ನಮ್ಮ ಸನಾತನದ ಧರ್ಮದಲ್ಲಿ ವಾಮನ ಜಯಂತಿಗೆ ಹೆಚ್ಚಿನ ಮಹತ್ವವಿದೆ. ಪ್ರತಿದಿನವೂ ಪೂಜೆ ಮಾಡುವ ಸಮಯದಲ್ಲಿ ವಾಮನನ್ನು ನೆನೆಸಿಕೊಳ್ಳುವ ಸಲುವಾಗಿಯೇ ಅಚ್ಚುತಾಯ ನಮಃ ಅನಂತಾಯ ನಮಃ ಗೋವಿಂದಾಯನಮಃ ಎಂಬುದಾಗಿ ಭಗವಾನ್ ವಿಷ್ಣುವಿನ ವಿವಿಧ ನಾಮಾವಳಿಯನ್ನು ಹೇಳುವ ಸಮಯದಲ್ಲಿ ತ್ರಿವಿಕ್ರಮಾಯನಮಃ, ವಾಮನಾಯನಮಃ ಎಂದೂ ಸಹಾ ಹೇಳುತ್ತೇವೆ. ದೃಷ್ಟರ ಶಿಕ್ಷೆಗಾಗಿ ಮತ್ತು ಶಿಷ್ಟರ ರಕ್ಷಣೆಗಾಗಿ ಭಗವಾನ್ ಮಹಾವಿಷ್ಣುವು ಭೂಲೋಕದಲ್ಲಿ ಎತ್ತಿದ ದಶಾವತಾರಗಳಲ್ಲಿ ಐದನೇ ಅವರಾರವೇ. ವಾಮನಾವತಾರವಾಗಿದ್ದು, ಕುಳ್ಳಗಿನ ವಟು ತ್ರಿವಿಕ್ರಮಾಕರದಲ್ಲಿ ಬೆಳೆದು ಬಲಿ ಚತ್ರವರ್ತಿಯನ್ನು ಪಾತಾಳ ಲೋಕಕ್ಕೆ ತುಳಿಯುವ ಮೂಲಕ ಭೂಲೋಕದಲ್ಲಿ ಶಾಂತಿಯನ್ನು ನೆಲೆಸಲು ಅನುವು ಮಾಡಿಕೊಟ್ಟ ತ್ರಿವಿಕ್ರಮ ವಾಮನ ಜಯಂತಿಯ ವೈಶಿಷ್ಟ್ಯಗಳು ಮತ್ತು ಅದರ ಆಚರಣೆಯ ಕುರಿತಾಗಿ ತಿಳಿಯೋಣ ಬನ್ನಿ.
ಹಿಂದೂ ಧರ್ಮ ಗ್ರಂಥಗಳ ಪ್ರಕಾರ, ಈ ಹಿಂದೆ ಭೂ ಲೋಕದಲ್ಲಿ ಬಲಿ ಚಕ್ರವರ್ತಿ ಎಂಬ ಪ್ರಬಲ ರಾಕ್ಷಸ ರಾಜನಿದ್ದನು. ಆತ ಮಹಾವಿಷ್ಣುವಿನ ಭಕ್ತನಾಗಿದ್ದರೂ ಪರಮ ಅಹಂಕಾರಿ ಮತ್ತು ದಬ್ಬಾಳಿಕೆಯವನಾಗಿ ಮೂರು ಲೋಕವನ್ನು ಗೆದ್ದು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಬಯಸಿ, ಭೂಮಿ ಮತ್ತು ಪಾತಾಳ ಲೋಕವನ್ನು ಗೆದ್ದು, ಆಕಾಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ದೇವತೆಗಳ ರಾಜನಾದ ಇಂದ್ರನ ಜೊತೆ ಪದೇ ಪದೇ ಯುದ್ಧವನ್ನು ಮಾಡುತ್ತಿದ್ದನು. ಇಂತಹ ಯುದ್ದಹ್ದ ಸಮಯದಲ್ಲಿ ಇಂದ್ರನ ಪ್ರಭಲ ದಾಳಿಯಿಂದ ಅಸುರರ ರಾಜ ಬಲಿಯು ಪ್ರಜ್ಞಾಹೀನನಾಗಿ ಮರಣಶಯ್ಯೆಯಲ್ಲಿರುವಾಗ, ಅಸುರರ ಗುರುಗಳಾದ ಶ್ರೀ ಶುಕ್ರಾಚಾರ್ಯರು ಸಂಜೀವಿನಿ ಔಷಧಿಯನ್ನು ನೀದಿ ಬಲಿಯೂ ಸೇರಿದಂತೆ ಆ ಯುದ್ಧದಲ್ಲಿ ಅಸುನೀಗಿದ್ದ ಉಳಿದ ರಾಕ್ಷಸರಿಗೆ ಮರುಜೀವ ನೀಡುತ್ತಾರೆ. ತನ್ನ ಮೇಲೇ ಧಾಳಿ ನಡೆಸಿದ ಇಂದ್ರನ ವಿರುದ್ಧ ಕ್ರೋಧಗೊಂಡ ಬಲಿಚಕ್ರವರ್ತಿಯು ಮಹಾವಿಷ್ಣುವಿನನ್ನು ಕುರಿತಾಗಿ ಉಗ್ರ ತಪಸ್ಸು ಮಾಡಿ ಆ ತಪಸ್ಸಿನ ಮೂಲಕ ದೈವಿಕ ರಥ, ತ್ರಿಶೂಲ ಮತ್ತು ರಕ್ಷಾಕವಚವನ್ನು ವರವಾಗಿ ಗಳಿಸುವ ಮೂಲಕ ದೇವತೆಗಳಿಗಿಂತ ಶಕ್ತಿಶಾಲಿಯಾಗುತ್ತಾನೆ. ಈ ರೀತಿಯಾಗಿ ಪ್ರಭಲನಾದ ಬಲಿಯು ಇಂದ್ರನ ಪಟ್ಟವನ್ನು ಕಿತ್ತುಕೊಳ್ಳಲು ಹೊಂಚುಹಾಕುತ್ತಿರುವ ವಿಷಯವನ್ನು ತಿಳಿದ ಇಂದ್ರನು, ಬಲಿಯನ್ನು ಯುದ್ಧದಲ್ಲಿ ಸೋಲಿಸಲು ಆಸಾಧ್ಯ ಎಂಬುದನ್ನು ಅರಿತು ಅವನಿಂದ ರಕ್ಷಣೆ ಮಾಡಲು ಬಲಿ ಚಕ್ರವರ್ತಿಯ ಆರಾಧ್ಯದೈವನಾದ ಮಹಾವಿಷ್ಣುವಿನ ಮೊರೆ ಹೋಗುತ್ತಾನೆ.
ಹೀಗೆ ಇಂದ್ರನ ಕೋರಿಕೆಯನ್ನು ಮನ್ನಿಸಿದ ಭಗವಾನ್ ವಿಷ್ಣುವು ತನ್ನ ದಶಾವತಾರದ ಐದನೇ ಅವತಾರವಾಗಿ ವಾಮನನಾಗಿ ಅವತರಿಸಲು ನಿರ್ಧರಿಸಿ ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿಯ ದಿನದಂದು ಶ್ರವಣ ನಕ್ಷತ್ರದಲ್ಲಿ ಋಷಿ ಕಶ್ಯಪ ಮತ್ತು ಅದಿತಿ ದಂಪತಿಗಳ ಸುಪುತ್ರನಾಗಿ ಈ ಭೂಲೋಕದಲ್ಲಿ ಜನಿಸುತ್ತಾನೆ. ನೋಡಲು ಕುಳ್ಳಗೆ ಮುದ್ದಾಗಿದ್ದ ಆ ಮಗುವಿಗೆ ವಾಮನ ಎಂದು ಹೆಸರಿಡುತ್ತಾರೆ. ಕಾಲ ಕಾಲಕ್ಕೆ ತಕ್ಕಂತೆ ಆ ಪುಟ್ಟ ಮಗುವು ಬೆಳೆಯುತ್ತಾ ಹೋದಂತೆ ಆತನಿಗೆ ಚೌಲ ಮತ್ತು ಉಪನಯನಗಳು ಮುಗಿದು ಆತ ಸಕಲ ವೇದಾಭ್ಯಾಸದಲ್ಲಿ ತೊಡಗಿರುತ್ತಾನೆ.
ಕೇವಲ ಯುದ್ದದ ಮೂಲಕ ಇಂದ್ರ ಪದವಿಯನ್ನು ಪಡೆಯುವುದು ಅಸಾಧ್ಯವಾಗಿದ್ದು ಅದಕ್ಕೆ ದೈವಬಲವೂ ಬೇಕೆಂದು ತಿಳಿದ ಬಲಿ ಚಕ್ರವರ್ತಿಯು ಇಡೀ ವಿಶ್ವವನ್ನು ತನ್ನ ಸ್ವಾಧೀನಪಡಿಸಿಕೊಳ್ಳಲು ಅದೊಮ್ಮೆ ಭವ್ಯವಾದ ಅಶ್ವಮೇಧ ಯಜ್ಞವನ್ನು ಮಾಡಲು ಮುಂದಾಗುತ್ತಾನೆ. ಈ ರೀತಿಯಾಗಿ ಆಶ್ವಮೇಧ ಯಜ್ಞವನ್ನು ಮಾಡುವ ಸಮಯದಲ್ಲಿ ಯಾರು ಬಂದು ಏನೇ ಕೇಳಿದರೂ ಅವರ ಕೋರಿಕೆಯನ್ನು ಈಡೇರಿಸುವುದಾಗಿ ಪ್ರತಿಜ್ಞೆ ಮಾಡಿರುತ್ತಾನೆ.
ಈ ವಿಷಯ ತಿಳಿದ ಬಾಲಕ ವಾಮನ ವಟುರೂಪಿಯಾಗಿ ಅಗಸ್ತ್ಯರಿಂದ ಜಿಂಕೆಯ ಚರ್ಮ, ಮರಿಚಿಯಿಂದ ಆಯುದ, ಆಂಗೀರಸನಿಂದ ಬಟ್ಟೆ, ಸೂರ್ಯನಿಂದ ಛತ್ರಿ, ಗುರುದೇವನಿಂದ ಪವಿತ್ರ ದಾರ ಮತ್ತು ಕಮಂಡಲವನ್ನು ಪಡೆಡು, ಅದಿತಿಯಿಂದ ಮಡಿಬಟ್ಟೆ, ಸರಸ್ವತಿಯಿಂದ ರುದ್ರಾಕ್ಷಿ ಮತ್ತು ಕುಬೇರನಿಂದ ಬಟ್ಟಲನ್ನು ಪಡೆದು, ಬಲಿ ಚಕ್ರವರ್ತಿ ಯಜ್ಞ ಮಾಡುತ್ತಿದ್ದ 100 ನೇ ದಿನದಂದು ಆ ಸ್ಥಳಕ್ಕೆ ಬಂದಾಗ, ಆತನನ್ನು ಅತ್ಯಂತ ಸಡಗರ ಸಂಭ್ರಮಗಳಿಂದ ಸ್ವಾಗತಿಸಿದ ಬಲಿ ಚಕ್ರವರ್ತಿಯು ಅತನನ್ನು ಯಥಾ ಶಕ್ತಿ ಸತ್ಕರಿಸಿ, ದಕ್ಷಿಣೆಯನ್ನು ಕೊಡಲು ಮುಂದಾದಾಗಾ, ಆ ವಟುವು ನನಗೆ ದಕ್ಷಿಣೆ ರೂಪದಲ್ಲಿ ತನ್ನ ಮೂರು ಹೆಜ್ಜೆಯ ಭೂಮಿಯನ್ನು ಕೋರುತ್ತಾನೆ. ಇಡೀ ವಿಶ್ವವೇ ತನ್ನ ಅಧೀನದಲ್ಲಿ ಇರುವಾಗ ಆ ಪುಟ್ಟ ಬಾಲಕನ ಹೆಜ್ಜೆ ಇನ್ನೆಷ್ಟು ಇರಬಹುದು ಎಂದು ನೆನೆದು ಅವಶ್ಯವಾಗಿ ಕೊಡುತ್ತೇನೆ ಎಂದು ಹೇಳಿದ ತಕ್ಷಣವೇ, ಆ ವಟುರೂಪಿ ವಾಮನ ನೋಡನೋಡುತ್ತಲ್ದೇ ತ್ರಿವಿಕ್ರಮ ರೂಪದಲ್ಲಿ ಆಕಾಶದೆತ್ತರಕ್ಕೆ ಬೆಳೆದು ತನ್ನ ಪಾದದಿಂದ ಇಡೀ ಭೂಮಿಯನ್ನೇ ಒಂದು ಹೆಜ್ಜೆಯಾಗಿ ಇಟ್ಟು ಮತ್ತೊಂದು ಹೆಜ್ಜೆಯನ್ನು ಆಕಾಶದ ಮೇಲೆ ಇಟ್ಟು ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಕೇಳಿದಾಗ , ಈ ವಟುವು ಸಾಧಾರಣನಾಗಿರದೇ, ಭಗವಾನ್ ವಿಷ್ಣುವೇ ಈ ರೂಪದಲ್ಲಿ ಬಂದಿರುವುದನ್ನು ಅರಿತ ಬಲಿ ಚಕ್ರವರ್ತಿ ಮೂರನೇ ಹೆಜ್ಜೆಯನ್ನು ತನ್ನ ತಲೆಯಮೇಲೆ ಇಡಲು ಕೋರಿಕೊಂಡಾಗಾ, ಆ ತ್ರಿವಿಕ್ರಮ ರೂಪಿ ವಾಮನನು ಬಲಿಯ ತಲೆಯ ಮೇಲೆ ಹೆಜ್ಜೆಯನ್ನಿಟ್ಟು ಆತನನ್ನು ಶಾಶ್ವತವಾಗಿ ಪಾತಾಳ ಲೋಕಕ್ಕೆ ತಳ್ಳಿಬಿಡುವ ಮೂಲಕ ಇಡೀ ವಿಶ್ವವನ್ನೇ ಗೆಲ್ಲಬೇಕೆಂಬ ಆತನ ಆಸೆಗೆ ತಣ್ಣಿರು ಎರೆಚುತ್ತಾನೆ.
ಈ ರೀತಿಯಾಗಿ ತನ್ನ ಆರಾಧ್ಯ ದೈವ ಮಹಾವಿಷ್ಣುವಿನ ಆಶೀರ್ವಾದದಿಂದ ಶಾಶ್ವತ ಲೋಕವನ್ನು ಪಡೆಯುವ ದಿನ ಬಲಿ ಪಾಡ್ಯಮಿ ಆಗಿದ್ದರೆ, ವರ್ಷಕ್ಕೊಮ್ಮೆ ತನ್ನ ರಾಜ್ಯವನ್ನು ಭೇಟಿ ಮಾಡಲು ಅವಕಾಶ ಕೊಡಬೇಕೆಂದು ಬಲಿಯು ವಿಷ್ಣುವನ್ನು ಕೋರಿದಾಗ ಅದಕ್ಕೆ ಅನುವು ಮಾಡಿಕೊಟ್ಟಾಗ, ಬಲಿಯು ಪಾತಳದಿಂದ ಭೂಲೋಕಕ್ಕೆ ಬಂದು ತನ್ನ ರಾಜ್ಯದ ಜನರನ್ನು ಭೇಟಿ ಮಾಡುವ ದಿನವನ್ನು ಕೇರಳ ರಾಜ್ಯದಲ್ಲಿ ಜಾತಿ, ಮತ ಮತ್ತು ಪಂಥಗಳ ಬೇಧವಿಲ್ಲದೇ, ಓಣಂ ಎಂದು ಸಡಗರ ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಅದೇ ರೀತಿಯಲ್ಲಿ ತಾನು ಪ್ರತಿದಿನವೂ ಮಾಹಾ ವಿಷ್ಣುವನ್ನು ಪೂಜಿಸಲು ಅನುವಾಗುವಂತೆ ವಿಷ್ಣುವು ತನ್ನೊಂದಿಗೆ ಸದಾ ಕಾಲವೂ ಇರುವಂತೆ ಕೇಳಿಕೊಂಡದ್ದರಿಂದ ಸಂತುಷ್ಟನಾದ ಭಗವಾನ್ ವಿಷ್ಣುವು ಬಲಿಚಕ್ರವರ್ತಿಯ ದ್ವಾರಪಾಲಕನಾಗಲು ಒಪ್ಪಿಕೊಂಡನು. ಮುಂದೇ ನಾರದರ ಸಲಹೆಯ ಮೇಲೆ ಲಕ್ಷ್ಮೀ ದೇವಿಯು ಶ್ರಾವಣ ಮಾಸದ ಹುಣ್ಣಿಮೆಯಂದು ತಂಗಿಯ ರೂಪದಲ್ಲಿ ಬಲಿ ಚಕ್ರವರ್ತಿಗೆ ರಕ್ಷೆಯನ್ನು ಕಟ್ಟಿ, ರಕ್ಷಾಬಂಧನ ಕಾಣಿಕೆಯ ರೂಪದಲ್ಲಿ ಮಹಾವಿಷ್ಣುವಿನನ್ನು ಬಲಿ ಚಕ್ರವರ್ತಿಯನ್ನು ಬಿಡಿಸಿಕೊಂಡು ಹೋದಳು ಎಂಬ ಪ್ರತೀಕವಿದೆ.
ಈ ರೀತಿ ಭೂಲೋಕದ ಜನರ ಪೀಡಕನಾಗಿದ್ದ ಬಲಿಯನ್ನು ನಿಗ್ರಹಿಸಿದ ವಾಮನ ಜಯಂತಿಯ ದಿನ ವಾಮನನಿಗೆ ಇಷ್ಟವಾದ ಅನ್ನ ಮತ್ತು ಮೊಸರನ್ನು ನೇವೇದ್ಯ ಮಾಡಿ ಯಥಾ ಶಕ್ತಿ ವಟುಗಳಿಗೆ ದಾನ ಮಾಡುವುದು ಶ್ರೇಷ್ಠ ಎಂಬುದಾಗಿ ಪುರಾಣದಲ್ಲಿ ತಿಳಿಸಲಾಗಿದೆ. ಹೇಳಲಾಗಿದೆ. ಭಾದ್ರಪದ ಮಾಸದ ಏಕಾದಶಿ ಮತ್ತು ದ್ವಾದಶಿಯ ದಿನದಂದು ಎರಡೂ ದಿನಗಳು ಬೆಳಿಗ್ಗೆಯೇ ಎದ್ದು ಸ್ನಾನ ಸಂಧ್ಯಾವಂಧನೆಗಳ್ನು ಮುಗಿಸಿ ಎರಡೂ ದಿನಗಳೂ ಸಹಾ ಉಪವಾಸವಿದ್ದು, ವಿಷ್ಣು ಮತ್ತು ವಾಮನ ಪಟ ಇಲ್ಲವೇ ಪ್ರತಿಮೆಯನ್ನು ದೇವರ ಮನೆಯಲ್ಲಿಟ್ಟು ಯಥಾಶಕ್ತಿ ಭಕ್ತಿ ಭಾವನೆಗಳಿಂದ ಪೂಜೆಯನ್ನು ಮಾಡಿ, ತಮ್ಮ ಜೀವನದಲ್ಲಿನ ಕಷ್ಟ ನಷ್ಟಗಳು ಮರೆಯಾಗಲು ಯಥಾ ಶಕ್ತಿ ವಿಷ್ಣು ಸಹಸ್ತ್ರನಾಮವನ್ನು ಪಠಿಸಿ, ಸೂರ್ಯಾಸ್ತದ ವೇಳೆಯಲ್ಲಿ ಮತ್ತೊಮ್ಮೆ ಪೂಜೆ ಮಾಡಿ ವಾಮನ ಕಥೆಯನ್ನು ಆಲಿಸಿ ಮನೆಗೆ ಬಂದ ಬಂಧು ಮಿತ್ರರಿಗೆ ವಾಮನನ ಇಷ್ಟವಾದ ಮೊಸರನ್ನವನ್ನು ಪ್ರಸಾದವಾಗಿ ವಿತರಿಸುವುದಲ್ಲದೇ, ವಟುಗಳಿಗೆ ಕೊಡೆ ಮತ್ತಿತರ ಉಡುಗೊರೆಗಳನ್ನು ನೀಡುವ ಮೂಲಕ ವಾಮನ ಜಯಂತಿಯನ್ನು ಸಂಪೂರ್ಣಗೊಳಿಸುತ್ತಾರೆ.
ಇನ್ನು ವಾಮನನ ದೇವಾಲಯವಿರುವ ಖಜುರಾಹೋ, ಚೆರುಕೂರು, ತೃಕ್ಕಕ್ಕ ಮತ್ತು ತಮಿಳುನಾಡಿನ ಕಾಂಚೀಪುರಂನಲ್ಲಿ ಕಡೆಗಳಲ್ಲಿ ವಾಮನನಿಗೆ ವಿಶೇಷವಾದ ಪೂಜೆಯನ್ನು ಮಾಡುವುದನ್ನು ನೋಡಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಈ ಶ್ರೀಕ್ಷೇತ್ರದ ವಾಮನನ ದೇವಾಲಯಗಳಿಗೆ ಬಂದು ಶ್ರದ್ಧಾ ಭಕ್ತಿಗಳಿಂದ ವಾಮನನನ್ನು ಪೂಜಿಸಿ ಆತನ ಕೃಪಾಶೀರ್ವಾದಕ್ಕೆ ಪಾತ್ರರಾಗುತ್ತಾರೆ. ಇನ್ನು ಭಕ್ತಿ ಪಂಥ ಇಸ್ಕಾನ್ ದೇವಾಲಯಗಳಲ್ಲಿ ವಾಮನ ದ್ವಾದಶಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ಅರ್ಚಾ ವಿಗ್ರಹವನ್ನು ಕಾವಿ ವಸ್ತ್ರ, ಕೈಯಲ್ಲಿ ದಂಡ, ಛತ್ರಿ ಮತ್ತು ಕಮಂಡಲುಗಳಿಂದ ವಾಮನದೇವನ ರೂಪದಲ್ಲಿ ಅಲಂಕರಿಸಲಾಗುತ್ತದೆ.
ಹೀಗೆ ವಾಮನ ಜಯಂತಿಯು ಕೆಡುಕಿನ ಮೇಲೆ ಒಳಿತಿನ ವಿಜಯದ ದಿನವಾಗಿದ್ದು ಹೆಮ್ಮೆಯ ಮೇಲೆ ನಮ್ರತೆ ಮತ್ತು ಅಹಂಕಾರದ ಮೇಲೆ ಭಕ್ತಿಯ ವಿಜಯವನ್ನು ಆಚರಿಸುವ ಹಬ್ಬವಾಗಿದೆ. ಇದು ವಿನಮ್ರ, ಉದಾರ ಮತ್ತು ದೇವರಿಗೆ ನಂಬಿಗಸ್ತರಾಗಿರುವುದರ ಮಹತ್ವವನ್ನು ಜಗತ್ತಿಗೆ ನೆನಪಿಸುವ ದಿನವಾದ್ದರಿಂದ, ಈ ದಿನದಂದು ನಾವೆಲ್ಲರೂ ಭಕ್ತಿಯಿಂದ ಭಗವಾನ್ ವಾಮನನನ್ನು ಪೂಜಿಸುವ ಮೂಲಕ ಹಿಂದಿನ ಜನ್ಮ ಮತ್ತು ಈ ಜನ್ಮದಲ್ಲಿ ತಿಳಿದೋ ಇಲ್ಲವೇ ತಿಳಿಯದೋ ಮಾಡಿರಬಹುದಾದ ಪಾಪವನ್ನು ಕಳೆದುಕೊಂಡು ಮೋಕ್ಷವನ್ನು ಪಡೆಯೋಣ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ
ಉತ್ತಮ ವಿಚಾರ ಹಾಗೂ ಆಚರಣೆಯ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು 🙏
LikeLiked by 1 person
ಧನ್ಯೋಸ್ಮಿ
LikeLike