ಮಿಲ್ಲರ್ಸ್ ರಸ್ತೆ

ಕರ್ನಾಟಕದ ರಾಜಧಾನಿ, ಉದ್ಯಾನ ನಗರಿ ಮತ್ತು ಭಾರತದ ಸಿಲಿಕಾನ್ ವ್ಯಾಲೀ ಎಂದೇ ಹೆಸರಾಗಿರುವ ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳು ಇಂದಿಗೂ ವಿದೇಶಿಗರ ಹೆಸರು ಇದೆ. ಬೆಂಗಳೂರಿನ ವಸಂತನಗರಕ್ಕೆ ಸೇರುವ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಿಂದ ಆರಂಭವಾಗಿ  ಚಾಲುಕ್ಯ ವೃತ್ತದ (ಬಸವೇಶ್ವರ ವೃತ್ತ) ವರೆಗೂ ಇರುವ ಮಿಲ್ಲರ್ಸ್ ರಸ್ತೆಯೂ ಒಂದಾಗಿದ್ದು, ಆ ರಸ್ತೆಗೆ ಅದೇ ಹೆಸರನ್ನು ಇಡಲು ಕಾರಣಗಳೇನು? ಮಿಲ್ಲರ್ಸ್ ಅಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ನಮ್ಮ ದೇಶದಲ್ಲಿ ಕೆಲವು ಸಮುದಾಯಗಳು ಶತಮಾನಗಳಿಂದಲೂ ಸವರ್ಣೀಯರಿಂದ ತುಳಿತಕ್ಕೆ ಒಳಗಾಗಿರುವ ಕಾರಣದಿಂದಲೇ ಅವರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ನಂಬಲಾಗಿರುವ ಪರಿಣಾಮವಾಗಿ ಅಂತಹವರನ್ನು ಸಮಾಜದ ಮುನ್ನೆಲೆಗೆ ತರುವ ಸಲುವಾಗಿ ಜಾತಿ ಆಧಾರಿತಯಾದ ಮೀಸಲಾತಿ ಪದ್ದತಿಯನ್ನು ಸ್ವಾತ್ರಂತ್ರ್ಯಾ ನಂತರ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಜಾರಿಗೆ ತರಲಾಗಿರುವ ವಿಷಯ ನಮಗೆ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. 1947ರ ನಂತರ ಈ ರೀತಿಯ ಮೀಸಲಾತಿ ಪದ್ದತಿಯನ್ನು ಅಂಬೇಡ್ಕರ್ ಆವರು ಜಾರಿಗೆ ತರಲು ಮೂಲವಾಗಿ ಪ್ರೇರಣೆಯಾದದ್ದೇ, 1919ರಲ್ಲಿ ಅಂದಿನ ಮೈಸೂರಿನ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿವೃತ್ತ ನ್ಯಾಯಾಧೀಷರಾಗಿದ್ದ ಲೆಸ್ಲಿ ಕ್ರೀರಿ ಮಿಲ್ಲರ್ ಆವರ ಮುಂದಾಳತ್ವದಲ್ಲಿ ನೇಮಿಸಿದ್ದ ವರದಿಯ ಎಂಬುದೇ ಗಮನಾರ್ಹವಾಗಿದೆ

millerಸರ್ ಲೆಸ್ಲಿ ಕ್ರೀರಿ ಮಿಲ್ಲರ್ ಅವರು ಅಂದಿನ ಬ್ರಿಟಿಷ್ ಸರ್ಕಾರದ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಮತ್ತು ಮೈಸೂರಿನ ನ್ಯಾಯಾಲಯದಲ್ಲಿ ನ್ಯಾಯಾಧೀಷರಾಗಿ ಸೇವೆ ಸಲ್ಲಿಸಿದ ಬ್ರಿಟಿಷ್ ಭಾರತೀಯ ನಾಗರಿಕ ಸೇವಕರಾಗಿದ್ದರು. ಮೂಲತಃ ಇಂಗ್ಲೇಂಡಿನ ವಾಸಿಗಳಾಗಿದ್ದ ಸರ್ ಅಲೆಕ್ಸಾಂಡರ್ ಎಡ್ವರ್ಡ್ ಮಿಲ್ಲರ್ ಮತ್ತು ಶ್ರೀಮತಿ ಎಲಿಜಬೆತ್ ಫರ್ಲಿ ಕ್ರೀರಿ ದಂಪತಿಗೆ 1862 ಜನಿಸಿದರು. ತಮ್ಮ ಆರಂಭಿಕ ಶಿಕ್ಷಣವನ್ನೆಲ್ಲಾ ತವರೂತಿನಲ್ಲಿಯೇ ಮುಗಿಸಿದ ನಂತರ ಡಬ್ಲಿನ್‌ನ ಚಾರ್ಟರ್‌ಹೌಸ್ ಮತ್ತು ಟ್ರಿನಿಟಿ ಕಾಲೇಜಿನಲ್ಲಿ ಶಿಕ್ಷಣ ಪಡೆದು 1883 ರಲ್ಲಿ ಭಾರತೀಯ ನಾಗರಿಕ ಸೇವೆಗೆ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಸೇರಿಕೊಂಡರು. 1886 ರಲ್ಲಿ ರಾಬರ್ಟ್ ಲೌರಿಯ ಮಗಳು ಮಾರ್ಗರೇಟ್ ಜೂಲಿಯಾ ಅವರನ್ನು ವಿವಾಹವಾದರು. ತಮ್ಮ ಸೇವಾವಧಿಯಲ್ಲಿ ಮಿಲ್ಲರ್ಸ್ ಅವರು ವಿವಿಧ ಭಾಗಗಳಲ್ಲಿ ನೇಮಕಗೊಂಡು, 1900-1907 ರ ವರೆಗೆ ಪ್ಯೂಸ್ನೆ ನ್ಯಾಯಾಧೀಶರರಾಗಿದ್ದು ನಂತರ ಮದ್ರಾಸ್ ಪ್ರೆಸಿಡೆನ್ಸಿಯು ಸೆಷನ್ಸ್ ನ್ಯಾಯಾಧೀಶರಾಗಿ 1907-1914ರ ವರೆಗೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದರು. 1914ರಲ್ಲಿ ಅವರು ಸೇವೆಯಿಂದ ನಿವೃತ್ತಿ ಹೊಂದುವಾಗ ಅಂದಿನ ಬ್ರಿಟಿಷ್ ಸರ್ಕಾರ ಅವರಿಗೆ ನೈಟ್ ಪದವಿಯನ್ನು ನೀಡಿ ಗೌರವಿಸಿತ್ತು. ನಿವೃತ್ತಿಯ ನಂತರ ಅವರು ನೀಲಗಿರಿಯ (ಊಟಿಯ) ಗ್ಲೆನ್ ಮೋರ್ಗಾನ್‌ನಲ್ಲಿ ನೆಲೆಸಿದ್ದರೂ ಸಹಾ, ಅಧಿಕೃತವಾಗಿ ಅಲ್ಲದೇ ಇದ್ದರೂ, ಅಂದಿನ ಸರ್ಕಾರಕ್ಕೆ ಆಡಳಿತಾತ್ಮಕ ಮತ್ತು ಕಾನೂನತ್ಮಕವಾಗಿ ಅಗತ್ಯವಿದ್ದ ಅನೇಕ ಸಲಹೆಗಳನ್ನು ಕೊಡುವಂತಹ ಹುದ್ದೆಗಳಲ್ಲಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು.

vishweshwariaha1912 ರಲ್ಲಿ ಮೈಸೂರಿನ ದಿವಾನರಾಗಿ ಸರ್ ಎಂ ವಿಶ್ವೇಶ್ವರಯ್ಯನವರು ತಮ್ಮ ಅಪಾರವಾದ ಪಾಂಡಿತ್ಯದ ಆಧಾರವಾಗಿಯೇ ನೇಮಕಗೊಂಡಾಗ, ಕೆಲವರಿಗೆ ಮಹಾರಾಜರ ಆಡಳಿತ ಮಂಡಳಿಯಲ್ಲಿ ಬ್ರಾಹ್ಮಣರ ಪ್ರಾಬಲ್ಯವಿದೆ ಎಂಬ ದೂರು ಕೇಳಿ ಬಂದಿತು. ಮುಂದೇ ಮೈಸೂರಿನಲ್ಲಿ ಒಕ್ಕಲಿಗರು ಮತ್ತು ಲಿಂಗಾಯತ ನಾಯಕರ ನೇತೃತ್ವದಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಸರ್ಕಾರದಲ್ಲಿನ ಉನ್ನತ ಹುದ್ದೆಗಳು ಜಾತಿ ಆಧಾರಿತವಾಗಿ ಉಳಿದ ಜಾತಿಗಳಿಗೂ ನೀಡಬೇಕೆಂಂದು ಮೈಸೂರು ಮಹಾರಾಜರನ್ನು ಒತ್ತಾಯಿಸಿದರೇ, ಇದೇ ವಿಷಯದ ಕುರಿತಾಗಿ ಪ್ರಜಾ ಮಿತ್ರ ಮಂಡಳಿಯ ಎಂಬುದರ ಅಡಿಯಲ್ಲಿ ಹಿಂದುಳಿದ ಸಮುದಾಯಗಳ ನೇತೃತ್ವದ ಜಾತಿ ವಿರೋಧಿ ಚಳುವಳಿಯು ಆರಂಭವಾಗಿ ಸರ್ಕಾರೀ ನೇಮಕಾತಿ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಾಗಿ ಮೈಸೂರು ರಾಜರ ಮೇಲೆ ಒತ್ತಡವನ್ನು ಹೇರಲಾರಂಭಿಸಿತು.

maharajaಸ್ವತಃ ರಾಜರಾಗಿದ್ದರೂ, ಪ್ರಜಾಪ್ರಭುತ್ವದ ಆಧಾರದಲ್ಲಿಯೇ ಪ್ರಜೆಗಳೇ ಪ್ರಭುಗಳು ಎಂಬ ರೀತಿಯಲ್ಲಿ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಮೂಲಕ ಆಡಳಿತವನ್ನು ನಡೆಸುತ್ತಿದ್ದ ಮೈಸೂರು ಮಹಾರಾಜರು ಈ ಹೋರಾಟದ ತೀವ್ರತೆಯನ್ನು ಗಮನಿಸಿ, ಪರಿಸ್ಥಿತಿ ಗಂಭೀರ ಆಗುವ ಮೊದಲೇ, 1918 ರಲ್ಲಿ ನಿವೃತ್ತ ನ್ಯಾಯಾಧೀಷರಾಗಿದ್ದ ಶ್ರೀ ಜಸ್ಟಿಸ್ ಮಿಲ್ಲರ್ ನೇತೃತ್ವದಲ್ಲಿ ಇದರ ಕುರಿತು ಅಧ್ಯಯನ ನಡೆಸಿ ಸೂಕ್ತವಾದ ಸಲಹೆಗಳನ್ನು ನೀಡಬೇಕು ಎಂದು ಕೋರಿಕೊಂಡರು. ಹೀಗೆ ಸರ್ಕಾರದ ಆದೇಶದ ಮೇರೆಗೆ ಜವಾಬ್ಧಾರಿಯನ್ನು ಹೊತ್ತುಕೊಂಡ ಮಿಲ್ಲರ್ಸ್ ಅವರು, 1919 ರಲ್ಲಿ ಸಾರ್ವಜನಿಕ ಸೇವೆಯಲ್ಲಿ ಎಲ್ಲಾ ಸಮುದಾಯಗಳಿಗೂ ಸಾಕಷ್ಟು ಪ್ರಾತಿನಿಧ್ಯವನ್ನು ನೀಡುವುದು ಅತ್ಯಗತ್ಯ ಎಂಬುದನ್ನು ಪರಿಗಣಿಸಿ, ಅರ್ಹ ಅಭ್ಯರ್ಥಿಗಳು ಲಭ್ಯವಿದ್ದಲ್ಲಿ, ಕನಿಷ್ಠ ಏಳು ವರ್ಷಗಳ ಅವಧಿಯ ನೇಮಕಾತಿಯೊಂದಿಗೆ ಬ್ರಾಹ್ಮಣೇತರರಿಗೆ ಮೂರನೇ ಎರಡರಷ್ಟು ಕಡಿಮೆ ನೇಮಕಾತಿಗಳು ಮತ್ತು ಅರ್ಧದಷ್ಟು ಉನ್ನತ ನೇಮಕಾತಿಗಳನ್ನು ಮೀಸಲಿಡಬೇಕು ಎಂದು ಶಿಫಾರಸ್ಸನ್ನು ಮಾಡಿತ್ತಲ್ಲದೇ, ಹಿಂದುಳಿದ ವರ್ಗಗಳಿಗೆ ವಿದ್ಯಾರ್ಥಿವೇತನ, ಸಾರ್ವಜನಿಕ ಸೇವಾ ನೇಮಕಾತಿಗಳಿಗೆ ವಯೋಮಿತಿ ಸಡಿಲಿಕೆ ಮತ್ತು ಮೆರಿಟ್ ಆಧಾರಿತ ಪರೀಕ್ಷೆಗಳಲ್ಲಿನ ಬದಲಾವಣೆಗಳು ಸಹಾ ಒಳಗೊಂಡಿತ್ತು.

ಮಹಾರಾಜರು ಮಿಲ್ಲರ್ ಸಮಿತಿಯ ನೀಡಿದ ವರದಿಯನ್ನು ಅಂದಿನ ದಿವಾನರಾಗಿದ್ದ ಶ್ರೀ ವಿಶ್ವೇಶ್ವರಯ್ಯನವರಿಗೆ ತಲುಪಿಸಿ, ಈ ವರದಿಯನ್ನು ರಾಜ್ಯದಲ್ಲಿ ಅನುಷ್ಠಾನ ತಂದರೆ ಅದರ ಸಾಧಕ ಬಾಧಕಗಳೇನು? ಎಂದು ಕೇಳಿದಾಗ, ಸರ್ ಎಂ ವಿ ಅವರು ಈ ರೀತಿಯಾಗಿ ಏಕಾಏಕಿ ಸರ್ಕಾರಿ ಹುದ್ದೆಗಳಲ್ಲಿ ಜಾತಿಆಧಾರಿತವಾಗಿ ಮೀಸಲಾತಿ ಕೊಡುವ ಬದಲು, ಹಂತ ಹಂತವಾಗಿ ಅವರಿಗೆ ಉತ್ತಮ ಶಿಕ್ಷಣವನ್ನು ನೀಡಿ ಅದರಲ್ಲಿ ಸಮರ್ಥದಾದವರಿಗೆ ಅರ್ಹತೆಯ ಆಧಾರದ ಮೇರೆಗೆ ಸರ್ಕಾರೀ ಉನ್ನತ ಹುದ್ದೆಗಳನ್ನು ನೀಡುವುದು ಸೂಕ್ತ ಎಂಬ ವಾದವನ್ನು ಮಂಡಿಸಿದರೇ ವಿನಃ ಅವರೆಂದೂ ಬ್ರಾಹ್ಮಣೇತರರ ವಿರುದ್ಧವಾಗಿರಲಿಲ್ಲ.

ಇದೇ ವಿಷಯದ ಕುರಿತಾಗಿ ಮಹಾರಾಜರು ಮತ್ತು ಸರ್ ಎಂ ವಿ ಅವರ ನಡುವೆ ಅನೇಕ ಪತ್ರಗಳು ವಿನಿಮಯವಾದರೂ, ಈ ವಿಷಯದ ಬಗ್ಗೆ ಸರ್ ಎಂವಿ ಅವರ ಅಭಿಪ್ರಾಯಗಳು ಮಹಾರಾಜರಿಗೆ ಮನವರಿಕೆಯಾಗಲಿಲ್ಲ. ಇದನ್ನೇ ಚೆಟ್ಟು ಮಾಡಿ ತೋರಿಸುತ್ತಾ, ವಿಶ್ವೇಶ್ವರಯ್ಯನವರು ಬ್ರಾಹ್ಮಣೇತರರ ವಿರೋಧಿ ಎಂಬ ಪಟ್ಟವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಟ್ಟಿದಾಗ, ಬಹಳವಾಗಿ ಮನನೊಂದ ವಿಶ್ವೇಶ್ವರಯ್ಯನವರು ತಮ್ಮ ದಿವಾನ್ ಹುದ್ದೆಗೆ ರಾಜೀನಾಮೆ ನೀಡಲು ಮುಂದಾದಾಗ, ಮಹಾರಾಜರು ಪರಿ ಪರಿಯಾಗಿ ಕೇಳಿಕೊಂಡ ಪರಿಣಾಮ, ಸರ್ ಎಂ ವಿ ಅವರು ಯಾವುದೇ ಆಡಳಿತಾತ್ಮಕ ಹುದ್ದೆಯಲ್ಲಿ ಮುಂದುವರಿಯದೇ, ಅವಶ್ಯವಿದ್ದಾಗ ಆಡಳಿತಾತ್ಮಕ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತೇನೆ ಎಂದು ಒಪ್ಪಿಕೊಂಡ ನಂತವಷ್ಟೇ ಅವರನ್ನು ದಿವಾನ್ ಹುದ್ದೆಯಿಂದ ನಿವೃತ್ತಿಗೊಳಿಸಲಾಯಿತು. 1919ರಲ್ಲಿ, ಮಹಾರಾಜರೇ ಮುತುವರ್ಜಿ ವಹಿಸಿಕೊಂಡು ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಎಲ್ಲಾ ಸರ್ಕಾರಿ ವಲಯಗಳಲ್ಲಿ ಕನಿಷ್ಠ 50% ಹುದ್ದೆಗಳನ್ನು ಬ್ರಾಹ್ಮಣೇತರರಿಗೆ ಪೂರ್ವಾಪೇಕ್ಷಿತ ಅರ್ಹತೆ ಇಲ್ಲದೇ ಇದ್ದರೂ, ಕೇವಲ ಜನ್ಮತಃ ಜಾತಿಯ ಆಧಾರದ ಮೇಲೆಯೇ ನೀಡಬೇಕೆಂದು ಅದೇಶ ಹೊರಡಿಸಿದರು.

mysoreಹೀಗೆ ಸ್ವಾತಂತ್ರ ಪೂರ್ವ ಭಾರತದಲ್ಲಿಯೇ ಮೊತ್ತ ಮೊದಲ ಬಾರಿಗೆ ಜಾತಿ ಆಧಾರಿತ ಐತಿಹಾಸಿಕವಾದ ಮೀಸಲಾತಿಯ ವರದಿಯನ್ನು ನೀಡಿದ ಸರ್ ಲೆಸ್ಲಿ ಕ್ರೀರಿ ಮಿಲ್ಲರ್ ಅವರ ಹೆಸರನ್ನು ಅಜರಾಮರವಾಗಿಸುವ ಸಲುವಾಗಿ ಮಹಾರಾಜರು, ಇಂದಿನ ರಾಜ್ಯಪಾಲರ ನಿವಾಸದ ಹತ್ತಿರದಲ್ಲೇ ಇದ್ದ ಅಂದಿನ ಕಾಲದಲ್ಲೇ ಬೆಂಗಳೂರಿನ ಅತ್ಯಂತ ಆದರ್ಶ ಮತ್ತು ಐಷಾರಾಮಿ ಪ್ರದೇಶಗಳಲ್ಲಿ ಒಂದೆಂದು ಹೆಸರಾಗಿದ್ದ, ವಸಂತ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಆರಂಭವಾಗುತ್ತಿದ್ದಂತಹ ರಸ್ತೆಗೆ ಮಿಲ್ಲರ್ಸ್ ಅವರ ನಾಮಕರಣಮಾಡುವ ಮೂಲಕ ಗೌರವವನ್ನು ಸೂ‍ಚಿಸಿದರು.

ಅಂದಿನಿಂದ ಇಂದಿನ ವರೆಗು ಮಿಲ್ಲರ್ಸ್ ರಸ್ತೆಯು ಬೆಂಗಳೂರಿನ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಸಮೀಪವೇ ಇದ್ದು, ಜನರದ ಮಧ್ಯ ಭಾಗದ ಜನಪ್ರಿಯ ಪ್ರದೇಶವಾಗಿದ್ದು ಅನೇಕ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಮಿಲ್ಲರ್ಸ್ ರಸ್ತೆಯ ಉತ್ತರದಲ್ಲಿ ವಿಲಿಯಮ್ಸ್ ಟೌನ್, ಪೂರ್ವದಲ್ಲಿ ಸಿಂಧಿ ಕಾಲೋನಿ ಮತ್ತು ದಕ್ಷಿಣದಲ್ಲಿ ಸುಲ್ತಾನಗುಂಟಾ ಪ್ರದೇಶದಿಂದ ಆವೃತ್ತವಾಗಿದ್ದು, ಆರಂಭದಲ್ಲಿ ಮಧ್ಯಮ ವರ್ಗದವರೇ ಇರುವ ಸಾಮಾನ್ಯ ವಸತಿ ಪ್ರದೇಶವಾಗಿದ್ದು, ನಂತರ ದಿನಗಳಲ್ಲಿ ವಾಣಿಜ್ಯೀಕರಣಗೊಂಡು ಹತ್ತಾರು ಜನಪ್ರಿಯ ಹೋಟೆಲ್ಲುಗಳು, ಮಾರುಕಟ್ಟೆಗಳು ಮತ್ತು ಜನಪ್ರಿಯ ಆಸ್ಪತ್ರೆಗಳು ಇದೇ ರಸ್ತೆಯಲ್ಲಿ ತಲೆ ಎತ್ತಿದೆ

ಮಿಲ್ಲರ್ಸ್ ರಸ್ತೆಯ ಒಂದು ತುದಿಯಲ್ಲಿ, ಏಪ್ರಿಲ್ 9 1990 ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿಯಾಗಿದ್ದ ಶ್ರೀ ವೀರೇಂದ್ರ ಪಾಟೀಲ್ ಅವರ ಅಮೃತಹಸ್ತದಲ್ಲಿ ಉದ್ಘಾಟನೆಗೊಂಡ ಮಹಾವೀರ್ ಜೈನ್ ಆಸ್ಪತ್ರೆ ಇಂದು ಎಲ್ಲ ರೀತಿಯ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಎಂದು ಪ್ರಖ್ಯಾತವಾಗಿದೆ. ಅದೇ ರೀತಿ ಮತ್ತೊಂದು ತುದಿಯಲ್ಲಿ, ಸುಮಾರು 225 ಹಾಸಿಗೆಗಳ ವಿಕ್ರಮ್ ಆಸ್ಪತ್ರೆಯಿದ್ದು ಅಲ್ಲಿ ಹೃದಯ ಸಂಬಂಧಿತವಾದ ವಿಶೇಷವಾದ ಚಿಕಿತ್ಸೆಗೆ ಹೆಸರುವಾಸಿಯಾಗಿದ್ದು, ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಯೊಂದಿಗೆ ಸೇರಿಕೊಂಡಿದೆ.

ಶ್ರೀ ದಾನಪ್ಪ ಬಸಪ್ಪ ಜತ್ತಿ ಮತ್ತು ಶ್ರೀ ಅರವಿಂದ ಬಸಪ್ಪ ಜತ್ತಿ ಅವರ ಮಾಲಿಕತ್ವದಲ್ಲಿ ಅಕ್ಟೋಬರ್ 26 1989ರಿಂದಲೂ ಇದೇ ಮಿಲ್ಲರ್ಸ್ ರಸ್ತೆಯಲ್ಲಿ ಮೋಟಾರ್ ಸೈಕಲ್‌ಗಳು ಮತ್ತು ಸಂಬಂಧಿತ ಭಾಗಗಳು ಮತ್ತು ಪರಿಕರಗಳ ಮಾರಾಟ, ನಿರ್ವಹಣೆ ಮತ್ತು ದುರಸ್ತಿಯಲ್ಲಿ ತೊಡಗಿಸಿಕೊಂಡಿರುವ ಜತ್ತಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಅತ್ಯಂತ ಹೆಸರುವಾಸಿಯಾದ ಸಂಘಟಿತವಾದ ಖಾಸಗಿ ಸಂಸ್ಥೆಯಾಗಿದೆ.

Hotel_chandrikaಮಿಲ್ಲರ್ಸ್ ರಸ್ತೆ ಮತ್ತು ಕನ್ನಿಂಗ್ ಹ್ಯಾಮ್ ರಸ್ತೆಯ ಆರಂಭಕ್ಕೆ ಹೊಂದಿಕೊಂಡಿರುವ ದಕ್ಷಿಣ ಮತ್ತು ಉತ್ತರ ಭಾರತೀಯ ರುಚಿಕರ ಮತ್ತು ಶುಚಿಕರವಾದ ಆಹಾರಕ್ಕಾಗಿ ಹೆಸರುವಾಸಿಯಾಗಿರುವ ಚಂದ್ರಿಕ ಹೋಟೇಲ್ ಸಹಾ ಇದ್ದು, ತನ್ನ ವಿಶಿಷ್ಟವಾದ ತ್ವರಿತ ಸೇವೆಯಿಂದಾಗಿ ಸದಾಕಾಲವೂ ಜನಸಂದಣಿಯಿಂದ ಕೂಡಿರುವ ಹೋಟೆಲ್ ಆಗಿದೆ.

90ರ ದಶಕದ ಅಂತ್ಯದಲ್ಲಿ ಸಂಜಯನಗರಕ್ಕೆ ಸ್ಥಳಾಂತರ ಗೊಳ್ಳುವ ವರೆಗೂ ದೇಶ ಮತ್ತು ವಿದೇಶಗಳನ್ನು ಡಿಜಿಟಲ್ ಮೂಲಕ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದ್ದ ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ (VSNL) ಜತ್ತಿ ಮೋಟರ್ಸ್ ಪಕ್ಕದಲ್ಲೇ ಇದ್ದ ಕಟ್ಟಡದಲ್ಲಿ ಇದ್ದದ್ದು ಈಗ ಇತಿಹಾಸ.

ABhavan2ಇನ್ನು ಪೂರ್ವಭಾಗದ ಬೆಂಗಳೂರಿನ ಕಲಾರಸಿಕರಿಗೆ ಮನೋರಂಜನೆಯನ್ನು ಒದಗಿಸುವ ಸಲುವಾಗಿ ಸರ್ಕಾರವೇ ಮಿಲ್ಲರ್ಸ್ ರಸ್ತೆಯ ಜೈನ್ ಆಸ್ಪತ್ರೆಗೆ ಹೊಂದಿಕೊಂಡೇ ಇರುವಂತಹ ಸ್ಥಳದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವಷ್ಟರ ಸಾಮರ್ಥ್ಯ ಇರುವ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳನ್ನು ಹೊಂದಿರುವಂತಹ ಅಂಬೇಡ್ಕರ್ ಭವನ ಎಂಬ ರಂಗಮಂದಿರವನ್ನು ನಿರ್ಮಿಸಿದ್ದು ಸರ್ಕಾರೀ ಮತ್ತು ಖಾಸಗೀ ಸಭೆ ಸಮಾರಂಭಗಳು, ಕಮ್ಮಟಗಳು ನೃತ್ಯ ಮತ್ತು ನಾಟಕಗಳು ನಡೆಯುತ್ತಲೇ ಇರುತ್ತದೆ. ಈ ಅಂಬೇಡ್ಕರ್ ಭವನದ ಎದುರಿಗೆ ಚಿಕ್ಕದಾದರೂ ಅತ್ಯಂತ ಚೊಕ್ಕವಾದ ಮತ್ತು ಚೊಕ್ಕದಾದ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಗೆ ಸೇರಿರುವ ಕ್ರೀಡಾಂಗಣವಿದ್ದು, ಆಗ್ಗಾಗ್ಗೆ ಇಲ್ಲಿ ಅನೇಕ ಕ್ರೀಡಾಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ.

aiyappa_Temple2ಬೆಂಗಳೂರಿನ ಉತ್ತರ ಲೋಕಸಭಾ ಸದಸ್ಯರ ಸಾಂಸದರ ಕಛೇರಿಯೂ ಸಹಾ ಇದೇ ಮಿಲ್ಲರ್ಸ್ ರಸ್ತೆಯಲ್ಲಿದ್ದರೆ, ಅದರ ಹತ್ತಿರದಲ್ಲೇ ಪ್ರಸಿದ್ಧವಾದ ಅಯ್ಯಪ್ಪ ಸ್ವಾಮಿಯ ದೇವಾಲಯವಿದ್ದು, ಹಬ್ಬ ಹರಿದಿನಗಳು ಮತ್ತು ಅದರಲ್ಲು ವಿಶೇಷವಾಗಿ ನವೆಂಬರ್ ನಿಂದ ಜನವರಿ ತಿಂಗಳ ಅಯ್ಯಪ್ಪ ಯಾತ್ರೆಯ ಸಮಯದಲ್ಲಿ ಅತ್ಯಂತ ವಿಶೇಷ ಪೂಜೆ ಪುನಸ್ಕಾರಗಳು ನಡೆದು ಆಸ್ತಿಕರ ಹೃನ್ಮನಗಳನ್ನು ತಣಿಸುತ್ತಿದೆ.

Cariappaಸೆಪ್ಟೆಂಬರ್ 26, 2018ರಂದು ವಸಂತನಗರದ ಕೊಡವ ಸಮಾಜದ ಬಳಿಯ ಮಿಲ್ಲರ್ಸ್ ರಸ್ತೆ ಜಂಕ್ಷನ್‌ನಲ್ಲಿ ಭಾರತೀಯ ಸೇನೆಯ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆಗಿದ್ದ ಫೀಲ್ಡ್ ಮಾರ್ಷಲ್ ಕೊಡಂಡೇರ ಮಾದಪ್ಪ ಕರಿಯಪ್ಪ (K.M.Cariappa) ಅವರ ಕಂಚಿನ ಪ್ರತಿಮೆಯನ್ನು ಅಂದಿನ ಉಪಮುಖ್ಯಮಂತ್ರಿಗಳು ಹಾಗೂ ಇಂದಿನ ಗೃಹ‍ಸಚಿವರಾಗಿರುವ ಡಾ.ಜಿ.ಪರಮೇಶ್ವರ ಅನಾವರಣಗೊಳಿಸಿದ್ದರು. ಸದ್ಯಕ್ಕೆ ನಗರ ಪಾಲಿಕೆಯ ಆ ವೃತ್ತದಲ್ಲಿ ಚಂದನೆಯ ಗಿಡ ಮರಗಳನ್ನು ಬೆಳಸಿ ವಿವಿಧ ವನ್ಯಮೃಗಳು ಪ್ರತಿಮೆಗಳನ್ನು ಇರಿಸಿ ಆ ವೃತ್ತವನ್ನು ಮತ್ತಷ್ಟು ಆಕರ್ಷಣೀಯವಾಗಿಸಿದೆ.

ಈ ಪ್ರದೇಶವು ನಗರದ ವಾಣಿಜ್ಯ ಕೇಂದ್ರಕ್ಕೆ ಬಹಳ ಹತ್ತಿರದಲ್ಲಿದ್ದು, ಕಂಟೋನ್ಮೆಂಟ್ ರೈಲ್ವೇ ನಿಲ್ಡಾಣದಿಂದ ಬೆಂಗಳೂರಿನ ಮಧ್ಯ ಭಾಗಕ್ಕೆ ಸಂಪರ್ಕಿಸುವ ಮಾರ್ಗವಾಗಿರುವ ಕಾರಣ, ಈ ರಸ್ತೆಯಲ್ಲಿ ವಿಪರೀತವಾದ ಟ್ರಾಫಿಕ್ ಸಮಸ್ಯೆಯ ಕಾರಣ ಕೆಲವು ವರ್ಷಗಳಿಂದ ಈ ರಸ್ತೆಯನ್ನು ಏಕಮುಖ ಸಂಚಾರದ ರಸ್ತೆಯನ್ನಾಗಿ ಮಾಡಿರುವುದು ಸ್ವಾಗತಾರ್ಹವಾಗಿದೆ.

ಅರೇ ರಸ್ತೆಗಳ ಹೆಸರಿನಲ್ಲಿ ಏನಿದೆ? ಎಂದು ಭಾವಿಸುವವರಿಗೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ರಸ್ತೆಗಳು ಮತ್ತು ಬಡಾವಣೆಗಳ ಹೆಸರಿನ ಹಿಂದೆ ಎಷ್ಟೊಂದು ಇತಿಹಾಸ ಇರುತ್ತದೆ ಮತ್ತು ಎಷ್ಟೊಂದು ಜನರ ಶ್ರಮ, ತ್ಯಾಗ ಮತ್ತು ಬಲಿದಾನಗಳು ಇರುತ್ತದೆ ಎಂಬುದನ್ನು ತಿಳಿದಾಗ ಅದರ ಬಗ್ಗೆ ಗೌರವವು ಹೆಚ್ಚಾಗುತ್ತದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

2 thoughts on “ಮಿಲ್ಲರ್ಸ್ ರಸ್ತೆ

  1. ನಮಸ್ಕಾರ ಸರ್, ಚಿಕ್ಕಂದಿನಲ್ಲಿ ನಟ ಸಾರ್ವಭೌಮ ರಾಜಕುಮಾರರ ಚಿತ್ರಗಳ ವಿಮರ್ಶೆ ಮಾಡಿ ಬರೆಯುವಾಗ ” ರಾಜಕುಮಾರ್ ಮಾಮೂಲು ” ಎಂದು ಚುಟುಕಾಗಿ ಬರೆಯುವವರಿದ್ದರು, ಅರ್ಥಾತ್ ಎಂದಿನ ಅತ್ಯುತ್ತಮ ಗುಣಮಟ್ಟ ಇಲ್ಲಿಯೂ ಇದೆ ಎಂದು.
    ಈಗ ನಿಮ್ಮ ಈ ಲೇಖನದ ವಿಮರ್ಶೆ ಓದಿ

    ” ಶ್ರೀಕಂಠ ಬಾಳಗಂಚಿಯವರು ಮಾಮೂಲು “🙂🙂

    Liked by 1 person

Leave a reply to ಶ್ರೀಕಂಠ ಬಾಳಗಂಚಿ Cancel reply