ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂಬ ಹೆಸರಿನಿಂದ ಪ್ರಖ್ಯಾತವಾಗುವುದಕ್ಕೆ ಮುನ್ನವೇ ಬೆಂಗಳೂರಿನಲ್ಲಿ ವಿಶ್ವಪ್ರಸಿದ್ಧ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಇದ್ದ ಕಾರಣ ಉದ್ಯಾನನಗರಿ ಎಂದೇ ಪ್ರಖ್ಯಾತಿ ಪಡೆದಿತ್ತು. ಬೆಂಗಳೂರಿನ ಉಪ್ಪಾರಹಳ್ಳಿ ಅರ್ಥಾತ್ ಮಾವಳ್ಳಿಯಲ್ಲಿರುವ ಲಾಲ್‌ಬಾಗಿಗೆ ಮಾವಳ್ಳಿ ಟಿಫನ್ ರೂಮ್ (MTR) ಕಡೆಯಿಂದ ಲಾಲ್‌ಬಾಗಿನ ಪಶ್ಚಿಮ ದ್ವಾರದ ಕಡೆಗೆ ಹೋಗುವ ರಸ್ತೆಯನ್ನು ಕ್ರುಂಬಿಗಲ್ ರಸ್ತೆ ಎಂದು ಕರೆಯಲಾಗುತ್ತದೆ. ಹಾಗಾದರೆ ಈ ಕೃಂಬಿಗಲ್ ಎಂದರೆ ಯಾರು? ಅವರ ಸಾಧನೆಗಳೇನು? ಆವರ ಹೆಸರನ್ನು ಈ ರಸ್ತೆಗೇ ಏಕೆ ಇಡಲಾಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
1760ರಲ್ಲಿ ಮೈಸೂರು ಸಂಸ್ಥಾನದಲ್ಲಿ ಸೈನ್ಯಾಧಿಪತಿಯಾಗಿದ್ದ ಹೈದರಾಲಿಯು ಮೈಸೂರು ಸಂಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮೊಘಲ್ ಉದ್ಯಾನಗಳ ಮಾದರಿಯಲ್ಲಿ ಉದ್ಯಾನವನ್ನು ನಿರ್ಮಿಸಲು ಯೋಚಿಸಿ. ಉಪ್ಪಾರಹಳ್ಳಿ ಅರ್ಥಾತ್ ಮಾವಳ್ಳಿಯಲ್ಲಿ ಸುಮಾರು 30 ಎಕರೆ ಜಾಗದಲ್ಲಿ ಉದ್ಯಾನವನ್ನು ನಿರ್ಮಿಸಿ ಅದರಲ್ಲಿ ವಿವಿಧ ರೀತಿಯ ಸಸ್ಯಗಳನ್ನು ಬೆಳೆಸಿ ಅದು ಒಂದು ಹಂತಕ್ಕೆ ಬಂದಾಗ ಆ ಸಸ್ಯೋದ್ಯಾನವನ್ನು ನೋಡಲು ಹೈದರ್ ಮಗ ಟಿಪ್ಪು ಸುಲ್ತಾನ್ ಬಂದಾಗ, ಹೇಗಿದೇ ಈ ತೋಟ? ಎಂದು ಕೇಳಿದಾಗ, ಅಲ್ಲಿನ ಕೆಂಪುಗುಲಾಬಿಗಳನ್ನು ನೋಡಿ ಏ ಲಾಲ್ ಬಾಗ್ ಹೈ (ಇದು ಕೆಂಪು ತೋಟ) ಎಂದು ಹೇಳಿದ್ದನ್ನೇ ಕೇಳಿ ಆ ಉದ್ಯಾನವನಕ್ಕೆ ಲಾಲ್‌ಬಾಗ್ ಎಂದು ಹೆಸರಿಸಲಾಯಿತು ಎಂದು ಬಲ್ಲವರು ಹೇಳುತ್ತಾರೆ.
ಅಂದು ಆರಂಭವಾದ ಲಾಲ್‌ಬಾಗ್ ನಲ್ಲಿ ದೇಶ ವಿದೇಶಗಳಿಂದ ವಿವಿಧ ರೀತಿಯ ಗಿಡಮರಗಳನ್ನು ತರಿಸಿ ಅಲ್ಲಿ ಅವುಗಳನ್ನು ಬೆಳೆಸಿ, ಫಲಪುಷ್ಪ ಪ್ರದರ್ಶನಗಳನ್ನು ಏರ್ಪಡಿಸಿ ಇಂದು ವಿಶ್ವವಿಖ್ಯಾತರಾಗುವಂತೆ ಮಾಡಲು ಕಾರಣೀಭೂತರಾದವರೇ, ಜಿ. ಎಚ್. ಕೃಂಬಿಗಲ್ (ಗುಸ್ಟಾವ್ ಹರ್ಮನ್ ಕೃಂಬಿಗಲ್) ಎಂದರೂ ಅತಿಶಯವಾಗದರು .ಬೆಂಗಳೂರು ಬಹಳ ಹಿಂದಿನಿಂದಲೂ ಉದ್ಯಾನ ನಗರಿ ಎಂದು ಹೆಸರುವಾಸಿಯಾಗಿದ್ದರೂ, ಇಡೀ ಬೆಂಗಳೂರಿಗೆ ಬಹುತೇಕ ಹಣ್ಣು ಮತ್ತು ತರಕಾರಿಗಳು ಸರಬರಾಜು ಆಗುವುದೇ ಕೋಲಾರ ಜಿಲ್ಲೆಯಿಂದ ಎನ್ನುವುದು ಗಮನಾರ್ಹವಾಗಿದೆ. ಈ ಹಿಂದೆ ಕೇವಲ ತಮ್ಮ ಜೀವನಾವಶ್ಯಕ್ಕೆ ಅಗತ್ಯವಾದ ರಾಗಿ, ಭತ್ತ, ಕಾಳುಗಳ ವ್ಯವಸಾಯ ಮಾಡುತ್ತಿದ್ದ ಅವಿಭಜಿತ ಕೋಲಾರ ಜಿಲ್ಲೆಯ ರೈತರುಗಳಿಗೆ ತೋಟಗಾರಿಕೆ ಎಂಬ ವಿಷಯವನ್ನು ವಿಶಧವಾಗಿ ಪರಿಚಯಿಸಿ, ಅಡಿಕೆ, ತೆಂಗು, ಬಾಳೆಗಳಲ್ಲದೇ ದ್ರಾಕ್ಷಿ, ವಿವಿಧ ಬಗೆಯ ತರಕಾರಿಗಳನ್ನು ವಾಣಿಜ್ಯ ರೂಪದಲ್ಲಿ ಬೆಳೆಯಲು ಪ್ರೋತ್ಸಾಹಿಸಿ ಅಲ್ಲಿನ ರೈತರುಗಳು ತಮ್ಮ ಆದಾಯವನ್ನು ಹೆಚ್ಚಿಸಿ, ಅವರುಗಳು ಸ್ವಾವಲಂಭಿಗಳಾಗುವಂತೆ ಮಾಡಿದ ಕೀರ್ತಿಯೂ ಸಹಾ ಶ್ರೀಯುತ ಕೃಂಬಿಗಲ್ ಅವರಿಗೆ ಸಲ್ಲುತ್ತದೆ ಎನ್ನುವುದು ಗಮನಾರ್ಹವಾದ ಅಂಶವಾಗಿದೆ.
ಜರ್ಮನಿಯ ಡ್ರೆಸಡೆನ್ ಬಳಿಯ ಲೊಹಮೆನ್ ಎಂಬಲ್ಲಿ 1865ರ ಡಿಸೆಂಬರ್ 18ರಂದು ಗುಸ್ಟಾವ್ ಹರ್ಮನ್ ಕೃಂಬಿಗಲ್ ಅವರ ಜನನವಾಗುತ್ತದೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಿಲ್ಸಡ್ರಫ್ ಮತ್ತು ಡ್ರೆಸಡೆನ್ ಪಟ್ಟಣಗಳಲ್ಲಿ ಗಳಿಸಿದ ನಂತರ ಪಿಲಿನಿಟ್ಜ್ ಎಂಬಲ್ಲಿ ತೋಟಗಾರಿಕಾ ತರಬೇತಿ ಪಡೆದ ಕೃಂಬಿಗಲ್ 1884ರಲ್ಲಿ ಸ್ಕವೆರಿನ್ ಮತ್ತು 1885-87 ಅವಧಿಯಲ್ಲಿ ಹಾಂಬರ್ಗ್ ಪ್ರದೇಶಗಳ ಉದ್ಯಾನ ನಿರ್ವಹಣೆ ಮಾಡಿ ತೋಟಗಾರಿಕಾ ವಿಭಾಗದಲ್ಲಿ ತಕ್ಕಮಟ್ಟಿಗಿನ ಜ್ಣಾನವನ್ನು ಬೆಳೆಸಿಕೊಂಡು 1888ರಲ್ಲಿ ಇಂಗ್ಲೆಂಡಿಗೆ ಬರುತ್ತಾರೆ, ಇಂಗ್ಲೆಂಡಿನ ಹೈಡ್ ಪಾರ್ಕ್ ಮತ್ತು ಕ್ಯು ಎಂಬಲ್ಲಿನ ರಾಯಲ್ ಬೊಟಾನಿಕಲ್ ಗಾರ್ಡನ್ ಉದ್ಯಾನವನದಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ರಂಬಿಗಲ್ ಅವರನ್ನು ಕಂಡು ಅವರ ಕಾರ್ಯತತ್ಪರತೆಯನ್ನು ಮೆಚ್ಚಿದ ಅಂದಿನ ಬರೋಡಾ ರಾಜರಾದ ಶ್ರೀ ಸಯ್ಯಾಜಿರಾವ್ ಅವರು ತಮ್ಮ ಸಂಸ್ಥಾನದಲ್ಲಿರುವ ಉದ್ಯಾನವನಗಳ ಕ್ಯುರೇಟರ್ ಆಗಿ 1893ರಲ್ಲಿ ಭಾರತಕ್ಕೆ ಕರೆತಂದ ನಂತರ ನೋಡ ನೋಡುತ್ತಿದ್ದಂತೆಯೇ ಬರೋಡ ಸಂಸ್ಥಾನದಲ್ಲಿ ಅನೇಕ ಉದ್ಯಾನವನಗಳು ನಳನಳಿಸುವಂತೆ ಅತ್ಯುತ್ತಮ ರೀತಿಯಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸುತ್ತಾರೆ.
ಹೇಳೀ ಕೇಳಿ ಬರೋಡ ಸಂಸ್ಥಾನ ಮತ್ತು ಮೈಸೂರು ಸಂಸ್ಥಾನದ ಅರಸರಿಗೂ ಗಳಸ್ಯ ಕಂಠಸ್ಯದಂತಹ ಸ್ನೇಹ ವಿದ್ದ ಕಾರಣ, ಕ್ರಂಬಿಗಲ್ ಅವರ ಕೆಲಸವನ್ನು ಮೆಚ್ಚಿದ ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬರೋಡ ರಾಜರ ಅಪ್ಪಣೆಯನ್ನು ಪಡೆದು ಕೊಂಡು ಕೃಂಬಿಗಲ್ ಅವರನ್ನು ಮೈಸೂರು ಸಂಸ್ಥಾನಕ್ಕೆ 1908ಕ್ಕೆ ಕರೆತಂದು ಕ್ರಂಬಿಗಲ್ ಅವರನ್ನು ಬೆಂಗಳೂರಿನ ಲಾಲ್ ಬಾಗ್, ಸರ್ಕಾರಿ ತೋಟಗಳು ಮತ್ತು ರಾಜರ ಅರಮನೆ ತೋಟಗಳ ಅಧೀಕ್ಷಕರಾಗಿ ನೇಮಕಾತಿ ಮಾಡುತ್ತಾರೆ.
1908 ರಿಂದ 1932ರ ಕಾಲ ಸುಧೀರ್ಘವಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಿದ ಕೃಂಬಿಗಲ್ ಅವರು ಅಂತಿಮವಾಗಿ ತೋಟಗಾರಿಕಾ ನಿರ್ದೇಶಕರಾಗಿ ಜುಲೈ 1, 1932 ರಂದು ಸೇವೆಯಿಂದ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿಯೇ ವಿಶ್ರಾಂತ ಜೀವನ ನಡೆಸುತ್ತಿದ್ದರೂ, ತೋಟಗಾರಿಗಾ ವಿಷಯದಲ್ಲಿ ಅವರಿಗಿದ್ದ ಅಪಾರವಾದ ಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಆವರ 67ನೇ ವಯಸ್ಸಿನಲ್ಲಿಯೂ ಮೈಸೂರು ಮಹಾರಾಜರು ಕೃಂಬಿಗಲ್ ಅವರನ್ನು ತಮ್ಮ ತೋಟಗಾರಿಕೆ ಮತ್ತು ಕೃಷಿ ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳುತ್ತಾರೆ ಎಂದರೆ ಕೃಂಬಿಗಲ್ ಅವರ ಕೆಲಸದ ಅನುಭವ ವಿಸ್ತಾರ ಹೇಗಿತ್ತು ಎಂಬುದರ ಅರಿವಾಗುತ್ತದೆ. ನಂತರದ ದಿನಗಳಲ್ಲಿ ಕೇವಲ ಬರೋಡ ಮತ್ತು ಮೈಸೂರು ಸಂಸ್ಥಾನಗಳಲ್ಲದೇ, ಮಹಾತ್ಮಾಗಾಂಧಿಯವರ ಸಮಾದಿಯಾದ ರಾಜ್ ಘಾಟ್ ವಿನ್ಯಾಸವೂ ಸೇರಿದಂತೆ ದೇಶಾದ್ಯಂತ ವಿವಿಧ ರಾಜ್ಯಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿ ದೇಶದಲ್ಲಿನ ನೂರಾರು ಉದ್ಯಾನವನಗಳಿಗೆ ಕಾಯಕಲ್ಪ ನೀಡಿದ ಖ್ಯಾತಿ ಶ್ರೀ ಕೃಂಬಿಗಲ್ ಅವರದ್ದಾಗಿದೆ.
ಮೈಸೂರು ಸಂಸ್ಥಾನಕ್ಕೆ ಸೇರಿಕೊಂಡ ಕೃಂಬಿಗಲ್ ಆವರು ಅಂದಿನ ಕಾಲದಲ್ಲೇ ಅಸಂಖ್ಯಾತ ಸುಂದರ ಉದ್ಯಾನವನಗಳು ಮೈಸೂರು ಸಂಸ್ಥಾನದಲ್ಲಿ ಇದ್ದರೂ, ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿ ಹೋಗಿದ್ದನ್ನು ಮನಗಂಡು ಅವುಗಳೆಲ್ಲದರ ನಿರ್ವಹಣೆಗೆಗಾಗಿ, ಸರ್ಕಾರಿ ತೋಟಗಳ ಇಲಾಖೆ ಎಂಬ ಪ್ರತ್ಯೇಕ ಇಲಾಖೆಯನ್ನು ಆರಂಭಿಸಿ ಆ ಇಲಾಖೆಯ ಮೇಲ್ವಿಚಾರಕ ಅರ್ಥಾತ್ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ತೋಟಗಾರಿಕೆಯಲ್ಲಿದ್ದ ಅವರಿಗಿದ್ದ ಅಪಾರವಾದ ಸಮರ್ಪಣಾ ಮನೋಭಾವದ ಮತ್ತು ಪರಿಶ್ರಮದಿಂದಾಗಿ, ವಿಶ್ವದ ಬಹುತೇಕ ಪ್ರಮುಖ ಸಸ್ಯೋದ್ಯಾನಗಳ ಜೊತೆ ವ್ಯವಹರಿಸಿ, ಅಲ್ಲಿಂದ ನೂರಾರು ವಿದೇಶೇ ಸಸ್ಯಗಳನ್ನು ಲಾಲ್ ಬಾಗ್ ಸಸ್ಯೋದ್ಯಾನಕ್ಕೆ ತರಿಸಿ, ನೆಟ್ಟಿದ್ದರಿಂದ ಲಾಲ್ ಬಾಗ್ ನ, ಸಸ್ಯ ಸಂಪತ್ತು ಈ ಹಿಂದೆಗಿಂತಲೂ ಗಣನೀಯವಾಗಿ ವಿಸ್ತೃತಗೊಳಿಸಿ ಲಾಲ್ ಬಾಗ್ ವಿಶ್ವವಿಖ್ಯಾತವಾಗುವಂತೆ ಮಾಡಿದರು ಎಂದರೂ ಅತಿಶಯವಾಗದು.
ಕೇವಲ ತೋಟಗಾರಿಕಾ ವಿಷಯವಲ್ಲದೇ ವಾಸ್ತುಶಿಲ್ಪದಲ್ಲಿಯೂ ಪ್ರಾವಿಣ್ಯತೆ ಪಡೆದಿದ್ದ ಕೃಂಬಿಗಲ್ ಅವರಿಂದಲೇ 1927 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 25 ವರ್ಷದ ಆಡಳಿತದ ಬೆಳ್ಳಿ ವರ್ಷಾಚರಣೆ ಸಂದರ್ಭದಲ್ಲಿ ಅಂದಿನ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಆಯ್ದ ನೂರು ಹಳ್ಳಿಗಳಲ್ಲಿ ಎಂಟು ಸ್ತಂಭಗಳಿಂದ ಕೂಡಿದ ವೃತ್ತ ಮತ್ತು ಭಜನೆ ಮನೆಗಳ ನಿರ್ಮಾಣದ ವಿನ್ಯಾಸವನ್ನು ಮಾಡಿಸುತ್ತಾರೆ. ಹಾಗೆ ನಿರ್ಮಿಸಿದ ಸ್ತಂಭಗಳನ್ನು ಇಂದಿಗೂ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಈಗಲೂ ಆ ನೋಡಬಹುದಾಗಿದೆ. ಕೃಂಬಿಗಲ್ ಅವರ ಈ ಕಾರ್ಯತತ್ಪರತೆಯಿಂದ ಪ್ರಭಾವಿತರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ದಸರಾ ವಸ್ತುಪ್ರದರ್ಶನ ಸಮಿತಿಗೆ ಕೃಂಬಿಗೆಲ್ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಿ, ದಸರಾ ವಾರ್ಷಿಕ ಪ್ರದರ್ಶನದ ಯೋಜನೆ ಮತ್ತು ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಕೃಂಬಿಗಲ್ ಆವರಿಗೆ ವಹಿಸಿಕೊಟ್ಟಿದ್ದರು.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ದೇಶಕಂಡ ಸುಪ್ರಸಿದ್ಧ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ಮೈಸೂರಿನ ಕನ್ನಂಬಾಡಿಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ 1911 ರಲ್ಲಿ ಕಟ್ಟಲು ಆರಂಭಿಸಿದ ಅಣೆಕಟ್ಟು 1931ರಲ್ಲಿ ಮುಕ್ತಾಯವಾದಾಗ, ಆ ಪ್ರದೇಶದಲ್ಲಿ ಸುಂದರವಾದ ಉದ್ಯಾನವನ್ನು ನಿರ್ಮಿಸುವ ಜವಾಬ್ಧಾರಿ ಕೃಂಬಿಗಲ್ ಅವರ ಹೆಗಲಿಗೆ ಬಿದ್ದಾಗ, ಕನ್ನಂಬಾಡಿ ಕಟ್ಟೆಯ ಹರವಿನಲ್ಲಿ ಕಣ್ಮನ ಸೆಳೆಯುವ, ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸುವ, ಉದ್ಯಾನವನಗಳ ರಾಣಿ, ಎಂದೆನಿಸುವ ವಿಶ್ವವಿಖ್ಯಾತ ಬೃಂದಾವನ ಉದ್ಯಾನವನ್ನು ಯಶಸ್ವಿಯಾಗಿ ನಿರ್ಮಿಸಿ ನಾಡಿಗೆ ಅರ್ಪಿಸುತ್ತಾರೆ. 1934ರಲ್ಲಿ ಕೆಮ್ಮಣ್ಣುಗುಂಡಿಯಲ್ಲಿದ್ದ ನೈಸರ್ಗಿಕ ಗಿರಿಧಾಮಕ್ಕೆ ತಮ್ಮ ಕಲಾವಂತಿಕೆಯ ಸ್ಪರ್ಶದ ಮೂಲಕ ಸುಂದರವಾದ ಉದ್ಯಾನವನವನ್ನು ನಿರ್ಮಿಸಿದ್ದಲ್ಲದೇ, ಅಲ್ಲೊಂದು ತೋಟಗಾರಿಕಾ ನರ್ಸರಿಯನ್ನೂ ಆರಂಭಿಸಿದ್ದು ಇಂದಿಗೂ ಅದು ಅತ್ಯುನ್ನವಾಗಿ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ. ಅದೇ ರೀತಿ ಬೆಂಗಳೂರಿನ ಸಮೀಪದದಲ್ಲೇ ಚಿಕ್ಕಬಳ್ಳಾಪುರದ ಹತ್ತಿರವಿದ್ದ ನೈಸರ್ಗಿಕ ಗಿರಿಧಾಮ ನಂದಿಬೆಟ್ಟದತ್ತ ತಮ್ಮ ಚಿತ್ತವನ್ನು ಹರಿಸಿ ನಂದಿ ಬೆಟ್ಟದ ಗಿರಿಧಾಮವನ್ನು ಸುಂದರಗೊಳಿಸಿದರು. ಅದೇ ರೀತಿಯಲ್ಲಿ ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮತ್ತು ಕರ್ನಾಟಕದ ಊಟಿ ಎಂದೇ ಪ್ರಖ್ಯಾತವಾಗಿರುವ ಮುಳ್ಳಯ್ಯನ ಗಿರಿ ಬೆಟ್ಟದ ತಪ್ಪಲಿನಲ್ಲಿರುವ ಸೀತಾಬೆಟ್ಟದ ಕಾಲಬೈರವೇಶ್ವರ ದೇವಸ್ಥಾನವನ್ನು ಸಂರಕ್ಷಣೆ ಮಾಡಲು ನಿಯಮಗಳನ್ನು ರೂಪಿಸಿ ಸರ್ಕಾರದ ಮುಖಾಂತರ ಅನುಷ್ಠಾನಕ್ಕೆ ತರಲು ಅವರು ಸಹಿ ಮಾಡಿರುವ ಫಲಕವನ್ನು ಇಂದಿಗೂ ಸಹಾ ಅಲ್ಲಿ ಕಾಣಬಹುದಾಗಿದೆ.
ಹೀಗೆ ನಂದಿ ಬೆಟ್ಟದ ಗಿರಿಧಾಮದ ನಿರ್ಮಾಣ ಸಂಧರ್ಭದಲ್ಲಿಯೇ ಯಾವುದೇ ರೀತಿಯ ನದಿ ಪಾತ್ರವಿಲ್ಲದೇ ಕೇವಲ ಮಳೆಯಾಧಾರಿತ ಕೃಷಿ ಚಟುವಟಿಕೆಯಲ್ಲಿ ನಿರತರಾಗಿ ಬಹಳಷ್ಟು ಸಂಕಷ್ಟದಲ್ಲಿದ್ದ ಅವಿಭಜಿತ ಕೋಲಾರ ಜಿಲ್ಲೆಯ ರೈತರ ಬವಣೆಯನ್ನು ಹತ್ತಿರದಿಂದ ನೋಡಿದ ಕೃಂಬಿಗಲ್ ಅವರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಅನೇಕ ಹೊಸ ಹೊಸ ಸಸ್ಯಗಳು, ಹಣ್ಣು-ಹಂಪಲುಗಳು ಮತ್ತು ತರಕಾರಿಗಳನ್ನು ವಿದೇಶದಿಂದ ತಂದು ಅಲ್ಲಿನ ರೈತರಿಗೆ ಪರಿಚಯಿಸಿ ಅವುಗಳನ್ನು ವಾಣಿಜ್ಯ ರೂಪದಲ್ಲಿ ಬೇಸಾಯ ಮಾಡಲು ಪ್ರೋತ್ಸಾಹಿಸಿದರು. ಆರಂಭದಲ್ಲಿ ನೀಲಿ ದ್ರಾಕ್ಷಿ ಮತ್ತು ಸೀಬೇ ಹಣ್ಣುಗಳನ್ನು ಬೆಳೆಯಲು ಪ್ರೋತ್ಸಾಹಿಸಿದ ನಂತರ ದೂರದ ಶ್ರೀಲಂಕದಿಂದ ಸೀಮೆಬದನೇಕಾಯಿ ಬೀಜಗಳನ್ನು ತರಿಸಿ ಅದನ್ನು ಅಲ್ಲಿನ ರೈತ ಬಾಂಧವರಿಗೆ ಉಚಿತವಾಗಿ ವಿತರಣೆ ಮಾಡುವ ಮೂಲಕ ವರ್ಷಕ್ಕೊಮ್ಮೆ ಬೆಳೆಯುವ ದ್ರಾಕ್ಷಿ ಬೆಳೆಯ ಹಂದರದಲ್ಲಿಯೇ ಉಪಬೆಳೆಯಾಗಿ ಸೀಮೇಬದನೇ ಕಾಯಿ ಬೆಳೆಸುವ ಮೂಲಕ ಅಲ್ಲಿನ ರೈತರುಗಳ ಆರ್ಥಿಕ ಬೆಳವಣಿಗೆಗೆ ಕಾರಣೀಭೂತರಾದರು.
ಮೈಸೂರು ಸಂಸ್ಥಾನದ ತೋಟಗಾರಿಕಾ ನಿರ್ದೇಶಕರಷ್ಟೇ ಅಲ್ಲದೇ, ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದ ಉಸ್ತುವಾರಿಯಾಗಿಯೂ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಇಂದು ಪ್ರತಿ ವರ್ಷವೂ ಸುಮಾರು 3,00,000 ಸಂದರ್ಶಕರು ಬರುವ ಆ ವಸ್ತುಸಂಗ್ರಹಾಲಯದ ಕಟ್ಟಡಗಳು ಉತ್ತಮ ಸ್ಥಿತಿಯಲ್ಲಿ ಇರಲು ಪ್ರಮುಖ ಪಾತ್ರವಹಿಸಿದ್ದಲ್ಲದೇ, ಪ್ರತಿ ವರ್ಷವೂ ಹೊಸ ಹೊಸಾ ಪ್ರದರ್ಶನಗಳನ್ನು ಸೇರಿಸುತ್ತಲೇ ಹೋದರು. ತೋಟಗಾರಿಕೆಯಯಷ್ಟೇ ಅಲ್ಲದೇ, ಜನಾಂಗಶಾಸ್ತ್ರ, ಇತಿಹಾಸ ಮತ್ತು ಧರ್ಮಗಳ ವಿಜ್ಞಾನಗಳ ಅಧ್ಯಯನವನ್ನು ಉತ್ತೇಜಿಸುವ ಉದ್ದೇಶದಿಂದ 1909ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ದಿ ಮಿಥಿಕ್ ಸೊಸೈಟಿಯ 17 ಸಂಸ್ಥಾಪಕ ಸದಸ್ಯರಲ್ಲಿ ಕ್ರುಂಬಿಗೆಲ್ ಅವರೂ ಒಬ್ಬರಾಗಿದ್ದು, ಸುಮಾರು ವರ್ಷಗಳ ಕಾಲ ಅದರ ಗೌರವ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಲ್ಲದೇ, ಅಲ್ಲೊಂದು ಸುಂದರವಾದ ಗ್ರಂಥಾಲಯವನ್ನು ಪ್ರಾರಂಭಿಸಿ, ಅದಕ್ಕೆ ಅನೇಕ ಪುಸ್ತಕಗಳನ್ನು ಸಂಗ್ರಹಿಸುವುದರ ಜೊತೆಗೆ ಹೊಸಾ ಹೊಸಾ ಪುಸ್ತಕಗಳನ್ನು ಖರೀಧಿಸುವ ಸಲುವಾಗಿ ಆರ್ಥಿಕ ಸಂಗ್ರಹಣೆಗಾಗಿ ತಮ್ಮ ಕೊನೆಯ ದಿನಗಳವರೆಗೂ ಕೆಲಸವನ್ನು ಮಾಡಿದ್ದರು.
ಮೈಸೂರು ಸಂಸ್ಥಾನದ ತೋಟಗಾರಿಕಾ ನಿರ್ದೇಶಕ ಸ್ಥಾನದ ಜೊತೆಯಲ್ಲಿಯೇ ಕ್ರುಂಬಿಗೆಲ್ ಅವರು ಅಂದಿನ ಬ್ರಿಟಿಷ್ ಸೈನ್ಯದ ಸಹಾಯಕ ಪದಾತಿ ದಳವಾದ ಬೆಂಗಳೂರು ರೈಫಲ್ ಸ್ವಯಂಸೇವಕ ಸಂಸ್ಥೆ(BRV)ಯಲ್ಲಿಯೂ ತೊಡಗಿಸಿಕೊಂಡು ಲೆಫ್ಟಿನೆಂಟ್ ಹುದ್ದೆಯವರೆಗಗೆ ಅಲಂಕರಿಸಿದರು. ಯುರೋಪಿನಲ್ಲಿ ಮೊದಲ ಮಹಾಯುದ್ಧ ಪ್ರಾರಂಭವಾದ ಸುಮಾರು ಒಂದು ತಿಂಗಳ ನಂತರ ಆಗಸ್ಟ್ 27, 1914 ರಂದು ಅದಕ್ಕೆ ರಾಜೀನಾಮೆ ನೀಡಿದ್ದರಿಂದ ಕೋಪಗೊಂಡ ಅಂದಿನ ಬ್ರಿಟಿಷ್ ಸರ್ಕಾರ ಕುಂಬ್ರಿಗಲ್ ಅವರನ್ನು ಸುಮಾರು ಮೂರು ವರ್ಷಗಳ ಕಾಲ ಬಂಧಿಸಿ ನಂತರ ಬಿಡುಗಡೆ ಗೊಳಿಸಿದ್ದದ್ದು ಈಗ ಇತಿಹಾಸ.
ಇಂದು ಲಾಲ್‌ಬಾಗ್ ಎಂದಾಕ್ಷಣ ನಮ್ಮೆಲ್ಲರಿಗೂ ಥಟ್ ಎಂದು ಆಗಸ್ಟ್ 15 ಸ್ವಾತಂತ್ರದಿನಾಚರಣೆ ಮತ್ತು ಜನವರಿ 26ರ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಫಲಪುಷ್ಪ ಪ್ರದರ್ಶನದ ನೆನಪಾಗುತ್ತದೆ. 1912ರಲ್ಲೇ, ಬೆಂಗಳೂರಿನಲ್ಲಿ ಮೈಸೂರು ಉದ್ಯಾನ ಕಲಾ ಸಂಘ ಎಂಬ ಹವ್ಯಾಸಿ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಲಾಲ್‌ಬಾಗಿನಲ್ಲಿ ಸುಂದರ ಫಲ ಪುಷ್ಪ ಪ್ರದರ್ಶನಗಳನ್ನು ಎರ್ಪಡಿಸಿ ಬೆಂಗಳೂರಿನ ಸುತ್ತಮುತ್ತಲಿನ ರೈತರುಗಳನ್ನು ಪ್ರೋತ್ಸಾಹಿಸಿದರು. ಹೀಗೆ ಮೈಸೂರು ರಾಜ್ಯದಲ್ಲಿ ಹಣ್ಣು, ತರಕಾರಿ, ಪುಷ್ಪಗಳ ಬೇಸಾಯವನ್ನು ವಾಣಿಜ್ಯ ಪ್ರಮಾಣದಲ್ಲಿ ಬೆಳೆಸಲು ಸಹಾಯಕವಾಗುವಂತೆ ತೋಟಗಾರಿಕೆ ತರಬೇತಿ ಶಾಲೆಯನ್ನು ಸ್ಥಾಪಿಸಿ, ರೈತರ ಮಕ್ಕಳಿಗೆ ತೋಟಗಾರಿಕೆಯಲ್ಲಿ ತರಬೇತಿ ನೀಡುವ ಸಲುವಾಗಿ ಲಾಲ್‌ಬಾಗಿನಲ್ಲಿ ಬ್ಯೂರೋ ಆಫ್ ಎಕನಾಮಿಕ್ ಪ್ಲಾಂಟ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ವಾಣಿಜ್ಯ ಬೆಳೆಗಳ ವಿಸ್ತರಣೆಗೆ ಶ್ರಮಿಸಿದರು.
ತೋಟಗಾರಿಕಾ ಇಲಾಖೆಯ ಸಿಬ್ಬಂದಿಗೆ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವುದರ ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಗರ ಯೋಜನೆ ಮತ್ತು ನಾಗರಿಕ ವಿನ್ಯಾಸದ ಸಂದರ್ಶಕ ಪ್ರಾಧ್ಯಾಪಕರಾಗಿದ್ದ ಕಾರಣ, 1950 ರಲ್ಲಿ ಬೆಂಗಳೂರಿಗೆ 50 ವರ್ಷಗಳ ಮಾಸ್ಟರ್ ಪ್ಲಾನ್ ರಚಿಸಲು ರಚಿಸಲಾದ ಸಮಿತಿಯ ಸದಸ್ಯರನ್ನಾಗಿ ಕೃಂಬಿಗಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಎಗ್ಗಿಲ್ಲದೇ ಅಗಾಧವಾಗಿ ಬೆಳೆಯುತ್ತಿದ್ದ ಬೆಂಗಳೂರಿನ ಭವಿಷ್ಯದ ಬೆಳವಣಿಗೆಯನ್ನು ನಿಯಂತ್ರಿಸಿ ನಗರದ ಅವ್ಯವಸ್ಥಿತ ಮತ್ತು ಅನಿಯಮಿತ ವಿಸ್ತರಣೆಯನ್ನು ತಡೆಯುವುದು ಇದರ ಈ ಸಮಿತಿಯ ಉದ್ದೇಶವಾಗಿತ್ತು.
ನಿವೃತ್ತಿಯ ನಂತರವೂ ಸುಮ್ಮನೆ ಮನೆಯಲ್ಲಿ ಕೂರದೇ, ಪುರಾತನ ಸ್ಥಾವರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಹಾ ಅಪಾರ ಕಾರ್ಯಗಳನ್ನು ಕೈಗೊಂಡಿದ್ದರಲ್ಲದೇ, ವಿವಿಧ ದೇಶಗಳಿಂದ ಸಸ್ಯತಳಿಗಳನ್ನು ತರಿಸಿ ನಮ್ಮ ನಾಡಿನ ವಿವಿಧ ನಗರಗಳಲ್ಲಿನ ಉದ್ಯಾನವನಗಳು ಮತ್ತು ನಗರಗಳ ಪ್ರಮುಖ ಬೀದಿಗಳು ವರ್ಷವಿಡೀ ವಿವಿಧ ಋತುಮಾನಗಳ ಅನುಗುಣವಾಗಿ ಒಂದಲ್ಲಾ ಒಂದು ರೀತಿಯ ಹೂವಿನ ಶೋಭೆಯಲ್ಲಿ ನಲಿಯುವಂತೆ ಮಾಡುವಲ್ಲಿ ನಿರತರಾಗಿದ್ದರು. ಹೀಗೆ ದೂರದ ಜರ್ಮನಿಯಲ್ಲಿ ಹುಟ್ಟಿ ಬ್ರಿಟೀಷರ ಮೂಲಕ ಭಾರತಕ್ಕೆ ಬಂದು ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿಯೇ ಶಾಶ್ವತವಾಗಿ ನೆಲೆಸಿ ತಮ್ಮ ಕೊನೆ ಉಸಿರು ಇರುವವರೆಗೂ, ವಿವಿಧ ರೀತಿಯಲ್ಲಿಸ ಸೇವೆ ಸಲ್ಲಿಸುತ್ತಲೇ ಅಂತಿಮವಾಗಿ 1956ರ ಫೆಬ್ರವರಿ 8 ರಂದು ಬೆಂಗಳೂರಿನಲ್ಲಿಯೇ ವಿಧಿವಶರಾದರು.
ಹುಟ್ಟಿನಿಂದ ಪರಕೀಯರಾದರೂ, ಭಾರತವನ್ನೇ ತಮ್ಮ ತಾಯ್ನಾಡೆಂಬಂತೆ ಪ್ರೀತಿಸಿ, ತೋಟಗಾರಿಕಾ ಕ್ಷೇತ್ರದಲ್ಲಿ ಮರೆಯಲಾಗದ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿ, ಇಲ್ಲಿನ ರೈತರುಗಳಿಗೆ ವಾಣಿಜ್ಯ ಬೆಳೆಗಳನ್ನು ಪರಿಚಯಿಸಿ ಅವರ ಆರ್ಥಿಕ ಸುಧಾರಣೆಗೆ ಮಾರ್ಗದರ್ಶನ ನೀಡಿದ್ದಲ್ಲದೇ, ತೋಟಗಾರಿಕೆಯ ವಿವಿಧ ಮಾರ್ಗಗಳನ್ನು ಜನ ಸಾಮಾನ್ಯರಿಗೂ ತಿಳಿಯುವಂತೆ ತೋರಿಸಿಕೊಟ್ಟು ಅವರಿಂದಲೂ ತಮ್ಮ ತಮ್ಮ ಮನೆಗಳ ಮುಂದೆ ಸುಂದರವಾದ ಕೈ ತೋಟವನ್ನು ನಿರ್ಮಿಸಿ ಹಾಗೆ ಬೆಳೆದ ಗಿಡಗಳು ಮತ್ತು ಫಲಪುಷ್ಪಗಳನ್ನು ಲಾಲ್‌ಬಾಗಿನ ಫಲಪುಷ್ಪ ಪ್ರದರ್ಶನಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆಯುವಂತೆ ಪ್ರೋತ್ಸಾಹಿಸಿದ ಸೇವೆ ನಿಜಕ್ಕೂ ಅದ್ಭುತವೇ ಸರಿ.
1935 ರಲ್ಲಿ ಸಸ್ಯಕಾಶಿ ಲಾಲ್‌ಬಾಗಿನ ಮೂಲಕ ಹಾದು ಹೋಗುವ ರಸ್ತೆಯನ್ನು ಬದಲಿಸಿ ಸಸ್ಯಗಳನ್ನು ವಾಹನಗಳ ಮಾಲಿನ್ಯದಿಂದ ತಪ್ಪಿಸುವ ಸಲುವಾಗಿ ಮಾವಳ್ಳಿ ಜನರ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿ ಕೊಂಡು ಪಶ್ಚಿಮ ಭಾಗದಲ್ಲಿ ಲಾಲ್‌ಬಾಗನ್ನು ವಿಸ್ತರಿಸಿ ಅದಕ್ಕೊಂದು ತಡೆಗೋಡೆಯನ್ನು ಕಟ್ಟಿ ಅಲ್ಲಿ ನಿರ್ಮಿಸಿದ ಹೊಸ ರಸ್ತೆಗೆ ಮೈಸೂರು ಮಹಾರಾಜರು ಕೃಂಬಿಗಲ್ ರಸ್ತೆ ಎಂದು ನಾಮಕರಣ ಮಾಡುವ ಮೂಲಕ ಅವರ ಹೆಸರನ್ನು ಅಜರಾಮರವಾಗಿಸಿದರು.
ಮುಂದಿನ ಬಾರಿ ಕೃಂಬಿಗಲ್ ರಸ್ತೆಯ ಮೂಲಕ ಹಾದು ಹೋಗುವಾಗ, ಹೀಗೆ ಸಸ್ಯಶಾಸ್ತ್ರಜ್ಞ, ತೋಟಗಾರಿಕಾ ನಿರ್ದೇಶಕ, ಭೂದೃಶ್ಯ ಹಾಗೂ ನಗರದ ವಿನ್ಯಾಸಕಾರ, ವಾಸ್ತುಶಿಲ್ಪಿ, ಫಲೋದ್ಯಾನ ರೂಪಕ, ಸಸ್ಯ ಸಂರಕ್ಷಕ ಹೀಗೆ ಬಹುಮುಖ ಪ್ರತಿಭೆಯಾಗಿದ್ದ ಶ್ರೀ ಗುಸ್ಟಾವ್ ಹರ್ಮನ್ ಕೃಂಬಿಗಲ್ ಅವರು ಈ ನಾಡಿಗೆ ಸಲ್ಲಿಸಿರುವ ಸೇವೆಯನ್ನು ನೆನಪಿಸುತ್ತಾ ಅವರಿಗೊಂದು ಹೃದಯಪೂರ್ವಕವಾದ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸುವುದು ಪ್ರತಿಯೊಬ್ಬ ಕನ್ನಡಿಗರು ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರ ಆದ್ಯ ಕರ್ತವ್ಯವೇ ಆಗಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ