನೆಯನ್ನು ಹೊಂದಲಾಗಿ ಇಂಡಿಯಾ ಕಾಫಿ ಬೋರ್ಡ್ ಆರಂಭವಾದರೂ, ಇದು ಮೊತ್ತ ಮೊದಲಬಾರಿಗೆ 1936ರಲ್ಲಿ, ಅಂದಿನ ಬಾಂಬೆಯ ಚರ್ಚ್‌ಗೇಟ್ ಪ್ರದೇಶದಲ್ಲಿ ಮೊದಲ ICH ಎಂಬ ಕಾಫೀ ಕ್ಲಬ್ ಆರಂಭಿಸುವ ಮೂಲಕ ಸಾಕಾರಗೊಳಿಸಲಾಯಿತು. ಕೇವಲ ನಾಲ್ಕೇ ವರ್ಷಗಳಲ್ಲಿ 1940 ರ ಹೊತ್ತಿಗೆ, ಭಾರತಾದ್ಯಂತ ಸುಮಾರು 50 ಶಾಖೆಗಳು ಆರಂಭವಾಗುವ ಮೂಲಕ ಅತ್ಯಂತ ಜನಪ್ರಿಯತೆಯನ್ನು ಗಳಿಸಿತು.
ಸ್ವಾತಂತ್ರ್ಯಾ ನಂತರ 1950ರ ಮಧ್ಯಭಾಗದಲ್ಲಿ ಕಾಫಿ ಮಂಡಳಿಯ ನೀತಿಯಲ್ಲಿನ ಬದಲಾವಣೆಯಿಂದಾಗಿ ಈ ಎಲ್ಲಾ ಕಾಫಿ ಹೌಸ್‌ಗಳನ್ನು ಮುಚ್ಚಲು ನಿರ್ಧರಿಸಿದಾಗ, ಅಂದಿನ ಕಮ್ಯುನಿಸ್ಟ್ ನಾಯಕರಾಗಿದ್ದ ಎ.ಕೆ.ಗೋಪಾಲನ್ (ಎ.ಕೆ.ಜಿ) ಆವರ ನೇತೃತ್ವದಲ್ಲಿ ಕಾಫಿ ಮಂಡಳಿಯ ಕಾರ್ಮಿಕರು ಚಳವಳಿಯನ್ನು ಪ್ರಾರಂಭಿಸಿದ್ದಲ್ಲದೇ, ಬೆಂಗಳೂರಿನಲ್ಲಿ 19 ಆಗಸ್ಟ್ 1957 ರಲ್ಲಿ ಭಾರತೀಯ ಕಾಫಿ ಕಾರ್ಮಿಕರ ಸಹಕಾರ ಸಂಘಗಳನ್ನು ರಚಿಸಿಕೊಂಡು, ಮುಚ್ಚಿ ಹೋಗಿದ್ದ ಕಾಫೀ ಹೌಸ್ ಮಳಿಗೆಗಳನ್ನು ಈ ಕಾರ್ಮಿಕ ಸಂಘದ ಸುಪರ್ಧಿಗೆ ಕೊಡುವಂತೆ ಕಾಫಿ ಮಂಡಳಿಯನ್ನು ಒತ್ತಾಯಿಸಿ ಅದರಲ್ಲಿ ಸಫಲತೆಯನ್ನು ಪಡೆದ ಪರಿಣಾಮವಾಗಿ ಮತ್ತೆ ದೇಶಾದ್ಯಂತ ಇಂಡಿಯನ್ ಕಾಫಿ ಹೌಸ್ ಪುನರಾಂಭವಾಯಿತು.
ಕಾಫಿ ಕಾರ್ಮಿಕರ ಸಹಕಾರ ಸಂಘದ ಕಾರ್ಯದರ್ಶಿಗಳಾಗಿದ್ದ ಶ್ರೀ ಸುಬ್ಬ ರಾವ್ ಮತ್ತು ಬಿ.ಸುಬ್ಬಯ್ಯ ಅವರು ಬೆಂಗಳೂರಿನ ಪ್ರತಿಷ್ಠಿತ ತಾಣವಾಗಿರುವ ಮಹಾತ್ಮಾಗಾಂಧಿ ರಸ್ತೆಯ(MG ರೋಡ್) ಬಹುತೇಕ ಕಟ್ಟಡಗಳ ಮಾಲಿಕರಾಗಿದ್ದ ಶ್ರೀ ತಂಬು ಚೆಟ್ಟಿ ಅವರೊಂದಿಗೆ ಉತ್ತಮ ಸ್ನೇಹ ಹೊಂದ್ದಿದ ಪರಿಣಾಮ, 1959 ರಲ್ಲಿ ನಲ್ಲಿ ಪ್ರಜಾವಾಣಿ ಮತ್ತು Deccan Herald ಪತ್ರಿಕಾ ಕಛೇರಿ ಮತ್ತು ಶೃಂಗಾರ್ ಶಾಪಿಂಗ್ ಕಾಂಪ್ಲೆಕ್ಸ್ ಇವೆರಡ ಮಧ್ಯೆ ಇಂಡಿಯಾ ಕಾಫಿ ಹೌಸ್ ಆರಂಭವಾಯಿತು.
ಇದು ಸಾಧಾರಣ ಕಾಫೀ ಹೌಸ್ ಆಗಿರದೇ, ಬಹಳ ವಿಶೇಷವಾಗಿ ಇರಬೇಕೆಂಬ ಆಸೆಯಿಂದಾಗಿ ಅಲ್ಲಿನ ಪರಿಚಾರಕರಿಗೆ ರಾಜ ಮಹಾರಾಜರುಗಳ ಕಾಲದಲ್ಲಿ ಸೇವಕರು ಧರಿಸುತ್ತಿದ್ದ ವೇಷಭೂಷದ ರೀತಿಯಲ್ಲಿ ತಲೆಯ ಮೇಲೆ ಕೆಂಪು ಮತ್ತು ಚಿನ್ನದ ಬಣ್ಣದ ಮಿಶ್ರಿತವಾದ ಬಿಳಿ ಪೇಟವನ್ನುಪೇಟವನ್ನು ಧರಿಸಿ, ಸೊಂಟಕ್ಕೆ ICB ಲಾಂಛನಹೊಂದಿದ್ದ ಬೃಹತ್ ಲೋಹದ ಬಕಲ್‌ಗಳ ಬೆಲ್ಟ್ ಧರಿಸುತ್ತಿದ್ದದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಲ್ಲಿ ಅತ್ಯುತ್ತಮ ಗುಣಮಟ್ಟದ, ಆದರೆ ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ಅರ್ಥಾತ್ ಎರಡು ಅಣೆ (12 ಪೈಸೆ)ಗಳಿಗೆ ದಕ್ಷಿಣ ಭಾರತದ ಜನಪ್ರಿಯ ಫಿಲ್ಟರ್ ಕಾಫಿಯ ಜೊತೆಯಲ್ಲಿ ಇಡ್ಲಿ, ದೋಸೆಯಂತಹ ವಿವಿಧ ತಿಂಡಿಗಳು, ಬ್ರೆಡ್ ಆಮ್ಲೇಟ್, ಬ್ರೆಡ್ ಸ್ಯಾಂಡ್ವಿಜ್, ಬ್ರೆಡ್ ಕಟ್ಲೇಟ್ ಗಳ ಜೊತೆಯಲ್ಲಿ ಕಲೆ ತಂಪು ಪಾನೀಯಗಳನ್ನು ಗ್ರಾಹಕರಿಗೆ ಉಣಬಡಿಸತೊಡಗಿದರು. ಇನ್ನು ಅಲ್ಲಿದ್ದ ಆಸನಗಳು ಸಾಧಾರಣವಾಗಿರದೇ, ಒಂದು ರೀತಿಯ ಹಳೆಯ ಕಾಲದ ಮರದ ಬೆಂಚುಗಳ ರೀತಿಯಲ್ಲಿ ರೂಪಿಸಿ, ಒಂದು ರೀತಿಯಾದ ವಿಶಿಷ್ಟ ವಾತವರಣ ಇದ್ದ ಕಾರಣ ಅತ್ಯಂತ ಕಡಿಮೆ ಸಮಯದಲ್ಲೇ ಜನಪ್ರಿಯವಾಗಿ ದೇಶದ ವಿವಿಧ ಭಾಗದ ಖ್ಯಾತನಾಮರುಗಳು ಬೆಂಗಳೂರಿಗೆ ಬಂದಾಗ ಇಂಡಿಯಾ ಕಾಫಿ ಹೌಸ್ ಗೆ ಭೇಟಿ ನೀಡುವುದು ಪ್ರತಿಷ್ಟೆಯ ಸಂಕೇತ ಎಂದು ಪರಿಗಣಿಸಲಾಗುವಂತಾಯಿತು.
ವಯಕ್ತಿಕವಾಗಿ 90ರ ದಶಕದಲ್ಲಿ ಇಂಡಿಯಾ ಕಾಫೀ ಹೌಸ್ ಪಕ್ಕದಲ್ಲೇ ಇದ್ದ ಶೃಂಗಾರ್ ಶಾಪಿಂಗ್ ಸೆಂಟರಿನಲ್ಲೇ ಇದ್ದ ನಮ್ಮ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಕಾಫೀ ಕುಡಿಯದೇ ಇದ್ದರೂ, ಅನೇಕ ಬಾರಿ ಗೆಳೆಯರೊಂದಿಗೆ ಇಂಡಿಯಾ ಕಾಫೀ ಹೌಸಿಗೆ ಹೋಗುತ್ತಿದ್ದ ನೆನೆಪು ಇನ್ನೂ ಹಚ್ಚ ಹಸಿರಾಗಿದೆ. ಅಲ್ಲಿಯ ಬ್ರೆಡ್ ಟೋಸ್ಟ್ ಮತ್ತು ಬ್ರೆಡ್ ಸ್ಯಾಂಡ್ವಿಜ್ಗಳ ರುಚಿ ಇನ್ನೂ ನಾಲಿಯ ತುದಿಯಲ್ಲೇ ಇದೆ. ಅನೇಕ ಬಾರಿ ನಮ್ಮ ಹಿರಿಯ ಅಧಿಕಾರಿಗಳು ಕಛೇರಿಯಲ್ಲಿ ಮಾತನಾಡಲು ಆಗದಂತಹ ಗಂಭೀರವಾದ ವಿಷಯಗಳನ್ನು ಚರ್ಚಿಸಲು ಸಹಾ ನಮ್ಮನ್ನು ಕಾಫೀ ಹೌಸಿಗೆ ಕರೆದುಕೊಂಡು ಹೋಗಿ ಚರ್ಚಿಸುತ್ತಿದ್ದರು. ಹಾಗೇ ಕಾಫೀ ಹೌಸಿಗೆ ಹೋದಾಗಲೆಲ್ಲಾ ಪಕ್ಕದಲ್ಲೇ ಇದ್ದ ಪ್ರಜಾವಾಣಿ ಕಛೇರಿಯ ಮುಂಭಾಗದಲ್ಲಿ ಮಾರುತ್ತಿದ್ದ ಅವರ ಪ್ರಕಾಶನಗಳಾದ ಸುಧಾ, ಮಯೂರ ಇಲ್ಲವೇ ಯುಗಾದಿ ವಿಶೇಷಾಂಗಕಗಳನ್ನು ಖರೀಧಿಸುತ್ತಿದ್ದ ನೆನಪಿದೆ.
ಕಾಫಿ ಬೋರ್ಡ್‌ನಿಂದ ಶುದ್ಧ ಕಾಫಿ ಬೀಜದ ಜೊತೆಗೆ ಹದವಾಗಿ ಬೆರೆಸುತ್ತಿದ್ದ ಚಿಕೋರಿಯ ಜೊತೆಗೆ ಬಿಸಿ ಹಬೆಯೊಂದಿಗೆ ಲಭ್ಯವಿರುತ್ತಿದ್ದ ಇಲ್ಲಿನ ಫಿಲ್ಟರ್ ಕಾಫಿಯ ರುಚಿಯನ್ನು ಸವಿಯಲು ಎಂ.ಜಿ. ರಸ್ತೆಗೆ ಅಡ್ಡಾಡಲು ಬರುತ್ತಿದ್ದ ಪಡ್ಡೇ ಹುಡುಗರಿಂದ ಹಿಡಿದು, ನಾಡಿನ ಗಣ್ಯಾತಿಗಣ್ಯರಾದ ಮಾಜೀ ಪ್ರಧಾನಿಗಳಾದ ದೇವೇಗೌಡ, ಖ್ಯಾತ ಕಲಾವಿದ ಎಂ.ಎಫ್.ಹುಸೇನ್, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಕನ್ನಡ ಚಿತ್ರಕಲಾವಿದರಾದ ವಿಷ್ಣುವರ್ಧನ್, ಶಂಕರ್ ನಾಗ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮುಂತಾದವರು ಇಲ್ಲಿನ ಕಾಫಿ ಸವಿಯಲು ಆಗ್ಗಾಗೆ ಬರುತ್ತಿದ್ದಲ್ಲದೇ, ಇನ್ನೂ ಅನೇಕ ವಿದ್ವಾಂಸರುಗಳು ಸೇರುವ ಜಾಗವಾಗಿದ್ದು ಅನೇಕ ಬೌದ್ಧಿಕ ಚರ್ಚೆಗಳ ತಾಣವಾಗಿತ್ತು. ಮೇಯೊ ಹಾಲ್ ನಲ್ಲಿ ಕೋರ್ಟು ಕರ್ಛೇರಿಗೆ ಬಂದವರೂ ಸಹಾ ಕಾಫಿ ತಿಂಡಿಗಾಗಿ ಇದೇ ಇಂಡಿಯಾ ಕಾಫೀ ಹೌಸಿಗೆ ಬರುತ್ತಿದ್ದರು
90ರ ದಶಕದಲ್ಲಿ ಜಾಗತೀಕ ವಿದ್ಯಮಾನ್ಯಗಳು ಬದಲಾಗಿ ಬಹುರಾಷ್ಟ್ರೀಯ ವಿದೇಶೀ ಕಂಪನಿಗಳು ಭಾರತಕ್ಕೆ ಲಗ್ಗೆ ಹಾಕಿದ ಪರಿಣಾಮ, ಬೆಂಗಳೂರಿನಲ್ಲಿ ಸಾವಿರಾರು ಸಾಫ್ಟ್ರೇವೇರ್ ಕಂಪನಿಗಳು ಆರಂಭವಾಗುತ್ತಿದ್ದಂತೆಯೇ ಅವರನ್ನು ಸೆಳೆಯುವ ಸಲುವಾಗಿ ಆಧುನಿಕ ರೀತಿಯಲ್ಲಿ ನೂರಾರು ಕಾಫೀ ಜಾಯಿಂಟುಗಳು ಆರಂಭವಾದರೆ, ಸಣ್ಣ ಸಣ್ಣ ದರ್ಶಿನಿ ಹೋಟೆಲ್ಲುಗಳೂ ಸಹಾ ಕೈ ಗೆಟುಕುವ ಬೆಲೆಯಲ್ಲಿ ರುಚಿಕರವಾದ ಫಿಲ್ಟರ್ ಕಾಫಿ ಕೊಡಲಾರಂಭಿಸಿದ ಕಾರಣ, ಬೆಂಗಳೂರಿನ M. G. ರಸ್ತೆಯಲ್ಲಿದ್ದ ಸುಮಾರು 50 ವರ್ಷ ಹಳೆಯದಾದ ಇಂಡಿಯನ್ ಕಾಫಿ ಹೌಸ್ ಗೆ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆ ಆಗ ತೊಡಗಿತು. ಅದೇ ಸಮಯದಲ್ಲಿ ಆ ಕಟ್ಟಡದ ಕುರಿತಾಗಿ ಆದರ ಮಾಲೀಕರೊಂದಿಗೆ ಕಾನೂನು ಹೋರಾಟವನ್ನು ಎದುರಿಸಲಾಗದೇ, ಅಂತಿಮವಾಗಿ ಏಪ್ರಿಲ್ 5 2009 ರಂದು ಅಧಿಕೃತವಾಗಿ ಇಂಡಿಯನ್ ಕಾಫಿ ಹೌಸ್ ಅನ್ನು ಮುಚ್ಚಲಾಯಿತು.
ಆದರೆ ಗ್ರಾಹಕರ ಒತ್ತಾಯದ ಮೇರೆಗೆ, ಕೆಲವರ್ಷಗಳ ನಂತರ M. G. ರಸ್ತೆಯಲ್ಲಿದ್ದ ಹಳೆಯ ಇಂಡಿಯನ್ ಕಾಫಿ ಹೌಸ್ ನಿಂದ ನೂರು ಮೀಟರ್‌ಗಿಂತಲೂ ಕಡಿಮೆ ಅಂತರದಲ್ಲೇ ಚರ್ಚ್ ಸ್ಟ್ರೀಟ್‌ನಲ್ಲಿ ಮತ್ತೆ ಇಂಡಿಯನ್ ಕಾಫಿ ಹೌಸ್ ಆರಂಭಿಸಲಾಗಿದೆಯಲ್ಲದೇ, ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ್ ಕಾಲೇಜಿನ ಎದುರು, ಹೊಸೂರು ರಸ್ತೆಯಲ್ಲಿರುವ ಕ್ರೈಸ್ಟ್ ಯೂನಿವರ್ಸಿಟಿಯ ಮುಖ್ಯ ಕ್ಯಾಂಪಸ್ ಅಲ್ಲದೇ, ಬನ್ನೇರುಘಟ್ಟ ರಸ್ತೆ ಮತ್ತು ಕೆಂಗೇರಿ ಕ್ಯಾಂಪಸ್‌ನಲ್ಲಿಯೂ ಸಹಾ ಇಂಡಿಯನ್ ಕಾಫಿ ಹೌಸ್‌ನ ನಾಲ್ಕು ಶಾಖೆಗಳನ್ನು ಆರಂಭಿಸಿದೆ.
ಎಂ.ಜಿ ರಸ್ತೆಯಲ್ಲಿದ್ದ ಹಳೆಯ ಕಾಫೀ ಹೌಸಿಗೆ ಹೋಲಿಸಿದರೆ 1936 ರಲ್ಲಿ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿರುವ ಹೊಸಾ ಕಾಫೀ ಹೌಸಿನಲ್ಲಿ ಅಗ್ರಾಹ್ಯವಾಗಿರುವ ಕೊಠಡಿಯಲ್ಲಿ ಅವಕಾಶ ಕಲ್ಪಿಸುವುದರ ಹೊರತಾಗಿ ಪೀಠೋಪಕರಣಗಳು ಮತ್ತು ಅಲ್ಲಿದ್ದ ಹಳೆಯ ಪೋಸ್ಟರ್‌ಗಳನ್ನೇ ಇಲ್ಲಿಗೂ ಸಹಾ ವರ್ಗಾವಣೆ ಮಾಡಲಾಗಿದೆ. ಅದೇ ರೀತಿಯಲ್ಲಿ ಮಾಣಿಗಳು ಸಹಾ ಅದೇ ಹಳೆಯ ರಾಜಸೇವಕರ ಪೋಷಾಕು ಧರಿಸುತ್ತಾ, MG ರಸ್ತೆಯಲ್ಲಿದ್ದ ಹಳೆಯ ICH ನ ವಾತಾವರಣವನ್ನು ಮರುಸೃಷ್ಟಿಸಿದ್ದಾರೆ ಎಂದರೂ ತಪ್ಪಾಗದು. ಇಷ್ಟೆಲ್ಲಾ ಬದಲಾದರೂ, ಅಲ್ಲಿನ ಕಾಫಿಯ ಗುಣಮಟ್ಟ ಹದಗೆಡದೇ, ಅದೇ ರುಚಿ ಮತ್ತು ಶುಚಿಯನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಸ್ಟಾರ್ ಬಕ್ಸ್, ಬಾರಿಸ್ಟಾ, ಕೆಫೆ ಕಾಫೀ ಡೇ ಯಂತಹ ಹತ್ತಾರು ಆಧುನಿಕ ಶೈಲಿಯ ಕಾಫೀ ಕೆಫೆಯೊಂದಿಗೆ ಪೈಪೋಟಿಯನ್ನು ನಡೆಸುತ್ತಲೂ ಗತವೈಭವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸ ಸಂಗತಿಯಾಗಿದೆ.
ಸಮಯ ಸಿಕ್ಕಾಗ ನೀವೂ ಸಹಾ ಚರ್ಚ್ ಸ್ಟ್ರೀಟ್ ನಲ್ಲಿರುವ ಕಾಫೀ ಹೌಸಿಗೆ ಹೋಗಿ ಅಲ್ಲಿನ ಕಾಫೀ ರುಚಿಯನ್ನು ಸವಿದು ಅದರ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
ತುಂಬಾ ಉಪಯುಕ್ತ ಕರವಾದ ಲೇಖನ
LikeLiked by 1 person
ಧನ್ಯೋಸ್ಮಿ
LikeLike