ಬಾಷಾಭಿಮಾನ ಇರಬೇಕು ಆದರೆ ಅದು ದುರಾಭಿಮಾನ ಆಗಬಾರದು

ಎಲ್ಲರಿಗೂ ಗೊತ್ತಿರುವಂತೆ ನಮ್ಮದು ಕನ್ನಡಿಗರ ಕುಟುಂಬ. ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ರೀತಿಯ ವಿಶಿಷ್ಟವಾದ ಸೇವೆಯನ್ನು ಸಲ್ಲಿಸಿದ ಕಾರಣಕ್ಕಾಗಿಯೇ ನಮ್ಮ ತಾತನವರಾದ ಶ್ರೀ ಬಾಳಗಂಚಿ ಗಮಕಿ ನಂಜುಂಡಯ್ಯನವರಿಗೆ 70ರ ದಶಕದಲ್ಲೇ ಕರ್ನಾಟಕ ಸರ್ಕಾರ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇನ್ನು ನಮ್ಮ ತಂದೆಯವರಾದ ಶ್ರೀ ಬಾಳಗಂಚಿ ಗಮಕಿ ಶಿವಮೂರ್ತಿಗಳೂ ಸಹಾ ವೃತ್ತಿಯಲ್ಲಿ ಬಿಇಎಲ್ ಕಾರ್ಖನೆಯಲ್ಲಿದ್ದರೂ ಪ್ರವೃತ್ತಿಯಲ್ಲಿ ನಾಡಿನ ಹೆಸರಾಂತ ಗಮಕಿಗಳು (ವಿಶೇಷವಾಗಿ ವ್ಯಾಖ್ಯಾನ ಪಂಡಿತರು) ಆಗಿದ್ದಲ್ಲದೇ, ಏಕಲವ್ಯನಂತೆ ಸ್ವತಃ ತಾವೇ ಮೋರ್ಚಿಂಗ್ ಎಂಬ ವಿಶಿಷ್ಟವಾದ ಲಯವಾದ್ಯವನ್ನು ಕಲಿತು ಆದರಲ್ಲಿಯೂ ಸಹಾ ಹೆಸರುವಾಸಿಯಾಗಿದ್ದವರು. ಇನ್ನು ವಯಕ್ತಿಯವಾಗಿ ನಾಡಿನ ಬಹುತೇಕ ವಾರಪತ್ರಿಕೆಗಳು, ದಿನಪತ್ರಿಕೆಗಳು, ಮಾಸಪತ್ರಿಕೆಗಳಲ್ಲದೇ ನನ್ನದೇ ಆದ ಏನಂತೀರೀ ಬ್ಲಾಗ್ ಮತ್ತು ಯೂಟ್ಯೂಬ್ ಮೂಲಕ ಸುಮಾರು 1200ಕ್ಕೂ ಹೆಚ್ಚಿನ ಲೇಖನಗಳು ಮತ್ತು 400ಕ್ಕೂ ಹೆಚ್ಚಿನ ವೀಡಿಯೋಗಳ ಮೂಲಕ ಕನ್ನಡ ನಾಡು, ನುಡಿ, ನಡೆ, ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಎಲ್ಲರಿಗೂ ಪರಿಚಯವನ್ನು ಮಾಡಿಸುವ ಪ್ರಯತ್ನದಲ್ಲಿರುವ ವಿಷಯ ತಮಗೆಲ್ಲರಿಗೂ ತಿಳಿದಿರುವ ವಿಷಯವೇ. ನಮ್ಮ ತಂದೆಯವರಿಂದ ಪ್ರೇರೇಪಿತನಾಗಿ 10ನೇ ತರಗತಿಯ ವರೆಗೂ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿ ಈಗ ನಾಡಿನ ಹೆಸರಾಂತ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಭಾಗದ ಮುಖ್ಯಸ್ಥನಾಗಿದ್ದರೂ, ಇಂದಿಗೂ ಕನ್ನಡ ಭಾಷೆಯಲ್ಲಿಯೇ ಅಧಿಕೃತವಾಗಿ ಸಹಿ ಮತ್ತು ವ್ಯವಹಾರಗಳನ್ನು ಮಾಡಿಕೊಂಡು ಹೋಗುತ್ತಿದ್ದೇನೆ.

ಇಷ್ಟೇಲ್ಲಾ ಕನ್ನಡದ ಪರ ಪರಿಸರ ನಮ್ಮ ಮನೆಯಲ್ಲಿದ್ದರೂ, ನಮ್ಮ ತಾಯಿಯವರು ಬದುಕಿದ್ದಷ್ಟೂ ಕಾಲ ನಮ್ಮ ಮನೆಗೆ, ಕನ್ನಡ ದಿನಪತ್ರಿಕೆ, ವಾರ ಪತ್ರಿಕೆ ಮತ್ತು ಮಾಸ ಪತ್ರಿಕೆಗಳೊಂದಿಗೆ ಹೆಸರಾಂತ ತಮಿಳು ವಾರ ಪತ್ರಿಕೆ ಮತ್ತು ಮಾಸಪತ್ರಿಕೆಗಳು ಬರುತ್ತಿದ್ದವು. ನಮ್ಮ ಕುಟುಂಬದ ಕನ್ನಡ ಪರ ಚಟುವಟಿಕೆಗಳನ್ನು ಅರಿತಿದ್ದ ಪೇಪರ್ ಹಾಕುವವರು ಅದೊಮ್ಮೆ ಕುತೂಹಲದಿಂದ, ಅಲ್ಲಾ ಸಾರ್, ನೀವೆಲ್ಲಾ! ಕನ್ನಡಿಗರಾದರೂ ನಿಮ್ಮ ಮನೆಗೆ ಕನ್ನಡದೊಂದಿಗೆ ತಮಿಳು ಮ್ಯಾಗಜೈನ್ ಏಕೆ ತರಿಸುತ್ತೀರಿ? ಎಂದು ಕೇಳಿದ್ದಕ್ಕೆ ನಮ್ಮ ತಂದೆಯವರು ಅಷ್ಟೇ ನಿರ್ಲಿಪ್ತವಾಗಿ, ನಮ್ಮ ಮನೆಯಾಕೆಗೆ ಕನ್ನಡದಷ್ಟೇ ಚೆನ್ನಾಗಿ ತಮಿಳು ಭಾಷೆಯನ್ನು ಓದಿ ಬರೆಯಬಲ್ಲಳು. ಆಕೆ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮಿಳು ಮಾಧ್ಯಮದಲ್ಲಿ ಓದಿರುವ ಕಾರಣ, ಆಕೆ ತಮಿಳು ಭಾಷೆಯ ಉತ್ತಮ ಧಾರ್ಮಿಕ ಲೇಖನಗಳನ್ನು ಓದಿ ನಮ್ಮೆಲ್ಲರಿಗೂ ತಿಳಿಸುತ್ತಾಳೆ. ಹಾಗಾಗಿ ನಮ್ಮ ಮನೆಗೆ ತಮಿಳಿನ ಭಕ್ತಿ, ಶಕ್ತಿ, ಮುಂತಾದ ವಾರ ಪತ್ರಿಕೆಗಳನ್ನು ತರಿಸುತ್ತೇವಾದರೂ ನಮ್ಮ ಮನೆಯಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ. ನಮಗೆ ಎಲ್ಲಾ ಭಾಷೆಗಳ ಬಗ್ಗೆ ಅಭಿಮಾನವಿದೆಯೇ ಹೊರತೂ ಯಾವ ಭಾಷೆಯ ಪರವಾಗಿ ದುರಾಭಿಮಾನವಿಲ್ಲ ಎಂದು ತಿಳಿಸಿದ್ದರು.

tamil3ಯಾಕಪ್ಪಾ ಇಷ್ಟೆಲ್ಲಾ ಪೀಠಿಕೆ ಎಂದರೆ, ಕಳೆದ ವಾರವಿಡೀ ನಮ್ಮ ಕಛೇರಿಗೆ ರಜೆ ಕೊಟ್ಟಿದ್ದ ಕಾರಣ, ಯುಗಾದಿ ಹಬ್ಬ ಮುಗಿಸಿಕೊಂಡು ಐದು ದಿನಗಳ ಕಾಲ ಪ್ರವಾಸಕ್ಕೆ ಹೋಗಲು ನಿಶ್ಚಯ ಮಾಡಿಯಾಗಿತ್ತು. ಕಳೆದ ತಿಂಗಳಷ್ಟೇ ಕಾಶ್ಮೀರದ ಪ್ರವಾಸ ಮಾಡಿದ್ದ ನಾವು ಈ ಬಾರಿ ಕನ್ಯಾಕುಮಾರಿಯ ಕಡೆಗೆ ಅರ್ಥಾತ್ ತಮಿಳುನಾಡಿನ ಕೆಲವು ಸುಪ್ರಸಿದ್ಧ ದೇವಾಲಯಗಳಿಗೆ ಹೋಗಲು ನಿರ್ಧರಿಸಿದ್ದೆವು. ನಿಜ ಹೇಳ ಬೇಕೆಂದರೆ ಇದು ಸುಮಾರು 10-12 ವರ್ಷಗಳ ಹಿಂದೆ ನಿರ್ಧರಿಸಿದ್ದ ಪ್ರವಾಸವಾಗಿದ್ದು ಅಮ್ಮ ಹೋದ ನಂತರ ಕೆಲಸ ನಿಮಿತ್ತ ಕೆಲವು ಬಾರಿ ಒಬ್ಬನೇ ಚೆನ್ನೈ, ಪಾಂಡಿಚೆರಿಗಳಿಗೆ ಹಲವು ಬಾರಿ ಹೋಗಿದ್ದೆನಾದರೂ, ಕುಟುಂಬದೊಂದಿಗೆ ತಮಿಳುನಾಡಿನ ಕಡೆಗೆ ಹೋಗಿರಲೇ ಇಲ್ಲ. ಅದಕ್ಕೆ ಮುಖ್ಯ ಕಾರಣ ತಮಿಳಿರ ವಿಪರೀತವಾದ ಭಾಷಾ ದುರಾಭಿಮಾನ ಎಂದರೂ ತಪ್ಪಾಗದು. ನನಗೆ ತಕ್ಕ ಮಟ್ಟಿಗೆ ತಮಿಳು ಮಾತನಾಡಲು ಬರುತ್ತದಾದರೂ, ತಮಿಳು ಓದಲು ಬರೆಯಲು ಬಾರದು. ಚಿಕ್ಕವನಿರುವಾಗ ನಮ್ಮ ತಾಯಿ ಕನ್ನಡದ ಜೊತೆ ತಮಿಳು ಓದಲು ಬರೆಯಲು ಕಲಿಸಿಕೊಡಲು ಪ್ರಯತ್ನಿಸಿದರಾದರೂ, ನನ್ನ ಕನ್ನಡಾಭಿಮಾನಿಂದ ತಮಿಳನ್ನು ಕಲಿಯಲು ಹೆಚ್ಚಿನ ಆಸಕ್ತಿ ವಹಿಸಿರಲಿಲ್ಲ.

hotelಎಲ್ಲರಿಗೂ ತಿಳಿದಿರುವಂತೆ ತಮಿಳರಿಗೆ ಅವರ ಭಾಷೆಯ ಬಗ್ಗೆ ಬಹಳ ಅಭಿಮಾನವಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ, ಚಂದಾಪುರ ದಾಟಿ ತಮಿಳು ನಾಡಿನ ಹೊಸೂರು ದಾಟಿ ಒಂದು 5-6 ಕಿಮೀ ದೂರ ಸಾಗುತ್ತಿದ್ದಂತೆಯೇ ಎಲ್ಲವೂ ಸಂಪೂರ್ಣ ತಮಿಳುಮಯ. ನನ್ನ ಕೆಲವು ತಮಿಳು ಮಿತ್ರರು, ಅವರ ತಮಿಳು ಭಾಷೆ ಸಂಸ್ಕೃತಕ್ಕಿಂತಲೂ ಹಳೆಯ ಭಾಷೆ ಎಂದು ಕೊಚ್ಚಿಕೊಳ್ಳುವಾಗ ಅದು ತಪ್ಪೆಂದು ಹೇಳಬೇಕೆನಿಸಿದರೂ, ಬಂಡೆಗೆ ಹೋಗಿ ತಲೆ ಚಚ್ಚಿಕೊಂಡರೆ, ಪೆಟ್ಟಾಗುವುದು ನಮ್ಮ ತಲೆಗೆ ಹೊರತು ಬಂಡೆಗಲ್ಲಾ ಎಂದು ಎಷ್ಟೋ ಸಲಾ ಸುಮ್ಮನಾಗಿದ್ದೇನೆ.

tmil2ಆದರೆ ತಮಿಳುನಾಡಿಗೆ ಪ್ರವಾಸ ಹೋದವರಿಗೆ ಅದು ತಮಿಳಿಗರ ಭಾಷಾಭಿಮಾನಕ್ಕಿಂತಲೂ ಭಾಷಾದುರಾಭಿಮಾನ ಎಂದು ಎಣಿಸುವುದು ಸುಳ್ಳಲ್ಲಾ. ಹೊಸೂರು ದಾಟಿ ಹೋಗುತ್ತಿದ್ದಂತೆಯೇ ಎಷ್ಟರ ಮಟ್ಟಿಗೆ ತಮಿಳುಮಯವೆಂದರೆ, ಅವುಗಳು ರಾಷ್ಟ್ರೀಯ ಹೆದ್ದಾರಿಗಳಾದರೂ, ಆ ಊರುಗಳ ಮೈಲಿಗಳಲೆಲ್ಲವೂ ತಮಿಳು ಭಾಷೆ. ಇದಷ್ಟೇ ಅಲ್ಲದೇ ಅಲ್ಲಿನ ಊರಿನ ಅಂಗಡಿಗಳ ನಾಮ ಫಲಕಗಳಲ್ಲಿಯೂ ಅಪ್ಪೀ ತಪ್ಪಿ ತಮಿಳು ಬಿಟ್ಟು ಬೇರಾವ ಭಾಷೆಯೂ ಇರದೇ ಹೋಗಿರುವುದು ನಿಜಕ್ಕೂ ದುರಾದೃಷ್ಟಕರವೇ ಸರಿ. ಅಮ್ಮ ಬದುಕಿದ್ದಾಗಲೆಲ್ಲಾ ತಮಿಳು ನಾಡಿಗೆ ಹೋಗುವಾದ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಅಮ್ಮಾ ಥಟ್ಟನೇ ಓದಿ ಹೇಳುತ್ತಿದ್ದ ಕಾರಣ ನಮಗೆ ಎಲ್ಲವೂ ಸುಲಭವಾಗುತ್ತಿತ್ತು. ಇದೇ ಕಾರಣಕ್ಕಾಗಿಯೇ ನಾವು ಅಮ್ಮಾ ಹೋದ ನಂತರ ತಮಿಳು ನಾಡಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದೆವು. ಗೂಗಲ್ ನಕ್ಷೆ ದಾರಿಯನ್ನು ತೋರಿಸುವ ಮೂಲಕ ಸ್ವಲ್ಪ ಮಟ್ಟಿಗೆ ಈ ಸಮಸ್ಯೆಯನ್ನು ನಿವಾರಿಸುತ್ತದೆಯಾದರೂ, ಯಾವುದಾರೂ ಊರಿಗೆ ಹೋದಾಗ ಆ ಊರಿನ ಹೆಸರೇನು? ಇಲ್ಲವೇ ಯಾವುದೇ ದೇವಾಲಯಗಳಿಗೆ ಹೋದರೆ ಅದು ಯಾವ ದೇವರು? ಆ ದೇವಾಲಯದ ಇತಿಹಾಸವೇನು? ಎಂಬೆಲ್ಲಾ ಮಾಹಿತಿಗೆಳು ಕೇವಲ ಮತ್ತು ಕೇವಲ ತಮಿಳು ಭಾಷೆಯಲ್ಲಿ ಇರುತ್ತದೆಯಾದ್ದರಿಂದ ಪ್ತವಾಸಿಗರಿಗೆ/ಭಕ್ತಾದಿಗಳಿಗೆ ಅಲ್ಲಿನ ಪರಂಪರೆ ಮತ್ತು ಇತಿಹಾಸ ತಿಳಿಯದೇ ಹೋಗುವುದು ನಿಜಕ್ಕೂ ದುಃಖದ ಸಂಗತಿಯೇ ಸರಿ. ಪ್ರತೀ ಬಾರಿ ಅಕ್ಕ ಪಕ್ಕದವರನ್ನು ಕೇಳಲೂ ಸಹಾ ಮುಜುಗರವಾಗುತ್ತದೆ.

hotel2ಅಲ್ಲಿ ಎಲ್ಲಿ ನೋಡಿದರೂ, ಯಾವ ಕಡೆ ಏನು ನೋಡಿದರೂ ಬರಿ ತಮಿಳುಮಯ. ಇನ್ನು ಹೋಟೆಲ್ಲುಗಳಲ್ಲಿ ಯಾವುದು ಸಸ್ಯಾಹಾರಿ ಯಾವುದು ಮಾಂಸಾಹಾರಿ ಎನ್ನುವುದನ್ನು ತಿಳಿಯುವುದು ಸಹಾ ಕಷ್ಟ. ಅನೇಕ ಕಡೆ ಹೋಟೆಲ್ಲುಗಳ ಮುಂದೆ ವೆಜ್ ಹಾಗೂ ನನ್ ವೆಜ್ ಸಿಂಬಲ್ ಗಳದ ಕೆಂಪು ಮತ್ತು ಹಸಿರನ್ನೂ ಹಾಕದೇ ಇರುವುದು ಪ್ರವಾಸಿಗರನ್ನು ಮತ್ತಷ್ಟು ಗೋಜಲಿಗೆ ಸಿಕ್ಕಿಸುತ್ತದೆ.

FLAGಪ್ರಸ್ತುತ ಚುನಾವಣಾ ಸಮಯವಾಗಿದ್ದರಿಂದ ಅಲ್ಲಿನ ಪ್ರಚಾರವೆಲ್ಲವೂ ತಮಿಳಿಮಯವೇ, ಕೇವಲ ಪಕ್ಷಗಳ ಚಿಹ್ನೆ ಯಿಂದ ಕೆಲವು ರಾಷ್ಟ್ರೀಯ ಪಕ್ಷಗಳನ್ನು ಗುರುತಿಸಬಹುದೇ ಹೊರತು ಪ್ರವಾಸಿಗರಿಗೆ ಪ್ರಾದೇಶಿಕ ಪಕ್ಷದ ಅರಿವೇ ಆಗುವುದಿಲ್ಲ.

tamil4ಮೊನ್ನೆ ಅಲ್ಲಿನ ದೇವಾಲಯದ ಹೊರಗಿನ ಪ್ರಾಂಗಣದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ, ದೇವಾಲಯದ ಅಧಿಕಾರಿ ಎಂದು ಹೇಳಿಕೊಂಡ ಒಬ್ಬ ವ್ಯಕ್ತಿ ಅತ್ಯಂತ ಕೆಟ್ಟದಾಗಿ ನನ್ನೊಂದಿಗೆ ವರ್ತಿಸಿದ್ದಲ್ಲದೇ, ದೇವಾಲಯದಲ್ಲಿ ಮೊಬೈಲ್ ಬಳಸಬಾರದು ಎಂಬ ಬೋರ್ಡ್ ಹಾಕಿದ್ದರೂ ಮೊಬೈಲ್ ಬಳಸಿರುವ ಕಾರಣ, ನಿನ್ನನ್ನು ಪೋಲಿಸರಿಗೆ ಹಿಡಿದುಕೊಡುತ್ತೇನೆ ಇಲ್ಲವೇ 2000/- ದಂಡ ಕಟ್ಟು ಎಂದು ತಾಕೀತು ಮಾಡಿದ. ಹೌದು ನಿಜ ದೇವಾಲಯದ ಒಳಗೆ ಮೊಬೈಲ್ ಬಳಸಿದ್ದರೆ ಅಥವಾ ದೇವರ ಪೋಟೋ ತೆಗೆದಿದ್ದರೆ ತಪ್ಪು ಎನ್ನುವುದು ಗೊತ್ತು. ದೇವಾಲಯದ ಪ್ರಾಂಗಣದಲ್ಲೂ ಮೊಬೈಲ್ ಬಳಸಬಾರದು ಎಂದು ತಮಿಳು ಭಾಷೆಯಲ್ಲಿ ಬರೆದಿದ್ದರೆ, ತಮಿಳು ಬಾರದ ನಮ್ಮಂತಹವರಿಗೆ ಹೇಗೆ ತಿಳಿಯುತ್ತದೆ? ಎಂದು ದಬಾಯಿಸಿದಾಗ ಸುಮ್ಮನಾದ.

tamil5ತಮಿಳರು ಅವರ ಭಾಷೆಯ ಬಗ್ಗೆ ಅಭಿಮಾನ ಇಟ್ಟು ಕೊಳ್ಳುವುದು ತಪ್ಪಲ್ಲಾ. ಆದರೆ ತಮಿಳುನಾಡು ಭಾರತ ದೇಶದ ಒಕ್ಕೂಟ ರಾಜ್ಯಗಳಲ್ಲಿ ಒಂದು. ಅಲ್ಲಿ ಕೇವಲ ತಮಿಳರಷ್ಟೇ ಅಲ್ಲದೇ ಭಾರತದ ಉಳಿದ ಎಲ್ಲಾ ಭಾಷೆಗಳನ್ನು ಮಾತನಾಡುವ ಜನರು ಇದ್ದಾರೆ ಮತ್ತು ಅದೇ ರೀತಿ ಅಲ್ಲಿನ ದೇವಾಲಯಗಳಲ್ಲಿ ದೇಶ ವಿದೇಶಗಳಿಂದಲೂ ಬೇರೆ ಬೇರೆ ಭಾಷೆ ಮಾತನಾಡುವ ಭಕ್ತಾದಿಗಳು ಬರುತ್ತಾರೆ ಎಂಬುದನ್ನು ತಿಳಿದು ಎಲ್ಲರಿಗೂ ಅರ್ಥವಾಗುವಂತೆ ತಮಿಳು ಭಾಷೆಯ ಜೊತೆಗೆ ಇಂಗ್ಲೀಷಿನಲ್ಲಿಯೂ ಬರೆದಿದ್ದರೆ ಎಲ್ಲರಿಗೂ ಅರ್ಥವಾಗುತ್ತದೆ ಎನ್ನುವುದಷ್ಟೇ ನಮ್ಮ ಆಶಯವಾಗಿದೆ.

ಬೆಂಗಳೂರಿನ ಬಹುತೇಕ ಬೀದಿ ಹಣ್ಣುಗಳ ವ್ಯಾಪಾರಿಗಳು, ರಸ್ತೆಯ ಬದಿಯಲ್ಲಿ ಕಬ್ಬಿನ ಹಾಲು, ರಾಗಿ ಅಂಬಲಿ ಮಾರುವವರು ಮತ್ತು ರದ್ದಿ ಅಂಗಡಿಯವರು ತಮಿಳರೇ ಆಗಿದ್ದು ಅದೆಷ್ಟೋ ವರ್ಷಗಳಿಂದಲೂ ಬೆಂಗಳೂರಿನಲ್ಲೇ ನೆಲೆಸಿದ್ದರೂ ಕನ್ನಡವನ್ನು ಮಾತ್ರ ಕಲಿಯದೇ ತಮಿಳು ಭಾಷೆಯಲ್ಲಿಯೇ ವ್ಯಾಪಾರವನ್ನು ಇಂದಿಗೂ ಮಾಡುತ್ತಿರುವುದು ನಿಜಕ್ಕೂ ಅಚ್ಚರಿ ಮತ್ತು ಬೇಸರವನ್ನುಂಟು ಮಾಡುತ್ತದೆ. ತಮಿಳುನಾಡಿನಲ್ಲಿ ಹೇಗೆ ತಮಿಳುಭಾಷೆಯೇ ಅಧಿಕೃತವಾಗಿರಬೇಕು ಎಂದು ಬಯಸುತ್ತಾರೆಯೋ ಅದೇ ರೀತಿ ಅವರುಗಳು ಹೊರ ರಾಜ್ಯಕ್ಕೆ ಬಂದಾಗ ಅಯಾಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಮಾತನಾಡಬೇಕು ಎಂಬ ಪರಿಕಲ್ಪನೆ ಇರಬೇಕಲ್ಲವೆ?

ತಮಿಳರ ಭಾಷಾ ಪ್ರೇಮ ಯಾವ ಪರಿಯಲ್ಲಿ ಇರುತ್ತದೆ ಎಂದರೆ, ಸುಮಾರು 20 ವರ್ಷಗಳ ಹಿಂದೆ ನಾವು ಮನೆಯನ್ನು ಕಟ್ಟಿಸುತ್ತಿರುವಾಗ, ಕಟ್ಟಡ ಕಟ್ಟುವ ಬಹುತೇಕ ಕೂಲಿ ಕಾರ್ಮಿಕರು ತಮಿಳುನಾಡಿನ ಕೃಷ್ಣಗಿರಿ ಮತ್ತು ಸೇಲಂ ಕಡೆಯವರಾಗಿದ್ದು, ಅವರಿಗೆ ಸ್ವಲ್ಪವೂ ಕನ್ನಡ ಬಾರದೇ, ಅವರೊಂಡನೆ ವ್ಯವಹರಿಸುವುದು ನಮ್ಮ ತಂದೆ ಮತ್ತು ನಮ್ಮ ಮಾವನವರಿಗೆ ಬಹಳ ಕಷ್ಟವಾಗುತ್ತಿತ್ತು. ಅದೆಷ್ಟೋ ಬಾರಿ ಇದಕ್ಕಾಗಿಯೇ ನಮ್ಮ ತಾಯಿಯವರನ್ನು ಕರೆದುಕೊಂಡು ಅವರಿಂದ ಹೇಳಿಸುತ್ತಿದ್ದದ್ದರು. ಅಂತಹ ಕೂಲಿ ಕೆಲಸಗಾರನೊಬ್ಬ, ಅಮ್ಮಾ!! ನೀವು ಎಷ್ಟು ಚೆನ್ನಾಗಿ ತಮಿಳು ಮಾತನಾಡುತ್ತೀರಿ, ಆದರೆ ನಿಮ್ಮೆಜಮಾನರಿಗೆ ಕೊಂಚವೂ ತಮಿಳು ಬರುವುದಿಲ್ಲಾ!! ಅವರು ಏನು ಹೇಳುತ್ತಾರೋ ನನಗೆ ಅರ್ಥವಾಗದು ಹಾಗಾಗಿ ನೀವೇ ಅವರಿಗೆ ಸ್ವಲ್ಪ ತಮಿಳು ಕಲಿಸಬಾರದೇ ಎಂದು ಹೇಳಿದ್ದನ್ನು ಕೇಳಿದ ನಮ್ಮ ತಂದೆಯವರಿಗೆ ಪಿತ್ತ ನೆತ್ತಿಗೇರಿ, ನಾನೇಕೇ ತಮಿಳು ಕಲಿಯಬೇಕು? ಹೊಟ್ಟೆಯ ಪಾಡಿಗೆ ಕರ್ನಾಟಕಕ್ಕೆ ಕೆಲಸಕ್ಕೆ ಬಂದಿರುವ ನೀನು ಮೊದಲು ಕನ್ನಡ ಕಲಿತುಕೊ! ಎಂದು ದಬಾಯಿಸಿದ್ದಲ್ಲದೇ, ಸಂಜೆ ನಾನು ಮನೆಗೆ ಬಂದಾಗ ಎಲ್ಲವನ್ನೂ ನನಗೆ ಹೇಳಿದ್ದದ್ದು ಇನ್ನೂ ನನ್ನ ಮನದಲ್ಲಿ ಹಚ್ಚಹಸಿರಾಗಿಯೇ ಇದೆ.

ಅಧಿಕಾರದ ಆಸೆಗಾಗಿ 60-70ರ ದಶಕದಲ್ಲಿ ತಮಿಳುನಾಡಿನ ದ್ರಾವಿಡ ಪಕ್ಷಗಳು ಆರಂಭಿಸಿದ ಈ ಭಾಷಾದುರಾಭಿಮಾನ ಇಂದು ಹೆಮ್ಮರವಾಗಿ ಅಸಹ್ಯಕರವಾಗಿ ಬೆಳೆದು ನಿಂತಿದೆ. ಅಂದಿನಿಂದಲೂ ಅಲ್ಲಿ ತ್ರಿಭಾಷಾ ಕಲಿಕೆಗೆ ಅದರಲ್ಲೂ ಹಿಂದಿಯ ವಿರುದ್ಧ ಅಕ್ರೋಶವನ್ನು ವ್ಯಕ್ತಪಡಿಸುತ್ತಲೇ ಇದ್ದು, ಪ್ರತಿಯೊಂದರಲ್ಲೂ ಅನಗತ್ಯವಾಗಿ ಉತ್ತರ/ದಕ್ಷಿಣ ಭಾರತದ ಸಾಮರಸ್ಯಕ್ಕೆ ಕೆಡಕನ್ನು ಉಂಟುಮಾಡುತ್ತಿರುವುದು ನಿಜಕ್ಕೂ ದುರಾದೃಷ್ಟಕರವೇ ಆಗಿದೆ. ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವಂತೆ ಸದಾಕಾಲವೂ ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತಿದ್ದ ಮತ್ತು ಅನ್ಯಭಾಷಿಕರಿಗೆ ಕನ್ನಡ ಭಾಷೆಗಳನ್ನು ಕಲಿಯಲು ಅನುವು ಮಾಡಿಕೊಡದೇ ತಾವೇ ಅವರ ಭಾಷೆಯನ್ನು ಕಲಿಯುತ್ತಿದ್ದ ಕನ್ನಡಿಗರು ಅದರಲ್ಲೂ ಉಟ್ಟು ಖನ್ನಢ ಓಲಾಟಗಾರರೂ ಸಹಾ ತಮಿಳರ ಈ ರೀತಿಯ ಭಾಷಾ ದುರಾಭಿಮಾನವನ್ನು ಕರ್ನಾಟಕದಲ್ಲೂ ಹಬ್ಬಿಸಲು ಪ್ರಯತ್ನಿಸುತ್ತಿರುವುದು ಭಾರತದ ಒಕ್ಕೂಟ ರಾಷ್ಟ್ರದ ಕಲ್ಪನೆಗೆ ಧಕ್ಕೆ ತರುವಂತಿದೆ.

ಈಗಾಗಲೇ ಹೇಳಿದಂತೆ ನರಕ್ಕೆ ಇಳ್ಸಿ, ನಾಲ್ಗೆ ಸೀಳ್ಸಿ, ಬಾಯ್ ಒಲ್ಸಾಕಿದ್ರೂನೂ, ಮೂಗ್ನಲ್ ಕನ್ನಡ ಪದವಾಡ್ತೀನಿ ಎಂದು ಜಿ.ಪಿ.ರಾಜರತ್ನಂ ಅವರು ಹೇಳಿದಂತೆ ನಾನೂ ಸಹಾ ಕನ್ನಡ ಕಟ್ಟಾಳುವಾದರೂ, ವಯಕ್ತಿಕವಾಗಿ ನಾನು ಕನ್ನಡ, ಸಂಸ್ಕೃತ, ಇಂಗ್ಲೀಷ್, ಹಿಂದಿ ಈ ಭಾಷೆಗಳಲ್ಲಿ ಮಾತನಾಡುವುದಲ್ಲದೇ, ಓದಿ ಬರೆಯಲೂ ಸಹಾ ಬರುತ್ತದೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ತಕ್ಕ ಮಟ್ಟಿಗೆ ವ್ಯವಹರಿಸಲು ಬರುತ್ತದೆ. ಮಲೆಯಾಳಂ ಮತ್ತು ಮರಾಠಿ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ ಮತ್ತು ಭಾರತದ ಉಳಿದ ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಭಾರತೀಯ ಭಾಷೆಗಳೇ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಇಂದಿಗೂ ಸಹಾ ಉಳಿಸಿ ಬೆಳೆಸಲು ಕಾರಣವಾಗಿರುವ ಕಾರಣ, ನಮ್ಮ ನಮ್ಮ ಮಾತೃಭಾಷೆಯ ಬಗ್ಗೆ ಅಭಿಮಾನ ಇರಬೇಕೇ ಹೊರತು ದುರಾಭಿಮಾನ ಇರಬಾರದು. ಭಾರತದ ಎಲ್ಲಾ ಭಾಷೆಗಳನ್ನೂ ಗೌರವಿಸುವವನೇ ನಿಜವಾದ ಭಾರತೀಯ ಎನಿಸಿಕೊಳ್ಳುತ್ತಾರೆ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment