ಬೆಂಗಳೂರಿಗರ ಮನೆಗಳಲ್ಲಿ ನಡೆಯುವ ಯಾವುದೇ ವಿಶೇಷ ಸಭೆ ಸಮಾರಂಭಗಳಿಗೆ ಸಗಟಾಗಿ ಹೂವು ಮತ್ತು ತರಕಾರಿ ಕೊಳ್ಳಬೇಕಾದರೆ, ಇಂದಿಗೂ ಥಟ್ ಅಂತಾ ನೆನಪಾಗೋದೇ ಬೆಂಗಳೂರಿನ ಹೃದಯಭಾಗದಲ್ಲಿರುವ ಸುಮಾರು ಸುಮಾರು 100 ವರ್ಷಗಳ ಇತಿಹಾಸವಿರುವ, ಏಷ್ಯಾದ ಅತಿ ದೊಡ್ಡ ಸಗಟು ಹೂವಿನ ಮಾರುಕಟ್ಟೆಗಳಲ್ಲಿ ಒಂದಾದ ಮೊದಲಿಗೆ ಕಲ್ಯಾಣಿ, ಯುದ್ದ ಭೂಮಿ, ಸಂತೆ ಕಟ್ಟೆ, ಅಂತಿಮವಾಗಿ ಮಾರುಕಟ್ಟೆಯಾಗಿದ್ದಲ್ಲದೇ ಇನ್ನೂ ಹತ್ತು ಹಲವಾರು ಹೊಸತನದ ರೋಚಕ ಇತಿಹಾಸವನ್ನು ಹೊಂದಿರುವ ಕೃಷ್ಣರಾಜ ಮಾರುಕಟ್ಟೆಯ ಬಗ್ಗೆ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಬೆಂಗಳೂರಿನ ನಿರ್ಮಾತರಾದ ಶ್ರೀ ಕೆಂಪೇಗೌಡರು ಬೆಂಗಳೂರಿನ ಸುತ್ತ ಮುತ್ತಲೂ ನದಿಗಳು ಇಲ್ಲದಿದ್ದ ಕಾರಣ, ನಗರದ ನೀರಿನ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಬೆಂಗಳೂರಿನ ತಗ್ಗು ಪ್ರದೇಶ ಮತ್ತು ಜಲಾನಯನಗಳನ್ನು ಗುರುತಿಸಿ, ಎತ್ತರ ಪ್ರದೇಶಗಳಲ್ಲಿ ಮಳೆಯಿಂದ ಬೀಳುವ ನೀರೆಲ್ಲವೂ ಸರಾಗವಾಗಿ ಹರಿಯುವಂತೆ ರಾಜಕಾಲುವೆಗಳನ್ನು ನಿರ್ಮಿಸಿ ಅವೆಲ್ಲವೂ ಆ ನೀರಿನ ಸೆಲೆಯ ಪ್ರದೇಶಕ್ಕೆ ಹರಿದು ಅಲ್ಲೊಂದು ಸುಂದರವಾದ ಕೆರೆ ಕಟ್ಟೆಗಳಾಗುವಂತೆ ಸುಮಾರು 500 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಅಂತಹ 500 ಕೆರೆಗಳಲ್ಲಿ ಈಗಿನ ಮಾರುಕಟ್ಟೆ ಇರುವ ದೊಡ್ಡ ಪೇಟೆಯ ಬಳಿಯಲ್ಲಿಯೇ ಕಲ್ಯಾಣಿಯೂ ಇತ್ತು. ಸಿದ್ದಿ ಎಂಬುವರು ಕೆಂಪೇಗೌಡರ ಸಂಬಂಧಿಯಾಗಿದ್ದು, ಅವರು ನಿಧನರಾದಾಗ ಅವರ ನೆನಪಿನಲ್ಲೇ ಆ ಕಲ್ಯಾಣಿಗೆ ಸಿದ್ದಿ ಕಟ್ಟೆ ಎಂಬ ಹೆಸರನ್ನು ಇಟ್ಟಿದ್ದಲ್ಲದೇ. ಕ್ರಮೇಣವಾಗಿ ಆ ಕಲ್ಯಾಣಿಯ ಸುತ್ತಲೂ, ಪ್ರತೀ ವಾರವೂ ಸುತ್ತಮುತ್ತಲಿನ ರೈತರುಗಳು ತಾವು ಬೆಳೆದ ಹೂವು ತರಕಾರಿ, ಹಣ್ಣುಗಳು ದವಸ ಧಾನ್ಯಗಳನ್ನು ತಂದು ಮಾರುವಂತಹ ಗದ್ದಲ ಸಂತೆಯಾಗಿ ಮಾರ್ಪಾಟಾಯಿತು.
ಆದಾದ ನಂತರ 1790ರ ಸಮಯದಲ್ಲಿ ಟಿಪ್ಪು ಸುಲ್ತಾನನು ಅದೇ ಸಿದ್ದಿಕಟ್ಟೆಯ ಕೂಗಳತೇ ದೂರದಲ್ಲಿದ್ದ ಕೋಟೆಯಿಂದ ತನ್ನ ರಾಜ್ಯಭಾರವನ್ನು ಮಾಡುತ್ತಿದ್ದಂತಹ ಸಮಯದಲ್ಲಿ, ಬ್ರಿಟಿಷ್ ಸೈನ್ಯವು ತಮಿಳುನಾಡಿನ ಹಲವಾರು ಕೋಟೆಗಳನ್ನು ವಶಪಡಿಸಿಕೊಂಡ ಉತ್ಸಾಹದಲ್ಲಿ ಕರ್ನಾಟಕದ ಕಡೆ ತಮ್ಮ ಥಾಳಿಯನ್ನು ಪ್ರಾರಂಭಿಸಿ, ಮಾರ್ಚ್ 1791 ರಲ್ಲಿ ಬೆಂಗಳೂರನ್ನು ತಲುಪಿ ಹಲಸೂರು ಗೇಟ್ ಅನ್ನು ವಶಪಡಿಸಿಕೊಂಡ ನಂತರ ಬೆಂಗಳೂರು ಕೋಟೆ ಪ್ರದೇಶಕ್ಕೆ ಮುತ್ತಿಗೆ ಹಾಕಿತು. ಅಂದಿನ ಕಾಲಕ್ಕೆ ಅನುಗುಣವಾಗಿ ಅಧುನಿಕ ಶಸ್ತಾಸ್ತ್ರಗಳನ್ನು ಹೊಂದದ್ದ ಬ್ರಿಟೀಷ್ ಸೇನೆಯನ್ನು ಬೆಂಗಳೂರು ಕೋಟೆಯ ಕೊತ್ವಾಲ್ ಬಹದ್ದೂರ್ ಖಾನ್ ತನ್ನ 2,000 ಸೈನಿಕರೊಂದಿಗೆ ಆಕ್ರಮಣಕಾರಿಯಾಗಿ ಈ ಧಾಳಿಯನ್ನು ಪ್ರತಿರೋಧಿಸತೊಡಗಿದನು.
ಆ ಸಮಯದಲ್ಲಿ ಸಿದ್ದಿಕಟ್ಟೆಯ ನೀರಿನ ಸೆಲೆಯು ಒಣಗಿ ಮೈದಾನವಾಗಿದ್ದ ಪರಿಣಾಮ ಬ್ರಿಟೀಷರ ಸೈನ್ಯ ಆ ತೆರೆದ ಪ್ರದೇಶದಲ್ಲಿ ತಮ್ಮ ಬಿಡಾರವನ್ನು ಹೂಡಿಕೊಂಡು ಕೋಟೆಯನ್ನು ಪ್ರವೇಶಿಸಲು ಹೊಂಚು ಹಾಕುತ್ತಿದ್ದರು. ಸುಮಾರು ಎರಡು ವಾರಗಳ ಹಗಲು ಹೊತ್ತಿನಲ್ಲಿ ಕೋಟೆಯನ್ನು ಪ್ರವೇಶಿಸಲು ಸಾಧ್ಯವಾಗದ ಕಾರಣ, ಆ ಬ್ರಿಟಿಷ್ ಸೇನೆಯ ಮುಖ್ಯಸ್ಥನಾಗಿದ್ದ ಲಾರ್ಡ್ ಕಾರ್ನ್ವಾಲಿಸ್, ಯುದ್ಧದ ನಿಯಮಗಳಿಗೆ ವಿರುದ್ಧವಾಗಿ ರಾತ್ರೋರಾತ್ರಿಯಲ್ಲಿ ಕೋಟೆಯ ಮೇಲೆ ದಾಳಿ ಮಾಡಿದಾಗ, ಅದಕ್ಕೆ ಸಿದ್ಧವಾಗಿರದ ಟಿಪ್ಪುವಿನ ಸೈನ್ಯವು ಬ್ರಿಟೀಷರ ವಿರುದ್ಧ ಸೋಲನ್ನು ಅನುಭವಿಸಿ, ಮಾರ್ಚ್ 20, 1791 ಆ ಬೆಂಗಳೂರು ಕೋಟೆಯು ಬ್ರಿಟೀಷರ ಕೈವಶವಾಯಿತು. ಬ್ರಿಟಿಷರು ಬೆಂಗಳೂರು ಪೇಟೆಯನ್ನು ವಶಪಡಿಸಿಕೊಂಡ ನಂತರ, ಯುದ್ಧದ ಅವಶೇಷಗಳ ಜೊತೆ ಕಲ್ಲು ಮಣ್ಣುಗಳನ್ನು ತುಂಬಿ ಆ ಸಿದ್ದಿಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಿ, ಆ ಯುದ್ಧಭೂಮಿಯನ್ನು ಸಾರ್ವಜನಿಕ ಸ್ಥಳವಾಗಿ ಮಾರ್ಪಡಿಸಲಾಯಿತು.
ಹೇಗೂ ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದ ಆ ಸ್ಥಳವು ಸಂಪೂರ್ಣವಾಗಿ ಸಮತಟ್ಟಾದಾಗ, ಆ ಪ್ರದೇಶದಲ್ಲಿ ದೊಡ್ಡ ಪೇಟೆಯ ಮಾರಾಟಗಾರರು ತಮ್ಮ ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಸಲುವಾಗಿ ತಾತ್ಕಾಲಿಕ ಅಂಗಡಿಗಳನ್ನು ಕಟ್ಟಿಕೊಂಡಾಗ, ಬೆಂಗಳೂರಿನ ಅಕ್ಕಪಕ್ಕದ ಹಳ್ಳಿಗಳ ವ್ಯಾಪಾರಿಗಳು ಮತ್ತು ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಅವರಿಗೆ ಮಾರಾಟ ಮಾಡಲು ಬರಲು ಆರಂಭಿಸಿದ ನಂತರ ಆ ತಾತ್ಕಾಲಿಕ ಅಂಗಡಿಗಳೆಲ್ಲವೂ ಶಾಶ್ವತವಾದ ಅಂಗಡಿಗಳಾಗಿ ಮಾರ್ಪಟ್ಟು ಆ ಪ್ರದೇಶವು ತರಕಾರಿ, ಹಣ್ಣು ಮತ್ತು ಹೂವಿನ ಮಾರುಕಟ್ಟೆಯಾಗಿ ಪ್ರವರ್ಧಮಾನವಾದಾಗ ಅಂದಿನ ಪುರಸಭೆಯು ಆ ಅಂಗಡಿ ಮುಗ್ಗಟ್ಟುಗಳನ್ನು ಅಧಿಕೃತಗೊಳಿಸಿ ಅದಕ್ಕೊಂದು ಮಾರ್ಕೆಟ್ ಸಾರ್ಜೆಂಟ್ ನೇಮಿಸಿ ಮಾರುಕಟ್ಟೆ ಅಚ್ಚುಕಟ್ಟಾಗಿ ನಿರ್ವಹಣೆ ಆಗುವಂತೆ ನೋಡಿಕೊಳ್ಳಲಾಗಿತ್ತು.
ಜನವರಿ 1907 ರಲ್ಲಿ, ಬೆಂಗಳೂರು ಪ್ಲೇಗ್‌ನಿಂದ ಚೇತರಿಸಿಕೊಂಡ ಕೂಡಲೇ, ಮೈಸೂರಿನ ದಿವಾನ್, ಸರ್ ಪಿಎನ್ ಕೃಷ್ಣಮೂರ್ತಿ ಮತ್ತು ಬೆಂಗಳೂರು ನಗರ ಮುನ್ಸಿಪಲ್ ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿದಾಗ ಅ ಸ್ಥಳವು ಅತ್ಯಂತ ಕೊಳಕು ಮತ್ತು ಅನಾರೋಗ್ಯಕರವಾಗಿದ್ದರಿಂದ ಹೊಸ ಮಾರುಕಟ್ಟೆಯನ್ನು ನಿರ್ಮಿಸಲು ಸೂಚಿಸಿದಾಗ, ಹೊಸಾ ಮಾರುಕಟ್ಟೆಯನ್ನು ಕಲಾಸಿಪಾಳ್ಯದ ಬಳಿ ನಿರ್ಮಿಸಲು ಉದ್ದೇಶಿಸಲಾಯಿತಾದರೂ, ಆ ಪ್ರಸ್ತಾವಿತ ಪ್ರದೇಶ ಅಯೋಗ್ಯವಾಗಿದ್ದು, ಹಳೆ ಕೋಟೆ ಕಂದಕದಲ್ಲಿ ಗುಂಡಿಗಳನ್ನು ತುಂಬಿ ಮಣ್ಣಿನ ಹಾಸು ರಚನೆ ಮಾಡಬೇಕಿತ್ತು. ಹಾಗಾಗಿ ಹಳೆಯ ಮಾರುಕಟ್ಟೆಯನ್ನೇ ಹೊಸ ಮಾರುಕಟ್ಟೆಯನ್ನಾಗಿ ಮಾಡಲು ನಿರ್ಧರಿಸಲಾಯಿತು.
1920ಕ್ಕೂ ಮೊದಲು, ಇದ್ದ ಈ ಮಾರುಕಟ್ಟೆಯ ಪ್ರದೇಶವನ್ನು ವಂಡಿ ಮೋಡ್ (ಮರದ ಗಾಡಿಗಳನ್ನು ನಿಲ್ಲಿಸುವ ಸ್ಥಳ) ಎಂದು ಕರೆಯಲಾಗುತ್ತಿದ್ದ ಅತ್ಯಂತ ಕಡಿಮೆ ಎತ್ತರದ ಛಾವಣಿಯಗಳನ್ನು ಹೊಂದಿದ್ದ, ಕಿರಿದಾದ ಕೊಳೆಗೇರಿಯ ಪ್ರದೇಶವನ್ನು ಖಾಲಿ ಮಾಡಿಸಿ ಆ ಜಾಗದಲ್ಲಿ ಮಾರುಕಟ್ಟೆಯನ್ನು ನಿರ್ಮಿಸುತ್ತಿರುವ ವಿಷಯವನ್ನು ತಿಳಿದ ಅಂದಿನ ಮೈಸೂರಿನ ಅರಸರಾದ ಶ್ರೀ ಕೃಷ್ಟರಾಜ ಒಡೆಯರ್ ಅವರು, ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಂಡು ಕಲ್ಕತ್ತಾದ ಸರ್ ಸ್ಟುವರ್ಟ್ ಹಾಗ್ ಮಾರ್ಕೆಟ್‌ನ ವಾಸ್ತುಶಿಲ್ಪದ ವಿನ್ಯಾಸದಿಂದ ಪ್ರೇರಿತವಾದಂತಹ ನೀಲ ನಕ್ಷೆಯನ್ನು ಸಿದ್ದಪಡಿಸಿ 1921 ರಲ್ಲಿ ಮಾರುಕಟ್ಟೆಯ ನಿರ್ಮಾಣ ಆರಂಭಿಸಿ ಕೇವಲ ಒಂದು ವರ್ಷದಲ್ಲೇ ಸುಂದರವಾದ ಮಾರುಕಟ್ಟೆಯು ಪೂರ್ಣಗೊಂಡಿತು.
ಸುಂದರವಾದ ಕೆಂಪು ಬಣ್ಣದ ಕಟ್ಟಡವಾಗಿದ್ದು, ಮಾರಾಟಗಾರರಿಗೆ ದೊಡ್ಡ ಅಂಗಡಿಗಳ ಸಾಲು, ಸಂದರ್ಶಕರಿಗೆ ಬೆಂಚುಗಳಿರುವ ಉದ್ಯಾನವನ, ಮಧ್ಯದಲ್ಲಿ ಲಂಡನ್‌ನಿಂದ ಆಮದು ಮಾಡಿಕೊಂಡ ಮಹಿಳೆಯ ಶಿಲ್ಪವಿರುವ ನೀರಿನ ಕಾರಂಜಿ ಮತ್ತು ಮೂರು ಪೈಸೆಯ ಶುಲ್ಕದ ವಿಶೇಷ ಬೈಸಿಕಲ್ ಸ್ಟ್ಯಾಂಡ್ ವ್ಯಸಸ್ಥೆಯನ್ನು ಮಾಡಲಾಗಿತ್ತು. ಮಹಾರಾಜರ ಅಸ್ಥೆಯಿಂದ ಕಟ್ಟಿಸಿದಂತಹ ಈ ಸುಂದರವಾದ ಮಾರುಕಟ್ಟೆಗೆ ಕೃಷ್ಣರಾಜ ಮಾರುಕಟ್ಟೆ ಎಂದೇ ಹೆಸರಿಸಲಾಯಿತು.
ಅಕ್ಟೋಬರ್ 11, 1921 ರಂದು ಉದ್ಘಾಟನೆ ಗೊಂಡ ಈ ಹೊಸ ಮಾರುಕಟ್ಟೆಯ ಸಮಾರಂಭದಲ್ಲಿ ಅಂದಿನ ಬೆಂಗಳೂರು ನಗರ ಪಾಲಿಕೆಯ ಅಧ್ಯಕ್ಷರಾಗಿದ್ದ ಬಿ.ಕೆ.ಗರುಡಾಚಾರ್ ಹಾಗೂ ಇತರೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು. ಬೆಂಗಳೂರಿನ ಸುತ್ತಮುತ್ತಲೂ ಮತ್ತು ಕೋಲಾದರ ಕಡೆಯಿಂದ ಬೆಳೆದ ಉತ್ತಮ ದರ್ಜೆಯ ಹೂ, ಹಣ್ಣುಗಳು ಮತ್ತು ತರಕಾರಿಗಳನ್ನು ರೈತರು ಈ ಮಾರುಕಟ್ಟೆಯ ಮೂಲಕ ಗ್ರಾಹಕರಿಕೆ ತಲುಪಿಸುತಿದ್ದರು. ಈಗ ಲಾಲ್ ಬಾಗ್ ನಲ್ಲಿ ನಡೆಯುವ ಫಲಪುಷ್ಮ ಪ್ರದರ್ಶನದಂತೆ ಅಂದು ಪ್ರತೀ ವರ್ಷವೂ ಈ ಮಾರುಕಟ್ಟೆಯಲ್ಲಿ ಉತ್ತಮ ಹಣ್ಣುಗಳು, ತರಕಾರಿಗಳು ಮತ್ತು ಹೂವುಗಳ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ಸ್ವತಃ ಮಹಾರಾಜರೇ ಬಹುಮಾನಗಳನ್ನು ವಿತರಿಸುವಂತಹ ವ್ಯವಸ್ಥೆ ಇತ್ತು.
ಇಂತಹ ಸುಸಜ್ಜಿತವಾದ ಮಾರುಕಟ್ಟೆ ಆರಂಭವಾಗುವ ಮೊದಲೇ ಮತ್ತೊಂದು ಐತಿಹಾಸಿಕ ಘಟನೆಗೆ ಈ ಮಾರುಕಟ್ಟೆ ಸಾಕ್ಷಿಯಾಗಿದೆ. ಶಿಂಷಾದಲ್ಲಿ ಜಲವಿದ್ಯುತ್ ಯೋಜನೆ ಮೂಲಕ ವಿದ್ಯುತ ತಯಾರಿಸಿ, ಕರ್ನಾಟಕದಲ್ಲಿ ಮೈಸೂರು, ಬೆಂಗಳೂರು ಮತ್ತು ಕೋಲಾರದ ಚಿನ್ನದ ಗಣಿಯ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಮಾಡಿದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದರೇ, ಇಡೀ ಏಷ್ಯಾದಲ್ಲಿಯೇ ಮೊದಲ ಬಾರಿಗೆ ಬೀದಿ ಬದಿಯಲ್ಲಿ ವಿದ್ಯುತ್ ದೀಪಗಳು ಬೆಳಕು ಚೆಲ್ಲಿದ್ದು ನಮ್ಮ ಬೆಂಗಳೂರಿನಲ್ಲಿ ಅದೂ ಕೃ.ರಾ. ಮಾರುಕಟ್ಟೆಯ ಮುಂದೆ ಎಂಬುದೇ ಹೆಮ್ಮೆಯ ಸಂಗತಿಯಾಗಿದೆ. 1905ರ ಆಗಸ್ಟ್ 5ರಂದು ಅಂದಿನ ಬ್ರಿಟಿಷ್ ವೈಸ್‍ರಾಯ್ ಕೌನ್ಸಿಲ್ ಸದಸ್ಯರಾಗಿದ್ದ ಸರ್ ಜಾನ್ ಹವೆಟ್ ಅವರು ಸ್ವಿಚ್ ಒತ್ತುವ ಮೂಲಕ ವಿದ್ಯುತ್ ದೀಪಗಳನ್ನು ಬೆಳಗಿಸಿದರು. ಅಲ್ಲಿಯ ವರೆಗೂ ಬೀದಿಗಳಲ್ಲಿ, ಮನೆ ಮತ್ತು ಮಾರುಕಟ್ಟೆಗಳ ರಸ್ತೆ ಬದಿಯ ಕಂಬಗಳಲ್ಲಿ ಸೀಮೆಎಣ್ಣೆ ಲಾಂಧ್ರದ ದೀಪಗಳನ್ನಿಟ್ಟು ಪ್ರತಿ ದಿನವೂ ಅದಕ್ಕೆ ಸೀಮೆಎಣ್ಣೆ ಹಾಕಿ ದೀಪಗಳನ್ನು ಹೊತ್ತಿಸಲಾಗುತ್ತಿತ್ತು. ಅವುಗಳ ನಿರ್ವಹಣೆಗಾಗಿ ಪ್ರತೀ ಪ್ರದೇಶಕ್ಕೆ ಮೂವರು ಕಾವಲುಗಾರರನ್ನು ನೇಮಿಸಲಾಗಿತ್ತು. ಅಂದಿನ ಕಾಲಕ್ಕೆ ಸುಮಾರು ₹ 6 ಲಕ್ಷ ಖರ್ಚು ಮಾಡಿ ಬಲಿಗ ಮರದ ಕಂಬಗಳನ್ನು ನೆಟ್ಟು ಅವುಗಳ ಮೂಲಕ ತಾಮ್ರದ ತಂತಿಗಳನ್ನು ಎಳೆಯಿಸಿ ಮೊದಲ ಬಾರಿಗೆ ಬೆಂಗಳೂರಿನ ರಸ್ತೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿದ್ದನ್ನು ಕಣ್ತುಂಬಿಸಿಕೊಳ್ಳಲು ಕೆ.ಆರ್. ಮಾರುಕಟ್ಟೆಯ ಬಳಿ ಸಂಜೆ ಆಗುತ್ತಿದ್ದಂತೆಯೇ ಬೇರೆ ಬೇರೆ ಊರುಗಳಿಂದ ಜನರು ಎತ್ತಿನ ಗಾಡಿಗಳನ್ನು ಮಾಡಿಕೊಂಡು ಬರುತ್ತಿದ್ದರಂತೆ.
1927ರ ಸೆಪ್ಟೆಂಬರ್ 7ರಂದು ಮೈಸೂರು ರಾಜ್ಯದ ರಜತ ಮಹೋತ್ಸವದ ಸಂದರ್ಭದಲ್ಲಿ ಆನೆಯ ಮೇಲೆ ಕುಳಿತ ಮಹಾರಾಜರು ಕೆ.ಆರ್.ಮಾರುಕಟ್ಟೆ ಬಳಿ ಮೆರವಣಿಗೆಯಲ್ಲಿ ಬಂದ ಸವಿನೆಪಿಗಾಗಿ ಅದೇ ಮಾರುಕಟ್ಟೆಯ ಸಮೀಪವಿರುವ ಉದ್ಯಾನವನಕ್ಕೆ ಸಿಲ್ವರ್ ಜ್ಯೂಬಿಲಿ ಪಾರ್ಕ್ ಎಂದು ಹೆಸರಿಸಲಾಯಿತು.
80ರ ದಶಕದ ವರೆಗೂ ಹಬ್ಬ ಹರಿದಿಗಳಲ್ಲಿ ಪಟಾಕಿಗಳನ್ನು ಸಹಾ ಅಲ್ಲಿಯೇ ಮಾರಾಟ ಮಾಡುತ್ತಿದ್ದು, ಯಾರೋ ಬೀಡಿ ಹತ್ತಿಸಿಕೊಂಡು ಎಸೆದ ಬೆಂಕಿಯ ಕಿಡಿ ಪಟಾಕಿ ಮಳಿಗೆಯ ಮೇಲೆ ಬಿದ್ದು ಅಲ್ಲಿ ಸಾಲು ಸಾಲಾಗಿದ್ದ ಹತ್ತಾರು ಪಟಾಕಿ ಅಂಗಡಿಗಳಿಗೆ ಏಕಾಏಕಿ ಬೆಂಕಿ ಹರಡಿಕೊಂಡು ಸುಟ್ಟು ಭಸ್ಮವಾದ ನಂತರ ಕೃರಾಮಾರುಕಟ್ಟೆಯಲ್ಲಿ ಪಟಾಕಿ ಮಾರುವುದನ್ನು ಶಾಶ್ವತವಾಗಿ ನಿರ್ಬಂಧಿಸಲಾಯಿತು
ಸುಮಾರು 1990 ರವರೆಗೂ ಅದೇ ಹಳೆಯ ಕಟ್ಟಡದಲ್ಲೇ ಮಾರುಕಟ್ಟೆ ನಡೆದುಕೊಂಡು ಹೋಗಿ ಅದು ಬಹಳ ಕಿರಿದಾಗಿದ್ದ ಕಾರಣ, 90 ದಶಕದಲ್ಲಿ ಸುಮಾರು ವರ್ಷಗಳ ಕಾಲ ಮಾರುಕಟ್ಟೆಯನ್ನು ನವೀಕರಣಕ್ಕಾಗಿ ಮುಚ್ಚಿ, ಎರಡು ಹಳೆಯ ಕಟ್ಟಡಗಳ ನಡುವೆ ಹೊಸ ಕಾಂಕ್ರೀಟ್ 3-ಅಂತಸ್ತಿನ ರಚನೆಯನ್ನು ಸ್ಥಾಪಿಸಿ, ಮಾರಾಟಗಾರರಿಗೆ ಹೆಚ್ಚಿನ ಸ್ಥಳವನ್ನು ಮತ್ತು ಉತ್ತಮ ಒಟ್ಟಾರೆ ಪರಿಸ್ಥಿತಿಗಳನ್ನು ಒದಗಿಸಲಾಯಿತು. ನೆಲಮಾಳಿಗೆಯಲ್ಲಿ ಭೂಗತ ಪಾರ್ಕಿಂಗ್ ಯನ್ನು ಮಾಡಲಾಯಿತು. ನೆಲ ಮಹಡಿಯಲ್ಲಿ ಹೂವುಗಳು ಮತ್ತು ತರಕಾರಿಗಳು, ಮೇಲಿನ ನೆಲ ಮಹಡಿಯಲ್ಲಿ ಒಣ ಸರಕುಗಳು ಮತ್ತು ಮೊದಲ ಮಹಡಿಯಲ್ಲಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಪರಿಕರಗಳನ್ನು ಮಾರಾಟ ಮಾಡುವ ಸೌಲಭ್ಯವನ್ನು ಕಲ್ಪಿಸಲಾಯಿತಾದರೂ ಸೂಕ್ತವಾದ ನಿರ್ವಹಣೆ ಇಲ್ಲದೇ, ಕೊಳೆತು ಗಬ್ಬು ನಾರುವ ಪರಿಸ್ಥಿತಿ ಇರುವ ಕಾರಣ ಮತ್ತು ಮನೆಯ ಮುಂದೆಯೇ ತಾಜಾ ತಾಜಾ ತರಕಾರಿ ಹಣ್ಣುಗಳು ಲಭಿಸುವಂತಾಗಿರುವ ಕಾರಣ ತಮ್ಮ ದೈನಂದಿನ ಅವಶ್ಯಕತೆಗಾಗಿ ಇಂದಿನ ಬಹಳಷ್ಟು ಜನರು ಕೃರಾ ಮಾರುಕಟ್ಟೆಯ ಕಡೆಗೆ ದೈನಂದಿನ ಹೋಗದೇ ಹೋದರೂ, ಈ ಮೊದಲೇ ತಿಳಿಸಿದಂತೆ ಸಭೆ ಸಮಾರಂಭಗಳಿಗೆ ಸಗಟಾಗಿ ಖರೀದಿಸಲು ಇನ್ನೂ ಸಹಾ ಕೃರಾಮಾರುಕಟ್ಟೆಯನ್ನೇ ಅವಲಂಭಿರುವುದು ಹೆಮ್ಮೆಯ ಸಂಗತಿ.
ಸದ್ಯ ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಆರ್ ಮಾರುಕಟ್ಟೆಯ ಪ್ರದೇಶವನ್ನು ನವೀಕರಿಸಲು ಬಿಬಿಎಂಪಿಯು ಯೋಜಿಸಿದೆಯಾದರೂ, ಆ ಪ್ರದೇಶವು ಕಸ ಮುಕ್ತವಾಗಿ ಉಳಿಯುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲಾ ಎನ್ನುವುದೇ ಸ್ಥಳೀಯರ ಅಳಲಾಗಿರುವುದು ನಿಜಕ್ಕೂ ವಿಪರ್ಯಾಸ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ ಉಮಾಸುತ
Its beautiful sir and very informative to know our Bangaluru KR market history
LikeLiked by 1 person