ಬಿಟ್ಟಿ ಎಂದರೆ ಮೈ ಎಲ್ಲಾ ಬಾಯಿ

abhiಈ ಲೇಖನದಲ್ಲಿ ಪ್ರಸಕ್ತ ಎರಡು ವಿಷಯಗಳು ಮತ್ತು ಕಳೆದ ವರ್ಷದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ ಕಳೆದ ವಾರ ಕರ್ನಾಟಕದ ಖ್ಯಾತ ನಟರು ಮತ್ತು ರಾಜಕಾರಣಿಗಳೂ ಆಗಿದ್ದ ಶ್ರೀ ಅಂಬರೀಷ್ ಅವರ ಪುತ್ರತನ ಮದುವೆ ಬಹಳ ಅದ್ದೂರಿಯಿಂದ ಬೆಂಗಳೂರಿನಲ್ಲಿ ತಮ್ಮ ಆತ್ಮೀಯರ ಸಮ್ಮುಖದಲ್ಲಿ ನಡೆದು ನಂತರ ಗಣ್ಯರಿಗಾಗಿ ಆರತಕ್ಷತೆಯೂ ಬೆಂಗಳೂರಿನಲ್ಲಿಯೇ ನಡೆದ ಕಾರಣ, ತಮ್ಮನ್ನು ಬಹಳವಾಗಿ ಪ್ರೀತಿಸುವ ಮತ್ತು ಆರಾಧಿಸುವ ತವರು ಊರಾದ ಮಂಡ್ಯಾದ ಜನರಿಗಾಗಿ ಬೀಗರ ಊಟವನ್ನು ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಬಹಳ ಅದ್ದೂರಿಯಿಂದ ಏರ್ಪಡಿಸಲಾಗಿತ್ತು.

abhi2ಬಂದವರನ್ನು ಉಪಚರಿಸಲು ಸಾವಿರಾರು ಕೆಜಿ ಬಗೆ ಬಗೆಯ ಮಾಂಸಾಹಾರವನ್ನು ತಯಾರಿಸಲು, ಸುಮಾರು 400ಕ್ಕೂ ಹೆಚ್ಚು ಬಾಣಸಿಗರು, ಮಾಡಿದ ಅಡುಗೆಯನ್ನು ಸಮರ್ಪಕವಾಗಿ ಬಡಿಸಲು ಅಷ್ಟೇ ಜನರು ನಿಯೋಜಿತರಾಗಿದ್ದಲ್ಲದೇ, ಸುಮಾರು ಒಂದೆರಡು ವಾರಗಳಿಂದಲೇ ಬಂಧು ಮಿತ್ರರೆಲ್ಲರೂ ಸೇರಿಕೊಂಡು ತಯಾರಿ ನಡೆಸಿ, ಸುಮಾರು ಲಕ್ಷ ಜನರು ಸೇರಬಹುದಾದ ಕಾರ್ಯಕ್ರಮಕ್ಕೆ ಏನೆಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೋ ಅವಲ್ಲವನ್ನೂ ತೆಗೆದುಕೊಳ್ಳಲಾಗಿತ್ತು.

abhi3ಒಂದು ಕಡೆ ಮದುವೆಯಾದ ನವದಂಪತಿಗಳು ಮತ್ತು ಕುಟುಂಬದವರು ಬಂದವರೆಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದರೇ, ಪಕ್ಕದಲ್ಲೇ ವ್ಯವಸ್ಥೆ ಮಾಡಿದ್ದ ಊಟದ ಮನೆಯಲ್ಲಿ ಇದ್ದಕ್ಕಿದ್ದಂತೆಯೇ ನಡೆದ ಅವ್ಯವಸ್ಥೆ ಇಡೀ ಸಮಾರಂಭವನ್ನೇ ಹಾಳು ಮಾಡಿಬಿಟ್ಟಿದ್ದಲ್ಲದೇ, ಅಷ್ಟು ಚನ್ನಾಗಿ ಆಗಬೇಕಾಗಿದ್ದ ಕಾರ್ಯಕ್ರಮಕ್ಕೆ ಒಂದು ದೊಡ್ಡ ಕರೀ ಚುಕ್ಕೆಯಾಗಿ ಹೋಗಿದ್ದಂತೂ ಸುಳ್ಳಲ್ಲ. ತಮ್ಮ ಜೀವಮಾನದಲ್ಲೇ ಅನ್ನವನ್ನೇ ಅದರಲ್ಲೂ ಮಾಂಸಾಹಾರವನ್ಣೇ ನೋಡಿಲ್ಲವೇನೋ ಎನ್ನಿಸುವಂತೆ ಮುಗಿ ಬಿದ್ದದ್ದು ನಿಜಕ್ಕೂ ಅಸಹ್ಯಕರವಾಗಿತ್ತು. ಒಂದುಕಡೆ ಬಾಡೂಟಕ್ಕಾಗಿ ಅಷ್ಟೆಲ್ಲ ತಳ್ಳಾಟ, ನೂಕಾಟದ ನಡೆಯುತ್ತಿದ್ದರೆ, ಇನ್ನೂ ಕೆಲವರೂ ಊಟದ ಸರದಿಯನ್ನು ಬಿಟ್ಟು ಸಿಕ್ಕ ಸಿಕ್ಕಲ್ಲಿ ಟೆಂಟ್ ಒಳಗೆ ನುಗ್ಗುತ್ತಿದ್ದದ್ದು ನಿಜಕ್ಕೂ ಬೇಸರವನ್ನು ತರಿಸಿತ್ತು. ಊಟದ ಪಂಕ್ತಿಯಲ್ಲಿ ಕುಳಿತವರಿಗಾಗಿ ಬಡಿಸಲು ಬೇಯಿಸಿದ ಮೊಟ್ಟೆಗಳನ್ನು ದೊಡ್ಡ ಪಾತ್ರೆಯಲ್ಲಿ ಅಡುಗೆ ಭಟ್ಟರು ತರುತ್ತಿದ್ದರೆ, ಎಂಜಿಲು ಕೈ ಎಂಬುದನ್ನೂ ಮರೆತು, ಒಬ್ಬರ ಮೇಲೆ ಒಬ್ಬರು ಬಿದ್ದು ಕೈಗೆ ಸಿಕ್ಕಷ್ಟು ತೆಗೆದುಕೊಳ್ಳುತ್ತಿದ್ದರು ಎನ್ನುವುದಕ್ಕಿಂತಲೂ ದೋಚುತ್ತಿದ್ದರೂ ಎನ್ನುವುದೇ ಸೂಕ್ತವಾಗಿ ಕೆಲವೇ ಕೆಲವು ನಿಮಿಷಗಳಲ್ಲಿ ಖಾಲಿಯಾಗುತ್ತಿದ್ದಂತೆ, ಆಯೋಜಕರಿಗೆ ಅಲ್ಲಿ ಏನಾಗುತ್ತಿದೆ ಎಂಬುದರ ಅರಿವೇ ಇಲ್ಲದಾಯಿತು.

abhi4ಈ ರೀತಿಯಾಗಿ ಅಲ್ಲಿನ ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬುದನ್ನು ಗಮನಿಸಿದ ಸ್ಥಳೀಯ ಪೋಲೀಸರು ಲಘು ಲಾಟಿ ಪ್ರಹಾರವನ್ನು ಮಾಡಿ ತಳ್ಳಾಟ, ನೂಕಾಟ ಮಾಡುತ್ತಿದ್ದವರನ್ನು ಚದುರುಸಿದ್ದನ್ನೇ ಬಕ ಪಕ್ಷಿಗಳಂತೆ ಕಾಯುತ್ತಿದ್ದ ರಾಜ್ಯದ ವಿವಿಧ ಮಾಧ್ಯಮಗಳು ಬೀಗರೌತಣಕ್ಕೆ ಬಂದರವರ ಮೇಲೆ ಲಾಟಿ ಪ್ರಹಾರ ಎಂಬ ಬ್ರೇಕಿಂಗ್ ನ್ಯೂಸ್ ಪ್ರಸಾರ ಮಾಡಿ, ದಿ. ಅಂಬರೀಷ್ ಅವರ ಕುಟುಂಬದ ಮಾನ ಮರ್ಯಾದೆ ಮೂರಾಬಟ್ಟೆಯನ್ನಾಗಿಸಿದ್ದು ಬೇಸರ ತರಿಸಿತು. ಕಾರ್ಯಕ್ರಮದ ಮುಗಿದ ನಂತರ ಸಂದರ್ಶನದಲ್ಲಿ ಮಧುಮಗ ಅಭಿಷೇಕ್ ಎಲ್ಲರಲ್ಲೂ ಕೈ ಮುಗಿದು ಕ್ಷಮಾಪಣೆಯನ್ನು ಕೇಳಿ ನಿಜ ಹೇಳಬೇಕೆಂದರೆ, ಒಂದು ಲಕ್ಷ ಜನರು ಆರಾಮಾಗಿ ಕುಳಿತು ಎಲ್ಲಾ ಬಾಡೂಟ ಮತ್ತು ಭಕ್ಷಗಳನ್ನು ಸೇವಿಸುವಂತಹ ವ್ಯವಸ್ಥೆ ಮಾಡಲಾಗಿತ್ತು. ಅದರೆ ಹಸಿದ ಕೆಲವರು ಏಕಾಏಕಿ ಮುಗಿಬಿದ್ದು ಅನಗತ್ಯ ಗೊಂದಲವನ್ನೇರ್ಪಡಿಸಿದ್ದಕ್ಕಾಕೆ ಬೇಸರ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಹಾಳು ಮಾಡಲೆಂದೇ ಯಾರಾದರೂ ಹುನ್ನಾರ ನಡೆಸಿರಬಹುದೇ? ಎಂದು ಸಂದರ್ಶಕರು ಕೇಳಿದಾಗ, ಮಾಡಿಟ್ಟ ಅಡುಗೆಯನ್ನು ಬಡಿಸುವಾಗ ಸ್ವಲ್ಪ ವ್ಯತ್ಯಯ ಆಗಿರಬಹುದು ಅದಕ್ಕಾಗಿ ನೇರವಾಗಿ ಅಡುಗೆ ಮನೆಗೆ ನುಗ್ಗಿ ಮಾಡಿಟ್ಟ ಆಹಾರವನ್ನು ಚಲ್ಲಾಡಿರುವುದು ನೋಡಿದರೆ ಹುನ್ನಾರ ಎನಿಸಿದರೂ, ಅದು ಅವರು ನನಗೆ ನೀಡಿದ ಉಡುಗೊರೆ ಎಂದು ಭಾವಿಸುತ್ತೇನೆ ಎಂದು ಸಮಯಕ್ಕೆ ತಕ್ಕಂತೆ ತೂಕವಾಗಿ ಮಾತನಾಡಿ ಪ್ರಬುದ್ಧತೆಯನ್ನು ಮೆರೆದದ್ದು ಮೆಚ್ಚುಗೆಯಾಯಿತು.

ಇದೇ ವಿಷಯಕ್ಕೆ ಕುರಿತಂತೆ ದೊಡ್ಡ ದೊಡ್ಡ ಟೆಂಟ್ ಮತ್ತು ಕ್ಯಾಟರಿಂಗ್ ವ್ಯವಸ್ಥೆಯನ್ನು ಮಾಡುವ ಅತ್ಮೀಯರೊಬ್ಬರು, 500 ಜನರಿಗೆ ಸಸ್ಯಾಹಾರದ ಊಟ ಮಾಡಿಸಿದರೆ ಅದನ್ನು ಸುಮಾರು 700 ಜನಕ್ಕೆ ಬಡಿಸಬಹುದು. ಅದೇ 500 ಜನರಿಗೆ ಬಾಡೂಟದ ವ್ಯವಸ್ಥೆ ಮಾಡಿದರೆ, ಅದನ್ನು ಕೇವೆಲ 300 ಜನರೇ ಬಡಿದು ಬಾಯಿಗೆ ಹಾಕಿಕೊಂಡು ಬಿಡುತ್ತಾರೆ ಎಂದದ್ದು ಮಾರ್ಮಿಕವಾಗಿತ್ತು. ಇಂದಿನ ಜನರು ಸ್ವಾಭಿಮಾನ ಮತ್ತು ಸಭ್ಯತೆಯನ್ನು ಮೀರಿ ಹೇಗೇಕೆ ನಡೆಸುತ್ತಾರೆ? ಎಂದು ಯೋಚಿಸಿದಾಗ, ಯಥಾ ರಾಜಾ ತಥಾ ಪ್ರಜಾ ಎಂಬಂತೆ, ಇಡೀ ಪ್ರಸಂಗ ನಮ್ಮನ್ನು ಆಳುವ ಮಂದಿಯತ್ತಲೇ ತಿರುಗಿ, ನಮ್ಮ ರಾಜಕಾರಣಿಗಳು ಉಚಿತ ಸೀರೆ, ಹೆಂಡ ಹಂಚುವಾಗಲೂ ಇದೇ ರೀತಿಯ ನೂಕು ನುಗ್ಗಲು ನಡೆಯುತ್ತವೆ, ಹಾಗಾಗಿ ಇಲ್ಲಿಯೂ ನಡೆದಿದೆ ಎನಿಸಿದ್ದಂತೂ ಸುಳ್ಳಲ್ಲ.

ನಿಜ ಹೇಳಬೇಕೆಂದರೆ, ಈ ರೀತಿಯಾಗಿ ಯಾರೂ ಸಹಾ ಬಿಟ್ಟಿಯಾಗಿ ತಿನ್ನುವುದನ್ನು ನಮ್ಮ ಸಂಸ್ಕಾರದ ವಿರುದ್ಧವಾಗಿದೆ. ಇದ್ದನ್ನೇ ನಮ್ಮ ಸನಾತನ ಧರ್ಮದಲ್ಲಿ ಋಣ ಎನ್ನುತ್ತೇವೆ. ಯಾರಾದರೂ ಮತ್ತೊಬ್ಬರಿಗೆ ಉಚಿತವಾಗಿ ಏನನ್ನಾದರೂ ಕೊಟ್ಟಾಗ ಋಣಭಾರ ಮಣಭಾರ ಎಂದು ಅವರು ಕೊಟ್ಟದನ್ನು ಮತ್ತೊಂದು ರೀತಿಯಲ್ಲಿ ಹಿಂದಿರುಗಿಸಿಯೇ ತೀರುತ್ತೇವೆ. ಅದಕ್ಕಾಗಿಯೇ ಈ ಹಿಂದೆ ಯಾವುದೇ ಸಭೆ ಸಮಾರಂಭಗಳಿಗೆ ಬರುವಾಗ ತಮ್ಮ ಕೈಲಾದ ಮಟ್ಟಿಗೆ ಧವಸ ಧಾನ್ಯಗಳು, ಹೂವು, ತರಕಾರಿ ಹಣ್ಣುಗಳನ್ನು ಹಿಡಿದುಕೊಂಡು ಮೂರ್ನಾಲ್ಕು ದಿನಗಳ ಮುಂಚೆ ಬಂದು ತಮ್ಮ ಕೈಲಾದ ಮಟ್ಟಿಗಿನ ಕೆಲಸವನ್ನು ಸಮಾರಂಭ ಮುಗಿದ ಎರದು ಮೂರು ದಿನಗಳ ಕಾಲ ಅಲ್ಲೇ ಇದ್ದು ಎಲ್ಲವನ್ನು ಅಣಿ ಮಾಡಿ ಹೋಗುವಂತಹ ಅತ್ಮೀಯತೆ ಇತ್ತು. ಇನ್ನು ಉಡುಗೊರೆ ಕೊಡುವುದನ್ನೂ ಮುಯ್ಯಿ ಎಂದೇ ಪರಿಗಣಿಸಿ, ಆದನ್ನು ಯಾವುದೇ ರೀತಿಯಲ್ಲಿ  ಹಿಂದುರಿಗಿಸಿ ಕೊಡುವಂತಹ ಸಂಸ್ಕಾರ ನಮ್ಮದಾಗಿತ್ತು.

WhatsApp Image 2023-06-19 at 08.24.25ಇನ್ನು ಕಳೆದ ವಾರದಿಂದ ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಹೆಣ್ಣುಮಕ್ಕಳಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತವಾದ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದೇ ತಡಾ, ಎಂದೂ ಬಸ್ಸನ್ನು ನೋಡಿಯೇ ಇಲ್ಲವೇನೋ? ಜೀವಮಾನದಲ್ಲಿ ಬಸ್ಸಿನಲ್ಲಿ ಪ್ರಯಾಣಿಸಿಯೇ ಇಲ್ಲವೇನೋ ಎನ್ನುವಂತೆ ರಾಜ್ಯದ ಲಕ್ಷಾಂತರ ಹೆಂಗಳೆಯರು ಏಕಾ ಏಕಿ ಬಸ್ ಪ್ರಯಾಣಕ್ಕೆ ಮುಂದಾಗಿರುವುದು ಬೇಸರದ ಸಂಗತಿಯಾಗಿದೆ. ಅದಕ್ಕೂ ಒಂದು ಹೆಚ್ಚೆ ಮುಂದೆ ಹೋಗಿ, ಇನ್ನೂ ಕೆಲವು ಹೆಂಗಳೆಯರು, ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುತ್ತಾ ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಸಾಹಸಿ ಹೆಣ್ಣು, ಗುಲಾಮಳಿವಳಲ್ಲಾ, ಸಲಾಮು ಹೊಡೆಯೊಲ್ಲಾ.. ಎಂದು ಹಾಡು ಹೇಳಿರುವುದು ನಿಜಕ್ಕೂ ಹಾಸ್ಯಾಸ್ಪದ ಎನಿಸಿದ್ದಂತೂ ಸುಳ್ಳಲ್ಲಾ

ಪುಟ್ಟಣ್ಣ ಕಣಗಾಲರ ಶುಭಮಂಗಳ ಸಿನಿಮಾದಲ್ಲಿ ನಾಯಕಿ ಆರತಿ, ನಾಯಕ ಶ್ರೀನಾಥ್ ಅವರ ಹಂಗಿನಲ್ಲಿ ಇರಬಾರದು ಎಂದು ನಿರ್ಧರಿಸಿ, ತನ್ನ ಕಾಲ ಮೇಲೆ ನಿಂತುಕೊಂಡು ಹಾಡಿದ ಹಾಡನ್ನು ಈ ಮಹಿಳೆಯರು, ಯಾವುದೋ ಒಂದು ಪಕ್ಷ ತನ್ನ ರಾಜಕೀಯ ಲಾಭಕ್ಕಾಗಿ ಕೊಟ್ಟ ಉಚಿತ ಭಾಗ್ಯದ ಲಾಭಕ್ಕೆ ಆ ಹಾಡನ್ನು ಬಳಸಿಕೊಂಡು ಸ್ವಾಭಿಮಾನ ಮತ್ತು ಗುಲಾಮ ಪದದ ಅರ್ಥವನ್ನೇ ಅನರ್ಥ ಮಾಡಿಬಿಟ್ಟರು ಎಂದರೂ ತಪ್ಪಾಗದು.

WhatsApp Image 2023-06-19 at 08.24.12ಈ ಮಹಿಳೆಯರ ಆರ್ಭಟ ದಿನೇ ದಿನೇ ಯಾವ ಪರಿ ತಲುಪುತ್ತಿದೆಯೆಂದರೆ, ಈ ಉಚಿತ ಬಸ್ ಭಾಗ್ಯದಿಂದಾಗಿ ರಾಜ್ಯದ ಬಹುತೇಕ ತೀರ್ಥಕ್ಷೇತ್ರಗಳಲ್ಲಿ  ಭಕ್ತೆಯರ ಸಂಖ್ಯೆ ಹೆಚ್ಚಾಗಿದೆ ಎಂಬ ಸುದ್ದಿ ಬಂದಿದ್ದರೆ, ಒಬ್ಬರ ಮೇಲೆ ಒಬ್ಬರ ತಳ್ಳಾಟ ನೂಕಾಟ ಮಾಡಿಕೊಂಡು ಹತ್ತುವ ಭರದಲ್ಲಿ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದ ಬಸ್ಸಿನ ಬಾಗಿಲನ್ನೇ ಮುರಿದು ಹಾಕಿದ್ದಾರೆ. ಮತ್ತೊಂದು ಕಡೆ ನೇರವಾಗಿ ಬಸ್ ಹತ್ತಲು ಸಾಧ್ಯವಾಗದೇ, ಬಸ್ಸಿನ ಚಾಲಕನನ್ನೇ ಪಕ್ಕಕ್ಕೆ ಸರಿಸಿ ಆತ ಹತ್ತುವ ಬಾಗಿಲಿನಿಂದಲೇ ಹತ್ತುವ ಪ್ರಯತ್ನವನ್ನೂ ಮಾಡಿರುವುದು ಕಳವಳಕಾರಿ ಸಂಗತಿಯಾಗಿದ್ದರೆ, ಮತ್ತೊಂದು ಅಜ್ಜಿ ಇಡೀ ಬಸ್ಸನ್ನೇ ತಮ್ಮ ಸ್ತ್ರೀ ಸಂಘದ ಪ್ರವಾಸಕ್ಕಾಗಿ ಕೊಡಬೇಕೆಂದು ಸಾರಿಗೆ ನಿಗಮಕ್ಕೆ ಪತ್ರಬರೆಯುವ ಮೂಲಕ ಕಿಲಾಡಿ ಅಜ್ಜಿ ಎಂದೇ ದಿಢೀರ್ ಪ್ರ(ಕು)ಖ್ಯಾತರಾಗಿದ್ದಾರೆ.

WhatsApp Image 2023-06-19 at 12.40.44ಹಳ್ಳಿಗಾಡಿನ ಹೆಣ್ಮಕ್ಳು ಈ ಪರಿಯಾಗಿ ಉಚಿತ ಬಸ್ ಪ್ರಯಾಣಕ್ಕೆ ಮುಗಿ ಬೀಳುತ್ತಾರೆ ಎಂದರೆ ಒಂದು ಪಕ್ಷ ಒಪ್ಪಬಹುದೋ ಏನೋ? ಆದರೆ ಪ್ರಗತಿಪರ ಎಂದು ಹೇಳಿಕೊಳ್ಳುವವರೇ ಈ ಯೋಜನೆಯನ್ನು ಹೊಗಳುವ ಭರದಲ್ಲಿ, ನಾಲ್ಕು ಗ್ವಾಡೆಗಳ ನಡುವಿನಿಂದ ಹೊರೆಗೆ ದಾಟಿಸಲಿ ಹೆಂಗಸರ, ಕರೆದೊಯ್ಯಲಿ ಸ್ವಾತ್ರಂತ್ರ್ಯ ಸಮಾನತೆಗಳ ಹೊಸದಾರಿಗೆ, ಉರುಳುವ ಬಸ್ಸಿನ ಚಕ್ರಗಳು ಭಯಹುಟ್ಟಿಸಲಿ ಗಂಡಾಳ್ವಿಕೆಯ ಬಯಕೆಗೆ, ಎಂದಾದರೊಂದು ದಿನ ಬರಲಿ ಹೆಣ್ಮಕ್ಕಳು ಅರ್ಥ ವಿಧಾನಸಭೆಯ ಕುರ್ಚಿಗೆ ಎಂದು ಸಾರ್ವಜನಿಕವಾಗಿ ಬರೆದುಕೊಂಡಿರುವುದನ್ನು ನೋಡಿದಾಗ, ಈ ದೇಶಕ್ಕೆ ಇಂದಿರಾ ಗಾಂಧಿ 11 ವರ್ಷ, 59 ದಿನಗಳು ಪ್ರಧಾನ ಮಂತ್ರಿಗಳಾಗಿದ್ದರೆ, ಪ್ರತಿಭಾ ಪಾಟೀಲ್ ಮತ್ತು ಪ್ರಸ್ತುತ ದ್ರೌಪತಿ ಮುರ್ಮು ಅವರು ರಾಷ್ಟ್ರಪತಿಗಳಂತಹ ಉನ್ನತ ಹುದ್ದೆಯನ್ನು ಏರಿರುವುದು, ಇಂದಿಗೂ ಹತ್ತು ಹಲವು ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಮಹಿಳೆಯರು ಮಂತ್ರಿಗಳಾಗಿಲ್ಲವೇ? ಆಕೆಯೇ ಸಮರ್ಥಿಸಿಕೊಳ್ಳುವ ಪಕ್ಷವೇ ಇತ್ತೀಚಿನ ದಿನಗಳ ವರೆವಿಗೂ ಮಹಿಳಾ ಅಧ್ಯಕ್ಷೆಯನ್ನು ಹೊಂದಿರಲಿಲ್ಲವೇ? ಇಲ್ಲಿವರೆಗೂ ಅಗತ್ಯ ಇರುವ ಇಲ್ಲದ ಕಡೆಯಲ್ಲೆಲ್ಲ ಮಹಿಳೆಯರಿಗೆ ಪ್ರಾಶಸ್ತ್ಯವನ್ನು ಕೊಡುತ್ತಲೇ ಇರುವಾಗ, ಈ ರೀತಿಯಾಗಿ ಕುಣಿದು ಕುಪ್ಪಳಿಸುತ್ತಾ, ದುಡ್ಡು ಕೊಟ್ಟು ಪ್ರಯಾಣಿಸುವವರ ಸೀಟುಗಳನ್ನೂ ಕಿತ್ತುಕೊಂಡು, ಬಸ್ಸುಗಳನ್ನು ಹಾಳು ಮಾಡುವುದರಿಂದ ಏನನ್ನು ಸಾಧಿಸಲಿದ್ದೀರಿ? ಎಂದು ಜನರು ಆಡಿಕೊಳ್ಳುವಂತಾಗಿರುವುದು ಸತ್ಯ ಎನಿಸುತ್ತದೆ.

ಪ್ರಸಕ್ತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಯಾರೂ ಸಹಾ ಏನನ್ನೂ ಉಚಿತವನ್ನು ಕೊಡಲಾಗದು ಮತ್ತು ಕೊಡಲಾರರು. ಅದರ ಹಿಂದೆ ಯಾವುದೋ ಒಂದು ರಹಸ್ಯ ಕಾರ್ಯಸೂಚಿ ಇದ್ದೇ ಇರುತ್ತದೆ ಎಂಬುದನ್ನು ಮನಗಂಡು ಅದರ ಸಾಧಕ ಬಾದಕಗಳನ್ನು ಅರಿತುಕೊಂಡೇ ಅದನ್ನು ಬಳಸಿಕೊಳ್ಳುವುದು ಉತ್ತಮ. ಕೆಲವೇ ತಿಂಗಳುಗಳ ಹಿಂದೆ ಸಾರಿಗೆ ನಿಗಮ ನಷ್ಟದಲ್ಲಿದ್ದು, ಅಲ್ಲಿನ ನೌಕರರಿಗೆ ಸರಿಯಾಗಿ ಸಂಬಳ/ಭಡ್ತಿ ಕೊಡಲಾಗುತ್ತಿಲ್ಲ ಎಂದು ವಾರನು ಗಟ್ಟಲೆ ಮುಷ್ಕರ ಮಾಡಿರುವುದು ಇನ್ನೂ ಹಚ್ಚ ಹಸಿರಾಗಿಯೇ ಇರುವಾಗ ಈಗ, ಈ ಪರಿಯಾಗಿ ಉಚಿತವಾಗಿ ಕೊಡಲು ಹಣವೇನೂ ಆಕಾಶದಿಂದ ಉದುರುತ್ತದೆಯೇ? ತಮ್ಮ ಅಧಿಕಾರದ ಆಸೆಗಾಗಿ ಎಲ್ಲಿಂದಲೋ ಸಾಲ ಸೋಲ ಮಾಡಿ ಈ ರೀತಿಯಾಗಿ ಉಚಿತ ಕೊಟ್ಟ ನಂತರ ಆ ಎಲ್ಲಾ ಸಾಲಭಾಧೆಯೂ ಪ್ರಜೆಗಳ ಮೇಲೆಯೇ ಬೀಳುತ್ತದೆ ಎಂಬುದರ ಅರಿವಿರಬೇಕಲ್ಲವೇ? ಅದೇ ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರ ಹೆಂಗಸರಿಗೆ ತಮ್ಮ ಗಂಡಂದಿರಿಗೆ ತಿಂಗಳ ಕಡೆಯಲ್ಲಿ ಸರಿಯಾಗಿ ಸಂಬಳ ಬಾರದೇ ಹೋದಲ್ಲಿ ಇದೇ ರೀತಿಯಲ್ಲಿ ಕುಣಿದು ಕುಪ್ಪಳಿಸುವವರೇ?

ಯಾರೇ ಆಗಲೀ ಉಚಿತವಾಗಿ ಕೊಡುತ್ತೇವೆ ಎಂದಾಗ, ಅದನ್ನು ಬೇಕಾ ಬಿಟ್ಟಿ ಬಳಸಿಕೊಳ್ಳುವ ಮುನ್ನಾ ಅದಕ್ಕೆ ಎಲ್ಲಿಂದ ಹೇಗೆ ಹಣ ತರುತ್ತೀರೀ? ಎಂಬ ಪ್ರಶ್ನೆಯನ್ನು ಗಟ್ಟಿಯಾಗಿ ಕೇಳಿದರೆ, ಅರೇ ಜನರು ಜಾಗೃತ ಗೊಂಡಿದ್ದಾರೆ ಎಂದು ಈ ರೀತಿಯಾಗಿ ರಾಜ್ಯದ ಮೇಲೆ ಆರ್ಥಿಕವಾಗಿ ಹೊರೆಯಾಗುವಂತಹ ಬಿಟ್ಟಿ ಭಾಗ್ಯಗಳನ್ನು ಜಾರಿಗೊಳಿಸಲು ಯಾವ ಪಕ್ಷವೂ ಮುಂದಾಗದು.

bounce2ನಮ್ಮವರು ಹೇಗಿದ್ದಾರೆ ಎಂದರೆ, ನಗರದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲ. ಸುಲಭವಾಗಿ ಸಂಚರಿಸಲು ಎಲ್ಲರಿಗೂ ದ್ವಿಚಕ್ರ ವಾಹನಗಳನ್ನು ಖರೀಧಿಸಲು ಸಾಧ್ಯವಿಲ್ಲದೇ ಇರುವುದನ್ನು ಗಮನಿಸಿ, ಕನ್ನಡದ ಹುಡುಗರೇ, ಸೇರಿಕೊಂಡು ಕೆಲ ವರ್ಷಗಳ ಹಿಂದೆ ಬೌನ್ಸ್ ಎಂಬ APP based ಬಾಡಿಗೆ ದ್ವಿಚಕ್ರ ವಾಹನಗಳ ಸಂಚಾರವನ್ನು ಬೆಂಗಳೂರಿನಾದ್ಯಂತ ಹರಿಬಿಟ್ಟರು. ತಮ್ಮ ಮೊಬೈಲ್ ನಲ್ಲಿ ಅಳವಡಿಸಿಕೊಂಡ Bounce App ಮೂಲಕ ರಸ್ತೆಬದಿಯಲ್ಲಿ ನಿಲ್ಲಿಸಿರುವ ದ್ವಿಚಕ್ರವಾಹನಗಳನ್ನು ತೆಗೆದುಕೊಂಡು ತಮ್ಮ ನಿಗಧಿತ ಪ್ರದೇಶದ ಬಳಿ ಬಿಟ್ಟಲ್ಲಿ, ಪ್ರಯಾಣ ಮಾಡಿದ ಸಮಯ/ದೂರದ ಮೇರೆಗೆ ಹಣವನ್ನು App ಮೂಲಕ ತೆಗೆದುಕೊಳ್ಳುವಂತಹ ಸುಲಭವಾದ ಪದ್ದತಿಯನ್ನು ಜಾರಿಗೆ ತಂದಿದ್ದರು.

bounceದುರಾದೃಷ್ಟವಷಾತ್ ಇಂತಹ ಸೌಲಭ್ಯ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಗಿ ಕೆಲವು ದುರುಳರು ಅಂತಹ ಬೈಕುಗಳಿಂದ ಪೆಟ್ರೋಲ್ /ಹೆಲ್ಮೆಟ್ ಕದಿಯುವುದು, ಚಕ್ರಗಳನ್ನು ಕಳಚಿಕೊಂಡು ನಡುರಸ್ತೆಯಲ್ಲಿ ಎಲ್ಲೆಂದರಲ್ಲಿ ಸಿಕ್ಕಾಪಟ್ಟೆ ಬಿಟ್ಟು ಹೋದರೆ, ಇನ್ನೂ ಕೆಲವು ದುಷ್ಕರ್ಮಿಗಳು ಪೆಟ್ರೋಲ್ ಹಾಕಿ ಆ ವಾಹನಗಳನ್ನು ಸುಟ್ಟ ಪರಿಣಾಮ ವಿಧಿ ಇಲ್ಲದೇ ಬೌಸ್ಸ್ ಕಂಪನಿ ಮುಚ್ಚುವಂತಾಯಿತು

ಹಾಗಾಗಿ ಅರ್ಥಿಕವಾಗಿ ಸಮರ್ಥರಾದವರೂ ಬಿಟ್ಟಿ ಭಾಗ್ಯಗಳನ್ನು ಬಳಸಿಕೊಂಡು ದೇಶ/ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಾಳುಮಾಡುವುದು ಸರಿಯಲ್ಲ. ಅದೇ ರೀತಿಯಲ್ಲಿ, ಆರ್ಥಿಕವಾಗಿ ಹಿಂದುಳಿದವರೂ ಸಹಾ ಬಿಟ್ಟಿ ಸಿಕ್ಕಿತು ಎಂದು ಬರಗೆಟ್ಟು ಹೋಗದೇ, ದುರಾಸೆಯಿಂದ ಹೆಚ್ಚಿನ ಚಿನ್ನ ಮೊಟ್ಟೆಯ ಆಸೆಗಾಗಿ ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆಯನ್ನೇ ಕತ್ತರಿಸಿ ಎಲ್ಲವನ್ನೂ ಕಳೆದುಕೊಂಡಂತೆ ಆಗದೇ, ಎಲ್ಲವನ್ನೂ ಹಿತ ಮಿತವಾಗಿ ಬಳಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ ಅಲ್ವೇ?

ಏನಂತೀರಿ?
ಸೃಷ್ಟಿಕರ್ತ, ಉಮಾಸುತ

3 thoughts on “ಬಿಟ್ಟಿ ಎಂದರೆ ಮೈ ಎಲ್ಲಾ ಬಾಯಿ

  1. ಎಂದಿನಂತೆ ತಮ್ಮ ವಿಚಾರಧಾರೆ ಹಿಡಿಸಿತು. ಈ ಮಹಿಳೆಯರು ಸೃಷ್ಟಿಸುತ್ತಿರುವ ಅಸಹ್ಯ ಯಾರದೋ ಮೊಬೈಲ್ ಗಳ ಮೂಲಕ ಎಲ್ಲೆಲ್ಲೋ ತಲುಪಿ ಪರಿಚಿತರು / ಅಪರಿಚಿತರು ತಮ್ಮ ಹಪಾಹಪಿ ನೋಡಿ ನಕ್ಕಾರು, ಹೇಸಿಕೊಂಡಾರು ಎಂಬ ಕೇವಲ ಜ್ಞಾನ ಇವರಿಗೆ ಬೇಡವೇ? ಸರ್ಕಾರ ಹೇಗಿದೆ ಎಂದು ಜಗಜ್ಜಾಹೀರಾಯಿತು, ಇನ್ನು ರಾಜ್ಯದ ಮಹಿಳೆಯರು ಹೀಗೇ ಇದ್ದಾರೆ ಎಂದು ಆಡಿಕೊಂಡು ನಗುವಂತಾಯಿತು. ನಮ್ಮ ಕರ್ಮ ಅಷ್ಟೇ.

    Liked by 1 person

  2. ಚಾಮುಂಡಿ ಬೆಟ್ಟದ ಬಸ್ನಲ್ಲಿ ಮಹಿಳೆಯರ ಹೊಡೆದಾಟದ ವಿಡಿಯೋ ಕಿಟಕಿಯಿಂದ ಬಸ್ ಒಳಗೆ ತೂರುವ ವಿಡಿಯೋ ಗಳನ್ನ ನೋಡಿದರೆ ನಗು ತರಿಸುತ್ತದೆ ಜೊತೆಗೆ ಬೇಸರವೂ ಆಗುತ್ತದೆ.

    Liked by 1 person

Leave a reply to ಶ್ರೀಕಂಠ ಬಾಳಗಂಚಿ Cancel reply