ಹಿಂದೂಗಳ ನಂಬಿಕೆಯ ಪ್ರಕಾರ ತ್ರೇತ್ರಾಯುಗದಲ್ಲಿ ಪ್ರಭು ಶ್ರೀರಾಮನು ಅಯೋಧ್ಯೆಯಲ್ಲಿ ಜನಿಸಿ ನಂತರ ಪಿತೃವಾಕ್ಯ ಪರಿಪಾಲಕನಾಗಿ 14 ವರ್ಷಗಳ ಕಾಲ ವನವಾಸ ಅನುಭವಿಸುತ್ತಿರುವಾಗ ಸೀತಾ ಮಾತೆಯನ್ನು ರಾವಣನು ಅಪರಿಸಿ ಕೊಂಡು ಲಂಕೆಗೆ ಕೊಂಡೊಯ್ದಿದ್ದಾಗ, ರಾಮ ಲಕ್ಷ್ಮಣರು ಸುಗ್ರೀವ, ಜಾಂಬವಂತ, ಆಂಜನೇಯ ಮತ್ತು ಕಪಿಗಳ ಸಹಾಯದಿಂದ ಸಮುದ್ರಕ್ಕೆ ಸೇತುವನ್ನು ಕಟ್ಟಿ ರಾವಣನ್ನು ಸಂಹರಿಸಿ ಸೀತಾಮಾತೆಯನ್ನು ಅಶೋಕವನದಿಂದ ಬಿಡಿಸಿಕೊಂಡು ಬರುವ ವಿಷಯ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೆ ಕೆಲವು ನಾಸ್ತಿಕರು, ರಾಮಾಯಣ ಎನ್ನುವುದು ನಡದೇ ಇಲ್ಲಾ ಇದೊಂದು ಕಟ್ಟು ಕಥೆ ಎಂದು ವಾದಿಸುವ ಸಮಯದಲ್ಲಿ ವಾಲ್ಮೀಕಿಗಳು ಬರೆದಿರುವ ರಾಮಾಯಣದಲ್ಲಿರುವಂತಹ ಅನೇಕ ಪ್ರದೇಶಗಳು ಕರ್ನಾಟಕ್ಕಲ್ಲಿದ್ದು ಅವುಗಳಲ್ಲಿ ಕೆಲವು ಪ್ರದೇಶಗಳನ್ನು ತಿಳಿಯೋಣ ಬನ್ನಿ.
ಸೀತಾಮಡಿಲು/ಸೀತಾ ಬಚ್ಚಲು, ಚುಂಚನಕಟ್ಟೆ
ಪ್ರಭು ಶ್ರೀರಾಮಚಂದ್ರನು ಸೀತಾಮಾತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ಕಾಡುಗಳಲ್ಲಿ ಅಲೆಯುತ್ತಾ ದಕ್ಷಿಣದ ಕಡೆ ಬರುತ್ತಾನೆಂದು ರಾಮನ ಪರಮಭಕ್ತನಾಗಿದ್ದ ಚುಂಚ ಎಂಬ ಋಷಿ ಮೈಸೂರಿನ ಬಳಿಯ ಅರಣ್ಯವೊಂದರಲ್ಲಿ ಕಾಯುತ್ತಿದ್ದಾಗ, ಪತ್ನಿ ಸಮೇತನಾಗಿ ಅಲ್ಲಿಗೆ ಆಗಮಿಸಿ ಚುಂಚ ಮಹರ್ಷಿಗಳಿಗೆ ದರ್ಶನ ನೀಡಿದ ಸಲುವಾಗಿ ಆಕ್ಷೇತ್ರಕ್ಕೆ ಚುಂಚನಕಟ್ಟೆ ಎಂದು ಪ್ರಖ್ಯಾತವಾಯಿತು ಎಂಬ ಪೌರಾಣಿಕ ಕತೆ ಇದೆ ಖ್ಯಾತವಾಯಿತೆಂದೂ ತಿಳಿದುಬರುತ್ತದೆ.
ಅದೇ ರೀತಿಯಲ್ಲೇ ಮತ್ತೊಂದು ಐತಿಹ್ಯದ ಪ್ರಕಾರ, ಈ ಪ್ರದೇಶದಲ್ಲಿ ಚುಂಚ ಮತ್ತು ಚುಂಚಿಯರೆಂಬ ರಾಕ್ಷಸರು ವಾಸವಾಗಿದ್ದು, ಅವರಿಬ್ಬರೂ. ಸುತ್ತ ಮುತ್ತಲ ನಿವಾಸಿಗಳಿಗೆ ವಿಪರೀತವಾಗಿ ಕಾಟ ಕೊಡುತ್ತಿದ್ದಲ್ಲದೇ, ಹೋಮ ಹವನಾದಿಗಳನ್ನು ಮಾಡುತ್ತಿದ್ದ ಋಷಿ ಮುನಿಗಳಿಗೂ ತೊಂದರೆ ಕೊಡುತ್ತಿದ್ದರು. ವನವಾಸ ಸಮಯದಲ್ಲಿ ಈ ಪ್ರದೇಶಕ್ಕೆ ಶ್ರೀ ರಾಮಚಂದ್ರನು ಬಂದಾಗ, ಅವರ ಬಳಿ ತಮ್ಮ ಕಷ್ಟವನ್ನುಹೇಳಿಕೊಂಡಾಗ, ರಾಮ ಲಕ್ಷ್ಮಣರು ಆ ಚುಂಚ ಚುಂಚಿಯರನ್ನು ಸಂಹರಿಸಿದ ಸಂಧರ್ಭದಲ್ಲಿ ಆ ರಾಕ್ಷಸರು ನಮ್ಮ ಹೆಸರು ಇಲ್ಲಿಗೆ ಕೊನೆಯಾಗುತ್ತದೆ ಎಂದು ದುಃಖಿತರಾದಾಗ ಈ ಪ್ರದೇಶವನ್ನು ಚುಂಚಾರಣ್ಯ ಎಂದು ನಾಮಕರಣ ಮಾಡಿದ ನಂತರ ಆಯಾಸ ಪರಿಹಾರಾರ್ಥವಾಗಿ ಶ್ರೀರಾಮನು ಒಂದು ಕಟ್ಟೆಯ ಮೇಲೆ ಕುಳಿತು ಈ ಜಾಗವೇ ಮುಂದೆ ಚುಂಚನ ಕಟ್ಟೆ ಎಂದು ಪ್ರಖ್ಯಾತವಾಯಿತು ಎಂದೂ ಸಹಾ ಹೇಳಲಾಗುತ್ತದೆ.
ಈ ಪ್ರಕರಣವಾದ ನಂತರ ಸೀತಾದೇವಿಯು ಸ್ನಾನ ಮಾಡಲು ಇಚ್ಚಿಸಿದಾಗ, ರಾಮನು ತನ್ನ ಬಾಣದಿಂದ ಬಂಡೆಯೊಂದನ್ನು ಸೀಳಿ ಅದರ ಮಧ್ಯೆ ಕಾವೇರಿ ನದಿ ಹರಿಯುವಂತೆ ಮಾಡಿದ ಎಂಬುದಕ್ಕೆ ಕುರುಹಾಗಿ ಇಂದಿಗೂ ಅಲ್ಲಿ ಜಲಾಶಯವಿದ್ದು ಅಲ್ಲಿನ ಭೋರ್ಗರೆಯುವ ಸದ್ದು ಬಹಳ ದೂರದವರೆಗೂ ಕೇಳುವಂತಾಗುತ್ತದೆ. ಈ ರೀತಿಯಾದ ಶಬ್ಧದಿಂದಾಗಿ ಸೀತಾ ದೇವಿಯ ವಿಶ್ರಾಂತಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ಮತ್ತೆ ರಾಮನು ಹರಿಯುವ ಕಾವೇರಿಗೆ ಅಡ್ಡಲಾಗಿ ಬಾಣ ಬಿಟ್ಟು ಸೀತಾ ದೇವಿ ವಿಶ್ರಾಂತಿ ಪಡೆಯುತ್ತಿರುವ ಈ ಜಾಗದಲ್ಲಿ ನಿನ್ನ ಹರಿಯುವಿಕೆಯ ಶಬ್ಧ ಆಕೆಗೆ ಭಂಗ ತರಕೂಡದು ಎಂಬ ಆಜ್ಞೆ ಮಾಡಿದ ಕಾರಣ, ಇಂದಿಗೂ ಆ ಪ್ರದೇಶದಲ್ಲಿ ಇರುವ ಕೋದಂಡ ರಾಮ ದೇವಾಲಯದ ಒಳಭಾಗದಲ್ಲಿ ಕೇಳುವುದಿಲ್ಲ ಎಂಬುದು ಗಮನಾರ್ಹವಾಗಿದೆ.
ಈ ಜಲಪಾತದಲ್ಲಿ ಒಂದು ಭಾಗದ ನೀರು ಹಳದಿ ಬಣ್ಣದ್ದಾಗಿದ್ದು, ಸೀತೆಯು ಜಳಕ ಮಾಡುವಾಗ ಆಕೆ ಬಳಸಿದ ಅರಿಶಿನ, ಸೀಗೆಕಾಯಿಯ ಬಣ್ಣ ಎಂಬ ನಂಬಿಕೆಯಿದ್ದು, ಅ ಸ್ಥಳದಲ್ಲಿ ಈಗಲೂ ಸಹ ಅದರ ಸುಗಂಧ ಇರುವ ಕಾರಣ ಈ ಪ್ರದೇಶವನ್ನು ಸೀತೆ ಬಚ್ಚಲು ಅಥವಾ ಸೀತಾ ಮಡಿಲು ಎಂದು ಕರೆಯಲಾಗುತ್ತದೆ. ಇಲ್ಲಿರುವ ಕೋದಂಡರಾಮ ದೇವಾಲಯದಲ್ಲಿ ಸೀತಾದೇವಿಯು ಬಿಲ್ಲು ಹಿಡಿದ ರಾಮನ ಬಲಭಾಗದಲ್ಲಿ ನಿಂತಿದ್ದರೆ, (ಸಾಧಾರಣವಾಗಿ ಬಹುತೇಕ ಕಡೆ ಸೀತೆ ರಾಮನ ಎಡಭಾಗದಲ್ಲಿ ನಿಂತಿರುವುದನ್ನು ಕಾಣುತ್ತೇವೆ) ಮತ್ತೊಂದು ಬದಿಯಲ್ಲಿ ಲಕ್ಷ್ಮಣ ನಿಂತಿರುವ ವಿಗ್ರಹವಿದೆ. ರಾಮಾ ಸೀತಾ, ಲಕ್ಷ್ಮಣರ ಜೊತೆಯಲ್ಲಿ ಆಂಜನೇಯ ಇಲ್ಲಿ ಏಕಿಲ್ಲಾ ಎಂದರೆ, ವನವಾಸ ಅಂದಿನ ಕಾಲದಲ್ಲಿ ಇನ್ನೂ ಸೀತಾಪಹರಣ ಆಗಿರಲಿಲ್ಲವಾದ್ದ ಕಾರಣ, ಹನುಮನ ಪರಿಚಯ ರಾಮನಿಗೆ ಆಗಿರಲಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಆಂಜನೇಯ ಜನಿಸಿದ ಅಂಜನಾದ್ರಿ, ಶಬರಿಯ ಋಷಿಮುಖ ಪರ್ವತ ಮತ್ತು ಸುಗ್ರೀವನ ಕಿಷ್ಕಿಂಧೆ
ನಮ್ಮ ಪುರಾಣದ ಪ್ರಕಾರ ಅಂಜನಾದೇವಿ ಮತ್ತು ವಾನರ ನಾಯಕ ಕೇಸರಿಯರ ಮಗನೇ ಆಂಜನೇಯನಾಗಿದ್ದು, ಹಾಗೆ ಅಂಜನಾದೇವಿ ವಾಸವಾಗಿದ್ದ ಕಾರಣ ಆ ಬೆಟ್ಟವನ್ನು ಅಂಜನಾದ್ರಿ ಪರ್ವತ ಎಂದೇ ಕರೆಯುತ್ತಾರೆ. ಈ ಅಂಜನಾದ್ರಿ ಪರ್ವತವು ಹಂಪೆಯ ಬಳಿ ತುಂಗಭದ್ರಾ ನದಿಯ ತಟದ ಬೆಟ್ಟಗಳ ತಪ್ಪಲ್ಲಿನಲ್ಲಿಯೇ ಇದ್ದು, ಹಂಪೆಯಿಂದ ಸುಮಾರು 21 ಕಿಮೀ ದೂರದಲ್ಲಿದೆ ಆನೆಗೊಂದಿಯಿಂದ ಹುಮ್ನಾಬಾದ್ ರಸ್ತೆಯಲ್ಲಿ ಸುಮಾರು 5 ಕಿಮೀ ಪ್ರಯಾಣಿಸುತ್ತಿದ್ದಂತೆಯೇ ಬಲ ಭಾಗದಲ್ಲಿಯೇ ಈ ಅಂಜನಾದ್ರಿ ಪರ್ವತವಿದೆ.
ಅಂಜನಾದ್ರಿ ಪ್ರರ್ವತದಿಂದ ಆನೆಗೊಂದಿ ಕಡೆಗೆ ಸುಮಾರು ಒಂದು ಕಿಮಿ ದೂರದಲ್ಲೇ ಬಲಭಾಗದಲ್ಲಿ ಋಷಿಮುಖ ಅರ್ಥಾತ್ ಶಬರಿಗಿರಿ ಮತ್ತು ಪಂಪಸರೋವರವನ್ನು ಇಂದಿಗೂ ಸಹಾ ನೋಡಬಹುದಾಗಿದೆ. ನಿಶಾಧ ಬುಡಕಟ್ಟು ಸಮುದಾಯದ ಬೇಟೆಗಾರನ ಮಗಳಾದ ಶಬರಿಗೆ ಅವಳ ತಂದೆ ಮದುವೆಯನ್ನು ಏರ್ಪಾಡಿಸಿ ಮದುವೆಯ ಔತಣಕ್ಕಾಗಿ ನೂರಾರು ಕುರಿಗಳನ್ನುಬಲಿಕೊಡಲು ಮುಂದಾಗಿದ್ದನ್ನು ಗಮನಿಸಿದ ಶಬರಿ, ತನ್ನ ಮದುವೆಗಾಗಿ ಈ ಅಮಾಯಕ ಪ್ರಾಣಿಗಳ ಬಲಿಯನ್ನು ಇಷ್ಟಪಡದೆ ಮದುವೆಯ ದಿನ ಮುಂಜಾನೆ ಯಾರಿಗೂ ಹೇಳದಂತೆ ಈ ಋಷಿಮುಖ ಬೆಟ್ಟದಲ್ಲಿರುವ ಮಾತಂಗ ಗುರುಗಳ ಬಳಿ ಬಂದು ಅವರ ಸೇವೆಯಲ್ಲಿ ನೆಲೆಗೊಳ್ಳುತ್ತಾಳೆ. ವಯೋವೃದ್ಧ ಮಾತಂಗ ಋಷಿಗಳು ಅಂತ್ಯ ಸಮಯದಲ್ಲಿದ್ದಾಗ, ನೀವಿಲ್ಲದೇ ನಾನಿರಲು ಸಾಧ್ಯವಿಲ್ಲದ ಕಾರಣ ನನ್ನನ್ನೂ ನಿಮ್ಮೊಂದಿಗೆ ಕರೆದುಕೊಂಡು ಹೋಗಿ ಎಂದು ಶಬರಿ ಕೇಳಿಕೊಂಡಾಗ, ಮಾತಂಗ ಮುನಿಗಳು ಮಗಳೇ, ನೀನು ಬಂದ ಕೆಲಸವಿನ್ನೂ ಬಾಕಿ ಇದೆ. ಮುಂದೊಮ್ಮೆ ಶ್ರೀರಾಮ ಚಂದ್ರನ ದರ್ಶನವಾಗುವವರೆಗೂ ನೀನಿಲ್ಲಿ ಕಾಯಲೇ ಬೇಕು ಎಂದು ಹೇಳಿ ತಮ್ಮ ಕೊನೆಯುಸಿರೆಳಿಯುತ್ತಾರೆ. ಅಂದಿನಿಂದ ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು ಕಾಯುತ್ತಾ ಅಲ್ಲಿಯೇ ಇರುವ ಸ್ಪಟಿಕದಂತಹ ನೀರಿನ ಪಂಪ ಸರೋವರದಲ್ಲಿ ಮಿಂದು ಭಕ್ತಿಯಿಂದ ಸುತ್ತಮುತ್ತಲಿನ ಕಾಡು ಮೇಡುಗಳನ್ನು ಅಲೆಯುತ್ತಾ ರಾಮನಿಗಾಗಿಯೇ ಹಣ್ಣು ಹಂಪಲುಗಳನ್ನು ಸಂಗ್ರಹಿಸಿ ಇಟ್ಟು ಲಕ್ಷ್ಮಣರೊಡನೆ ರಾಮ ಬಂದಾಗ ಅತನಿಗೆ ಹಣ್ಣುಗಳನ್ನು ನೀಡಿ ತನ್ನ ಜೀವನವನ್ನು ಅಂತ್ಯ ಗೊಳಿಸಿದ ಕಥೆ ನಮಗೆಲ್ಲರಿಗೂ ತಿಳಿದಿದ್ದು ಅದಕ್ಕೆ ಪುರಾವೆ ಎನ್ನುವಂತೆ ಇಲ್ಲಿಯ ಪ್ರದೇಶ ಬೆಟ್ಟ ಗುಡ್ಡಗಳ ನಡುವೆಯೂ ಮರಗಿಡಗಳಿಂದ ದಟ್ಟವಾಗಿದ್ದು ಎರಡು ಕಲ್ಯಾಣಿಗಳಿವೆ. ಅದರ ಎದುರಿನಲ್ಲಿ ವಿಜಯಲಕ್ಶ್ಮೀ ದೇವಸ್ಥಾನ ಮತ್ತೊಂದು ಬದಿಯಲ್ಲಿ ಶಿವಲಿಂಗದ ದೇವಾಲಯವಿದ್ದು ಅದರ ಸಮೀಪದಲ್ಲಿಯೇ ಶಬರಿ ಮತ್ತು ಶ್ರೀರಾಮ ಚಂದ್ರನ ಪಾದಗಳನ್ನು ಇಂದಿಗೂ ಕಾಣಬಹುದಾಗಿದೆ.
ಋಷಿಮುಖದ ಹಿಂಬಾಗಕ್ಕೆ ಅಂಟಿಕೊಂಡಂತೆ ಕಿಷ್ಕಿಂದೆ ಬೆಟ್ಟವಿದ್ದು ಅಲ್ಲಿ ವಾಲಿ ಮತ್ತು ಸುಗ್ರೀವರು ವಾಸವಾಗಿರುತ್ತಾರೆ. ಅದೊಮ್ಮೆ ದುಂದುಭಿ ಎಂಬ ರಾಕ್ಷಸನು ವಿನಾಕಾರಣ, ವಾಲಿಯೊಂದಿಗೆ ಹೋರಾಟಕ್ಕೆ ಮುಂದಾದಾಗ. ಕೋಪದಲ್ಲಿ ದುಂದುಭಿಯನ್ನು ಕೊಂದ ವಾಲಿಯು ಆತನ ದೇಹವನ್ನು ಸುಮಾರು ದೂರ ಎಸೆಯುವ ಪ್ರಕ್ರಿಯೆಯಲ್ಲಿ, ಆ ದೇಹದ ಕೆಲವು ರಕ್ತದ ಹನಿಗಳು ಮಾತಂಗ ಋಷಿಯ ಆಶ್ರಮದ ಮೇಲೆ ಬಿದ್ದಾಗ, ಕೋಪಗೊಂಡ ಋಷಿಗಳು ವಾಲಿಯು ಋಷ್ಯಮುಖ ಪರ್ವತದ ಮೇಲೆ ಕಾಲಿಟ್ಟರೆ ಆತನ ತಲೆ ಸಾವಿರ ಹೋಳಾಗಲಿ ಎಂದು ಶಾಪವನ್ನು ನೀಡುತ್ತಾರೆ. ದುಂದುಭಿಯ ಮರಣದ ಸುದ್ದಿ ಕೇಳಿದ ಅತನ ಸಹೋದರ ಮಾಯಾವಿಯು ವಾಲಿಯ ಮೇಲೆ ಯುದ್ಧಕ್ಕೆ ಬಂದು, ವಾಲಿಯ ಮುಷ್ಠಿ ಪ್ರಹಾರವನ್ನು ತಡೆಯಲಾಗದೇ ಒಂದು ದೊಡ್ಡ ಗುಹೆಯೊಂದರಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ವಾಲಿ ತನ್ನ ತಮ್ಮ ಸುಗ್ರೀವನನ್ನು ಗುಹೆಯ ಹೊರಗೆ ನಿಲ್ಲಿಸಿ, ತಾನು ಹೊರಗೆ ಬರುವವರೆಗೂ ಇಲ್ಲಿಯೇ ಕಾಯುತ್ತಿರ ಬೇಕೆಂದು ತಿಳಿಸಿ ಮಾಯಾವಿಯನ್ನು ಕೊಂದೇ ತೀರುತ್ತೇನೆಂದು ಫಣ ತೊಟ್ಟು ಗುಹೆಯನ್ನು ಪ್ರವೇಶಿಸುತ್ತಾನೆ. ಸುಮಾರು ಹದಿನೈದು ದಿನಗಳು ಕಳೆದರೂ ವಾಲಿಯು ಗುಹೆಯಿಂದ ಹೊರಗೆ ಬಾರದೇ, ಅದೊಂದು ದಿನ ಆ ಗುಹೆಯಿಂದ ರಕ್ತದೋಕುಳಿ ಹರಿದು ಬರುವುದನ್ನು ಕಂಡು ತನ್ನ ಅಣ್ಣನೇ ಅಸುನೀಗಿರಬೇಕೆಂದು ತಿಳಿದು ರಾಕ್ಷಸ ಪುನಃ ಹೊರಬಾರದಿರಲೆಂದು ಆ ಗುಹೆಯ ದ್ವಾರವನ್ನು ದೊದ್ಡದಾದ ಬಂಡೆಯೊಂದರಿಂದ ಮುಚ್ಚಿ,ಬಹಳ ದುಃಖದಿಂದ ಭಾರವಾದ ಹೃದಯದೊಂದಿಗೆ ಕಿಷ್ಕಿಂಧೆಗೆ ಹಾಗೆ ವಾಲಿ ಮಾಯಾವಿಯೊಂದಿಗೆ ಹೋರಾಡಿದ ಗುಹೆಯನ್ನೂ ಸಹಾ ಇಲ್ಲಿ ಕಾಣಬಹುದಾಗಿದೆ.
ಕಾಕಾಸುರನನ್ನು ವಧಿಸಿದ ರಾಮನಗರದ ಶ್ರೀರಾಮರ ಬೆಟ್ಟ
ಇನ್ನು ರಾಮನಗರದ ಬಳಿ ಇರುವ ರಾಮದೇವರ ಬೆಟ್ಟ (ಶೋಲೆ ಸಿನಿಮಾದ ಚಿತ್ರೀಕರಣದ ಪ್ರದೇಶ)ದಲ್ಲೂ ಸಹಾ ವನವಾಸದ ಸಮಯದಲ್ಲಿ ರಾಮ, ಸೀತೆ ಲಕ್ಷಣರು ಸುಮಾರು 14 ದಿನಗಳ ಕಾಲ ಇಲ್ಲಿ ತಂಗಿದ್ದರಂತೆ. ಅದೇ ಸಮಯದಲ್ಲಿ ಕಾಕಾಸುರ ಎಂಬ ರಾಕ್ಷಸನು ಸೀತಾಮಾತೆಯನ್ನು ಕೆಣಕಿದ ಕಾರಣ, ಶ್ರೀರಾಮನು ಕಾಕಾಸುರನ ಒಂದು ಕಣ್ಣಿಗೆ ಬಾಣ ಬಿಟ್ಟು, ಕಣ್ಣು ಕಿತ್ತು ಹಾಕಿದ್ದ ಎಂಬ ಪ್ರತೀತಿ ಇದೆ. ಹಾಗಾಗಿಯೇ ಆ ಬೆಟ್ಟದಲ್ಲಿರುವ ಶ್ರೀರಾಮನ ದೇವಸ್ಥಾನದ ಎದುರಿಗೆ ಇಂದಿಗೂ ಸಹಾ ಕಾಕಾಸುರನ ವಿಗ್ರಹವನ್ನು ಕಾಣಬಹುದಾಗಿದೆ. ಹೀಗೆ ಕಾಕಾಸುರನ ಸಂಹಾರ ಆದ ನಂತರ ಈ ರಾಮದೇವರ ಬೆಟ್ಟದ ಸುತ್ತಲೂ ಕಾಗೆಗಳ ಹಾರಾಟ ಇಲ್ಲದಿರುವುದು ವಿಶೇಷವಾಗಿದೆ.
ಶರಾವತಿ ನದಿಯ ಉಗಮಸ್ಥಾನ ಅಂಬುತೀರ್ಥ
ಶ್ರೀರಾಮನು ಅರಣ್ಯವಾಸದಲ್ಲಿದ್ದಾಗ ತೀರ್ಥಹಳ್ಳಿಯ ಸುತ್ತಮುತ್ತಲೂ ವಾಸಿಸುತ್ತಿದ್ದ ಸಂಧರ್ಭದಲ್ಲಿ ತಮ್ಮ ನಿತ್ಯದ ಪೂಜಾಕಾರ್ಯ ಮತ್ತು ದೈನಂದಿನದ ಬಳಕೆಗಳಿಗೆ ಬೇಕಾಗುವ ನೀರು ಸಿಗದೇ ಹೋದಾಗ, ಶ್ರೀ ರಾಮನು ತನ್ನ ಬಾಣದಿಂದ ನೆಲಕ್ಕೆ ಹೊಡೆದ ಕೂಡಲೇ, ಅಲ್ಲಿ ತೀರ್ಥೋದ್ಭವವಾಗಿ ಅದು ನದಿಯಂತೆ ಹರಿಯ ತೊಡಗಿತಂತೆ. ಹೀಗೆ ಅಂಬು ಎಂದರೆ ಬಾಣ, ಬಾಣದಿಂದ ನೀರು ಉದ್ಭವವಾದ ಕಾರಣ ಆ ಪ್ರದೇಶ ಅಂಬುತೀರ್ಥವೆಂದು ಶ್ರೀರಾಮನ ಶರ ಅರ್ಥಾತ್ ಬಾಣದಿಂದ ಆ ಹುಟ್ಟಿದ್ದರಿಂದ ಈ ನದಿಗೆ ಶರಾವತಿ ಎಂಬ ಹೆಸರು ಬಂದಿದೆ ಎನ್ನುವ ಪ್ರತೀತಿ ಇದೆ.
ಶ್ರೀರಾಮಚಂದ್ರನು ಮಾಯಾ ಜಿಂಕೆಯನ್ನು ಕೊಂದ ಸ್ಥಳ ಮೃಗವಧೆ
ಸುಂದರನಾದ ಪ್ರಭು ರಾಮಚಂದ್ರರು ತಮ್ಮ ಪತ್ನಿ ಮತ್ತು ತಮ್ಮನೊಡನೆ ೧೪ ವರ್ಷ ವನವಾಸ ಮಾಡುತ್ತಿದ್ದ ಸಂದರ್ಭದಲ್ಲಿ ಆತನನ್ನುನೋಡಿದ ರಾವಣ ತಂಗಿ ಶೂರ್ಪಣಖಿಯ ಮೋಹಗೊಂಡು ಮದುವೆಯಾಗಲು ಕೇಳಿಕೊಂಡಾಗ, ತಾನು ಏಕಪತ್ನಿವತಸ್ಥನಾದ ಕಾರಣ, ಮದುವೆ ಆಗಲು ಸಾಧ್ಯವಿಲ್ಲಾ. ಬೇಕಿದ್ದಲ್ಲಿ ಲಕ್ಷ್ಮಣ ಬಳಿ ಕೇಳು ಎಂದು ಹೇಳಿದಾಗ, ಆಕೆ ಲಕ್ಷ್ಮಣನನ್ನು ವರಿಸಲು ಕೋರಿಕೊಂಡಾಗ, ಆವರಿಬ್ಬರ ನಡುವಿನ ವಾಗ್ವಾದಲ್ಲಿ ಕೋಪಗೊಂಡ ಲಕ್ಷಣ ಶೂರ್ಪಣಕಿಯ ಮೂಗನ್ನು ಕೊಂಡ ಪ್ರದೇಶವೇ ಮಹಾರಾಷ್ಟ್ರದ ನಾಸಿಕ್ ಎಂದು ನಂಬಲಾಗಿದೆ. ಹಾಗೆ ತನ್ನ ಮೂಗನ್ನು ಕತ್ತರಿಸಿಕೊಂಡು ಅವಮಾನಿತಳಾಗಿ ತನ್ನ ಅಣ್ಣನಾದ ರಾವಣನ ಬಳಿ ಇಲ್ಲ ಸಲ್ಲದ ಚಾಡಿಯನ್ನು ಹೇಳಿ ಆ ಅವಮಾನಕ್ಕೆ ಪ್ರತೀಕಾರವನ್ನು ತೆಗೆದುಕೊಳ್ಳಲು ಒತ್ತಾಯಿಸಿದಾಗ ತಂಗಿಯ ಕೋರಿಕೆಯನ್ನು ಮನ್ನಿಸಿ ಅವರನ್ನು ಹುಡುಕಿಕೊಂಡು ಕಾಡಿಗೆ ಬಂದ ರಾವಣ, ಸೀತೆಯನ್ನು ನೋಡಿ ಆಕೆಯಲ್ಲಿ ಮೋಹಿತನಾಗಿ (ಸೀತಾ ಸ್ವಯಂವರದಲ್ಲಿ ರಾವಣನೂ ಪಾಲ್ಗೊಂಡು ಶಿವಧನಸ್ಸನು ಎತ್ತಲಾಗದೇ ಹೋದದ್ದು ಇಲ್ಲಿ ಗಮನಾರ್ಹ) ಅಕೆಯನ್ನು ಹೇಗಾದರೂ ಮಾಡಿ ಪಡಯಲೇ ಬೇಕೆಂದು ಯೋಚಿಸಿದಾಗಲೇ ಆತನಿಗೊಂದು ಉಪಾಯ ಹೊಳೆಯುತ್ತದೆ.
ತನ್ನ ಆಸೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ತನ್ನ ಸೋದರಮಾವ ಮತ್ತು ಪರಮ ಶಿವಭಕ್ತನಾದ ಮಾರೀಚನಿಗ್ ಮಾಯಾ ಜಿಂಕೆಯ ವೇಷ ಧರಿಸಿ, ಸೀತೆದೇವ ಆಕರ್ಷಿತಳಾಳಾಗುವಂತೆ ಮಾಡಿ, ಶ್ರೀ ಶ್ರೀರಾಮನನ್ನು ಸೀತೆಯಿಂದ ಬೇರ್ಪಡಿಸಿ ಆತನನ್ನು ದಾರಿ ತಪ್ಪಿಸುವಂತೆ ಮಾಡಿ ತಾನು ಸೀತೆಯನ್ನು ಅಪಹರಿಸುತ್ತೇನೆ ಎಂದು ಹೇಳುತ್ತಾನೆ. ಇದಕ್ಕೆ ಒಪ್ಪದ ಮಾರೀಚನು ಶ್ರೀರಾಮನಿಗೆ ಮೋಸ ಮಾಡುವ ದುಸ್ಸಾಹಸಕ್ಕೆ ಕೈಹಾಕಬೇಡ ಆತನ ಬಾಣದ ರುಚಿಯನ್ನು ಆತ ಚಿಕ್ಕವನಿರ ಬೇಕಾದಾಗಲೇ ನಾನು ಅನುಭವಿಸಿದ್ದಲ್ಲದೇ ನನ್ನ ತಮ್ಮ ಸುಬಾಹುವನ್ನು ಕಳೆದುಕೊಂಡಿದ್ದೇನೆ ಎಂದು ಪರಿ ಪರಿಯಾಗಿ ತಿಳಿ ಹೇಳಿದರು ಅದಕ್ಕೆ ರಾವಣನು ಒಪ್ಪದಿದ್ದಾಗ, ವಿಧಿಯಿಲ್ಲದೆ ಮಾರೀಚನು ರಾವಣನ ಆಜ್ಞೆಯಂತೆ ಮಾಯಾ ಜಿಂಕೆಯ ವೇಷಧಾರಿಯಾಗಿ ಕಾಡಿಗೆ ಬರುತ್ತಾನೆ.
ಆ ಮಾಯಾಜಿಂಕೆಯನ್ನು ನೋಡಿ ಆಕರ್ಷಿತಳಾದ ಸೀತಾ ದೇವಿಯ ಆ ಜಿಂಕೆಯನ್ನು ಹಿಡಿದುಕೊಂಡು ಬರಲು ರಾಮನನ್ನು ಕೋರಿಕೊಂಡಾಗ, ಸೀತೆಯ ಕೋರಿಕೆಯಂತೆ ಚಿನ್ನದ ಜಿಂಕೆಯನ್ನು ಹಿಡಿಯುವ ಸಲುವಾಗಿ ಅದನ್ನು ಬೆನ್ನಟ್ಟಿ ಕೊಂಡು ಹೋಗಿ ಕಡೆಗೆ ಜಿಂಕೆರೂಪದಲ್ಲಿ ಬಂದಿದ್ದ ಮಾಯವಿ ಮಾರೀಚನು ರಾಮನ ಬಾಣಕ್ಕೆ ಹತನಾಗುತ್ತಾನೆ. ಈ ಸಂಪೂರ್ಣ ಘಟನೆಯು ನಡೆದ ಸ್ಥಳವೇ ಮೃಗವಧೆ ಎಂಬ ಹೆಸರಿನಿಂದ ಪ್ರಖ್ಯಾತಿಯಾಗಿದ್ದು ಪ್ರಸ್ತುತ ಅದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಕೇವಲ 27 ಕಿಮೀ ದೂರದಲ್ಲಿದೆ.
ಮಾರೀಚನನ್ನು ಕೊಂದು ಬ್ರಹ್ಮ ಹತ್ಯೆಯ ದೋಷಕ್ಕೆ ಒಳಗಾಗಿ ಆ ಕಳಂಕದಿಂದ ಪಾರಾಗಲು ಶ್ರೀರಾಮನು ಮಾರೀಚನ ದೇಹದಲ್ಲಿದ್ದ ಬಾಣಲಿಂಗವನ್ನು ಅಲ್ಲಿಯೇ ಹರಿಯುತ್ತಿದ್ದ ಬ್ರಾಹ್ಮಿ ನದಿ ತೀರದ ಮೇಲೆ ಪ್ರತಿಷ್ಠಾಪಿಸಿದ ಕಾರಣ ಆ ಲಿಂಗವನ್ನು ಮೊದಲು ಮಲಹಾನಿಕರೇಶ್ವರ ಎಂಬ ಮೂಲ ಹೆಸರಿನ ಕರೆಯುತ್ತಿದ್ದು ನಂತರ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವೆಂದು ಪ್ರಸಿದ್ಧಿ ಪಡೆದಿದೆ.
ದೇವರಾಯನ ದುರ್ಗದ ನಾಮಚಿಲುಮೆ
ತುಮಕೂರಿನ ಸಮೀಪವೇ ಇರುವ ದೇವರಾಯನ ದುರ್ಗಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಶ್ರೀರಾಮನು ಸೀತಾದೇವಿಯನ್ನು ಹುಡುಕಿಕೊಂಡು ಈ ಪ್ರದೇಶದಲ್ಲಿ ಓಡಾಡುತ್ತಿರುವಾಗ, ಹಣೆಗೆ ತಿಲವನ್ನು ಇಡುವವ ಸಂದರ್ಭಬಂದಾಗ, ಸುತ್ತ ಮುತ್ತಲೂ ನೀರು ಸಿಗದೇ ಹೋದಾಗ, ಅಲ್ಲಿಯೇ ಇದ್ದ ಬಂಡೆಯೊಂದಕ್ಕೆ ಶ್ರೀರಾಮನು ತನ್ನ ಬಾಣವನ್ನು ಹೂಡಿದಾಗ, ಆ ಬಂಡೆಯು ಸಣ್ಣದಾಗಿ ಸೀಳಿಕೊಂಡು ನೀರು ಚಿಮ್ಮಿದಾಗ, ಅ ನೀರಿನಿಂದ ತನ್ನ ಹಣೆಗೆ ನಾಮವನ್ನು ಧರಿಸಿದನಂತೆ. ಅಂದಿನಿಂದ ಆ ಪ್ರದೇಶ ನಾಮ ಚಿಲುಮೆ ಎಂದೇ ಪ್ರಸಿದ್ಧವಾಗಿದ್ದು, ಇಂದಿಗೂ ಎಂತಹ ಬೇಸಿಗೆಯಲ್ಲೂ ಸಹಾ ಆ ಬಂಡೆಯಿಂದ ನೀರು ಬರುವುದನ್ನು ಕಾಣಬಹುದಾಗಿದೆ.
ಸೀತಾಮಾತೆಯನ್ನು ರಾವಣ ಅಪಹರಿಸಿದ ವಿಷಯವನ್ನು ರಾಮನಿಗೆ ತಿಳಿಸಿದ ಜಟಾಯು ಇದ್ದ ಸ್ಥಳ ಲೇಪಾಕ್ಷಿ
ಶ್ರೀರಾಮನು ಮಾಯಜಿಂಕೆಯ ಬೆನ್ನು ಹತ್ತಿದ್ದಾಗ ಮೋಸದಿಂದ ಲಕ್ಷ್ಮಣಾ! ಲಕ್ಷ್ಮಣಾ! ಎಂದು ಕೂಗಿ ಲಕ್ಷ್ಮಣನನ್ನೂ ಕುಟೀರದಿಂದ ಹೊರಗೆ ಹೋಗುವಂತೆ ಮಾಡಿ, ಭೈರಾಗಿ ವೇಷದಲ್ಲಿ ಬಂದ ರಾವಣನು ಸೀತೆಯನ್ನು ಅಪಹರಿಸಿಕೊಂಡು ಪುಷ್ಪಕ ವಿಮಾನದಲ್ಲಿ ಹೋಗುತ್ತಿದ್ದಾಗ, ಕಾಪಾಡಿ ಕಾಪಾಡಿ ಎಂಬ ಸೀತಾದೇವಿಯ ಆರ್ತನಾದವನ್ನು ಕೇಳಿದ ಜಟಾಯು ಪಕ್ಷಿಯು ಸೀತಾದೇವಿಯನ್ನು ರಕ್ಷಿಸುವ ಸಲುವಾಗಿ ರಾವಣನೊಂದಿಗೆ ಹೋರಾಟ ನಡೆಸಿದ ಸಂಧರ್ಭದಲ್ಲಿ ಕೋಪಗೊಂಡ ರಾವಣನು ಜಟಾಯು ಪಕ್ಷಿಯ ರೆಕ್ಕೆಗಳನ್ನೆ ಕತ್ತರಿಸಿದಾಗ, ಸೀತಾಪರಣದ ವಿಷಯವನ್ನು ಶ್ರೀರಾಮನಿಗೆ ತಿಳಿಸುವ ಸಲುವಾಗಿಯೇ ತನ್ನ ಜೀವವನ್ನು ಜಟಾಯು ಹಿಡಿದುಕೊಡಿದ್ದು, ವೈದೇಹಿಯನ್ನು ಹುಡುಕಿಕೊಂಡು ಅದೇ ಮಾರ್ಗವಾಗಿ ರಾಮನು ಬಂದಾಗ ನಡೆದಿದ್ದ ವಿಷಯವನ್ನೆಲ್ಲಾ ತಿಳಿಸಿದಾಗ, ರಾಮನು ಲೇ – ಪಕ್ಷಿ ಲೇ ಎಂದರೆ ತೆಲುಗಿನಲ್ಲಿ ಏಳು ಎಂದರ್ಥ. ಎಂದು ಎಬ್ಬಿಸಿ ಅದಕ್ಕೆ ಮುಕ್ತಿದೊರೆಯುವಂತೆ ಮಾಡಿದ ಸ್ಥಲವೇ ಮುಂದೇ ಲೇಪಾಕ್ಷಿ ಎಂಬ ಹೆಸರಿನಿಂದ ಪ್ರಖ್ಯಾತವಾಗಿದ್ದು, ಅದು ಮೂಲತಃ ಕರ್ನಾಟಕ್ಕೆ ಸೇರಿದ್ದು ಈಗ ಆಂಧ್ರಪ್ರದೇಶದ ಭಾಗವಾಗಿ ಬಾಗೇಪಲ್ಲಿಯಿಂದ ಕೇವಲ 25 ಕಿಮೀ ದೂರದಲ್ಲಿದೆ.
ರಾಮ ಸೀತೆಯ ಮಕ್ಕಳಾದ ಲವ-ಕುಶರು ಹುಟ್ಟಿದ ವಾಲ್ಮೀಕಿ ಆಶ್ರಮ
ರಾಮ ಸೀತೆ ಮತ್ತು ಲಕ್ಷ್ಮಣರು ವನವಾಸದಲ್ಲಿದ್ದಾಗ, ಆವಂತಿಕಾ ಕ್ಷೇತ್ರದಲ್ಲಿದ್ದ ವಾಲ್ಮೀಕಿ ಋಷಿಗಳ ಆಶ್ರಮಕ್ಕೆ ಭೇಟಿಯಾಗಿ ಅಲ್ಲಿ ಕೆಲಕಾಲ ಕಳೆದಿರುತ್ತಾರೆ. ಮುಂದೆ ರಾವಣನ ಸಂಹಾರವಾಗಿ ಸೀತಾಮಾತೆ ಮತ್ತು ಶ್ರೀರಾಮ ಅಯೋಧ್ಯೆಗೆ ಮರಳಿ ಪಟ್ಟಾಭಿಷೇಕವಾಗಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಸೀತಾಮಾತೆಯು ಗರ್ಭಿಣಿಯಾಗಿದ್ದ ಸಮಯದಲ್ಲಿ ಮತ್ತೆ ವಾಲ್ಮೀಕಿ ಆಶ್ರಮಕ್ಕೆ ಹೋಗಲು ಇಚ್ಚಿಸಿರುತ್ತಾಳೆ. ಅದೇ ಸಮಯದಲ್ಲಿ ರಾಮನ ಅರಮನೆಯ ಅಗಸನೊಬ್ಬನು ತನ್ನ ಹೆಂಡತಿ ತವರು ಮನೆಯಿಂದ ಬಹಳ ದಿನಗಳ ನಂತರ ಹಿಂದುರಿಗಿದಾಗ ಮತ್ತೆ ತಾನು ಹಿಂದೆ ಕರೆದುಕೊಳ್ಳಲು ರಾಮನೇ ಎಂದು ಆಡಿದ ಮಾತನ್ನು ಕೇಳಿ ಮನನೊಂದ ರಾಮ ಸೀತಾಮಾತೆಯನ್ನು ವಾಲ್ಮೀಕಿ ಆಶ್ರಮದಲ್ಲಿ ಬಿಟ್ಟು ಬರಲು ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ.
ಅಣ್ಣನ ಆಜ್ಞೆಯಂತೆ ರಾತ್ರೋ ರಾತ್ರೀ ತನ್ನ ಅತ್ತಿಗೆಯನ್ನು ಕರೆತಂದು ಬಿಟ್ಟ ವಾಲ್ಮೀಕಿ ಆಶ್ರಮವು ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕ್ಕಿನ ಆವನಿ ಗ್ರಾಮವಾಗಿದ್ದು ಇಂದಿಗೂ ಅಲ್ಲಿ ರಾಮಾಯಣ ಕಾಲದ ಹತ್ತಾರು ಕುರುಹುಗಳನ್ನು ಕಾಣಬಹುದಾಗಿದೆ. ಆವನಿ ಎಂದರೆ ಪುಣ್ಯ ಭೂಮಿ. ಹಾಗಾಗಿಯೇ ಭೂದೇವಿಯ ಮಗಳಾದ ಸೀತಾ ದೇವಿಗೆ ಆವನಿ ಎಂಬ ಮತ್ತೊಂದು ಹೆಸರಿದ್ದು ಆಕೆ ಇಲ್ಲಿ ಬಹಳ ಕಾಲ ವಾಸಿಸಿದ್ದರಿಂದ ಆ ಸ್ಥಳವು ಅವನಿ ಎಂದೇ ಇಂದಿಗೂ ಪ್ರಸಿದ್ಧಿ ಪಡೆದಿದೆ.
ಆವನಿ ಶಂಕರಮಠದ ಪಕ್ಕದಲ್ಲೇ ಇರುವ ಬೆಟ್ಟಕ್ಕೆ ಸೀತಾ ಬೆಟ್ಟ ಎಂದು ಕರೆಯಲಾಗುತ್ತಿದ್ದು ಅಲ್ಲಿ ಇಂದಿಗೂ ವಾಲ್ಮೀಕಿ ಆಶ್ರಮದ ಅನೇಕ ಕುರುಹುಗಳನ್ನು ಕಾಣಬಹುದಾಗಿದೆ. ವಾಲ್ಮೀಕಿಗಳ ಆಶ್ರಮ, ಲವ ಕುಶರು ಜನಿಸಿದ ಸ್ಥಳ ಮತ್ತು ಸೀತಾ ಮಾತೆ ವಾಸವಿದ್ದ ಸಣ್ಣದೊಂದು ಮನೆಯೂ ಸಹ ಇಂದಿಗೂ ಕಾಣಬಹುದಾಗಿದೆ. ಅದೇ ಬೆಟ್ಟದ ಮೇಲೆ ಸೀತಾ ಮಾತೆ ಪೂಜೆ ಮಾಡುತ್ತಿದ್ದ ಪಾರ್ವತಿ ದೇವಸ್ಥಾನವೂ ಇದ್ದು ಆ ದೇವಾಲಯವನ್ನು ಸೀತಾಪಾರ್ವತಿ ದೇವಸ್ಥಾನ ಎಂದು ಕರೆಯಲಾಗುತ್ತದೆ. ಲಕ್ಷ್ಮಣನು ದಂಡಕಾರಣ್ಯದಲ್ಲಿ ಸೀತಾಮಾತೆಯನ್ನು ಬಿಡಲು ಬಂದಾಗ ಸೀತಾಮಾತೆಯು ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಆ ಕೂಡಲೇ ಲಕ್ಷ್ಮಣ ತನ್ನ ಧನಸ್ಸನ್ನು ಹೂಡಿ ಗಂಗೆಯನ್ನು ಚಿಮ್ಮಿಸಿದ ಸ್ಥಳವನ್ನು ಧನುಷೋಟೆ ಎಂದು ಕರೆಯಲಾಗುತ್ತಿದ್ದು, ಅಂದು ಚಿಮ್ಮಿದ ಗಂಗೆಯನ್ನು ಇಂದಿಗೂ ಪಾತಾಳ ಗಂಗೆಯಾಗಿ ಅಲ್ಲಿ ಕಾಣಬಹುದಾಗಿದೆ.
ಇನ್ನು ಆ ಪ್ರದೇಶಕ್ಕೆ ಬಂದ ಶ್ರೀರಾಮಚಂದ್ರನ ಅಶ್ವಮೇಧ ಯಾಗದ ಕುದುರೆಯನ್ನು ಲವ ಕುಶರು ಕಟ್ಟಿ ಹಾಕಿ ಶತ್ರುಜ್ಞನನ್ನು ಸೋಲಿಸಿದ ನಂತರ ರಾಮನೇ ಖುದ್ದಾಗಿ ಬಂದು ಲವಕುಶರೊಡನೆ ಹೋರಾಡಿ ಯಾಗದ ಕುದುರೆಯನ್ನು ಬಿಡಿಸಿಕೊಂಡು ಹೋಗುವ ಸಂಧರ್ಭದಲ್ಲಿ ಶ್ರೀ ರಾಮ, ಲಕ್ಷ್ಮಣ, ಭರತ, ಶತ್ರುಜ್ಞ ಹಾಗೂ ವಾಲಿ ಸುಗ್ರೀವರು ಅಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿರುವ ಪ್ರತೀತಿ ಇದ್ದು ಅದರ ಕುರುಹಾಗಿ ಇಂದಿಗೂ ಅಲ್ಲಿ ರಾಮಲಿಂಗೇಶ್ವರ, ಭರತ ಲಿಂಗೇಶ್ವರ, ಲಕ್ಷ್ಮಣ ಲಿಂಗೇಶ್ವರ, ಶತ್ರುಜ್ಞ ಲಿಂಗೇಶ್ವರ ಲಿಂಗಗಳನ್ನು ಕಾಣಬಹುದಾಗಿದೆ.
ಈ ರೀತಿಯಾಗಿ ತ್ರೇತಾಯುಗದಲ್ಲಿ ನಡೆದ ರಾಮಾಯಣದ ಇನ್ನೂ ಸಾವಿರಾರು ಕುರುಹುಗಳು ರಾಜ್ಯಾದ್ಯಂತ ಇದ್ದು ಅವುಗಳಲ್ಲಿ ಕೆಲವೊಂದನ್ನು ಮಾತ್ರವೇ ಇಲ್ಲಿ ತಿಳಿಸಲಾಗಿದೆ. ಪ್ರಸ್ತುತ ಆ ಎಲ್ಲಾ ಕುರುಹುಗಳೂ ಶ್ರದ್ಧಾಕೇಂದ್ರಗಳಾಗಿ ಮಾರ್ಪಟ್ಟು ತನ್ಮೂಲ ಆ ಕಾಲದ ಜೀವಂತಿಕೆಯನ್ನು ಇಂದಿನ ಯುವ ಪೀಳಿಗೆಗೂ ತಿಳಿಸುವಂತಾಗಿರುವುದು ನಿಜಕ್ಕೂ ಅದ್ಭುತವೇ ಸರಿ. ಸಮಯ ಮಾಡಿಕೊಂಡು ಸಕುಟುಂಬ ಸಮೇತರಾಗಿ ಈ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಿ ಅಲ್ಲಿನ ರೋಚಕತೆಯನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
[…] […]
LikeLike