ಅರೇ ಮಹುವಾ ಏ ಕ್ಯಾ ಹುವಾ?

ಮಹುವಾ ಮೊಯಿತ್ರಾ ಪಶ್ಚಿಮ ಬಂಗಾಳದ ಕೃಷ್ಣನಗರದಿಂದ 2019ರ ಲೋಕಸಭೆಯಲ್ಲಿ ತೃಣಮೂಲ ಕಾಂಗ್ರೇಸ್ ಪಕ್ಷದಿಂದ ಆಯ್ಕೆಯಾದ ಸಾಂಸದೆ. ರಾಜಕೀಯವನ್ನು ಪ್ರವೇಶಿಸುವ ಮೊದಲು ಅಮೇರಿಕಾದ ಬಹುರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಆರಂಭದಲ್ಲಿ ಕಾಂಗ್ರೇಸ್ ಪಕ್ಷದ ಯುವ ಕಾರ್ಯಕರ್ತೆಯಾಗಿದ್ದು ನಂತರದ ದಿನಗಳಲ್ಲಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತ ಬ್ಯಾನರ್ಜಿಯವರಿಂದ ಆಕರ್ಷಿತಳಾಗಿ ರಾಜಕೀಯವನ್ನು ಪ್ರವೇಶಿಸಿ. 2016 ರಿಂದ 2019 ರವರೆಗೆ ಕರೀಂಪುರ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದಲ್ಲದೇ, ತನ್ನ ಬಂಗಾಲಿ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿನ ಹಿಡಿತದಿಂದಾಗಿ ಉತ್ತಮವಾದ ಸಂಘಟಕಿ ಎಂದು ಅತೀ ಶೀಘ್ರದಲ್ಲೇ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಕ್ತಾರರಾಗುವ ಮಟ್ಟಿಗೆ ಅತೀ ವೇಗವಾಗಿ ಬೆಳೆದಿದ್ದಾರೆ.

ಮೊಯಿತ್ರಾ ಅವರು ಮೂಲತಃ ಪಶ್ಚಿಮ ಬಂಗಾಳದ ಬರಾಕ್ ಕಣಿವೆಯ ಕ್ಯಾಚಾರ್ ಜಿಲ್ಲೆಯ ಲಬಾಕ್‌ನವರಾಗಿದ್ದು, 12 ಅಕ್ಟೋಬರ್ 1974 ರಂದು ದ್ವಿಪೇಂದ್ರ ಲಾಲ್ ಮೊಯಿತ್ರಾ ಎಂಬುವರ ಸಂಪ್ರದಾಯಸ್ಥ ಹಿಂದೂ ಕುಟುಂಬದಲ್ಲಿ ಜನಿಸಿ, ಕಲ್ಕತ್ತಾದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಂತರ, ಅಮೇರಿಕಾದ ಮ್ಯಾಸಚೂಸೆಟ್ಸ್‌ನ ಮೌಂಟ್ ಹೋಲಿಯೋಕ್ ಕಾಲೇಜ್ ಸೌತ್ ಹ್ಯಾಡ್ಲಿಯಿಂದ 1998 ರಲ್ಲಿ ಅರ್ಥಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಪದವಿ ಪಡೆದು, ನ್ಯೂಯಾರ್ಕ್ ನಗರ ಮತ್ತು ಲಂಡನ್‌ನಲ್ಲಿ ಜೆಪಿ ಮೋರ್ಗಾನ್ ಚೇಸ್‌ಗೆ ಹೂಡಿಕೆ ಬ್ಯಾಂಕರ್ ಆಗಿ ಕೆಲಸ ಮಾಡಿದ ಅನುಭವವಿದೆ.

2009ರ ಆಸುಪಾಸಿನಲ್ಲಿ ಲಂಡನ್ನಿನ JP ಮೋರ್ಗಾನ್ ಚೇಸ್‌ನಲ್ಲಿದ್ದ ಉಪಾಧ್ಯಕ್ಷ ಸ್ಥಾನವನ್ನು ತ್ಯಜಿಸಿ, ಕಾಂಗ್ರೆಸ್ ಪಕ್ಷದ ಯುವ ಘಟಕಕ್ಕೆ ಸೇರಿಕೊಂಡು ಆಮ್ ಆದ್ಮಿ ಕಾ ಸಿಪಾಹಿ ಯೋಜನೆಯಲ್ಲಿ ರಾಹುಲ್ ಗಾಂಧಿಯವರ ಅತ್ಯಂತ ವಿಶ್ವಾಸಾರ್ಹ ಕಾರ್ಯಕರ್ತೆಯಲ್ಲಿ ಒಬ್ಬರಾಗುವ ಮಟ್ಟಿಗೆ ಬೆಳೆದ ನಂತರ 2010 ರಲ್ಲಿ, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ನಡೆಸಿ, 2016 ರಲ್ಲಿ ನಾಡಿಯಾ ಜಿಲ್ಲೆಯ ಕರೀಂಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿ ಅತ್ಯಂತ ಚುರುಕಾಗಿ ಕೆಲಸ ಕಾರ್ಯಗಳನ್ನು ನಿಭಾಯಿಸಿದ್ದನ್ನು ಗಮನಿಸಿದ ಮಮತಾ ದೀದಿ 17ನೇ ಲೋಕಸಭೆಗೆ ಕೃಷ್ಣನಗರದಿಂದ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾದರು.

ನಮ್ಮ ಈ ದೇಶದಲ್ಲಿ ರಾಜಕಾರಣಿಗಳು ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬಂದು ಎಲ್ಲರೂ ಗುರುತಿಸಬೇಕಾದಲ್ಲಿ ಜಾತ್ಯಾತೀತತೆ ಎನ್ನುವ ಸವಕಲು ನಾಣ್ಯದ ಅಡಿಯಲ್ಲಿ ಒಂದೋ ಸನಾತನ ಧರ್ಮವನ್ನು ಟೀಕಿಸಬೇಕು ಇಲ್ಲವೇ, ಪ್ರಧಾನಮಂತ್ರಿ ಮೋದಿಯವರನ್ನು ಮತ್ತು ಆವರ ಕಾರ್ಯಗಳನ್ನು ಹೋದ ಬಂದ ಕಡೆಯಲ್ಲೆಲ್ಲಾ ಮನಸೋ ಇಚ್ಚೆ ಟೀಕಿಸಿದಲ್ಲಿ ಮಾಧ್ಯಮಗಳ ಪ್ರಚಾರ ದೊರೆತು ಅತ್ಯಂತ ಕಡಿಮೆ ಸಮಯದಲ್ಲೇ ದೇಶಾದ್ಯಂತ ಖ್ಯಾತಿಯನ್ನು ಗಳಿಸಬಹುದು ಎಂಬುದನ್ನು ಅರಿತು ಅದನ್ನು ಅಕ್ಷರಶಃ ಪಾಲಿಸತೊಡಗಿದರು. ಸಂಸತ್ತಿನ ಪ್ರಶ್ನೋತ್ತರ ಸಮಯದಲ್ಲಿ ಸಮಯ ಸಿಕ್ಕಾಗಲೆಲ್ಲಾ, ಮೋದಿಯವರನ್ನು ಮತ್ತು ಅವರ ಮತ್ತು ಅದಾನಿಯವರ ಕುರಿತಾಗಿ ಟೀಕಿಸುತ್ತಲೇ, ತನ್ನ ದಿಟ್ಟ ಮಾತುಗಾರಿಕೆ ಮತ್ತು ಕಾರ್ಯವೈಖರಿಯಿಂದ ಅರೇ ಈಕೆ ಹೇಳುತ್ತಿರುವುದೆಲ್ಲಾ ಸತ್ಯವೇ? ಎಂದು ಮೂಗಿನ ಮೇಲೆ ಬೆರಳಿಡುವಷ್ಟರ ಮಟ್ಟಿಗೆ ತನ್ನತ್ತ ಸೆಳೆದುಕೊಂಡು ಅತ್ಯಂತ ವೇಗವಾಗಿ ಪ್ರವರ್ಧಮಾನಕ್ಕೆ ಬಂದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಮಹುವಾ ಸಹಾ ಒಬ್ಬರು ಎನ್ನುವುದು ಗಮನಾರ್ಹವಾಗಿದೆ.

ಪ್ರಚಾರದ ಹಪಾಹಪಿಯಲ್ಲಿ ಬಿದ್ದ ಮಹುವಾ, ಅನಗತ್ಯವಾಗಿ ಅನೇಕ ವಿವಾದಗಳನ್ನು ಮೈಮೇಲೆೆ ಎಳೆದುಕೊಳ್ಳುವ ಛಾಳಿಯನ್ನು ಮುಂದುವರೆಸಿದ ಮೊಹುವಾ, 10 ಜನವರಿ 2017 ರಂದು, ದೂರದರ್ಶನದ ಚರ್ಚೆಯೊಂದರಲ್ಲಿ ಅಂದಿನ ಕೇಂದ್ರ ಸಚಿವ ಮತ್ತು ಪ್ರಸ್ತುತ ಟಿ.ಎಂ.ಸಿ ಸಾಂಸದ ಬಾಬುಲ್ ಸುಪ್ರಿಯೊ ವಿರುದ್ಧತನ್ನ ನಮ್ರತೆಯನ್ನು ಅವಮಾನಿಸಿದ ಎಂದು ಮಾಡಿದ ಆರೋಪ ಕಲ್ಕಾತ್ತಾದ ನ್ಯಾಯಾಲಯದಲ್ಲಿ ಬಿದ್ದು ಹೋದದ್ದು ಈಗ ಇತಿಹಾಸ. ಜನವರಿ 2020 ರಲ್ಲಿ, Zee ಮಾಧ್ಯಮವು ವರದಿಗಾರರೊಂದಿಗೆ ಮಾತನಾಡುವಾಗ, ಚಾನಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಛಾನೆಲ್ ಆಕೆಯ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಸಮರ್ಥವಾಗಿ ಎದುರಿಸಿ ಆಕೆಯ ವಿರುದ್ಧದ ಆರೋಪಗಳಿಂದ ಮುಕ್ತವಾದದ್ದೂ ಸಹಾ ಆಕೆಯ ಸಾಧನೆಯೇ.

2019ರಲ್ಲಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂಬ ಹೇಳಿಕೆ ನೀಡಿ ಎಲ್ಲರನ್ನೂ ಗಮನ ಸೆಳೆದ ಮೊಹುವಾ, ಡಿಸೆಂಬರ್ 2020 ರಲ್ಲಿ, ಅವರು ಪತ್ರಿಕಾ ಮಾಧ್ಯಮವನ್ನು “2 ಪೈಸಾ” ಎಂದು ಕರೆಯುವ ಮೂಲಕ ಸುದ್ದಿ ಮಾಧ್ಯಮಗಳ ಬಹಿಷ್ಕರವನ್ನೂ ಎದುರಿಸಿದ್ದರು. ಫೆಬ್ರವರಿ 2021 ರಲ್ಲಿ ಪ್ರಸ್ತುತ ಸರ್ಕಾರವನ್ನು ಟೀಕಿಸುವುದನ್ನು ಮುಂದುವರೆಸಿ, ನ್ಯಾಯಾಂಗವಾಗಿದ್ದ ಪವಿತ್ರ ಗೋವು ಇನ್ನು ಮುಂದೆ ಪವಿತ್ರವಲ್ಲ, ಈ ದೇಶದ ಹಾಲಿ ಮುಖ್ಯ ನ್ಯಾಯಮೂರ್ತಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ದಿನ ಅದು ಪವಿತ್ರವಾಗುವುದನ್ನು ನಿಲ್ಲಿಸಿತು ಎಂದು ನ್ಯಾಯಮೂರ್ತಿಗಳ ಮೇಲೆ ಆರೋಪಿಸಿದ ಮೊಹುವಾ ನಂತರದ ದಿನಗಳಲ್ಲಿ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿಗಳು ಮತ್ತು ದೇಶದ ಉದ್ಯಮಿ ಅದಾನಿ ನಡುವೆ ಅಪವಿತ್ರ ಮೈತ್ರಿ ಇದ್ದು ಈ ದೇಶದ ಸಂಪತ್ತು ಅಂಬಾನಿ ಮತ್ತು ಅದಾನಿಗಳ ಪಾಲಾಗುತ್ತಿದೆ ಎಂದು ಹೇಳಿದ ಗಿಳಿ ಪಾಠವನ್ನೇ ಮುಂದುವರೆಸುವ ಕಾಯಕವನ್ನು ಕೈಗೆತ್ತಿಕೊಂಡರು

5 ಜುಲೈ 2022 ರಂದು ಇಂಡಿಯಾ ಟುಡೇ ಕಾನ್ಕ್ಲೇವ್ ಈಸ್ಟ್‌ನಲ್ಲಿ, ಕಾಳಿ ದೇವತೆ ಸಿಗರೇಟ್ ಸೇದುತ್ತಿರುವುದನ್ನು ತೋರಿಸುವ ಫಿಲ್ಮ್ ಪೋಸ್ಟರ್‌ಗೆ ಮೊಯಿತ್ರಾ ಪ್ರತಿಕ್ರಿಯಿಸುತ್ತಾ, ನನಗೆ ಕಾಳಿ ಮಾಂಸ ತಿನ್ನುವ, ಮದ್ಯವನ್ನು ಸ್ವೀಕರಿಸುವ ದೇವತೆ. ನಮ್ಮ ದೇವತೆಯನ್ನು ನಮಗೆ ಹೇಗೇ ಬೇಕೋ ಹಾಗೆ ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ ಎಂದಿದ್ದಲ್ಲದೇ, ಕೆಲವು ಸ್ಥಳಗಳಲ್ಲಿ ಕಾಳಿಗೆ ವಿಸ್ಕಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ ಎಂಬ ವಿವಾದಿತ ಹೇಳಿಕೆಯನ್ನು ನೀಡುವ ಮೂಲಕ ಧರ್ಮನಿಂದೆನೆಗೂ ಗುರಿಯಾದರು.

ಹೀಗೆ ಹೆಜ್ಜೆ ಹೆಜ್ಜೆಗೂ ತಲೆ ಗಟ್ಟಿಗಿದೆ ಎಂದು ಬಂಡೆಗೆ ಚಚ್ಚಿಕೊಳ್ಳುವಂತೆ ಅನಗತ್ಯವಾಗಿ ವಿವಾದಗಳನ್ನು ತನ್ನ ಮೈಮೇಲೆ ಎಳೆದುಕೊಳ್ಳುವ ಕೆಟ್ಟ ಚಾಳಿಯನ್ನು ಮುಂದುವರೆಸುತ್ತಲೇ ಹೋದ ಮೊಹುವಾ ವಿರುದ್ಧ ಬಿಜೆಪಿ ನಾಯಕರಾದ ನಿಶಿಕಾಂತ್ ದುಬೆ ಮತ್ತು ಪಿಪಿ ಚೌಧರಿ ವಿಶೇಷ ಹಕ್ಕು ನೋಟೀಸ್ ಅನ್ನೂ ಸಹಾ ಮಂಡಿಸುವಂತಾಯಿತು.

2019-23ರ ವರೆಗಿನ ಅಧಿವೇಶನದಲ್ಲಿ ಸಂಸದೆ ಮಹುವಾ ಅವರು 61 ಪ್ರಶ್ನೆಗಳನ್ನು ಕೇಳಿದ್ದು, ಅವುಗಳ ಪೈಕಿ 50 ಪ್ರಶ್ನೆಗಳು ಅದಾನಿಗೆ ಸಂಬಂಧಿಸಿದ ಪ್ರಶ್ನೆಗಳೇ ಆಗಿದ್ದು, ಪ್ರತಿ ಅಧಿವೇಶನದಲ್ಲೂ ಮತ್ತು ತಮ್ಮ ಟ್ವಿಟ್ಟರ್ ನ ಮೂಲಕ ಅದಾನಿ ಮತ್ತು ಪ್ರಧಾನಿ ವಿರುದ್ದವಾದ ಹೇಳಿಕೆಗಳನ್ನು ಮುಂದುವರೆಸುತ್ತಲೇ ಹೋಗುತ್ತಿದ್ದದ್ದನ್ನು ಗಮನಿಸಿದ ಬಿಜೆಪಿ, ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುವ ಗಾದೆಯಂತೆ, ಗೌತಮ್ ಅದಾನಿ ವಿರುದ್ಧ ಅಕೆಯ ಹೇಳಿಕೆಯ ಕುರಿತಾಗಿ ವಿಶೇಷವಾದ ಅಂತರಿಕ ತನಿಖೆ ನಡೆಸಿದಾಗ ಹೊರಬಿದ್ದ ಸಂಗತಿ ನಿಜಕ್ಕೂ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತಿತ್ತು.

ಸಂಸದೆ ಮಹುವಾ ಮೊಯಿತ್ರಾ ಅವರು ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಹಣವನ್ನು ಸ್ವೀಕರಿಸಿದ್ದಾರೆ ಎಂಬ ಗಂಭೀರವಾದ ಆರೋಪವನ್ನು ಮಾಡಿದ ಬಿಜೆಪಿ ಆಕೆಯನ್ನು ಈ ಕೂಡಲೇ ಸಂಸದ್ ಸದಸ್ಯತ್ವದಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿದ್ದಲ್ಲದೇ ಆಕೆಯ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿತು. ಇದೇ ಆರೋಪವನ್ನು ಮುಂದಾಗಿಟ್ಟು ಕೊಂಡು 14 ಅಕ್ಟೋಬರ್ 2023 ರಂದು, ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರು ಮೋಯಿತ್ರಾ ಅವರು ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಆರೋಪದ ಮೇಲೆ ಎಫ್‌ಐಆರ್‌ನೊಂದಿಗೆ ಸಿಬಿಐಗೆ ದೂರನ್ನು ದಾಖಲಿಸಿ ಅದರ ಪ್ರತಿಯನ್ನು ಲೋಕಸಭೆಯ ಸಭಾಧ್ಯಕ್ಷರಿಗೆ ಮತ್ತು ಸಂಸತ್ತಿನ ನೈತಿಕ ಸಮಿತಿಗೆ ರವಾನಿಸಿದರು. ಅದಾನಿಯನ್ನು ಗುರಿಯಾಗಿಸಿಕೊಂಡು ಸಂಸತ್ತಿನ ಪ್ರಶ್ನೆಗಳನ್ನು ಕೇಳಲು ದರ್ಶನ್ ಹಿರಾನಂದನಿ (ಅದಾನಿ ಗ್ರೂಪ್‌ನ ಪ್ರತಿಸ್ಪರ್ಧಿ ಸಂಘಟನೆಯ ಮುಖ್ಯಸ್ಥ) ಅವರಿಂದ ಮೊಯಿತ್ರಾ ಅವರು ವಿವಿಧ ಸಮಯದಲ್ಲಿ ಹಣ ಮತ್ತು ಅನೇಕ ರೀತಿಯ ಸಹಾಯವನ್ನು ಪಡೆದಿದ್ದಾರೆ ಎಂದು ಡೆಹಾಡ್ರಾಯ್ ಆರೋಪಿಸಿದರು.

ಈ ಆರೋಪವನ್ನು ಖಂಡತುಂಡವಾಗಿ ವಿರೋಧಿಸಿದ ಮೊಹುವಾ ಇದೊಂದು ರಾಜಕೀಯ ಪ್ರೇರಿತವಾದ ದೂರಾಗಿದ್ದು ತಾನು ಅದಾನಿಯ ವಿರುದ್ದ ಮಾತನಾಡದಂತೆ ತಡೆಯುವ ಹುನ್ನಾರ ಎಂಬ ಹೇಳಿಕೆ ನೀಡಿ ತನ್ನನ್ನು ತಾನು ನಿರಪರಾಧಿ ಎಂದು ಹೇಳಿಕೊಂಡರೂ, ಅಕೆಯ ದೂರಿನ ವಿರುದ್ಧ ಉದ್ಯಮಿ ದರ್ಶನ್ ಹಿರಾನಂದನಿ ಆವರನ್ನು ತನಿಖೆಗೆ ಒಳಪಡಿಸಿ ವಿಚಾರಣೆ ನಡೆಸಿದಾಗ, ಸಂಸತ್ತಿನಲ್ಲಿ ಅಧಾನಿ ಮತ್ತು ಪ್ರಧಾನಿಯ ವಿರುದ್ಧ ಜೋರು ಧನಿಯಲ್ಲಿ ಆರೋಪವನ್ನು ಮಾಡುತ್ತಾ ಸಂಸತ್ ಕಲಾಪದ ಸಮಯವನ್ನು ವ್ಯರ್ಥ ಮಾಡಿದ ಮೊಹುವಾ ಹಿಂದೆ ತನ್ನ ವಯಕ್ತಿಕ ತಂತ್ರ ಅಡಗಿತ್ತು ಎಂಬುದನ್ನು ಒಪ್ಪಿಕೊಂಡಿರುವುದು ಮೊಹುವ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ದೇಶಾದ್ಯಂತ ನಡೆಯುವ ಅನೇಕ ಯೋಜನೆಗಳಲ್ಲಿ ಅದಾನಿ ಮತ್ತು ಹಿರಾನಂದಾನಿ ಸಂಸ್ಥೆಗಳು ಭಾಗವಹಿಸಿದ್ದರೂ ಅನೇಕ ಯೋಜನೆಗಳು ಅದಾನಿ ಪಾಲಾಗುತ್ತಿದ್ದದ್ದನ್ನು ಸಹಿಸದ ದರ್ಶನ್ ಹಿರಾನಂದಾನಿ ಟಿಎಂಸಿ ಸಂಸದೆ ಮಹುವಾ ಮೊಹಿತ್ರಾ ಅವರನ್ನು ಸಂಪರ್ಕಿಸಿ ಆಕೆಗೆ ದುಬಾರಿ ಐಫೋನ್‌ ನಿಂದ ಹಿಡಿದು ದುಬಾರಿ ಬ್ಯಾಗ್, ವಿದೇಶ ಪ್ರವಾಸ, ದುಬಾರಿ ಚಪ್ಪಲಿ, ದುಬಾರಿ ಸೀರೆ, ಐಷಾರಾಮಿ ಜೀವನದಂತ ದುಬಾರಿ ಉಡುಗೊರೆಗಳನ್ನು ನೀಡುವ ಮೂಲಕ ತನಗೆ ಬೇಕಾದ ರೀತಿಯಲ್ಲಿ ಗೌತಮ್ ಅದಾನಿ ವಿರುದ್ಧ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಿಸುವ ಮೂಲಕ ಅದಾನಿ ಒಬ್ಬ ಭ್ರಷ್ಟ ವ್ಯಾಪಾರಿ ಮತ್ತು ಪ್ರಧಾನಿಗಳು ಅವರ ಹಿಂದಿದ್ದಾರೆ ಎಂಬಂತೆ ಬಿಂಬಿಸುವುದರಲ್ಲಿ ಬಹುಪಾಲು ಸಮರ್ಥರಾದರು. ಕೇವಲ ಈ ರೀತಿಯ ಉಡುಗೊರೆಗಳಷ್ಟೇ ಅಲ್ಲದೇ,  2 ಕೋಟಿ ರೂಪಾಯಿ ಹಣವನ್ನು ಹಿರಾನಂದಾನಿ ಕಂಪನಿಯಿಂದ ಪಡೆದಿರುವ ಮಹುವಾ, ಆಕೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಹಿರಾನಂದಾನಿ ಕಂಪನಿ ಆಕೆಗೆ 75 ಲಕ್ಷ ರೂಪಾಯಿ ನೀಡಿದೆ ಎಂಬ ಆರೋಪವನ್ನು ಬಿಜೆಪಿ ಸಂಸದ ನಿಶಿಕಾಂತ ದುಬೆ ಮಾಡಿದ್ದನ್ನು ಸ್ವತಃ ಉದ್ಯಮಿ ಹೀರಾನಂದಾನಿ ಪೋಲೀಸರ ವಿಚಾರಣಾ ಸಮಯದಲ್ಲಿ ಒಪ್ಪಿಕೊಂಡಿದಾರೆ.

ಸಾಧಾರಣವಾಗಿ ಟಿಎಂಸಿ ತನ್ನ ಪಕ್ಷ ಮತ್ತು ತನ್ನ ಕಾರ್ಯಕರ್ತರ ವಿರುದ್ಧ ಯಾರೇ ಆರೋಪ ಮಾಡಿದರೂ ಅದನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ವಿರೋಧ ಮಾಡುತ್ತಿದ್ದರೂ, ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಮಹುವಾ ಮೊಯಿತ್ರಾ ಅವರು ಹಣವನ್ನು ಸ್ವೀಕರಿಸಿದ್ದಾರೆ ಎಂಬ ಘನ ಘೋರವಾದ ಆರೋಪ ಬಂದರು ಮೌನಕ್ಕೆ ಶರಣಾಗಿದ್ದು, ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ಆ ಆರೋಪದ ವಿರುದ್ಧ ಮೊಹುವಾ ವಯಕ್ತಿಯವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಪಕ್ಷದ ಸುಪ್ರೀಂ ಮಮತಾ ದೀದಿ ಮತ್ತು ರಾಜ್ಯಸಭಾ ಸಾಂಸದ ಡೆರಿಕ್ ಓಬಿರಾನ್ ಹೇಳಿದ್ದರೆ, ಈ ಸಮಯದಲ್ಲಿ ಪಕ್ಷವು ಹೇಳಲು ಏನೂ ಇಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳುವ ಮೂಲಕ ಆಕೆಯ ವಿರುದ್ಧ ಆರೋಪಗಳು ಸತ್ಯ ಎನ್ನುವುದನ್ನು ಪರೋಕ್ಷವಾಗಿ ನಿರೂಪಿಸುತ್ತಿವೆ.

ಹಿರಾನಂದನಿ ಹೇಳಿಕೆಯ ಮಾಧ್ಯಮ ಸೋರಿಕೆಯನ್ನು ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರಾದರು ಸದ್ಯಕ್ಕೆ ಆಕೆಯ ಪರ ಪಕ್ಷ ಮತ್ತು ಯಾವುದೇ ನಾಯಕರು ನಿಲ್ಲದೇ ಆಕೆಯನ್ನು ಒಬ್ಬಂಟಿಯನ್ನಾಗಿಸಿರುವುದು ದಾಲ್ ಮೇ ಕುಚ್ ಕಾಲಾ ಹೈ ಎನ್ನುವುದನ್ನು ಸಮರ್ಥನೆ ಮಾಡಿಕೊಳ್ಳುವಂತಿದೆ. ಮುಂಬರುವ 2024ರ ಚುನಾವಣೆಯಲ್ಲಿ NDA ವಿರುದ್ಧ ಹೋರಾಟ ನಡೆಸಲು 25ಕ್ಕೂ ಅಧಿಕ ಎಡಬಿಡಂಗಿ ರಾಜಕೀಯ ಕಟ್ಟಿಕೊಂಡ I.N.D.I ಅಲಯನ್ಸ್ ನ ಒಂದೊಂದೇ ಹುಳುಕುಗಳು ಹೊರಬೀಳಲು ಆರಂಭವಾಗಿದ್ದು, ಲೋಕಸಭಾ ಚುನಾವಣಾ ಸಮಯದಲ್ಲಿ ಇಂತಹ ಅದೆಷ್ಟು ಕಟು ಸತ್ಯಗಳು ಹೊರಬೀಳಬಹುದೋ ಎಂಬ ನೀರೀಕ್ಷೆಯಲ್ಲಿ ದೇಶದ ಜನರಿದ್ದಾರೆ ಎನ್ನುವುದೇ ಸತ್ಯವಾಗಿದೆ.

2014ರಲ್ಲಿ ಮೌತ್ ಕಾ ಸೌದಾಗರ್ ಅರ್ಥಾತ್ ನರಹಂತಕ, ಚಾಯ್ ವಾಲ ಎಂದು ಟೀಕಿಸಿದ್ದ ವಿರೋಧ ಪಕ್ಷಗಳು 2019 ರಲ್ಲಿ ರಫೇಲ್ ಪ್ರಕರಣವನ್ನು ಕೈಗೆತ್ತಿಕೊಂಡು ಚೌಕೀದಾರ್ ಚೋರ್ ಹೈ ಎಂದು ಟೀಕಿಸಿದರೂ ಸತ್ಯವನ್ನು ತಿಳಿದಿದ್ದ ದೇಶವಾಸಿಗಳು ವಿರೋಧ ಪಕ್ಷವನ್ನು ಮಣ್ಣು ಮುಕ್ಕಿಸಿದ್ದರೂ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ 2024 ಅದಾನಿ-ಪ್ರಧಾನಿ ಹೇಳಿಯನ್ನು ಮುನ್ನಡೆಗೆ ತಂದು ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂಬ ಹೊಂಚನ್ನು ಮೊಳಕೆಯಲ್ಲಿ ಚಿವುಟಿ ಹಾಕಿದಂತಾಗಿದೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ, ಉಮಾಸುತ

Leave a comment