ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ತಮ್ಮನ್ನು ಮುನ್ನಡೆಸುವ ನಾಯಕರುಗಳ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೇ ಚುನಾವಣೆ ಆಗಿದ್ದು, ಆ ಪ್ರಕ್ರಿಯೆಗೆ ಮತದಾನವು ಒಂದು ಸಾಧನವಾಗಿದ್ದು. ಚುನಾವಣೆ ಹಾಗೂ ಮತದಾದ ಎನ್ನುವುದು ಒoದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರೂ ತಪ್ಪಾಗದು. ನಮ್ಮ ದೇಶದಲ್ಲಿ 18 ವಯಸ್ಸು ಪೂರ್ಣಗೊಂಡ ಎಲ್ಲಾ ಭಾರತೀಯ ಪ್ರಜೆಗೂ ಮತದಾನದ ಹಕ್ಕಿದ್ದು, ಆತ/ಆಕೆ ತನಗೆ 18 ವಯಸ್ಸು ಆದ ಕೂಡಲೇ ಸೂಕ್ತದಾಖಲೆಗಳೊಂದಿಗೆ ಹತ್ತಿರದ ಪಂಚಾಯಿತಿ/ಪುರಸಭೆ/ನಗರಸಭೆ ಇಲ್ಲವೇ ನೇರವಾಗಿ ಚುನವಣಾ ಆಯೋಗದ ವೆಬ್ ಸೈಟಿನ ಮೂಲಕ ಮತದಾನದ ಹಕ್ಕನ್ನು ಪಡೆಯಬಹುದಾಗಿದೆ. ಹಾಗೆ ಮತದಾನದ ಹಕ್ಕನ್ನು ಪಡೆದ ಪ್ರತಿಯೊಬ್ಬ ಭಾರತೀಯರೂ, ತಮ್ಮ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದ ಅಭ್ಯರ್ಥಿಗೆ ಜಾತಿ, ಧರ್ಮ, ಹಣ, ಅಂತಸ್ತು ಇದಾವುದರ ಆಮೀಷಕ್ಕೆ ಒಳಗಾಗದೇ, ಸ್ವಾಭಿಮಾನಿಯಾಗಿ, ಯಾರ ಹಂಗಿಲ್ಲದೇ, ನಿರ್ಭಿಡೆಯಾಗಿ ತನ್ನ ಮನಸ್ಸಿಗೆ ಒಪ್ಪುವಂತಹ ಅಭ್ಯರ್ಥಿಗೆ ಮತದಾನ ಮಾಡಬಹುದಾಗಿದೆ. ಜನತಂತ್ರಗಳ ಚುನಾವಣೆಗಳಲ್ಲಿ ಮತದಾನ ಪ್ರಮುಖ ಅಂಗವಾಗಿದ್ದು ಮತದಾನ ಮಾಡುವುದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಆದ್ಯ ಕರ್ತವ್ಯವಾಗಿದೆ. ಇದೇ ನಿಟ್ಟಿನಲ್ಲಿ, 2023ರ ಮೇ 10 ರಂದು ಕರ್ನಾಟಕ ರಾಜ್ಯದ ವಿಧಾನ ಸಭಾ ಚುನಾವಣೆಯು ನಡೆಯಲಿದ್ದು, ಮೇ 13ರಂದು ಫಲಿತಾಂಶದ ಘೋಷಣೆಯಾಗಲಿದ್ದು ಮೇ 17 ಇಲ್ಲವೇ 18ರ ಒಳಗೆ ಹೊಸಾ ಸರ್ಕಾರದ ರಚನೆಯಾಗಲಿದೆ.
ಆದರೆ ಕೆಲವೊಮ್ಮೆ ಕೆಲವರಿಗೆ ತಮ್ಮ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಇಷ್ಟವಾಗದೇ ಹೋದ ಸಂಧರ್ಭದಲ್ಲಿ, ಅನಿವಾರ್ಯವಾಗಿ ಇರುವ ಒಬ್ಬ ಅಭ್ಯರ್ಥಿಯನ್ನೇ ಆಯ್ಕೆಮಾಡಬೇಕಾದಂತಹ ಪರಿಸ್ಥಿತಿ ಇದ್ದ ಕಾರಣ, ಈ ಕುರಿತಂತೆ ಚುನಾವಣಾ ಅಯೋಗಕ್ಕೆ ಅನೇಕ ಮನವಿ ಮಾಡಿದ ನಂತರ 2009 ರ ನಂತರದ ಚುನಾವಣೆಗಳಲ್ಲಿ ಭಾರತದ ಮತದಾರರಿಗೆ None of the Above ಅರ್ಥಾತ್ NOTA ಅಂದರೆ ಮೇಲೆ ಸ್ಪರ್ಧಿಸಿರುವ ಯವುದೇ ಅಭ್ಯರ್ಥಿಗೂ ತನ್ನ ಬೆಂಬಲವಿಲ್ಲ ಎಂಬ ಆಯ್ಕೆ ಮಾಡಬಹುದಾದ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ ಮೂಲಕ ಮತದಾರ ಪ್ರಜಾಪ್ರಭುತ್ವದ ಮೂಲಕ ದೊರೆತಿರುವ ತನ್ನ ಹಕ್ಕನ್ನು ಚಲಾಯಿಸಿದಂತೆ ಆಗುತ್ತದೆ ಎಂದು ಸಮಾಧಾನ ಪಟ್ಟು ಕೊಳ್ಳಬಹುದಾಗಿದೆ. ಯಾವುದೇ ಒಂದು ಮತದಾನ ಕೇಂದ್ರದಲ್ಲಿ 14% ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ NOTA ಗೆ ಮತದಾನವಾದಲ್ಲಿ ಅಲ್ಲಿ ಮತಗಟ್ಟೆಯಲ್ಲಿ ಮರುಮತದಾನ ನಡೆಯಬೇಕು ಎಂಬ ನಿಯಮವೂ ಇದ್ದು, ಅನಾವಶ್ಯಕ ಖರ್ಚಿಗೆ ಕಾರಣವಾಗುತ್ತದೆ.
ಈ ನೋಟಾ ಆಯ್ಕೆಯನ್ನು ಚುನಾವಣೆಯಲ್ಲಿ ಪರಿಚಯದ ನಂತರ, ನೋಟಾ ಭಾರತೀಯ ಮತದಾರರಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿರುವ ಪರಿಣಾಮ, ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸೋಲು ಮತ್ತು ಗೆಲುವಿನ ಅಂತವನ್ನು ಕಡಿಮೆ ಗೊಳಿಸುತ್ತಿದೆಯಲ್ಲದೇ, ಇನ್ನೂ ಅನೇಕ ಕಡೆಗಳಲ್ಲಿ ಸೋಲು ಮತ್ತು ಗೆಲುವಿನ ಅಂತರಕ್ಕಿಂತ ಹೆಚ್ಚಿನ ನೋಟಾ ಮತಗಳನ್ನು ಪಡೆದುಕೊಳ್ಳುವ ಮೂಲಕ ಆಭ್ಯರ್ಥಿಗಳ ಆಯ್ಕೆಯನ್ನು ಬುಡಮೇಲು ಮಾಡಿರುವ ಉದಾಹರಣೆಯನ್ನು ಗುಜರಾತ್ (2017), ಕರ್ನಾಟಕ (2018),ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ (2018)ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಚುನಾವಣೆಯಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದೇ, ಒಂದು ರೀತಿಯಲ್ಲಿ ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎನ್ನುವಂತಿರುವ ಈ ನೋಟಾದ ಅವಶ್ಯಕತೆಯನ್ನು ಮತ್ತೊಮ್ಮೆ ಚುನಾವಣಾ ಆಯೋಗ ಗಮನಿಸಬೇಕು ಎಂಬುದೇ ಬಹುತೇಕರ ಇಂಗಿತವಾಗಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ನೋಟಾ ಎಂಬುದು ಸರಿ ಎನಿಸಿದರೂ, ತಾರ್ಕಿಕವಾಗಿ ನೋಟಾ ಎಂಬುದು ನಿರರ್ಥಕ ಪ್ರಯತ್ನ ಎನ್ನುವುದೇ ಬಹುತೇಕರ ಅಭಿಪ್ರಾಯವಾಗಿದೆ. ನೋಟಾ ಹಾಕುವುದೂ ಮತ್ತು ಈ ಹಿಂದೆ ಮತಪತ್ರಗಳಲ್ಲಿ ಮತವನ್ನು ಕುಲಗೆಡಿಸುವುದೂ ಒಂದೇ ಎನ್ನುವುದು ನಿರ್ವಿವಾದವಾಗಿದೆ. ಪಕ್ಷಗಳಿಗೆ ಬುದ್ಧಿ ಕಲಿಸುವ ಸಲುವಾಗಿ ಇದೊಂದೇ ರಾಜ ಮಾರ್ಗ ಎಂಬುದು ನೋಟಾ ಸಮರ್ಥಕರ ಸಮರ್ಥನೆ ಆದರೂ, ಯಾವುದೇ ಸಮಸ್ಯೆಗೆ ನೂರಾರು ಪರಿಹಾರಗಳಿದ್ದು, ಸ್ವಲ್ಪ ತಾಳ್ಮೆಯಿಂದ ಯೋಚಿಸಿ ಮುನ್ನಡೆದರೆ ಎಲ್ಲವನ್ನೂ ಸಾಧಿಸಬಹುದಾಗಿದೆ.
ಬಹುತೇಕ ಚುನಾವಣೆಗಳಲ್ಲಿ ಮತದಾನದ ದಿನ ಸುಶೀಕ್ಷಿತರು ಎನಿಸಿಕೊಂಡ ಹೆಚ್ಚಿನವರೇ ಮತಗಟ್ಟೆಗಳಲ್ಲಿ ಸಾಲಿನಲ್ಲಿ ನಿಲ್ಲಲು ಆಗುವುದಿಲ್ಲ. ಯಾರು ಬಂದರೆ ನಮಗೇನೂ ಆಗುವುದಿಲ್ಲಾ. ಎಂಬ ಉಡಾಫೆಯಿಂದ ಮತದಾನದ ದಿನ ಮತವನ್ನು ಚಲಾಯಿಸದೇ ಮನೆಯಲ್ಲೇ ಉಳಿದುಕೊಳ್ಳುವುದೋ ಇಲ್ಲವೇ, ಮತದಾನ ಮಾಡಲೆಂದು ನೀಡಿದ ರಜಾ ಮಜಾ ಮಾಡಲು ಪ್ರವಾಸಗಳಿಗೆ ಹೋಗುವುದನ್ನು ರೂಡಿಯಾಗಿಟ್ಟುಕೊಂಡಿರುವ ಕಾರಣ, ಬಹುತೇಕ ಕಡೆಗಳಲ್ಲಿ ಶೇ 55-60 ಮತದಾನಗಳಾಗುತ್ತಿವೆ ಈ ಕಾರಣದಿಂದಾಗಿ ಯೋಗ್ಯವ್ಯಕ್ತಿಯು ನಮ್ಮ ಜನಪ್ರತಿನಿಧಿಯಾಗದೇ, ಚುನಾವಣೆಗೂ ಮೆಂಚಿನ ದಿನ, ಹಣ, ಹೆಂಡ ಇಲ್ಲವೇ ಇತರೇ ಆಮಿಷಗಳನ್ನು ಒಡ್ಡಿದ ವ್ಯಕ್ತಿಗಳು ಆಯ್ಕೆ ಆಗುವ ಸಂಭವೇ ಹೆಚ್ಚಾಗಿದೆ.
ಹೀಗಾಗಿ ವಾಸ್ತವದಲ್ಲಿ, ಮತದಾನ ಮಾಡದವರಿಗೂ ಮತ್ತು ನೋಟಾ ಒತ್ತುವವರಿಗೂ ತಾಂತ್ರಿಕವಾಗಿ ಯಾವುದೇ ವ್ಯತ್ಯಾಸವೇ ಇರುವುದಿಲ್ಲ. ಮತದಾನ ಮಾಡದ ವ್ಯಕ್ತಿಗೆ ಪ್ರಜಾಪ್ರಭುತ್ವದ ಕುಂದು ಕೊರತೆಗಳನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎನ್ನುವ ಮಾತನ್ನು ಒಪ್ಪುವುದಾದರೆ, ಇರುವ ಅಭ್ಯರ್ಥಿಗಳಲ್ಲಿ ಸಮರ್ಥರನ್ನು ಆಯ್ಕೆಮಾಡುವ ಸಾಮರ್ಥ್ಯವೂ ಇಲ್ಲದೇ ನೋಟ ಓತ್ತಿದವರಿಗೂ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪ್ರಶ್ನಿಸುವ ನೈತಿಕ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ನೋಟ ಒತ್ತುವುದೂ, ಚುನಾವಣೆಗೆ ಗೈರಾಗುವುದೂ ಈ ಎರಡೂ ಸಹಾ ಫಲಿತಾಂಶದ ಲೆಕ್ಕದಲ್ಲಿ ಒಂದೇ ಆಗಿರುವ ಕಾರಣ, ನೋಟಾ ಒತ್ತಿದ್ದರಿಂದ ಸಾಧಿಸಿದ್ದಾದರೂ ಏನೂ? ಎಂಬುದನ್ನು ಪ್ರಶ್ನಿಸುವಂತಾಗಿದೆ.
ಸಾಮಾನ್ಯವಾಗಿ ಚುನಾವಣೆಗಳಲ್ಲಿ ಗೈರು ಹಾಜರಾಗುವುದೋ ಇಲ್ಲವೇ ನೋಟಾ ಒತ್ತುವುವ ಮನಸ್ಥಿತಿಯ ಮತದಾರರು ಹಳ್ಳಿಗಳಿಗಿಂತ ನಗರ ಪ್ರದೇಶಗಳಲ್ಲೇ ಹೆಚ್ಚಾಗಿರುತ್ತಾರೆ. ಇನ್ನು ಈಗಾಗಲೇ ತಿಳಿಸಿದಂತೆ ನಗರ ಪ್ರದೇಶದಲ್ಲಿರುವ ಹಿಂದುಳಿದ ಪ್ರದೇಶ ಇಲ್ಲವೇ ,ಕೊಳಗೇರಿ ಪ್ರದೇಶಗಳಲ್ಲಾಗಲೀ ಅಥವಾ ಒಂದೇ ಕೋಮಿನ ಜನರು ವಾಸಿಸುವಂತಹ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮತದಾನವಾಗಿರುತ್ತದೆ ಅಲ್ಲದೇ, ಇಂತಹ ಪ್ರದೇಶಗಳಲ್ಲಿ ನೋಟಾ ಅಷ್ಟಾಗಿ ಗಣನೆಗೆ ಬರುವುದಿಲ್ಲ. ಅತ್ಯಂತ ವಿಷಾಧನೀಯವಾದ ಮತ್ತು ಅತ್ಯಂತ ನೋವಿನ ಸಂಗತಿ ಎಂದರೆ, ಈ ಎಲ್ಲಾ ಪ್ರದೇಶಗಳಲ್ಲಿನ ಹೆಚ್ಚಿನ ಮತದಾರರು, ತಮ್ಮ ಸ್ವಇಚ್ಚೆಗಿಂತಲೂ, ಯಾರದ್ದೋ, ಯಾವುದೋ ಆಮಿಷಗಳಿಗೆ ಒಳಗಾಗಿ ಮತವನ್ನು ಚಲಾಯಿಸುವುದು ಅಲ್ಲಗಳೆಯಲಾಗದ ಸಂಗತಿಯಾಗಿದೆ
ಇಂತಹ ಸಂಧರ್ಭಗಳಲ್ಲಿ ಬುದ್ದಿವಂತರು ಮತ್ತು ಸುಶೀಕ್ಷಿತರು ಎನಿಸಿಕೊಂಡವರೇ ಮತದಾನಕ್ಕೆ ಗೈರು ಹಾಜರಾಗಿಯೋ ಇಲ್ಲವೇ ಯಾರಿಗೋ, ಯಾವುದೋ ವೈಮನಸ್ಯಕ್ಕಾಗಿ ಬುದ್ದಿ ಕಲಿಸುವ ಸಲುವಾಗಿ ನೋಟಾ ಒತ್ತುವ ಕಾರಣ, ಅವರ ಮತದಾನ ಎಣೆಕೆಗ ಬಾರದೇ ಮುಂದಿನ ಐದು ವರ್ಷಗಳ ಕಾಲ ಶೇ 55-60 ರಷ್ಟು ಜನರು ಮಾಡಿದ ಮತದಾನದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಮತವನ್ನು ಪಡೆದ ಅರ್ಥಾತ್ ಸುಮಾರು ಶೇ 55-60 ರಷ್ಟು ಮತವನ್ನು ಪಡೆದವರು ಜನಪ್ರತಿನಿಧಿಗಳಾಗಿ ನಮ್ಮನ್ನು ಪ್ರತಿನಿಧಿಸುವಂತಾಗುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ.
ಇನ್ನು ಈ ರೀತಿ ಹಣ, ಹೆಂಡ ಮತ್ತು ಇತರೇ ಆಮೀಷಗಳನ್ನು ಕೊಟ್ಟು ಆಯ್ಕೆಯಾದ ಅಭ್ಯರ್ಥಿ ತಾನು ಚುನಾವಣೆಯಲ್ಲಿ ಹೂಡಿದ ಹಣಕ್ಕಿಂತಲೂ ಕನಿಷ್ಟ ಪಕ್ಷ ಮೂರ್ನಾಲ್ಕು ಪಟ್ಟು ಹಿಂಪಡೆಯುವ ಸಲುವಾಗಿ ಅಡ್ಡ ದಾರಿ ಹಿಡಿಯುವ ಕಾರಣ, ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿಗಾಗಿ ಸರ್ಕಾರದಿಂದ ಬರುವ ಎಲ್ಲಾ ಅನುದಾನಗಳಲ್ಲಿಯೂ ಹಣ ಹೊಡೆಯುವ ಕಾರಣ, ಕೆಲಸ ಕಾರ್ಯಗಳು ಕಳೆಪೆಯಾಗುವುದಕ್ಕೂ ಪರೋಕ್ಷವಾಗಿ ನೋಟ ಮತ್ತು ಗೈರುಹಾಜರಿ ಕಾರಣವಾಗುತ್ತಿದೆ.
ಇನ್ನು ರಾಜಕೀಯ ಪಕ್ಷಗಳಿಗೂ ತಮ್ಮನ್ನು ಪ್ರಶ್ನಿಸುವ ಸುಶೀಕ್ಷಿತರಿಗಳಿಗಿಂತಲೂ ತಮ್ಮ ಆಮಿಷಗಳಿಗೆ ಒಳಗಾಗಿಯೋ ಇಲ್ಲವೇ ಜಾತಿ/ಧರ್ಮದ ಆಧಾರವಾಗಿ ಮತಹಾಕುವ ಮತದಾರರೇ ಹೆಚ್ಚು ಆಪ್ಯಾಯಮಾನ ಎನಿಸುತ್ತಾರೆ. ಹಾಗಾಗಿಯೇ ಬಹುತೇಕ ರಾಜಕೀಯ ಪಕ್ಷಗಳು ಅಗ್ಗದ ಬಿಟ್ಟಿ ಭಾಗ್ಯಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು, ಆಯ್ಕೆಯಾದ ನಂತರ ಒಂದೆರಡು ಭಾಗ್ಯಗಳನ್ನು ಆಚರಣೆಗೆ ತಂದು ಜನರ ಕಣ್ಝಿಗೆ ಮಣ್ಣೆರೆಚುವುದಲ್ಲದೇ, ಬಿಟ್ಟಿ ಭಾಗ್ಯಗಳ ಹೆಸರಿನಲ್ಲಿ ಅಪಾರವಾದ ಹಣವನ್ನು ಹೊಡೆಯುವುದಲ್ಲದೇ, ಸರ್ಕಾರದ ಲೆಖ್ಖದಲ್ಲಿ ಈ ಭಾಗ್ಯಗಳನ್ನು ನೀಡಲು ಅವಶ್ಯಕವಾದ ಅಪಾರವಾದ ವೆಚ್ಚವನ್ನು ತೂಗಿಸಲು ಅಲ್ಲಿ ಇಲ್ಲೀ ಸಾಲ ಮಾಡುವ ಮೂಲಕ ಪರೋಕ್ಷವಾಗಿ ಜನತಾ ಜನಾರ್ಧನರ ಮೇಲೆಯೇ ವಿಪರೀತ ತೆರಿಗೆ ಬೀಳುವಂತಾಗುವುದಕ್ಕೆ ಮೂಲಭೂತ ಕಾರಣರೇ, ಮತದಾನಕ್ಕೆ ಗೈರಾದವರು ಮತ್ತು ನೋಟಾ ಒತ್ತಿದವರು ಎನ್ನುವುದು ನಿರ್ವಿವಾದವಾಗಿದೆ.
ಹೀಗೆ ಬಿಟ್ಟಿ ಭಾಗ್ಯಗಳ ನೆಪದಲ್ಲಿ ದೇಶದಲ್ಲಿ ಆರ್ಥಿಕ ಆರಾಜಕತೆ ಮುಂದುವರೆಯುತ್ತಾ ಹೋದಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ನಮ್ಮ ನೆರೆ ರಾಷ್ಟ್ರಗಳಾದ ಪಾಕೀಸ್ಥಾನ, ಶ್ರೀಲಂಕ ಮತ್ತು ಬಾಂಗ್ಲಾ ದೇಶಗಳಂತೆ ದಿವಾಳಿಗಳಾಗುವ ಸಂಭವ ಹೆಚ್ಚಾಗಿದೆ. ಹಾಗಾಗಿ, ದೇಶ ಉಳಿದಲ್ಲಿ ನಾವು ಉಳಿಯುತ್ತೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ದಿನದಂದು ಯಾವುದೇ ಕುಂಟು ನೆಪವೊಡ್ಡದೇ, ಅರ್ಧ ಗಂಟೆ ಇಲ್ಲವೇ ಒಂದು ಗಂಟೆ ಈ ರಾಜ್ಯ ಮತ್ತು ದೇಶದ ಪ್ರಸ್ತುತ ಮತ್ತು ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಸಮರ್ಥವ್ಯಕ್ತಿಗೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಕೊಟ್ಟಿರುವ ಮತದಾನದ ಹಕ್ಕನ್ನು ಸಾರ್ಥಕ ಪಡಿಸಿಕೊಳ್ಳೋಣ ಅಲ್ವೇ?
ಜಿ.ಪಿ. ರಾಜರತ್ನಂ ಅವರ ಕ್ಷಮೆಯಾಚಿಸಿ,
ಒಂದು ಎರಡು ಮತದಾನಕ್ಕೆ ಹೊರಡು
ಮೂರು ನಾಲ್ಕು ಮತದಾನ ನಮ್ಮ ಹಕ್ಕು
ಐದು ಆರು ಚುನಾವಣೆಯಲ್ಲಿ ನಮ್ಮದೇ ಕಾರುಬಾರು
ಏಳು ಎಂಟು ಇದುವೇ ಪ್ರಜಾಪ್ರಭುತ್ವದೊಂದಿಗಿನ ನಮ್ಮ ನಂಟು
ಒಂಭತ್ತು ಹತ್ತು, NOTA ಬಿಟ್ಟು ಯೋಗ್ಯರಿಗೆ ಗುಂಡಿ ಒತ್ತು.
ಒಂದರಿಂದ ಹತ್ತರ ವರೆಗಿನ ಆಟ ಹೀಗಿತ್ತು. ಅಂತಿಮವಾಗಿ ಪ್ರಜಾಪ್ರಭುತ್ವ ಗೆದ್ದಿತ್ತು.
ಒಟ್ಟಿನಲ್ಲಿ ನಾಳೆ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾದ ಕೂಡಲೇ ನಾವೆಲ್ಲರೂ ಮತದಾನ ಮಾಡಿ ನಂತರ ಇನ್ನೂ ಮತದಾನ ಮಾಡದ ನಮ್ಮ ಬಂಧು-ಮಿತ್ರರಿಗೂ ಕರೆ ಮಾಡಿ ಮತದಾನದ ಮಹತ್ವವನ್ನು ತಿಳಿಸಿ ಅವರಿಂದಲೂ ಸಹಾ ಸಂಜೆ 6 ಗಂಟೆಯ ಒಳಗೆ ಮತದಾನ ಮಾಡಿಸುವ ಗುರುತರ ಹೊಣೆಗಾರಿಕೆ ಈ ದೇಶದ ಜವಾಬ್ಧಾರಿ ನಾಗರೀಕರಾದ ನಮ್ಮ ನಿಮ್ಮ ಮೇಲೆಯೇ ಇದೆ. ಹಾಗಾಗಿ ನಾವೂ ನೀವೂ ಎಲ್ಲರೂ ನಾಳೆ ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಮ್ಮ ಮುಂದಿನ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ನಮಗಿರುವ ಏಕೈಕ ಅವಕಾಶವನ್ನು NOTA ಒತ್ತುವ ಮೂಲಕ ಹಾಳು ಮಾಡಿಕೊಳ್ಳದಿರೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ