ಸಾಧಾರಣವಾಗಿ ಇತ್ತೀಚಿನ ದಿನಗಳಲ್ಲಿ ನಾವುಗಳು ದ್ವಿಚಕ್ರವಾಹನಗಳು, ಕಾರುಗಳು, ಚಿನ್ನದ ಸರ, ಮೊಬೈಲ್ ಫೋನ್ ಗಳ ಕಳ್ಳತನದ ವಿಷಯವನ್ನು ಪ್ರತೀ ದಿನವೂ ದಿನಪತ್ರಿಕೆಯಲ್ಲಿ ಓದುತ್ತಿರುತ್ತೇವೆ. ಆದರೆ, ಕೆಲ ದಿನಗಳ ಹಿಂದೆ, ಪೋಲೀಸ್ ಕಮೀಷನರ್ ಕಛೇರಿಯಿಂದ ಕೂಗಳತೆ ದೂರದಲ್ಲೇ ಇರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿ ಇದ್ದ ಬಸ್ ನಿಲ್ದಾಣವು ಇದ್ದಕ್ಕಿಂದ್ದಂತೆಯೇ ಮಾಯವಾದ ವಿಷಯ ತಿಳಿದು ಬಹಳ ಅಚ್ಚರಿಯನ್ನು ಮೂಡಿಸಿತು. ಆರಂಭದಲ್ಲಿ ಇದೊಂದು ಸಾಧಾರಣ ವಿಷಯ ಎನಿಸಿಕೊಂಡರು ನಂತರ ಆದರ ಉದ್ದ ಅಗಲವನ್ನು ಅಳೆಯುತ್ತಾ ಹೋದಂತೆಲ್ಲಾ ವಿಷಯ ಗಂಭಿರವಾಗುತ್ತಿದ್ದನ್ನು ಗಮನಿಸಿದ ಪೋಲೀಸರು ಮತ್ತು ನಗರ ಪಾಲಿಕೆಯವರು ಬಸ್ ನಿಲ್ದಾಣ ಕಳುವಾಗಿರಲಿಲ್ಲ ನಗರ ಪಾಲಿಕೆಯವರೇ ತೆಗೆದುಹಾಕಿದ್ದಾರೆ ಎಂದು ಒಂದು ತಿಂಗಳ ಬಳಿಕೆ ತಿಪ್ಪೇ ಸಾರಿಸಿದರೂ ಸಾರ್ವಜನಿಕರಲ್ಲಿ ಅನುಮಾನದ ಹುತ್ತಾ ಬೆಳೆಯುತ್ತಲೇ ಇದ್ದು ಕೆಲವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದಿದ್ದ ನೈಜ ಘಟನೆಯಾಧಾರಿತ ಭಾವಿ ಕಳೆದು ಹೋಗಿದೆ ಎಂಬ ನಾಟಕವನ್ನು ನೆನಪಿಸುವ ಮೂಲಕ ಬಹಳ ಕೂಲಹಲ ಕೆರಳಿಸಿದೆ.
ಈ ಮುಂಚೆ ಕಳ್ಳರುಗಳು ರಾತ್ರೋ ರಾತ್ರೀ ಯಾರು ಇಲ್ಲದ ಮನೆಗಳಿಗೆ ಕನ್ನ ಹಾಕಿ ನುಗ್ಗಿ ಮನೆಯನ್ನು ದೋಚಿಕೊಂಡು ಹೋಗುತ್ತಿದ್ದರು. ಆಗ ತಂತ್ರಜ್ಞಾನ ಬದಲಾದಂತೆ ಕಳ್ಳರೂ ಸಹಾ ತಾಂತ್ರಿಕವಾಗಿ ಮುಂದುವರೆದಿದ್ದು, ತಂತ್ರಜ್ಞಾನವನ್ನು ಬಳಸಿಕೊಂಡು ಕಷ್ಟವೇ ಪಡದೇ ಸುಲಭವಾಗಿ ಪೋಲೀಸರು ಚಾಪೇ ಕೆಳಗೆ ತೂರಿದರೆ ಕಳ್ಳರು ರಂಗೋಲಿಯ ಕೆಳಗೆ ತೂರುವಷ್ಟು ಚಾಣಾಕ್ಷರಾಗಿರುವುದು ಸೋಜಿಗವಾಗಿದೆ.
ರಾಜ್ಯದ ಶಕ್ತಿಕೇಂದ್ರ ವಿಧಾನ ಸೌಧದಿಂದ ಕೇವಲ ಅರ್ಧ ಕಿಮೀ ದೂರದಲ್ಲಿರುವ, ಪೋಲೀಸ್ ಕಮೀಷನರ್ ಕಛೇರಿಯಿಂದ ಕೂಗಳತೆ ದೂರದಲ್ಲೇ ಇರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ತಂಗುದಾಣದ ನಿರ್ಮಾಣವನ್ನು ಖಾಸಗಿ ಕಂಪನಿಗೆ ವಹಿಸಿದ್ದು, ಆಗಸ್ಟ್ 21 ರಂದು ಸುಮಾರು 10 ಲಕ್ಷ ರೂಪಾಯಿ ವೆಚ್ಚದ ರೆಡಿಮೇಡ್ ಸ್ಟೇನ್‌ಲೆಸ್ ಸ್ಟೀಲ್ ಬಸ್ ಶೆಲ್ಟರನ್ನು ಆ ಸ್ಥಳದಲ್ಲಿ ಸ್ಥಾಪಿಸಿದ ಆ ಖಾಸಗೀ ಕಂಪನಿ, ಬಾಕಿ ಉಳಿದಿದ್ದ ವಿದ್ಯುತ್ ದೀಪಗಳ ಅಳವಡಿಕೆಗೆ ಮತ್ತು ಅಳುದುಳಿದಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ವಾರದ ನಂತರ ಆಗಸ್ಟ್ 28 ರಂದು ಆ ಸ್ಥಳಕ್ಕೆ ಆಗಮಿಸಿದಾಗ ಅಲ್ಲಿನ ಪರಿಸ್ಥಿತಿ ನೋಡಿ ಅವರಿಗೆ ಹೃದಯ ಒಡೆದು ಹೋಗುವುದೊಂದೇ ಬಾಕಿ.
ಸಾರ್ವಜನಿಕ ರಸ್ತೆಯಲ್ಲಿ ಕೇವಲ ಒಂದು ವಾರಗಳ ಹಿಂದೆಯಷ್ಟೇ ಸ್ಥಾಪಿಸಲಾಗಿದ್ದ ಬಸ್ ನಿಲ್ದಾಣ ಒಂದು ಚೂರು ಕುರುಹು ಇಲ್ಲದಂತೆ ಬಟಾ ಬಯಲಾಗಿದ್ದನ್ನು ನೋಡಿ ಅವರಿಗ ಆಶ್ಚರ್ಯವಾಗಿ ಈ ವಿಷಯವನ್ನು ತಮ್ಮ ಕಂಪನಿಯ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಏನೇನೋ ವಸ್ತುಗಳನ್ನು ಕಳ್ಳತನ ಮಾಡಿರುವ ವಿಷಯ ಗೊತ್ತು ಆದರೆ ಬಸ್ ನಿಲ್ದಾಣವನ್ನೇ ಕಳ್ಳತನ ಮಾಡಿರುವ ವಿಷಯ ಅವರಿಗೂ ಸ್ವಲ್ಪ ಗೊಂದಲ ಮೂಡಿಸಿದ ಕಾರಣ, ತಮ್ಮ ಪರಿಚಯ ಇದ್ದವರ ಬಳಿ ಎಲ್ಲಾ ವಿಚಾರಿಸಿ, ನಂತರ ಅಳೆದೂ ತೂಗಿ ಅಂತಿಮವಾಗಿ ಆ ಕಂಪನಿಯ ಉಪಾಧ್ಯಕ್ಷರಾದ ಶ್ರೀ ಎನ್.ರವಿ ರೆಡ್ಡಿ ಸುಮಾರು ಒಂದು ತಿಂಗಳ ನಂತರ ಸೆಪ್ಟೆಂಬರ್ 30 ರಂದು ಪೊಲೀಸರಿಗೆ ದೂರು ನೀಡಿದಾಗಲೇ, ಈ ಬಸ್ ನಿಲ್ಡಾಣದ ಕಳ್ಳತನದ ಬಗ್ಗೆ ಎಲ್ಲರಿಗೂ ತಿಳಿದು ಬಂದಿದೆ.
ಆರಂಭದಲ್ಲಿ ಇದೊಂದು ಸಾಧಾರಣ ವಿಷಯ ಎಂದು ಸುಮ್ಮನಾಗಿದ್ದ ಪೋಲಿಸರು ಮತ್ತು ಸಾರಿಗೆ ಸಂಸ್ಥೆಗಳು, ಈ ವಿಷಯ ದಿನಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಇದರ ಕುರಿತಾಗಿ ಹೆಚ್ಚಿನ ವಿಚಾರಣೆ ಮಾಡಲು ಆರಂಭಿಸಿದ್ದಾರೆ. ಬಿಎಂಟಿಸಿ ಬಸ್ ನಿಲ್ದಾಣದ ನಿರ್ಮಾಣ ಹೊಣೆಗಾರಿಕೆ ಹೊತ್ತುಕೊಂಡಿರುವ ಕಂಪನಿಯ ಅಸೋಸಿಯೇಟ್ ವೈಸ್ ಪ್ರೆಸಿಡೆಂಟ್ ಎನ್.ರವಿ ರೆಡ್ಡಿಯವರು ನಿಲ್ದಾಣ ಕಳುವಾದ ಕೂಡಲೇ ದೂರು ದಾಖಲಿಸುವ ಬದಲು ಸುಮಾರು ಒಂದು ತಿಂಗಳ ನಂತರ ಸೆಪ್ಟೆಂಬರ್ 30ರಂದು ದೂರು ದಾಖಲಿಸಿರುವುದೂ ಸಹಾ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.
ಇವೆಲ್ಲದರ ಮಧ್ಯೆ ಬಸ್ ನಿಲ್ದಾಣಗಳನ್ನು ತೆರವುಗೊಳಿಸುವ ಕೆಲಸವನ್ನು ಮಾಡಿದ್ದರೆ ಅದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳೇ ಮಾಡಿರುತ್ತಾರೆಯೇ ಹೊರತು ಅವರನ್ನು ಬಿಟ್ಟರೆ ಆ ರೀತಿ ಬೇರಾರೂ ಆ ರೀತಿಯಾಗಿ ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸುವ ಮೂಲಕ ವಿಷಯವನ್ನು ಮತ್ತೊಂದು ದಿಕ್ಕಿನೆಡೆ ತಿರುಗಿಸಿದ್ದಾರೆ.
ಹಾಗೆ ನೋಡಿದರೆ, ಬೆಂಗಳೂರಿನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಾಗಿರದೇ, ಈ ಹಿಂದೆ
- 2023ರ ಮಾರ್ಚ್‌ನಲ್ಲಿ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿ ಮೂರು ದಶಕಗಳಷ್ಟು ಹಳೆಯದಾದ ಬಸ್ ನಿಲ್ದಾಣ ರಾತ್ರೋರಾತ್ರಿ ಮಾಯವಾಗಿತ್ತು.
- 2015 ರಲ್ಲಿ ನ್ಯೂ ಹೊರೈಜನ್ ಶಾಲೆಯ ಬಳಿಯ ದೂಪನಹಳ್ಳಿ ಬಸ್ ನಿಲ್ದಾಣವೂ ರಾತ್ರೋರಾತ್ರಿ ಕಣ್ಮರೆಯಾಗಿತ್ತು.
- 2014 ರಲ್ಲಿಯೂ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್-IIIನೇ ಹಂತದಲ್ಲೂ 20 ವರ್ಷಗಳ ಹಳೆಯ ಬಸ್ ನಿಲ್ದಾಣವೂ ಇಲ್ಲವಾಗಿತ್ತು.
ಇನ್ನು ಕೆಲವು ದಶಕಗಳ ಹಿಂದೆ ಇದೇ ಕನ್ನಿಂಗ್ ಹ್ಯಾಮ್ ರಸ್ತೆಯ ಹಿಂದೆಯೇ ಇರುವ ಇನ್ ಫೆಂಟ್ರಿ ರಸ್ತೆಯ ಪೋಲಿಸ್ ಕಮಿಷಿನರ್ ಕಛೇರಿಯ ಅವರಣದಲ್ಲಿ ಬೆಳೆದು ನಿಂತಿದ್ದ ಶ್ರೀಗಂಧದ ಮರವನ್ನು ರಾತ್ರೋರಾತ್ರಿ ಕಳ್ಳರು ಕದ್ದೊಯ್ದಿದ್ದ ಪ್ರಕ್ರರಣವೂ ಇನ್ನೂ ಮನಸ್ಸಿನಲ್ಲಿ ಹಚ್ಚ ಹಸಿರಾಗಿರುವುದಲ್ಲದೇ, ಕೆಲವು ವರ್ಷಗಳ ಹಿಂದೆ ಅದೇ ರಸ್ತೆಯ ತುದಿಯಲ್ಲಿರುವ ಸಫೀನಾ ಪ್ಲಾಜಾದ ಎದುರು ನಿಲ್ಲಿಸಿದ್ದ ನನ್ನ ಗೆಳೆಯನ ದ್ವಿಚಕ್ರವಾಹನ ಕಳೆದು ಹೋಗಿದ್ದಾಗ ಹತ್ತಿರದಲ್ಲೇ ಇದ್ದ ಪೋಲೀಸ್ ಠಾಣೆಗೆ ದೂರು ನೀಡಿ ಮೂರ್ನಾಲ್ಕು ದಿನಗಳ ಕಾಲ ಯಾವುದೇ ರೀತಿಯ ಹೆಚ್ಚಿನ ಸಹಾಯ ದೊರಕದೇ ಹೋದಾಗ, ಕಮಿಷಿನರ್ ಕಛೇರಿಯಲ್ಲೇ ಕೆಲಸ ಮಾಡುತ್ತಿದ್ದ ಅವನ ಹತ್ತಿರದ ಬಂಧುವಾದ ಹಿರಿಯ ಹಿರಿಯ ಪೋಲೀಸ್ ಅಧಿಕಾರಿಗಳ ಬಳಿ ಗೋಳನ್ನು ತೋಡಿಕೊಂಡಾಗ, ಕೂಡಲೇ ಅವರು ತಮ್ಮ ಸಿಬ್ಬಂಧಿಯನ್ನು ಕರೆಸಿ ನೀವು ಏನು ಮಾಡ್ತೀರೋ ಗೊತ್ತಿಲ್ಲಾ!, ಈ ದಿನದ ಸಂಜೆಯ ಒಳಗೆ, ಕಳೆದು ಹೋದ ಬೈಕ್ ಸಿಗಬೇಕು! ಎಂತು ತಾಕೀತು ಮಾಡಿದ ಒಂದೆರಡು ಗಂಟೆಯಲ್ಲೇ ಕಳೆದು ಹೋದ ಸ್ಥಳದಲ್ಲೇ ಆತನ ಬೈಕ್ ಸಿಕ್ಕಿದ್ದ ವಿಷಯವೂ ನೆನಪಿಗೆ ಬರುತ್ತದೆ.
ಈ ಪ್ರಕರಣವನ್ನು ನೋಡುತ್ತಿದ್ದಾಗ ಈ ಮೊದಲೇ ತಿಳಿಸಿದಂತೆ 80ರ ದಶಕದಲ್ಲಿ ಮಹಾರಾಷ್ಟ್ರದ ಪೋಲೀಸ್ ಠಾಣೆಯಲ್ಲಿ ನಡೆದ ಒಂದು ವಿಚಿತ್ರ ಘಟನೆಯಾಧಾರಿತವಾಗಿ ದೂರದರ್ಶನದಲ್ಲಿ ನೋಡಿದ್ದ ಭಾವಿ ಕಳುವಾಗಿದೆ ಎಂಬ ನಾಟಕವೂ ಇದೇ ರೀತಿಯದ್ದಾಗಿದ್ದು ಅದರ ರೋಚಕತೆಯನ್ನೂ ತಾಳೆ ಹಾಕಿ ನೋಡಿದಾಗ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ.
ಆ ನಾಟಕದಲ್ಲಿ, ಪೋಲಿಸ್ ಠಾಣೆಗೆ ಒಬ್ಬ ಸಣ್ಣ ರೈತರೊಬ್ಬರು ಬಂದು ತನ್ನ ಹೊಲದಲ್ಲಿದ್ದ ಭಾವಿ ಕಳೆದು ಹೋಗಿದ್ದು ಅದನ್ನು ಹುಡುಕಿಕೊಡುವಂತೆ ಮನವಿ ಪತ್ರವನ್ನು ಸಲ್ಲಿಸುತ್ತಾರೆ. ಭಾವಿ ಎಲ್ಲಿಯಾದರೂ ಕಳ್ಳತನವಾಗುವುದುಂಟೇ? ಎಂದು ಭಾವಿಸಿದ ಪೋಲಿಸರು ಆತನ ದೂರನ್ನು ದಾಖಲಿಸಲು ಆರಂಭದಲ್ಲಿ ಹಿಂದೇಟು ಹಾಕುತ್ತಾರಾದರೂ, ಛಲಬಿಡದ ತ್ರಿವಿಕ್ರಮನಂತೆ ಅದಕ್ಕೆ ಪೂರಕವಾದ ಒಂದೊಂದೇ ದಾಖಲೆಗಳನ್ನು ಒದಗಿಸುತ್ತಾ ಹೋಗುತ್ತಾರೆ.
ಮೊದಲನೆಯದಾಗಿ, ತನ್ನ ಹೆಸರಿನಲ್ಲಿದ್ದ ಹೊಲದ ದಾಖಲೆಗಳನ್ನು ತೋರಿಸಿದ ಆ ರೈತರು, ನಂತರ, ಅದೇ ಹೊಲದಲ್ಲಿ ಭಾವಿ ತೋಡಿಸುವ ಸಲುವಾಗಿ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಸಲ್ಲಿಸಿದ ಅರ್ಜಿಯನ್ನು ತೋರಿಸುತ್ತಾರೆ. ನಂತರ ಬ್ಯಾಂಕಿನ ಮ್ಯಾನೇಜರ್ ಅವರ ಅರ್ಜಿಯನ್ನು ಪುರಸ್ಕರಿಸಿ, ಸಾಲವನ್ನು ಮಂಜೂರು ಮಾಡಿದ ಪತ್ರವನ್ನು ತೋರಿಸಿದ್ದನ್ನು ನೋಡಿ, ಇದೇನೋ ಸರಿ, ಆದರೆ ನೀವು ಬಾವಿ ತೋಡಿಸಿದ್ದಕ್ಕೆ ಏನಾದರೂ ದಾಖಲೆ ಇದೆಯೇ ಎಂದು ಪೋಲೀಸರು ಪ್ರಶ್ನಿಸಿದಾಗ, ತಾನು ಬಾವಿ ತೆಗೆಸಲು ಸೂಕ್ತ ಸ್ಥಳವನ್ನು ಸೂಚಿಸಲು ಭೂಗರ್ಭ ಶಾಸ್ತ್ರಜ್ಞರು ಕೊಟ್ಟ ನಕ್ಷೆಯ ಜೊತೆಗೆ, ಅದೇ ಸ್ಥಳದಲ್ಲೇ ಕ್ರಮಬದ್ಧವಾಗಿ ಬಾವಿ ತೋಡಿಸಿದ್ದಾರೆ ಎಂಬುದನ್ನು ಪುರಸ್ಕರಿಸುವ ಬ್ಯಾಂಕಿನ ಸಿವಿಲ್ ಇಂಜಿನೀಯರು ಮತ್ತು ಫೀಲ್ಡ್ ಆಫೀಸರುಗಳು ಕೊಟ್ಟ ದಾಖಲೆ ಪತ್ರಗಳು ತೋರಿಸಿದಾಗ, ಕಾನೂನಾತ್ಮಕವಾಗಿ ಅಲ್ಲಿ ಭಾವಿ ಇತ್ತು ಎಂಬುದು ಧೃಡಪಟ್ಟಾಗ ಪೋಲಿಸರು ವಿಧಿ ಇಲ್ಲದೇ ದೂರನ್ನು ದಾಖಲಿಸಿಕೊಂಡು ಕಳೆದ ಹೋದ ಭಾವಿಯ ತನಿಖೆಯನ್ನು ಮಾಡಲು ಆರಂಭಿಸುತ್ತಾರೆ.
ಇಲ್ಲಿ ಭಾವಿ ಇತ್ತು ಎಂಬುದಕ್ಕೆ ದಾಖಲೆ ಏನೋ ಇದೆ ಆದರೆ ಅದು ಕಳೆದು ಹೋಗಿದೆ ಎಂಬುದು ಯಾವಾಗಾ? ಮತ್ತು ಹೇಗೆ ತಿಳಿಯಿತು? ಎಂದು ಪೋಲೀಸರು ಪ್ರಶ್ನಿಸಿದಾಗ, ಆ ರೈತ, ಸ್ವಾಮೀ, ನನ್ನ ಬಾವಿಯ ಸಾಲದ ಅಂತಿಮ ಕಂತನ್ನು ಕಟ್ಟಿದ್ದಕ್ಕಾಗಿ ಬ್ಯಾಂಕಿನವರು ಕೊಟ್ಟ ಪತ್ರವನ್ನು ಪಡೆದುಕೊಂಡು ಭಾವಿಯಲ್ಲಿ ಪಂಪ್ ಅಳವಡಿಸಲು ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಲು ಹೋದಾಗ, ನನ್ನ ಭಾವಿ ಕಳುವಾದದ್ದು ಅರಿವಾಗಿ ಅದರ ಪತ್ತೆಯಾಗಿ ನಿಮ್ಮ ಸಹಾಯ ಬೇಡುತ್ತಿದ್ದೇನೆ ಎನ್ನುತ್ತಾರೆ. ಅದುವರೆವಿಗೂ ತಾಳ್ಮೆಯಿಂದ ಎಲ್ಲವನ್ನೂ ಕೇಳುತ್ತಿದ್ದ ಪೋಲೀಸರಿಗೆ ದಾಖಲೆಗಳ ಜಾಡನ್ನು ಹಿಡಿದು ಹೋದಲ್ಲಿ ಸತ್ಯವನ್ನು ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಅರಿತು, ಕೂಡಲೇ ತಮ್ಮ ಪೋಲೀಸ್ ಭಾಷೆಯಲ್ಲಿ ಆ ರೈತರನ್ನು ಗದುರಿಸಿದಾಗ, ಆ ರೈತರ ಬಾಯಿಯಿಂದ ಬಂದ ಸತ್ಯ, ನಿಜಕ್ಕೂ ಎಲ್ಲರನ್ನೂ ದಂಗಾಗಿಸುತ್ತದೆ.
ವಾಸ್ತವವಾಗಿ ಅಲ್ಲಿ ನಡೆದದ್ದೇನೆಂದರೆ, ಈ ರೈತರು ಭಾವಿ ತೋಡಿಸಲು ಬ್ಯಾಂಕಿನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ಸಾಲದ ಸಾಲ ಮಂಜೂರಾತಿಗಾಗಿ ಬ್ಯಾಂಕಿನ ಮ್ಯಾನೇಜರ್, ಫೀಲ್ಡ್ ಆಫೀಸರ್ ಮತ್ತಿತರ ಸಿಬ್ಬಂಧಿಗಳು ಲಂಚವನ್ನು ಪಡೆಯುತ್ತಾರೆ. ನಂತರ ಆತ ತನ್ನ ಹೊಲದಲ್ಲಿ ಭಾವಿ ತೋಡಿಸಿದ್ದಾನೆ ಎಂದು ಭೂಗರ್ಭ ಶಾಸ್ತ್ರಜ್ಞರು ಮತ್ತು ಬ್ಯಾಂಕಿನ ಇಂಜಿನೀಯರ್ ಲಂಚವನ್ನು ಪಡೆದು ಪ್ರಮಾಣ ಪತ್ರ ಕೊಟ್ಟಿರುತ್ತಾರೆ. ಹೀಗೆ ಮೇಲಿಂದ ಕೆಳಗಿನವರೆಗೆ ಎಲ್ಲರಿಗೂ ಲಂಚವನ್ನು ಕೊಟ್ಟ ನಂತರ, ಆ ರೈತನ ಬಳಿ ಕೇವಲ ಕೆಲವೇ ನೂರು ರೂಪಾಯಿಗಳು ಉಳಿದಾಗ, ಭಾವಿಯನ್ನು ತೋಡಿಸಲು ಅಸಹಾಯಕನಾಗಿ, ದೇಶದಲ್ಲಿ ತಾಂಡವವಾಡುತ್ತಿರುವ ಲಂಚಾವತಾರವನ್ನು ಬಯಲಿಗೆ ಎಳೆಯುವ ಮನಸ್ಸಿನಿಂದ ತನ್ನ ಭಾವಿ ಕಳೆದು ಹೋಗಿದೆ ಎಂಬ ದೂರನ್ನು ನೀಡಿದ್ದಾಗಿ ತಪ್ಪನ್ನು ಒಪ್ಪಿ ಕೊಳ್ಳುತ್ತಾನೆ.
ಪ್ರಸ್ತುತ ಬಸ್ ನಿಲ್ದಾಣದ ಕಳುವಿನ ಪ್ರಕರಣದಲ್ಲೂ ಪೋಲಿಸರು, ನಿರ್ಮಾಣ ಮಾಡಿದ್ದ ಬಸ್ ತಂಗುದಾಣ ಕಳಪೆ ಮಟ್ಟದ್ದಾಗಿದ್ದದ್ದರಿಂದ ಪಾಲಿಕೆ ಅಧಿಕಾರಿಗಳೇ ಅದನ್ನು ತೆರವು ಗೊಳಿಸಿದ್ದಾರೆ ಎಂದು ಅಕ್ಟೋಬರ್ 10, 2023 ರಂದು ಅಧಿಕೃತವಾಗಿ ಘೋಷಿಸಿ ತನಿಖೆಯನ್ನು ಮುಗಿಸಿರುವುದನ್ನು ಸೂಕ್ಶ್ಮವಾಗಿ ಅವಲೋಕಿಸಿದಲ್ಲಿ, ದಾಲ್ ಮೇ ಕುಛ್ ಕಾಲಾ ಹೈ ಎನ್ನುವ ಹಿಂದೀ ಗಾದೆಯಂತೆ, ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುವ ಕನ್ನಡ ಗಾದೆಯಂತೆ, ಟಾರ್ ಹಾಕಿದ ಎರಡು ಮೂರನೇ ದಿನಕ್ಕೇ ಕಿತ್ತು ಬಂದರೂ ಅದರ ಬಗ್ಗೆ ಕೊಂಚವೂ ತಲೆ ಕೆಡಿಸಿಕೊಳ್ಳದ, ರಾಜಕಾಲುವೆ ಒತ್ತುವರಿಯಿಂದಾಗಿ ಪ್ರತೀ ಬಾರಿ ಮಳೆಯ ಬಂದಾಗಲೂ ವಿವಿಧ ಬಡಾವಣೆಗಳು ನೀರಿನಲ್ಲಿ ಮುಳುಗಿ ಹೋದರೂ ತಲೆ ಕೆಡಸಿಕೊಳ್ಳದ ನಗರ ಪಾಲಿಕೆ, ಇನ್ನೂ ನಿರ್ಮಾಣದ ಹಂತದಲ್ಲಿದ್ದ ಮತ್ತು ಅಧಿಕೃತವಾಗಿ ಉದ್ಘಾಟನೆಯೇ ಆಗದ ಬಸ್ ತಂಗು ನಿಲ್ದಾಣದ ಗುಣಮಟ್ಟ ಸರಿಯಾಗಿಲ್ಲ ಎಂದು ರಾತ್ರೋರಾತ್ರಿ ಯಾರಿಗೂ ತಿಳಿಸದಂತೆ ತೆಗೆದುಹಾಕಿದೆ ಎಂಬುದಾಗಿ ತಿಳಿಸಿರುವ ಪೋಲಿಸರು ತನಿಖಾ ವರದಿಯನ್ನು ಖಂಡಿತವಾಗಿಯೂ ನಂಬಲು ಅಸಾಧ್ಯವಾಗಿದ್ದು, ಈ ಬಸ್ ನಿಲ್ದಾಣದ ಕಳ್ಳತನದ ಹಿಂದೆ ಯಾವುದೋ ಪ್ರಭಾವಶಾಲಿ ಕಾಣದ ಕೈಗಳು ಇದ್ದು ಆ ಕೈಗಳನ್ನು ರಕ್ಷಿಸುವ ಸಲುವಾಗಿ ಪೋಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಮುಂದಾಗಿರುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ.
ಪ್ರಸ್ತುತ ಪ್ರಕರಣವನ್ನೂ ಭಾವಿಕಳೆದು ಹೋದ ಪ್ರಕರಣದ ದೃಷ್ಟಿಕೋನದಲ್ಲಿ ನೋಡಲು ಹೋದಲ್ಲಿ, ಹಿಂದಿನ ಸರ್ಕಾರದ ವಿರುದ್ಧ 40% ಕಮಿಷನ್ ಸರ್ಕಾರ ಎಂದು ಬೊಬ್ಬೆ ಹೊಡೆದು ಆಡಳಿತಕ್ಕೆ ಬಂದ ಪ್ರಸ್ತುತ ಸರ್ಕಾರ, ಈ ಪ್ರಕರಣದಲ್ಲಿ ಕೆಲಸವೇ ಮಾಡದೇ, ಈ ಸರ್ಕಾರ 100% ಕಮಿಷನ್ ಪಡೆದಿರಬಹುದಾ? ಎಂಬ ಅನುಮಾನವೂ ಜನರಲ್ಲಿ ಮೂಡುತ್ತಿದ್ದು, ಇಂದು ವಿವಿಧ ಪ್ರಭಾವಗಳಿಂದ ಪ್ರಕರಣವನ್ನು ಮುಚ್ಚಿಹಾಕಿದರೂ, ಅಂತಿಮವಾಗಿ ತಪ್ಪು ಮಾಡಿದವರ ಅಂತರ್ ಸಾಕ್ಷಿಯ ಪಾಪಪ್ರಜ್ಞೆ ಅವರ ಜೀವೀತಾವಧಿಯವರೆಗೂ ಕಾಡುತ್ತಲೇ ಇರುತ್ತದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ