ಶ್ರೀ ಕೇದಾರನಾಥ

kedar1ನಮ್ಮ ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು. ನಮ್ಮ ದೇಶದಲ್ಲಿ ಅಧಿಕೃತವಾಗಿ ಸುಮಾರು 780 ಭಾಷೆಗಳನ್ನು ಮಾತನಾಡುವವರು ಇದ್ದು ಸಹಜವಾಗಿ ಇವರೆಲ್ಲರ ವೇಷ ಭೂಷಣಗಳು ಮತ್ತು ಆಚರಣೆಗಳು ಭಿನ್ನವಾಗಿದ್ದರೂ, ಇವರೆಲ್ಲರನ್ನೂ ಧಾರ್ಮಿಕವಾಗಿ ಒಗ್ಗೂಡಿಸಲು ನಮ್ಮ ಪೂರ್ವಜರು ದ್ವಾದಶ ಜ್ಯೋತಿರ್ಲಿಂಗಗಳನ್ನು ಇಡೀ ಭಾರತಾದ್ಯಂತ ನಿರ್ಮಿಸಲಾಗಿದ್ದು, ಆ ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾದಲ್ಲಿ ಮುಕ್ತಿ ಸಿಗುತ್ತದೆ ಎಂಬುದು ಸಕಲ ಆಸ್ತಿಕರ ನಂಬಿಕೆಯಾಗಿದ್ದು. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ ಕೇದಾರನಾಥವು ಅಂತಹ ದ್ವಾದಶಲಿಂಗಗಳಲ್ಲಿ ಒಂದಾಗಿದ್ದು ಉಳಿದೆಲ್ಲಾ ಕ್ಷೇತ್ರಗಳಿಗಿಂತಲೂ ಅತ್ಯಂತ ವಿಭಿನ್ನವಾಗಿದ್ದು 2024ರ ಸಾರ್ವಜನಿಕ ದರ್ಶನಕ್ಕಾಗಿ ನೆನ್ನೆಯಷ್ಟೇ ಅಲ್ಲಿನ ಭಕ್ತಾದಿಗಳಿಗೆ ತೆರೆದಕೊಂಡಿರುವ ಹಿನ್ನಲೆಯಲ್ಲಿ ಅಲ್ಲಿನ ಸ್ಥಳ ಪುರಾಣದ ಜೊತೆಗೆ ಅಲ್ಲಿನ ವಿಶೇಷತೆಗಳನ್ನು ತಿಳಿಯೋಣ ಬನ್ನಿ.

ಹಿಂದುಗಳಿಗೆ ಅತ್ಯಂತ ಪವಿತ್ರವಾದ ಕೇದಾರನಾಥ ದೇವಾಲಯ.ಸಮುದ್ರ ಮಟ್ಟಕ್ಕಿಂತಲೂ ಸುಮಾರು 3564 ಮೀಟರ್ ಎತ್ತರದಲ್ಲಿದ್ದು ಅತ್ಯಂತ ಶೀತಲ ಪ್ರದೇಶದಲ್ಲಿ ಇರುವ ಕಾರನ, ಈ ದೇವಾಲಯ ಏಪ್ರಿಲ್ ಕೊನೆಯ ಭಾಗ ಅಥವಾ ಮೇ ಮೊದಲ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಿದ್ದು, ಈ ದೇವಾಲಯವನ್ನು ಮೊಟ್ಟಮೊದಲ ಬಾರಿಗೆ ಪಂಚ ಪಾಂಡವರು ಕಟ್ಟಿದರು ಎಂದು ಹೇಳಲಾಗುತ್ತದೆ. ನಂತರ ಜಗದ್ಗುರು ಆದಿ ಶಂಕರಾಚಾರ್ಯರು ಅದನ್ನು ಪುನರ್‌ಪ್ರತಿಷ್ಠಾಪಿಸಿದರು ಎನ್ನಲಾಗುತ್ತದೆ.

kedar5ಪೌರಾಣಿಕ ಕಥೆಯ ಪ್ರಕಾರ ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸಂಹರಿಸಿದ ಪಾಂಡವರು ತಮ್ಮ ಪಾಪ ಪರಿಹಾರಕ್ಕಾಗಿ ಶಿವನ ದರ್ಶನ ಮಾಡಲೆಂದು ಪುರಾಣ ಪ್ರಸಿದ್ಧ ಕಾಶಿ ಕ್ಷೇತ್ರಕ್ಕೆ ಬಂದಾಗ, ಪಾಂಡವರ ಭಕ್ತಿಯನ್ನು ಪರೀಕ್ಷಿಸುವ ಸಲುವಾಗಿ ಶಿವನು ಕಾಶಿಯಿಂದ ಗುಪ್ತ ಕಾಶಿಗೆ ನಂತರ ಕೇದಾರಕ್ಕೆ ಬರುತ್ತಾನೆ. ಇದನ್ನು ತಿಳಿದ ಪಾಂಡವರೂ ಸಹಾ ಶಿವನನ್ನು ಹುಡುಕಿಕೊಂಡು ಕೇದಾರಕ್ಕೆ ಬರುತ್ತಿದ್ದದ್ದನ್ನು ಗಮನಿಸಿದ ಶಿವನು ಅವರ ಕಣ್ಣಿಗೆ ಗೋಚರವಾಗದಿರಲೆಂದು ಹಸುವಿನ ರೂಪವನ್ನು ತಾಳಿ ಉಳಿದ ಹಸುಗಳ ಜೊತೆ ಮೇಯಲು ಮುಂದಾಗುತ್ತಾನೆ. ಈ ವಿಷಯವನ್ನು ಗ್ರಹಿಸಿದ ಭೀಮನು ಶಿವನ ದರ್ಶನ ಮಾಡಲೇ ಬೇಕೆಂಬ ಛಲದಿಂದ ಎರಡು ಪರ್ವತಗಳ ನಡುವೆ ತನ್ನ ಒಂದೊಂದು ಕಾಲಿಟ್ಟು ಹಸುಗಳೆಲ್ಲವೂ ಆತನ ಕಾಲಿನಡಿಯಲ್ಲೇ ನುಸುಳಿ ಹೋಗುವಂತೆ ನಿಲ್ಲುತ್ತಾನೆ. ಹಾಗೆ ಎಲ್ಲಾ ಹಸುಗಳು ಆತನ ಕಾಲಿನಡಿಯಲ್ಲಿ ಸುಲಭವಾಗಿ ನುಸುಳಿ ಹೋದರೆ, ಒಂದು ಎತ್ತರದ ಎತ್ತು ಮಾತ್ರ ಆತನ ಕಾಲಿನಡಿಯಲ್ಲಿ ಹೋಗದೆ ಹಾಗೇ ನಿಂತು ಬಿಟ್ಟಾಗ, ಅದು ಈಶ್ವರನ ಪ್ರತಿರೂಪ ಎಂದು ಭಾವಿಸಿ ಅದನ್ನು ಹಿಡಿದು ಕೊಳ್ಳಲು ಮುಂದಾಗುತ್ತಾನೆ. ಭೀಮನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎತ್ತು ಪಾತಾಳಕ್ಕೆ ಜಾರಿ ಹೋಗುವ ಸಂಧರ್ಭದಲ್ಲಿ ಆ ಎತ್ತಿನ ಭುಜದ ಡುಬ್ಬ ಮಾತ್ರ ಭೀಮನ ಕೈಗೆ ಸಿಕ್ಕಿಕೊಂಡಾಗ ಅದನ್ನೇ ಭೀಮನ ಎತ್ತಿ ಮೇಲಕ್ಕೆ ತರುವ ಕಾರಣ ಕೇದಾರನಾಥದಲ್ಲಿರುವ ಶಿವಲಿಂಗವೂ ಎತ್ತಿನ ಭುಜದಂತೆಯೇ ಇಂದಿಗೂ ಕಾಣಬಹುದಾಗಿದೆ. ನಂತರ ಆ ಎತ್ತಿನ ಶಿರೋ ಭಾಗವು ರುದ್ರನಾಥ, ಮುಂಡವು ಮಧ್ಯಮ ಮಹೇಶ್ವರದಲ್ಲಿಯೂ ಮತ್ತು ತೋಳುಗಳು ತುಂಗಾನಾಥದಲ್ಲಿ, ಮತ್ತು ದೇಹದ ಉಳಿದ ಭಾಗ ನೇಪಾಳದ ಪಶುಪತಿನಾಥ ಮತ್ತು ಕರೈಶ್ವರದಲ್ಲಿ ಹಂಚಿ ಹೋಗುತ್ತದೆ. ಪಾಂಡವರ ಭಕ್ತಿಗೆ ಪ್ರಸನ್ನನಾದ ಶಿವನು ಪ್ರತ್ಯಕ್ಷನಾಗಿ ಪಾಂಡವರನ್ನು ಆಶೀರ್ವದಿಸಿದನು ಎನ್ನಲಾಗುತ್ತದೆ.

kedar6ಹೀಗೆ ಹಿಮಾಲಯ ಶ್ರೇಣಿಯಲ್ಲಿ ಹರಿದ್ವಾರದಿಂದ ಸುಮಾರು 250 ಕಿ.ಮೀ ದೂರದಲ್ಲಿ ಹಿಮಗಿರಿಗಳ ನಡುವೆ ಇರುವ ಪುಣ್ಯ ಕ್ಷೇತ್ರವಾದ ಕೇದಾರನಾಥದಲ್ಲಿ ಮೂಲ ದೇವಾಲಯವು ಎತ್ತಿನ ಬುಜದ ರೂಪದಲ್ಲಿರುವ ಕಲ್ಲಿನ ಸುಂದರ ಶಿಲ್ಪವಾಗಿದ್ದು ಇದನ್ನು ದ್ವಾಪರಯುಗದಲ್ಲಿ ಪಾಂಡವರು ಪ್ರತಿಷ್ಠಪನೆ ಮಾಡಿದ್ದರೂ, ಸುಮಾರು 8ನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರು ಅದಕ್ಕೊಂದು ಸುಂದರವಾದ ದೇವಾಲಯವನ್ನು ಕಟ್ಟಿಸಿದರು ಎನ್ನಲಾಗುತ್ತದೆ. ಈಗಾಗಲೇ ತಿಳಿಸಿದಂತೆ ಈ ಶ್ರೀಕ್ಷೇತ್ರ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆಯಲ್ಲದೇ, ಚತುರ್ಧಾಮ ಯಾತ್ರೆಯಲ್ಲಿಯೂ ಸಹಾ ಮುಖ್ಯ ಯಾತ್ರಾ ಸ್ಥಳವಾಗಿದ್ದು, ಭಾರತ-ಚೀನಾಗಡಿಗೆ ಹೊಂದಿಕೊಂಡಿರುವ ಗೌರಿಕುಂಡದ ವರೆಗೂ ವಾಹನಗಳ ಸೌಕರ್ಯವಿದ್ದು ಅಲ್ಲಿಂದ ಸುಮಾರು 14 ಕಿ.ಮೀ. ದೂರದ ಅತ್ಯಂತ ದುರ್ಗಮ ದಾರಿಯನ್ನು ಕಾಲ್ನಡಿಗೆ, ಕುದುರೆಸವಾರಿ ಇಲ್ಲವೇ ಡೋಲಿಯಲ್ಲಿ ಪಯಣಿಸ ಬೇಕಾಗಿದೆ. ವಾತಾವಣ ಅನುಕೂಲಕರವಾಗಿದ್ದು, ಹಣವಿದ್ದಲ್ಲಿ ಹೆಲಿಕ್ಯಾಪ್ಟರ್ ಮೂಲಕವೂ ಗೌರಿಕುಂಡದಿಂದ ಕೇದಾರನಾಥವನ್ನು ತಲುಪಬಹುದಾಗಿದೆ.

kedarnata1ಕೇದಾರನಾಥನ ದೇವಾಲಯವು ಭಾರತದ ಉಳಿದ ದೇವಾಲಯಕ್ಕಿಂತಲೂ ವಿಭಿನ್ನವಾದ ವಾಸ್ತುಶೈಲಿಯನ್ನು ಹೊಂದಿದ್ದು ಎಂತಹ ಮಳೆ ಬಿಸಿಲು, ಹಿಮ ಗಾಳಿಯನ್ನು ಸಾವಿರಾರು ವರ್ಷಗಳಿಂದಲೂ ತಳೆದುಕೊಂಡು ಬಂದಿದೆ. ಮುಖ್ಯದ್ವಾರದಿಂದ ಒಳಗೆ ಹೋಗುತ್ತಿದ್ದಂತೆಯೇ, ಪ್ರಾಕಾರದಲ್ಲಿ ಪಂಚ ಪಾಂಡವರು, ಶ್ರೀ ಕೃಷ್ಣ, ಪರಶಿವನ ವಾಹನ ನಂದಿ ಮತ್ತು ವೀರಭದ್ರನ ಮೂರ್ತಿಗಳಿದ್ದರೆ ಇನ್ನು ಗರ್ಭಗುಡಿಯಲ್ಲಿ ಎತ್ತಿನ ಭುಜದಂತಿರುವ ತ್ರಿಕೋನಾಕಾರದ ಕಲ್ಲಿನ ಮೇಲೆ ಕೆತ್ತಿರುವ ಮಾನವನ ತಲೆಯಂತೆ ಕೆತ್ತಲಾಗಿದೆ.

kedar2ಈ ದೇವಸ್ಥಾನದ ಹಿಂದೆಯೇ ಶಂಕರಾಚಾರ್ಯರ ಸಮಾಧಿ ಮಂದಿರವಿದ್ದು ಕೆಲ ವರ್ಷಗಳ ಹಿಂದೆ ನಮ್ಮ ಮೈಸೂರಿನವರೇ ಆದ ಕನ್ನಡಿಗರಾದ ಶ್ರೀ ಅರುಣ್ ಯೋಗಿರಾಜ್ (ಅಯೋಧ್ಯೆ ರಾಮ್ ಲಲ್ಲಾ ವಿಗ್ರಹದ ಶಿಲ್ಪಿ)ಯವರೇ ಕೆತ್ತಿದ ಶ್ರೀ ಶಂಕರಾಚಾರ್ಯರ ವಿಗ್ರಹವನ್ನು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಭಾಟಿಸಿದ್ದಾರೆ.

kedar3ಕರ್ನಾಟಕಕ್ಕೂ ಮತ್ತು ಕೇದಾರನಾಥಕ್ಕೂ ಅವಿನಾಭಾವ ಸಂಬಂಧವಿದ್ದು, ಸಮುದ್ರಮಟ್ಟದಿಂದ 6500 ಅಡಿ ಎತ್ತರದಲ್ಲಿರುವ ಗೌರಿಕುಂಡದ ಪ್ರಾಚೀನ ಶೈವ ಪೀಠಗಳಲ್ಲೊಂದಾದ ಏಕೋರಾಮಾರಾಧ್ಯ ಪೀಠವು ಅಲ್ಲಿ ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದು ಬಹಳ ಖ್ಯಾತಿ ಗಳಿಸಿದ್ದು ಕೇದಾರನಾಥಕ್ಕೆ ಬರುವ ಪ್ರತಿಯೊಬ್ಬ ಭಕ್ತಾದಿಗಳು ಈ ಪೀಠಕ್ಕೆ ಬಂದು ಪೂಜೆ ಸಲ್ಲಿಸಿಹೋಗುವುದು ವಾಡಿಕೆಯಾಗಿದ್ದು. ಈ ಮಠದ ಮುಖ್ಯಸ್ಥರು ಕರ್ನಾಟಕದವರೆಂಬುದು ನಮ್ಮ ಹೆಮ್ಮೆಯ ಸಂಗತಿಯಾಗಿದ್ದರೆ, ಅನಾದಿಕಾಲದಿಂದಲೂ ಕೇದಾರನಾಥ ದೇವಾಲಯದ ಅರ್ಚಕರು ನಮ್ಮ ಕರ್ನಾಟಕದ ವೀರಶೈವ ಪಂಗಡಕ್ಕೆ ಸೇರಿದವರು ಎನ್ನುವುದು ಗಮನಾರ್ಹವಾಗಿದೆ. ಈ ಗುಹಾಂತರ ದೇವಾಲಯದಲ್ಲಿನ ಲಿಂಗ ರೂಪದಲ್ಲಿರುವ ಶಿವನಿಗೆ ಪ್ರತಿ ನಿತ್ಯವೂ ಗಂಧದ ಅಲಂಕಾರವಿದ್ದು, ಸೂರ್ಯನ ರಶ್ಮಿಗಳು ಸ್ವಾಮಿಯ ಮೇಲೆ ಬಿದ್ದಾಗ ಅದು ಪ್ರತಿಫಲಿಸಿ ಚಿನ್ನದಂತೆ ಕಾಣುವುದನ್ನು ವರ್ಣಿಸುವುದಕ್ಕಿಂತಲೂ ನೋಡಿ ಅನುಭವಿಸಿದರೆ ಆನಂದವೆನಿಸುತ್ತದೆ. ಇಲ್ಲಿನ ಶಿವನ ಪೂಜೆಯನ್ನು ಪ್ರತಿನಿತ್ಯವೂ ಬ್ರಹ್ಮ ಕಮಲ ಹೂವಿನಿಂದಲೇ ಮಾಡುವುದು ಮತ್ತೊಂದು ವಿಶೇಷವಾಗಿದೆ.

kedar4ತಜ್ಞರ ಪ್ರಕಾರ ಈ ದೇವಾಲಯವು ಕನಿಷ್ಠ 1200 ವರ್ಷಗಳಿಂದ ಅಸ್ತಿತ್ವದಲ್ಲಿದ್ದು, ಒಂದು ಕಡೆ 22,000 ಅಡಿ ಎತ್ತರದ ಕೇದಾರನಾಥ ಬೆಟ್ಟ, ಮತ್ತೊಂದು ಬದಿಯಲ್ಲಿ 21,600 ಅಡಿ ಎತ್ತರದ ಕರಚಕುಂಡ್ ಮತ್ತು ಮೂರನೇ ಭಾಗದಲ್ಲಿ 22,700 ಅಡಿ ಎತ್ತರದ ಭರತಕುಂಡವಿದ್ದು ಈ ಮೂರು ಪರ್ವತಗಳ ತಪ್ಪಲಿನಲ್ಲಿ ಐದು ನದಿಗಳಾದ ಮಂದಾಕಿನಿ, ಮಧುಗಂಗಾ, ಚಿರಗಂಗಾ, ಸರಸ್ವತಿ ಮತ್ತು ಸ್ವರಂದಾರಿ ಹರಿಯುತ್ತಿದ್ದು, ಕೇದಾರನಾಥವು ಮಂದಾಕಿನಿ ನದಿಯ ಜಲಾನಯನ ಪ್ರದೇಶಕ್ಕೆ ಸೇರಿದೆ. ವರ್ಷವಿಡೀ ಹಿಮಾಚ್ಛಾದಿತವಾಗಿರುವ ಈ ಪ್ರದೇಶದಲ್ಲಿ ದೇವಾಲಯವನ್ನು ಕಟ್ಟಲು ಬಳಸಿರುವ ಕಠಿಣ ಮತ್ತು ದೀರ್ಘ ಬಾಳಿಕೆ ಬರುವಂತಹ ಕಲ್ಲುಗಳನ್ನು ಎಲ್ಲಿಂದ ಮತ್ತು ಹೇಗೆ ಸಾಗಿಸಿದರು? ಎಂಬುದೇ ಕುತೂಹಲಕಾರಿಯಾದ ಅಂಶವಾಗಿದೆ. ಸುಮಾರು 400-500 ವರ್ಷಗಳ ಕಾಲ ಮಂಜುಗಡ್ಡೆಯ ಅಡಿಯಲ್ಲಿದ್ದರೂ, ಆ ಕಲ್ಲುಗಳ ಗುಣಲಕ್ಷಣಗಳಲ್ಲಿ ಯಾವುದೇ ವ್ಯತ್ಯಾಸವಾಗದೇ ಇರುವುದೇ ಈ ಕಲ್ಲುಗಳ ಮತ್ತೊಂದು ವೈಶಿಷ್ಟ್ಯವಾಗಿದೆ. ಚಳಿಗಾಲದಲ್ಲಿ ಸುರಿಯುವ ಭಾರೀ ಪ್ರಮಾಣದ ಹಿಮ ಮತ್ತು ಮಳೆಗಾಲದಲ್ಲಿ ಅತ್ಯಂತ ರಭಸವಾಗಿ ಸುರಿಯುವ ಮಳೆಯನ್ನೂ ತಾಳಿಕೊಂಡು ಇಷ್ಟು ವರ್ಷಗಳ ಕಾಲ ಸುಭಧ್ರವಾಗಿ ಇರುವಂತಹ ಅದ್ಭುತವಾದ ಕಲಾಕೃತಿಯಂತಹಾ ದೇವಾಲಯವನ್ನು ನಿರ್ಮಿಸಿರುವುದು ನಮ್ಮ ಹಿಂದಿನವರ ವಾಸ್ತು ಶಿಲ್ಪಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರೂ ತಪ್ಪಾಗದು.

ವಿಜ್ಞಾನಿಗಳೇ ಹೇಳುವಂತೆ ಈ ದೇವಾಲಯವು 14 ನೇ ಶತಮಾನದಿಂದ 17 ನೇ ಶತಮಾನದ ಮಧ್ಯಭಾಗದವರೆಗೆ ಸಂಪೂರ್ಣವಾಗಿ ಮಂಜುಗಡ್ಡೆಯ ಅಡಿಯಲ್ಲಿ ಹುದುಗಿಹೋಗಿದ್ದರೂ ದೇಗುಲಕ್ಕೆ ಯಾವುದೇ ಹಾನಿಯಾಗಿಲ್ಲದಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಇಷ್ಟೇ ಅಲ್ಲದೇ, 2013ರಲ್ಲಿ ಕೇದಾರನಾಥದಲ್ಲಿ ಎಂದು ಕಂಡು ಕೇಳರಿಯದಂತಹ ಭೀಕರವಾದ ಮಳೆ ಸುರಿದು (ಸರಾಸರಿಗಿಂತ 375% ಹೆಚ್ಚು ಮಳೆಯಾಯಿಗಿತ್ತು) ಇಡೀ ಪ್ರದೇಶದಲೆಲ್ಲಾ ಪ್ರವಾಹವಾಗಿ ಸರ್ಕಾರದ ಅಧಿಕೃತ ಮಾಹಿತಿಯಂತೆ ಸುಮಾರು 5748 ಜನರು ಕೊಚ್ಚಿಸಿಕೊಂಡು ಹೋಗಿದ್ದಲ್ಲದೇ, ಕೇದಾರನಾಥದ ಸುತ್ತಮುತ್ತಲಿನ ಸುಮಾರು 4200 ಹಳ್ಳಿಗಳು ಹಾನಿಗೊಂಡಿತ್ತು. ಇಷ್ಟು ಭೀಕರ ಪ್ರವಾಹವಾಗಿದ್ದರೂ ಕೇದಾರನಾಥ ದೇವಾಲಯದ ಮೇಲೆ ಕೊಂಚವೂ ಪರಿಣಾಮ ಬೀರದೇ ಇರುವುದನ್ನು ಆರ್ಕಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಸಹಾ ಧೃಢೀಕರಿಸಿದೆ.

kedar11ಸಾಮಾನ್ಯವಾಗಿ ಭಾರತದ ಬಹುತೇಕ ದೇವಾಲಯಗಳನ್ನು ಪೂರ್ವ-ಪಶ್ಚಿಮ ದಿಕ್ಕುಗಳಲ್ಲಿ ನಿರ್ಮಿಸಿದ್ದರೆ, ಕೇದಾರನಾಥ ದೇವಾಲಯವನ್ನು ಉತ್ತರ-ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಲಾಗಿರುವುದು ಸಹಾ ವಿಶೇಷವಾಗಿದ್ದು, ಇನ್ನು ದೇವಾಲಯದ ಗೋಡೆಗಳಿಗೆ ಬಳಸಲಾಗಿರುವ ಕಲ್ಲು ಕಲ್ಲುಗಳ ಮಧ್ಯದಲ್ಲಿ ಸಿಮೆಂಟ್ ರೀತಿಯ ಯಾವುದೇ ಗಾರೆಯ ಪದಾರ್ಥವನ್ನು ಬಳಸದೇ, ಆಷ್ಲರ್ ರೀತಿಯಲ್ಲಿ ಒಂದಕ್ಕೊಂದು ಒಟ್ಟಿಗೆ ಅಂಟಿಕೊಂಡಿರುವುದರಿಂದ ಕಲ್ಲಿನ ಸಂಧಿಯ ಮೇಲೆ ಹವಾಮಾನದ ಬದಲಾವಣೆಯು ಯಾವುದೇ ರೀತಿಯ ಪರಿಣಾಮ ಬೀರದೇ ಇರುವುದು ವಿಶೇಷವಾಗಿದೆ. ಪ್ರತಿಯೊಂದು ಕರ್ಮಗಳಲ್ಲಿಯೂ ದೇವರು ನಮ್ಮ ಕೈ ಹಿಡಿಯುತ್ತಾನೆ ಎಂಬುದಕ್ಕೆ ಪುರಾವೆ ಎನ್ನುವಂತೆ 2013ರಲ್ಲಿ ಆದ ಬಾರಿ ಪ್ರವಾಹದಲ್ಲಿ ಅಲ್ಲಿನ ಬಹುತೇಕ ಕಟ್ಟಡಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದರೆ, ಪ್ರವಾಹದಲ್ಲಿ ಎಲ್ಲಿಂದಲೋ ಬಂದ ದೊಡ್ಡದಾದ ಬಂಡೆಯೊಂದು ಕೇದಾರನಾಥ ದೇವಾಲಯದ ಹಿಂಭಾಗಕ್ಕೆ ಸರಿಯಾಗಿ ಬಂದು ಸಧೃಡವಾಗಿ ನಿಂತು ಕೊಂಡು ಧಾರಾಕಾರವಾಗಿ ಹರಿಯುತ್ತಿದ್ದ ನೀರಿನ ಹರಿವನ್ನು ದೇವಾಲಯದ ಅಕ್ಕ ಪಕ್ಕಗಳಲ್ಲಿ ಹರಿಯುವಂತೆ ತಿರುಗಿಸಿದ ಪರಿಣಾಮ ಆ ದೇವಾಲಯ ಮತ್ತು ದೇವಾಲಯದಲ್ಲಿ ಆಶ್ರಯ ಪಡೆದ ಜನರನ್ನು ರಕ್ಷಿಸಿದ್ದು, ಅದುವರೆವಿಗೂ ಅಲ್ಲಿ ಸುತ್ತಮುತ್ತಲಿನಲ್ಲಿ ಎಲ್ಲಿಯೂ ಕಾಣದಿದ್ದ ಅಷ್ಟೊಂದು ದೊಡ್ಡದಾದ ಬಂಡೆಯನ್ನು ಆ ಪರಶಿವನೇ ಕಳುಹಿಸಿದ ಎಂದೇ ಭಕ್ತಾದಿಗಳು ನಂಬುವ ಕಾರಣ ಇಂದಿಗೂ ಆ ದೇವಾಲಯಕ್ಕೆ ಬರುವ ಭಕ್ತಾದಿಗಳು ಆ ಬಂಡೆಗೂ ಪೂಜೆಯನ್ನು ಸಲ್ಲಿಸುವುದು ವಿಶೇಷವಾಗಿದೆ.

WhatsApp Image 2024-05-11 at 15.57.52ಸಕಲ ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಇಂದು ಕೇದಾರನಾಥನ ದೇವಾಲಯದ ಬಾಗಿಲು 2024 ರ ಮೇ 10ರಂದು ಅಲ್ಲಿನ ತಾಪಮಾನವು -1 ಡಿಗ್ರಿ ಇದ್ದರೂ ಸಹಾ ಅದನ್ನು ಲೆಖ್ಖಿಸದೇ, ಬೆಳಗ್ಗೆ 7.15ಕ್ಕೆ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಭಕ್ತರ ದರ್ಶನಕ್ಕಾಗಿ ತೆರೆಯಲಾಗಿದ್ದು, ಆ ಸುಂದರವಾದ ಸಮಾರಂಭಕ್ಕೆ ಸುಮಾರು 24 ಕ್ವಿಂಟಾಲ್ ಹೂವಿನಿಂದ ಇಡೀ ದೇವಾಲಯವನ್ನು ಅಲಂಕರಿಸಿದ್ದನ್ನು ಕಂಡ ಭಕ್ತರು ಸಂತೋಷಗೊಂಡಿದ್ದಾರೆ. ಚಳಿಗಾಲದಲ್ಲಿ ಆರು ತಿಂಗಳ ಕಾಲ ಮುಚ್ಚಲ್ಪಟ್ಟಿದ ಈ ದೇವಾಲಯದ ಬಾಗಿಲನ್ನು ಪ್ರತೀ ವರ್ಷ ಅಕ್ಷಯ ತೃತೀಯ ಹಬ್ಬದಂದು ಭಕ್ತರಿಗಾಗಿ ತೆರೆಯಲಾಗುತ್ತದೆ.

WhatsApp Image 2024-05-11 at 15.58.06ಈ ಬಾರಿ ಉತ್ತರಾಖಂಡ ಮುಖ್ಯಮಂತ್ರಿಗಳದ ಶ್ರೀ ಪುಷ್ಕರ್ ಸಿಂಗ್ ಧಾಮಿ ಮತ್ತು ಅವರ ಧರ್ಮ ಪತ್ನಿಯವರಾದ ಶ್ರೀಮತಿ ಗೀತಾ ಧಾಮಿಯವರು ಸಕಲ ಧಾರ್ಮಿಕ ವಿಧಿ ವಿಧಾನಗಳು ಮತ್ತು ವೇದ ಮಂತ್ರಗಳ ಪಠಣಗಳ ನಡುವೆ ನೆರೆದಿದ್ದ ಸಾವಿರಾರು ಭಕ್ತರ ಒಕ್ಕೊರಲಿನ ಹರ ಹರ ಮಹಾದೇವ್ ಘೋಷಣೆಯೊಂದಿಗೆ ಕೇದಾರನಾಥ ಧಾಮದ ದೇವಸ್ಥಾನದ ಬಾಗಿಲು ತೆರೆಯುವ ಸಂದರ್ಭದಲ್ಲಿ ಕೇದಾರನಾಥದಲ್ಲಿ ಹಾಜರಿದ್ದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದದ್ದು ವಿಶೇಷವಾಗಿದೆ. ಹೀಗೆ ಕೇದಾರನಾಥ ದೇವಾಲಯದಲ್ಲಿ ಘಂಟೆ ಮತ್ತು ಶಂಖನಾದ ಪೂಜೆಯೊಂದಿಗೆ ದೇವಾಲಯ ತೆರೆಯುವುದರೊಂದಿಗೆ 2024ರ ಚಾರ್ಧಾಮ್ ಯಾತ್ರೆ ಅಧಿಕೃತವಾಗಿ ಆರಂಭವಾಗಿದ್ದು, ಕೇದಾರನಾಥನ ಬಾಗಿಲು ಬೆಳಿಗ್ಗೆ 7 ಗಂಟೆಗೆ ತೆರೆದರೆ, ಯಮುನೋತ್ರಿಯ ಬಾಗಿಲು 10.29 ಕ್ಕೆ ತೆರೆಯಲಾಯಿತು. ಗಂಗೋತ್ರಿಯ ಬಾಗಿಲು ಮಧ್ಯಾಹ್ನ 12.20 ಕ್ಕೆ ತೆರೆದರೆ, ಚಾರ್ಧಾಮ್ ನ ನಾಲ್ಕನೇ ಶಿವಧಾಮವಾದ ಬದರಿನಾಥದ ಬಾಗಿಲು ಎರಡು ದಿನದ ನಂತರ ಅರ್ಥಾತ್ ಮೇ 12 ರಂದು ಬೆಳಿಗ್ಗೆ ತೆರೆಯಲಾಗುತ್ತದೆ.

ಇಷ್ಟೆಲ್ಲಾ ಮಾಹಿತಿಗಳು ತಿಳಿದ ಮೇಲೆ ಇನ್ನೇಕೆ ತಡಾ, ಮಳೆಗಾಲ ಆರಂಭವಾಗುವ ಮುನ್ನವೇ ಸ್ವಲ್ಪ ಸಮಯ ಮಾಡಿಕೊಂಡು ಕುಟುಂಬ ಸಮೇತರಾಗಿ ಕೇದಾರನಾಥನ ಆದಿಯಾಗಿ ನಾಲ್ಕು ಶಿವಧಾಮದಲ್ಲಿ ಶಿವನ ದರ್ಶನ ಪಡೆದುಕೊಂಡು ಅಲ್ಲಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

Leave a comment