ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

ಇವತ್ತಿನ ಲೇಖನದ ಶೀರ್ಷಿಕೆಯನ್ನು ನೋಡಿದಾಗಲೇ ಬಹುಶಃ ಎಲ್ಲರಿಗೂ ಲೇಖನದ ಹೇಗಿರಬಹುದು ಎಂಬುದರ ಅರಿವಾಗುತ್ತದೆ. ಅಷ್ಟೆಲ್ಲಾ ಬಡತನ ಮತ್ತು ಅಡ್ಡಿ ಆತಂಕಗಳ ನಡುವೆಯೂ ಅಂದಿನ ದಿನಗಳಲ್ಲಿ ನಾವು ಕಳೆದ ದಿನಗಳು ಖಂಡಿತವಾಗಿಯೂ ಆನಂದದಾಯಕವಾದ ದಿನಗಳಾಗಿದ್ದು ಇಂದು ಬಳಿ ಅದೆಷ್ಟೇ ಐಶಾಯಾಮ್ಯಗಳಿದ್ದರೂ ಆ ದಿನಗಳನ್ನು ಸತ್ಯವಾಗಿಯೂ ಮರುಕಳಿಸಲಾಗದು ಅದೇ ರೀತಿ ಆ ನಮ್ಮ ಸಂತಸ ದಿನಗಳಲ್ಲಿ ನಮ್ಮೊಂದಿಗೆ ಇದ್ದವರು ಇದ್ದಕ್ಕಿದ್ದಂತೆಯೇ ನಮ್ಮ ಅಕಾಲಿಕವಾಗಿ ಅಲಗಿದಾಗ ಆಗುವ ನೋವು ನಿಜಕ್ಕೂ ಹೇಳಲಾಗದು. ಅದರಲ್ಲೂ ಒಂದೇ ದಿನ, ಒಂದೇ ರೀತಿಯ ಅನುಭವವವನ್ನು ಕೊಟ್ಟಂತಹವರು ನಮ್ಮನ್ನು ಅಗಲಿರುವುದೇ ಇಂದಿನ ನನ್ನ ಲೇಖನದ ವಿಷಯವಾಗಿದೆ.

ಅದು ಎಂಭತ್ತರ ದಶಕ. ಭಾರತ 1983ರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯ ಪೈನಲ್ ತಲುಪಿದಾಗ, ಆ ಪಂದ್ಯವನ್ನು ದೂರದ ನಮ್ಮ ಸ್ನೇಹಿತನ ಮನೆಗೆ ಹೋಗಿ ನೋಡಿ ಬಂದ ನಂತರ 19884ರ ಆಸ್ಟ್ರೇಲೇಷ್ಯಾ ಕಪ ಪಂದ್ಯಾವಳಿ ಆರಂಭ ಆಗುವಷ್ಟರಲ್ಲಿ ಅಪ್ಪನನ್ನು ಕಾಡೀ ಬೇಡಿ ಸಣ್ಣದಾದ ಬಿಪಿಲ್ 13″ ಟಿವಿಯನ್ನು ಮನೆಗೆ ತಂದಾಗಿತ್ತು. ಅದೇ ಸಮಯದಲ್ಲಿ ಒಂದು ಸಂಜೆ ನಮ್ಮ ತಂದೆಯವರು ಕೆಲಸದಿಂದ ಮನೆಗೆ ಬಂದಾಗ ಅವರ ಜೊತೆ ಎತ್ತರದ ಸುಂದರ ಮುಖಾರವಿಂದದ ಅಜಾನುಹು ಒಬ್ಬರು ಮನೆಗೆ ಬಂದಾಗ ಇವರ ಹೆಸರು K.S. ರಮೇಶ್. ನಮ್ಮ ಸೆಕ್ಷನ್ನಿನ ಸ್ಟೋರ್ಸ್ ನಲ್ಲಿ ಕೆಲಸಮಾಡುತ್ತಿದ್ದಾರೆ. ದೂರದಿಂದ ನಮ್ಮ ಸಂಬಂಧೀಕರೂ ಹೌದು. ಸದ್ಯಕ್ಕೆ ಅವರು ಸಿಟಿಯಲ್ಲಿದ್ದು ಈಗ ಮಗನನನ್ನು ಬಿಇಎಲ್ ಶಾಲೆಗೆ ಸೇರಿಸುವ ಕಾರಣದಿಂದಾಗಿ ಇಲ್ಲಿಗೇ ಬರುತ್ತಿದ್ದಾರೆ ಎಂದು ಹೇಳಿ ಪರಿಚಯ ಇದ್ದವರೊಬ್ಬರ ಬಾಡಿಗೆ ಮನೆ ತೋರಿಸಲು ಕರೆದುಕೊಂಡು ಹೋದರು.

rameshಹೀಗೆ ಮೊದಲ ಬಾರಿ ಪರಿಚಯವಾದ ರಮೇಶ್ ಮಾವ (ನಮ್ಮ ಮನೆಯಲ್ಲಿ ಅಂಕಲ್ ಆಂಟಿ ಸಂಪ್ರದಾಯ ಇರಲಿಲ್ಲ) ಕೆಲವೇ ದಿನಗಳಲ್ಲಿ ಸಂಸಾರ ಸಮೇತ ನಮ್ಮ ಮನೆಯ ಹತ್ತಿರದಲ್ಲೇ ಬಂದಿದ್ದರು. ರಮೇಶ್ ಮಾವ ಅವರ ಮಡದಿ ಪ್ರಭಾ, ಆಕೆಲಗಿನ್ನೂ ಶಾಲೆಗೆ ಸೇರಿಕೊಳ್ಳಬೇಕಿದ್ದ ಮಗ ಚೈತನ್ಯ ಮತ್ತು ಪುಟಾಣಿ ಹುಡುಗಿ ಸಂಧ್ಯಾ ಜೊತೆಗೆ ಪ್ರಸಾದಿ (ರಮೇಶ್ ಅವರ ಭಾವನ ಹಿರಿಯ ಹೆಂಡತಿ ತಮ್ಮ) ಹೀಗೆ ಐದು ಜನರ ಸಣ್ಣ ಕುಟುಂಬ ಕೆಲವೇ ದಿನಗಳಲ್ಲಿ ನಮಗೆ ಆತ್ಮೀಯರಾಗಿ ಹೋದರು. ಪ್ರತೀ ದಿನ ಸಂಜೆ ಶಾಲೆಯಿಂದ ಮನೆಗೆ ಬರುವಾಗ ಪುಟಾಣಿ ಪುಟ್ಟಿ ಸಂಧ್ಯಾಳನ್ನು ಆಟವಾಡಿಸಿ ಬರುವುದು ನಮ್ಮೆಲ್ಲರಿಗೂ ರೂಢಿಯಾಗಿತ್ತು. ಪ್ರಸಾದಿ ಎಂದು ಕರೆಯಲು ಬಾರದೇ ಪಟಾಶಿ ಎಂದು ಕರೆಯುತ್ತಿದ್ದದ್ದು ನಮಗೆ ಮೋಜನ್ನು ಕೊಡುತ್ತಿತ್ತು.

ಇನ್ನು ರಜಾದಿನಗಳಲ್ಲಿ ಕ್ರಿಕೆಟ್ ಪಂದ್ಯಾ ಎಂದರೆ, ನಮ್ಮ ಮನೆಯಲ್ಲಿ ಸಣ್ಣ ಟಿವಿ ಇದ್ದರೂ ರಮೇಶ್ ಮಾವನ ಮನೆಯಲ್ಲಿ ದೊಡ್ಡ ಟಿವಿಯಲ್ಲಿ ನೋಡಲ್ಲಿ ಹೋಗುತ್ತಿದ್ದೆ. ಅದು ಟಿವಿ ದೊಡ್ಡದಾಗಿದೆ ಎಂದಿರದೇ, ಆವರ ಎಕ್ಸ್ ಪರ್ಟ್ ಕಾಮೆಂಟ್ರೀ ನನಗೆ ಮೋಜು ನೀಡುತ್ತಿತ್ತು. ಅಗ ಆಸ್ಟ್ರೇಲಿಯ ಪರ ಆಡಿ ನಂತರ ದಕ್ಷಿಣ ಆಫ್ರಿಕಾದ ಪರವಾಗಿ ಮೊದಲ ನಾಯಕನಾದ ಕೆಪ್ಲರ್ ವೆಸ್ಸೆಲ್ಸ್ ನನ್ನು ಪಾತ್ರೆಗಳು ಎಂದರೆ, ಪಾಕಿಸ್ಥಾನದ ಮುದಸ್ಸರ್ ನಜರ್ ನನ್ನು ಮುದ್ದೇ ಸಾರು, ಅಬ್ದುಲ್ ಖಾದರ್ ನನ್ನು ಕುಣಿಯಾ ಎಂದು ಕುಚೋದ್ಯವಾಗಿ ಹೆಸರಿಟ್ಟರೆ, ಇನ್ನು ಬಹುತೇಕ ಹಿಂದೀ ನಟ ನಟಿಯರ ಹಾವ ಭಾವಗಳನ್ನು ಇಂದಿನ ರೀಲ್ ರೂಪದಲ್ಲಿ ಅಂದೇ ಮಾಡಿ ತೋರಿಸುತ್ತಿದ್ದ ಕಾರಣ ನನಗೆ ರಮೇಶ್ ಮಾವ ಎಂದರೆ ಅಚ್ಚು ಮೆಚ್ಚು.

ಶೈಕ್ಷಣಿಕವಾಗಿ BSc LLB ಮಾಡಿದ್ದಲ್ಲದೇ, ಸಂಗೀತದಲ್ಲಿ ವಿದ್ವತ್ ಜೊತೆಗೆ ಮೃದಂಗಾಭ್ಯಾಸವಾಗಿದ್ದರೂ, ಎಲ್ಲರ ಮುಂದೆ ತಮ್ಮ ವಿದ್ಯೆಯನ್ನು ತೋಸಿಸಿಕೊಳ್ಳಲು ಒಂದು ರೀತಿಯ ಹಿಂಜರಿಕೆಯ ಸ್ವಭಾವ. ಅಷ್ಟು ಓದಿದ್ದರೂ, ಬಿಇಎಲ್ ನಲ್ಲಿ ಸ್ಟೋರ್ಸ್ ನಲ್ಲಿದ್ದರೇ, ಬಾಲ ಮುರಳೀ ಕೃಷ್ಣ ರಂತೆ ಶಾರೀರ ಇದ್ದರೂ, ಎಲ್ಲೂ ಹಾಡುತ್ತಿರಲಿಲ್ಲ. ನಂತರದ ದಿನಗಳಲ್ಲಿ ತಮ್ಮ ತಂದೆಯವರ ಒತ್ತಾಯದ ಮೇರೆಗೆ ನನಗೆ ಮತ್ತು ನನ್ನ ತಂಗಿಯರಿಗೆ ಸಂಗೀತ ಕಲಿಸಲು ಆರಂಭಿಸಿದ ನಂತರ ಮೈ ಚಳಿ ಬಿಟ್ಟು ಸಾವಿರಾರು ಜನರಿಗೆ ಸಂಗೀತವನ್ನು ಕಲಿಸಿಕೊಟ್ಟಿದ್ದರು. ಅದ್ಯಾಕೆ ಮಾಡೋದಿಲ್ಲಾ ಮಾವಾ? ಇದ್ಯಾಕೆ ಮಾಡೋದಿಲ್ಲಾ ಮಾವಾ ಎಂದರೆ, ಅಯ್ಯೋ ಬಿಡು ಶ್ರೀಕಂಠ. ನಾನು ಓದಿರುವುದೇ ಒಂದು ನಾನು ಮಾಡುತ್ತಿರುವ ಕೆಲಸವೇ ಒಂದು. ಒಟ್ಟಿನಲ್ಲಿ ಜೀವನ ನಡೆದುಕೊಂಡು ಹೋಗುತ್ತಿದೆಯಲ್ಲಾ ಎನ್ನುವ ನಿರ್ಲಿಪ್ತ ಭಾವನೆ ಅವರದ್ದು.

ಇನ್ನು ಅಡುಗೆ ಮನೆಯಲ್ಲಿ ಸೌಟನ್ನು ಹಿಡಿದು ನಿಂತರ ನಳರಾಜನನ್ನು ಮೀರಿಸುವಂತಹ ಕೈರುಚಿ. ನಮ್ಮ ಮನೆಯವರು ಮತ್ತು ಅವರ ಮನೆಯವರು ಸೇರಿ ಕೊಂಡು ಒತ್ತು ಶ್ಯಾವಿಗೆ ಮಾಡಲು ಆರಂಭಿಸಿದರೆ ಅರ್ಧ ದಿನಗಳ ಕಾಲ ಅದರ ಇಡೀ ತಯಾರಿ ಮಾಡಿ ನಂತರ ಎಲ್ಲರೂ ಒಟ್ಟಿಗೆ ಸೇರಿಕೊಂಡು ಶ್ಯಾವಿಗೆ ಚಿತ್ರಾನ್ನಾ, ಶ್ಯಾವಿಗೆ ಕಾಯಿ ಸಾಸಿವೆ, ಶ್ಯಾವಿಗೆ ಎಳ್ಳು ಸೂಸಳು ಮತ್ತು ಶ್ಯಾವಿಗೆ ಗಸಗಸೆ ಪಾಯಸ ಕಡೆಗೆ ಶ್ಯಾವಿಗೆ ಮೊಸರನ್ನ ಹೀಗೆ ಇಡೀ ದಿನ ಶ್ಯಾವಿಗೆ ತಿನ್ನುತ್ತಿದ್ದದ್ದನ್ನು ಮರೆಯಲು ಸಾಧ್ಯವೇ ಇಲ್ಲಾ.

ಇನ್ನು 1993ರಲ್ಲಿ ರಮೇಶ್ ಮಾವ ಸೆಕೆಂಡ್ ಹ್ಯಾಂಡ್ ಅಂಬಾಸೆಡೆರ್ ಕಾರ್ ತೆಗೆದುಕೊಂಡಾಗ ನಮಗೆಲ್ಲರಿಗೂ ಸಂಭ್ರಮವೇ ಸಂಭ್ರಮ. ಕೆಲಸ ನಿಮಿತ್ತ ಅದೇ ಸಮಯದಲ್ಲೇ ದೆಹಲಿಗೆ ಸಂಜೆಯ ಕರ್ನಾಟಕ ಎಕ್ಸ್ ಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದೇನೆ ಎಂದು ಕೇಳಿದಾಗ, ಸರಿ ಹಾಗಾದರೆ ,4:45ಕ್ಕೆ ಕೆಲಸ ಮುಗಿಸಿಕೊಂಡು ಬಂದು ನಾನು ನನ್ನ ಕಾರಿನಲ್ಲೇ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಬಿಡುತ್ತೇನೆ ಎಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು. ಮಾರನೇ ದಿನ ಸಂಜೆ 5ಗಂಟೆ ಸರಿಯಾಗಿ ಮನೆಯಿಂದ ಹೊರಟರೂ ಮಾವನಿಗೆ ಇನ್ನೂ ಸರಿಯಾಗಿ ಕಾರ್ ಓಡಿಸಲು ಬಾರದೇ ಇದ್ದ ಕಾರಣ ಗೇರ್ ಬದಲಿಸುವಾಗ ತೊಂದರೆ ಮಾಡಿಕೊಂಡು ಹೆಜ್ಜೆ ಹೆಜ್ಜೆಗೂ ಕಾರ್ ನಿಂತು ನಿಂತೂ ಸಂಜೆ 6 ಘಂಟೆ ಆದರೂ ಇನ್ನೂ ಮಲ್ಲೇಶ್ವರದಲ್ಲೇ ಇದ್ದ ಕಾರಣ, ಖಂಡಿತವಾಗಿಯೂ ರೈಲು ತಪ್ಪಿಸಿಕೊಳ್ಳುತ್ತೇನೆ. ಇದೆಲ್ಲಾ ಬೇಕಿತ್ತಾ? ಸುಮ್ಮನೇ ಬಸ್ಸಿನಲ್ಲಿ ಬಂದಿದ್ದರೂ ಸರಿಯಾದ ಹೊತ್ತಿಗೆ ಹೋಗಬಹುದಿತ್ತೇನೋ? ಎಂದು ಗಾಭರಿಗೆ ಬಿದ್ದದ್ದೂ ಸುಳ್ಳಲ್ಲ. ಹಾಗೂ ಹೀಗೂ ರೈಲ್ವೇ ನಿಲ್ದಾಣ ತಲುಪಿ ರೈಲು ಹತ್ತುತ್ತಿದ್ದಂತೆಯೇ ರೈಲು ಹೊರಾಟಾಗಲೇ ನೆಮ್ಮದಿಯ ಉಸಿರು ಬಿಟ್ಟಿದ್ದೆ.

ನಂತರದ ದಿನಗಳಲ್ಲಿ ನಾವಿಬ್ಬರೂ ಬೇರೆ ಬೇರೆ ಕಡೆಯಲ್ಲಿ ಮನೆ ಮಾಡಿಕೊಂಡು ಹೋದ ಪರಿಣಾಮ ಹಿಂದಿನಂತೆ ಒಡನಾಟವಿಲ್ಲದೇ ಇದ್ದರೂ ಸಭೆ ಸಮಾರಂಭಗಳಲ್ಲಿ ಸಿಕ್ಕಾಗ ಅದೇ ಆತ್ಮೀಯತೆ ಇದ್ದ ಮಾವ ಮೊನ್ನೆ ಶನಿವಾರ 24.06.2023 ರಂದು ಬೆಳಿಗ್ಗೆ ವಿಧಿವಶರಾಗಿ ಹೋಗಿದ್ದು ನಿಜಕ್ಕೂ ದುಃಖವನ್ನು ತರಿಸಿದೆ.

ಇನ್ನು 90ರ ದಶದಲ್ಲಿ ಎಲ್ಲೆಡೆಯೂ ಕಲರ್ ಟಿವಿಯ ಜೊತೆಗೆ ಡಿಷ್ ಕೇಬಲ್ ಕಾಲ. ನಮ್ಮ ಮನೆಗೂ ಕೇಬಲ್ ಡಿಷ್ ಅಂಗಡಿಗೂ ಬಹಳ ದೂರ ಇದ್ದದ್ದರಿಂದ ಇನ್ನೂ ನಮ್ಮ ಮನೆಯ ಕಡೆಗೆ ಕೇಬಲ್ ಟಿವಿ ಬಂದಿರಲಿಲ್ಲ. ಆಗೆಲ್ಲಾ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯಗಳು ಬೆಳ್ಳಂಬೆಳಿಗ್ಗೆ 4:30ಕ್ಕೆ ಆರಂಭವಾಗುತ್ತಿದ್ದು ಅದು ಕೇವಲ ಕೇಬಲ್ ಟಿವಿಯಲ್ಲಿ ಮಾತ್ರವೇ ಬರುತ್ತಿದ್ದ ಕಾರಣ, ಕ್ರಿಕೆಟ್ ಪ್ರಿಯರಾದ ನಾವೇಲ್ಲಾ ಒಂದಾಗಿ ಕ್ರಿಕೆಟ್ ನೋಡಲು ದಾಂಗುಡಿ ಇಡುತ್ತಿದ್ದದ್ದೇ ನಮ್ಮ ಕ್ರಿಕೆಟ್ ತಂಡದ ನಾಯಕ ವೆಂಕಟೇಶನ ಮನೆಗೆ.

venkateshaಮಂಜು ಮತ್ತು ವೆಂಕಟೇಶ ಅಣ್ಣ ತಮ್ಮಂದಿರು ಅವರ ಅಕ್ಕ ಕಲಾ ನನ್ನ ಸಹಪಾಠಿ. ಶಾಲೆಯಲ್ಲಿ ಓದಿನಲ್ಲಿ ನಮ್ಮಿಬ್ಬರ ಮಧ್ಯೆ ಆರೋಗ್ಯಕರವಾದ ಪೈಪೋಟಿ ಇದ್ದರೂ, ಮನೆಯ ಹತ್ತಿರ ಅದಾವುದರ ಚಿಂತೆ ಇಲ್ಲದೇ, ಅತ್ಯಂತ ಸ್ನೇಹಮಯವಾಗಿ ಇದ್ದ ಕಾರಣ, ಬೆಳ್ಳಂಬೆಳಿಗ್ಗೆ, 4:30 ಕ್ಕೆಲ್ಲಾ, ನಾನೂ, ಹರಿ, ಮೂರ್ತಿ ಇನ್ನೂ ಕೆಲವು ಹುಡುಗರು ಅವರ ಮನೆಗೆ ಕ್ರಿಕೆಟ್ ನೋಡಲು ಹೋಗುತ್ತಿದ್ದವು. ವಿಶಾಲವಾದ ಹಜಾರದಲ್ಲಿ ಹೆಂಗಸರು ಮಕ್ಕಳೆಲ್ಲರೂ ಮಲಗಿದ್ದರೂ ನಮಗೆ ಕೊಂಚವೂ ಮುಜುಗರ ವಿಲ್ಲದೇ, ಅವರ ಹಾಸಿಗೆಯನ್ನು ಪಕ್ಕಕ್ಕೆ ಸರಿಸಿ, ಕೆಲವೊಮ್ಮೆ ಚಳೀ ಇದ್ದರೆ ಅದೇ ಬೆಡ್ ಹೊದ್ದುಕೊಂಡು ನಿದ್ದೆ ಮಾಡುತ್ತಿದ್ದವರಿಗೆ ತೊಂದರೆ ಆಗುತ್ತದೆ ಎಂಬ ಪರಿವೆಯೇ ಇಲ್ಲದೇ, ಕೇಕೆ ಹಾಕಿಕೊಂಡು ಕೆಲವೊಮ್ಮೆ ಔಟಾದಾಗ, ಜೋರಾಗಿ ಕಿರಿಚಿಕೊಂಡರೂ ನಮಗೆ ಯಾರೂ ಏನನ್ನೂ ಹೇಳದೇ ಇರುತ್ತಿದ್ದದ್ದನ್ನು ಇಂದಿಗೆ ನೆನಪಿಸಿಕೊಂಡರೆ, ಛೇ!! ಎಷ್ಟು ಬಾಲಿಶವಾಗಿ ಆಡುತ್ತಿದ್ದೆವು ಎನಿಸುತ್ತದೆ.

ಇನ್ನು ಸಂಜೆ ಆಯಿತೆಂದರೆ ಅವರ ಮನೆಯ ಮುಂದಿನ ವಿದ್ಯಾರಣ್ಯಪುರ ರಸ್ತೆಯಲ್ಲಿ ಮತ್ತೆ ನಾವೆಲ್ಲರೂ ಕುಳಿತು ಅದೇ ಕ್ರಿಕೆಟ್ ಬಗ್ಗೆಯೋ ಇಲ್ಲವೋ ಮತ್ತಾವುದರ ಬಗ್ಗೆ ಸುದೀರ್ಘವಾದ ಚರ್ಚೆ ಮಾಡುತ್ತಾ ಕಡೆಗೆ ಹರಿಯ ಮನೆಯಿಂದಲೋ, ವೆಂಕಟೇಶನ ಮನೆಯಿಂದಲೂ ಕರೆ ಬಂದಾಗಲೇ ನಾವೆಲ್ಲರೂ ಮನೆಗೆ ಹೋಗುತ್ತಿದ್ದವು.

ಭಾನುವಾರ ಇಲ್ಲವೇ ಶಾಲೆಗೆ ರಜೆ ಬಂದಿತೆಂದರೆ ಸಾಕು ಬೆಳಿಗ್ಗೆ ಸ್ನಾನ ಸಂಧ್ಯಾವಂದನೆ ಮುಗಿಸಿ ಹೊಟ್ಟೆ ಭರ್ತಿ ತಿಂಡಿ ತಿಂದು ಬಿಇಎಲ್ ಗ್ರೌಂಡ್, ಸ್ಲೂಲ್ ಗ್ರೌಂಡ್ ಇಲ್ಲವೇ ಹಾಸ್ಟೆಲ್ ಗ್ರೊಂಡಿನಲ್ಲಿ ಕ್ರಿಕೆಟ್ ಆಟ ಆಡಲು ಶುರು ಮಾಡಿದರೆ ಪಂದ್ಯದ ನಂತರ ಪಂದ್ಯ ಹೀಗೆ ಸಂಜೆಯೇ ಮನೆಗೆ ಬರುತ್ತಿದ್ದದ್ದು. ನಮ್ಮ  ವೆಂಕಟೇಶ ಅಂದಿನ ಕಾಲದ ಮನೋಜ್ ಪ್ರಭಾಕರ್ ನಂತೆ ನಮ್ಮ ತಂಡದ ಆರಂಭಿಕ ಬೌಲರ್ ಮತ್ತು ಆರಂಭಿಕ ಬ್ಯಾಟ್ಸ್ ಮನ್ ಕೂಡಾ. ನಾನೂ ಮತ್ತು ವೆಂಕಟೇಶ ಆರಂಭಿಕರಾಗಿ ಹೋಗಿ ಇಡೀ ವಿಕೆಟ್ ನಷ್ಟವಿಲ್ಲದೇ ಗೆದ್ದ ಪಂದ್ಯಗಳಿಗೆ ಲೆಕ್ಬವೇ ಇಲ್ಲಾ. ಅದೆಷ್ಟೋ ಬಾರಿ ನಾನೋ ನೀನೋ ಎನ್ನುವಂತೆ ಅರ್ಧ ಶತಕಗಳನ್ನು ಬಾರಿಸಿ ಅದೆಷ್ಟೂ ಬಾರಿ ಬೇರೆಯವರಿಗೆ ಬ್ಯಾಟಿಂಗ್ ಸಿಗಲಿಲ್ಲ ಎಂದು ಗೊಣಗಿದರೂ ಪಂದ್ಯ ಗೆದ್ದ ನಂತರ ಅವೆಲ್ಲವೂ ನಗಣ್ಯ ವಾಗುತ್ತಿತ್ತು. ವೆಂಕಟೇಶನ ಅಣ್ಣ ಮಂಜ, ಲಗಾನ್ ಸಿನಿಮಾದಲ್ಲಿ ತೋರಿಸುವ ಮಿಸ್ಟ್ರೀ ಬೌಲರ್ ಕಚ್ರಾನಂತೆ ನಮ್ಮ ತಂಡದ ಮಿಸ್ಟ್ರೀ ಬೌಲರ್. ಆರಂಭದಲ್ಲಿ ಬೇರೆ ತಂಡದ ಪರವಾಗಿ ಆಡುತ್ತಿದ್ದ ವೆಂಕಟೇಶನ ದೊಡ್ಡಪ್ಪನ ಮಗ ವೆಂಕಟೇಶ (ಜಂಗ್ಲೀ) ನಂತರ ಅನಿಲ್ ಕುಂಬ್ಲೇ ಯಂತೆಯೇ ವೇಗವಾಗಿ ಸ್ಪಿನ್ ಮಾಡುತ್ತಿದ್ದ ನಮ್ಮ ತಂಡದ ಪ್ರಮುಖ ವೌಲರ್ ಆಗಿ ಸೇರಿಕೊಂಡ ನಂತರವಂತೂ ನಾವು ಪಂದ್ಯಗಳನ್ನು ಸೋತ ನೆನಪೇ ಇಲ್ಲ.

ನಂತರ ಎಲ್ಲರೂ ಕಾಲೇಜು ಮುಗಿಸಿ ಉದರ ನಿಮಿತ್ತ ಬೇರೆ ಬೇರೆ ಕೆಲಸ ಕಾರ್ಯಗಳಿಗೆ ವಿವಿಧ ಪ್ರದೇಶಗಳಿಗೆ ಹೋಗಿ ಕ್ರಿಕೆಟ್ ಆಡುವುದನ್ನು ಬಿಟ್ಟರೂ ಅತ್ಮೀಯತೆಗೇನೂ ಕಡಿಮೆ ಇರಲಿಲ್ಲ. ನಾನು ಪ್ರತೀ ದಿನವೂ ಕಳುಹಿಸುವ ದೇವರ ಪೋಟೋ ಅಕಸ್ಮಾತ್ ತಡವಾದರೆ, ಅಣ್ಣಾ ಏನು ಇವತ್ತು ಇಷ್ಟು ಹೊತ್ತಾದರೂ ಪೋಟೋನೇ ಬಂದಿಲ್ಲಾ. ಏಲ್ಲಾ ಆರಾಮ್ ತಾನೇ ಎಂದು ವಿಚಾರಿಸುವ ಕಕ್ಕುಲತೆ ವೆಂಕಟೇಶನಿಗಿತ್ತು. ಅತ್ಯಂತ ಚಿಕ್ಕವಯಸ್ಸಿನಲ್ಲೇ ಕರ್ನಾಟಕ, ತಮಿಳುನಾಡು, ಅವಿಭಜಿತ ಆಂಧ್ರ, ಮಹಾರಾಷ್ಟ್ರ ಮತ್ತು ಗೋವಾ ಈ ಎಲ್ಲಾ ರಾಜ್ಯಗಳಿಗೂ ವಿವಿಧ ರೀತಿಯ ರಾಸಾಯನಿಕ ವಸ್ತುಗಳನ್ನು ಮಾರುವ ಅತ್ಯಂತ ದೊಡ್ಡದಾದ ವಹಿವಾಟನ್ನು ಸ್ಥಾಪಿಸಿ ಸದಾಕಾಲವೂ ಊರೂರು ಸುತ್ತುತ್ತಿದ್ದರೂ, ನನ್ನ ಯಾವುದಾದರೂ ಲೇಖನ ಇಷ್ಟವಾದಲ್ಲೀ ಅಥವಾ ನನ್ನ ದೇಗುಲ ದರ್ಶನದಲ್ಲಿ ತೋರಿಸುವ ದೇವಸ್ಥಾನ ಇಷ್ಟವಾದಲ್ಲಿ ಕೂಡಲೇ ಕರೆ ಮಾಡಿ ದರ ಕುರಿತಾಗಿ ವಿಚಾರಿಸಿಕೊಂಡು ಅಲ್ಲಿಗೆ ಹೋಗಿ ಬಂದು ತನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದ ಸ್ನೇಹ ಜೀವಿ.

ಮೊನ್ನೆ ನಡೆದ ಚುನಾವಣಾ ಸಮಯದಲ್ಲಿ ಕೆಲಸದ ನಿಮಿತ್ತ ದೆಹಲಿಗೆ ಹೋಗುವ ಸಂದರ್ಭ ಬಂದಾಗ ಸುಮ್ಮನೇ ಎಲ್ಲರ ಕಾಲು ಎಳೆಯಲು ಶಿವಮೊಗ್ಗ ಟಿಕೆಟ್ ಕುರಿತಾಗಿ ಮಾತನಾಡಲು ತಡರಾತ್ರಿ ಹೈಕಮಾಂಡಿನಿಂದ ಕರೆ ಬಂದಿರುವ ಕಾರಣ ದೆಹಲಿಗೆ ಹೋಗುತ್ತಿದ್ದೇನೆ ಎಂದು ದೊಡ್ಡದಾಗಿ ಹಾಕಿ ಅದರ ಕೆಳಗೆ ಸಣ್ಣದಾಗಿ ಸುಳ್ಸುದ್ದಿ ಎಂದು ಬರೆದಿದ್ದರೂ, ಅನೇಕರು ಅದನ್ನು ಗಮನಿಸದೇ ಮೇಲಿಂದ ಮೇಲೆ ಕರೆ ಮಾಡಿ ಅಭಿನಂದನೆ ತಿಳಿಸಿದವರಲ್ಲಿ ವೆಂಕಟೇಶನೂ ಒಬ್ಬ. ಅಂದು ಸುಮಾರು ಒಂದು ಗಂಟೆಗಳ ಕಾಲ ಲೋಕಾಭಿರಾಮವಾಗಿ ಹರಟುತ್ತಿದ್ದಾಗ, ನಮಗೆಲ್ಲಾ ರಾಜಕೀಯ ಏಕೆ ವೆಂಕಟೇಶ? ಚುನಾವಣೆಗೆ ನಿಂತವರೆಲ್ಲರೂ ಕೋಟಿ ಕೋಟಿ ಖರ್ಚು ಮಾಡಿದರೂ, ಗೆದ್ದವನು ಸೋತ, ಸೋತವನು ಸತ್ತ ಎಂದು ನಮ್ಮ ತಂದೆಯವರು ಹೇಳುತ್ತಿದ್ದರು ಎಂದಾಗ, ಅಣ್ಣಾ ನಿಮ್ಮಂತಹವರು ಬಂದರೆ ಇಂದಿನ ರಾಜಕೀಯ ಸ್ವಲ್ಪ ಸ್ವಚ್ಚವಾಗಬಹುದು ಎಂದು ಆರಂಭವಾದ ನಮ್ಮ ಮಾತು ಕತೆ ನಂತರ ಮಕ್ಕಳು, ಅವರ ವಿದ್ಯಾಭ್ಯಾಸ ನಮ್ಮ ಮುಂದಿನ ಜೀವನ ಹೇಗಿರಬೇಕು ಎಂದೆಲ್ಲಾ ಮಾತನಾಡಿದ್ದೇ ಕಡೆ ಕರೆಯಾಗುತ್ತದೆ ಎಂದೆಣಿಸಿರಲಿಲ್ಲ

ಮೊನ್ನೆ ಶನಿವಾರ 24.06.2023 ಸಂಜೆ ಹರಿ ಕರೆ ಮಾಡಿ ಶ್ರೀಕಂಠಾ, ವೆಂಕಟೇಶ ಹೋಗ್ಬಿಟ್ಟಾ! ಎಂದಾಗ, ಗಾಭರಿಯಿಂದಲೇ, ಯಾವ ವೆಂಕಟೇಶ? ಎಂದಾಗ ನಮ್ಮ ಮಂಜನ ತಮ್ಮ ವೆಂಕಟೇಶ ಎಂದಾಗ ಒಂದು ಕ್ಷಣ ನಿಂತ ಜಾಗದಲ್ಲೇ ಕುಸಿದು ಬೀಳುವಂತಾಗಿದ್ದಂತೂ ಸುಳ್ಳಲ್ಲ. ಯಾಕೇ? ಹೇಗೇ ಎಂದೆಲ್ಲಾ ಮೇಲಿಂದ ಮೇಲೆ ಪ್ರಶ್ನೆ ಕೇಳಿದಾಗ, ನನಗೂ ಸರಿಯಾಗಿ ಗೊತ್ತಿಲ್ಲಾ ಬೆಳಿಗ್ಗೆ ಹೋಗಿಬಿಟ್ನಂತೆ. ಸಂಜೆ ಹೊತ್ತಿಗೆ ಎಲ್ಲಾ ಕಾರ್ಯಗಳೂ ಮುಗಿದು ಹೋಯಿತಂತೇ ಎಂದು ಹೇಳಿದಾಗ, ಸರಿ ಹಾಗಾದರೆ ಬೆಳಿಗ್ಗೆ ಅವರ ಮನೆಗೆ ಇಬ್ಬರೂ ಒಟ್ಟಿಗೆ ಹೋಗಿ ಸಾಂತ್ವನ ಹೇಳೋಣ ಎಂದು ನಿರ್ಧರಿಸಿ, ಇಬ್ಬರೂ ಬೆಳಿಗ್ಗೆ ವೆಂಕಟೇಶನ ಮನೆಗೆ ಹೋಗಿ ಮಂಜನನ್ನು ನೋಡುತ್ತಿದ್ದಂತೆಯೇ ನಮಗೇ ಅರಿವಿಲ್ಲದಂತೆ ಒಬ್ಬರನ್ನೊಬ್ಬರು ತಬ್ಬಿಕೊಂಡು ಧಾರಾಕಾರವಾದ ಕಣ್ಣಿರ ಕೋಡಿ ಹರಿದಾಡಿತ್ತು.

ನಂತರ ಕೂಲಂಕುಶವಾಗಿ ಕುಳಿತು ವಿಚಾರಿಸಿದಾಗ ಸಣ್ಣ ವಯಸ್ಸಿನಲ್ಲಿಯೇ ಅಷ್ಟೊಂದು ದೊಡ್ಡದಾದ ಸಂಸ್ಥೆಯನ್ನು ಕಟ್ಟಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರದ ಹೊರೆ ಆತನನ್ನು ಹೈರಾಣಿಗಿಸಿತ್ತು. ಎರಡು ವಾರ ಕೆಲಸ ನಿಮಿತ್ತ ಗೋವಾಕ್ಕೆ ಹೋದಾಗಲೇ ಯಾಕೋ ಸಣ್ಣದಾಗಿ ಎದೆ ನೋವಾದಾಗ, ಮೊದಲು ಗ್ಯಾಸ್ಟ್ರಿಕ್ ಎಂದು ಅಲ್ಲಿನ ಕ್ಲಿನಿಕ್ಕಿನಲ್ಲಿ ಮಾತ್ರೆ ತೆಗೆದುಕೊಂಡು ಅದು ಸರಿ ಹೋಗದೇ ನೋವು ಹೆಚ್ಚಾದಾಗ, ಅಕ್ಕನ ಸಲಹೆಯ ಮೇರೆಗೆ ಕೂಡಲೇ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆಗೂ ಬಾರದೇ, ನೇರವಾಗಿ ರಾಮಯ್ಯ ಆಸ್ಪತ್ರೆಗೆ ಸೇರಿಕೊಂಡು ಅಲ್ಲಿ ಪರಿಚಿತ ವೈದ್ಯರೇ ಆಂಜಿಯೋ ಬ್ಲಾಸ್ಟ್ ಮಾಡಿ, ಬ್ಲಾಕ್ ಆಗಿದ್ದ ಜಾಗದಲ್ಲಿ ಸ್ಟೆಂಟ್ ಹಾಕಿ ಎರಡು ಮೂರು ದಿನಗಳಾದ ನಂತರ ಮನೆಗೆ ಕಳುಹಿದ್ದರಂತೆ. ಜೀವ ಇದ್ದರೆ ಜೀವನ, ಜೀವ ಇದ್ದರೆ ಮಾತ್ರವೇ ವ್ಯಾಪಾರ ವಹಿವಾಟು ಎಂಬುದರ ಅರಿವಿದ್ದರೂ, ಅದೇಕೋ ಕಾಣೇ ಸ್ವಲ್ಪವೂ ವಿಶ್ರಾಂತಿ ತೆಗೆದುಕೊಳ್ಳದೇ ಮತ್ತೆ ಮೊಬೈಲ್ ಹಿಡಿದುಕೊಂಡು ವ್ಯಾಪಾರ ವಹಿವಾಟು ಮಾತನಾಡಿದ ಕಾರಣದಿಂದಲೇ, ಮೈದಾನದಲ್ಲಿ ನೀರು ಕುಡಿದಂತೆ ಅರ್ಧಶತಕ ಬಾರಿಸುತ್ತಿದ್ದ ನಮ್ಮ ವೆಂಕಟೀಶ ನಿಜ ಜೀವನದಲ್ಲಿ ಅರ್ಧ ಶತಕವನ್ನು ಪೂರೈಸಲಾಗದೇ ಮತ್ತೆಂದೂ ಬಾರದ ಲೋಕಕ್ಕೆ ಶಾಶ್ವತವಾಗಿ ಹೋಗೇ ಬಿಟ್ಟ

ಕಾಕಾತಾಳೀಯ ಎನ್ನುವಂತೆ ಒಂದೇ ದಿನ, ನನ್ನ ಜೀವನದಲ್ಲಿ ಆತ್ಮೀಯತೆ, ಸ್ನೇಹ, ಪ್ರೀತಿ, ವಿಶ್ವಾಸ ಕ್ರಿಕೆಟ್ ಮತ್ತು ಟಿವಿಯ ಅನುಭವವನ್ನು ಕೊಟ್ಟಿದ್ದ ಇಬ್ಬರು ನಮ್ಮನ್ನು ಅಗಲಿ ಹೋದದ್ದು ನಿಜಕ್ಕೂ ತುಂಬಲಾರದ ನಷ್ಟವೇ ಸರಿ. ಇಂದು ನಮ್ಮ ಮನೆಯಲ್ಲಿ 50″ ಎಲ್.ಇ.ಡಿ ಇಂಟರ್ ನೆಟ್ ಟಿವಿ ಇರಬಹುದು. ಒಂದಾಲ್ಲಾ ಎರಡು ಕಾರುಗಳು ಇರಬಹುದು. ಕ್ಷಣಮಾತ್ರದಲ್ಳೇ ಕೈ ಬೆರಳ ತುದಿಯಲ್ಲಿಯೇ ಎಲ್ಲಾ ಮಾಹಿತಿಗಳನ್ನು ಒದಗಿಸುವಂತಹ ಗ್ಯಾಜೆಟ್ ಗಳು ಇರಬಹುದು. ಆದರೆ ಗತಿಸಿ ಹೋದ ಆ ದಿನಗಳು ಖಂಡಿತವಾಗಿಯೂ ಮರುಕಳಿಸಲಾಗದು. ಅವೆಲ್ಲವೂ ನಿಸ್ಸಂದೇಹವಾಗಿ ಮರೆಯಲಾಗದ ನೆನಪುಗಳು. ಅಕಾಲಿಕವಾಗಿ ಅಗಲಿ ಹೋದ ಆ ಇಬ್ಬರು ಆತ್ಮೀಯರಿಗೆ, ಭಗವಂತನು ಸದ್ಗತಿಯನ್ನು ಕೊಡಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ. 

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

6 thoughts on “ಮರೆಯಲಾಗದ ಆ ನೆನಪುಗಳು, ಮರುಕಳಿಸಲಾಗದ ಆ ದಿನಗಳು,

  1. ಖಂಡಿತಾ ನಿಜ. ವಯಸ್ಸಿನಲ್ಲಿ ನಿಮಗಿಂತ ಸಾಕಷ್ಟು ಹಿರಿಯನಾದ ನನ್ನ ಮದುವೆಯಾದದ್ದು ನೀವು ಆಡಿ ನಲಿದ ಪ್ರದೇಶದಲ್ಲಿರುವ BEL ಕಲ್ಯಾಣಮಂಟಪದಲ್ಲಿ. ಇಂದೇಕೋ ನಿಮ್ಮ ಲೇಖನ ಓದಿ ವ್ಯಥೆಯಾಯಿತು.
    ಇಂದಿನ ಮಟ್ಟಿಗೆ ಇಷ್ಟೇ.

    Like

  2. It is really very bad news, and it is very difficult to digest. Let God give you and the deceased family the strength to overcome this tragedy. May God bless them with SADGATHI.

    Liked by 1 person

  3. ಶ್ರೀಕಂಠ, ನಮ್ಮ ವೆಂಕಟೇಶನ ಅಕಾಲಿಕ ಮರಣ ಹೃದಯ ಕಲುಕಿದೆ. ನೀನು ಉಲ್ಲೇಖಿಸಿರುವ ಪ್ರತಿಯೊಂದು ಘಟನೆ ಸ್ಮೃತಿಪಟಲದಲ್ಲಿ ಹಾದು ಹೋಯಿತು. ನಾನು ಮತ್ತು ವೆಂಕಟೇಶ ಆತ್ಮೀಯ ಬಾಂಧವ್ಯ ಹೊಂದಿದ್ದೆವು. ನಮ್ಮ ಒಡನಾಟ ನೋಡಿ ಹಲವರು ನಾವಿಬ್ಬರೂ ಸಹೋದರರು ಎಂದೇ ಭಾವಿಸಿದ್ದರು. ಕಾಲಚಕ್ರ ಉರುಳಿದಂತೆ ನಾವು ವೃತ್ತಿ ಮತ್ತು ವೈಯಕ್ತಿಕ ಜವಾಬ್ದಾರಿಗಳಿಂದ ಹೆಚ್ಚು ಭೇಟಿಯಾಗಿದ್ದರೂ ಆತ್ಮೀಯತೆ ಹಾಗೇ ಉಳಿದಿತ್ತು. ನನ್ನ ತಂಗಿಯ ಪತಿ ತೀರಿಕೊಂಡ ವಿಷಯ ತಿಳಿದಾಗ ಸಮಾಧಾನ ಪಡಿಸಿದ್ದ. ಆತನ ಕ್ರಿಕೆಟ್ ಸಾಮರ್ಥ್ಯ ಮತ್ತು ಅವನ ಲೌಕಿಕ ಜ್ಞಾನ ಅಗಾದವಾಗಿತ್ತು. ಈ ಅಗಲಿಕೆ ಬಹು ಕಾಲ ಬಾಧಿಸಲಿದೆ. ನಿನ್ನ ನುಡಿ ನಮನಕ್ಕೆ ಧನ್ಯವಾದಗಳು 🙏

    Liked by 1 person

    1. ಈ ವಿಷಯದಲ್ಲಿ ನಾವಿಬ್ಬರೂ ಸಮಭಾಗಿಗಳು. ನಮಗಿಂತಲೂ ಚಿಕ್ಕ‌ ಹುಡುಗನಾದ ವೆಂಕಟೇಶನಿಗೆ ನಾನು ನುಡಿ ನಮನ‌ ಸಲ್ಲಿಸುವಂತಹ‌ ಪ್ರಸಂಗ ಬರುತ್ತವೆ ಎಂದು ಖಂಡಿತವಾಗಿಯೂ ಕನಸು ಮನಸ್ಸುನಲ್ಲಿಯೂ ಯೋಚಿಸಿರಲಿಲ್ಲ.

      Like

Leave a comment