ಕರಾವಳಿಯ ಅದರಲ್ಲೂ ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ರೈತಾಪಿ ಜನರು ನವೆಂಬರ್ ತಿಂಗಳಿನಲ್ಲಿ ತಮ್ಮ ಗದ್ದೆಯಲ್ಲಿ ಭತ್ತದ ಕೊಯಿಲು ಮಾಡಿದ ನಂತರ ಫ್ರೆಬ್ರವರಿ- ಮಾರ್ಚ್ ತಿಂಗಳಿನ ಮುಂದಿನ ಕೃಷಿ ಚಟುವಟಿಕೆ ಆರಂಭವಾಗುವುದಕ್ಕೆ ಮುಂಚಿನ ಬಿಡುವಿನ ಸಮಯದಲ್ಲಿ, ಮನೋರಂಜನೆಗಾಗಿ ತಮ್ಮ ಕೊಟ್ಟಿಗೆಯಲ್ಲಿ ಇದ್ದ ಕೋಣಗಳನ್ನು ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುತ್ತಾ ಅದರ ಜೊತೆಯಲ್ಲಿ ತಾವೂ ಸಹಾ ಎದ್ದು ಬಿದ್ದೂ ಓಡುತ್ತಿದ್ದ ಒಂದು ರೀತಿಯ ಜನಪದ ಕ್ರೀಡೆಯೇ ಕಂಬಳ.
ಈ ರೀತಿಯ ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಆರಂಭದಲ್ಲಿ ಆಯಾಯಾ ಊರಿನ ಮಟ್ಟದಲ್ಲಿ ನಡೆಯುತ್ತಿದ್ದ ಕಂಬಳದ ಸ್ಪರ್ಧೆ ಕ್ರಮೇಣ, ಊರಿನ ಸಾಹುಕಾರರು ಮತ್ತು ರಾಜಾಶ್ರಯ ಸಿಕ್ಕ ನಂತರ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರುಗಳು ಸೇರಿಕೊಂಡು ಒಂದು ರೀತಿಯ ಜಾತ್ರೆಯ ರೂಪದಲ್ಲಿ ಕಂಬಳಗಳನ್ನು ನಡೆಸಲು ಆರಂಭಿಸಿದ ನಂತರ, ಕಂಬಳವು ಅತ್ಯಂತ ಪ್ರಸಿದ್ಧವಾಗಿ ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳೆದಿದೆಯಲ್ಲದೇ, ಕಂಬಳದಲ್ಲಿ ಓಡಿಸುವುದಕ್ಕಾಗಿಯೇ ಅತ್ಯಂತ ದಷ್ಟ ಪುಷ್ಟದ ಕೋಣಗಳನ್ನು ಆಯ್ಕೆ ಮಾಡಿ ಅವುಗಳನ್ನು ವಿಶೇಷರೀತಿ ಆರೈಕೆಗಳೊಂದಿಗೆ ಐಶಾರಾಮ್ಯವಾಗಿ ಬೆಳೆಸುವುದಲ್ಲದೇ, ಆ ಕೋಣಗಳ ಜೊತೆಯಲ್ಲಿ ಓಡುವವರೂ ಸಹಾ ಇತರೇ ಯಾವುದೇ ಕ್ರೀಡಾಳುಗಳಿಗೂ ಕಡಿಮೆ ಇಲ್ಲದಂತೆ ತಯಾರಾಗಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.
ಹಿಂದೆಲ್ಲಾ ಕಂಬಳ ಕೇವಲ ಕೋಣಗಳ ಓಟಕ್ಕಷ್ಟೇ ಸೀಮಿತವಾಗಿರದೇ, ಹಗಲು ಹೊತ್ತಿನಲ್ಲಿ ಕಂಬಳ ನಡೆಯುತ್ತಿದ್ದ ಸಂಧರ್ಭದಲ್ಲಿ ಕೊರಗರ ಡೋಲು, ಪನಿ ಕುಲ್ಲುನು ಮೊದಲಾದ ಜಾನಪದ ಆಚರಣೆಗಳು ನಡೆಯುತ್ತಿದ್ದರೆ, ಇನ್ನು ಸಂಜೆಯಾದಂತೆ, ಊರಿನೊಳಗೆ ಯಕ್ಷಗಾನದ ಆಟಗಳನ್ನು ಆಡಿಸುವ ಮೂಲಕ ಜನರಿಗೆ ಒಳ್ಳೆಯ ಮನೋರಂಜನೆಯನ್ನು ನೀಡುವ ಸದ್ದುದ್ದೇಶದಿಂದ ಕೂಡಿರುತ್ತಿತ್ತು. ಊರಿನ ಸ್ಥಿತಿವಂತ ಕುಟುಂಬಗಳು, ತಮ್ಮ ಉಳುಮೆಗಾಗಿ ಬಳಸುತ್ತಿದ್ದ ಕೋಣಗಳಲ್ಲಿ ಬಲಿಷ್ಠವಾದ ಕೋಣಗಳೊಂದಿಗೆ ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಬಲಿಷ್ಟ ವ್ಯಕ್ತಿಗಳನ್ನು ಓಡಿಸುವ ಸ್ಪರ್ಧೆಯನ್ನು ಏರ್ಪಡಿಸಿ ಅಲ್ಲಿ ವಿಜೇತರಾದವರಿಗೆ ಯಥಾಶಕ್ತಿ ಬಹುಮಾನವನ್ನು ನೀಡುವುದರ ಮೂಲಕ ತಮ್ಮೂರಿನ ಕೃಷಿಕರಲ್ಲಿ ಕ್ರೀಡಾ ಸ್ಲೂರ್ತಿಯ ಮನೋಭಾವಕ್ಕೆ ಇಂಬು ಕೊಡುವ ಸದುದ್ದೇಶವನ್ನು ಹೊಂದಿದ್ದಲ್ಲದೇ, ಕಂಬಳ ನಡೆಸುವುದು ತಮ್ಮ ಹೆಮ್ಮೆಯ ಪ್ರತೀಕ ಎಂದು ಭಾವಿಸುತ್ತಿದ್ದರು.
ಈ ಕ್ರೀಡೆಗೆ ಕಂಬಳ ಎಂಬ ಹೆಸರು ಬರಲು ಅನೇಕ ರೀತಿಯ ವೃತ್ತಾಂತವಿದೆ. ಕಂಪ ಎಂದರೆ ಕೆಸರು ಎಂಬ ಅರ್ಥವಿದೆ. ಅದೇ ರೀತಿಯಲ್ಲಿ ತುಳು ಭಾಷೆಯಲ್ಲಿ ಹೊಲಕ್ಕೆ ಪೊಲ ಎಂದು ಕರೆಯುವುದರಿಂದ ಕಂಪ+ಪೊಲ ಸೇರಿ ಕಂಬುಲ ಎಂದು ಹೇಳಲಾಗುತ್ತದೆ ಎಂದು ಕೆಲವರು ಹೇಳಿದರೆ, ಇನ್ನು ಮತ್ತೊಂದು ಪ್ರಕಾರ, ಕಳ ಎಂಬುದಕ್ಕೆ ಸ್ಪ್ರರ್ಧೆಯ ವೇದಿಕೆ ಎಂಬ ಅರ್ಥವಿರುವುದರಿಂದ ಕಂಪ + ಕಳ ಸೇರಿಕೊಂಡು ಕಂಬಳ ಆಗಿರಬಹುದು ಎಂದೂ ಹೇಳಲಾಗುತ್ತದೆ. ಇನ್ನು ಮತ್ತೊಂದು ಅಭಿಪ್ರಾಯದ ಪ್ರಕಾರ, ತುಳು ಭಾಷೆಯಲ್ಲಿ ಗದ್ದೆಗೆ ಕಂಡ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ ಮತ್ತು ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎಂದು ಕರೆಯುತ್ತಾರೆ. ಈ ರೀತಿ ತಗ್ಗಿನಲ್ಲಿರುವ ಗದ್ದೆಯಲ್ಲಿ ಅತ್ಯಂತ ನೀರು ಹೆಚ್ಚಾಗಿ ನಿಂತು ಹೆಚ್ಚಿನ ಕೆಸರು ಇರುವ ಕಾರಣ, ಕಂಪ+ ಕಂಡ ಸೇರಿ ಕಂಬಳ ಆಗಿರಬಹುದು ಎನ್ನಲಾಗುತ್ತದೆ.
ಇನ್ನು ಕಂಬಳದಲ್ಲಿ ಒಂಟಿ ಗದ್ದೆಯ ಕಂಬಳ ಮತ್ತು ಜೋಡಿ ಗದ್ದೆಯ (ಜೋಡುಕರೆ) ಕಂಬಳ ಎಂಬ ಎರಡು ರೀತಿಯ ಸ್ಪರ್ಧೆಗಳು ನಡೆಯುತ್ತವೆ. ಸಾಮಾನ್ಯವಾಗಿ ಒಂಟಿ ಗದ್ದೆಯ ಕೆನೆ ಹಲಗೆ ಪಂದ್ಯವನ್ನು ಒಂದೇ ಕಣದಲ್ಲಿ ನಡೆಸಿ ಇದರಲ್ಲಿ ವೇಗವಾಗಿ ಓಡುವ ಸ್ಪರ್ಧೆಯ ಬದಲಿಗೆ, ಓಡುವಾಗ ಅವುಗಳು ಚಿಮ್ಮಿಸುವ ಕೆಸರಿನ ಎತ್ತರದ ಆಧಾರದ ಮೇಲೆ ಸ್ಪರ್ಧೆ ನಡೆಸಲಾಗುತ್ತದೆ. ಅದೇ ಜೋಡುಕರೆ ಕಂಬಳಗಳಲ್ಲಿ ಅಕ್ಕ-ಪಕ್ಕ ಎರಡು ಕಣಗಳಿದ್ದು ಎರಡರಲ್ಲೂ ಏಕಕಾಲಕ್ಕೆ ಕೋಣಗಳ ಮಧ್ಯೆ ಸ್ಪರ್ಧೆ ಏರ್ಪಡಿಸಿ ಅವುಗಳಲ್ಲಿ ವೇಗವಾಗಿ ಓಡುವ ಕೋಣಗಳನ್ನು ವಿಜೇತ ಎಂದು ಘೋಷಿಸಲಾಗುತ್ತದೆ.
ಈ ಮೊದಲು ಗದ್ದೆಗಳಲ್ಲಿ ಭತ್ತವನ್ನು ಕೊಯಿಲು ಮಾಡಿದ ಗದ್ದೆಗಳಲ್ಲಿ ಕಂಬಳಗಳನ್ನು ನಡೆಸುತ್ತಿದ್ದರೆ, ಇತ್ತೀಚೆಗೆ ಕಂಬಳಕ್ಕಾಗಿಯೇ ಗದ್ದೆಗಳನ್ನು ಮೀಸಲಿಡುವ ಪದ್ದತಿಯು ಜಾರಿಯಲ್ಲಿದೆ. ಕಂಬಳಕ್ಕೆ ಬಳಸಲಾಗುವ ಗದ್ದೆಗಳ ಉದ್ದ ಸುಮಾರು ನೂರರಿಂದ ಇನ್ನೂರು ಮೀಟರುಗಳಷ್ಟು ಉದ್ದದ ಓಟದ ಕಣಗಳಲ್ಲಿ ಕೆಸರಿನೊಂದಿಗೆ ಸ್ವಲ್ಪ ಪ್ರಮಾಣದಲ್ಲಿ ಮರಳನ್ನು ಸೇರಿಸಿ ಹಸನಾಗಿಸಿ ಅದರ ಮೇಲೆ ನೀರನ್ನು ಹಾಯಿಸಿ ಕಂಬಳ ಓಟಕ್ಕೆ ಕಣವನ್ನು ಸಿದ್ದ ಗೊಳಿಸಲಾಗುತ್ತದೆ.
ಸಾಮಾನ್ಯವಾಗಿ ಕಂಬಳದ ಕಣವು ತಗ್ಗಿನಲ್ಲಿ ಪ್ರದೇಶದಲ್ಲಿ ಇಳಿಜಾರಿನ ಕಣವಾಗಿದ್ದು, ಎರಡೂ ಬದಿಯಲ್ಲಿ ಮಾವಿನ ಎಲೆಗಳ ತೋರಣಗಳನ್ನು ಕಟ್ಟಲಾಗಿದ್ದು ಆ ತೋರಣಗಳೇ, ಓಟದ ಆರಂಭದ ಮತ್ತು ಮುಕ್ತಾಯದ ಗೆರೆಗಳಾಗಿರುತ್ತದೆ. ಆರಂಭದ ಕಡೆಯಲ್ಲಿ ಸ್ವಲ್ಪ ತಗ್ಗನ್ನು ಮಾಡುವ ಮೂಲಕ ಕೋಣಗಳು ಸುಲಭವಾಗಿ ಕೆಣಕ್ಕೆ ಇಳಿಯುವಂತಹ ವ್ಯವಸ್ಥೆ ಇದ್ದರೆ, ಕಣದ ಮುಕ್ತಾಯದ ಬದಿಯು ಏರಿಯಂತೆ ಎತ್ತವಾಗಿದ್ದು, ವೇಗವಾಗಿ ಓಡಿ ಬಂದ ಕೋಣಗಳು ಮಂಜೊಟ್ಟಿ ಎಂದು ಕರೆಯಲಾಗುವ ಆ ಏರಿಯನ್ನೇರಿ ವೇಗವನ್ನು ತಗ್ಗಿಸಿಕೊಳ್ಳುವಂತಹ ವ್ಯವಸ್ಥೆ ಮಾಡಲಾಗುವುದು ವಿಶೇಷವಾಗಿದೆ.
ಕಂಬಳದ ಕೋಣವನ್ನು ಸಾಕುವುದೆಂದರೆ ಅದು ಸಾಮಾನ್ಯವಾಗಿರದೇ, ಒಳ್ಳೆಯ ಜಾತಿಯ ಕೋಣವನ್ನು ಆರಿಸಿ ಅದರ ಚೆನ್ನಾಗಿ ಆರೈಕೆ ಮಾಡಿ, ಕಂಬಳಕ್ಕೆ ತಯಾರಿ ಮಾಡುವುದರೊಂದಿಗೆ, ಅಂತಹ ಕೋಣಗಳನ್ನು ಓಡಿಸಲು ಬೇಕಾದ ಜನವನ್ನು ತಯಾರಿ ಮಾಡುವುದೂ ಕೋಣದ ಯಜಮಾನನಿಗೆ ಅಗತ್ಯ. ಇದು ಖರ್ಚಿನ ಬಾಬ್ತೂ ಹೌದು. ಆ ಕಾರಣಕ್ಕಾಗಿ ಪ್ರತಿಷ್ಠೆಯ ಸಂಕೇತವೂ ಹೌದು. ಪ್ರತಿ ದಿನವೂ ಅವುಗಳಿಗೆ ಚೆನ್ನಾದ ಹುಲ್ಲು, ಬೇಯಿಸಿದ ಹುರುಳಿ ತಿನ್ನಿಸಲಾಗುತ್ತದೆ. ಅಂತೆಯೇ ಎಣ್ಣೆ ಹಚ್ಚಿ ಆರೈಕೆ ಮಾಡಲಾಗುತ್ತದೆ. ಕಂಬಳದ ಓಟಕ್ಕೆ ತಯಾರಿಯೂ ಮುಖ್ಯ. ಜೊತೆಯ ಕೋಣದೊಂದಿಗೆ ಸಮನಾಗಿ ಕೆಸರು ಗದ್ದೆಯಲ್ಲಿ ಗಲಾಟೆ ಗೌಜುಗಳ ಮಧ್ಯೆ ಓಡುವ ತರಬೇತಿಯನ್ನು ಈ ಕೋಣಗಳಿಗೆ ನೀಡಲಾಗುತ್ತದೆ. ಕಂಬಳದ ಓಟಕ್ಕೆ ಯೋಗ್ಯವೆಂದು ತೋರಿದ ಕೋಣಗಳ ಖರೀದಿ-ಮಾರಾಟ ಲಕ್ಷಗಟ್ಟಲೆ ರೂಪಾಯಿಗಳಲ್ಲಿ ನಡೆಯುತ್ತದೆ. ಅದೇ ರೀತಿ ಕೋಣಗಳ ಆರೈಕೆಯೂ ಬಹಳ ಮುತುವರ್ಜಿಯಿಂದ, ಕಾಳಜಿಯಿಂದ ನಡೆಯುತ್ತದೆ.
ಕಂಬಳದಲ್ಲಿ ಸ್ಪರ್ಧೆಯಲ್ಲಿ ನೊಗಗಳಿಗೆ ಕಟ್ಟಿದ ಎರಡು ಜೋಡಿ ಕೋಣ ಮತ್ತು ಅವುಗಳನ್ನು ಓಡಿಸುವಾತ ಸೇರಿ ಒಂದು ತಂಡವಾಗುತ್ತದೆ. ಈ ರೀತಿಯಾದ ನೂರಾರು ತಂಡಗಳ ನಡುವೆ ಕಂಬಳದ ಸಮಯದ ವಾರಾಂತ್ಯಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲೂ ಹಲವು ವಿಧಗಳಿವೆ.
- ಅಡ್ಡ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುವುದು. ಸಾಮಾನ್ಯವಾಗಿ ಈ ರೀತಿಯ ಸ್ಪರ್ಧೆಯನ್ನು ಆರಂಭದಲ್ಲಿ ನಡೆಸುವ ಮೂಲಕ ಕೋಣಗಳಿಗೆ ಕಟ್ಟಲಾದ ಹಲಗೆಯ ಮೂಲಕ ಹದವಾದ ಗದ್ದೆಯ ಮಣ್ಣನ್ನು ಸಮನಾಗಿ ಹರಡಲು ಸಹಾಯಕವಾಗುತ್ತದೆ.
- ಕೆನೆ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸುವುದು. ಇಲ್ಲಿ ಕೋಣಗಳ ಬಾಲವೇ ಹಲಗೆಯ ಮೇಲೆ ನಿಂತಿರುವವರಿಗೆ ಆಧಾರವಾಗಿದ್ದು, ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯ. ಈ ರೀತಿಯ ಓಟವನ್ನೇ ಕಾಂತಾರ ಸಿನಿಮಾದಲ್ಲಿಯೂ ಕಾಣಬಹುದಾಗಿದೆ.
- ಹಗ್ಗದ ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸುವುದು ಒಂದು ಸ್ಪರ್ಧೆಯಾದರೆ,
- ನೇಗಿಲು ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡವನ್ನು ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡೊಂದನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸುವುದು ಮತ್ತೊಂದು ಸ್ಪರ್ಧೆಯಾಗುತ್ತದೆ.
ಈ ಮೊದಲೇ ತಿಳಿಸಿದಂತೆ, ಹಗ್ಗ, ನೇಗಿಲು ಮತ್ತು ಹಲಗೆ ಓಟಗಳಲ್ಲಿ ವೇಗವೇ ಪ್ರಾಮುಖ್ಯವಾಗಿದ್ದು. ಯಾವ ಜೋಡಿಯು ಉಳಿದೆ ತಂಡಗಳಿಗಿಂತ ವೇಗವಾಗಿ ಓಟ ಮುಗಿಸುತ್ತವೆಯೋ ಅವುಗಳನ್ನು ವಿಜಯೀ ಜೋಡಿಗಳು ಎಂದು ಘೋಷಿಸಿದರೆ, ಕೆನೆ ಹಲಗೆ ಓಟ ಸ್ವಲ್ಪ ವಿಭಿನ್ನವಾಗಿದ್ದು, ಓಟದ ಗದ್ದೆಯ ಮಧ್ಯೆ ಅಡ್ಡ ಹಾಯುವಂತೆ ನಿಗದಿತ ಎತ್ತರದಲ್ಲಿ ಮೇಲೆ ಕಟ್ಟಲಾದ ಬಟ್ಟೆಗೆ ತಾಗುವಂತೆ ಕೆನೆ ಹಲಗೆಯ ಮೂಲಕ ಕೆಸರು ನೀರನ್ನು ಯಾವ ಜೋಡಿ ಅತೀ ಎತ್ತರಕ್ಕೆ ಚಿಮ್ಮಿಸುತ್ತವೆಯೋ ಅವು ವಿಜಯಿಯಾಗುತ್ತವೆ. ಇನ್ನು ಕೋಣಗಳ ಬಾಯಿಯಲ್ಲಿರುವ ಹಲ್ಲಿನಾಧಾರಿತವಾಗಿ ಕಿರಿಯ ಮತ್ತು ಹಿರಿಯ ಎಂದು ವರ್ಗೀಕರಿಸಿ, ಕಿರಿಯ ಮತ್ತು ಹಿರಿಯ ಕೋಣ ಎಂದು ಎರಡು ವಿಭಾಗಗಳಲ್ಲಿ ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸಿ ವಿಜೇತರಾದ ಕೋಣಗಳ ಜೋಡಿಯ ಯಜಮಾನರಿಗೆ ಮತ್ತು ಅವುಗಳನ್ನು ಓಡಿಸಿದಾತನಿಗೂ ಚಿನ್ನದ ಪದಕಗಳನ್ನು ನೀಡುವ ಸಂಪ್ರದಾಯವಿದೆ.
ಇತ್ತೀಚೆಗೆ ಕಂಬಳವನ್ನು ನಡೆಸುವುದು ಮತ್ತು ಕಂಬಳದ ಕೋಣ ಮತ್ತು ಓಡಿಸುವಾತನನ್ನು ಸಾಕುವುದು ಒಂದು ಪ್ರತಿಷ್ಟೆಯಾಗಿ ಪರಿಣಮಿಸಿರುವ ಕಾರಣ, ಕಟ್ಟು ಮಸ್ತಾದ ಕೋಣಗಳನ್ನು ಮೊದಲೇ ಕೊಂಡು ತಂದು, ಅದಕ್ಕೆ ಸೂಕ್ತವಾದ ಕಟ್ಟುಮಸ್ತಾದ ಕಟ್ಟಾಳುವನ್ನೂ ಸಹಾ ಹುಡುಕುವುದಲ್ಲದೇ, ಅವರೊಡನೆ ಕೋಣಗಳನ್ನು ಸರಿಯಾಗಿ ಆರೈಕೆ ಮಾಡುವ ಮತ್ತು ತರಭೇತಿ ನೀಡುವ ಸಹಾಯಕರನ್ನೂ ನೇಮಿಸಿಕೊಂಡು ತಮ್ಮ ಸ್ವಂತ ಮಕ್ಕಳಿಗಿಂತಲೂ ಒಂದು ಕೈ ಹೆಚ್ಚಾಗಿ ಆರೈಕೆ ಮಾಡುವುದು ವಿಶೇಷವಾಗಿದೆ. ಕೆಲ ವರ್ಷಗಳ ಹಿಂದೆ ಕಂಬಳದ ಕೋಣಗಳನ್ನು ಓಡಿಸುವ ಶ್ರೀನಿವಾಸ್ ಗೌಡ ಅವರು 13.62 ಸೆಕೆಂಡುಗಳಲ್ಲಿ 142.5 ಮೀಟರ್ ಓಡುವ ಮೂಲಕ ವಿಶ್ವ ದಾಖಲೆಯನ್ನು ಮಾಡುವ ಮೂಲಕ ವಿಶ್ವದ ನೂರು ಮೀಟರುಗಳ ಓಟದ ದಿಗ್ಗಜ ಉಸೇನ್ ಬೋಲ್ಟ್ ಅವರ ವಿಶ್ವ ದಾಖಲೆಯನ್ನು ಮುರಿದ ನಂತರ ಕಂಬಳದ ಖ್ಯಾತಿ ರಾತ್ರೋ ರಾತ್ರಿ ಮತ್ತಷ್ಟೂ ವಿಶ್ವವಿಖ್ಯಾತವಾಗಿದ್ದಲ್ಲದೇ, ಶ್ರೀನಿವಾಸ್ ಗೌಡ ಅವರು ಇಂಡಿಯನ್ ಉಸೇನ್ ಬೋಲ್ಟ್ ಎಂಬ ಕೀರ್ತಿಗೂ ಪಾತ್ರರಾಗಿದ್ದದ್ದು ಗಮನಾರ್ಹವಾಗಿದೆ.
ಕಂಬಳದ ಸ್ಪರ್ಧೆಯ ದಿನ ಗದ್ದೆಯ ಇಕ್ಕೆಲಗಳಲ್ಲೂ ಕೈಯಲ್ಲಿ ನಾಗರ ಬೆತ್ತವನ್ನು ಹಿಡಿದು ಕೋಣಗಳ ಯಜಮಾನರುಗಳು ಗತ್ತಿನಿಂದ ಠೀವಿಯಿಂದ ತಿರುಗಾಡುವುದನ್ನು ಇಲ್ಲಿ ವರ್ಣಿಸುವುದಕ್ಕಿಂತಲೂ ನೋಡಿ ಅನುಭವಿಸಿದರೇ ಅಂದ ಎನಿಸುತ್ತದೆ. ಕಂಬಳದ ಸುತ್ತಮುತ್ತಲೂ ನೆರೆದಿರುವ ಸಹಸ್ರಾರು ಪ್ರೇಕ್ಷಕರು, ಜೊತೆಗೆ ಕಂಬಳದ ಪ್ರತಿಯೊಂದು ನಡೆಗಳನ್ನೂ ಉಪಮಾನ ಉಪಮೇಯಗಳೊಂದಿಗೆ ಜೋರು ಧ್ವನಿಯಲ್ಲಿ ಧ್ವನಿವರ್ಧಕಗಳ ಮೂಲಕ ವಿವರಿಸುವ ವೀಕ್ಷಕ ವಿವರಣೆಕಾರರು ಒಂದೆಡೆಯಾದರೆ, ಇನ್ನು ಐಸ್ ಕ್ಯಾಂಡಿ, ಸ್ಥಳೀಯವಾಗಿ ತಯಾರಿಸಿದ ಬಣ್ಣ ಬಣ್ಣದ ತಂಪು ಪಾನೀಯಗಳು, ಗೋಲಿ ಸೋಡಾ, ಪಾಪ್ ಕಾರ್ನ್, ಬಗೆ ಬಗೆಯ ಮಂಚೂರಿಯನ್ನುಗಳ ಜೊತೆಗೆ ವಿವಿಧ ರೀತಿಯ ತಿಂಡಿ ತೀರ್ಥಗಳ ಅಂಗಡಿಗಳ ಮುಗ್ಗಟ್ಟುಗಳು, ಒಟ್ಟಿನಲ್ಲಿ ಇಡೀ ಕಂಬಳದ ಸುತ್ತಮುತ್ತಲೂ ಒಂದು ಸಂಭ್ರಮದ ಜಾತ್ರೆಯ ವಾತಾವರಣ ನಿರ್ಮಾಣವಾಗಿರುತ್ತದೆ.
ಕಂಬಳದ ಪ್ರತೀ ಸುತ್ತಿನ ನಂತರ ಫಲಿತಾಂಶ ಘೋಷಣೆಯಾಗುತ್ತಿದ್ದಂತ್ತೆಯೇ ಗೆದ್ದವರು ಬೀಗುತ್ತಿದ್ದರೆ, ಸೋತವರಲ್ಲಿ ಅನೇಕರು ಎತ್ತುವ ತಗಾದೆಗಳನ್ನು ಬಗೆಹರಿಸಲೆಂದೇ ಇರುವ ಮಂದಿಯೂ ಅಧಿಕವಾಗಿಯೇ ಇದ್ದು ಅಂತಿಮವಾಗಿ ಸ್ಪರ್ಧೆಯೆಲ್ಲವೂ ಮುಗಿದು ಫಲಿತಾಂಶ ಘೋಷಿಸುತ್ತಿದ್ದಂತೆಯೇ, ಅದ್ದೂರಿ ಡೋಲು, ಕೊಂಬು, ಕಹಳೆ, ಕದನಿಗಳ ಜೊತೆ ಮುಗಿಲೆತ್ತರಕ್ಕೆ ತಾರಕ ಧನಿಯಲ್ಲಿರುವ ಪ್ರೇಕ್ಷಕರ ಸಿಳ್ಳೆ ಮತ್ತು ಚಪ್ಪಾಳೆಗಳ ನಡುವೆ ವಿಜೇತ ಕೋಣಗಳ ಯಜಮಾನರಿಗೆ ಬಹುಮಾನ ವಿತರಿಸಿದರೆ, ಅದನ್ನು ಸ್ವೀಕರಿಸಲು ಬರುವ ಯಜಮಾನರೂ ಸಹಾ ತಮ್ಮ ಕೈಯಲ್ಲಿ ಅಲಂಕೃತ ಕಟ್ಟು ಹಾಕಿದ ನಾಗರ ಬೆತ್ತವನ್ನು ಹಿಡಿದು ಬಹುಮಾನ ಪಡೆಯಲು ಬರುವುದು ವಿಶೇಷವಾಗಿರುತ್ತದೆ.
ಈ ರೀತಿಯಾಗಿ ಕರಾವಳಿಯ ರೀತಿಯ ಸಾಂಪ್ರದಾಯಿಕ ಜನಪದ ಅದ್ಭುತವಾದ ಕಲೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವ ನಿಟ್ಟಿನಿಂದ ಪ್ರಪ್ರಥಮ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 2023ರ ನವೆಂಬರ್ 25 ಮತ್ತು 26ರಂದು ಕೃತಕವಾಗಿ ನಿರ್ಮಿಸಿದ ಕೆರೆಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಸುತ್ತಿರುವುದಾಗಿ ಆಯೋಜಕರು ಹೇಳುತ್ತಿದ್ದಾರಾದರೂ, ಅದರ ಹಿಂದೆ ರಾಜಕೀಯದ ವಾಸನೆ ಮೂಗಿಗೆ ಬಡಿಯುತ್ತಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.
ಕರಾವಳಿಗೆ ಸೇರಿದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರ ಜಗಳ ಮೂರನೆಯವನಿಗೇ ಲಾಭ ಎನ್ನುವಂತೆ ಆರಿಸಿ ಬಂದ ವಲಸೆಗೆ ಅಶೋಕ್ ಕುಮಾರ್ ರೈ, ಕಾಂಗ್ರೇಸ್ ಪಕ್ಷದಲ್ಲಿ ತನ್ನ ಪ್ರಾಭಲ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕಂಬಳ ನಡೆಸಲು ಬೆಂಗಳೂರಿನ ಅರಮನೆ ಮೈದಾನದ ಮೂಲ ಮಾಲಿಕರಾದ ಮೈಸೂರು ಅರಸರ ಕುಟುಂಬದವರ ಒಪ್ಪಿಗೆಯನ್ನೂ ಪಡೆಯದೇ, ಕಂಬಳ ನಡೆಸುತ್ತಿರುವುದಲ್ಲದೇ, ಅದನ್ನು ಕೇಳಲು ಬಂದ ಅರಸರ ಕುಟುಂಬವರೊಡನೆ ಉದ್ದಟತನದಿಂದ ಮಾತನಾಡಿರುವುದು ಬೇಸರದ ಸಂಗತಿಯಾಗಿದೆ.
ಅಚ್ಚರಿಯ ವಿಷವೆಂದರೆ, ರಿಷಬ್ ಶೆಟ್ಟಿಯವರ ನಿರ್ದೇಶನಲ್ಲಿ ಅತ್ಯಂತ ಯಶಸ್ವಿ ಕಂಡಿದ್ದ ಕಾಂತಾರ ಚಿತ್ರದಲ್ಲಿ ರಿಶಬ್ ಶೆಟ್ಟಿಯವರೇ ಶಿವ ಪಾತ್ರಧಾರಿಯಾಗಿ ಓಡಿಸಿದ್ದ ಕೋಣಗಳು ಆ ಸಿನಿಮಾದಲ್ಲಿ ರೀಲ್ ನಲ್ಲಿ ಪದಕವನ್ನು ಗೆದ್ದಂತೆಯೇ, ಬೆಂಗಳೂರಿನ ರಿಯಲ್ ಕಂಬಳದಲ್ಲೂ ಉಡುಪಿ ಜಿಲ್ಲೆಯ ಬೈಂದೂರಿನ ಪರಮೇಶ್ವರ್ ಭಟ್ ಅವರಿಗೆ ಸೇರಿದ ಅಪ್ಪು-ಕಿಟ್ಟಿ ಎಂಬ ಅದೇ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ತಾವು ಕ್ಲಾಸಿಗೂ ಮತ್ತು ಮಾಸಿಗೂ ಸೈ ಎಂದು ತೋರಿಸಿ ಕೊಟ್ಟಿರುವುದು ಶ್ಲಾಘನೀಯವಾಗಿದೆ.
ಇನ್ನು ಬೆಂಗಳೂರಿನ ಚೊಚ್ಚಲು ಕಂಬಳಕ್ಕೆ ಮೊದಲನೆಯ ದಿನವೇ ನಿರೀಕ್ಷೆಗೂ ಮೀರಿ ಲಕ್ಷಾಂತರ ಜನರು ಬಂದಿರುವುದನ್ನು ಗಮನಿಸಿದ ಇದೇ ಆಶೋಕ್ ರೈ, ಕರಾಳವಳಿಯ ಮತ್ತೊಂದು ಸ್ಪರ್ಧೆಯಾದ ಕೋಳಿ ಅಂಕವನ್ನೂ ಸಹಾ ಸದ್ಯದಲ್ಲೇ ನಡೆಸುವುದಾಗಿ ಘೋಷಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಬಿಟ್ಟಿ ಭಾಗ್ಯಗಳ ಮೂಲಕ ರಾಜ್ಯವನ್ನು ದೀವಾಳಿಯಂಚಿಗೆ ತಲುಪಿಸಿದ ಜನರೇ ಈಗ ತಮ್ಮ ರಾಜಕೀಯ ತೆವಲುಗಳಿಗೆ ಕರಾವಳಿಯ ಸಾಂಪ್ರದಾಯಕ ಕಲೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಲ್ಲದೇಈ ರೀತಿಯಾದ ಜನಪದ ಸಾಂಪ್ರದಾಯಕ ಕಲೆಯನ್ನು ವಾಣಿಜ್ಯೀಕರಣ ಗೊಳಿಸಲು ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಸಹಾ ಜನರು ಮಾತನಾಡಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಇನ್ನು ಜನರನ್ನು ದಿಕ್ಕು ತಪ್ಪಿಸುವಂತಹ, ಕೋಳಿ ಅಂಕದಂತಹ ಜೂಜನ್ನು ನಡೆಸಲು ಮುಂದಾಗಿರುವ ಮನಸ್ಥಿತಿಯನ್ನು ನೆನಪಿಸಿಕೊಂಡರೆ, ಈಗ ಈ ರಾಜ್ಯ ಎತ್ತ ಸಾಗುತ್ತಿದೆ? ಎಂಬ ಭಯ ಮೂಡುತ್ತಿದೆಯಲ್ಲದೇ, ಒಂದು ರೀತಿ ವಿನಾಶ ಕಾಲೇ ವಿಪರೀತ ಬುದ್ಧಿ ಎನಿಸುತ್ತಿರುವುದಂತೂ ಸುಳ್ಳಲ್ಲ ಅಲ್ವೇ?
ಏನಂತೀರೀ?
ಸೃಷ್ಟಿಕರ್ತ, ಉಮಾಸುತ